ಶ್ರೀವಿಜಯದಾಸಾರ್ಯ ವಿರಚಿತ
ಸಾಧನ ಸುಳಾದಿ – ೮೬
(ಗರ್ವ – ಅಹಂಕಾರ ತ್ಯಜನಪೂರ್ವಕ
ಸಾಧನ ವೈರಾಗ್ಯ ಲಕ್ಷಣ)
ರಾಗ: ಷಣ್ಮುಖಪ್ರಿಯ
ಧ್ರುವತಾಳ
ಗರ್ವದಲಿ ಕೆಡದಿರು ಸರ್ವ ವಿಷಯದಲ್ಲಿ
ದುರ್ವ್ಯಸನ ಚೇಷ್ಟಿಗೆ ನಿರ್ವಿಣ್ಯನಾಗು
ತ್ಯರ್ವಿಲ್ಲದಂತೆ ತತ್ಪೂರ್ವದ ದುರಿತರಾಸಿ
ನೀರ್ವದು ಮಹ ಪರ್ವತಕಧಿಕ
ಖರ್ವ ಜನ್ಮಗಳಲ್ಲಿ ಊರ್ವಿಯ ಸುತ್ತಿದರು
ಊರ್ವಿಸುರರಾ ಜನನ ಸರ್ವದಸಾಧ್ಯ
ಗೀರ್ವಾಣ ಸಿದ್ಧ ಗಂಧರ್ವರು ಬಲ್ಲರು
ದುರ್ವ್ಯಸನ ತೊರೆದು ಓರ್ವನಾಗಿ
ಸರ್ವತ್ರ ಚಕ್ಷುನಾಮ ವಿಜಯವಿಟ್ಠಲರೇಯ
ಸರ್ವರಾಧಾರನೆನ್ನು ಸರ್ವಕಾಲದಲ್ಲಿ || ೧ ||
ಮಟ್ಟತಾಳ
ನಿರ್ಮಳ ಮನಸ್ಸಿನಲಿ ನಿರ್ಮತ್ಸರನಾಗಿ
ಚರ್ಮಾಂಗದ ಚಿಂತೆ ನಿರ್ಮೂಲವೆ ತೊರದು
ದುರ್ಮತಿ ಇಂದ್ರಿಯಂಗಳ ಮರ್ಮವನು ಮೆಟ್ಟಿ
ಧರ್ಮಾನುಕೂಲದ ಕರ್ಮ ಜ್ಞಾನೇಂದ್ರಿಯದಲ್ಲಿ
ಧರ್ಮಗುಪ್ತವಾದ ವಿಜಯವಿಟ್ಠಲ ರಂಗನ
ಪೆರ್ಮೆಯಿಂದಲಿ ಕರುಣವರ್ಮವ ತೊಡು ತೊಡು || ೨ ||
ರೂಪಕತಾಳ
ದೃಢಾಂಗನಾಗುವದು ಕಡೆಕಡೆಯಲಿ ಮನ
ಬಿಡದಿರು ಭಯವಾದರೆ ಭೀತಿಗೊಳದಿರು
ಕೆಡದಿರು ದುಷ್ಟ ವ್ಯಾಪಾರದಲ್ಲಿ ಬಿದ್ದು
ಒಡಲಿಗಾಗಿ ಪೋಗಿ ಕಾಯದಿರು ಜನರ
ಬಡವನಾಗಿ ಬ್ರಹ್ಮವಿದ್ಯ ವಿಜಯವಿಟ್ಠಲನ್ನ
ಅಡಿಗಳನು ಚೆನ್ನಾಗಿ ಹೃದಯದಲ್ಲಿರಿಸು || ೩ ||
ಝಂಪೆತಾಳ
ಚಂಚಲವನು ಬಿಟ್ಟು ಚತುರಾರ್ಥಕೊಳಗಾಗಿ
ಪಂಚೇಂದ್ರಿಯಂಗಳು ವಶಮಾಡಿಕೊಂಡು
ವಂಚನಿಯ ತೊರೆದು ಕಾಮಕ್ರೋಧ ಬಲದ ಪ್ರಾ –
ಪಂಚವನು ಬಿಡು ಬಿಡು ಜಡಮನವೆ
ಪಂಚದಶ ವಿಜಯವಿಟ್ಠಲನ ಪದಸೇವಿಗೆ
ಸಂಚಗಾರವ ಪಿಡಿಯೊ ವೈರಾಗ್ಯ ಪಡಿಯೋ || ೪ ||
ತ್ರಿವಿಡಿತಾಳ
ಹರಿಸೇವಿಗೆ ಅಂಗೀಕರಿಸಿ ಬಾಳಿದವಂಗೆ
ದುರಿತ ಪರ್ವತಂಗಳು ಪರಿಹಾರವೋ
ಭರದಿ ಸಿಡಿಲು ಬಂದು ಸಿರದಲ್ಲಿ ಎರಗಿದರು
ಅರಳಿದ ಮಲ್ಲಿಗಿ ಸರವಾಗಿ ತೋರೋದು
ತರುಬಿ ಮುನಿದ ಕಳ್ಳ ಪರಮ ಸಖನಾಗುವ
ಅರಸುವಾಪಮೃತ್ಯು ತೊಡರದಲೆ ದೂರದಲ್ಲಿ
ಸರಿದು ನಿಂದು ನಿರಾಕರಿಸಿ ಓಡುವದು
ಹರಿ ಭಕುತಿಗೆ ಒಂದರೆಮರೆ ಇಲ್ಲವೋ
ಶರಣಾಗತ ಸ್ತೋತ್ರ ವಿಜಯವಿಟ್ಠಲನ್ನ
ಕರುಣ ಸಂಪಾದಿಸಿ ಮರಣರಹಿತನಾಗೋ || ೫ ||
ಅಟ್ಟತಾಳ
ಕರ್ನ ಕೇಳಿಸದಂತೆ ಕಣ್ಣು ಕಾಣಿಸದಂತೆ
ಉನ್ನತ ಮದ ಹುಚ್ಚು ಹಿಡಿದಂತೆ ಪೋಗುತ್ತ
ತನ್ನ ಎಚ್ಚರಿಕೆ ತನಗೆ ಇಲ್ಲದಂತೆ
ಮಣ್ಣು ಸಮಾನವೆಂದು ಪವಳಿಸುತ್ತ
ಅನ್ಯರಿಗೆ ಬಲು ಹೇಸಿಕೆ ತೋರುತ್ತ
ತನ್ನೊಳಗಿದ್ದ ಪರಮಾತ್ಮನ ಧ್ಯಾನ –
ವನ್ನು ಮಾಡುತಾ ಸಾಧನ ಪೂರತಿಯಲ್ಲಿ
ಚಿನ್ನ ಮಲಿನದಲ್ಲಿ ಪೊಳೆದಂತೆ ತೋರುತ್ತ
ವರ್ನಾಶ್ರಮದೊಳು ರನ್ನ ನೀನಾಗು ಸು –
ವರ್ನನಾಮ ಸಿರಿ ವಿಜಯವಿಟ್ಠಲ ಸಂ –
ಪನ್ನನ ಮತ್ತೊಂದು ಕಣ್ಣಿನಿಂದಲಿ ನೋಡು || ೬ ||
ಆದಿತಾಳ
ನೆಳಲಿಗೆ ಅಂಜಿ ನಡೆದು ಅಳಕುವದು ಪರ ವಸ್ತಕ್ಕೆ
ಗಲಭೆಯಿಂದಲಿ ಪೋಗಿ ಸುಳಿಯದಿರು ಎಲೊ ಮನವೆ
ಜಲಜಾಕ್ಷ ವೀರಘ್ನ ವಿಜಯವಿಟ್ಠಲನಂಘ್ರಿ
ವೊಲಿಸಿ ಕೊಂಡಾಳಾಗಿದ್ದು ಉಳಿ(ದ)ದಿನ ಪೋಗಾಡು || ೭ ||
ಜತೆ
ದುಷ್ಕರ್ಮ ನೆನೆಸದೆ ದೂರಾಗು ಜನನಕ್ಕೆ
ಪುಷ್ಕರಾಕ್ಷನಾಮ ವಿಜಯವಿಟ್ಠಲನೊಲಿಸೊ ||
SrIvijayadAsArya viracita
sAdhana suLAdi – 86
(garva – ahaMkAra tyajanapUrvaka
sAdhana vairAgya lakShaNa)
rAga: ShaNmuKapriya
dhruvatALa
garvadali keDadiru sarva viShayadalli
durvyasana cEShTige nirviNyanAgu
tyarvilladaMte tatpUrvada duritarAsi
nIrvadu maha parvatakadhika
Karva janmagaLalli Urviya suttidaru
UrvisurarA janana sarvadasAdhya
gIrvANa siddha gaMdharvaru ballaru
durvyasana toredu OrvanAgi
sarvatra cakShunAma vijayaviTThalarEya
sarvarAdhAranennu sarvakAladalli || 1 ||
maTTatALa
nirmaLa manassinali nirmatsaranAgi
carmAMgada ciMte nirmUlave toradu
durmati iMdriyaMgaLa marmavanu meTTi
dharmAnukUlada karma j~jAnEMdriyadalli
dharmaguptavAda vijayaviTThala raMgana
permeyiMdali karuNavarmava toDu toDu || 2 ||
rUpakatALa
dRuDhAMganAguvadu kaDekaDeyali mana
biDadiru BayavAdare BItigoLadiru
keDadiru duShTa vyApAradalli biddu
oDaligAgi pOgi kAyadiru janara
baDavanAgi brahmavidya vijayaviTThalanna
aDigaLanu cennAgi hRudayadallirisu || 3 ||
JaMpetALa
caMcalavanu biTTu caturArthakoLagAgi
paMcEMdriyaMgaLu vaSamADikoMDu
vaMcaniya toredu kAmakrOdha balada prA –
paMcavanu biDu biDu jaDamanave
paMcadaSa vijayaviTThalana padasEvige
saMcagArava piDiyo vairAgya paDiyO || 4 ||
triviDitALa
harisEvige aMgIkarisi bALidavaMge
durita parvataMgaLu parihAravO
Baradi siDilu baMdu siradalli eragidaru
araLida malligi saravAgi tOrOdu
tarubi munida kaLLa parama saKanAguva
arasuvApamRutyu toDaradale dUradalli
saridu niMdu nirAkarisi ODuvadu
hari Bakutige oMdaremare illavO
SaraNAgata stOtra vijayaviTThalanna
karuNa saMpAdisi maraNarahitanAgO || 5 ||
aTTatALa
karna kELisadaMte kaNNu kANisadaMte
unnata mada huccu hiDidaMte pOgutta
tanna eccarike tanage illadaMte
maNNu samAnaveMdu pavaLisutta
anyarige balu hEsike tOrutta
tannoLagidda paramAtmana dhyAna –
vannu mADutA sAdhana pUratiyalli
cinna malinadalli poLedaMte tOrutta
varnASramadoLu ranna nInAgu su –
varnanAma siri vijayaviTThala saM –
pannana mattoMdu kaNNiniMdali nODu || 6 ||
AditALa
neLalige aMji naDedu aLakuvadu para vastakke
galaBeyiMdali pOgi suLiyadiru elo manave
jalajAkSha vIraGna vijayaviTThalanaMGri
volisi koMDALAgiddu uLi(da)dina pOgADu || 7 ||
jate
duShkarma nenesade dUrAgu jananakke
puShkarAkShanAma vijayaviTThalanoliso ||
Leave a Reply