Composer : Shri Vijayadasaru
ಶ್ರೀಕೃಷ್ಣ ನಿಂದಾಸ್ತುತಿ ಸುಳಾದಿ
ರಾಗ: ಸಾರಂಗ
ಧ್ರುವತಾಳ
ಅಂಜಿಸುವದೇನೋ ಪರಂಜಳವಾಗಿರದೇ
ಕೆಂಜಡಿಯನೊಡಿಯಾ ಯಾದವರೊಡಿಯಾ
ಎಂಜಲ ಉಂಡು ಗುಲಗಂಜಿಯ ದಂಡಿಯ ಧರಿಸಿ
ಗಂಜಿಗೂಳನ್ನು ಕುಡಿದದ್ದು ಮರದಿಯಾ
ಭುಂಜಿಸಿ ಪರವು ಮಾಡಿ ತಂದ ವಾಗರಕೆ ನೀ
ಅಂಜದೆ ಏಳು ದಿವಸ ಗಿರಿಯ ಪೊತ್ತೇ
ಕಿಂಚನ ನಿನ್ನದು ನಿನಗಂಜಲ್ಯಾಕೇ ಧ –
ನಂಜಯ ನಾಮಾ ಹರಿ ವಿಜಯವಿಟ್ಠಲ ಗೊಲ್ಲ || ೧ ||
ಮಟ್ಟತಾಳ
ಬಾಲಕತನದಲ್ಲಿ ಪಾಲು ಮೊಸರು ಕದ್ದು
ಕೋಲು ಬಡಿಗೆಯಿಂದ ಕೊಲಿಯ ಕೊಲ್ಲಿಸಿಕೊಂಡೆ
ಕಾಲನು ವರಳಿಗೆ ಬೀಳು ಕಟ್ಟಿಸಿಕೊಂಡು
ಏಳಲವಾದಿಯೊ ಗೊಲ್ಲ ಬಾಲೇರಿಗೆ ಎಲ್ಲ
ಮೂಲೋಕವು ಬಿಡದೆ ಆಳುವ ಧೊರೆತನವು
ಏಳಲವಾಯಿತೊ ವಿಜಯವಿಟ್ಠಲ ಶ್ರೇಷ್ಠಾ || ೨ ||
ರೂಪಕತಾಳ
ರಕ್ಕಸಗಂಜಿ ಮುಚುಕುಂದನ ಮೊರೆ ಬಿದ್ದೆ
ರಕ್ಕಸಗಂಜಿ ಸಾಗರದೊಳು ಪುರ ಬಿಗಿದೆ
ರಕ್ಕಸಗಾಗಿ ವಿಕಾರ ಮೊಗನಾದಿ
ರಕ್ಕಸಗಾಗಿ ಕೋಡಗ ಬಲ ನೆರಹಿದೆ
ರಕ್ಕಸಾಂತಕ ನಿನ್ನ ಮಕ್ಕಳಾಟಕೆ ದೇ –
ವಕ್ಕಳ ಮನಸ್ಸಿಗೆ ಸಿಕ್ಕಿದೆಂತೆಂಬೋರು
ಮಕ್ಕಳ ಬೇಡಿ ನೀ ಮುಕ್ಕಣ್ಣನೊಲಿಸಿದೆ
ಠಕ್ಕು ಮಾಯಾತನ ಕಕ್ಕುಜ ಗೊಂಬೆನೊ
ಚಿಕ್ಕವನ ಹಿರಿಯನ ಮಾಡಿ ಪುಣ್ಯವ
ದಕ್ಕಿಸಿಕೊಂಡ ಶ್ರೀವಿಜಯವಿಟ್ಠಲ ಪುಂಡ || ೩ ||
ಝಂಪಿತಾಳ
ಅಳಕುವವಗೆ ಕಾವಳದೊಳು ಹುಲ್ಲ ಸರವೇ
ತುಳಿದರೆ ಪೊಳೆವೊದು ಫಣಿ ವೋಲು
ಅಳುಕದವಗೆ ಜಲಧಿ ಮೊಳಕಾಲು ಉದಕವೋ
ಅಳುಕುವದೇನು ನಿನ್ನಯ ಭೀತಿಗೆ
ಇಳಿಯ ಮುಣಗಿದವಗೆ ಛಳಿಯ ಪರವೇನು ಸಿ –
ಡಲಿ ಗಂಜದವನು ಹೆಗ್ಗೋಳಿಗಂಜುವನೆ
ಬಲವಾಗಿ ಎನ್ನೆಡಬಲದಲಿ ನಿನ್ನ ನಾಮಗಳು
ಪಾಲಿಸುತಿರೆ ಚಲಿಸಲ್ಯಾತಕೋ ದೇವಾ
ಕುಲಿಶ ಪಾಪದ ಗಿರಿಗೆ ವಿಜಯವಿಟ್ಠಲ ಕೃಷ್ಣ
ಕಲಕಾಲದಂತೆ ನೋಡದ ಹೊಸ ಪರಿ ಏನೋ || ೪ ||
ತ್ರಿವಿಡಿತಾಳ
ಬಾಗಿಲ ಕಾಯಿಸಿದ ಹಾಗಾ ಕೊಡದೆ ಬಲಿ
ಯೋಗಿ ನಾರದನು ಸ್ತ್ರೀಯರ ಬೇಡಿದ
ಭಾಗೀರಥಿ ಸುತನು ನಿನ್ನ ಪಂಥವ ಕಳೆದ
ಜೋಗಿಯಾಗಿ ಪಾರ್ಥ ಅನುಜೆಯ ವೈದ
ಭೋಗೀಶನು ಬಿಡದೆ ಹೆಣಗಾಡಿದನಯ್ಯಾ
ನಾಗರಾಜನು ನಿನ್ನ ಕೂಗಿ ಕಂಗೆಡಿಸಿದ
ಹೀಗಿದ್ದವರ ಬೆರಳ ಬಾಗಿಸಿದಿ ಏನೋ ನೀ –
ನೇ ಗತಿ ಎಂದೆನಲಾಗಿ ಎನ್ನ ನೀನಂಜಿಸಿಕೊಂಬೆ
ಯೋಗಿಯಾಗಿ ಎನ್ನ ನೀನಂಜಿಸುವದೇನೋ
ಪೂಗಾರಗೊಲಿದ ಭಂಡುಗಾರ ಗೋವಾ ಶ್ರುತಿ
ಸಾಗರ ನಾಮ ವಿಜಯವಿಟ್ಠಲರೇಯಾ || ೫ ||
ಅಟ್ಟತಾಳ
ಸೂತ ಸತಿಯ ಉದರದಲ್ಲಿ ಬಂದವನಿಗೆ
ಖ್ಯಾತಿ ಯಾತಕೊ ಇಷ್ಟು ಭೂತಳದೊಳಗೆ
ದೂತನಾಗಿ ಪೋಗಿ ಹಸ್ತಿನಾಪುರದಲ್ಲಿ
ಭೂತಿಗಳಿಂದ ಬಿಗಿಸಿಕೊಂಡು ನಿಂದು
ಯಾತಕೆ ನಿನಗಿಷ್ಟು ಬಿಂಕದ ಮಾತು
ಭೀತಿಗೊಂಬವರಿಗೆ ತೃಣ ಮೇರುವಾದಂತೆ
ಕೋತಿ ಕೊರವಂಗೆ ಸಿಕ್ಕಿದಂತೆ ಎನ್ನ
ಈ ತೆರದಲಿ ಇನ್ನು ಕಾತುರೆಬ್ಬಿಸವರೇ
ಜಾತಿಯಿಲ್ಲದ ನಿತ್ಯ ಜಾತರಹಿತ ಮಹ –
ಭೂತ ವಿಜಯವಿಟ್ಠಲ ನೀತವೇ ನಿನಗೆ || ೬ ||
ಆದಿತಾಳ
ಒದ್ದವನೆ ಒದ್ದೇ ಪೋದಾ ಮೆದ್ದವನೆ ಮೆದ್ದೇ ಪೋದಾ
ಕದ್ದವನೆ ಕದ್ದೇ ಪೋದಾ, ಗೆದ್ದವನು ಗೆದ್ದೇ ಪೋದಾ
ಇದ್ದವನೆ ಇದ್ದೇ ಪೋದಾ, ಎದ್ದವನು ಎದ್ದೇ ಪೋದಾ
ಗದ್ದುಗೆ ನೀಡಿಸಿದವ ಹೊದ್ದಿದ ನಿನ್ನವರೊಳು
ಸಿದ್ದಿದ ವಿಜಯವಿಟ್ಠಲ ಬಿದ್ದೆನೋ ನಿನ್ನ ಪಾದಕ್ಕೆ
ಪದ್ದು ಎನ್ನ ಕೂಡ ನಿಷಿದ್ದ ಎಂದೆಂದಿಗೂ ಬೇಡ || ೭ ||
ಜತೆ
ಕಂಡವರಿಗೆ ಮುನ್ನೆ ಪ್ರಾಯಶ್ಚಿತ್ತವೇ ಇಲ್ಲ
ಕುಂಡಲಿ ಶಯನ ಶ್ರೀವಿಜಯವಿಟ್ಠಲ ನಿನಗಂಜೆನೋ ||
SrIkRuShNa niMdAstuti suLAdi
rAga: sAraMga
dhruvatALa
aMjisuvadEnO paraMjaLavAgiradE
keMjaDiyanoDiyA yAdavaroDiyA
eMjala uMDu gulagaMjiya daMDiya dharisi
gaMjigULannu kuDidaddu maradiyA
BuMjisi paravu mADi taMda vAgarake nI
aMjade ELu divasa giriya pottE
kiMcana ninnadu ninagaMjalyAkE dha –
naMjaya nAmA hari vijayaviTThala golla || 1 ||
maTTatALa
bAlakatanadalli pAlu mosaru kaddu
kOlu baDigeyiMda koliya kollisikoMDe
kAlanu varaLige bILu kaTTisikoMDu
ELalavAdiyo golla bAlErige ella
mUlOkavu biDade ALuva dhoretanavu
ELalavAyito vijayaviTThala SrEShThA || 2 ||
rUpakatALa
rakkasagaMji mucukuMdana more bidde
rakkasagaMji sAgaradoLu pura bigide
rakkasagAgi vikAra moganAdi
rakkasagAgi kODaga bala nerahide
rakkasAMtaka ninna makkaLATake dE –
vakkaLa manassige sikkideMteMbOru
makkaLa bEDi nI mukkaNNanoliside
Thakku mAyAtana kakkuja goMbeno
cikkavana hiriyana mADi puNyava
dakkisikoMDa SrIvijayaviTThala puMDa || 3 ||
JaMpitALa
aLakuvavage kAvaLadoLu hulla saravE
tuLidare poLevodu PaNi vOlu
aLukadavage jaladhi moLakAlu udakavO
aLukuvadEnu ninnaya BItige
iLiya muNagidavage CaLiya paravEnu si –
Dali gaMjadavanu heggOLigaMjuvane
balavAgi enneDabaladali ninna nAmagaLu
pAlisutire calisalyAtakO dEvA
kuliSa pApada girige vijayaviTThala kRuShNa
kalakAladaMte nODada hosa pari EnO || 4 ||
triviDitALa
bAgila kAyisida hAgA koDade bali
yOgi nAradanu strIyara bEDida
BAgIrathi sutanu ninna paMthava kaLeda
jOgiyAgi pArtha anujeya vaida
BOgISanu biDade heNagADidanayyA
nAgarAjanu ninna kUgi kaMgeDisida
hIgiddavara beraLa bAgisidi EnO nI –
nE gati eMdenalAgi enna nInaMjisikoMbe
yOgiyAgi enna nInaMjisuvadEnO
pUgAragolida BaMDugAra gOvA Sruti
sAgara nAma vijayaviTThalarEyA || 5 ||
aTTatALa
sUta satiya udaradalli baMdavanige
KyAti yAtako iShTu BUtaLadoLage
dUtanAgi pOgi hastinApuradalli
BUtigaLiMda bigisikoMDu niMdu
yAtake ninagiShTu biMkada mAtu
BItigoMbavarige tRuNa mEruvAdaMte
kOti koravaMge sikkidaMte enna
I teradali innu kAturebbisavarE
jAtiyillada nitya jAtarahita maha –
BUta vijayaviTThala nItavE ninage || 6 ||
AditALa
oddavane oddE pOdA meddavane meddE pOdA
kaddavane kaddE pOdA, geddavanu geddE pOdA
iddavane iddE pOdA, eddavanu eddE pOdA
gadduge nIDisidava hoddida ninnavaroLu
siddida vijayaviTThala biddenO ninna pAdakke
paddu enna kUDa niShidda eMdeMdigU bEDa || 7 ||
jate
kaMDavarige munne prAyaScittavE illa
kuMDali Sayana SrIvijayaviTThala ninagaMjenO ||
Leave a Reply