ಶ್ರೀಪಾದರಾಯರ ಸ್ತೋತ್ರ ಸುಳಾದಿ
ರಾಗ: ತೋಡಿ
ಧ್ರುವತಾಳ
ಶ್ರೀಪಾದರಾಯ ಗುರುವೆ ಧೃಢ ಭಕುತಿಯಿಂದ ನಿಮ್ಮ
ಶ್ರೀಪಾದ ಪದುಮವನ್ನು ನೆರೆನಂಬಿದವನ ಭಾಗ್ಯ
ಅಪಾರವಲ್ಲದೆ ಲೇಶ ಕೊರತೆ ಇಲ್ಲ
ಗೋಪಾದ ಉದಕದೊಳು ರತುನ ದೊರಕಿದಂತೆ
ಪ್ರಾಪುತವಾಗುವುದು ಬಾಹೀರಂತರ ಸೌಖ್ಯ
ಲೋಪವಾಗದು ಒಂದು ಇಷ್ಟಾರ್ಥ ಪ್ರತಿದಿನ
ಆಪಾರ್ಥ ಎನಿಸದು ಪೇಳಿದ ವಚನಂಗಳು
ಆಪವರ್ಗಕೆ ಮಾರ್ಗ ಕೇವಲ ಖ್ಯಾತಿಯಾಗಿ
ತಾಪಸಿಯಾಗುವನು ಜನುಮ ಜನುಮ ಬಿಡದೆ
ಗೋಪಾಲ ಕೃಷ್ಣನ ಗುಣವೆ ಕೊಂಡಾಡುತ
ಆಪಾದಮೌಳಿ ಪರಿಯಂತ ನೋಡುವ ಮಹ
ಪಾಪ ರಹಿತರಾಗಿ ಸಂಚರಿಸುವರು ನಿತ್ಯ
ಪ್ರಾಪುತವಲ್ಲದೆ ಒಂದಾದರವರಿಗೆ
ಭೂಪಾರ ಬೇಡಿದ ಮನೋರಥಂಗಳು
ಶ್ರೀಪಾದರಾಯ ಶಿರಿ ನಾರಾಯಣ ಯೋಗಿ
ಈಪರಿ ಸ್ಮರಿಸಿದ ಜನರ ಸಂಗದಲ್ಲಿದ್ದ
ಆ ಪುಣ್ಯಪುರುಷನಿಗೆ ಕೈವಲ್ಯ ಇದ್ದಲ್ಲಿಗೆ
ಪೋಪಾದಲ್ಲದೆ ಅವನ ಆಯುಷ್ಯ ವ್ಯರ್ಥವಾಗಿ
ಭಾಪು ಇವರ ಬಿರುದು ಪೊತ್ತು ತಿರುಗಿದರೆ
ಶಾಪಾದಪಿ ಶರಾದಪಿ ಎನಿಸಿಕೊಂಬ
ದೀಪದ ಬೆಳಕಿನಲ್ಲಿ ಸರ್ವವು ಕಂಡಂತೆ
ವ್ಯಾಪುತ ದರ್ಶಿಯಾಗಿ ಯೋಗ್ಯತದಂತೆ ಕಾಂಬ
ದ್ವಿಪಾದ ಪಶುಗಾಣೊ ಈ ಮುನಿಯ ನಂಬದವ
ಕೂಪಾರವೆಂಬ ಮಹ ಘೋರದೊಳಗೆ ಇಪ್ಪ
ಆಪತ್ಕಾಲ ಮಿತ್ರ ವಿಜಯವಿಠ್ಠಲರೇಯನ
ವ್ಯಾಪಾರವನ್ನೆ ನೆನೆದು ನಲಿನಲಿದಾಡುವುದು || ೧ ||
ಮಟ್ಟತಾಳ
ಭಕುತಿ ಬೇಕಾದವರು ಇವರ ಪಾದದಲ್ಲಿ
ಸಕಲಕ್ಕಾಗೆ ಇದೇ ಸಾಧ್ಯವೆ ನಮಗೆಂದ
ಸಕುತನಾಗಲಿ ಬೇಕು ರಾಗಂಗಳ ತೊರೆದು
ಮುಕುತಿ ಮಾರ್ಗಕೆ ಇನ್ನು ಯಾತಕೆ ಅನುಮಾನ
ಕಕ್ಕುಲಾತಿಯಿಂದ ಕಂಡಲ್ಲಿ ತಿರುಗಿ
ಹಕ್ಕಲ ಮನಸಿನಲ್ಲಿ ಕೆಟ್ಟು ಪೋಗದಿರಿ
ಲಕುಮಿರಮಣ ನಮ್ಮ ವಿಜಯವಿಠಲರೇಯನ
ಭಕುತರೊಳಗೆ ಮಹ ಮಹಿಮ ಎನಿಸಿಕೊಂಬ || ೨ ||
ತ್ರಿವಿಡಿತಾಳ
ನಂಬಿರೋ ಶ್ರೀಪಾದರಾಯರ ಚರಣವ
ಹಂಬಲಿಸದಿರಿ ಅನ್ಯಮಾರ್ಗ
ತುಂಬಿ ತುಳುಕುತಿಪ್ಪುದು ಇಹ ಪರದ ಭಾಗ್ಯ
ಉಂಬುವದುಡುವದು ಅಡಿಗಡಿಗೆ
ಡಿಂಬದೊಳಗೆ ಹರಿಯ ಧ್ಯಾನಂಗತವಾಗಿ
ಕಾಂಬುವ ಲೇಶ ಪಾಪಂಗಳಿಲ್ಲದೆ
ಗಂಭೀರ ಸಂಸಾರವಾದರು ಅದೆ ಅವಗೆ
ಇಂಬುಗೊಡುವದು ವೈದೀಕವೆನಿಸಿ
ಅಂಬುಜ ಸಖ ತೇಜ ವಿಜಯವಿಠ್ಠಲರೇಯನ
ಬೆಂಬಿಡದೆ ಭಜಿಸಬೇಕು ಈ ಪರಿಯಲ್ಲಿ || ೩ ||
ಅಟ್ಟತಾಳ
ಇವರ ಪ್ರಸಾದವಾದರೆ ವ್ಯಾಸಮುನಿರಾಯ
ಕವಿರಾಯ ಪುರಂದರದಾಸರು ಮೊದಲಾ-
ದವರ ಕರುಣವಿನ್ನೂ ಸಿದ್ಧಿಸುವುದು ಕೇಳಿ
ನವಭಕುತಿ ಪುಟ್ಟುವುದು ವ್ಯಕ್ತವಾಗಿ
ತವಕದಿಂದಲಿ ಚರಮ ದೇಹ ಬರುವುದು
ದಿವಿಜರು ಒಲಿದು ಸತ್ಕರ್ಮ ಮಾಡಿಸುವರು
ಅವಿರುದ್ಧರಾದ ಜನರೆಲ್ಲ ನೆರೆದು ಭಾ-
ಗ್ಯವನು ಬರಲಿ ಎಂದು ಕೊಂಡಾಡುವರು ನಿತ್ಯ
ಶ್ರವಣಕ್ಕೆ ತೋರುವ ವಿಜಯವಿಠ್ಠಲರೇಯನ
ದಿವರಾತ್ರಿಯಲಿ ನೋಡಿ ಸುಜನರ ಕೂಡುವಾ || ೪ ||
ಆದಿತಾಳ
ನರಕ ನರಕದಲ್ಲಿ ಹೊರಳುವ ಆ ಮನುಜ
ಧರೆಯೊಳು ಇವರ ಚರಿತೆ ಒಂದೊಂದದ್ಭುತವಾಗಿ
ನಿರುತದಲ್ಲಿ ನೋಡೆ ತುಂಬಿ ಸೂಸುತಲಿವೆ
ಅರುಣೋದಯದಲೆದ್ದು ಶ್ರೀ ಪಾದರಾಯರೆಂದು
ಸ್ಮರಿಸಿದ ಮಾನವಂಗೆ ಸರ್ವ ಸಾಧನದಿಂದ
ಪರಮಗತಿ ಆದಂತೆ ಆಗುವದು ಸಿದ್ಧ
ಪರಿಹಾಸವಲ್ಲ ಕೇಳಿ ಅನುಭವ ತಿಳಿದವಗೆ
ಸುರ ಭೂಸುರರ ಪ್ರಿಯ ವಿಜಯವಿಠ್ಠಲನ
ಕರುಣದಿಂದಲಿ ಮಹ ಉನ್ನತದಲ್ಲಿಪ್ಪರೂ || ೫ ||
ಜತೆ
ಧ್ರುವ ಮರಿಯದಲೆ ಇದನೆ ಓದಿದವಗೆ ಬಂದ
ಭವರೋಗ ಪರಿಹಾರ ವಿಜಯವಿಠಲ ಒಲಿವಾ || ೬ ||
SrIpAdarAyara stOtra suLAdi
rAga: tODi
dhruvatALa
SrIpAdarAya guruve dhRuDha BakutiyiMda nimma
SrIpAda padumavannu nerenaMbidavana BAgya
apAravallade lESa korate illa
gOpAda udakadoLu ratuna dorakidaMte
prAputavAguvudu bAhIraMtara sauKya
lOpavAgadu oMdu iShTArtha pratidina
ApArtha enisadu pELida vacanaMgaLu
Apavargake mArga kEvala KyAtiyAgi
tApasiyAguvanu januma januma biDade
gOpAla kRuShNana guNave koMDADuta
ApAdamauLi pariyaMta nODuva maha
pApa rahitarAgi saMcarisuvaru nitya
prAputavallade oMdAdaravarige
BUpAra bEDida manOrathaMgaLu
SrIpAdarAya Siri nArAyaNa yOgi
Ipari smarisida janara saMgadallidda
A puNyapuruShanige kaivalya iddallige
pOpAdallade avana AyuShya vyarthavAgi
BApu ivara birudu pottu tirugidare
SApAdapi SarAdapi enisikoMba
dIpada beLakinalli sarvavu kaMDaMte
vyAputa darSiyAgi yOgyatadaMte kAMba
dvipAda paSugANo I muniya naMbadava
kUpAraveMba maha GOradoLage ippa
ApatkAla mitra vijayaviThThalarEyana
vyApAravanne nenedu nalinalidADuvudu || 1 ||
maTTatALa
Bakuti bEkAdavaru ivara pAdadalli
sakalakkAge idE sAdhyave namageMda
sakutanAgali bEku rAgaMgaLa toredu
mukuti mArgake innu yAtake anumAna
kakkulAtiyiMda kaMDalli tirugi
hakkala manasinalli keTTu pOgadiri
lakumiramaNa namma vijayaviThalarEyana
BakutaroLage maha mahima enisikoMba || 2 ||
triviDitALa
naMbirO SrIpAdarAyara caraNava
haMbalisadiri anyamArga
tuMbi tuLukutippudu iha parada BAgya
uMbuvaduDuvadu aDigaDige
DiMbadoLage hariya dhyAnaMgatavAgi
kAMbuva lESa pApaMgaLillade
gaMBIra saMsAravAdaru ade avage
iMbugoDuvadu vaidIkavenisi
aMbuja saKa tEja vijayaviThThalarEyana
beMbiDade BajisabEku I pariyalli || 3 ||
aTTatALa
ivara prasAdavAdare vyAsamunirAya
kavirAya puraMdaradAsaru modalA-
davara karuNavinnU siddhisuvudu kELi
navaBakuti puTTuvudu vyaktavAgi
tavakadiMdali carama dEha baruvudu
divijaru olidu satkarma mADisuvaru
aviruddharAda janarella neredu BA-
gyavanu barali eMdu koMDADuvaru nitya
SravaNakke tOruva vijayaviThThalarEyana
divarAtriyali nODi sujanara kUDuvA || 4 ||
AditALa
naraka narakadalli horaLuva A manuja
dhareyoLu ivara carite oMdoMdadButavAgi
nirutadalli nODe tuMbi sUsutalive
aruNOdayadaleddu SrI pAdarAyareMdu
smarisida mAnavaMge sarva sAdhanadiMda
paramagati AdaMte Aguvadu siddha
parihAsavalla kELi anuBava tiLidavage
sura BUsurara priya vijayaviThThalana
karuNadiMdali maha unnatadallipparU || 5 ||
jate
dhruva mariyadale idane Odidavage baMda
BavarOga parihAra vijayaviThala olivA || 6 ||
Leave a Reply