Shri Krishna Bala leele – Dirgha kriti

Composer : Shri Vadirjaru

[Page is still under construction]

ಶ್ರೀ ಕೃಷ್ಣಬಾಲಲೀಲೆ
ಪೂರ್ವಾರ್ಧ

ಕಮಲನಾಭನ ಪಾದಕಮಲಗಳಿಗೆ ನಮೋ ಎಂಬೆ
ಅಮಲಮತಿಯ ಕೊಡುವುದೆಂದು ಕಮಲೆಗೆರಗುವೆ |೧|

ವಾಯು ಹನುಮ ಭೀಮ ಶ್ರೀಮದಾನಂದತೀರ್ಥರ
ಪಾದಪದ್ಮಗಳಿಗೆರಗುವೆ ಪರಮ ಹರುಷದಿಂದಲೀ |೨|

ಸಕಲ ವಿದ್ವತ್ ಪ್ರೌಢರಾದ ಸುಖತೀರ್ಥರ ಮತವ
ಪ್ರಕಟಿಸಿದ ವ್ಯಾಸಮುನಿಯ ಚರಣಕೆರಗುವೆ |೩|

ನ್ಯಾಯ ಸುಧೆಯ ವ್ಯಾಖ್ಯಾನ ಮಾಡಿ ಮಾಯವಾದಿಗಳ ಗೆಲಿದ
ರಾಯ ರಾಮಚಂದ್ರರ ಚರಣಕೆರಗುವೆ |೪|

ಪ್ರಾಣನಾಥ ವಿರಿಂಚರಿಗೆ ರಾಣಿವಾಸವಾಗಿರಲು ವೇದ
ವರ್ತಮಾನಿಗಳಿಗೆ ವಂದಿಪೆ ನಾನು |೫|

ಮುಕ್ಕಣ್ಣ ಹರನು ಜಗಕ್ಕೆ ಗುರು ಎಂದೆನಿಸಿ
ಶಕ್ರ ಸುರಾಭೀಷ್ಟರಿಗೆ ಶರಣೆಂದೆನೂ |೬|

ಮಧ್ವಮತಾಬ್ಧಿ ಪೂರ್ಣಚಂದ್ರನಾದ ಜಯಮುನಿಯ
ಪಾದಗಳಿಗೆರಗುವೇ ಪರಮ ಹರುಷದಿ |೭|

ಹಿರಿಯರಿಗೆ ಗುರುಗಳಿಗೆ ಮುನಿಗಳಿಗೆ ಋಷಿಗಳಿಗೆ
ಎರಗಿ ಪೇಳ್ವೆ ರಾಮಕೃಷ್ಣರ ಬಾಲಲೀಲೆಯ|೮ |

ಚಿತ್ತದೊಲ್ಲಭನ ಪಾದಚಿತ್ತದಲ್ಲಿ ಇಟ್ಟು ನಾನು
ಭಕ್ತಿಯಿಂದ ಪೇಳ್ವೆ ರಾಮಕೃಷ್ಣ ಚರಿತೆಯ |೯ |

ಘಟ್ಟ ಬೆಟ್ಟ ಸಾಗರ ಸುತ್ತಲಿದ್ದ ಅಸುರರ
ಹೊತ್ತಿರಲಾರೆನೆಂದು ಪೃಥ್ವಿ ಅತ್ತಳು |೧೦|

ರಾಜ ದೈತ್ಯರನ್ನು ತಾಳಲಾರದೆ ಭೂಮಿದೇವಿ
ಪೋಗಿ ಮೊರೆಯಿಟ್ಟಳು ದೇವತೆಗಳಿಗೆ | ೧೧|

ದೇವತೆಗಳೆಲ್ಲರು ಭೂಮಿದೇವಿಯೊಡಗೊಂಡು –
ಕ್ಷೀರಸಾಗರ ಶಯನನೆದುರು ಬಂದರಾಗಲೆ | ೧೨|

ಗೋವುರೂಪ ಧರಿಸಿ ಭೂಮಿದೇವಿ ಅಜನ ಬಳಿಗೆ ಬರಲು
ದೇವಾದಿದೇವನ ಸ್ತುತಿಸುತ್ತಿದ್ದರು | ೧೩|

ಅಂಬುಧಿಶಯನನಾಗಿ ಅಂಬುಜಾಕ್ಷ ಮಲಗಿರಲು
ಬಂದು ದೇವತೆಗಳೆಲ್ಲ ಸ್ತುತಿಯ ಮಾಡಲು | ೧೪|

ವಾರಿಧಿಶಯನನಾಗಿ ಅಂಬುಜಾಕ್ಷ ಮಲಗಿರಲು
ಬಂದು ದೇವತೆಗಳೆಲ್ಲ ಸ್ತುತಿಯ ಮಾಡಲು |೧೫|

ದೇವತೆಗಳ ಮಾತ ದೇವ ಚಿತ್ತದಲ್ಲಿಟ್ಟು ಬಂದು
ದೇವಕಿಯಲ್ಲವತರಿಸುವೆನೆಂದನು |೧೬|

ವಸುದೇವನಲ್ಲಿ ಹುಟ್ಟಿ ಅಸುರರ ಕೊಲ್ಲುವೆನೆಂದು
ವಸುಧೆಭಾರ ಇಳುಹುವೆನೆಂದ ವಾಸುದೇವನು | ೧೭|

ಹಾಸಿಗೆಯಾಗಿರುವ ಶೇಷದೇವರನ್ನೆ ಕರೆದು
ಜೈಷ್ಠನಾಗಿ ಮುಂಚ್ಯವತರಿಸು ಎಂದನು |೧೮|

ಅದಿತಿ ಕಾಶ್ಯಪರು ಮರುತ ಗಂಧರ್ವರೂ
ಸನಕಾದಿ ಯೋಗಿಗಳು ಜನಿಸಿರೆಂದನೂ | ೧೯|

ಮುನಿಗಳೆಲ್ಲ ತರು ಪಕ್ಷಿ ಮೃಗಗಳಾಗಿ ಜನಿಸಿದರು
ಅನಿಮಿಷರೆಲ್ಲ ಗೋಪಾಲರಾದರು |೨೦|

ಸನಕಾದಿ ಯೋಗಿಗಳು ಪಶುಗಳಾಗಿ ಜನಿಸಿದರು
ತುರುವ ಕಾಯ್ವ ಗೊಲ್ಲನಾದ ಪರಮಾತ್ಮನು |೨೧|

ದೇವರ ಬಾಲಲೀಲೆ ನೋಡಬೇಕೆಂದೆನುತ
ದ್ರೋಣನೆಂಬ ವಸು ನಂದಗೊಪನಾದನು |೨೨|

ಕೃಷ್ಣನ ಬಾಲಲೀಲೆ ನೋಡಬೇಕೆಂದೆನುತ
ಆಗ ಧರಾದೇವಿ ಯಶೋದೆಯಾದಳು |೨೩|

ಶೂರನಲ್ಲಿ ಕಾಶ್ಯಪ ವಸುದೇವನಾಗಿ ಜನಿಸಿದನು
ದೇವಕನಲ್ಲಿ ಅದಿತಿದೇವಿ ದೇವಕಿಯಾದಳು |೨೪ |

ದೇವಕಿ ವಸುದೇವರಿಗೆ ವಿವಾಹದುತ್ಸವವ ಮಾಡೆ
ದೇವದುಂದುಭಿಗಳಾವಾಗಲೆಸೆದುವು | ೨೫ |

ನಾಕು ಬೀದಿಯಲ್ಲಿ ಕಂಸ ಅನೇಕ ಸಂಭ್ರಮವ ಮೆರಸಿ
ಆಕಾಶವಾಣಿ ಅವನ ಕುರಿತು ನುಡಿಯಿತು |೨೬|

ತಂಗಿಯಾ ಮದುವೆ ಎಂದು ಸಂಭ್ರಮಗೊಳಲು ಬೇಡ
ಕೊಲ್ಲುವನು ಆಕೆಯ ಕಂದ ನಿನ್ನನೂ |೨೭|

ಅಷ್ಟಮಿಯ ರೋಹಿಣಿಯಲ್ಲಿ ಹುಟ್ಟಿದಾ ಮಗನು ನಿನಗೆ
ಮೃತ್ಯುವಾಹನೆಂದು ಆವಿರ್ಭೂತ ನುಡಿಯಿತು |೨೮|

ಆಕಾಶವಾಣಿ ನುಡಿಯೆ ಆಕೆಯಾ ಕೊಲುವೆನೆಂದು
ವ್ಯಾಕುಲದಿಂದ ಕಂಸ ನಡೆದು ಬಂದನು | ೨೯ |

ಭಗಿನಿಯ ಕೊಲ್ಲುವೆನೆಂದು ಬಹಳ ಕೋಪದಿಂದ ಬಂದ
ಆಯುಧವನ್ನೆ ಹಿಡಿದು ಕಂಸ ಕಡಿವೆನೆನುತಲಿ |೩೦|

ಕೂಡೆ ಹುಟ್ಟಿದವಳ ಕೊಂದು ದುಷ್ಕರ್ಮವನು ಮಾಡುವರೆ
ಬೇಡ ಕಂಸ ಸ್ತ್ರೀ ಹತ್ಯ ಬೇಗ ಬಾಹುದು |೩೧ |

ಎನ್ನ ಪ್ರಾಣಕೆ ಮುನಿದ ತಂಗಿ ಇದ್ದು ಪ್ರಯೋಜನವೇನು
ಕಣ್ಣು ಹೋದ ಹುಬ್ಬು ತನಗೆ ಬೇಡವೆಂದನು |೩೨|

ಆನಕದುಂದುಭಿ ಕಂಸಗಾನೇಕ ವಿಧವಾಗಿ ತಿಳುಹಿ
ಆದ ಸುತರನೆಲ್ಲ ನಿನಗೆ ಈವೆನೆಂದನು |೩೩|

ಎಂದ ಮಾತ ಕೇಳಿ ತಾನು ನಂಬಲಾರೆನೆಂದ ಕಂಸ
ಆಯುಧವನಿಟ್ಟು ಅಡ್ಡ ದಾಟು ಎಂದನು |೩೪|

ಹೇಳಿದಾ ಮಾತು ಕೇಳಿ ತಾನು ತಾಳಲಾರೆನೆಂದ ಕಂಸ
ಗಾಂಡೀವ ಇಟ್ಟು ಅಡ್ಡ ದಾಟು ಎಂದನು | ೩೫ |

ಆನೆ ಇಳಿದು ವಸುದೇವ ರಾಣಿಯಾ ಕೈಯಾ ಹಿಡಿದು
ಆಯುಧವ ದಾಟಿ ಅರಮನೆಗೆ ನಡೆದನು | ೩೬ |

ಅಂದಣವನಿಳಿದು ವಸುದೇವ ಹಂಡತಿ ಕೈಯ ಹಿಡಿದು
ಗಾಂಡೀವವ ದಾಟಿ ಅರಮನೆಗೆ ನಡೆದನು |೩೭|

ಆಗ ಅರಮನೆಯೊಳಗೆ ಭಾಮೆ ದೇವಕಿದೇವಿ
ಬೇಗದಿಂದ ಋತುಮತಿಯಾಗುತ್ತಿದ್ದಳು |೩೮|

ಕೇಳಿ ಉಗ್ರಸೇನರಾಯ ಬಹಳ ಸಂತೋಷದಿಂದ
ಶೋಭನವ ಮಾಡಿಸಿದ ಅಷ್ಟು ಹರುಷದಿ |೩೯|

ಅಷ್ಟ ಋಷಿಗಳನ್ನೆ ಕರೆಸಿ ಅಷ್ಟ ಫಲಗಳನ್ನೆ ತರಿಸಿ
ಪುತ್ರಿಯ ಕೈಯಲ್ಲಿ ಫಲದಾನವ ಕೊಡಿಸಿದ |೪೦ |

ಆಗ ಅರಮನೆಯೊಳಗೆ ಭಾಮೆ ದೇವಕಿ ದೇವಿಗೆ
ಬೇಗದಿಂದ ಪ್ರಥಮ ಗರ್ಭವಾಗುತಿದ್ದಿತು |೪೧ |

ಕೇಳಿ ಉಗ್ರಸೇನ ರಾಯ ಬಹಳ ಸಂತೋಷದಿಂದ
ಸೀಮಂತವ ಮಾಡಿಸಿದ ಅಷ್ಟು ಹರುಷದಿ |೪೨|

ಬಾಲಕನು ಹುಟ್ಟುತ್ತಿರಲು ಬೇಗದಿಂದ ವಸುದೇವ
ಕಂಸನ ಮುಂದೆ ಇಟ್ಟು ಕರವ ಮುಗಿದು ನಿಂತನೂ |೪೩|

ಬಾಲಕನ ನೋಡುತ ಬಹಳ ಸಂತೋಷದಿಂದ
ನೀನು ನಿನ್ನ ಮನೆಗೆ ಬೇಗ ಹೋಗು ಎಂದನೂ |೪೪ |

ಅಂದ ಮಾತು ಕೇಳಿ ತಾನು ಬಂದನಾಗ ವಸುದೇವ –
ಹೆಂಡತಿಯ ಕೈಲಿ ಶಿಶುವ ತಂದು ಕೊಟ್ಟನೂ |೪೫|

ಹೇಳಿದ ಮಾತು ಕೇಳಿ ತಾನು ಹೋದ ವಸುದೇವ
ರಾಣಿಯ ಕೈಲಿ ಶಿಶುವ ತಂದು ಕೊಟ್ಟನೂ |೪೬|

ಅಂಬರದಿಂದಲಿ ಬಂದರೀಗ ನಾರದರು
ಇಂದಿರಾಪತಿ ಈತ ಸಂದೇಹವಿಲ್ಲವೂ |೪೭|

ದೇವಕಿ ವಸುದೇವರಿಗೆ ಸೆರೆಯ ಸಂಕೋಲೆ ಹಾಕ್ಸಿ
ಬಾಗಿಲ ಮುಂದೆ ಭಟರ ತಂದು ಕಾವಲಿಟ್ಟನು |೪೮|

ನಾರದನ ಮಾತ ಕೇಳಿ ಬಹಳ ಕೋಪವನ್ನೆ ತಾಳಿ
ಆಯುಧವನ್ನು ಹಿಡಿದು ಅರಮನೆಗೆ ಬಂದನು |೪೯|

ಆರು ಮಂದಿ ಪುತ್ರರ ದೇವಕಿಯು ಪಡೆದಿರಲು
ಆಗ ಕಂಸ ಶಿಲೆಯೊಳಪ್ಪಳಿಸಿ ಕೊಂದನೂ | ೫೦ |

ಏಳನೆಯ ಗರ್ಭ ದೇವಕಿಗೆ ಮೂರು ತಿಂಗಳಾಗುತಿರಲು
ಮಾಯೆ ಸೆಳೆದುಕೊಂಡು ರೋಹಿಣಿಯಲ್ಲಿಟ್ಟಿತೂ |೫೧|

ಸೆಳೆಯಪಟ್ಟು ಶೇಷನಾಗಿ ಸಂಕರ್ಷಣನೆಂದೆನಿಸಿ
ಜನಿಸಿದನೆ ರೋಹಿಣಿಯ ಗೃಹದೊಳಾಗಲೇ |೫೨ |

ದೇವಕಿಗೇಳನೆಯ ಗರ್ಭ ಶುರುವಾದವೆಂದು
ಬಹಳ ವಾಕ್ಯದಿಂದ ಜನರು ಆಡಿಕೊಂಬರು |೫೩|

ದೇವಕಿಯ ಗರ್ಭದೊಳಗೆ ದೇವ ಶ್ರೀಹರಿಯು ಜನಿಸೆ
ಬಹಳ ವಾಕ್ಯದಿಂದ ಜನರು ಆಡಿಕೊಂಬರು |೫೪ |

ಅಕಳಂಕಚರಿತ ದೇವಕಿಯ ಬಸುರೊಳಗೆ ಬಂದಿರಲು
ವಿಕಸಿತವಾದುದು ಅವಳ ಮುಖ ಕಮಲವು | ೫೫ |

ಮೂರು ಲೋಕವ ತಿರುಗಿ ನಾರದ ಮುನಿಯು ಬರಲು
ಬುದ್ಧಿ ಕ್ಷಮೆಯಿಂದ ಮಾತನಾಡುತಿದ್ದನು |೫೬ |

ಪೂರ್ವಕಾಲದಲ್ಲಿ ಕಾಲನೇಮಿ ವಿಷ್ಣು ಕೈಲಿ ಮರಣ ನಿನಗೆ
ಈ ಜನ್ಮದಲಿ ಹರಿಯ ಕೈಯಲಿ ಮರಣವೆಂದನು |೫೭|

ಒಂದು ದಿವಸ ದೇವಕಿಯ ಮಂದಿರಕ್ಕೆ ಬಂದ ಕಂಸ
ತಂಗಿಯ ಮುಖದ ಕಾಂತಿಯ ನೋಡಿ ಬೆರಗು ಬಿದ್ದನು |೫೮ |

ಎಂದಿನಂತಲ್ಲ ಗರ್ಭ ಚೆಂದವಾಗಿ ತೋರುತಿದೆ
ಕೊಂದೀತು ಎನ್ನ ಸಂದೇಹವಿಲ್ಲವು |೫೯|

ದೇವಕಿಗೆಂಟನೆಯ ಗರ್ಭ ಬಹಳ ಎಚ್ಚರಿಕೆ ಎಂದು
ಹೇಳಿದನೆ ಕಂಸ ತನ್ನ ಆಳು ಮಂದಿಗೆ |೬೦|

ದೇವಕಿ ವಸುದೇವರಿಗೆ ಸೆರೆಯ ಸಂಕೋಲೆ ಹಾಕ್ಸಿ
ಬಾಗಿಲ ಮುಂದೆ ಭಟರ ತಂದು ಕಾವಲಿಟ್ಟನು |೬೧|

ಪುರದ ಬಾಗಿಲುಗಳಿಕ್ಕಿ ಜನರು ಎಲ್ಲ ನಿದ್ರೆಗೈವ
ಸಮಯದಲಿ ದೇವಕಿ ದೇವಿಯ ನಡು ನೊಂದುವು |೬೨ |

ಅಷ್ಟಮೀ ರೋಹಿಣಿಯಲ್ಲಿ ಅರ್ಧರಾತ್ರಿ ವೇಳ್ಯದಲ್ಲಿ
ಅಚ್ಯುತನ ಚರಿತವಾವಿರ್ಭೂತವಾಯಿತು |೬೩|

ಶ್ರಾವಣ ಬಹುಳ ಅಷ್ಟಮಿಯಲ್ಲಿ ಚಂದ್ರ ಉದಯ ಕಾಲದಲ್ಲಿ
ಭೂಮಿಯ ಮೇಲೆ ಕೃಷ್ಣನವತರಿಸಿದನು |೬೪|

ಶುಕ್ಲ ಶೋಣಿತ ಸಂಬಂಧ ಪ್ರಸಕ್ತಿ ತನಗಿಲ್ಲವೆಂದು
ಶಂಖ ಚಕ್ರ ಚತುರ್ಭುಜದಲವತರಿಸಿದನು |೬೫|

ಜಗದೊಡೆಯ ದೇವಕಿಯ ಗೃಹದೊಳಗೆ ಜನಿಸಿರಲು
ಧರಣಿದೇವಿ ತನ್ನ ಭಾರವಿಳುಹಿತೆಂದಳು |೬೬ |

ಪಟ್ಟಣದ ಕೇರಿಯೊಳಗೆ ಸುತ್ತೇಳು ಗೃಹದೊಳಗೆ
ಪಕ್ಷಿವಾಹನ ಕೃಷ್ಣನ ಬೆಳಕು ತುಂಬಿತು |೬೭|

ರಾಜ ಬೀದಿಯೊಳಗೆ ನಾಲ್ಕೆಳು ಗೃಹದೊಳಗೆ
ವಾರಿಜನಾಭನ ಬೆಳಕು ತುಂಬಿತು |೬೮ |

ಪಟ್ಟಣದ ಬೆಳಕು ಕಂಡು ದುಷ್ಟ ಕಂಗೆಟ್ಟು ಅಂಜಿ
ಮೃತ್ಯು ಬಂದಿತು ಸಂದೇಹವಿಲ್ಲವು |೬೯|

ದೇವಕಿಯ ಗೃಹದೊಳಗೆ ದೇವ ಶ್ರೀಹರಿಯು ಜನಿಸಿ
ಆಗ ಅಜನು ಬಂದು ತುತಿಯ ಮಾಡಿ ಹೋದನು | ೭೦ |

ದೇವಾದಿದೇವನೇ ವೇದಪಾಲಕನೇ
ಮಾವಮರ್ದನನೆಂದು ಬ್ರಹ್ಮ ತುತಿಸಿದ |೭೧ |

ಅಸುರ ಸಂಹಾರ ನೀನೆ ಶಿಶುಪಾಲ ವೈರಿ ನೀನೆ
ಕಂಸ ಮರ್ದನನೆಂದು ಬ್ರಹ್ಮ ತುತಿಸಿದ |೭೨|

ಶಂಖ ಚಕ್ರ ಗದಾ ಪದ್ಮ ಅಂಕಿತ ಪೀತಾಂಬರ ಉಟ್ಟ
ಪಂಕಜಾಕ್ಷನ ಕಂಡು ಅವರು ಶಂಕಿಸಿದರು |೭೩|

ಪೀತಾಂಬರ ಉಟ್ಟುಕೊಂಡು ಲಕ್ಷ್ಮೀದೇವಿಯರು ಸಹಿತ
ಶಂಖ ಚಕ್ರ ಚತುರ್ಭುಜದಲವತರಿಸಿದ |೭೪|

ಶಂಖ ಚಕ್ರ ಗದಾ ಪದುಮ ಮುಕುಟ ಕೌಸ್ತುಭಹಾರ
ಶ್ರೀವತ್ಸ ಕುಂಡಲವು ನೊಸಲ ತಿಲಕವು |೭೫|

ಉಟ್ಟ ಪೊಂಬಟ್ಟೆಯು ಹೊದ್ದ ಪೀತಾಂಬರವು
ಹೊಳೆಯೆ ಕತ್ತಲೆಗಳೆಲ್ಲ ಹರಿದವಾಗಲೇ |೭೬|

ಹೃದಯದಿ ತುಲಸಿಯ ಸರ ವೈಜಯಂತಿ ಮಾಲೆಗಳು
ಅಸುರ ಮರ್ದನನತಿ ಮುದ್ದು ಮುಖವ ಕಂಡರು |೭೭|

ಎಸಳು ಕಂಗಳು ತುದಿನೋಟದ ಕರುಣ ರಸವು
ಸುರಿಯೆ ಹಲವು ಕುರುಳು ಚೆಲುವ ಮುದ್ದು ಕೃಷ್ಣ ಜನಿಸಿದ |೭೮|

ಚತುರ್ಭುಜದಿಂದ ವ್ಯಕ್ತನಾದ ಶಂಖ ಚಕ್ರ ಗದಾ ಧರಿಸಿ
ಪ್ರಾಕೃತಭಾವನಾಗಿ ಮುಂದೆ ಬಂದು ನಿಂತನು |೭೯|

ನಿಂತಿರುವ ಹರಿಯ ಕಂಡು ಅಂಜಿ ದೇವಕಿದೇವಿ
ಬಂದು ವಸುದೇವನ ಅಪ್ಪಿಕೊಂಡಳು |೮೦ |

ಅಂಜಬೇಡ ತಾಯೆ ಎಂದು ರಂಗ ಅಭಯವನ್ನು ಕೊಟ್ಟ
ಹಿಂದಿನಾ ತಪಕೆ ಮೆಚ್ಚಿ ಬಂದೆನೆಂದನು |೮೧ |

ಹೆದರಬೇಡ ತಾಯೆ ಎಂದು ಹರಿಯು ಅಭಯವನ್ನು ಕೊಟ್ಟ
ಹಲವು ಕಾಲದ ತಪಕೆ ಮೆಚ್ಚಿ ಬಂದೆನೆಂದನು |೮೨|

ಹಿಂದಕೆ ವರವನಿತ್ತು ಬಂದೆ ನಿನ್ನ ಗರ್ಭದಲ್ಲಿ
ನಂದಗೋಪ ಗೋಪಿಯರರ್ತಿ ಸಲಿಸ ಬಂದೆನು | ೮೩ |

ಅದ್ಭುತವಾದ ಶಿಶುವ ಕಂಡು ಆದಿಪುರುಷನೆಂದು
ಮೈ ಉಬ್ಬಿ ವಸುದೇವ ಸ್ತುತಿಯ ಮಾಡಿದ |೮೪|

ಕೇಶವ ನಾರಾಯಣ ಮಾಧವ ಗೋವಿಂದ
ವಾಸುದೇವ ಕರುಣಿಸೆಂದು ಸ್ತುತಿಸುತಿದ್ದನು | ೮೫ |

ಸ್ತುತಿಗಳೇ ಬಹಳ ಬೇಡ ಕಂಸನ ಭಯವು ನಿಮಗೆ
ಶಿಶುವಾಗಿ ನಿಮ್ಮನು ಸಲುಹುವೆನೆಂದ |೮೬|

ಮಗುವಾಗಿ ಮೊರದೊಳಗೆ ಮಲಗಿ ನಿಮ್ಮ ಸಲುಹುವೆ
ಬಲರಾಮನ ಕೂಡೆ ಹೋಗಿ ಬೆಳೆವೆನೆಂದನು |೮೭|

ಪೃಶ್ನಿಜನ್ಮದಲ್ಲಿ ನಿಮ್ಮ ಉದರದಲ್ಲಿ ಪುಟ್ಟಿದೆ
ಅದಿತಿ ಕಾಶ್ಯಪರಲ್ಲಿ ವಾಮನನಾಗಿ ಪುಟ್ಟಿದೆ |೮೮|

ಮೂರು ಜನ್ಮದಲ್ಲಿ ನಿಮ್ಮ ಉದರದಲ್ಲಿ ಪುಟ್ಟಿದೆ
ಮುಕ್ತಿಗೆ ಯೋಗ್ಯಳಾದೆ ದೇವಕಿ ಎಂದನು |೮೯ |

ಮೂರು ಜನ್ಮದಲ್ಲಿ ತಪಸು ಮಾಡಿದೆಲ್ಲ ಗಳಿಸಿತು
ಮುಕ್ತಿಗೆ ಐದು ದೇವಕಿ ಎಂದನು |೯೦|

ಆಗ ಸೆರೆಮನೆಯೊಳಗೆ ಭಾಮೆ ದೇವಕಿದೇವಿ
ಸೋದರಾಗೆ ಅಂಜಿ ಮಾತನಾಡುತ್ತಿದ್ದಳು |೯೧ |

ಮಂದಿಯ ಒಳಗೆ ಎನ್ನ ಕಂದನೆಂದು ತಿಳಿಸಬೇಡ
ಒಂದು ಮಾಡಿಸೆಂದು ರಂಗಗೆ ಬೇಡಿಕೊಂಡಳು |೯೨ |

ಮಾತೆಯ ಸ್ತೋತ್ರವನ್ನೆ ಕೇಳಿ ದೇವ ಪ್ರೀತನಾಗಿ ನುಡಿದ
ಸೋದರನ ಭಯವು ನಿಮಗೆ ಬೇಡವೆಂದನು |೯೩|

ಪುತ್ರ ಹುಟ್ಟಿದನೆಂದು ಅರ್ತಿಯಿಂದ ವಸುದೇವ
ಹತ್ತು ಸಾವಿರ ಗೋವುದಾನ ಸಂಕಲ್ಪ ಮಾಡಿದ |೯೪|

ಬಾಲ ಹುಟ್ಟಿದನೆಂದು ಹರುಷದಿಂದಲಿ ವಸುದೇವ
ನೂರು ಲಕ್ಷ ಗೋವುದಾನ ಸಂಕಲ್ಪ ಮಾಡಿದ |೯೫ |

ವಸುದೇವನ ಸ್ತುತಿಯ ಕೇಳಿ ಅಸುರಮರ್ದನ ಕೃಷ್ಣ
ಶಿಶುರೂಪವ ಧರಿಸಿದನಾಕ್ಷಣದಲ್ಲಿ |೯೬|

ಕಾಳಿಂದಿಯ ತೀರದಲ್ಲಿ ನಂದಗೋಪನ ಪಳ್ಳಿ
ಮಂದಿರದೊಳಿಟ್ಟು ಹೆಣ್ಣು ಮಗಳ ತಂದುಕೋ |೯೭|

ದೇವನಾಡಿದ ಮಾತ ಕೇಳಿ ವಸುದೇವನೆತ್ತಿ ನಡೆಯುತಿರಲು
ಬೀಗ ಮುದ್ರೆಗಳು ಸಡಿಲಿ ದ್ವಾರ ತೆರೆದುವು |೯೮ |

ಗಸ್ತು ಎಚ್ಚರಿತು ಕೂಗೆ ಆಗ ವಸುದೇವನು
ಕವಳವ ಕೊಟ್ಟು ಬೇಗ ಬೇಡಿಕೊಂಡನು |೯೯|

ಹನಿಯ ಮಳೆಗೆ ಶೇಷ ತನ್ನ ಹೆಡೆಯ ಕೊಡೆಯ ಮಾಡಿದ
ಯಮುನೆ ಈರ್ಭಾಗವಾಗಿ ದಾರಿ ಕೊಟ್ಟಳು |೧೦೦|

ದುರ್ಗೆ ಜನಿಸಿ ನಂದಗೋಕುಲದಿ ಇದ್ದ ಜನರಿಗೆಲ್ಲ
ನಿದ್ರೆಯನ್ನೆಸೆದಳಜ್ಞಾನ ವಶದಿ | ೧೦೧ |

ವಾಸುದೇವನ ವಸುದೇವ ಯಶೋದೆ ಹಾಸಿಗೆಯಲಿಟ್ಟು
ಶಿಶುರೂಪು ಧರಿಸಿದಿ ಹೆಣ್ಣು ತಂದನು | ೧೦೨|

ತಿರುಗಿ ಬಂದು ವಸುದೇವ ಸೆರೆಯ ಸಂಕೋಲೆಯಲ್ಲಿರಲು
ತಾವಾಗಿ ಮುಚ್ಚಿದಾವೆ ತೆರೆದ ಬಾಗಿಲು | ೧೦೩|

ಹೆಣ್ಣು ತಂದು ವಸುದೇವ ಹೆಂಡತಿಯ ಕೈಲಿ ಕೊಡಲು
ಕಣ್ಣು ತೆರೆದು ಕಾವುಕಾವೆಂದತ್ತಿತ್ತಾಗಲೇ |೧೦೪ |

ದೇವಕಿ ಪ್ರಸವವಾದಳೆಂದು ಆಗ ಎಚ್ಚರಿತು ಜನರು
ಬೇಗದಿಂದಲಿ ಕಂಸಗೆ ಹೋಗಿ ಹೇಳಲು | ೧೦೫ |

ಹಾಸಿಕೆ ಬಿಟ್ಟಿದ್ದು ಕಂಸ ಕೇಶ ಕೆದರಿ ಹಸನ ಉಗುಳಿ
ಆ ಕ್ಷಣದಿ ಶಿಶುವ ಸೆಳೆದುಕೊಂಡನಾಗಲೇ | ೧೦೬ |

ಚಿಣ್ಣನಲ್ಲ ಹೆಣ್ಣಿದು ಅಣ್ಣ ನಿನ್ನ ಕೊಲ್ಲುವುದೆ
ಕಣ್ಣಿನೊಳ್ಳೋಡಿಕೊಂಬೆ ಕರುಣಿಸೆಂದಳು | ೧೦೭ |

ಹೆಣ್ಣೆನಿಂದಲವು ಉಂಟು ಹೆಣ್ಣಿನಿಂದಲೇ ಲಯವು ಉಂಟು
ಹೆಣ್ಣು ಸೀತೆ ಹುಟ್ಟಿ ಲಂಕೆ ಹಾಳು ಆಯಿತು | ೧೦೮ |

ಸೀತೆ ಹುಟ್ಟಿದ ಕಾರಣದಿಂದ ಲಂಕೆಗೆ ಅಳಿತವಾಯ್ತು
ನಿನ್ನ ಕಾರಣದಿಂದ ಎನ್ನ ಕೊಂದಿತೆಂದನು | ೧೦೯ |

ರೋಷದಿಂದ ಶಿಶುವ ಸೆಳೆದು ಹಾಸಿದ ಕಲ್ಲಿನ ಮೇಲೆ
ಬೀಸಿ ಅಪ್ಪಳಿಸಲಂಬರದಲಿದ್ದಳೂ | ೧೧೦|

ಅಂತರಿಕ್ಷದೊಳು ದುರ್ಗೆ ಆಯುಧವ ಧರಿಸಿಕೊಂಡು
ಅಷ್ಟ ಭುಜಗಳನ್ನು ತೋರಿ ನಿಂತಳಾಗಲೇ | ೧೧೧|

ಬೀಳಲಿದ್ದಿ ಎಲವೂ ಕಂಸ ಆಳಿಗಾರ ನಿನ್ನ ವೈರಿ
ಬಾಲಕೃಷ್ಣ ನಂದನ ಮನೇಲಿ ಬೆಳೆವುತಿದ್ದನೆ | ೧೧೨|

ನಿನ್ನ ಕೊಲ್ಲುವ ವೈರಿ ಅನ್ಯತ್ರ ಬೆಳೆಯುತಾನೆ
ಉನ್ಮತ್ತನಾಗಿ ನೀನು ಎನ್ನ ಕೊಲ್ಲುವಿಯೊ |೧೧೩|

ದುರ್ಗೆಯಾಡಿದ ಮಾತ ಕೇಳಿ ಕಡುನೊಂದು ಮನದಲ್ಲಿ
ಕಂಸನಂದು ಬಿಡಿಸಿದ ದೇವಕಿಯ ಬಂಧನಂಗಳ | ೧೧೪ |

ಮಾಯದ ಸೀತೆಯಲ್ಲಿ ಸಾಯಲಿಕ್ಕೆ ಅಂಜುವರೆ ತಾಯೆ
ನಮ್ಮನ್ಯಾರು ಮುಂದೆ ರಕ್ಷಿಸುವರು |೧೧೫|

ಇತ್ತ ಗೋಕುಲದೊಳಗೆ ಎಚ್ಚರಿತು ಜನರು ಎಲ್ಲ
ಪುತ್ರನ ಪಡೆದಳೆ ಯಶೋದೆ ಎಂದರೂ | ೧೧೬|

ಗಂಡು ಮಗನ ಪಡೆದಳೆಂದು ನಂದಗೋಪಗ್-ಹೇಳಲು
ಕಾಳಿಂದಿಯಲ್ಲಿ ಸ್ನಾನ ಮಾಡಿ ಬಂದನು ಅವನು |೧೧೭|

ಹೇಳಿದ ಪರಿಚಾರಕರಿಗೆ ಬಹಳ ಉಡುಗರೆಯ ಕೊಟ್ಟು
ಬ್ರಾಹ್ಮಣರಿಗೆ ದಕ್ಷಿಣೆ ತಾಂಬೂಲವಿತ್ತನು |೧೧೮|

ಪುತ್ರ ಹುಟ್ಟಿದನೆಂಬ ಅರ್ತಿಯಿಂದಲಿ ನಂದಗೋಪ
ಹತ್ತು ಸಾವಿರ ಗೋವು ದಾನ ಕೊಟ್ಟನು |೧೧೯|

ಬಾಲ ಹುಟ್ಟಿದನೆಂದು ಬಹಳ ಹರುಷದಿಂದಲಿ ಗೋಪ
ಹತ್ತು ಸಾವಿರ ಗೋವು ದಾನ ಕೊಟ್ಟನು |೧೨೦|

ವತ್ಸಪೈರು ಸಹಿತಲಾಗಿ ಚೊಚ್ಚಲು ಸಾಧು ಮಣಕವನ್ನು
ರತ್ನ ಹೇಮ ಚಿನ್ನದಿಂದ ಅಲಂಕರಿಸಿದ |೧೨೧ |

ಮಧು ಎಂಬ ದೈತ್ಯನ ಸದೆಬಡಿದ ಶ್ರೀಹರಿಗೆ
ಮಧುವ ತಂದು ವದನದಲ್ಲಿ ತೊಡೆದರಾಗಲೇ | ೧೨೨ |

ಬಾಯಿಗೆ ಮಧುವನಿಟ್ಟು ನಾಭಿಯ ಛೇದಿಸಿದರು
ಭಾಗೀರಥಿ ಜನಕಗೆ ಮಜ್ಜನಕೆರೆದರು |೧೨೩ |

ತೊಡೆಯ ತೊಳೆದು ಮುಡಿಯ ಕಟ್ಟಿ ನಡುವೆ ಸುತ್ತಿಕ್ಕಿದರು
ಭರದಿ ಗೂಡಾರಗಳ ಕಟ್ಟುತಿದ್ದರು | ೧೨೪ |

ಅಚ್ಯುತಾನಂತಗೆ ಹತ್ತವತಾರಗೆ ಅನಂತಗೆ
ಬಚ್ಚಂಬಲೆಯ ತಂದು ಬಿಸಿ ಮಾಡಿ ಎರೆದರು | ೧೨೫ |

ಮತ್ಸ್ಯಗೆ ಕೂರ್ಮಗೆ ವರಾಹಗೆ ನರಹರಿಗೆ
ವಾಮನ ಭಾರ್ಗವಗೆ ನೀರ ಎರೆದಾರು |೧೨೬ |

ರಾಮಗೆ ಕೃಷ್ಣಗೆ ಬೌದ್ಧಗೆ ಕಲ್ಕಿಗೆ
ಬಚ್ಚಂಬಲೆಯ ತಂದು ಬಿಸಿ ಮಾಡಿ ಎರೆದರು | ೧೨೭ |

ಶಂಬರಾರಿ ಪಿತನು ಹರಿಯು ಜನಿಸದನು ಸಕ್ಕರೆ
ತಂದು ಬೀರಿರೆಂದು ನಂದಗೋಪ ಹೇಳನು | ೧೨೮ |

ಚೆಲುವ ಚೀನಿ ಸಕ್ಕರೆ ಭೇರಿ ಭಂಡಿಯಲಿ ತುಂಬಿ
ಬೀರಿದರು ಯಮುನೆ ಗೋಕುಲದ ಕೇರಿಗೆ |೧೨೯ |

ಪುತ್ರ ಹುಟ್ಟಿದನೆಂದು ಅರ್ತಿಯಿಂದ ನಂದಗೋಪಗೆ
ಮುತ್ತಿನಾರತಿ ಎತ್ತಿದರೆ ಮುತ್ತೈದೆಯರು |೧೩೦ |

ಗೋಕುಲದ ನಾರಿಯರು ಓಕುಳಿಯನಾಡಿದರು
ಅನೇಕ ಹಾಲು ಮೊಸರು ಬೆಣ್ಣೆ ಹೈನಗಳಿಂದ | ೧೩೧|

ಜಾತ ಶ್ರೀಹರಿಗೆ ಗೋಪ ಜಾತಕರ್ಮವನೆ ಮಾಡಿ
ಅನೇಕ ಭೂಷಣಂಗಳ ದ್ವಿಜರಿಗಿತ್ತನು |೧೩೨|

ಹರುಷದಿಂದ ನಂದಗೋಪ ಕರೆಸಿದ ಜೋಯಿಸರ ಬೇಗ
ತರಿಸಿ ಉಡುಗಿರೆ ಕೊಟ್ಟು ಜಾತಕ ಬರೆಸು ನೀನೆಂದ | ೧೩೩ |

ಜ್ಯೋತಿಶ್ಯಾಸ್ತ್ರಿಗಳು ಬಂದು ಜಾತಕವನು ಹೇಳಿದರು
ಅನೇಕ ಸ್ತ್ರೀಯರಿಗೆ ಪತಿಯಾಗುವನೀತನು | ೧೩೪ |

ಹುಟ್ಟಿದ ವೇಳ್ಯದಿ ಬಹು ದುಷ್ಟರ ಸಂಹರಿಸುವ
ಸೃಷ್ಟಿ ಪಾಲಿಸುವಂಥ ದಿಟ್ಟನೀತನು | ೧೩೫ |

ದಶರಾತ್ರಿಯೊಳಗೊಬ್ಬಳಸುರೆಯಾ ಸಂಹರಿಸುವ
ಕೆಲ ಶೂರರರ್ತಿಯಲಿ ಕೊಲುವ ಅಸುರರ | ೧೩೬ |

ಅತ್ತೆಯಾ ಮಕ್ಕಳಿಗತ್ಯಂತ ಪ್ರಿಯನಾಗುವ
ಪಾರ್ಥನ ರಥಕೆ ಸಾರಥಿಯನಾಗುವ |೧೩೭ |

ರೋಹಿಣಿ ನಕ್ಷತ್ರದಲಿ ಜನನವಾದ ಕಾರಣದಿ
ಸೋದರಮಾವಗೆ ಗಂಡಾಂತರ ಸಂದೇಹವಿಲ್ಲವು |೧೩೮ |

ಜಾತಕವ ಕೇಳಿದ ನಂಗೋಪ ಹರುಷದಿಂದ
ಪಟ್ಟಾವಳಿಯ ಉಡುಗಿರೆಯ ಕೊಟ್ಟು ಕಳುಹಿದ | ೧೩೯ |

ರಂಗನುದಿಸಿ ಕೊಂಗೊಳಿಸೆ ಹಿಂಗಿತು ಪಾಪಂಗಳೆಲ್ಲ
ತಿಂಗಳುದಿಸಿದಂತೆ ನಮ್ಮ ಜನ್ಮ ಸಫಲವಾಯಿತು | ೧೪೦ |

ರಾಮಗೆ ಜಾತಕವ ಹೇಳಿ ಹೋದರು ಜೋಯಿಸರು
ಕಾಮಿತವಾಯ್ತು ಜನ್ಮ ಸಫಲವೆಂದರು |೧೪೧ |

ಮೂರು ದಿನದ ಕೊಯ್ಲುಗಳ ನೋಡಬೇಕೆಂದೆನುತ
ಬೀರಿದರು ಯಮುನೆ ಗೋಕುಲದ ಕೇರಿಲಿ | ೧೪೨|

ಕೇರಿಯ ಮುತ್ತೆದೆಯರು ಬಾಗಿಲ ತೆಗೆದುಕೊಂಡು
ದೇವರ ಕೊಯ್ಲು ನೋಡಬಂದರು ಅಂದು |೧೪೩ |

ಶಶಿಮುಖಿಯರೆಲ್ಲರು ಶ್ರೀಕೃಷ್ಣನ ಕೊಯ್ಲು ಎಂದು
ಹೊಸ ಮುತ್ತಿನಾಭರಣವಿಟ್ಟು ಮುಂಜುಡಿಗೆಯುಟ್ಟರು |೧೪೪|

ಕುಸುರು ಕಡೆಗೋಲು ಬೇವು ಯಶೋದೆ ರೋಹಿಣಿ ಕೈಯ
ಶಶಿಮುಖಿಯರು ಕೊಯ್ಲುಗಳ ಪೂಜಿಸಿದರು | ೧೪೫ |

ಗೆದ್ದು ವಿಳ್ಯವನೆ ಕೊಂಡು ಪದ್ಮನಾಭ ಹರಿಯು ಎನಲು ಎದ್ದು
ಸ್ತುತಿಯ ಮಾಡಿ ಕರವ ಮುಗಿದು ನಿಂತರು | ೧೪೬ |

ಎಂಟು ದಿನಗಳಾದುವು ಚಿಂತಿಸಿ ಅವನ ಯಂತ್ರದಿಂದ
ಕೊಲುವ ಹದನ ಎನಗೆ ತಿಳಿಯದೆಂದನು | ೧೪೭ |

ಬೇಗದಿಂದಲಿ ತನ್ನ ಮಂತ್ರಿಗಳ ಕರೆಕಳುಹಿ
ಆಲೋಚನೆಯ ಮಾಡಿ ಹೇಳಿರೆಂದನು | ೧೪೮ |

ಆತನ ಮಂತ್ರಿಗಳು ಪೂತನಿಯ ಕರೆಯ ಕಳುಹಿ
ದಶರಾತ್ರಿಯೊಳಗೆ ಶಿಶುವ ಕೊಲ್ಲು ಎಂದರು | ೧೪೯ |

ಅಸುರೆ ಪೂತನಿಯು ತಾನು ಆತ್ಮದಲಿ ವಿಷವ ಧರಸಿ
ಶಿಶುಗಳಾರಿಸುತ್ತ ಗೋಕುಲಕೆ ಬಂದಳು | ೧೫೦ |

ಸಾರಾವಳಿಯನುಟ್ಟು ಸರದ ಮುತ್ತುಗಳ ತೊಟ್ಟು
ಪುತ್ರರಸುತ್ತ ಗೋಕುಲಕೆ ಅಸುರೆ ಬಂದಳು | ೧೫೧ |

ಯಶೋದೆ ಕೈಯಲೆತ್ತುತಿದ್ದ ಶಿಶುವ ಸೆಳೆದುಕೊಂಡು
ವಿಷದ ಮೊಲೆಯ ಕೊಟ್ಟಳೆ ಅಸುರವೈರಿಗೆ | ೧೫೨ |

ಅಸುರಾರಿ ಪೂತನಿಯ ಅಸು ಸಹಿತಲೆ ಹೀರೆ
ವಸುಧೆಯೊಳಗೆ ಬಿದ್ದಳೆ ಅಸುರ ರೂಪಿಲಿ | ೧೫೩ |

ಅಸುರ ರೂಪವನೆ ಕಂಡು ಅಂಜಿ ಕಂಗೆಟ್ಟು ಜನರು
ಶಿಶುವು ಬದುಕಿದ್ದುದು ಆಶ್ಚರ್ಯವೆಂದರು |೧೫೪|

ಪೂತನಿಯ ವಿಷವನುಂಡ ಭೂತನಾಥಯ್ಯಗೆ
ಭೀತಿಪಟ್ಟನೆಂದು ವಿಭೂತಿ ಇಟ್ಟರು |೧೫೫|

ಅಂದ ಮಾತ ಕೇಳಿ ಬೇಗ ಬಂದನಾಗ ನಂದಗೋಪ
ಬಂದು ಕೋರೆದಾಡೆಯ ಅಸುರೆಯ ಕಂಡನವನು | ೧೫೬ |

ವಸುದೇವನ ಮಾತು ಹುಸಿಯಾದುದಿಲ್ಲವು
ತ್ರಿಕಾಲ ಜ್ಞಾನಿಯೆ ತಿಳಿದು ಹೇಳಿದ |೧೫೭ |

ಗೋಮಯ ಪಂಚಗವ್ಯದಿಂದ ಬಾಲಕಗೆ ರಕ್ಷೆ ಕಟ್ಟಿ
ಗೋಧೂಳಿ ಅಭಿಷೇಕವರೆರೆದರು | ೧೫೮ |

ಅಂದು ಕಂಸಗೆ ಕಪ್ಪವ ನಂದಗೋಪ ಸಲಿಸುತಿರಲು
ಬಂದು ಶೂರರಾಯನ ಸುತನು ಕಂಡನು | ೧೫೯ |

ಗೋಕುಲದೊಳಗುತ್ಪಾತವನೇಕವಾಗಿ ತೋರುತಿವೆ
ಈ ಕ್ಷಣದಿಂದಿಲ್ಲಿರದೆ ಪೋಗು ಎಂದನು | ೧೬೦ |

ಪೂತನಿಯ ಸುಡುತಿರಲು ಜಾತಿ ಪರಿಮಳವೆ ಬಂತು
ವಾಸುದೇವನ ಸ್ತುತಿಸಲು ಸದ್ಗತಿಯಾಯಿತು | ೧೬೧ |

ಕವಡೆ ಬಜ್ಜರ ದಾರಗಳ ಹೊನ್ನ ಕಂಕಣದ ನಡುವೆ
ಕಮಲನಾಭನ ತೋಳು ತೊಡೆಯಲೊಪ್ಪು ತಿದ್ದಿತು |೧೬೨|

ಹಂಚಿ ಕಡುಬು ಪಾಯಸ ಹೊನ್ನ ಹರಿವಾಣದ ಪೂಜೆ
ಕೆಂಚೆಯರು ಮಾಡಿದರು ಸಂತೋಷಗಳಿಂದ |೧೬೩ |

ಸಾರಿಸಿ ಮುತ್ತಿನ ಕಾರಣೆಗಳನ್ನೆ ರಚಿಸಿ
ತೋರಣವ ಕಟ್ಟಿದರೆ ಶಿಖರ ಮಕರಕೆ | ೧೬೪ |

ಜ್ಞಾತಿಗಳೆಲ್ಲ ದಶರಾತ್ರಿಗಳಾಗುತಿರಲು
ಸೂತಕಂಗಳನೆ ಕಳೆದು ಸುಖದಲಿದ್ದರು |೧೬೫ |

ಚಿನ್ನದ ಕೊಪ್ಪರಿಗೆಯೆಳಗೆ ಕನ್ನೆಯರು ನೀರು ಬೆರಸಿ
ಪನ್ನಂಗಶಯನಗೆ ಯಶೋದೆಗೆ ಮೊದಲೆ ಎರೆದರು | ೧೬೬ |

ಹವಳದಾ ಕೊಪ್ಪರಿಗೆಯೊಳಗೆ ಹರದಿಯರು ನೀರು ಬೆರಸಿ
ಬಲರಾಮಗೂ ರೋಹಿಣಿಗೂ ಮುನ್ನ ಎರೆದರು | ೧೬೭ |

ಹರುಷದಿಂದ ನಂದಗೋಪ ಮಂಗಳ ಸ್ನಾನವ ಮಾಡಿ
ಇಂದ್ರಮಾಣಿಕದ ಮಣೆಯ ಮೇಲೆ ಬಂದು ಕುಳಿತನು | ೧೬೮ |

ಮಂಗಳ ಸ್ನಾನವ ಮಾಡಿ ನಂದಗೋಪ ಕುಳ್ಳಿರಲು
ಕಂದರವೆತ್ತಿ ಯಶೋದೆ ರೋಹಿಣಿ ಬಂದು ಕುಳಿತರು | ೧೬೯ |

ಗಾರ್ಗ್ಯರೇ ಮೊದಲಾದ ಅಲ್ಲಿದ್ದ ಬ್ರಾಹ್ಮಣರ ಕರೆಸಿ
ಪುಣ್ಯಾಹವ ಮಾಡಿದರೆ ವಿಧ್ಯುಕ್ತದಿ |೧೭೦|

ಮಿಸುಣಿಯ ಹರಿವಾಣದಲ್ಲಿ ಹೊಸ ಮುತ್ತು ದಾಣಿ ತುಂಬಿ
ಯಶೋದೆಯ ಸುತನ ನಾಮಾಂಕಿತವ ಬರೆದನು | ೧೭೧ |

ಚಿನ್ನದಾ ಹರಿವಾಣದಲ್ಲಿ ಮುತ್ತು ರತ್ನ ದಾಣಿ ತುಂಬಿ
ರೋಹಿಣಿಯ ಸುತನ ನಾಮಾಂಕಿತವ ಬರೆದನು | ೧೭೨|

ಬಲ ಜ್ಞಾನದಿಂದ ಆದಿತ್ಯನಾದ ಕಾರಣದಿಂದ
ಹಲಾಯುಧಕೆ ಬಲರಾಮನೆಂದು ಕರೆದರು |೧೭೩|

ಮೃತ್ಯು ಜ್ಞಾನ ಆನಂದ ಗುಣಪೂರ್ಣನಾದ ಕಾರಣದಿಂದ
ಕೃಷ್ಣನೆಂದು ಕರೆದರೆ ಸಂತುಷ್ಟ ಹರಿಯ | ೧೭೪|

ಗೋವುಗಳು ನಮ್ಮನು ರಕ್ಷಿಸುವನೀತನು
ಗೋವಿಂದನೆಂದರು ಅವರು ಸದಾನಂದನ |೧೭೫|

ವಾಸುದೇವ ಜಗತಿನಲ್ಲಿ ಒಳಗೆ ಹೊರಗೆ ವ್ಯಾಪ್ತನಾದ
ವಾಸುದೇವನೆಂದರು ದೋಷರಹಿತನ | ೧೭೬|

ವಾಸುದೇವನ ಮಾಸನಾಮ ಜನ್ಮನಾಮ ವಿಶ್ವರೂಪ
ನಡೆವ ನಾಮದಿಂದ ಕೃಷ್ಣನೆಂದು ಕರೆದರು | ೧೭೭ |

ನಾಮಕರಣ ಮಾಡಿದ ನಂದಗೋಪ ಹರುಷದಿಂದ
ಬ್ರಾಹ್ಮಣರಿಗೆ ದಕ್ಷಿಣೆ ತಾಂಬೂಲವನಿತ್ತನು |೧೭೮|

ಶಾಲ್ಯಾನ್ನ ಸೂಪ ಭಕ್ಷ್ಯ ಪಾಯಸ ದಧಿ ಧೃತವು
ಭಾಮೆಯರು ಮಾಡಿದರೆ ಸಂತೋಷಗಳಿಂದ | ೧೭೯|

ಮೃಷ್ಟಾನ್ನ ಭೋಜನ ನೆಂಟರಿಗೆ ಇಷ್ಟರಿಗೆ
ವಿಪ್ರರಿಗೆ ಮಾಡಿಸಿ ಕೃತಕೃತ್ಯನಾದನು | ೧೮೦|

ನಂದಗೋಪ ಕೃಷ್ಣ ನಿನ್ನ ಕಂದನೆಂದು ತಿಳಿಯಬೇಡ
ಇಂದಿರಾಪತಿಯೆ ಅವನು ಸಂದೇಹವಿಲ್ಲವು | ೧೮೧ |

ಹತ್ತೆಂಟು ವರುಷ ನೀನು ಕಷ್ಟಪಟ್ಟು ತಪವಿರಲು
ಮತ್ತೆ ನಿನ್ನ ಮನೆಗೆ ಪುರುಷೋತ್ತಮನೆ ಬಂದನು | ೧೮೨ |

ಹನ್ನೆರಡು ವರುಷ ನೀನು ಅರ್ತಿಯಿಂದ ತಪವಿರಲು
ನಿನ್ನ ಬಯಕೆ ಸಲಿಸಲೆಂದು ಪನ್ನಂಗ ಬಂದನು | ೧೮೩ |

ನರನೆ ಬಲರಾಮನಾದ ನಾರಾಯಣನೆ ಕೃಷ್ಣನಾದ
ಭೂಮಿಭಾರ ಇಳುಹಲೆಂದು ಅವತರಿಸಿದರು |೧೮೪ |

ಪನ್ನಂಗ ಬಲರಾಮ ಪರಮಾತ್ಮ ಶ್ರೀಕೃಷ್ಣ
ನಿನ್ನ ಪುತ್ರರೆಂಬ ಬುದ್ಧಿ ಮನದಲ್ಲಿ ಮೂಡದೆ |೧೮೫|

ಆಚಾರ್ಯರ ಮಾತು ವಿಶ್ವಾಸದಿಂದ ತಿಳಿದು ಗೋಪ
ಈತನೀಗ ಮುಕ್ತಿಗೆ ಪ್ರಖ್ಯಾತನೆಂದನು |೧೮೬ |

ರಾಮಕೃಷ್ಣರಿಬ್ಬರಿಗೂ ರೋಹಿಣಿ ಯಶೋದೆಯರು
ಮಾಣಿಕದ ಮುತ್ತಿನಾಭರಣವಿಟ್ಟರು |೧೮೭|

ಖಳಜನರ ತುಳಿದು ಸಂಹರಿಸುವ ಪಾದಗಳಿಗೆ
ಕಿರುಗೆಜ್ಜೆ ಕಾಲಹೆಂಡ ವನಿಟರು |೧೮೮ |

ಸರ್ಪನ ಹೆಡೆಯ ಮೇಲೆ ನಾಟ್ಯವಾಡಿದ ಹರಿಗೆ
ನೂಪುರವನಿಟ್ಟರೆ ಜಾತಿರತುನದ |೧೮೯|

ಜಾನೂರು ಜಂಘಯಲ್ಲಿ ಮೇಲೆ ಕಟಿ ಮಧ್ಯದಲ್ಲಿ
ಮಾಣಿಕದ ಮಣಿಯನುಡುದಾರವಿಟ್ಟರು |೧೯೦|

ಉಡಿಗೆ ಗಂಟೆ ಕಿರುಗೆಜ್ಜೆ ಜಡಿವ ಕಾಂಚಿದಾಮ
ಬಡನಡುವಿಗಿಟ್ಟರು ಮೃಡನ ಪ್ರಿಯೆಗೆ |೧೯೧ |

ಮಲಕು ರತ್ನ ಮಾಣಿಕದ ಹರಳು ಕೆಂಪು ಕೆತ್ತಿಸಿದ
ಹಂಸ ಮಾಟದರಳೋಲೆ ಶ್ರೀಹರಿಗೆ ಇಟ್ಟರು | ೧೯೨ |

ಆರು ಮುತ್ತಿನ ಬಾವಲಿ ಅಣಿಮುತ್ತಿನ ಚೌಕುಳಿ
ರಾಮನ ಕಿವಿಗೆ ಜರಿವ ಕುಂಡಲವನಿಟ್ಟರು |೧೯೩|

ಎಂಟು ಮುತ್ತಿನ ಬಾವಲಿ ಎಂಟು ಮುತ್ತಿನ ಚೌಕುಳಿ
ಕೃಷ್ಣನ ಕಿವಿಗೆ ಜರಿವ ಕುಂಡಲವನಿಟ್ಟರು ೧೯೪|

ಬಾಲಕಿಯರೆಲ್ಲರು ಮೋಹಿಸಬೇಕೆನುತ
ಮೂಗುತಿಯನಿಟ್ಟರು ಮುದ್ದು ಕೃಷ್ಣಗೆ |೧೯೫ |

ಕುಸುಮನಾಭಗೆ ಬಾಲಕಿಯರು ಹಸುರಂಗಿಯ ತೊಡಿಸಿದರು
ಬಲರಾಮಗೆ ತೊಡಿಸಿದರು ಕರಿಯ ಅಂಗಿಯ | ೧೯೬ |

ಮಿತ್ರೆಯರು ರಾಮಕೃಷ್ಣರಿಗೆ ತೊಟ್ಟಿಲಿಕ್ಕಬೇಕೆನುತ
ಎಚ್ಚರಿಸಿದರೆ ಬೇಗ ಅಂದು ವಿಶ್ವಕರ್ಮನ |೧೯೭ |

ಎಂದಿನ ಪುಣ್ಯವೋ ಎಂದಿನ ಸುಕೃತವೋ
ಗೋವಿಂದನ ಸೇವೆ ತನಗೆ ಬಂದಿತೆಂದನು | ೧೯೮ |

ದೇವರ ಸೇವೆ ಎಂದು ಬಹಳ ಸಂತೋಷದಿಂದ
ವೀಳ್ಯವ ಪಿಡಿದನು ಅಂದು ವಿಶ್ವಕರ್ಮನು |೧೯೯|

ಪ್ರೇಮದ ಪ್ರತಿಮೆಯಿಂದ ಚೀನಿ ಕೆಲಸದಿಂದ
ಮಾಣಿಕದ ಮಿಳಿತಾದ ಹಲಿಗೆಗಳಿಂದ |೨೦೦ |


SrI kRuShNabAlalIle
pUrvArdha

kamalanABana pAdakamalagaLige namO eMbe
amalamatiya koDuvudeMdu kamalegeraguve |1|

vAyu hanuma BIma SrImadAnaMdatIrthara
pAdapadmagaLigeraguve parama haruShadiMdalI |2|

sakala vidvat prauDharAda suKatIrthara matava
prakaTisida vyAsamuniya caraNakeraguve |3|

nyAya sudheya vyAKyAna mADi mAyavAdigaLa gelida
rAya rAmacaMdrara caraNakeraguve |4|

prANanAtha viriMcarige rANivAsavAgiralu vEda
vartamAnigaLige vaMdipe nAnu |5|

mukkaNNa haranu jagakke guru eMdenisi
Sakra surABIShTarige SaraNeMdenU |6|

madhvamatAbdhi pUrNacaMdranAda jayamuniya
pAdagaLigeraguvE parama haruShadi |7|

hiriyarige gurugaLige munigaLige RuShigaLige
eragi pELve rAmakRuShNara bAlalIleya|8 |

cittadollaBana pAdacittadalli iTTu nAnu
BaktiyiMda pELve rAmakRuShNa cariteya |9 |

GaTTa beTTa sAgara suttalidda asurara
hottiralAreneMdu pRuthvi attaLu |10|

rAja daityarannu tALalArade BUmidEvi
pOgi moreyiTTaLu dEvategaLige | 11|

dEvategaLellaru BUmidEviyoDagoMDu –
kShIrasAgara Sayananeduru baMdarAgale | 12|

gOvurUpa dharisi BUmidEvi ajana baLige baralu
dEvAdidEvana stutisuttiddaru | 13|

aMbudhiSayananAgi aMbujAkSha malagiralu
baMdu dEvategaLella stutiya mADalu | 14|

vAridhiSayananAgi aMbujAkSha malagiralu
baMdu dEvategaLella stutiya mADalu |15|

dEvategaLa mAta dEva cittadalliTTu baMdu
dEvakiyallavatarisuveneMdanu |16|

vasudEvanalli huTTi asurara kolluveneMdu
vasudheBAra iLuhuveneMda vAsudEvanu | 17|

hAsigeyAgiruva SEShadEvaranne karedu
jaiShThanAgi muMcyavatarisu eMdanu |18|

aditi kASyaparu maruta gaMdharvarU
sanakAdi yOgigaLu janisireMdanU | 19|

munigaLella taru pakShi mRugagaLAgi janisidaru
animiSharella gOpAlarAdaru |20|

sanakAdi yOgigaLu paSugaLAgi janisidaru
turuva kAyva gollanAda paramAtmanu |21|

dEvara bAlalIle nODabEkeMdenuta
drONaneMba vasu naMdagopanAdanu |22|

kRuShNana bAlalIle nODabEkeMdenuta
Aga dharAdEvi yaSOdeyAdaLu |23|

SUranalli kASyapa vasudEvanAgi janisidanu
dEvakanalli aditidEvi dEvakiyAdaLu |24 |

dEvaki vasudEvarige vivAhadutsavava mADe
dEvaduMduBigaLAvAgaleseduvu | 25 |

nAku bIdiyalli kaMsa anEka saMBramava merasi
AkASavANi avana kuritu nuDiyitu |26|

taMgiyA maduve eMdu saMBramagoLalu bEDa
kolluvanu Akeya kaMda ninnanU |27|

aShTamiya rOhiNiyalli huTTidA maganu ninage
mRutyuvAhaneMdu AvirBUta nuDiyitu |28|

AkASavANi nuDiye AkeyA koluveneMdu
vyAkuladiMda kaMsa naDedu baMdanu | 29 |

Baginiya kolluveneMdu bahaLa kOpadiMda baMda
Ayudhavanne hiDidu kaMsa kaDivenenutali |30|

kUDe huTTidavaLa koMdu duShkarmavanu mADuvare
bEDa kaMsa strI hatya bEga bAhudu |31 |

enna prANake munida taMgi iddu prayOjanavEnu
kaNNu hOda hubbu tanage bEDaveMdanu |32|

AnakaduMduBi kaMsagAnEka vidhavAgi tiLuhi
Ada sutaranella ninage IveneMdanu |33|

eMda mAta kELi tAnu naMbalAreneMda kaMsa
AyudhavaniTTu aDDa dATu eMdanu |34|

hELidA mAtu kELi tAnu tALalAreneMda kaMsa
gAMDIva iTTu aDDa dATu eMdanu | 35 |

Ane iLidu vasudEva rANiyA kaiyA hiDidu
Ayudhava dATi aramanege naDedanu | 36 |

aMdaNavaniLidu vasudEva haMDati kaiya hiDidu
gAMDIvava dATi aramanege naDedanu |37|

Aga aramaneyoLage BAme dEvakidEvi
bEgadiMda RutumatiyAguttiddaLu |38|

kELi ugrasEnarAya bahaLa saMtOShadiMda
SOBanava mADisida aShTu haruShadi |39|

aShTa RuShigaLanne karesi aShTa PalagaLanne tarisi
putriya kaiyalli PaladAnava koDisida |40 |

Aga aramaneyoLage BAme dEvaki dEvige
bEgadiMda prathama garBavAgutidditu |41 |

kELi ugrasEna rAya bahaLa saMtOShadiMda
sImaMtava mADisida aShTu haruShadi |42|

bAlakanu huTTuttiralu bEgadiMda vasudEva
kaMsana muMde iTTu karava mugidu niMtanU |43|

bAlakana nODuta bahaLa saMtOShadiMda
nInu ninna manege bEga hOgu eMdanU |44 |

aMda mAtu kELi tAnu baMdanAga vasudEva –
heMDatiya kaili SiSuva taMdu koTTanU |45|

hELida mAtu kELi tAnu hOda vasudEva
rANiya kaili SiSuva taMdu koTTanU |46|

aMbaradiMdali baMdarIga nAradaru
iMdirApati Ita saMdEhavillavU |47|

dEvaki vasudEvarige sereya saMkOle hAksi
bAgila muMde BaTara taMdu kAvaliTTanu |48|

nAradana mAta kELi bahaLa kOpavanne tALi
Ayudhavannu hiDidu aramanege baMdanu |49|

Aru maMdi putrara dEvakiyu paDediralu
Aga kaMsa SileyoLappaLisi koMdanU | 50 |

ELaneya garBa dEvakige mUru tiMgaLAgutiralu
mAye seLedukoMDu rOhiNiyalliTTitU |51|

seLeyapaTTu SEShanAgi saMkarShaNaneMdenisi
janisidane rOhiNiya gRuhadoLAgalE |52 |

dEvakigELaneya garBa SuruvAdaveMdu
bahaLa vAkyadiMda janaru ADikoMbaru |53|

dEvakiya garBadoLage dEva SrIhariyu janise
bahaLa vAkyadiMda janaru ADikoMbaru |54 |

akaLaMkacarita dEvakiya basuroLage baMdiralu
vikasitavAdudu avaLa muKa kamalavu | 55 |

mUru lOkava tirugi nArada muniyu baralu
buddhi kShameyiMda mAtanADutiddanu |56 |

pUrvakAladalli kAlanEmi viShNu kaili maraNa ninage
I janmadali hariya kaiyali maraNaveMdanu |57|

oMdu divasa dEvakiya maMdirakke baMda kaMsa
taMgiya muKada kAMtiya nODi beragu biddanu |58 |

eMdinaMtalla garBa ceMdavAgi tOrutide
koMdItu enna saMdEhavillavu |59|

dEvakigeMTaneya garBa bahaLa eccarike eMdu
hELidane kaMsa tanna ALu maMdige |60|

dEvaki vasudEvarige sereya saMkOle hAksi
bAgila muMde BaTara taMdu kAvaliTTanu |61|

purada bAgilugaLikki janaru ella nidregaiva
samayadali dEvaki dEviya naDu noMduvu |62 |

aShTamI rOhiNiyalli ardharAtri vELyadalli
acyutana caritavAvirBUtavAyitu |63|

SrAvaNa bahuLa aShTamiyalli caMdra udaya kAladalli
BUmiya mEle kRuShNanavatarisidanu |64|

Sukla SONita saMbaMdha prasakti tanagillaveMdu
SaMKa cakra caturBujadalavatarisidanu |65|

jagadoDeya dEvakiya gRuhadoLage janisiralu
dharaNidEvi tanna BAraviLuhiteMdaLu |66 |

paTTaNada kEriyoLage suttELu gRuhadoLage
pakShivAhana kRuShNana beLaku tuMbitu |67|

rAja bIdiyoLage nAlkeLu gRuhadoLage
vArijanABana beLaku tuMbitu |68 |

paTTaNada beLaku kaMDu duShTa kaMgeTTu aMji
mRutyu baMditu saMdEhavillavu |69|

dEvakiya gRuhadoLage dEva SrIhariyu janisi
Aga ajanu baMdu tutiya mADi hOdanu | 70 |

dEvAdidEvanE vEdapAlakanE
mAvamardananeMdu brahma tutisida |71 |

asura saMhAra nIne SiSupAla vairi nIne
kaMsa mardananeMdu brahma tutisida |72|

SaMKa cakra gadA padma aMkita pItAMbara uTTa
paMkajAkShana kaMDu avaru SaMkisidaru |73|

pItAMbara uTTukoMDu lakShmIdEviyaru sahita
SaMKa cakra caturBujadalavatarisida |74|

SaMKa cakra gadA paduma mukuTa kaustuBahAra
SrIvatsa kuMDalavu nosala tilakavu |75|

uTTa poMbaTTeyu hodda pItAMbaravu
hoLeye kattalegaLella haridavAgalE |76|

hRudayadi tulasiya sara vaijayaMti mAlegaLu
asura mardananati muddu muKava kaMDaru |77|

esaLu kaMgaLu tudinOTada karuNa rasavu
suriye halavu kuruLu celuva muddu kRuShNa janisida |78|

caturBujadiMda vyaktanAda SaMKa cakra gadA dharisi
prAkRutaBAvanAgi muMde baMdu niMtanu |79|

niMtiruva hariya kaMDu aMji dEvakidEvi
baMdu vasudEvana appikoMDaLu |80 |

aMjabEDa tAye eMdu raMga aBayavannu koTTa
hiMdinA tapake mecci baMdeneMdanu |81 |

hedarabEDa tAye eMdu hariyu aBayavannu koTTa
halavu kAlada tapake mecci baMdeneMdanu |82|

hiMdake varavanittu baMde ninna garBadalli
naMdagOpa gOpiyararti salisa baMdenu | 83 |

adButavAda SiSuva kaMDu AdipuruShaneMdu
mai ubbi vasudEva stutiya mADida |84|

kESava nArAyaNa mAdhava gOviMda
vAsudEva karuNiseMdu stutisutiddanu | 85 |

stutigaLE bahaLa bEDa kaMsana Bayavu nimage
SiSuvAgi nimmanu saluhuveneMda |86|

maguvAgi moradoLage malagi nimma saluhuve
balarAmana kUDe hOgi beLeveneMdanu |87|

pRuSnijanmadalli nimma udaradalli puTTide
aditi kASyaparalli vAmananAgi puTTide |88|

mUru janmadalli nimma udaradalli puTTide
muktige yOgyaLAde dEvaki eMdanu |89 |

mUru janmadalli tapasu mADidella gaLisitu
muktige aidu dEvaki eMdanu |90|

Aga seremaneyoLage BAme dEvakidEvi
sOdarAge aMji mAtanADuttiddaLu |91 |

maMdiya oLage enna kaMdaneMdu tiLisabEDa
oMdu mADiseMdu raMgage bEDikoMDaLu |92 |

mAteya stOtravanne kELi dEva prItanAgi nuDida
sOdarana Bayavu nimage bEDaveMdanu |93|

putra huTTidaneMdu artiyiMda vasudEva
hattu sAvira gOvudAna saMkalpa mADida |94|

bAla huTTidaneMdu haruShadiMdali vasudEva
nUru lakSha gOvudAna saMkalpa mADida |95 |

vasudEvana stutiya kELi asuramardana kRuShNa
SiSurUpava dharisidanAkShaNadalli |96|

kALiMdiya tIradalli naMdagOpana paLLi
maMdiradoLiTTu heNNu magaLa taMdukO |97|

dEvanADida mAta kELi vasudEvanetti naDeyutiralu
bIga mudregaLu saDili dvAra tereduvu |98 |

gastu eccaritu kUge Aga vasudEvanu
kavaLava koTTu bEga bEDikoMDanu |99|

haniya maLege SESha tanna heDeya koDeya mADida
yamune IrBAgavAgi dAri koTTaLu |100|

durge janisi naMdagOkuladi idda janarigella
nidreyannesedaLaj~jAna vaSadi | 101 |

vAsudEvana vasudEva yaSOde hAsigeyaliTTu
SiSurUpu dharisidi heNNu taMdanu | 102|

tirugi baMdu vasudEva sereya saMkOleyalliralu
tAvAgi muccidAve tereda bAgilu | 103|

heNNu taMdu vasudEva heMDatiya kaili koDalu
kaNNu teredu kAvukAveMdattittAgalE |104 |

dEvaki prasavavAdaLeMdu Aga eccaritu janaru
bEgadiMdali kaMsage hOgi hELalu | 105 |

hAsike biTTiddu kaMsa kESa kedari hasana uguLi
A kShaNadi SiSuva seLedukoMDanAgalE | 106 |

ciNNanalla heNNidu aNNa ninna kolluvude
kaNNinoLLODikoMbe karuNiseMdaLu | 107 |

heNNeniMdalavu uMTu heNNiniMdalE layavu uMTu
heNNu sIte huTTi laMke hALu Ayitu | 108 |

sIte huTTida kAraNadiMda laMkege aLitavAytu
ninna kAraNadiMda enna koMditeMdanu | 109 |

rOShadiMda SiSuva seLedu hAsida kallina mEle
bIsi appaLisalaMbaradaliddaLU | 110|

aMtarikShadoLu durge Ayudhava dharisikoMDu
aShTa BujagaLannu tOri niMtaLAgalE | 111|

bILaliddi elavU kaMsa ALigAra ninna vairi
bAlakRuShNa naMdana manEli beLevutiddane | 112|

ninna kolluva vairi anyatra beLeyutAne
unmattanAgi nInu enna kolluviyo |113|

durgeyADida mAta kELi kaDunoMdu manadalli
kaMsanaMdu biDisida dEvakiya baMdhanaMgaLa | 114 |

mAyada sIteyalli sAyalikke aMjuvare tAye
nammanyAru muMde rakShisuvaru |115|

itta gOkuladoLage eccaritu janaru ella
putrana paDedaLe yaSOde eMdarU | 116|

gaMDu magana paDedaLeMdu naMdagOpag-hELalu
kALiMdiyalli snAna mADi baMdanu avanu |117|

hELida paricArakarige bahaLa uDugareya koTTu
brAhmaNarige dakShiNe tAMbUlavittanu |118|

putra huTTidaneMba artiyiMdali naMdagOpa
hattu sAvira gOvu dAna koTTanu |119|

bAla huTTidaneMdu bahaLa haruShadiMdali gOpa
hattu sAvira gOvu dAna koTTanu |120|

vatsapairu sahitalAgi coccalu sAdhu maNakavannu
ratna hEma cinnadiMda alaMkarisida |121 |

madhu eMba daityana sadebaDida SrIharige
madhuva taMdu vadanadalli toDedarAgalE | 122 |

bAyige madhuvaniTTu nABiya CEdisidaru
BAgIrathi janakage majjanakeredaru |123 |

toDeya toLedu muDiya kaTTi naDuve suttikkidaru
Baradi gUDAragaLa kaTTutiddaru | 124 |

acyutAnaMtage hattavatArage anaMtage
baccaMbaleya taMdu bisi mADi eredaru | 125 |

matsyage kUrmage varAhage naraharige
vAmana BArgavage nIra eredAru |126 |

rAmage kRuShNage bauddhage kalkige
baccaMbaleya taMdu bisi mADi eredaru | 127 |

SaMbarAri pitanu hariyu janisadanu sakkare
taMdu bIrireMdu naMdagOpa hELanu | 128 |

celuva cIni sakkare BEri BaMDiyali tuMbi
bIridaru yamune gOkulada kErige |129 |

putra huTTidaneMdu artiyiMda naMdagOpage
muttinArati ettidare muttaideyaru |130 |

gOkulada nAriyaru OkuLiyanADidaru
anEka hAlu mosaru beNNe hainagaLiMda | 131|

jAta SrIharige gOpa jAtakarmavane mADi
anEka BUShaNaMgaLa dvijarigittanu |132|

haruShadiMda naMdagOpa karesida jOyisara bEga
tarisi uDugire koTTu jAtaka baresu nIneMda | 133 |

jyOtiSyAstrigaLu baMdu jAtakavanu hELidaru
anEka strIyarige patiyAguvanItanu | 134 |

huTTida vELyadi bahu duShTara saMharisuva
sRuShTi pAlisuvaMtha diTTanItanu | 135 |

daSarAtriyoLagobbaLasureyA saMharisuva
kela SUrarartiyali koluva asurara | 136 |

atteyA makkaLigatyaMta priyanAguva
pArthana rathake sArathiyanAguva |137 |

rOhiNi nakShatradali jananavAda kAraNadi
sOdaramAvage gaMDAMtara saMdEhavillavu |138 |

jAtakava kELida naMgOpa haruShadiMda
paTTAvaLiya uDugireya koTTu kaLuhida | 139 |

raMganudisi koMgoLise hiMgitu pApaMgaLella
tiMgaLudisidaMte namma janma saPalavAyitu | 140 |

rAmage jAtakava hELi hOdaru jOyisaru
kAmitavAytu janma saPalaveMdaru |141 |

mUru dinada koylugaLa nODabEkeMdenuta
bIridaru yamune gOkulada kErili | 142|

kEriya muttedeyaru bAgila tegedukoMDu
dEvara koylu nODabaMdaru aMdu |143 |

SaSimuKiyarellaru SrIkRuShNana koylu eMdu
hosa muttinABaraNaviTTu muMjuDigeyuTTaru |144|

kusuru kaDegOlu bEvu yaSOde rOhiNi kaiya
SaSimuKiyaru koylugaLa pUjisidaru | 145 |

geddu viLyavane koMDu padmanABa hariyu enalu eddu
stutiya mADi karava mugidu niMtaru | 146 |

eMTu dinagaLAduvu ciMtisi avana yaMtradiMda
koluva hadana enage tiLiyadeMdanu | 147 |

bEgadiMdali tanna maMtrigaLa karekaLuhi
AlOcaneya mADi hELireMdanu | 148 |

Atana maMtrigaLu pUtaniya kareya kaLuhi
daSarAtriyoLage SiSuva kollu eMdaru | 149 |

asure pUtaniyu tAnu Atmadali viShava dharasi
SiSugaLArisutta gOkulake baMdaLu | 150 |

sArAvaLiyanuTTu sarada muttugaLa toTTu
putrarasutta gOkulake asure baMdaLu | 151 |

yaSOde kaiyalettutidda SiSuva seLedukoMDu
viShada moleya koTTaLe asuravairige | 152 |

asurAri pUtaniya asu sahitale hIre
vasudheyoLage biddaLe asura rUpili | 153 |

asura rUpavane kaMDu aMji kaMgeTTu janaru
SiSuvu badukiddudu AScaryaveMdaru |154|

pUtaniya viShavanuMDa BUtanAthayyage
BItipaTTaneMdu viBUti iTTaru |155|

aMda mAta kELi bEga baMdanAga naMdagOpa
baMdu kOredADeya asureya kaMDanavanu | 156 |

vasudEvana mAtu husiyAdudillavu
trikAla j~jAniye tiLidu hELida |157 |

gOmaya paMcagavyadiMda bAlakage rakShe kaTTi
gOdhULi aBiShEkavareredaru | 158 |

aMdu kaMsage kappava naMdagOpa salisutiralu
baMdu SUrarAyana sutanu kaMDanu | 159 |

gOkuladoLagutpAtavanEkavAgi tOrutive
I kShaNadiMdillirade pOgu eMdanu | 160 |

pUtaniya suDutiralu jAti parimaLave baMtu
vAsudEvana stutisalu sadgatiyAyitu | 161 |

kavaDe bajjara dAragaLa honna kaMkaNada naDuve
kamalanABana tOLu toDeyaloppu tidditu |162|

haMci kaDubu pAyasa honna harivANada pUje
keMceyaru mADidaru saMtOShagaLiMda |163 |

sArisi muttina kAraNegaLanne racisi
tOraNava kaTTidare SiKara makarake | 164 |

j~jAtigaLella daSarAtrigaLAgutiralu
sUtakaMgaLane kaLedu suKadaliddaru |165 |

cinnada kopparigeyeLage kanneyaru nIru berasi
pannaMgaSayanage yaSOdege modale eredaru | 166 |

havaLadA kopparigeyoLage haradiyaru nIru berasi
balarAmagU rOhiNigU munna eredaru | 167 |

haruShadiMda naMdagOpa maMgaLa snAnava mADi
iMdramANikada maNeya mEle baMdu kuLitanu | 168 |

maMgaLa snAnava mADi naMdagOpa kuLLiralu
kaMdaravetti yaSOde rOhiNi baMdu kuLitaru | 169 |

gArgyarE modalAda allidda brAhmaNara karesi
puNyAhava mADidare vidhyuktadi |170|

misuNiya harivANadalli hosa muttu dANi tuMbi
yaSOdeya sutana nAmAMkitava baredanu | 171 |

cinnadA harivANadalli muttu ratna dANi tuMbi
rOhiNiya sutana nAmAMkitava baredanu | 172|

bala j~jAnadiMda AdityanAda kAraNadiMda
halAyudhake balarAmaneMdu karedaru |173|

mRutyu j~jAna AnaMda guNapUrNanAda kAraNadiMda
kRuShNaneMdu karedare saMtuShTa hariya | 174|

gOvugaLu nammanu rakShisuvanItanu
gOviMdaneMdaru avaru sadAnaMdana |175|

vAsudEva jagatinalli oLage horage vyAptanAda
vAsudEvaneMdaru dOSharahitana | 176|

vAsudEvana mAsanAma janmanAma viSvarUpa
naDeva nAmadiMda kRuShNaneMdu karedaru | 177 |

nAmakaraNa mADida naMdagOpa haruShadiMda
brAhmaNarige dakShiNe tAMbUlavanittanu |178|

SAlyAnna sUpa BakShya pAyasa dadhi dhRutavu
BAmeyaru mADidare saMtOShagaLiMda | 179|

mRuShTAnna BOjana neMTarige iShTarige
viprarige mADisi kRutakRutyanAdanu | 180|

naMdagOpa kRuShNa ninna kaMdaneMdu tiLiyabEDa
iMdirApatiye avanu saMdEhavillavu | 181 |

hatteMTu varuSha nInu kaShTapaTTu tapaviralu
matte ninna manege puruShOttamane baMdanu | 182 |

hanneraDu varuSha nInu artiyiMda tapaviralu
ninna bayake salisaleMdu pannaMga baMdanu | 183 |

narane balarAmanAda nArAyaNane kRuShNanAda
BUmiBAra iLuhaleMdu avatarisidaru |184 |

pannaMga balarAma paramAtma SrIkRuShNa
ninna putrareMba buddhi manadalli mUDade |185|

AcAryara mAtu viSvAsadiMda tiLidu gOpa
ItanIga muktige praKyAtaneMdanu |186 |

rAmakRuShNaribbarigU rOhiNi yaSOdeyaru
mANikada muttinABaraNaviTTaru |187|

KaLajanara tuLidu saMharisuva pAdagaLige
kirugejje kAlaheMDa vaniTaru |188 |

sarpana heDeya mEle nATyavADida harige
nUpuravaniTTare jAtiratunada |189|

jAnUru jaMGayalli mEle kaTi madhyadalli
mANikada maNiyanuDudAraviTTaru |190|

uDige gaMTe kirugejje jaDiva kAMcidAma
baDanaDuvigiTTaru mRuDana priyege |191 |

malaku ratna mANikada haraLu keMpu kettisida
haMsa mATadaraLOle SrIharige iTTaru | 192 |

Aru muttina bAvali aNimuttina caukuLi
rAmana kivige jariva kuMDalavaniTTaru |193|

eMTu muttina bAvali eMTu muttina caukuLi
kRuShNana kivige jariva kuMDalavaniTTaru 194|

bAlakiyarellaru mOhisabEkenuta
mUgutiyaniTTaru muddu kRuShNage |195 |

kusumanABage bAlakiyaru hasuraMgiya toDisidaru
balarAmage toDisidaru kariya aMgiya | 196 |

mitreyaru rAmakRuShNarige toTTilikkabEkenuta
eccarisidare bEga aMdu viSvakarmana |197 |

eMdina puNyavO eMdina sukRutavO
gOviMdana sEve tanage baMditeMdanu | 198 |

dEvara sEve eMdu bahaLa saMtOShadiMda
vILyava piDidanu aMdu viSvakarmanu |199|

prEmada pratimeyiMda cIni kelasadiMda
mANikada miLitAda haligegaLiMda |200 |

Leave a Reply

Your email address will not be published. Required fields are marked *

You might also like

error: Content is protected !!