ಶ್ರೀಪುರಂದರದಾಸಾರ್ಯ ವಿರಚಿತ
ಹರಿಸ್ಮರಣ ಸುಳಾದಿ
ರಾಗ: ಕಾನಡ
ಧ್ರುವತಾಳ
ಎನ್ನ ಹೃದಯದಲ್ಲಿ ಎಲ್ಲೆಲ್ಲಿ ಅನುಪಮ ಮಹಿಮನೆ
ನಿನಗೀಯಲೊ ಹರಿಯೆ
ಎನ್ನ ಭಾವದಲ್ಲಿ ಬರಿದೆ ಸುಕೃತ ದುಷ್ಕೃತದಿ
ಬನ್ನ ಬಡಿಸಿ ನೀ ನೋಡುತಿಹರೆ
ಎನ್ನ ಅವಗುಣಗಳೆಣಿಸುವರೇ ಕಡೆ ಉಂಟೆ
ನಿನ್ನ ಘನ್ನತೆ ನೋಡಿ ಪಾಲಿಸೆಲೊ ಹರಿಯೆ
ಎನ್ನ ಹೃದಯದಲ್ಲಿ ನಿನ್ನಾಧೀನದ ಮನೋಜನನ
ಎನಗನ್ಯಥಾ ಗತಿಯಿಲ್ಲ ಅನಾಥ ನಾನೈಯ್ಯ
ಅನಾಥಬಂಧು ಪುರಂದರವಿಟ್ಠಲರೇಯಾ
ನಿನ್ನ ಡಿಂಗರಿಗನೆನಸಲೊ ಕೃಪಾಂಬುಧಿಯೇ || ೧ ||
ಮಟ್ಟತಾಳ
ಮನವೇ ಕೇಳು ಮಾಮನೋಹರನ
ಮನಸಿಜಪಿತನ ನಿತ್ಯನಾ ಅನುದಿನದಲಿ
ಅಗಲದಿಪ್ಪ ಘನಮಹಿಮ ದೇವ ಪರಿಯನ
ನೆನೆವದೇನು ನೇಹ ಮಾಡಿದವನ
ಮನವನೀಯ ತನ್ನನೀವನಾ –
ದನುಜ ಮನುಜ ದಿವಿಜರೊಡೆಯಗೆ
ತನವು ಪ್ರಾಣ ವೊಪ್ಪಿಸುವನಿಗೆ
ಅನುದಿನದಲಿ ಪೊರೆವನು ಪುರಂದರವಿಟ್ಠಲ
ನೆನೆವದೇನು ನೇಹ ಮಾಡಿದವನಾ || ೨ ||
ತ್ರಿವಿಡಿತಾಳ
ಕಟ್ಟುವನೆ ಕೌರುವಾನಂತನಾ
ಮುಟ್ಟುವದೆ ಗೂಗಿ ಭಾನುಮಂಡಲವನು
ಸೃಷ್ಠಿ ಸಂಹಾರ ಕಾರಣ ಮೂರುತಿಯನು
ಮೆಟ್ಟಿ ಆಳುವ ಕೇಶವನೆಂದರಿಯದೆ
ಸೃಷ್ಠಿ ಸಂಹಾರ ಕಾರಣ ಮೂರುತಿಯನು
ಕಟ್ಟಿದಳೋ ಗೋಪಿ ದಾವಿನಲಿ ಪುರಂದರ –
ವಿಟ್ಠಲರೇಯ ಯಮಳಾರ್ಜುನ ಭಂಜನ || ೩ ||
ಅಟ್ಟತಾಳ
ಅತ್ತಿತ್ತೊಂದು ಕ್ಷಣ ಅನಂತನಿಲ್ಲದೆ ಎನಗೆ
ಚಿಂತಿಸೂತಿದೆ ಎನ್ನ ಮನ ಚಿಂತಿಸೂತಿದೆ
ಕಂತುಪಿತನ ಬರವ ಬಯಸೀ
ಚಿಂತಿಸೂತಿದೆ ಎನ್ನ ಮನ ಚಿಂತಿಸೂತಿದೆ
ಸಂತತ ಪುರಂದರವಿಟ್ಠಲನ ನೆನೆವ ಭಾಗ್ಯವ
ದೊರಕಬೇಕೆಂದು ಚಿಂತಿಸೂತಿದೆ || ೪ ||
ಆದಿತಾಳ
ರಂಗ ನಮೋ ರಘುನಂದ ನಮೋ ನಮೋ
ಕೃಷ್ಣ ನಮೋ ಕೃಪಾಳುವೆ ನಮೋ ನಮೋ
ದೇವ ನಮೋ ದೇವರಾಯ ನಮೋ ನಮೋ
ಈವ ಕಾವ ಕರುಣಾಕರ ನಮೋ ನಮೋ
ದೇವ ನಮೋ ದೇವರಾಯ ನಮೋ ನಮೋ
ಪುಂಡರೀಕ ಮನಃಪ್ರೀಯನೆ ನಮೋ ನಮೋ
ಪಂಢರಿರೇಯ ಪುರಂದರವಿಟ್ಠಲ
ದೇವ ನಮೋ ದೇವರಾಯ ನಮೋ || ೫ ||
ಜತೆ
ಹರಿಯ ನೆನೆವೆ ನರಹರಿಯ ನೆನೆವೆ ಮುರ –
ಹರನ ನೆನೆವೆನೊ ಪುರಂದರವಿಟ್ಠಲ ಹರಿಯ ನೆನೆವೆ ||
SrIpuraMdaradAsArya viracita
harismaraNa suLAdi
rAga: kAnaDa
dhruvatALa
enna hRudayadalli ellelli anupama mahimane
ninagIyalo hariye
enna BAvadalli baride sukRuta duShkRutadi
banna baDisi nI nODutihare
enna avaguNagaLeNisuvarE kaDe uMTe
ninna Gannate nODi pAliselo hariye
enna hRudayadalli ninnAdhInada manOjanana
enaganyathA gatiyilla anAtha nAnaiyya
anAthabaMdhu puraMdaraviTThalarEyA
ninna DiMgariganenasalo kRupAMbudhiyE || 1 ||
maTTatALa
manavE kELu mAmanOharana
manasijapitana nityanA anudinadali
agaladippa Ganamahima dEva pariyana
nenevadEnu nEha mADidavana
manavanIya tannanIvanA –
danuja manuja divijaroDeyage
tanavu prANa voppisuvanige
anudinadali porevanu puraMdaraviTThala
nenevadEnu nEha mADidavanA || 2 ||
triviDitALa
kaTTuvane kauruvAnaMtanA
muTTuvade gUgi BAnumaMDalavanu
sRuShThi saMhAra kAraNa mUrutiyanu
meTTi ALuva kESavaneMdariyade
sRuShThi saMhAra kAraNa mUrutiyanu
kaTTidaLO gOpi dAvinali puraMdara –
viTThalarEya yamaLArjuna BaMjana || 3 ||
aTTatALa
attittoMdu kShaNa anaMtanillade enage
ciMtisUtide enna mana ciMtisUtide
kaMtupitana barava bayasI
ciMtisUtide enna mana ciMtisUtide
saMtata puraMdaraviTThalana neneva BAgyava
dorakabEkeMdu ciMtisUtide || 4 ||
AditALa
raMga namO raGunaMda namO namO
kRuShNa namO kRupALuve namO namO
dEva namO dEvarAya namO namO
Iva kAva karuNAkara namO namO
dEva namO dEvarAya namO namO
puMDarIka manaHprIyane namO namO
paMDharirEya puraMdaraviTThala
dEva namO dEvarAya namO || 5 ||
jate
hariya neneve narahariya neneve mura –
harana neneveno puraMdaraviTThala hariya neneve ||
Leave a Reply