Tatva suvvali – Rukmini vilasa

Smt.Nandini Sripad

ಶ್ರೀ ರುಕ್ಮಿಣೀ ವಿಲಾಸ

ಫಣಿರಾಜಶಯನ ರುಕ್ಮಿಣಿದೇವಿಯೊಡಗೂಡಿ
ಮಣಿಮಂಚದ ಮೇಲೆ ಕುಳಿತಿರ್ದು | ಕುಳಿತಿರ್ದು ಸತಿಯೊಡನೆ
ಅಣಕವಾಡಿದನು ಇನಿತಿಂದು || ೧ || || ೧೧೮ ||

ಹೇ ರಾಜಕನ್ನಿಕೆ ! ಭೂರಮಣ ನಾನಲ್ಲ
ವಾರಿಧಿಯೊಳಗಿದ್ದು ಬದುಕುವ | ಬದುಕುವಗೆ ಮರುಳಾದೆ
ನಾರದನ ನುಡಿಗೆ ನಳಿನಾಕ್ಷಿ || ೨ || || ೧೧೯ ||

ಶಿಶುಪಾಲ ಮೊದಲಾದ ವಸುಧೆಪಾಲರ ಬಿಟ್ಟು
ಪಶುಪಾಲಗೊಲಿದೆ ಸುಕುಮಾರಿ | ಸುಕುಮಾರಿ ಎನಲು ಪರ –
ವಶಳಾದಳಾಗ ಮಹಾಲಕ್ಷ್ಮಿ || ೩ || || ೧೨೦ ||

ಈ ಮಾತ ಕೇಳಿ ಕೈ ಚಾಮರವನೀಡಾಡಿ
ಭೂಮಿಗೊರಗಿದಳು ಭುಗಿಲೆಂದು | ಭುಗಿಲೆಂದು ಮಲಗಿದಾ
ಕಾಮಿನಿಯ ಕಂಡ ಕಮಲಾಕ್ಷ || ೪ || || ೧೨೧ ||

ಕಂಗೆಟ್ಟಳೆಂದು ತನ್ನಂಗನೆಯ ಬಿಗಿದಪ್ಪಿ
ಮುಂಗುರುಳ ತಿದ್ದಿ ಮುದ್ದಿಸಿ | ಮುದ್ದಿಸಿ ಮಾತಾಡ್ದ
ಕಂಗಳಶ್ರುಗಳ ಒರಸುತ್ತ || ೫ || || ೧೨೨ ||

ಸಲಿಗೆ ಮಾತುಗಳ ಬಗೆ ತಿಳಿಯದಲೆ ಹೀಗೆ ಚಂ –
ಚಲವನೈದುವರೇ ಚಪಲಾಕ್ಷಿ | ಚಪಲಾಕ್ಷಿ ಏಳೆಂದು
ಲಲನೆಯಳ ನಗಿಸಿ ನಗುತಿರ್ದ || ೬ || || ೧೨೩ ||

ಶ್ರೀದೇವಿ ನಿನ್ನೊಳು ವಿನೋದವನೆ ಮಾಡಲು ವಿ –
ಷಾದ ಪಡಲ್ಯಾಕೆ ಅನುದಿನ | ಅನುದಿನದಿ ಸ್ಮರಿಸುವರ
ಕಾದುಕೊಂಡಿಹೆನೆ ಬಳಿಯಲ್ಲಿ || ೭ || || ೧೨೪ ||

ಹಿಗ್ಗಿದಳು ಮನದಿ ಸೌಭಾಗ್ಯಭಾಮಿನಿಯು ಅಪ –
ವರ್ಗದ ನುಡಿಗೆ ಹರುಷದಿ | ಹರುಷದಿಂದಲಿ ಪಾದ –
ಯುಗ್ಮಕೆರಗಿದಳು ಇನಿತೆಂದು || ೮ || || ೧೨೫ ||

ಜಗದೇಕಮಾತೆ ಕೈ ಮುಗಿದು ಲಜ್ಜೆಯಲಾಗ
ಮುಗುಳುನಗೆ ಸೂಸಿ ಮಾತಾಡಿ | ಮಾತಾಡಿದಳು ಪತಿಯ
ಮೊಗವ ನೋಡುತಲಿ ನಳಿನಾಕ್ಷಿ || ೯ || || ೧೨೬ ||

ಪರಿಪುರ್ಣಕಾಮ ನೀ ಕರುಣದಿಂದೀಗ ಸ್ವೀ –
ಕರಿಸಿದೆಯೋ ಎನ್ನ ಸತಿಯೆಂದು | ಸತಿಯೆಂದಕಾರಣಾ –
ಕ್ಷರಳೆನಿಸಿಕೊಂಡೆ ಶ್ರುತಿಯಿಂದ || ೧೦ || || ೧೨೭ ||

ಭುವನಾಧಿಪತಿ ನೀನು ಅವಿಯೋಗಿ ನಿನಗಾನು
ಅವಿವೇಕಿ ನೃಪರ ಪತಿಯೆಂದು | ಪತಿಯೆಂದು ಬಗೆವೆನೇ
ಸವಿಮಾತಿದಲ್ಲ ಸರ್ವಜ್ಞ || ೧೧ || || ೧೨೮ ||

ಭಗವಂತ ನೀನು ದುರ್ಭಗ ದೇಹಗತರವರು
ತ್ರಿಗುಣವರ್ಜಿತವು ತವ ರೂಪ | ತವ ರೂಪ ಗುಣಗಳನು
ಪೊಗಳಲೆನ್ನಳವೆ ಪರಮಾತ್ಮ || ೧೨ || || ೧೨೯ ||

ಭಾನು ತನ್ನಯ ಕಿರಣಪಾಣಿಗಳ ದೆಶೆಯಿಂದ
ಪಾನೀಯಜಗಳ ಅರಳಿಸಿ | ಅರಳಿಸಿ ಗಂಧವನಾ –
ಘ್ರಾಣಿಸಿದಂತೆ ಗ್ರಹಿಸಿದಿ || ೧೩ || || ೧೩೦ ||

ಬೈದವನ ಕುತ್ತಿಗೆಯ ಕೊಯ್ದು ಅಂಧತಮಸಿ –
ಗೊಯ್ದು ಹಾಕಿದೆಯೊ ಪರಿಪಂಥಿ | ಪರಿಪಂಥಿ ನೃಪರನ್ನು
ಐದುವೆನೆ ನಿನ್ನ ಹೊರತಾಗಿ || ೧೪ || || ೧೩೧ ||

ನಿಮ್ಮನುಗ್ರಹದಿಂದ ಬ್ರಹ್ಮರುದ್ರಾದಿಗಳ
ನಿರ್ಮಿಸಿ ಸಲಹಿ ಸಂಹಾರ | ಸಂಹಾರ ಮಾಡುವೆನು
ದುರ್ಮದಾಂಧರನು ಬಗೆವೇನೆ || ೧೫ || || ೧೩೨ ||

ಮಂಜುಳೋಕ್ತಿಯ ಕೇಳಿ ಅಂಜಲೇಕೆಂದು ನವ –
ಕಂಜಲೋಚನೆಯ ಬಿಗಿದಪ್ಪಿ | ಬಿಗಿದಪ್ಪಿ ಪೇಳಿದ ಧ –
ನಂಜಯಪ್ರಿಯ ಸಥೆಯಿಂದ || ೧೬ || || ೧೩೩ ||

ನಿನಗೆ ಎನ್ನಲ್ಲಿ ಭಕ್ತಿ ಎನಿತಿಹುದು ನಾ ಕಂಡೆ
ಎನಗಿಹುದು ಕರುಣ ಎಂದೆಂದು | ಎಂದೆಂದು ಇಹುದಿದಕೆ
ಅನುಮಾನವಿಲ್ಲ ವನಜಾಕ್ಷಿ || ೧೭ || || ೧೩೪ ||

ದೋಷವರ್ಜಿತ ರುಕ್ಮಿಣೀಶನ ವಿಲಾಸ ಸಂ –
ತೋಷದಲಿ ಕೇಳಿ ಪಠಿಸಿದ | ಪಠಿಸಿದಂಥವರ ಅಭಿ –
ಲಾಷೆ ಪುರೈಸಿ ಸಲಹುವ || ೧೮ || || ೧೩೫ ||

ನೀತಜನಕನು ಜಗನ್ನಾಥವಿಟ್ಠಲ ಜಗ –
ನ್ಮಾತೆಯೆನಿಸುವಳು ಮಹಲಕ್ಷ್ಮೀ | ಮಹಲಕ್ಷ್ಮಿಸುತ
ಬ್ರಹ್ಮ ಭ್ರಾತನೆನಿಸುವನು ಗುರುರಾಯ || ೧೯ || ೧೩೬ ||


SrI rukmiNI vilAsa

PaNirAjaSayana rukmiNidEviyoDagUDi
maNimaMcada mEle kuLitirdu | kuLitirdu satiyoDane
aNakavADidanu initiMdu || 1 || || 118 ||

hE rAjakannike ! BUramaNa nAnalla
vAridhiyoLagiddu badukuva | badukuvage maruLAde
nAradana nuDige naLinAkShi || 2 || || 119 ||

SiSupAla modalAda vasudhepAlara biTTu
paSupAlagolide sukumAri | sukumAri enalu para –
vaSaLAdaLAga mahAlakShmi || 3 || || 120 ||

I mAta kELi kai cAmaravanIDADi
BUmigoragidaLu BugileMdu | BugileMdu malagidA
kAminiya kaMDa kamalAkSha || 4 || || 121 ||

kaMgeTTaLeMdu tannaMganeya bigidappi
muMguruLa tiddi muddisi | muddisi mAtADda
kaMgaLaSrugaLa orasutta || 5 || || 122 ||

salige mAtugaLa bage tiLiyadale hIge caM –
calavanaiduvarE capalAkShi | capalAkShi ELeMdu
lalaneyaLa nagisi nagutirda || 6 || || 123 ||

SrIdEvi ninnoLu vinOdavane mADalu vi –
ShAda paDalyAke anudina | anudinadi smarisuvara
kAdukoMDihene baLiyalli || 7 || || 124 ||

higgidaLu manadi sauBAgyaBAminiyu apa –
vargada nuDige haruShadi | haruShadiMdali pAda –
yugmakeragidaLu initeMdu || 8 || || 125 ||

jagadEkamAte kai mugidu lajjeyalAga
muguLunage sUsi mAtADi | mAtADidaLu patiya
mogava nODutali naLinAkShi || 9 || || 126 ||

paripurNakAma nI karuNadiMdIga svI –
karisideyO enna satiyeMdu | satiyeMdakAraNA –
kSharaLenisikoMDe SrutiyiMda || 10 || || 127 ||

BuvanAdhipati nInu aviyOgi ninagAnu
avivEki nRupara patiyeMdu | patiyeMdu bagevenE
savimAtidalla sarvaj~ja || 11 || || 128 ||

BagavaMta nInu durBaga dEhagataravaru
triguNavarjitavu tava rUpa | tava rUpa guNagaLanu
pogaLalennaLave paramAtma || 12 || || 129 ||

BAnu tannaya kiraNapANigaLa deSeyiMda
pAnIyajagaLa araLisi | araLisi gaMdhavanA –
GrANisidaMte grahisidi || 13 || || 130 ||

baidavana kuttigeya koydu aMdhatamasi –
goydu hAkideyo paripaMthi | paripaMthi nRuparannu
aiduvene ninna horatAgi || 14 || || 131 ||

nimmanugrahadiMda brahmarudrAdigaLa
nirmisi salahi saMhAra | saMhAra mADuvenu
durmadAMdharanu bagevEne || 15 || || 132 ||

maMjuLOktiya kELi aMjalEkeMdu nava –
kaMjalOcaneya bigidappi | bigidappi pELida dha –
naMjayapriya satheyiMda || 16 || || 133 ||

ninage ennalli Bakti enitihudu nA kaMDe
enagihudu karuNa eMdeMdu | eMdeMdu ihudidake
anumAnavilla vanajAkShi || 17 || || 134 ||

dOShavarjita rukmiNISana vilAsa saM –
tOShadali kELi paThisida | paThisidaMthavara aBi –
lAShe puraisi salahuva || 18 || || 135 ||

nItajanakanu jagannAthaviTThala jaga –
nmAteyenisuvaLu mahalakShmI | mahalakShmisuta
brahma BrAtanenisuvanu gururAya || 19 || 136 ||

Leave a Reply

You might also like

error: Content is protected !!