Composer : Shri Kanakadasaru
ಪರಮ ಪುರುಷ ಹರಿ ಗೋವಿಂದ
ಕರಿವರದ ನಾರಾಯಣ ಗೋವಿಂದ |ಪ|
ನಿಶಿಪೆಸರಸುರನ ಉಸುರ ತೊಲಗಿಸಿದ
ಕುಸುಮ ಶರನ ಪಿತ ಗೋವಿಂದ |
ರಸಪೂರಿತ ಶ್ರುತಿ ಮಸುಳಿಸದಲೆ ತಂದು
ಬಿಸಜ ಸಂಭವಗಿತ್ತೆ ಗೋವಿಂದ |೧|
ಜತನ ತಪ್ಪದೆ ಅಮೃತ ಮಥನದಿ ಪ-
ರ್ವತವ-ನುದ್ಧರಿಸಿದೆ ಗೋವಿಂದ |
ಶತಕ್ರತುವಿನ ಸಿರಿ ಹತವಾಗೆ ಕಡಲನು
ಮಥಿಸಿ ನಿಲ್ಲಿಸಿಗೊಟ್ಟೆ ಗೋವಿಂದ |೨|
ಭೂತಳವೆರಸಿ ರಸಾತಳ-ಕಿಳಿದನ ಪಾ-
ತಾಳದಿ ಕಂಡೆ ಗೋವಿಂದ |
ಆತನೊಡನೆ ಕಾದಿ ಖ್ಯಾತಿಲಿ ಮಡುಹಿ ಮ-
ಹೀತಳವನು ತಂದೆ ಗೋವಿಂದ |೩|
ದುರುಳ ದೈತ್ಯನ ಸೀಳಿ ಕರುಳ ಮಾಲೆಯ ಮುಂ-
ಗುರುಳೊಳು ಧರಿಸಿದೆ ಗೋವಿಂದ |
ಗರಳ ಕಂಧರ ವಿಧಿ ಕರವೆತ್ತಿ ಪೊಗಳಲು
ತರಳಗಭಯವಿತ್ತೆ ಗೋವಿಂದ |೪|
ವಾಮನನಾಗಿ ನಿಸ್ಸೀಮ ಬಲಿಯ ಕೈಯ
ಭೂಮಿಯಳೆದುಕೊಂಡೆ ಗೋವಿಂದ |
ತಾಮರಸೋದ್-ಭವಾಂಡ ಒಡೆದು ನಿಂದು
ವ್ಯೋಮ ಗಂಗೆಯ ಪೆತ್ತೆ ಗೋವಿಂದ |೫|
ವರಪರ ಶುಧರನಾಗಿ ಭೂಪರ ಧಿ-
ಕ್ಕರಿಸಿ ಸಂಹರಿಸಿದೆ ಗೋವಿಂದ |
ತರ ಹರಿಸದೆ ವಸುಂಧರೆಯ-ನೆಲ್ಲವ ಭೂ-
ಸುರರಿಗೊಪ್ಪಿಸಿ ಕೊಟ್ಟೆ ಗೋವಿಂದ |೬|
ತ್ರಿನಯನನೊಲಿಸಿದ ರಾವಣನನು
ರಣಾಂಗಣ-ದೊಳಗೊರಸಿದೆ ಗೋವಿಂದ |
ಕ್ಷಣವೆನಿಸದೆ ಮಣಿಪುರದಲಿ ವಿಭೀ-
ಷಣಗೆ ಶಾಶ್ವತವಿತ್ತೆ ಗೋವಿಂದ |೭|
ವಾರಣದಂತ ವಿದಾರಣ ಕಂಸ ಸಂ-
ಹರಣ ಭುಜಬಲ ಗೋವಿಂದ |
ವಾರಣ ಪುರಪತಿ ದಾರಣಪ್ರಿಯ ಭೂ
ಭಾರೋತ್ತಾರಣ ಗೋವಿಂದ |೮|
ಕಥೆಯ ನಿರ್ಮಿಸಿ ಪತಿವ್ರತೆಯರ ಬಲು
ವ್ರತಗಳ ಕೆಡಿಸಿದೆ ಗೋವಿಂದ |
ಜತನದಿಂದ ತ್ರಿಪುರವನುರುಹಿ ದೇ-
ವತೆಗಳ ಸಲಹಿದೆ ಗೋವಿಂದ |೯|
ವಾಜಿಯ ಮರುಕದಿ ತೇಜದಲೇರಿ ಕ-
ನೋಜು ರಾವುತನಾದೆ ಗೋವಿಂದ |
ವಾಜಿಯ ಬೆನ್ನೊಳು ರಾಜಿಪ ಗುಣದಂತೆ
ಈ ಜಗದೊಳಗಿಪ್ಪೆ ಗೋವಿಂದ |೧೦|
ಮೇದಿನಿ ಗೋಸುಗ ಕಾದಿ ಕಲಹದಿ ವಿ-
ರೋಧಿಗಳನು ಕೊಂದೆ ಗೋವಿಂದ |
ಸಾಧುಗಳಿಗೆ ಸುಖವೈದಿಪ ಕಾಗಿನೆಲೆ
ಆದಿ ಕೇಶವರಾಯ ಗೋವಿಂದ |೧೧|
parama puruSha hari gOviMda
karivarada nArAyaNa gOviMda |pa|
niSipesarasurana usura tolagisida
kusuma Sarana pita gOviMda |
rasapUrita Sruti masuLisadale taMdu
bisaja saMBavagitte gOviMda |1|
jatana tappade amRuta mathanadi pa-
rvatava-nuddhariside gOviMda |
Satakratuvina siri hatavAge kaDalanu
mathisi nillisigoTTe gOviMda |2|
BUtaLaverasi rasAtaLa-kiLidana pA-
tALadi kaMDe gOviMda |
AtanoDane kAdi KyAtili maDuhi ma-
hItaLavanu taMde gOviMda |3|
duruLa daityana sILi karuLa mAleya muM-
guruLoLu dhariside gOviMda |
garaLa kaMdhara vidhi karavetti pogaLalu
taraLagaBayavitte gOviMda |4|
vAmananAgi nissIma baliya kaiya
BUmiyaLedukoMDe gOviMda |
tAmarasOd-BavAMDa oDedu niMdu
vyOma gaMgeya pette gOviMda |5|
varapara SudharanAgi BUpara dhi-
kkarisi saMhariside gOviMda |
tara harisade vasuMdhareya-nellava BU-
surarigoppisi koTTe gOviMda |6|
trinayananolisida rAvaNananu
raNAMgaNa-doLagoraside gOviMda |
kShaNavenisade maNipuradali viBI-
ShaNage SASvatavitte gOviMda |7|
vAraNadaMta vidAraNa kaMsa saM-
haraNa Bujabala gOviMda |
vAraNa purapati dAraNapriya BU
BArOttAraNa gOviMda |8|
katheya nirmisi pativrateyara balu
vratagaLa keDiside gOviMda |
jatanadiMda tripuravanuruhi dE-
vategaLa salahide gOviMda |9|
vAjiya marukadi tEjadalEri ka-
nOju rAvutanAde gOviMda |
vAjiya bennoLu rAjipa guNadaMte
I jagadoLagippe gOviMda |10|
mEdini gOsuga kAdi kalahadi vi-
rOdhigaLanu koMde gOviMda |
sAdhugaLige suKavaidipa kAginele
Adi kESavarAya gOviMda |11|
