Hari Svatantra Suladi – Sheshadasaru

Raga:Shanmukhapriya

Smt.Nandini Sripad , Blore..

ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ
(ಗುರುವಿಜಯವಿಟ್ಠಲ ಅಂಕಿತ)
ಶ್ರೀಹರಿ ಸ್ವತಂತ್ರ ಸುಳಾದಿ
( ಶ್ರೀಹರಿ ಸರ್ವ ಸ್ವತಂತ್ರ. ಅನಂತ
ರೂಪಗಳಿಂದ ಜೀವರಿಂದ ಪುಣ್ಯಕೃತ್ಯ
ಪಾಪಕೃತ್ಯಗಳನ್ನು ಮಾಡಿಸುವ.
ಜೀವರಿಗೆ ಯಾವ ಸ್ವತಂತ್ರವಿಲ್ಲ.
ಹರಿಯೇ, ನೀನು ಪಾಪಕೃತ್ಯಗಳನ್ನು ಮಾಡಿಸಿ,
ಜೀವನನ್ನು ಅಪರಾಧಿ ಎನಿಸಿ, ನಿಗ್ರಹಿಸುವಿ.
ಕ್ಷಮಿಸಿ ಅನುಗ್ರಹಿಸೆಂದು ಪ್ರಾರ್ಥನೆ. ಐತಿಹಾಸಿಕ.)
ರಾಗ: ಷಣ್ಮುಖಪ್ರಿಯ

ಧ್ರುವತಾಳ

ಅಪರಾಧಿಯಾದದಕ್ಕೆ ಕಾರಣವಿನಿತೆ ಕೇಳು
ಶಫರಾದಿ ದಶರೂಪ ಅನಂತವೋ
ನೃಪನು ವಿನೋದದಿಂದ ವಿಹಾರ ಮಾಡುತಲಿ
ವಿಪಿನದಿ ಸಂಚರಿಪ ಸಮಯದಲ್ಲಿ
ಅಪರಿಮಿತವಾದ ಮೃಗಗಳು ನೋಡಿ ಸಂಹ –
ರಿಪ ಮನಸು ಮಾಡೆ ಭೃತ್ಯನಾದ
ಆಪ್ತನೊಬ್ಬನ ಕರೆದು ಆಜ್ಞವ ಮಾಡಲಾಗಿ
ಸ್ವಪತಿಗೆ ಬಿನ್ನೈಸಿದ ಸಥಿಯಲಿಂದ
ಉಪಗೂಢ ಕರುಣಿಯೆ ಇವುಗಳ ಹನನದಿಂದ
ಪಾಪ ಸಂಚಯವು ಪ್ರಾಪ್ತವಾಹದೋ
ಈ ಪರಿ ನುಡಿದು ಪರಿಪರಿ ಯುಕುತಿಯಿಂದ
ಕೃಪಿಯ ವಿಷ್ಟನಾಗಿ ಪೇಳಲಾಗಿ
ವಿಪರೀತ ನಿನಗಿಲ್ಲ ಎನ್ನ ವಚನದಿಂದ
ಕ್ಷಪಿಸು ಎಂದು ನುಡಿಯೆ ಮೀರಲೊಶವೆ
ಭೂಪತಿ ವಾಕ್ಯವನ್ನು ಭೃತ್ಯನು ನಡಿಸುವದು
ಉಪಾಯವೇ ಸರಿ ಜೀವನಕ್ಕೆ
ಈ ಪರಿಯಾಗದಿರೆ ಒಡಿಯ ನಿಂದಲ್ಲಿ ಅವ
ಕೋಪಕ್ಕೆ ವಿಷಯನಾಹನೆಂದು ತಿಳಿದು
ಕುಪತಿ ನುಡಿದ ಕ್ರಮದಂತೆ ಮಾಡಿದ ಕೀರ್ತಿ
ನೃಪತಿಗಲ್ಲದೆ ಮಿಕ್ಕ ಜನರಿಗುಂಟೆ ?
ಸುಪಥವೆ ಸರಿ ಇದು ಆಜ್ಞಾಧಾರಕರಿಗೆ
ನೃಪ ಮುನಿವದಕ್ಕೆ ಲೇಶ ನಿಮಿತ್ಯ ಉಂಟು
ಕೃಪೆಯು ವಿಶೇಷವಾದ ಗರುವದಿಂದಲ್ಲಿ ಎನ್ನ ನಿ –
ರುಪಮ ಯತ್ನದಿಂದ ಮಾಡೆನೆಂದು
ಅಪಕೃತಿಯಾದ ಅಹಂಕಾರ ಬಂದೊದಗಲು
ಕುಪಿತನಾಗಿ ಶರೆಮನೆಯೊಳಿಟ್ಟು
ರಿಪುಗಳ ಸಂಘದಲ್ಲಿ ನಿಯಾಮಿಸಿ ಅವನನ್ನು
ತಪುತವಾದ ದುಃಖ ಬಡಿಸಿದಂತೆ
ಅಪಚಾರ ಮಾಡದಿಪ್ಪ ಆಳುಗಳೊಬ್ಬರಿಲ್ಲ
ಈ ಪೃಥ್ವಿಯ ಮಧ್ಯದಲ್ಲಿ ಎಣಿಸಿ ಗುಣಿಸೆ
ನೃಪನ ಕಾದು ತಿರುಗಿ ಮಾತು ಲಾಲಿಸಿದಂಥ
ಉಪಕಾರ ಲೇಶವನ್ನು ತಿಳಿಸದಲೆ
ಅಪಹಾಸ ಮಾಡಿದರೆ ಆರಿಂದಾಗುವದೇನೋ
ಶ್ರೀಪತಿ ಎನಗೆ ನಿನಗೆ ಇದರಂತೆವೋ
ವಿಪಗಮನನೇ ನೀನು ಕಡಿಗೆ ಮುನಿವದಕ್ಕೆ
ಅಪ್ರೀತಿಗೆ ಪಾತ್ರನೇನೊ ನಿನಗೆಂದಿಗೆ
ಶಪಥವ್ಯಾತಕ್ಕೆ ದೇಹಿ ಎಂದವರ ಮೇಲೆ
ಕೃಪಣ ವತ್ಸಲ ಸಕಲ ಗುಣ ಪೂರ್ಣನೆ
ವಿಪುಳ ಐಶ್ವರ್ಯ ನಿಧಿ ಗುರುವಿಜಯವಿಟ್ಠಲರೇಯ
ನೀ ಪ್ರಸನ್ನನಾಗೆ ಎನಗಿಲ್ಲ ದೋಷರಾಶಿ || ೧ ||

ಮಟ್ಟತಾಳ

ಅರಸು ಒಬ್ಬನ ಕರೆದು ಗುಪ್ತದಿಂದಲಿ ಪೋಗಿ
ಪುರದೊಳಗಿರುತಿಪ್ಪ ಧನಿಕರ ಮನೆಯಲ್ಲಿ
ಇರುವ ವಸ್ತುಗಳೆಲ್ಲ ಶಳದು ತಾ ಎಂದೆನ್ನೆ
ವರ ಆಜ್ಞವ ಅವ ಶಿರದಲ್ಲಿ ಧರಿಸಿ
ಪರಿ ಪರಿ ವಸ್ತುಗಳ ಜನಪಗೆ ತಂದಿತ್ತ
ಪರಮಾತ್ಮನ ಮಹ ಬಂಧಕ ಶಕುತಿಯಲಿ
ಭರದಿಂದಲಿ ಎನ್ನ ಸಹಾಸದಿಂದಲ್ಲಿ
ಸಿರಿಯನು ಕ್ಷಿತಿಪಂಗೆ ಬಂದೊದಗಿತು ಎಂದು
ವರಲಿ ಕೊಂಡದಕವನ ಕಾರಾಗೃಹದಲ್ಲಿ
ಸ್ಥಿರವಾದ ದುಃಖ ಬಡಿಸಿ ನೋಡಿದ ತೆರದಿ
ಹರಿಯೆ ಎನಗೆ ನಿನಗೆ ಇದೆ ನ್ಯಾಯದಂತೆ
ಕರುಣವಿಲ್ಲದಲೆ ಭವದೊಳಗೆ ತಂದಿ
ಬರಿದೆ ಶಬ್ದಕೆ ಮಹಾ ಬಂಧನ ವೊದಗಿಸಿದಿ
ಪರಮ ದಯಾನಿಧೆ ಗುರುವಿಜಯವಿಟ್ಠಲರೇಯ
ಕರವ ಪಿಡಿಯಬೇಕು ಇನ್ನಾದರು ಬಿಡದೆ || ೨ ||

ತ್ರಿವಿಡಿತಾಳ

ಧನಿಕನೋರ್ವನು ಒಬ್ಬ ನಿರ್ಧನಿಕನ ನೋಡಿ ದಯದಿ
ಘನ ದಾರಿದ್ರವ ಕಳೆವ ಇಚ್ಛೆಯಿಂದ
ಧನವು ಕೆಲವು ಕೊಟ್ಟು ಯಿದರಿಂದ ಪ್ರಾಪ್ತವಾದ
ಹಣದಿ ಜೀವಿಸು ಎಂದು ಬುದ್ಧಿ ಪೇಳೆ
ವಿನಯದಿಂದಲಿ ಪೇಳ್ದ ಯುಕ್ತಿಯಂದದಿ ಮಾಡಿ
ಘನಿಭೂತವಾದ ಸಂಪನ್ನನೆನಿಸಿ
ಧನವಿತ್ತವನನ್ನು ಸ್ಮರಿಸದಲೆ ಹೀನ –
ಮನಸಿನಿಂದೆನ್ನದೆಂದು ಪೇಳಿಕೊಳಲು
ಧನಿಕನು ಕ್ರೋಧನಾಗಿ ಸಕಲ ವಸ್ತು ಅಪಹ –
ರಣ ಮಾಡಿ ಅವನ ಮೇಲೆ ಮುನಿದು
ಘನ ಕ್ರೂರ ಬಂಧನವ ಮಾಡಿಸಿ ನೋಡಿದಂತೆ
ಎನಗೆ ನಿನಗೆ ವ್ಯಾಜ ಇನಿತು ದೇವ
ಧನಿಕರ ಶಿರೋಮಣಿ ಗುರುವಿಜಯವಿಠ್ಠಲರೇಯ
ಮಣಿದು ಬೇಡಿಕೊಂಬೆ ಕರುಣ ಮಾಡೋ || ೩ ||

ಅಟ್ಟತಾಳ

ಮರ್ತ್ಯನೋರ್ವನು ಅಪರಾಧ ಮಾಡಿರಲಾಗಿ
ಧಾರಿತ್ರಿ ವಲ್ಲಭ ತಾನು ಮುನಿದು ಶಿಕ್ಷಿಸುತಿರೆ
ಮತ್ತೊಬ್ಬ ಅವಿವೇಕಿಯಾದ ಮನುಜ ಇವನ
ಉಕ್ತಿಗೆ ಬಾಧ್ಯನು ನಾನು ಎಂದು ಪೇಳಲು
ಕ್ಷಿತಿಪ ಕೇಳ್ಯವನ ತ್ವರಿತದಿಂದಲಿ ಜರಿದು
ಈ ತೆರ ನುಡಿದ ಅಹಂಕಾರಿಯ ಪಿಡಿದು
ತಪ್ತವಾದ ಬಾಧೆ ಬಡಿಸಿದ ತೆರದಂತೆ
ಸ್ವಾತಂತ್ರ ನೀನು ಪರತಂತ್ರ ನಾನಯ್ಯಾ
ಗುಪ್ತವಾದ ದೋಷ ವ್ಯಕ್ತಿಯ ಮಾಡಿದಿ
ಇತ್ತ ಇನ್ನಾದರು ತಪ್ಪುಗಳೆಣಿಸದೆ
ಪ್ರತ್ಯರ್ಥಿಯಾಗಿದ್ದ ಪ್ರತಿಬಂಧ ತಪ್ಪಿಸು
ಮಿತ್ರನೆನಿಪ ಗುರುವಿಜಯವಿಟ್ಠಲರೇಯ
ಎತ್ತಲಿದ್ದರೇನು ನೀನೇವೆ ಗತಿಯೋ || ೪ ||

ಆದಿತಾಳ

ಜೀವಕ್ಕೆ ಸ್ವಾತಂತ್ರ ಎಳ್ಳಿನಿತಾದರನ್ನ
ಆವಾವ ಕಾಲಕ್ಕು ಇಲ್ಲದು ನಿಜವಾಗಿ
ದೇವ ನಿನ್ನ ಆಜ್ಞಾದಿಂದ ಇಂದ್ರಿಯ ಗ್ರಾಮದಲ್ಲಿ
ದೇವ ದೈತ್ಯರೆಲ್ಲ ನಿಂದು ವ್ಯಾಪಾರ ಮಾಡುವರು
ಇವರಿಗೆ ಸ್ವಾತಂತ್ರ ಪೂರ್ವೋಕ್ತದಂತೆ ಸರಿ
ಅವರರಿಗೆ ಉತ್ತಮರು ಪ್ರೇರಕರಾಗುವರು
ಆವಾವ ಸುರರೆಲ್ಲ ಪ್ರಾಣನಿಂದ ಚಲಿಸುವರು
ಆವಾತ ದೇವಿಯಿಂದ ಪ್ರೇರಿಸಿಕೊಂಬುವನು
ದೇವಿಗೆ ಮುಖ್ಯ ನೀನು ನಿರುಪಮ ಕರ್ತೃನಾಗಿ
ಅವ್ಯವಧಾನದಿಂದ ಭೂ ಚಕ್ರ ತಿರುಗುತಿರೆ
ಜೀವಿಗಳಿಗೆ ಸ್ವಾತಂತ್ರ ಆವ ಬಗೆ ಪೇಳುವದು
ನೋವುಗಳಿಗೆ ಸಂಜ್ಞವಾದ ಅಹಂಕಾರ ಮಮತೆಯನ್ನು
ಆವ ನಿನ್ನಿಚ್ಛೆಯಿಂದ ಅಸುರರು ಪ್ರೇರಿಸಲು ಈ
ದಾವ ಪ್ರತಿಬಂಧ ಎನ್ನಿಂದ ಮೀರಲೊಶವೆ ದೇವ
ದೇವ ದೇವ ನೀನೊಲಿದು ಕರುಣವ ಮಾಡಿದರೆ
ಏವಮಾದಿ ಅಪರಾಧವಂದಿಲ್ಲ ನೋಡಿದರು
ಶ್ರೀವಾಸುದೇವ ಗುರುವಿಜಯವಿಟ್ಠಲರೇಯ
ಆವಾವ ಬಗೆಯಿಂದ ನೀನೇವೆ ತಾರಕನೊ || ೫ ||

ಜತೆ

ಸಹಸ್ರ ಅಪರಾಧ ಮಾಡಿ ಪ್ರಾಂತ್ಯದಿ ನಿನಗೆ
ದೇಹಿ ಎಂದೆನೊ ಗುರುವಿಜಯವಿಟ್ಠಲರೇಯಾ ||


SrImodalakallu SEShadAsArya viracita
(guruvijayaviTThala aMkita)
SrIhari svataMtra suLAdi
( SrIhari sarva svataMtra. anaMta
rUpagaLiMda jIvariMda puNyakRutya
pApakRutyagaLannu mADisuva.
jIvarige yAva svataMtravilla.
hariyE, nInu pApakRutyagaLannu mADisi,
jIvanannu aparAdhi enisi, nigrahisuvi.
kShamisi anugrahiseMdu prArthane. aitihAsika.)
rAga: ShaNmuKapriya

dhruvatALa

aparAdhiyAdadakke kAraNavinite kELu
SaParAdi daSarUpa anaMtavO
nRupanu vinOdadiMda vihAra mADutali
vipinadi saMcaripa samayadalli
aparimitavAda mRugagaLu nODi saMha –
ripa manasu mADe BRutyanAda
Aptanobbana karedu Aj~java mADalAgi
svapatige binnaisida sathiyaliMda
upagUDha karuNiye ivugaLa hananadiMda
pApa saMcayavu prAptavAhadO
I pari nuDidu paripari yukutiyiMda
kRupiya viShTanAgi pELalAgi
viparIta ninagilla enna vacanadiMda
kShapisu eMdu nuDiye mIraloSave
BUpati vAkyavannu BRutyanu naDisuvadu
upAyavE sari jIvanakke
I pariyAgadire oDiya niMdalli ava
kOpakke viShayanAhaneMdu tiLidu
kupati nuDida kramadaMte mADida kIrti
nRupatigallade mikka janariguMTe ?
supathave sari idu Aj~jAdhArakarige
nRupa munivadakke lESa nimitya uMTu
kRupeyu viSEShavAda garuvadiMdalli enna ni –
rupama yatnadiMda mADeneMdu
apakRutiyAda ahaMkAra baMdodagalu
kupitanAgi SaremaneyoLiTTu
ripugaLa saMGadalli niyAmisi avanannu
taputavAda duHKa baDisidaMte
apacAra mADadippa ALugaLobbarilla
I pRuthviya madhyadalli eNisi guNise
nRupana kAdu tirugi mAtu lAlisidaMtha
upakAra lESavannu tiLisadale
apahAsa mADidare AriMdAguvadEnO
SrIpati enage ninage idaraMtevO
vipagamananE nInu kaDige munivadakke
aprItige pAtranEno ninageMdige
SapathavyAtakke dEhi eMdavara mEle
kRupaNa vatsala sakala guNa pUrNane
vipuLa aiSvarya nidhi guruvijayaviTThalarEya
nI prasannanAge enagilla dOSharASi || 1 ||

maTTatALa

arasu obbana karedu guptadiMdali pOgi
puradoLagirutippa dhanikara maneyalli
iruva vastugaLella SaLadu tA eMdenne
vara Aj~java ava Siradalli dharisi
pari pari vastugaLa janapage taMditta
paramAtmana maha baMdhaka Sakutiyali
BaradiMdali enna sahAsadiMdalli
siriyanu kShitipaMge baMdodagitu eMdu
varali koMDadakavana kArAgRuhadalli
sthiravAda duHKa baDisi nODida teradi
hariye enage ninage ide nyAyadaMte
karuNavilladale BavadoLage taMdi
baride Sabdake mahA baMdhana vodagisidi
parama dayAnidhe guruvijayaviTThalarEya
karava piDiyabEku innAdaru biDade || 2 ||

triviDitALa

dhanikanOrvanu obba nirdhanikana nODi dayadi
Gana dAridrava kaLeva icCeyiMda
dhanavu kelavu koTTu yidariMda prAptavAda
haNadi jIvisu eMdu buddhi pELe
vinayadiMdali pELda yuktiyaMdadi mADi
GaniBUtavAda saMpannanenisi
dhanavittavanannu smarisadale hIna –
manasiniMdennadeMdu pELikoLalu
dhanikanu krOdhanAgi sakala vastu apaha –
raNa mADi avana mEle munidu
Gana krUra baMdhanava mADisi nODidaMte
enage ninage vyAja initu dEva
dhanikara SirOmaNi guruvijayaviThThalarEya
maNidu bEDikoMbe karuNa mADO || 3 ||

aTTatALa

martyanOrvanu aparAdha mADiralAgi
dhAritri vallaBa tAnu munidu SikShisutire
mattobba avivEkiyAda manuja ivana
uktige bAdhyanu nAnu eMdu pELalu
kShitipa kELyavana tvaritadiMdali jaridu
I tera nuDida ahaMkAriya piDidu
taptavAda bAdhe baDisida teradaMte
svAtaMtra nInu parataMtra nAnayyA
guptavAda dOSha vyaktiya mADidi
itta innAdaru tappugaLeNisade
pratyarthiyAgidda pratibaMdha tappisu
mitranenipa guruvijayaviTThalarEya
ettaliddarEnu nInEve gatiyO || 4 ||

AditALa

jIvakke svAtaMtra eLLinitAdaranna
AvAva kAlakku illadu nijavAgi
dEva ninna Aj~jAdiMda iMdriya grAmadalli
dEva daityarella niMdu vyApAra mADuvaru
ivarige svAtaMtra pUrvOktadaMte sari
avararige uttamaru prErakarAguvaru
AvAva surarella prANaniMda calisuvaru
AvAta dEviyiMda prErisikoMbuvanu
dEvige muKya nInu nirupama kartRunAgi
avyavadhAnadiMda BU cakra tirugutire
jIvigaLige svAtaMtra Ava bage pELuvadu
nOvugaLige saMj~javAda ahaMkAra mamateyannu
Ava ninnicCeyiMda asuraru prErisalu I
dAva pratibaMdha enniMda mIraloSave dEva
dEva dEva nInolidu karuNava mADidare
EvamAdi aparAdhavaMdilla nODidaru
SrIvAsudEva guruvijayaviTThalarEya
AvAva bageyiMda nInEve tArakano || 5 ||

jate

sahasra aparAdha mADi prAMtyadi ninage
dEhi eMdeno guruvijayaviTThalarEyA ||

Leave a Reply

Your email address will not be published. Required fields are marked *

You might also like

error: Content is protected !!