Vyasarajara suladi – Purandaradasaru

Smt.Nandini Sripad

ರಾಗ: ತಿಲಂಗ್
ಧ್ರುವತಾಳ
ವ್ಯಾಸರಾಯರ ಚರಣಕಮಲ ದರ್ಶನವೆನ –
ಗೇಸು ಜನ್ಮದ ಸುಕೃತ ಫಲ ದೊರಕಿತೊ ಎನ್ನ
ಸಾಸಿರ ಕುಲಕೋಟಿ ಪಾವನವಾಯಿತು
ಶ್ರೀಶನ ಭಜಿಸುವದಕ್ಕಧಿಕಾರಿ ನಾನಾದೆ
ವಾಸುದೇವನ ಪೂಜೆಗಧಿಕಾರಿ ನಾನಾದೆ
ದೋಷರಹಿತನಾದೆ ಪುರಂದರವಿಟ್ಠಲನ್ನ
ದಾಸರ ಕರುಣವು ಎನ್ನ ಮೇಲಿರಲಿಕ್ಕೆ || ೧ ||

ಮಟ್ಟತಾಳ
ಗುರು ಉಪದೇಶವಿಲ್ಲದ ಜ್ಞಾನವು
ಗುರು ಉಪದೇಶವಿಲ್ಲದ ಸ್ನಾನವು
ಗುರು ಉಪದೇಶವಿಲ್ಲದ ಧ್ಯಾನವು
ಗುರು ಉಪದೇಶವಿಲ್ಲದ ಜಪವು
ಗುರು ಉಪದೇಶವಿಲ್ಲದ ತಪವು
ಗುರು ಉಪದೇಶವಿಲ್ಲದ ಮಂತ್ರ
ಗುರು ಉಪದೇಶವಿಲ್ಲದ ತಂತ್ರ
ಉರಗನ ಉಪವಾಸದಂತೆ ಕಾಣಿರೋ
ಗುರು ವ್ಯಾಸರಾಯನ ಕರುಣದಿಂದಲಿ ಎನಗೆ
ಪುರಂದರವಿಟ್ಠಲನೇ ಪರನೆಂದು ಅರುಹಿ
ದುರಿತ ಭಯವೆಲ್ಲ ಪರಿಹರಿಸಿದನಾಗಿ
ವರ ಮಹಾಮಂತ್ರ ಉಪದೇಶಿಸಿದನಾಗಿ
ವರ ಮಹಾಮಂತ್ರ ಉಪದೇಶಿಸಿದನಾಗಿ || ೨ ||

ರೂಪಕತಾಳ
ಅಂಕಿತವಿಲ್ಲದ ದೇಹ ನಿಷೇಧ
ಅಂಕಿತವಿಲ್ಲದ ಕಾವ್ಯ ಶೋಭಿಸದು
ಅಂಕಿತವಿಲ್ಲದಿರಬಾರದೆಂದು ಚ –
ಕ್ರಾಂಕಿತವನ್ನು ಮಾಡಿ ಎನ್ನಂಗಕ್ಕೆ
ಪಂಕಜನಾಭ ಪುರಂದರವಿಟ್ಠಲನ್ನ
ಅಂಕಿತ ಎನಗಿತ್ತು ಗುರುವ್ಯಾಸ ಮುನಿರಾಯಾ || ೩ ||

ಝಂಪೆತಾಳ
ನ್ಯಾಯಾಮೃತ ತರ್ಕತಾಂಡವ ಚಂದ್ರಿಕೆ ಮೊದಲಾದ
ನ್ಯಾಯ ಗ್ರಂಥವ ರಚಿಸಿ ತನ್ನ ಭಕ್ತರಿಗಿತ್ತು
ಮಾಯಾವಾದಿ ಮೊದಲಾದ ಇಪ್ಪತ್ತೊಂದು ಕುಭಾಷ್ಯಕ
ಬಾಯಿ ಮುದ್ರಿಸಿದ ಮಧ್ವರಾಯರ ಕರುಣದಿಂದ
ಶ್ರೀಯರಸ ಪುರಂದರವಿಟ್ಠಲನ್ನ ದಾಸರೊಳು
ನಾಯಕನೆಂದೆನಿಸಿ ಗುರು ವ್ಯಾಸಮುನಿರಾಯ || ೪ ||

ತ್ರಿವಿಡಿತಾಳ
ಶೇಷಾವೇಶ ಪ್ರಹ್ಲಾದನವತಾರವೆನಿಸಿದೆ
ವ್ಯಾಸರಾಯನೆಂಬೊ ಪೆಸರು ನಿನಗಂದಂತೆ
ದೇಶಾಧಿಪಗೆ ಬಂದ ಕುಹಯೋಗವನು ನೂಕೀ
ನೀ ಸಿಂಹಾಸನವೇರಿ ಮೆರೆದೆ ಜಗವರಿಯೆ
ವ್ಯಾಸಾಬ್ಧಿಯನು ಬಿಗಿಸಿ ಕಾಶಿದೇಶದೊಳಗೆಲ್ಲ
ಭಾಸುರ ಕೀರ್ತಿಯನು ಪಡೆದೆ ನೀನು ಗುರುರಾಯ
ವಾಸುದೇವ ಪುರಂದರವಿಟ್ಠಲನ್ನ ದಾಸರೊಳು
ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು || ೫ ||

ಧ್ರುವತಾಳ
ಸಿರಿ ನಾರಾಯಣಯೋಗಿ ಶ್ರೀಪಾದರಾಯರಲ್ಲಿ
ವರವಿದ್ಯಾಭ್ಯಾಸವ ಮಾಡಿದೆ ನೀನು
ಧರಿಯೊಳು ವಿಜಯೀಂದ್ರ ವಾದಿರಾಜರೆಂಬ
ಪರಮಶಿಷ್ಯರ ಪಡೆದು ಮೆರದೆ ಕೀರುತಿಯಲ್ಲಿ
ಸುರೇಂದ್ರರು ಪುತ್ರಭಿಕ್ಷವ ಬೇಡೆ ವಿಜೇಂದ್ರನ್ನ
ಕರುಣಿಸಿ ಮಠವನುದ್ಧರಿಸಿದ ಕಾರಣ
ಗುರುವ್ಯಾಸರಾಯರೆ ಪರಮ ಗುರುಗಳು ಕಾಣಿರೊ
ಪುರಂದರವಿಟ್ಠಲ ಪರದೈವ ಜಗಕೆ || ೬ ||

ತ್ರಿವಿಡಿತಾಳ
ವರಮಧ್ವಮತವೆಂಬೊ ಸಾಗರದೊಳು ಅವತರಿಸಿದೆ
ಪೂರ್ಣ ಚಂದ್ರಮನಂತೆ ನೀನು ಧರಿಯೊಳು
ಬ್ರಹ್ಮಣ್ಯರ ವರಕುವರನೆಂದೆನಿಸಿದೆ ನೀನು
ಪುರಂದರವಿಟ್ಠಲನ್ನ ಕರುಣಾಕರ ಕರುಣವ ಪಡೆದೆ || ೭ ||

(ಪಾಠಾಂತರ)
(ಪರನೆಂದು ಅರುಹೆ ದುರಿತಗಳೆಲ್ಲ ಪರಿಹರಿಸಿಕೊಂಡೆ ನಾನು)

ಅಟ್ಟತಾಳ
ಈಸು ಮುನಿಗಳು ಇದ್ದರೇನು ಮಾಡಿದರಯ್ಯ
ವ್ಯಾಸರಾಯ ಮಧ್ವಮತವನುದ್ಧರಿಸಿದ
ಕಾಶಿ ಗದಾಧರ ಮಿಶ್ರನ ಕೂಡ
ವಾದವ ಮಾಡಿ ಸೋಲಿಸಿ
ದಾಸನ ಮಾಡಿಕೊಂಡೆ ಧಾರುಣಿಯೊಳರಾಸಿಂಹ
ಮಿಶ್ರನೆ ಯೋಗಿ ಮೊದಲಾದ ಪಕ್ಷ ಕಾಶಿ –
ಮಿಶ್ರ ಪಕ್ಷಧರ ವಾಜಿಪೇಯ ಲಿಂಗಣ್ಣನ ವಿ –
ದ್ವಾಂಸರು ನೂರೆಂಟು ಮಂದಿ ಬರಲು
ಜಯಿಸಿದೆ ಜಯಪತ್ರಿಕೆಯ ಕೊಂಡು ಮೆರೆದೆ
ವಾಸುದೇವ ಗೋಪಾಲ ಕೃಷ್ಣಗೆ ವಿ –
ಭೂಷಣವ ಮಾಡಿ ಹಾಕಿಸಿದೆ
ಶ್ರೀಶ ಪುರಂದರವಿಟ್ಠಲನ್ನ
ಈಶ ಬೊಮ್ಮ ಇಂದ್ರಾದಿಗಳಿಗೆ ಈಶನೆಂದು
ಡಂಗುರವ ಪೊಯಿಸಿ ಮೆರೆದೆ ಜಗವರಿಯೆ
ದಾಸರೊಳು ನೀ ಸಮರ್ಥನು
ಸಂನ್ಯಾಸಿ ಶಿರೋಮಣಿ || ೮ ||

ಆದಿತಾಳ
ಮಾನಸ ಪೂಜೆಯನು ನೀ ಮಾಡೆ
ದಾನವಾಂತಕ ರಂಗನು ಮೆಚ್ಚೆ
ತಾನೆ ಬಂದು ಗೋಪಾಲ ಕೃಷ್ಣ
ಜ್ಞಾನಿಗಳರಸನೆ ಗುರುವ್ಯಾಸರಾಯ
ಏನೆಂಬೆನು ನಿನ್ನ ಮಹಿಮೆಯನು
ಶ್ರೀನಿವಾಸ ಪುರಂದರವಿಟ್ಠಲನ
ಗಾನವ ಮಾಡುತ ಆಡುತ ಪಾಡುತ
ಏನೆಂಬೆ ನಿಮ್ಮ ಮಹಿಮೆಯ ಮಾನವನಾವ ಬಲ್ಲನು || ೯ ||

ಜತೆ
ಗುರುವ್ಯಾಸರಾಯರ ಕರುಣಕಟಾಕ್ಷದಿ
ಪುರಂದರವಿಟ್ಠಲನ್ನ ಚರಣವ ಕಂಡೆನಾ ||


rAga: tilaMg
dhruvatALa
vyAsarAyara caraNakamala darSanavena –
gEsu janmada sukRuta Pala dorakito enna
sAsira kulakOTi pAvanavAyitu
SrISana BajisuvadakkadhikAri nAnAde
vAsudEvana pUjegadhikAri nAnAde
dOSharahitanAde puraMdaraviTThalanna
dAsara karuNavu enna mEliralikke || 1 ||

maTTatALa
guru upadESavillada j~jAnavu
guru upadESavillada snAnavu
guru upadESavillada dhyAnavu
guru upadESavillada japavu
guru upadESavillada tapavu
guru upadESavillada maMtra
guru upadESavillada taMtra
uragana upavAsadaMte kANirO
guru vyAsarAyana karuNadiMdali enage
puraMdaraviTThalanE paraneMdu aruhi
durita Bayavella pariharisidanAgi
vara mahAmaMtra upadESisidanAgi
vara mahAmaMtra upadESisidanAgi || 2 ||

rUpakatALa
aMkitavillada dEha niShEdha
aMkitavillada kAvya SOBisadu
aMkitavilladirabAradeMdu ca –
krAMkitavannu mADi ennaMgakke
paMkajanABa puraMdaraviTThalanna
aMkita enagittu guruvyAsa munirAyA || 3 ||

JaMpetALa
nyAyAmRuta tarkatAMDava caMdrike modalAda
nyAya graMthava racisi tanna Baktarigittu
mAyAvAdi modalAda ippattoMdu kuBAShyaka
bAyi mudrisida madhvarAyara karuNadiMda
SrIyarasa puraMdaraviTThalanna dAsaroLu
nAyakaneMdenisi guru vyAsamunirAya || 4 ||

triviDitALa
SEShAvESa prahlAdanavatAraveniside
vyAsarAyaneMbo pesaru ninagaMdaMte
dESAdhipage baMda kuhayOgavanu nUkI
nI siMhAsanavEri merede jagavariye
vyAsAbdhiyanu bigisi kASidESadoLagella
BAsura kIrtiyanu paDede nInu gururAya
vAsudEva puraMdaraviTThalanna dAsaroLu
lESa ninnaMte veggaLara kANenu nAnu || 5 ||

dhruvatALa
siri nArAyaNayOgi SrIpAdarAyaralli
varavidyAByAsava mADide nInu
dhariyoLu vijayIMdra vAdirAjareMba
paramaSiShyara paDedu merade kIrutiyalli
surEMdraru putraBikShava bEDe vijEMdranna
karuNisi maThavanuddharisida kAraNa
guruvyAsarAyare parama gurugaLu kANiro
puraMdaraviTThala paradaiva jagake || 6 ||

triviDitALa
varamadhvamataveMbo sAgaradoLu avatariside
pUrNa caMdramanaMte nInu dhariyoLu
brahmaNyara varakuvaraneMdeniside nInu
puraMdaraviTThalanna karuNAkara karuNava paDede || 7 ||

(pAThAMtara)
(paraneMdu aruhe duritagaLella pariharisikoMDe nAnu)

aTTatALa
Isu munigaLu iddarEnu mADidarayya
vyAsarAya madhvamatavanuddharisida
kASi gadAdhara miSrana kUDa
vAdava mADi sOlisi
dAsana mADikoMDe dhAruNiyoLarAsiMha
miSrane yOgi modalAda pakSha kASi –
miSra pakShadhara vAjipEya liMgaNNana vi –
dvAMsaru nUreMTu maMdi baralu
jayiside jayapatrikeya koMDu merede
vAsudEva gOpAla kRuShNage vi –
BUShaNava mADi hAkiside
SrISa puraMdaraviTThalanna
ISa bomma iMdrAdigaLige ISaneMdu
DaMgurava poyisi merede jagavariye
dAsaroLu nI samarthanu
saMnyAsi SirOmaNi || 8 ||

AditALa
mAnasa pUjeyanu nI mADe
dAnavAMtaka raMganu mecce
tAne baMdu gOpAla kRuShNa
j~jAnigaLarasane guruvyAsarAya
EneMbenu ninna mahimeyanu
SrInivAsa puraMdaraviTThalana
gAnava mADuta ADuta pADuta
EneMbe nimma mahimeya mAnavanAva ballanu || 9 ||

jate
guruvyAsarAyara karuNakaTAkShadi
puraMdaraviTThalanna caraNava kaMDenA ||

Leave a Reply

You might also like

error: Content is protected !!