ಶ್ರೀ ರಾಘವೇಂದ್ರ ಸ್ತೋತ್ರಸುಳಾದಿ
(ಶ್ರೀ ಗೋಪಾಲದಾಸರ ರಚನೆ)
ರಾಗ: ಕಲ್ಯಾಣಿ
ಧ್ರುವತಾಳ
ಧರೆಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು |
ಇರುತಿಪ್ಪ ವಿವರ ಅರಿದಷ್ಟು ವರ್ಣಿಸುವೆ |
ಸ್ಥಿರವಾಗಿ ಮಂತ್ರಾಲಯಪುರ ತುಂಗಾತೀರದಿ |
ಹರಿಭಕ್ತ ಪ್ರಹಲ್ಲಾದ ವರಯಾಗ ಇಲ್ಲಿ ಮಾಡಿ |
ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ ಮಾಡಿ |
ಪರಿಸಿದ್ಧನಾದನೆಂದು ಅರಿದು ಈ ಸ್ಥಳದಲ್ಲಿ |
ಗುರುರಾಘವೇಂದ್ರರಾಯ ಶರೀರ ಪೋಗಾಡಿ ಇಲ್ಲಿ |
ಪರಲೋಕಕ್ಕೆ ಸಾಧನ ಪರಿಪೂರ್ತಿಯ ಮಾಡಿಕೊಂಡು |
ಸಿರಿಕೃಷ್ಣನ್ನ ಚರಣಕ್ಕೆರಗಿ ಸಂತೋಷದಲ್ಲಿ |
ಧರೆಯ ಮ್ಯಾಲಿದ್ದ ಜನರ ಪೊರೆಯಬೇಕೆಂದೆನುತ |
ಹರಿ ನುಡಿದನು ಇವರ ಪರಮ ದಯಾಳು ತನವ |
ಗುರುವಂತರ್ಯಾಮಿಯಾಗಿ ವರವನೀಯಲಿ ಜಗಕೆ |
ನರಹರಿ ತಾನೆ ನಿಂದು ನಿತ್ಯ ಪೂಜೆಯಗೊಂಡು |
ಸಿರಿವುಳ್ಳ ಕೀರುತಿಯ ಸುರರಪಾಲಕ ಚಕ್ರ- |
ಧರ ನಾರಾಯಣ ತಾನೆ ವರಸನ್ನಿಧಾನನಾ- |
ವರಿಗೆ ಫಲ ತಂದೀವ ಇಹಪರದಲ್ಲಿನ್ನು |
ಕರುಣಾಕರ ರಂಗ ಗೋಪಾಲವಿಠ್ಠಲ ತನ್ನ
ಶರಣರ ಪೊರೆವಂಥ ಚರಿಯ ಪರಿಪರಿ ಉಂಟೊ || ೧ ||
ಮಟ್ಟತಾಳ
ನರಹರಿ ಕೃಷ್ಣ ರಾಮ ಸಿರಿವೇದವ್ಯಾಸ |
ಎರಡೆರಡು ನಾಲ್ಕು ಹರಿಯ ಮೂರ್ತಿಗಳು |
ಪರಿವಾರ ಸಹಿತಾಗಿ ಸಿರಿ ಸಹಿತದಿ ನಿಂದು |
ಸುರಗುರುವರ್ಯರು ಮಧ್ವಾಚಾರ್ಯರೇ ಮೊದಲಾಗಿ |
ತರುವಾಯದಲಿನ್ನು ತರತಮ್ಯ ಅನುಸಾರ |
ಪರಿಪರಿ ಯತಿಗಳು ಇರುತಿಪ್ಪರು ಇಲ್ಲಿ |
ಹರುಷದಿಂದಲಿ ವೇದ ಒರೆದು ಶಾಸ್ತ್ರಗಳನ್ನು |
ಪರಿಪರಿ ಪುರಾಣಭಾರತ ಗಾನದಲಿ |
ಸರಿಸರಿ ಬಂದಂತೆ ಸರಿಗಮವೆನುತಲಿ |
ಭರದಿಂದಲಿ ಕುಣಿದು ಭಕುತಿಯಿಂದಲಿ ಇನ್ನು |
ಹರಿಯ ಪೂಜಿಸುತ್ತ ಹಗಲಿರುಳು ಬಿಡದೆ |
ಪರತತ್ವದ ವಿವರ ಪರಿಪರಿ ಪೇಳುವರು |
ಗರುಡವಾಹನರಂಗ ಗೋಪಾಲವಿಠ್ಠಲ |
ಶರಣರ ಪಾಲಿಸುತ ಇರುತಿಪ್ಪನು ಇಲ್ಲಿ || ೨ ||
ತ್ರಿವಿಡಿತಾಳ
ನರಹರಿ ರೂಪನಾಗಿ ವಾಸವಾಗಿ ಇಲ್ಲಿ |
ದುರಿತ ದುಷ್ಕೃತ ಬ್ರಹ್ಮೇತಿಗಳ ಓಡಿಸುವ |
ಸಿರಿರಾಮನಾಗಿಲ್ಲಿ ಪರಿ ಪರಿ ಪರಿ ದೇಶಾಂ- |
ತರ ಅನ್ನ ಕಳಕೊಂಡು ನರರಿಲ್ಲಿ ಬಂದರೆ |
ಸ್ಥಿರಪಟ್ಟ ಕಟ್ಟುವ |
ಸಿರಿ ಕೃಷ್ಣನಾಗಿಲ್ಲಿ ಪರಿಪರಿಯಲಿ ಬಂದ
ಪರಮಾತುರರಿಗೆ ವರವೀವ |
ಪುತ್ರೋತ್ಸವ ಮುಂಜಿ ಮದುವೆಯ ಹರಕಿಗಳ |
ಕೈಕೊಂಡು ಹರುಷ ಬಡಿಸುವನವರ |
ಸಿರಿ ವೇದವ್ಯಾಸನಿಲ್ಲಿ ಭರದಿಂದಲಿ ಬಂದ |
ದುರುವಾದಿಗಳನೆಲ್ಲ ಧುರದಿಂದಲೋಡಿಸಿ |
ಮುರಿದು ಅವರ ಶಾಸ್ತ್ರ , ಹರಿಸರ್ವೋತ್ತಮನೆಂದು |
ಇರುವನಿಲ್ಲಿ ತೋರಿ ಶರಣಜನಕ ಇನ್ನು |
ವರ ಜ್ಞಾನಸುಧೆಯನು ಕರೆದು ಕೊಡುತಲಿಪ್ಪ |
ಸಿರಿ ವಂದಿತಪಾದ ಗೋಪಾಲವಿಠ್ಠಲ |
ಪರಿಪರಿಯಲಿ ಇಲ್ಲಿ ವಾಲಗ ಕೈಕೊಂಬ || ೩ ||
ಅಟ್ಟತಾಳ
ರಾಘವೇಂದ್ರನೆಂಬೊ ರೂಪ ತಾನೇ ಆಗಿ |
ರಾಘವೇಂದ್ರನೆಂಬೊ ನಾಮ ಇಡಿಸಿಕೊಂಡು |
ರಾಘವೇಂದ್ರರಿನ್ನು ಮಾಡಿದಂಥ ಪುಣ್ಯ |
ಭೋಗವರಿತು ತನ್ನ ಭಾಗವತರ ಕೀರ್ತಿ |
ಸಾಗಿಸಿ ಸಲಹಲಿ ತ್ರಿಜಗದೊಳಗಿನ್ನು |
ಮೇಘ ಸುರಿದಂಥ ಅಮೋಘ ಕೀರುತಿಯನ್ನು |
ರಾಘವ ಇವರಿಗೆ ರಾಜ್ಯದಿ ತಂದೀವ |
ರಾಘವೇಂದ್ರಮೂರ್ತಿ ಗೋಪಾಲವಿಠ್ಠಲ |
ಭಾಗವತರಲ್ಲಿ ಬಹು ಪೂಜೆಯನುಗೊಂಬ || ೪ ||
ಆದಿತಾಳ
ದಿನದಿನಕಿಲ್ಲಿ ನೂತನ ಪೂಜೆಗಳಾಗುವವು |
ದಿನದಿನಕಿಲ್ಲಿ ನೂತನ ವಾರ್ತೆಗಳಾಗುವವು |
ದಿನದಿನಕಿಲ್ಲಿ ನೂತನ ಉತ್ಸವಗಳಾಗುವವು |
ಜನರ ಸಂದಣಿ ಪ್ರತಿದಿನ ವಿಪ್ರಭೋಜನ |
ಜನರ ಕೈಯಿಂದ ಪ್ರತಿಜನರೀಪ್ಸಿತ ತುಂಬುವರು |
ಜನುಮ ಸಫಲ ತಮ್ಮ ಜನನವ ನೀಗುವರು |
ದಿನಸಪ್ತ ಶತವರುಷ ದಿನ ಪರಿಯಂತರ |
ದಿನಕರ ಶತತೇಜ ಜಗನ್ನಾಥ ತಾನಿಲ್ಲಿ |
ಅನುವಾಗಿ ತಾನಿಂದು ಜನರ ಪಾಲಿಸುವದ – |
ಕ್ಕನುಮಾನ ಸಲ್ಲದೊ |
ಗುಣಗಣ ಪರಿಪೂರ್ಣ ಗೋಪಾಲವಿಠ್ಠಲ |
ಅಣೋರಣಿಯ ಎಂಬುವಗೆ ಎಣೆಯಾರೊ ಜಗದೊಳಗೆ || ೫ ||
ಜತೆ
ಮಂತ್ರಸಿದ್ಧಿಕ್ಷೇತ್ರ ಇದು ನೋಡಿ ಕೋವಿದರು |
ಮಂತ್ರ ಪ್ರತಿಪಾದ್ಯ ಗೋಪಾಲವಿಠ್ಠಲ ನಿಂದ ||೬||
SrI rAGavEMdra stOtrasuLAdi
(SrI gOpAladAsara racane)
rAga: – kalyANi
dhruvatALa
dhareyavoLage namma gururAGavEMdrarinnu |
irutippa vivara aridaShTu varNisuve |
sthiravAgi maMtrAlayapura tuMgAtIradi |
hariBakta prahallAda varayAga illi mADi |
surarigamRuta uNisi paripariya krIya mADi |
parisiddhanAdaneMdu aridu I sthaLadalli |
gururAGavEMdrarAya SarIra pOgADi illi |
paralOkakke sAdhana paripUrtiya mADikoMDu |
sirikRuShNanna caraNakkeragi saMtOShadalli |
dhareya myAlidda janara poreyabEkeMdenuta |
hari nuDidanu ivara parama dayALu tanava |
guruvaMtaryAmiyAgi varavanIyali jagake |
narahari tAne niMdu nitya pUjeyagoMDu |
sirivuLLa kIrutiya surarapAlaka cakra- |
dhara nArAyaNa tAne varasannidhAnanA- |
varige Pala taMdIva ihaparadallinnu |
karuNAkara raMga gOpAlaviThThala tanna
SaraNara porevaMtha cariya paripari uMTo || 1 ||
maTTatALa
narahari kRuShNa rAma sirivEdavyAsa |
eraDeraDu nAlku hariya mUrtigaLu |
parivAra sahitAgi siri sahitadi niMdu |
suraguruvaryaru madhvAcAryarE modalAgi |
taruvAyadalinnu taratamya anusAra |
paripari yatigaLu irutipparu illi |
haruShadiMdali vEda oredu SAstragaLannu |
paripari purANaBArata gAnadali |
sarisari baMdaMte sarigamavenutali |
BaradiMdali kuNidu BakutiyiMdali innu |
hariya pUjisutta hagaliruLu biDade |
paratatvada vivara paripari pELuvaru |
garuDavAhanaraMga gOpAlaviThThala |
SaraNara pAlisuta irutippanu illi || 2 ||
triviDitALa
narahari rUpanAgi vAsavAgi illi |
durita duShkRuta brahmEtigaLa ODisuva |
sirirAmanAgilli pari pari pari dESAM- |
tara anna kaLakoMDu nararilli baMdare |
sthirapaTTa kaTTuva |
siri kRuShNanAgilli paripariyali baMda
paramAturarige varavIva |
putrOtsava muMji maduveya harakigaLa |
kaikoMDu haruSha baDisuvanavara |
siri vEdavyAsanilli BaradiMdali baMda |
duruvAdigaLanella dhuradiMdalODisi |
muridu avara SAstra , harisarvOttamaneMdu |
iruvanilli tOri SaraNajanaka innu |
vara j~jAnasudheyanu karedu koDutalippa |
siri vaMditapAda gOpAlaviThThala |
paripariyali illi vAlaga kaikoMba || 3 ||
aTTatALa
rAGavEMdraneMbo rUpa tAnE Agi |
rAGavEMdraneMbo nAma iDisikoMDu |
rAGavEMdrarinnu mADidaMtha puNya |
BOgavaritu tanna BAgavatara kIrti |
sAgisi salahali trijagadoLaginnu |
mEGa suridaMtha amOGa kIrutiyannu |
rAGava ivarige rAjyadi taMdIva |
rAGavEMdramUrti gOpAlaviThThala |
BAgavataralli bahu pUjeyanugoMba || 4 ||
AditALa
dinadinakilli nUtana pUjegaLAguvavu |
dinadinakilli nUtana vArtegaLAguvavu |
dinadinakilli nUtana utsavagaLAguvavu |
janara saMdaNi pratidina vipraBOjana |
janara kaiyiMda pratijanarIpsita tuMbuvaru |
januma saPala tamma jananava nIguvaru |
dinasapta SatavaruSha dina pariyaMtara |
dinakara SatatEja jagannAtha tAnilli |
anuvAgi tAniMdu janara pAlisuvada – |
kkanumAna sallado |
guNagaNa paripUrNa gOpAlaviThThala |
aNOraNiya eMbuvage eNeyAro jagadoLage || 5 ||
jate
maMtrasiddhikShEtra idu nODi kOvidaru |
maMtra pratipAdya gOpAlaviThThala niMda ||6||
Leave a Reply