Explanation by Shri Kesava Rao Tadipatri
ಧೃವ ತಾಳ:
ಬಿಡು ಬಿಡು ದೇಹವನು ದಂಡಿಸಿ ಮಾಡಿದ ಕರ್ಮ |
ಕೊಡತಕ್ಕವಲ್ಲವವು ದೃಢವಾದ ಪದವಿಗಳು |
ಕಡು ಸಾಹಸವ ಬಟ್ಟುನೆಸಗಿದರೆ ಸ್ವರ್ಗಾದಿ |
ಒಡನೆ ತಿರುಗಿಸಿ ಫಲ ಪುಡಿಯಾಗಿ ಪೋಗುವದು |
ಮಿಡುಕುವದೆ ಸಿದ್ಧಶತಕಲ್ಪ ಮಾಡಿದರನ್ನ |
ನುಡಿಗೆ ಸಂಶಯ ಸಲ್ಲಕೇಳಿ ಮರುಳಾಗದಿರಿ |
ಪಡಿ ಇಲ್ಲದಾ ದಾರಿ ತೋರುವರು ಹಿರಿಯರು |
ದೃಢನಾಮ ವಿಜಯವಿಠ್ಠಲನ ಶ್ರವಣ ಮನನ |
ಅಡಿಗಡಿಗೆ ಲಾಲಿಸಿ ಪಡಿಯೊಂದು ಧ್ಯಾನಾ ||೧||
ಮಟ್ಟತಾಳ:
ಧ್ಯಾನದೊಳಗೆ ಸ್ನಾನವಡಕಾ |
ಧ್ಯಾನದೊಳಗೆ ಮೌನವಡಕಾ |
ಧ್ಯಾನದೊಳಗೆ ದಾನವಡಕಾ |
ಧ್ಯಾನದೊಳಗೆ ಮಾನವಡಕಾ |
ಧ್ಯಾನದಿಂದ ಜ್ಞಾನವುಂಟು |
ಧ್ಯಾನದೊಳಗೆ ಜಗವಡಕಾ |
ಧ್ಯಾನದೊಳಗೆ ದೇವರಡಕಾ
ಧ್ಯಾನದೊಳಗೆ ಸರ್ವ ಅಡಕಾ
ಧ್ಯಾನವನ್ನು ಘಳಿಸಿಕೊಂಡು |
ಧನ್ಯ ವಿಜಯವಿಠ್ಠಲನ |
ಧ್ಯಾನವನ್ನು ಮಾಡು ನಿಧಾನದಿಂದ ಭಕುತಿಯಲ್ಲಿ |
ಧ್ಯಾನವನ್ನು ಬಿಟ್ಟ ನರಗೆ | ಏನು ಇರಲು ಎಲ್ಲವಡಕಾ ||೨||
ರೂಪಕ ತಾಳ:
ಧ್ಯಾನರಹಿತನಾದ ಮನುಜ |
ಏನು ಕರ್ಮವ ಮಾಡಲೇನು |
ಆನೇ ಕಪಿತ್ಥ ನುಂಗಿದಂತೆ |
ಹೇನು ಬಿಡದೆ ವಾಸನಿಯ |
ತಾನು ನಿರುತಾಶ್ರೈಸಿದಂತೆ |
ಜಾಣನೊಬ್ಬ ಕಿನ್ನರಿ ಧರಿಸಿ |
ಕೋಣನಲ್ಲಿ ಮೀಟದಂತೆ |
ಗಾಣದೊಳಗೆ ಮಳಲು ತುಂಬಿ |
ಭಾನು ಮುಣಗಿ ಸುತ್ತಿದಂತೆ ಕಾಣಿರೊ |
ಧ್ಯಾನ ಜ್ಞಾನ ಸಂಗತಿಯಿಂದ |
ವಾನರನ್ನ ಮುಷ್ಟಿಯಂತೆ |
ದೀನನಾಗಿ ಒಂದು ನಿಮಿಷಾ |
ಧ್ಯಾನವನ್ನು ಮಾಡಲು |
ಶ್ರೀನಿವಾಸ ವಿಜಯವಿಠ್ಠಲ |
ಆನಂದವಾಗಿ ಒಲಿವನು |
ಧ್ಯಾನದಿಂದ ಗತಿಗೆ |
ಸೋಪನವಾಗಲಿ ವಿರಚಿಸೂ ||೩||
ಧೃವ ತಾಳ:
ಅನಂತ ಕಳ್ಯಾಣ ಗುಣಪರಿಪೂರ್ಣ ನಿತ್ಯ
ನಿರ್ದೋಷಾ | ಜ್ಞಾನಾನಂದಾತ್ಮಕ
ವಿಷ್ಣುರ್ಮೇಸ್ವಾಮಿ ತ್ರಿಲೋಕಕರ್ತ |
ನೀನೆ ಸ್ವತಂತ್ರ ಬೊಮ್ಮಾದಿಗಳು ನಿನ್ನ
ದಾಸಾನುದಾಸರು | ಅನಂತಾನಂತ ಕಾಲದಲಿ
ನಿಜವೆಂದು ಪೇಳುತ್ತ |
ಮಾನುಷೊತ್ತಮ ಹೀಗೆ ಬಲು ಕಾಲ ವರ್ಚಿಸಲು |
ಮನದೊಳಗೆ ವಿಜಯವಿಠ್ಠಲನು ಕೃಪೆಯೀಂದ
ಧ್ಯಾನಕ್ಕೆ ಪೊಳೆವಾ ||೪||
ತ್ರಿವಿಡಿ ತಾಳ :
ಚತುರ ಗುಣದಲ್ಲಿ ಚತುರನಾಗಿ ಸಾಸಿರ |
ಚತುರದಶ ನೂರು ಜನ್ಮ ಧ್ಯಾನಂಗಳ |
ಚತುರದಿಂದಲಿ ಮಳ್ಪ ಮತಿಗೆ ದೇವೋತ್ತಮ |
ಚತುರ ವೇದ ವಿಜಯವಿಠ್ಠಲನು |
ಚತುರನಾಗಿ ಬಿಂಬ ಮೂರುತಿ ಸುಳಿದು |
ಚತುರತನದಲ್ಲಿ ಬಂದು ಚರಿಸುವನೂ ||೫||
(ಪಠಾಂತರ:
ಚತುರ ಗುಣದಲ್ಲಿ ಚತುರನಾಗಿ ಸಾಸಿರ |
ಜನ್ಮತೆತ್ತಿ ಚತುರನಾಗಿ ದಶನೂರು ಜನ್ಮಜ್ಞಾನ ಸಂಪಾದಿಸಿ
ಚತುರದಿಂದಲಿ ಮೂರು ಜನ್ಮ ಉಪಾಸನಾ ಮಳ್ಪದೇ ಪೊತ್ತಮನ
ಚತುರ ವೇದ ವಿಜಯವಿಠ್ಠಲನು |
ಚತುರನಾಗಿ ಬಿಂಬ ಮೂರುತಿ ಸುಳಿದು |
ಚತುರತನದಲ್ಲಿ ಬಂದು ಚರಿಸೋದು)
ಅಟ್ಟತಾಳ :
ಹೊನ್ನೆಹುಳುವಿನಂತೆ ಕಣ್ಣಿಗೆ ಸುಳಿವನು |
ತನ್ಮಯ ಗುಣನಿಧಿ ತನ್ನಾಮಕ ದೇವ |
ತನ್ನಿಚ್ಚೆ ಸ್ವಭಾವ ಮುನ್ನೆ ಧ್ಯಾನದಲ್ಲಿ |
ಜನ್ನಿತ ಜ್ಞಾನಕ್ಕೆ ಮನ್ನಿಸುವನು ಇವನ |
ಮುನ್ನಿನ ಮಾರ್ಗಕ್ಕೆ ಮಾನ್ಯ ವಿಜಯವಿಠ್ಠಲನ
ದಯದಿಂದ ಆಪನ್ನ ನೀವನೆಂದು ಚನ್ನಾಗಿ ವಲಿದೂ ||೬||
ಆದಿತಾಳ:
ಆಗಮ ಸಂಚಿತ ಹರಿಸಿ | ಆಗುವ ಪ್ರಾರಬ್ಧಗಳ |
ವೇಗಾನುಸಾರ ತೀರಿಸಿ |ತಾಗಿದ ದು:ಖಾ ಸ್ಪರುಶ |
ಪೋಗಳಾಡಿಸಿ ಅವರವರ | ಯೋಗ್ಯತಾವರಿತು
ಸುಖವಪಾಲಿಸಿ | ಭಾಗವತರನ ಮಾಡಿ |
ಶ್ರೀ ಗುರು ವಿಜಯವಿಠ್ಠಲ ಮೂಗುತಿಯನೀವ ||೭||
ಜತೆ:
ಧ್ಯಾನದಿಂದಲಿ ಮನಸು ನಿಲ್ಲಿಸಿ ಜ್ಞಾನವ ಪಡೆದು
ಆನಂದ ವಿಜಯವಿಠ್ಠಲನ ಲೋಕವ ಸೇರೋ ||೮||
