Ugabhoga – Various dasaru

ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಲು
ಆವ ಬಗೆ ಕಾರ್ಯತತಿ ಸಿದ್ಧಿ ಗೊಳಿಸಿ
ಮೋದದಿಂ ಸಲಿಸುವ ಮನದಿಷ್ಟವ
ಸಾಧು ಜನರೆಲ್ಲ ಕೇಳಿ ಸಕಲ ಸುರರಿಂಗೆ
ಮಾಧವನೇ ನೇಮಿಸಿಪ್ಪ ಈ ಅಧಿಕಾರವ
ಆದರದಿಂ ಅವರವರೊಳು ನಿಂದು ಕಾರ್ಯಗಳ
ಭೇದ ಗೊಳಿಸದೆ ಮಾಳ್ಪ ಪುರಂದರ ವಿಠಲ ||


ನವರತ್ನಗಳು ಕಂಡಾ ಕಂಡ ಠಾವಿನಲ್ಲುಂಟೆ?
ನವವಿಧ ಭಕುತಿಗಳು ಕಂಡ ಕಂಡಲ್ಲುಂಟೆ?
ದೇವ ನಿನ್ನ ಭಕುತಿ ಕಂಡರೆ ಬಾರದು, ಕಲಿತರೆ ಬಾರದು
ಪುರಂದರವಿಠಲ ನಿನ್ನ ದಯವಾಗದನಕ ||

ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವುದು
ಭಕುತಿ ಸಾಧನವಲ್ಲದನ್ಯ ಸಾಧನವುಂಟೆ
ಭಕುತಿಗಭಿಮಾನಿ ಭಾರತಿಯ ಕರುಣದಿಂ
ಮುಕುತಿಗೆ ಪಥವೆಂದು ಮನವಿಟ್ಟು ಭಜಿಸಿರೊ
ಅಖಿಳೇಶ ಪುರಂದರವಿಠಲ ತಾನೊಲಿವ ||

ಧ್ವಜ ವಜ್ರಾಂಕುಶ ರೇಖಾಂಕಿತ-ವಾದ
ಹರಿಯ ಪಾದಾಂಬುಜುವ ಸೇವಿಪ
ಅಜ ಭವಾದಿಗಳ ಭಾಗ್ಯ ನೋಡು
ತ್ರಿಜಗ ವಂದ್ಯನ ಪಾಡು ಭಕ್ತಿ-ಯನು ಬೇಡು
ಕುಜನ ಮತವ ಸುಡು ದುರ್ಜನರ ಸಂಗವ ಬಿಡು
ಗಜೇಂದ್ರನ ಕಾಯ್ದ ಶ್ರೀ ಕೃಷ್ಣನ ಸ್ಮರಣೆ ಮಾಡು
ಪುರಂದರ ವಿಠಲ ರಾಯನ ಬಿಡದೆ ಕೊಂಡಾಡು ||


ಧ್ಯಾನವು ಕೃತಯುಗದಿ
ಯಜನ ಯಜ್ಞವು ತ್ರೇತಾಯುಗದಿ
ದಾನವಾಂತಕನ ದೇವತಾರ್ಚನೆ ದ್ವಾಪರಯುಗದಿ
ಆ ಮಾನವರಿಗೆಷ್ಟು ಫಲವೊ ಅಷ್ಟು ಫಲವು
ಕಲಿಯುಗದಿ ಗಾನದಲಿ ಕೇಶವಯೆನಲು
ಕೈಗೊಡುವನು ರಂಗವಿಠ್ಠಲ ||


ಕಲಿಕಾಲಕ್ಕೆ ಸಮ ಯುಗವಿಲ್ಲವಯ್ಯ
ಕಲುಷ ಹರಿಸಿ ಕೈವಲ್ಯವೀವುದಯ್ಯ
ಸಾಲೆ ನಾಮ ಕೀರ್ತನೆ ಸ್ಮರಣೆ ಸಾಕಯ್ಯ
ಸ್ಮರಿಸಲು ಸಾಯುಜ್ಯ ಪದವೀವುದಯ್ಯ
ಬಲವಂತ ಶ್ರೀರಂಗವಿಠಲನ ನೆನೆದರೆ
ಕಲಿಯುಗವೇ ಕೃತಯುಗ ಆಗುವುದಯ್ಯ ||


ಮನೆಯೆಂಬ ಆಸೆಯು ಎನ್ನ ಮುಂದುಗೆಡಿಸುತಿದೆ
ಮನೆವಾರತೆಯು ಎನ್ನ ಭಂಗ ಬಡಿಸುತಿದೆ
ಸುತರಾಸೆಯು ಎನ್ನ ದೈನ್ಯ ಬಡಿಸುತಿದೆ
ಇನಿತಾಸೆಯುಳಿದು ಬುದ್ಧಿ ನಿನ್ನಲ್ಲಿ ನಿಲುವಂತೆ
ಮಾಡೊ ಸಿರಿಪುರಂದರವಿಠಲ ರಾಯ ||

ಮನೆಯಿಂದ ಸಂತೋಷ ಕೆಲವರಿಗೆ ಲೋಕದಲಿ
ಧನದಿಂದ ಸಂತೋಷ ಕೆಲವರಿಗೆ ಲೋಕದಲಿ
ವನಿತೆಯಿಂ ಸಂತೋಷ ಕೆಲವರಿಗೆ ಲೋಕದಲಿ
ತನಯರಿಂ ಸಂತೋಷ ಕೆಲವರಿಗೆ ಲೋಕದಲಿ
ಇನಿತು ಸಂತೋಷ ಅವರವರಿಗಾಗಲಿ
ನಿನ್ನನೆನೆವೋ ಸಂತೋಷ ಎನಗಾಗಲಿ ನಮ್ಮ ರಂಗವಿಠ್ಠಲ ||


ಮನೆಯ ಕಟ್ಟುವರುಂಟು ಮಡದಿ ಮಕ್ಕಳು ಉಂಟು |
ಧನವಗಳಿಸುವರುಂಟು ಗಳಿಸದಿದ್ದವರುಂಟು |
ಧನವ ಕಟ್ಟುವರುಂಟು ದಾನ ಮಾಡುವರುಂಟು |
ಋಣವ ಕೊಟ್ಟವರುಂಟು ಋಣ ಮಾಡಿದವರುಂಟು |
ಮನೆಗಾರ ತಣವಿದರೊಳ್ ಎಂದಿಗು ಬೇಡ
ಮುನಿಗಳು ಸಹಿತಾಗಿ ಮೋಸಹೋದರು ಇದಕೆ
ಗುಣಪೂರ್ವಚೆಲ್ವ ಗೋಪಾಲವಿಠ್ಠಲ ನಿನ್ನ
ಗುಣಚಿಂತನೆಯೊಳಿಡು ಇಷ್ಟೇ ಸಾಕು ||


ಮನ ಚಂಚಲದಿ ತಪವ ಮಾಡಲು ಅಶಕ್ಯವು
ಘನ ಅಜ್ಞಾನದಿ ಕೆಲವು ಕರ್ಮವು ಹತ್ತವು
ಧನವು ಶುದ್ಧಿ ಇಲ್ಲದೆ ದಾನವು ವೃಥಾಯವು
ಇನಿತದರಿಂದ ಪುರಂದರ ವಿಠಲ
ಈ ಯುಗದಲ್ಲಿ ಸ್ಮರಣೆ ಲೇಸೆಂದ ||

ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು
ತನು ಶುದ್ದಿಯಿಲ್ಲದವಗೆ ತೀರ್ಥದ ಫಲವೇನು
ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ
ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ
ಹೊರಗೆ ಮಿಂದು ಒಳಗೆ ಮೀಯಿದವರ ಕಂಡು
ಬೆರಗಾಗಿ ನಗುತಿದ್ದ ಪುರಂದರ ವಿಠಲ ||


ಕೋಟಿ ಕೋಟಿ ಜನ್ಮಕೆ ನಿನ್ನ ನಾಮ ಒಂದೇ ಸಾಕು
ದಾಟಿಸುವುದು ಭವಸಾಗರವ
ಬೂಟಕತನದಲಿ ಹರಿದಾಸನಾದರೆ
ತೋಟವಿಲ್ಲದೆ ಮೋಟಿ ಎತ್ತಿದಂತೆ
ನೀಟಾಗದು ಕಣೊ ಎಂದಿಗು ಯಮ ಭಟರ
ಕಾಟ ತಪ್ಪದು ಕಾಶಿಯಲ್ಲಿದ್ದರು
ಹಾಟಕಾಂಬರಧರ ವಿಜಯವಿಠ್ಠಲರೇಯ
ನಾಟಿಸೊ ನಿನ್ನ ಚರಣಾಬ್ಜದಲಿ ಮನಸು ||


ಜಗವ ಸುತ್ತಿಹುದೆಲ್ಲ ನಿನ್ನ ಮಾಯಯಯ್ಯ
ನಿನ್ನ ಸುತ್ತಿಹುದೆಲ್ಲ ಎನ್ನ ಮನವಯ್ಯ
ಜಗಕೆ ಬಲ್ಲಿದ ನೀನು, ನಿನಗೆ ಬಲ್ಲಿದ ನಾನು
ಮೂರು ಜಗವು ನಿನ್ನೊಳಗೆ, ನೀನು ಎನ್ನೊಳಗೆ,
ಕರಿಯು ಕನ್ನಡಿಯಲ್ಲಿ ಅಡಗಿಪ್ಪ ತೆರನಂತೆ
ಎನ್ನೊಳು ಅಡಗಿದೆಯೋ ಪುರಂದರವಿಠಲ ||


ತಂದೆ ನೀ ತಂದೆ ನಾ ಬಂದೆ
ನಾ ನಿನ್ನ ಹಿಂದೆ ||ಪ||

ಕಾಮದಲಿ ನೀ ತಂದೆ ಕ್ರೋಧದಲಿ ನೀ ತಂದೆ
ತಾಮಸ ದುರ್ಯೋನಿಯಲಿ ನೀ ತಂದೆ |೧|

ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ
ಎಂಭತ್ತು ನಾಲ್ಕು ಲಕ್ಷ ಯೋನಿಯಲಿ
ನೀ ತಂದೆ ನಾ ಬಂದೆ |೨|

ಹಿಂದಿನ ಜನ್ಮ ಹ್ಯಾಂಗಾದರಾಗಲಿ
ಮುಂದೆನ್ನ ಸಲಹೊ ಪುರಂದರ ವಿಠಲ |೩|


ಅಡಿಗಾಧಾರವಿಲ್ಲ ಹಿಡಿವುದಕೆ ಕೊಂಬಿಲ್ಲ
ಕಡೆ ಹಾಯಿಸುವರಿಲ್ಲ ಕಷ್ಟಪಟ್ಟೆನಲ್ಲ
ಕಣ್ಣೀರು ತಪ್ಪಲಿಲ್ಲ ಕಾಯ ಸುಖಪಡಲಿಲ್ಲ
ಉಣಭೋಗಿ ಬಾಯಿ ಮರೆತಂತಾಯಿತಲ್ಲ
ಬಡತನವು ಬಿಡಲಿಲ್ಲ ಭಂಗಪಟ್ಟೆನಲ್ಲ
ಗರುಡ ಸರ್ಪನ ಸ್ನೇಹದಂತಾಯಿತಲ್ಲ
ಎನ್ನ ಮನದುಬ್ಬಸವ ಸ್ವಾಮಿ ಶ್ರೀಹರಿಯೆ ಬಲ್ಲ
ಇನ್ನಾರಿಗುಸುರಲೋ ಶ್ರೀಹಯವದನರಾಯ ||


ಒಂದು ಕಾಲದಲ್ಲಿ ಆನೆ ಕುದುರೆ ಮೇಲ್ಮೆರೆಸುವೆ
ಒಂದು ಕಾಲದಲ್ಲಿ ಬರಿಗಾಲಲ್ಲಿ ನಡೆಸುವೆ
ಒಂದು ಕಾಲದಲ್ಲಿ ಮೃಷ್ಟಾನ್ನವುಣಿಸುವೆ
ಒಂದು ಕಾಲದಲ್ಲಿ ಉಪವಾಸವಿರಿಸುವೆ
ನಿನ್ನ ಮಹಿಮೆಯ ನೀನೆ ಬಲ್ಲೆಯೊ ದೇವ
ಪನ್ನಗಶಯನ ಶ್ರೀಪುರಂದರವಿಠಲ ||


ಕರುಣದಿ ತನುಮನ ಧನಂಗಳೆಲ್ಲವು
ನಿನ್ನ ಚರಣಕಮಲಕೊಪ್ಪಿಸಿದ ಬಳಿಕ
ಮರಳಿ ಎನ್ನ ಮರುಳು ಮಾಡುವರೆ
ಸರಕು ಒಪ್ಪಿಸಿದ ಮ್ಯಾಲೆ ಸುಂಕವುಂಟೆ ದೇವಾ \
ಕರುಣಾಕರ ನಿನ್ನ ಚರಣದಡಿಯೊಳಿಟ್ಟು ಕಾಯೋ
ರಂಗವಿಠ್ಠಲ ||


ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ
ಹಾಂಗೆ ಇರಬೇಕು ಸಂಸಾರದಲ್ಲಿ || ಅ ||

ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ
ಆ ಕ್ಷಣದಲ್ಲಿ ಹಾರಿಹೋದಂತೆ || ೧ ||

ನಾನಾ ಪರಿಯಲಿ ಸಂತೆ ನೆರದಂತೆ
ನಾನಾ ಪಂಥವ ಹಿಡಿದು ಹೋದಂತೆ || ೨ ||

ಮಕ್ಕಳಾಡಿ ಮನೆ ಕಟ್ಟಿದಂತೆ
ಆಟ ಸಾಕೆಂದು ಅಳಿಸಿ ಪೋದಂತೆ || ೩ ||

ವಸತಿಕಾರನು ವಸತಿ ಕಂಡಂತೆ
ಹೊತ್ತಾರೆದ್ದು ಹೊರಟು ಹೋದಂತೆ || ೪ ||

ಸಂಸಾರ ಪಾಶವ ನೀನೆ ಬಿಡಿಸಯ್ಯ
ಕಂಸಾರಿ ಪುರಂದರ ವಿಠ್ಠಲರಾಯ || ೫ ||


Adiyali gajamuKana arcisi AraMBisalu
Ava bage kAryatati siddhi goLisi
mOdadiM salisuva manadiShTava
sAdhu janarella kELi sakala surariMge
mAdhavanE nEmisippa I adhikArava
AdaradiM avaravaroLu niMdu kAryagaLa
BEda goLisade mALpa puraMdara viThala ||

navaratnagaLu kaMDA kaMDa ThAvinalluMTe?
navavidha BakutigaLu kaMDa kaMDalluMTe?
dEva ninna Bakuti kaMDare bAradu, kalitare bAradu
puraMdaraviThala ninna dayavAgadanaka ||

sakala sAdhanakella siddhigoLisuvudu
Bakuti sAdhanavalladanya sAdhanavuMTe
BakutigaBimAni BAratiya karuNadiM
mukutige pathaveMdu manaviTTu Bajisiro
aKiLESa puraMdaraviThala tAnoliva ||

dhwaja vajrAMkusha rEKAMkita-vAda
hariya pAdAMbujuva sEvipa
aja bhavAdigaLa bhAgya nODu
trijaga vaMdyana pADu bhakti-yanu bEDu
kujana matava suDu durjanara saMgava biDu
gajEMdrana kAyda shrI kRuShNana smaraNe mADu
puraMdara viThala rAyana biDade koMDADu ||

dhyAnavu kRutayugadi
yajana yaj~javu trEtAyugadi
dAnavAMtakana dEvatArcane dvAparayugadi
A mAnavarigeShTu Palavo aShTu Palavu
kaliyugadi gAnadali kESavayenalu
kaigoDuvanu raMgaviThThala ||

kalikAlakke sama yugavillavayya
kaluSha harisi kaivalyavIvudayya
sAle nAma kIrtane smaraNe sAkayya
smarisalu sAyujya padavIvudayya
balavaMta SrIraMgaviThalana nenedare
kaliyugavE kRutayuga Aguvudayya ||

maneyeMba Aseyu enna muMdugeDisutide
manevArateyu enna BaMga baDisutide
sutarAseyu enna dainya baDisutide
initAseyuLidu buddhi ninnalli niluvaMte
mADo siripuraMdaraviThala rAya ||

maneyiMda saMtOSha kelavarige lOkadali
dhanadiMda saMtOSha kelavarige lOkadali
vaniteyiM saMtOSha kelavarige lOkadali
tanayariM saMtOSha kelavarige lOkadali
initu saMtOSha avaravarigAgali
ninnanenevO saMtOSha enagAgali namma raMgaviThThala ||

maneya kaTTuvaruMTu maDadi makkaLu uMTu |
dhanavagaLisuvaruMTu gaLisadiddavaruMTu |
dhanava kaTTuvaruMTu dAna mADuvaruMTu |
RuNava koTTavaruMTu RuNa mADidavaruMTu |
manegAra taNavidaroL eMdigu bEDa
munigaLu sahitAgi mOsahOdaru idake
guNapUrvacelva gOpAlaviThThala ninna
guNaciMtaneyoLiDu iShTE sAku ||

mana caMcaladi tapava mADalu aSakyavu
Gana aj~jAnadi kelavu karmavu hattavu
dhanavu Suddhi illade dAnavu vRuthAyavu
initadariMda puraMdara viThala
I yugadalli smaraNe lEseMda ||

mana Suddhiyilladavage maMtrada PalavEnu
tanu Suddiyilladavage tIrthada PalavEnu
miMdalli PalavEnu mInu mosaLeyaMte
niMdalli PalavEnu SrISailada kAgeyaMte
horage miMdu oLage mIyidavara kaMDu
beragAgi nagutidda puraMdara viThala ||

kOTi kOTi janmake ninna nAma oMdE sAku
dATisuvudu BavasAgarava
bUTakatanadali haridAsanAdare
tOTavillade mOTi ettidaMte
nITAgadu kaNo eMdigu yama BaTara
kATa tappadu kASiyalliddaru
hATakAMbaradhara vijayaviThThalarEya
nATiso ninna caraNAbjadali manasu ||

jagava suttihudella ninna mAyayayya
ninna suttihudella enna manavayya
jagake ballida nInu, ninage ballida nAnu
mUru jagavu ninnoLage, nInu ennoLage,
kariyu kannaDiyalli aDagippa teranaMte
ennoLu aDagideyO puraMdaraviThala ||

taMde nI taMde nA baMde
nA ninna hiMde ||pa||

kAmadali nee taMde krOdhadali nee taMde
tAmasa duryOniyali nee taMde |1|

oMdalla eraDalla mUralla nAlkalla
eMBattu nAlku lakSha yOniyali
nI taMde nA baMde |2|

hiMdina janma hyAMgAdarAgali
muMdenna salaho puraMdara viThala |3|

aDigAdhAravilla hiDivudake koMbilla
kaDe hAyisuvarilla kaShTapaTTenalla
kaNNIru tappalilla kAya suKapaDalilla
uNabhOgi bAyi maretaMtAyitalla
baDatanavu biDalilla BaMgapaTTenalla
garuDa sarpana snEhadaMtAyitalla
enna manadubbasava svAmi SrIhariye balla
innArigusuralO SrIhayavadanarAya ||

oMdu kAladalli Ane kudure mElmeresuve
oMdu kAladalli barigAlalli naDesuve
oMdu kAladalli mRuShTAnnavuNisuve
oMdu kAladalli upavAsavirisuve
ninna mahimeya nIne balleyo dEva
pannagaSayana SrIpuraMdaraviThala ||

karuNadi tanumana dhanaMgaLellavu
ninna caraNakamalakoppisida baLika
maraLi enna maruLu mADuvare
saraku oppisida myAle suMkavuMTe dEvA \
karuNAkara ninna caraNadaDiyoLiTTu kAyO
raMgaviThThala ||

hyAMge bareditto prAcInadalli
hAMge irabEku saMsAradalli || a ||

pakShi aMgaLadalli baMdu kUtaMte
A kShaNadalli hArihOdaMte || 1 ||

nAnA pariyali saMte neradaMte
nAnA paMthava hiDidu hOdaMte || 2 ||

makkaLADi mane kaTTidaMte
ATa sAkeMdu aLisi pOdaMte || 3 ||

vasatikAranu vasati kaMDaMte
hottAreddu horaTu hOdaMte || 4 ||

saMsAra pASava nIne biDisayya
kaMsAri puraMdara viThThalarAya || 5 ||

Leave a Reply

You might also like

error: Content is protected !!