ಶ್ರೀ ವಿಜಯದಾಸಾರ್ಯ ವಿರಚಿತ
ಸಾಧನ ಸುಳಾದಿ – ೮೭
(ದುಷ್ಟ ಕರ್ಮಾಚರಣೆ ತ್ಯಜನ ಮಾಡಿ ,
ಶ್ರೀಹರಿ ಕರ್ತೃತ್ವ ಸ್ಮರಣೆ ಪೂರ್ವಕ ಸಕಲ ಸುಕರ್ಮಾಚರಣೆಯೇ ಮಡಿ)
ರಾಗ: ಕಾಂಬೋಧಿ
ಧ್ರುವತಾಳ
ಮಡಿ ಮಾಡುವದೊ ಮಾನವ ನಡತಿ ನುಡತಿ ತಿಳಿದು
ಬಿಡದೆ ಪ್ರತಿದಿನ ನಿರ್ಮಳದಲ್ಲಿ
ಮಡಿ ನೀರೊಳಗೆ ಒಗೆದು ಮಡಿಸಿ ಬಗೆಬಗೆಯಿಂದ
ಮಡಿಕಿ ಹಾಕಿ ಉಟ್ಟರೆ ಮಡಿಯಲ್ಲ ಮಡಿಯಲ್ಲ
ಮಡಿವಾಳನಂತೆ ಮಲಿನ ಕಡೆ ಮಾಡಿದರೆ ವಸ್ತ್ರ
ಬಿಡು ಶುಚಿ ಆಗುವದೆ ದೃಢದಲ್ಲಿ ತಿಳಿದು ನೋಡು
ಮಡಿ ನೀರೊಳಗೆ ಇಲ್ಲ ಮಡಿ ವಸನದೊಳಗಿಲ್ಲ
ಮಡಿ ದೇಶದೊಳಗಿಲ್ಲ ಮಡಿ ನಭದಲ್ಲಿ ಇಲ್ಲ
ಮಡಿ ಮಾಡುವ ಉಪಾಯ ಒಡನೆ ತನ್ನಲ್ಲಿ ಉಂಟು
ಪೊಡವಿ ತಿರುಗ ಸಲ್ಲ ಅಡಿಗಡಿಗೆ ದಣಿವದಲ್ಲ
ಅಡಿಗಳಿಟ್ಟು ನೋಡಿ ನಡೆದರೆ ಮಡಿ ಅಲ್ಲ
ಮಡಿಯಾಗಿಪ್ಪೆನೆಂದು ಉಡಿಗೆ ಮುದುರಿಕೊಂಡು
ಎಡೆಗಡಿಗ್ಹಾರಿದರೆ ಮಡಿಯಾಗುವದೇನೊ ಮಾನವ
ಕಡುಮುದ್ದುಮೋಹನ್ನ ವಿಜಯವಿಟ್ಠಲರೇಯನ
ಅಡಿಗಳಿಗೆರಗದವನ ಮಡಿ ಯಾತಕೆ ಬಪ್ಪದೊ || ೧ ||
ಮಟ್ಟತಾಳ
ಕಾಮ ಕ್ರೋಧದಲಿ ತಿರುಗಲು ಮಡಿಯಲ್ಲ
ಕಾಮನ ಬಳಗಕ್ಕೆ ಸೋಲಲು ಮಡಿಯಲ್ಲ
ತಾಮಸ ಮತಿಯಲಿ ಇದ್ದರು ಮಡಿಯಲ್ಲ
ಹೇಮದ ಬಯಕೆಯಲಿ ಚರಿಸಲು ಮಡಿಯಲ್ಲ
ಸ್ವಾಮಿ ದ್ರೋಹವ ಮಾಡಿ ನಡೆದರೆ ಮಡಿಯಲ್ಲ
ಯಾಮ ಯಾಮಕೆ ಹರಿಯ ಮರೆದರೆ ಮಡಿಯಲ್ಲ
ನಾಮವ ಧರಿಸದಿದ್ದರೆ ಅದು ಮಡಿಯಲ್ಲ
ನೇಮ ನಿತ್ಯಗಳ ತೊರೆದರೆ ಮಡಿಯಲ್ಲ
ಭೂಮಿಪಾಲಕ ನಮ್ಮ ವಿಜಯವಿಟ್ಠಲರೇಯನ
ನಾಮವನು ಮರೆದವನು ಎಂದಿಗೂ ಮಡಿಯಲ್ಲ || ೨ ||
ತ್ರಿವಿಡಿತಾಳ
ಹಸುವ ಕಾಲಲಿ ಒದೆದರೆ ಮಡಿ ಅಲ್ಲ
ಹಸುಮಕ್ಕಳ ನೂಕಿಬಿಟ್ಟರೆ ಮಡಿ ಅಲ್ಲ
ವಶವಾದ ನಾರಿ ತೊರೆದರೆ ಮಡಿಯಲ್ಲ
ವಸುಧಿಸುರರ ಕಂಡು ಬೈದರೆ ಮಡಿ ಅಲ್ಲ
ವಿಷವನಿಕ್ಕಿ ಜನರ ಕೊಲ್ಲಲು ಮಡಿ ಅಲ್ಲ
ನಿಶಿಯಲ್ಲಿ ಉಂಡವನು ಎಂದಿಗೆ ಮಡಿ ಅಲ್ಲ
ಹುಸಿಯ ಬೊಗಳುವಂಗೆ ಆವದು ಮಡಿ ಅಲ್ಲ
ಅಸೂಯ ಬಟ್ಟುಕೊಂಡರೆ ಅದು ಮಡಿ ಅಲ್ಲ
ಅಸುರ ಕರ್ಮವು ಆಚರಿಸಲು ಅದು ಮಡಿ ಅಲ್ಲ
ಅಶನ ಘಾತಕನಾಗಿ ಇದ್ದವಗೆ ಮಡಿಯಲ್ಲ
ದಶಮಿ ದ್ವಾದಶಿ ಕನ್ಯಾದಾನ ಮಾಡೆ ಮಡಿಯಲ್ಲ
ಕುಶಲಮೂರುತಿ ನಮ್ಮ ವಿಜಯವಿಟ್ಠಲರೇಯನ
ಬೆಸನೆ ಭಕುತಿಯ ಬೇಡದಿದ್ದರೆ ಮಡಿ ಅಲ್ಲ || ೩ ||
ಅಟ್ಟತಾಳ
ಸಕೇಶಿ ಕೈಯಿಂದ ಉಂಡರೆ ಮಡಿಯಲ್ಲ
ಸಿಕ್ಕಿದವರ ಬಳಲಿಸಿದರೆ ಮಡಿಯಲ್ಲ
ವಾಕು ಬದ್ದವಿಲ್ಲದವನಿಗೆ ಮಡಿಯಲ್ಲ
ಶ್ರೀಕಾಂತನ ಸ್ಮರಣೆ ಮರೆದಾರೆ ಮಡಿ ಅಲ್ಲ
ಹೇಕೆತನ ಕಲಿತವಗೆ ಮಡಿ ಅಲ್ಲ
ಬೇಕೆಂದು ದುರಾನ್ನ ಉಂಡರೆ ಮಡಿ ಅಲ್ಲ
ಏಕಾಂತ ಧ್ಯಾನವು ಇಲ್ಲದೆ ಮಡಿ ಅಲ್ಲ
ಪಾಕಶಾಸನ ವಂದ್ಯ ವಿಜಯವಿಟ್ಠಲರೇಯ
ಸಾಕುವನೆನ್ನದಿರೆ ಸಚೈಲ ಮಡಿ ಅಲ್ಲ || ೪ ||
ಆದಿತಾಳ
ಗುರುಗಳಿಗೆ ನಮಿಸದಿದ್ದರದು ಮಡಿ ಅಲ್ಲ
ದುರುಳ ಜನರ ಸಂಗತಿ ಇದ್ದರೆ ಮಡಿ ಅಲ್ಲ
ಕರ ಕೆರೆ ಸತಿಯಿಂದ ಧ್ಯಾನಾದಿಗೆ ಮಡಿ ಅಲ್ಲ
ತರಳೆ ದೃಷ್ಟಣಿಗೆ ಕೇವಲ ಮಡಿ ಅಲ್ಲ
ಹರಿ ನೈವೇದ್ಯವನು ಕೊಳದಲೆ ಮಡಿಯಲ್ಲ
ನೆರೆಮನೆ ಸೇರಿಕೊಂಡವನಿಗೆ ಮಡಿಯಲ್ಲ
ಪರಮಶುದ್ದ ವಿಜಯವಿಟ್ಠಲನ
ಚರಣದಲಿ ರತಿ ಇಲ್ಲದಲೆ ಮಡಿ ಅಲ್ಲ || ೫ ||
ಜತೆ
ಕೋಪದವನ ಸಂಗಡದಲಿರೆ ಮಡಿಯಲ್ಲ
ಶ್ರೀಪತಿ ವಿಜಯವಿಟ್ಠಲನೊಲಿಯದಿರೆ ಮಡಿಯಲ್ಲ ||
SrI vijayadAsArya viracita
sAdhana suLAdi – 87
(duShTa karmAcaraNe tyajana mADi ,
SrIhari kartRutva smaraNe pUrvaka sakala sukarmAcaraNeyE maDi)
rAga: kAMbOdhi
dhruvatALa
maDi mADuvado mAnava naDati nuDati tiLidu
biDade pratidina nirmaLadalli
maDi nIroLage ogedu maDisi bagebageyiMda
maDiki hAki uTTare maDiyalla maDiyalla
maDivALanaMte malina kaDe mADidare vastra
biDu Suci Aguvade dRuDhadalli tiLidu nODu
maDi nIroLage illa maDi vasanadoLagilla
maDi dESadoLagilla maDi naBadalli illa
maDi mADuva upAya oDane tannalli uMTu
poDavi tiruga salla aDigaDige daNivadalla
aDigaLiTTu nODi naDedare maDi alla
maDiyAgippeneMdu uDige mudurikoMDu
eDegaDig~hAridare maDiyAguvadEno mAnava
kaDumuddumOhanna vijayaviTThalarEyana
aDigaLigeragadavana maDi yAtake bappado || 1 ||
maTTatALa
kAma krOdhadali tirugalu maDiyalla
kAmana baLagakke sOlalu maDiyalla
tAmasa matiyali iddaru maDiyalla
hEmada bayakeyali carisalu maDiyalla
svAmi drOhava mADi naDedare maDiyalla
yAma yAmake hariya maredare maDiyalla
nAmava dharisadiddare adu maDiyalla
nEma nityagaLa toredare maDiyalla
BUmipAlaka namma vijayaviTThalarEyana
nAmavanu maredavanu eMdigU maDiyalla || 2 ||
triviDitALa
hasuva kAlali odedare maDi alla
hasumakkaLa nUkibiTTare maDi alla
vaSavAda nAri toredare maDiyalla
vasudhisurara kaMDu baidare maDi alla
viShavanikki janara kollalu maDi alla
niSiyalli uMDavanu eMdige maDi alla
husiya bogaLuvaMge Avadu maDi alla
asUya baTTukoMDare adu maDi alla
asura karmavu Acarisalu adu maDi alla
aSana GAtakanAgi iddavage maDiyalla
daSami dvAdaSi kanyAdAna mADe maDiyalla
kuSalamUruti namma vijayaviTThalarEyana
besane Bakutiya bEDadiddare maDi alla || 3 ||
aTTatALa
sakESi kaiyiMda uMDare maDiyalla
sikkidavara baLalisidare maDiyalla
vAku baddavilladavanige maDiyalla
SrIkAMtana smaraNe maredAre maDi alla
hEketana kalitavage maDi alla
bEkeMdu durAnna uMDare maDi alla
EkAMta dhyAnavu illade maDi alla
pAkaSAsana vaMdya vijayaviTThalarEya
sAkuvanennadire sacaila maDi alla || 4 ||
AditALa
gurugaLige namisadiddaradu maDi alla
duruLa janara saMgati iddare maDi alla
kara kere satiyiMda dhyAnAdige maDi alla
taraLe dRuShTaNige kEvala maDi alla
hari naivEdyavanu koLadale maDiyalla
neremane sErikoMDavanige maDiyalla
paramaSudda vijayaviTThalana
caraNadali rati illadale maDi alla || 5 ||
jate
kOpadavana saMgaDadalire maDiyalla
SrIpati vijayaviTThalanoliyadire maDiyalla ||
Leave a Reply