ಶ್ರೀ ವಿಜಯದಾಸಾರ್ಯ ವಿರಚಿತ
ಸಾಧನ ಸುಳಾದಿ – ೮೮
(ಪರಮಾತ್ಮ , ತದ್ಭಕ್ತರು ತಾತ್ವಿಕರ ವಿನಾ
ಹಕ್ಕಲ ಅನ್ಯದೇವತಾ ಆರಾಧನಾ ವರ್ಜ.)
ರಾಗ: ಕೇದಾರಗೌಳ
ಧ್ರುವತಾಳ
ಅನ್ಯದೇವತೆಗಳ ಕಣ್ಣೆತ್ತಿ ನೋಡದಿರು
ಪುಣ್ಯವಿಲ್ಲವೊ ಮನವೆ ಎನ್ನ ಮತಕೆ ಹಿತ
ಸುಣ್ಣ ಕರ್ದಮ ಕ್ಷೀರವನ್ನು ಕೂಡಿಸಿ ದಿ –
ವ್ಯಾನ್ನದೊಡ ಉಂಬೊಕನ್ನನಂತೆ ಕಾಣಿರೊ
ಅನ್ಯಾಯವಾಹುದು ಅರಣ್ಯದೊಳು ಪೊಕ್ಕು
ಮಣ್ಣು ತೂರಿ ತೂರಿ ಧಾನ್ಯ ಆರಿಸಿದಂತೆ
ಕನ್ನಡಿ ತಿರಿವಿಡಿದು ತನ್ನ ನೋಡಿಕೊಂಡಂತೆ
ಖಿನ್ನವಾಗದಲೆ ಪಾವನ್ನ ಎಂದಿಗೆ ಇಲ್ಲ
ಭಿನ್ನ ದೈವದಗಂಡ ವಿಜಯವಿಟ್ಠಲನಂಘ್ರಿ –
ಯನ್ನು ಭಜಿಸುವಂಗೆ ಸನುಮತವಲ್ಲವೆನ್ನಿ || ೧ ||
ಮಟ್ಟತಾಳ
ಎಲ್ಲಾಯಿ ಯಕನಾತಿ ಬನದಶಂಕರಿ
ಮಲ್ಲಗ ಜಟ್ಟಿಂಗ ಮಾಳಿಗೆ ಮನಿದೇವಿ
ಕಲ್ಲದ ಚವಡಿಕಿ ಮಾರಿ ಮಸಣೆ ಜಕ್ಕಿ
ಸಲ್ಲದ ಹಿರಿಯಣ್ಣ ಗರುವ ಜಲದೇವಿ
ಕೊಲ್ಲುವ ಪೋತಗನು ಕಚ್ಚಿನ ಗಡಿಗೆಮ್ಮ
ಸುಳ್ಳು ಚಂದಮ್ಮನು ಖಂಡಿಕೇತಾರಯ್ಯಾ
ಬೊಳ್ಳೊಟ್ಟು ಬೊಗಳುವ ಅಡವಿಯ ಮಹಮಂತ
ಅಲ್ಲಾದ ಮಹದೇವಿ ತುಳಜಾಭವಾನಿ
ಬೆಲ್ಲಾದ ಬೇಲಾಯಿ ಕೋಣ ಕುರಿ ವೈರಿ
ಹಳ್ಳದ ಜೋಗಾಯಿ ಬೇತಾಳ ಬೊಮ್ಮಯ್ಯಾ
ಮುಳ್ಳಿನ ಮಹಾವೀರ ಸಂಕಟ ಚೌತಿ(ಜ್ಯೋತಿ)ಗನು
ಉಳ್ಳಾ ಮೂಕಾರತಿ ಮುಂಡೆ ಚಾಮುಂಡಣಿ
ಹಲ್ಲಿನ ಜೋಕುಮಾರ ಕರಿಯಾ ಶೀರಿಯಾ ಶಟವಿ
ಗುಳ್ಳಕೆ ಪೊಳಕಾಯಿ ಅಗಸರ ಮನೆ ಕೊಡತಿ
ಹೊಲ್ಲಿ ಮನವುಳ್ಳ ನರಸ ಸಕ್ಕರಿಗಾ
ಜೊಳ್ಳುಮತಿಯ ಕೊಡುವ ಜಂಪೆ ಜಡದೈವ
ಬಳ್ಳಿ ಉಡಿಗೆ ಉಡುವ ಉಟ್ಟಿಗೆ ಪಟ್ಲಾಯಿ
ಉಳ್ಳೆ ಮೆಲುವ ಹೀನ ಮದ್ಯಪಾನದ ಭಾಂಡ
ಕೊಳ್ಳೆ ಪಚ್ಚಿಸಿಕೊಂಬ ದೀಪದ ಮಾರಾಯೀ
ಎಲ್ಲರು ದಾಟುವ ಹೊಸ್ತಲು ಬುಡ್ಡಗನು
ಕಲ್ಲು ಮೂರರಿಂದ ತೋಟದ ಹೆಬ್ಬಯ್ಯಾ
ಬುಳ್ಳನು ಸುಂಕ್ಲಾಯಿ ಹಾದಿಬೀದಿ ಒಡಿಯಾ
ಬಿಲ್ಲಿಯಾ ಮಹಕೆಂಚೆ ಮಾತಂಗಿ ಬಕ್ಕಾಯಿ
ಎಲ್ಲ ನಾನಾಕದಾ ಕಳ್ಳದೇವತೆಗಳ
ನಿಲ್ಲದೆ ಒಲಿಸಿದರು ಪೊಳ್ಳಲ್ಲದೆ ಗತಿ
ಇಲ್ಲವೊ ಎಂದಿಗೂ
ಚಿಲ್ಲರ ದೈವಕ್ಕೆ ಬಲ್ಲಿದ ವಿಜಯವಿ –
ಟ್ಠಲ್ಲನಲ್ಲದೆ ಪ್ರತಿ ಇಲ್ಲವೊ ಆವಲ್ಲಿ || ೨ ||
ತ್ರಿವಿಡಿತಾಳ
ಬಿನಗು ದೇವತಿಗಳಿಗೆ ಇನಿತಾದರು ಬಾಗಿ
ಕನಸಿನೊಳಾದರು ನೆನಿಸಲಾಗದು ಮನವೆ
ನಿನಗೇನು ಉಪಹತಿಯನು ಮಾಡಿದರೆ ಪ –
ಲ್ಲನು ಉಚ್ಚ ಬಡಿ ಇದಕೆ ಅನುಮಾನ ಸಲ್ಲದು
ಘನತಿಯ ಪಿಡಿದು ತೊತ್ತಿನ ಮಕ್ಕಳನ ಜೀ –
ರಣ ಕಂಟಕಾರಿಯಲ್ಲಿ ಹಣಿದು ಹಣಿಯಬೇಕು
ಹೆಣೆಗಾಡಿದರೆ ನಿನ್ನೊಡನೆ ಮಾರಿಗಳನ್ನು
ತೃಣವೆಂದು ಬಗಿದು ಗಣನೆ ಮಾಡದಿರಬೇಕು
ಜನುಮಾನಂತ ಜನುಮ ದಿನದೊಳಗೆ ಒಂದು
ಕ್ಷಣವಾದರೂ ಅರ್ಚನೆ ಸಲ್ಲ ದುಷ್ಟರಿಗೆ
ತನುಮನ ಒಡಿವೆ ವಾಹನ ಧನ ಸರ್ವವು
ಮುನಿದೆಲ್ಲವನು ಶೆಳದೂ ದಣಿಸಿದ ಕಾಲಕ್ಕೂ
ಮಣಿಯದಿರವರಿಗೆ ಶಣಸುತ್ತ ಧೈರ್ಯದ
ಖಣಿಯಾಗಿ ಬಾಳು ಸಾಧನವನ್ನು ಮಾಡುತ್ತ
ಸನಕಾದಿಗಳ ದಾತಾ ವಿಜಯವಿಟ್ಠಲನ್ನ
ಗುಣವ ಕೊಂಡಾಡುತ್ತ ಭಣಗುವದದು ಕಳಿಯೋ || ೩ ||
ಅಟ್ಟತಾಳ
ಹೊಟ್ಟೆಕಿಚ್ಚಿನ ದೈವವೆಷ್ಟು ಪೂಜಿಸಲೇನು
ಪುಟ್ಟದು ವೈರಾಗ್ಯ ನಿಷ್ಠೆಯಾದಿಗಳು
ಬೆಟ್ಟದ ಕೊನೆಯಿಂದ ಸೃಷ್ಟಿಗುರುಳಿದಂತೆ
ನಷ್ಟವಲ್ಲದೆ ಎಲ್ಲ ಇಷ್ಟಪ್ರಾಪುತಿ ಇಲ್ಲಿ
ಬಟ್ಟು ನೀರೊಳಗದ್ದಿ ನೆಟ್ಟನೆ ಬಾಯೊಳ –
ಗಿಟ್ಟು ಚಪ್ಪರಿಸಲು ಪುಟ್ಟುವದೆ ಸುಖ
ತಟ್ಟದು ಎಂದಿಗೂ ಭ್ರಷ್ಟ ದೇವರುಗಳ
ಮುಟ್ಟಿದರೆ ಯಮ ಕುಟ್ಟಿ ತಮಸಿನೊಳ –
ಗಿಟ್ಟು ಬಿಡುವನು ಧಿಟ್ಟಮೂರುತಿ ಜಗ –
ಜಟ್ಟಿ ಶ್ರೀವಿಜಯವಿಟ್ಠಲನ ಪಾದ
ಬಿಟ್ಟರೆ ಗತಿ ಇಲ್ಲ ಬಿಟ್ಟರೆ ಗತಿ ಇಲ್ಲವೊ || ೪ ||
ಆದಿತಾಳ
ಈ ಪರಿ ಇರಲು ಸ್ವರೂಪ ಜ್ಞಾನವೆ ಉಂಟು
ಅಪಾರ ಜನುಮದ ಪಾಪ ಸಂಹಾರವೊ
ಶ್ರೀಪತಿ ಭಜನಿಗೆ ಸೋಪಾನ ಬಿಗಿದಂತೆ
ಅಪವರ್ಗದ ತನಕ ಪಥ ನಿಜವೆನ್ನಿ
ಚೀಪುಗೂಲಿಯ ದೈವ ಪಾಡಿದರನ್ನ
ತಾಪತ್ರಯವಲ್ಲದೆ ಪೋಪದೆ ದುಷ್ಕರ್ಮ
ಭೂಪಾರದೊಳಗಿದ್ದ ಧೂಪದ ಹೊಗೆ ಸರ್ವ
ಲೇಪವಾದರು ತಾರಾಪಥಕೆ ಸಮವುಂಟೆ
ತ್ಯಾಪೆ ಕಂಗಾಲ ದೈವಗಳ ಪ್ರೀತಿ ಬಡಿಸಿದರು
ರೂಪಹೀನವಲ್ಲದೆ ಆಪತ್ತು ಹೋಗದಯ್ಯಾ
ಆಪನ್ನಪಾಲಾ ನಮ್ಮ ವಿಜಯವಿಟ್ಠಲ ಸಪುತ –
ದ್ವೀಪಾಧಿಪತಿಪ ಎಂದು ದೃಢವಾಗಿ ನಂಬು ಮನವೆ || ೫ ||
ಜತೆ
ಹಕ್ಕಲ ದೈವಗಳ ಹಾದಿಗೆ ಬೇಲಿ ಬಡದು
ರಕ್ಕಸಾಂತಕ ವಿಜಯವಿಟ್ಠಲನ್ನ ಕೊಂಡಾಡು ||
SrI vijayadAsArya viracita
sAdhana suLAdi – 88
(paramAtma , tadBaktaru tAtvikara vinA
hakkala anyadEvatA ArAdhanA varja.)
rAga: kEdAragauLa
dhruvatALa
anyadEvategaLa kaNNetti nODadiru
puNyavillavo manave enna matake hita
suNNa kardama kShIravannu kUDisi di –
vyAnnadoDa uMbokannanaMte kANiro
anyAyavAhudu araNyadoLu pokku
maNNu tUri tUri dhAnya ArisidaMte
kannaDi tiriviDidu tanna nODikoMDaMte
KinnavAgadale pAvanna eMdige illa
Binna daivadagaMDa vijayaviTThalanaMGri –
yannu BajisuvaMge sanumatavallavenni || 1 ||
maTTatALa
ellAyi yakanAti banadaSaMkari
mallaga jaTTiMga mALige manidEvi
kallada cavaDiki mAri masaNe jakki
sallada hiriyaNNa garuva jaladEvi
kolluva pOtaganu kaccina gaDigemma
suLLu caMdammanu KaMDikEtArayyA
boLLoTTu bogaLuva aDaviya mahamaMta
allAda mahadEvi tuLajABavAni
bellAda bElAyi kONa kuri vairi
haLLada jOgAyi bEtALa bommayyA
muLLina mahAvIra saMkaTa cauti(jyOti)ganu
uLLA mUkArati muMDe cAmuMDaNi
hallina jOkumAra kariyA SIriyA SaTavi
guLLake poLakAyi agasara mane koDati
holli manavuLLa narasa sakkarigA
joLLumatiya koDuva jaMpe jaDadaiva
baLLi uDige uDuva uTTige paTlAyi
uLLe meluva hIna madyapAnada BAMDa
koLLe paccisikoMba dIpada mArAyI
ellaru dATuva hostalu buDDaganu
kallu mUrariMda tOTada hebbayyA
buLLanu suMklAyi hAdibIdi oDiyA
billiyA mahakeMce mAtaMgi bakkAyi
ella nAnAkadA kaLLadEvategaLa
nillade olisidaru poLLallade gati
illavo eMdigU
cillara daivakke ballida vijayavi –
TThallanallade prati illavo Avalli || 2 ||
triviDitALa
binagu dEvatigaLige initAdaru bAgi
kanasinoLAdaru nenisalAgadu manave
ninagEnu upahatiyanu mADidare pa –
llanu ucca baDi idake anumAna salladu
Ganatiya piDidu tottina makkaLana jI –
raNa kaMTakAriyalli haNidu haNiyabEku
heNegADidare ninnoDane mArigaLannu
tRuNaveMdu bagidu gaNane mADadirabEku
janumAnaMta januma dinadoLage oMdu
kShaNavAdarU arcane salla duShTarige
tanumana oDive vAhana dhana sarvavu
munidellavanu SeLadU daNisida kAlakkU
maNiyadiravarige SaNasutta dhairyada
KaNiyAgi bALu sAdhanavannu mADutta
sanakAdigaLa dAtA vijayaviTThalanna
guNava koMDADutta BaNaguvadadu kaLiyO || 3 ||
aTTatALa
hoTTekiccina daivaveShTu pUjisalEnu
puTTadu vairAgya niShTheyAdigaLu
beTTada koneyiMda sRuShTiguruLidaMte
naShTavallade ella iShTaprAputi illi
baTTu nIroLagaddi neTTane bAyoLa –
giTTu capparisalu puTTuvade suKa
taTTadu eMdigU BraShTa dEvarugaLa
muTTidare yama kuTTi tamasinoLa –
giTTu biDuvanu dhiTTamUruti jaga –
jaTTi SrIvijayaviTThalana pAda
biTTare gati illa biTTare gati illavo || 4 ||
AditALa
I pari iralu svarUpa j~jAnave uMTu
apAra janumada pApa saMhAravo
SrIpati Bajanige sOpAna bigidaMte
apavargada tanaka patha nijavenni
cIpugUliya daiva pADidaranna
tApatrayavallade pOpade duShkarma
BUpAradoLagidda dhUpada hoge sarva
lEpavAdaru tArApathake samavuMTe
tyApe kaMgAla daivagaLa prIti baDisidaru
rUpahInavallade Apattu hOgadayyA
ApannapAlA namma vijayaviTThala saputa –
dvIpAdhipatipa eMdu dRuDhavAgi naMbu manave || 5 ||
jate
hakkala daivagaLa hAdige bEli baDadu
rakkasAMtaka vijayaviTThalanna koMDADu ||
Leave a Reply