ಶ್ರೀವಿಜಯದಾಸರ ಮೂಲಸ್ವರೂಪ ಅವತಾರಾದಿ
ಆತ್ಮಕಥನ ಸುಳಾದಿ
(ಸ್ತೋತ್ರ ಭಾಗ ಸುಳಾದಿ – ೩)
ರಾಗ: ಭೈರವಿ
ಧ್ರುವತಾಳ
ದಾಸ ಪುರಂದರನ ಪಾದವನು ಪೊಂದಿದೆನು
ಏಸು ಜನ್ಮದ ಪುಣ್ಯರಾಶಿ ಫಲಿಸಿತೊ ಎನಗೆ
ಕಾಸಿಗಾಗದವನು ಸಾಸಿರಕೆ ಬೆಲೆಯಾದೆ
ಸೂಸುವ ಭಕುತಿಯಲ್ಲಿ ಶ್ರೀಶನ ನಾಮ ಪೀ –
ಯೂಷವನ್ನುಂಡೆನೊ ಉಚಿತ ಸಾಧನದಿಂದ
ಲೇಸಾಗಿ ಪುರಂದರದಾಸರನ ಪಾಲಿಸಿದ
ಸಾಸಿರಪಾದ ನಮ್ಮ ವಿಜಯವಿಟ್ಠಲನ್ನ
ದಾಸರ ದಾಸನಾದೆ ದೋಷ ವಿರಹಿತನಾದೆ || ೧ ||
ಮಟ್ಟತಾಳ
ಇಂದಿನ ದಿನವಾನಂದದಲ್ಲಿ ನಾವು
ಇಂದಿನ ದಿನವಾನಂದ ದಿನವು
ಇಂದಿನ ದಿನಮಾನಂದದ ದಿನ ಪು –
ರಂದರದಾಸರು ಇಂದುವಿನಂತೆ
ಬಂದೆನ್ನ ಕಣ್ಣು ಮುಂದೀಗ ಸುಳಿಯಲು
ಸಂದರುಶನದಿಂದ ದಣಿದೆ ನಾ –
ರಂದವರದ ಪುರಂದರ ವಿಜಯವಿಟ್ಠಲನ ಕರುಣಾ –
ಸಿಂಧುವಿನೊಳಗೆ ನಾ ಪೊಂದಿದೆ ಮಿಂದೆನೊ || ೨ ||
ತ್ರಿವಿಡಿತಾಳ
ಸುರಲೀಲನಾಗಿ ನಿಕಂಪನೆಂದೆನಿಸಿ ದ್ವಾ –
ಪರದಲ್ಲಿ ಜನಿಸಿದೆ ಕೆಲವು ದಿನ ಬಿಡದೆ
ತರುವಾಯ ವರ ಕಲಿಯುಗದಲ್ಲಿ ಈಗ ಜನನ –
ಮರಣವಾಗುತ ಬಂದು ಧರೆಯೊಳಗೆ ಮೆರೆದು
ಹರಿ ಕೃಪೆಯಿಂದಲಿ ಇವರ ಸದನದೊಳಗೆ
ತುರುಕರುವು ಆಗಿ ಜನಿಸಿದೆ ಸುಕೃತದಿಂದ
ಸಿರಿಪತಿಸ್ಥ ವಿಷ್ಣು ನಮ್ಮ ವಿಜಯವಿಟ್ಠಲನ್ನ ದಾ –
ಸರು ಪೇಳಲು ಕವನ ಎರಗಲು ಕರ್ಣಕ್ಕೆ || ೩ ||
ಅಟ್ಟತಾಳ
ಶ್ರವಣ ಫಲದಿಂದ ಅವನಿಯೊಳಗೆ ಎರಡು
ಅವನಿ ಸುರರ ಜನ್ಮವನೀಗ ಧರಿಸಿದೆ
ಕವನ ಪೇಳಿದೆ ಸಂಸಾರದಲಿ ಇದ್ದು
ಅವಸರನಾಗಿ ಅವಧಿ ಇಲ್ಲದೆ ಮತ್ತೆ
ಅವನಿಯೊಳಗೆ ಬಂದೆ ಭವದೂರನಾಗಿ
ಕವಿನಾಮ ವಿಜಯವಿಟ್ಠಲನ್ನ ದಿವ್ಯ ನಾ –
ಮವನು ಕೊಂಡಾಡುವ ಅಧಿಕಾರಿ ನಾನಾದೆ || ೪ ||
ಆದಿತಾಳ
ಎಪ್ಪತ್ತುಮೂರು ವರುಷ ಹೊಪ್ಪಾ ದೇಹದಲಿದ್ದೆ
ಇಪ್ಪ ಕಾಯದಲಿ ಅದರಪ್ಪದಂತೆ ಬಾಳಿ ತಿರುಗಿ
ಇಪ್ಪತ್ತುವಂದು ದಿನ ತಪ್ಪದಲೆ ಸುಲಭ ನರಕ
ಒಪ್ಪದಲೆ ನೋಡಿ ತಿರುಗಿ ಬಪ್ಪೆನಯ್ಯಾ ಧರಿಗೆ
ಅಪ್ಪನಪ್ಪ ಮಹೀಭರ್ತ ವಿಜಯವಿಟ್ಠಲ ಒಲಿ –
ದಿಪ್ಪನು ಇಂದಿನಕಿಂತಧಿಕವಾಗಿ ಎನಗೆ ಬಿಡದೆ || ೫ ||
ಜತೆ
ಗುರುಕೃಪೆಯಿಂದಲಿ ಅರಿದೆ ಈ ತೆರದಿಂದ
ಪರಮಾತ್ಮ ವಿಜಯವಿಟ್ಠಲನಂಘ್ರಿ ಸೇರಿದೆನೋ ||
ಈ ಸುಳಾದಿಯ ರಚನೆಯ ಸಂದರ್ಭ :
ಕಾರ್ತೀಕಶುದ್ಧ ನವಮಿ ದಿವಸ ರಾತ್ರಿ ಭಜನೆಯ ಕಲಾಪ ಮುಗಿದು ಜನರು ಏಳಬೇಕೆನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆಯೇ ಶ್ರೀವಿಜಯದಾಸಾರ್ಯರು ತಮ್ಮ ಆತ್ಮಕಥನರೂಪವಾದ ಈ ಸುಳಾದಿಯನ್ನು ಹಾಡಲುಪಕ್ರಮಿಸಿದರು. ಈ ಸುಳಾದಿಯನ್ನು ಅಲ್ಲಿದ್ದ ಜನರೆಲ್ಲ ಕಿವಿಗೊಟ್ಟು ಆಲಿಸುತ್ತಾ ಶ್ರೀದಾಸರು ದೇಹಬಿಡುವ ಸಮಯ ಅತಿ ಹತ್ತಿರ ಬಂತೆಂದು ತಿಳಿದು ದುಃಖತಪ್ತರಾಗಿ ನಿಂತುಬಿಟ್ಟರು. ಶ್ರೀದಾಸರಾಯರ ಸ್ವರೂಂಪಾಂಶದ ವಿಷಯವು ಎಲ್ಲರಿಗೂ ಸ್ಪಷ್ಟವಾಗಿ ತಿಳಿಯಿತು. ಆಗ ಶ್ರೀದಾಸರು ತಮ್ಮ ದೇಹದ ಅಗಲುವಿಕೆಯಿಂದ ಸ್ಥೈರ್ಯಕೆಡದಂತೆ ಉಪದೇಶಿಸಿ ಆಶೀರ್ವದಿಸಿದರು.
ಮಟ್ಟತಾಳದ ನುಡಿ :
ಕಣ್ಣು ಮುಂದೀಗ ಸುಳಿಯಲು = ಆಗ ತಾನೆ ತಮಗೆ ಶ್ರೀಪುರಂದರದಾಸಾರ್ಯರು ದರ್ಶನ ನೀಡಿದುದರ ಕ್ರಮವರ್ಣನೆ .
ತ್ರಿವಿಡಿತಾಳದ ಮತ್ತು ಅಟ್ಟತಾಳದ ನುಡಿ :
ಶ್ರೀವಿಜಯದಾಸರು ತಮ್ಮ ಹಿಂದಿನ ಅವತಾರಗಳನ್ನು ಈ ತಾಳಗಳಲ್ಲಿ ಹೇಳಿದ್ದಾರೆ.
ಎರಡು ಅವನಿಸುರರ ಜನ್ಮ = ಶ್ರೀಪುರಂದರದಾಸಾರ್ಯರ ಪುತ್ರ ಗುರುಮಧ್ವಪತಿ ಹಾಗೂ ಶ್ರೀವಿಜಯದಾಸಾರ್ಯರು.
ಶ್ರೀದಾಸರಾಯರು , ಈ ಹಿಂದಿನ ಜನ್ಮದಲ್ಲಿ ಶ್ರೀಪುರಂದರದಾಸಾರ್ಯರ ಕೊನೆಯ ಮಗನಾಗಿ ಹುಟ್ಟಿ ’ ಗುರುಮಧ್ವಪತಿ ’ ಎಂಬ ಅಂಕಿತರಾದರು. ಈ ಗುರುಮಧ್ವಪತಿಯಾಗಿ ಹುಟ್ಟುವ ಮುಂಚೆ ಶ್ರೀಪುರಂದರದಾಸರಾಯರ ಮನೆಯಲ್ಲಿದ್ದ ಗೋವುವೊಂದರ ಹೊಟ್ಟೆಯಲ್ಲಿ ಗಂಡು ಕರುವಾಗಿ ಜನಿಸಿದ್ದರು. ಆಗ ಶ್ರೀಪುರಂದರದಾಸರಾಯರು ಶ್ರೀಹರಿಸ್ತೋತ್ರಗಳನ್ನು ಹಾಡುತ್ತಿದ್ದುದನ್ನು ಶ್ರವಣ ಮಾಡಿ , ಆ ಶ್ರವಣಫಲದಿಂದಲೇ ’ ಗುರುಮಧ್ವಪತಿ ’ ಯಾಗಿ ತಾವು ಬಂದದ್ದನ್ನೂ , ಆ ಜನ್ಮದಲ್ಲಿ ಶ್ರೀಪುರಂದರದಾಸರಾಯರ ಸೇವೆ ಮಾಡಿದುದರ ಫಲವಾಗಿ ತಮಗೆ ಈ ಜನ್ಮ ಬಂದಿತೆಂದೂ ’ ಎರಡು ಅವನಿಸುರರ ಜನ್ಮ ’ ಎಂಬುದರಿಂದ ಸೂಚಿಸಿದ್ದಾರೆ.
ಈಗ ಧರಿಸಿದೆ = ಈಗ ಅವತರಿಸಲು ಶ್ರೀಹರಿ ನನಗಿತ್ತ
ಈ ನಿಯಮಿತ ಅವಧಿಯಲ್ಲಿ ;
ಅವಸರನಾಗಿ = ಈಗ ಜನ್ಮತಾಳುವ ಸಮಯ
ಒದಗಿದ್ದುದರಿಂದ ;
ಆದಿತಾಳದ ನುಡಿ :
ಹೊಪ್ಪ = ಹೋಪ , ಬಿಟ್ಟುಹೋಗುವ (ಶಾಶ್ವತವಲ್ಲದ) ;
ಅದರಪ್ಪದಂತೆ = ಮಾನವ ಶರೀರ ಧರಿಸಿದಾಗ
ಇರಬೇಕಾದ ನಿಯಮವನ್ನನುಸರಿಸಿ ;
ಸುಲಭನರಕ = ದೇವತೆಗಳಿಗೆ ನರಕವೆಂದರೆ ಅಜ್ಞಾನಾವಸ್ಥೆ ;
ಅಪ್ಪನಪ್ಪ = ಭೃಗು ಋಷಿಗಳ ತಂದೆ
ಶ್ರೀಬ್ರಹ್ಮದೇವರ ತಂದೆ ಶ್ರೀಮನ್ನಾರಾಯಣ ;
ವಿವರಣೆ :
ಹರಿದಾಸರತ್ನಂ ಶ್ರೀಗೋಪಾಲದಾಸರು
