Dimbadalliruva jiva

Composer : Shri Kanakadasaru

ಡಿಂಬದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ,
ಎಂದಿಗಾದರೊಂದು ದಿನ ಸಾವು ತಪ್ಪದ್ದೊ [ಪ]

ಹುಟ್ಟುತ್ತೇನು ತರಲಿಲ್ಲ, ಸಾಯುತ್ತೇನು ಒಯ್ಯಲಿಲ್ಲ
ಸುಟ್ಟು ಸುಟ್ಟು ಸುಣ್ಣದರಳು ಆಯಿತೀ ದೇಹ |
ಹೊಟ್ಟೆ ಬಲು ಕೆಟ್ಟದೆಂದು ಎಷ್ಟು ಕಷ್ಟ ಮಾಡಿದರು
ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದೋ (೧)

ಹತ್ತು ಎಂಟು ಲಕ್ಷ ಗಳಿಸಿ, ಮತ್ತೆ ಸಾಲದೆಂದು ಪರರ
ಅರ್ಥಕ್ಕಾಗಿ ಆಸೆಬಟ್ಟು ನ್ಯಾಯ ಮಾಡ್ವರೋ |
ಬಿತ್ತಿ ಬೆಳೆಸು ತನ್ನದೆಂದು ವ್ಯರ್ಥ ಚಿಂತೆಯನ್ನು ಮಾಡೆ
ಸತ್ತು ಹೋದ ಮೇಲೆ ಅರ್ಥ ಯಾರಿಗಾಗುದೋ (೨)

ಹೆಣ್ಣು ಹೊನ್ನು ಮಣ್ಣು ಮೂರು, ತನ್ನಲಿದ್ದೂ ಉಣ್ಣಲಿಲ್ಲ
ಅಣ್ಣ ತಮ್ಮ ತಾಯಿ ತಂದೆ ಬಯಸಲಾಗದೊ |
ಅನ್ನ ವಸ್ತ್ರ ಭೋಗಕ್ಕಾಗಿ ತನ್ನ ಸುಖವ ಕಾಣಲಿಲ್ಲ
ಮಣ್ಣು ಪಾಲು ಆದ ಮೇಲೆ ಯಾರಿಗಾಗುದೋ (೩)

ಬೆಳ್ಳಿ ಬಂಗಾರಿಟ್ಟುಕೊಂಡು, ಒಳ್ಳೇ ವಸ್ತ್ರ ಹೊದ್ದುಕೊಂಡು
ಚೆಳ್ಳ ಪಿಳ್ಳ ಗೊಂಬೆಯಂತೆ ಆಡಿ ಹೋದೆನೇ |
ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆ
ಗುಳ್ಳೆ ಪೊರೆಯಂತೆ ಕಾಣೊ ಸಂಸಾರದಾಟ (೪)

ವಾರ್ತೆ ಕೀರ್ತಿ ಎಂಬೋವೆರಡು, ಸತ್ತ ಮೇಲೆ ಬಂದವಯ್ಯ
ವಸ್ತು ಪ್ರಾಣ ನಾಯಕನು ಹ್ಯಾಂಗೆ ದೊರಕುವನೋ |
ಕರ್ತೃ ಕಾಗಿನೆಲೆಯಾದಿ ಕೇಶವನ್ನ ಚರಣ ಕಮಲ
ನಿತ್ಯದಲಿ ಭಜಿಸಿ ಸುಖೀಯಾಗಿ ಬಾಳೇಲೋ (೫)


DiMbadalliruva jIva kaMba sUtra goMbeyaMte,
eMdigAdaroMdu dina sAvu tappaddo [pa]

huTTuttEnu taralilla, sAyuttEnu oyyalilla
suTTu suTTu suNNadaraLu AyitI dEha |
hoTTe balu keTTadeMdu eShTu kaShTa mADidaru
biTTu hOguvAga gENu baTTe kANadO (1)

hattu eMTu lakSha gaLisi, matte sAladeMdu parara
arthakkAgi AsebaTTu nyAya mADvarO |
bitti beLesu tannadeMdu vyartha ciMteyannu mADe
sattu hOda mEle artha yArigAgudO (2)

heNNu honnu maNNu mUru, tannaliddU uNNalilla
aNNa tamma tAyi taMde bayasalAgado |
anna vastra BOgakkAgi tanna suKava kANalilla
maNNu pAlu Ada mEle yArigAgudO (3)

beLLi baMgAriTTukoMDu, oLLE vastra hoddukoMDu
ceLLa piLLa goMbeyaMte ADi hOdenE |
haLLa haridu hOguvAga guLLe baMdu oDeyuvaMte
guLLe poreyaMte kANo saMsAradATa (4)

vArte kIrti eMbOveraDu, satta mEle baMdavayya
vastu prANa nAyakanu hyAMge dorakuvanO |
kartRu kAgineleyAdi kESavanna caraNa kamala
nityadali Bajisi suKIyAgi bALElO (5)

You might also like

error: Content is protected !!