ಶ್ರೀ ವಿಜಯದಾಸಾರ್ಯ ವಿರಚಿತ
ಸರ್ವಸಮರ್ಪಣಾ ಸುಳಾದಿ
(ಸರ್ವ ಸಮರ್ಪಣೆ ಮಾಡುವ ವಿಧಾನ)
ರಾಗ: ಅಠಾಣ
ಧ್ರುವತಾಳ
ಸರ್ವಸಮರ್ಪಣೆ ಮಾಡು ಮುಕ್ತಿಯಾ ಬೇಡು
ಶರ್ವಾದಿಷ್ಠಾನಾ ತ್ರಿವಿಧಾ ತಿಳಿದು
ಸರ್ವಜ್ಞ ಹರಿ ಎಂದು ತ್ರಿಕರ್ಣಾವಾಗಿ ನುಡಿದು
ಗೀರ್ವಾಣರೊಡತಿ ಶ್ರೀಲಕುಮಿ ವಿಡಿದೂ
ಈರ್ವಗೆ ಜನರನ್ನು ತಾರತಮ್ಯಾದಿ ಗುಣಿಸಿ
ಊರ್ವಿಯೊಳಗೆ ನಿಃಸಂಗನಾಗೋ
ಸರ್ವದಾ ಮುಖ್ಯ ಭಕ್ತಿಯಲ್ಲಿ ದೃಢನಾಗು
ಸರ್ವಜ್ಞರಾಯರ ಮತದಲ್ಲಿದ್ದೂ
ದರ್ವಿಯಂದದಿ ಸರ್ವ ವಿಷಯಂಗಳೊಳಗಿರು
ನಿರ್ವಾಹ ಕರ್ತನಿಗೆ ಮನವೊಪ್ಪಿಸೀ
ಗರ್ವಾರಹಿತವಾದ ಸಾಧನದಲ್ಲಿ ನಡೆದು
ಪೂರ್ವೋತ್ತರ ಜ್ಞಾನ ವಿಚಾರಿಸಿ
ಓರ್ವನಿಂದಲೆ ಎಲ್ಲಾ ಸುಖದುಃಖ ಬಪ್ಪೊದೆಂದು
ನಿರ್ವ್ಯಾಜ ಗುಣದಲಿ ತಿರಗುವದೂ
ನಿರ್ವಾಣ ಬೇಡ ಸಲ್ಲ ಈ ಪರಿ ಇಪ್ಪವಂಗೆ
ದೂರ್ವಿ ಏರಿಸೇ ಹರಿ ಒಡನಾಡುವಾ
ಪರ್ವತ ಮೊದಲಾದ ತತ್ಪದಾರ್ಥದಲ್ಲೀ
ಸರ್ವೇಶ ಅದರಂತೆ ಇಪ್ಪಾನೆಂದೂ
ಸರ್ವೋತ್ಕೃಷ್ಟ ಮೂರುತಿ ವಿಜಯವಿಟ್ಠಲರೇಯಾ
ದುರ್ವಾದಿಗಳ ಗಂಡಾ ಸತತೋದ್ದಂಡಾ || ೧ ||
ಮಟ್ಟತಾಳ
ನಾನೆ ಸರ್ವಕರ್ತಾನೆಂದೆಂಬವ ತಮಸಿ
ನಾನೆ ಹರಿ ಒಡನೇ ಮಾಳ್ಪೆನೆಂಬುವ ಬದ್ದಾ
ನಾನು ಪಾಪ ಕರ್ತಾ ಪುಣ್ಯಕ್ಕೆ ಹರಿಯೆಂದು
ಈ ನುಡಿ ನುಡಿವವನು ಸತ್ವಗುಣದವನು
ನಾನ್ಯಾತಕೆ ಸಲ್ಲಾ ಹರಿ ಎನ್ನಿಂದಲೀ
ನಾನಾತ್ಮಗಳಿಂದ ಬಗೆ ಬಗೆ ವೈಷಿಕ್ಯಾ
ಏನೇನು ಮಾಡಿಸುವಾ ಮಾಡುವನದರಂತೆ
ಹೀನ ಲೇಸುಗಳಲ್ಲಿ ಹಿತಾಹಿತದಲ್ಲಿ
ಮಾಣದೆ ಮರಿಯದಲೆ ಎಂದವ ನಿರ್ಗುಣನು
ಜ್ಞಾನವಂತನಾಗಿ ಸರ್ವ ಸಮರ್ಪಣೆ
ಸ್ವಾನುಭಾವಕೆ ನಿತ್ಯಾ ತಂದುಕೊಂಬುವ ಮನಕೆ
ಅನಂತ ರವಿತೇಜಾ ವಿಜಯವಿಟ್ಠಲನ್ನಾ
ಕಾಣುತ ತಿರುಗೂವಾ ನಿರ್ದೋಷ ಎನುತಾ || ೨ ||
ತ್ರಿವಿಡಿತಾಳ
ಹಿಟ್ಟು ಘಾಳಿಗೆ ತೂರಿ ಮರಳೆ ಕೂಡಿಸಿಕೊಂಡು
ರೊಟ್ಟಿಯ ಸುಟ್ಟುಕೊಂಡು ಉಂಬೇನೆಂದು
ಅಟ್ಟಹಾಸವ ಮಾಡಿ ದಿನ ಪ್ರತಿದಿನದಲ್ಲಿ
ಕಷ್ಟವ ಬಟ್ಟದರಿಂದ ಫಲವಾಹದೇ
ಸೃಷ್ಟಿಯೊಳಗೆ ಮನುಜಾ ಸರ್ವ ಬಗೆಯಿಂದ
ಶಿಷ್ಟನಾಗಿ ಇದ್ದು ಆಚಾರವಾ
ಎಷ್ಟು ಮಾಡಿದರೇನು ನಿರ್ಗುಣನಾಗಿ ಮನ –
ಮುಟ್ಟಿ ಸರ್ವಾರ್ಪಿತವೆನ್ನದನಕಾ
ಕೃಷ್ಣಾ ಮೆಚ್ಚನು ಕಾಣೊ ಗತಿಗೆ ಸಾಧನವಲ್ಲಾ
ಇಷ್ಟರೊಳಗೆ ಅವಾ ಸುತ್ತುತಿಪ್ಪಾ
ಕಟ್ಟಕಡಿಗೆ ಇದೆ ಮುಕ್ತಿಯೋಗ್ಯಕೆ ಜ್ಞಾನಾ
ಪುಟ್ಟಾದಲೇ ಬಿಂಬಾದರ್ಶನವಾಗದೂ
ಎಟ್ಟಿ ಮಾನವರಿಗೆ ವರದೊರದು ಕೇವಲಾ
ಗುಟ್ಟು ಪೇಳಿದರಿಂದ ಏನಾಹದೂ
ಧಿಟ್ಟಾ ದೈವಗಳರಸಾ ವಿಜಯವಿಟ್ಠಲ ಜಗ –
ಜಟ್ಟಿಗೆ ಪಾಪ ಪುಣ್ಯದ ಲೇಪನವೇನೊ || ೩ ||
ಅಟ್ಟತಾಳ
ಮೂಜ್ಜಗದೊಳಗೆ ಹರಿ ನಿಬಿಡೀ ಕೃತನಾಗಿ
ತಜ್ಜೀವಿಗಳಂತೆ ವ್ಯಾಪಾರ ಮಾಡುವಾ
ನಿರ್ಜರರ್ವಿಡಿದು ತೃಣಾಂತ ನೋಡಲಾಗಿ
ಪೂಜ್ಯ ಭಾವವೆ ಪ್ರತ್ಯೇಕವಾಗಿಪ್ಪೋದು
ದುರ್ಜನಹರ ಹರಿಯಾ ಇನಿತು ಭಜನೆ ಕೆಲವು
ಸಜ್ಜನರಿಂದಲಿ ಕೈಕೊಳುತಾಲಿಪ್ಪಾ
ವಜ್ರಕ್ಕೆ ಹರಳಿನಾ ವ್ಯಥಿ ಆದುದೆಂದು ಮ –
ನುಜ್ಜರು ಪೇಳಿದಂತಾಗೋದು ಪುಸಿ ಎಲ್ಲ
ಎಜ್ಜಾ ಮಾಡಿದರಾಗೆ ಹರಳಿಗೆ ವೇದನೆಯುಂಟೆ
ಅಬ್ಜಾ ಪೋಣಿಪದಕ್ಕೆ ಗಾಢರ ತರಸಲ್ಲಾ
ಅಬ್ಜಾ ಭವನಯ್ಯಾ ವಿಜಯವಿಟ್ಠಲರೇಯಾ
ಲಜ್ಜೆ ಬಿಡದವಗೆ ಲಂಪಟಾ ಕಟ್ಟುವಾ || ೪ ||
ಆದಿತಾಳ
ಬಂದರೆ ಬರುವೆನೆಂದು ಇದೇ ಆರಂಭಿಸಿ
ಒಂದೊಂದು ಮಾತುಗಳು ಯಾವಜ್ಜೀವ ಪರಿಯಂತ
ತಂದುಕೊಳ್ಳಲಿಬೇಕು ತನ್ನ ಮನಸಿಗೆ ಬಿಡದಾನು –
ಸಂಧಾನ ಆವಲ್ಲಿ ಪೋದಲ್ಲಿ ಇದ್ದಲ್ಲಿ
ನಂದವಾಗಲಿ ಅತಿ ಕ್ಲೇಶವಾಗಲಿ ಆ –
ನಂದವಾಗಲಿ ಲಾಭ ನಷ್ಟವಾಗಲಿ ಗೋ –
ವಿಂದನೆ ನಿನ್ನ ಪ್ರೀತಿ ಎನಬೇಕು ನಗಬೇಕು
ಹಿಂದೆ ಮುಂದೆ ಸಂಸಾರವೆಂದೆಂಬ
ಸಂದಣಿಯೊಳಗಿರೆ ನಿರ್ಭಯಾದವನಿವಾ
ಸಂದೇಹ ಪೋಗಾಡುವ ವಿಜಯವಿಟ್ಠಲರೇಯಾ
ಎಂದೆಂದಿಗೆ ತನ್ನ ಭಕ್ತಾರ ಪೊರೆವಾ || ೫ ||
ಜತೆ
ಸಾಧಾರಣಾಸಾಧಾರಣ ಹರಿಗೆ ಒಪ್ಪಿಸಿ ಕೊಟ್ಟು
ಮೋದಾದಲ್ಲಿರು ವಿಜಯವಿಟ್ಠಲನ್ನ ನೆರೆನಂಬೀ ||
SrI vijayadAsArya viracita
sarvasamarpaNA suLAdi
(sarva samarpaNe mADuva vidhAna)
rAga: aThANa
dhruvatALa
sarvasamarpaNe mADu muktiyA bEDu
SarvAdiShThAnA trividhA tiLidu
sarvaj~ja hari eMdu trikarNAvAgi nuDidu
gIrvANaroDati SrIlakumi viDidU
Irvage janarannu tAratamyAdi guNisi
UrviyoLage niHsaMganAgO
sarvadA muKya Baktiyalli dRuDhanAgu
sarvaj~jarAyara matadalliddU
darviyaMdadi sarva viShayaMgaLoLagiru
nirvAha kartanige manavoppisI
garvArahitavAda sAdhanadalli naDedu
pUrvOttara j~jAna vicArisi
OrvaniMdale ellA suKaduHKa bappodeMdu
nirvyAja guNadali tiraguvadU
nirvANa bEDa salla I pari ippavaMge
dUrvi ErisE hari oDanADuvA
parvata modalAda tatpadArthadallI
sarvESa adaraMte ippAneMdU
sarvOtkRuShTa mUruti vijayaviTThalarEyA
durvAdigaLa gaMDA satatOddaMDA || 1 ||
maTTatALa
nAne sarvakartAneMdeMbava tamasi
nAne hari oDanE mALpeneMbuva baddA
nAnu pApa kartA puNyakke hariyeMdu
I nuDi nuDivavanu satvaguNadavanu
nAnyAtake sallA hari enniMdalI
nAnAtmagaLiMda bage bage vaiShikyA
EnEnu mADisuvA mADuvanadaraMte
hIna lEsugaLalli hitAhitadalli
mANade mariyadale eMdava nirguNanu
j~jAnavaMtanAgi sarva samarpaNe
svAnuBAvake nityA taMdukoMbuva manake
anaMta ravitEjA vijayaviTThalannA
kANuta tirugUvA nirdOSha enutA || 2 ||
triviDitALa
hiTTu GALige tUri maraLe kUDisikoMDu
roTTiya suTTukoMDu uMbEneMdu
aTTahAsava mADi dina pratidinadalli
kaShTava baTTadariMda PalavAhadE
sRuShTiyoLage manujA sarva bageyiMda
SiShTanAgi iddu AcAravA
eShTu mADidarEnu nirguNanAgi mana –
muTTi sarvArpitavennadanakA
kRuShNA meccanu kANo gatige sAdhanavallA
iShTaroLage avA suttutippA
kaTTakaDige ide muktiyOgyake j~jAnA
puTTAdalE biMbAdarSanavAgadU
eTTi mAnavarige varadoradu kEvalA
guTTu pELidariMda EnAhadU
dhiTTA daivagaLarasA vijayaviTThala jaga –
jaTTige pApa puNyada lEpanavEno || 3 ||
aTTatALa
mUjjagadoLage hari nibiDI kRutanAgi
tajjIvigaLaMte vyApAra mADuvA
nirjararviDidu tRuNAMta nODalAgi
pUjya BAvave pratyEkavAgippOdu
durjanahara hariyA initu Bajane kelavu
sajjanariMdali kaikoLutAlippA
vajrakke haraLinA vyathi AdudeMdu ma –
nujjaru pELidaMtAgOdu pusi ella
ejjA mADidarAge haraLige vEdaneyuMTe
abjA pONipadakke gADhara tarasallA
abjA BavanayyA vijayaviTThalarEyA
lajje biDadavage laMpaTA kaTTuvA || 4 ||
AditALa
baMdare baruveneMdu idE AraMBisi
oMdoMdu mAtugaLu yAvajjIva pariyaMta
taMdukoLLalibEku tanna manasige biDadAnu –
saMdhAna Avalli pOdalli iddalli
naMdavAgali ati klESavAgali A –
naMdavAgali lABa naShTavAgali gO –
viMdane ninna prIti enabEku nagabEku
hiMde muMde saMsAraveMdeMba
saMdaNiyoLagire nirBayAdavanivA
saMdEha pOgADuva vijayaviTThalarEyA
eMdeMdige tanna BaktAra porevA || 5 ||
jate
sAdhAraNAsAdhAraNa harige oppisi koTTu
mOdAdalliru vijayaviTThalanna nerenaMbI ||

Leave a Reply
You must be logged in to post a comment.