Adityavaarada Suladi – Sheshadasaru

Raga:Bauli

Smt.Nandini Sripad , Blore

ಶ್ರೀ ಮೊದಲಕಲ್ಲು ಶೇಷದಾಸರ ರಚನೆ
(ಗುರುವಿಜಯವಿಠ್ಠಲ ಅಂಕಿತ)

ಆದಿತ್ಯವಾರದ ಸುಳಾದಿ
ರಾಗ: ಭೌಳಿ

ಧ್ರುವತಾಳ
ಆಲಿಸಿ ಕೇಳುವದು ಆದರದಿಂದಲಿ
ಶ್ರೀ ಲಕುಮೀಶನ ಭಕುತರೆಲ್ಲಾ
ಕಾಲ ದೇಶ ವ್ಯಾಪ್ತಳೆನಿಪಳಿಗಾದರು
ಶೀಲ ಮೂರುತಿಯಿಂದ ಸುಖವೆಂಬೊದೊ
ಕೇಳಿ ಬಲ್ಲದ್ದೆ ಸರಿ ಶ್ರುತಿ ಸ್ಮೃತಿ ಮುಖದಿಂದ
ಆಲೋಚನೆ ಇದಕ್ಕಿಲ್ಲ ಎಣಿಸಿ ಗುಣಿಸೆ
ಮೂಲ ಜೀವರ ಸುಖಕೆ ಶ್ರೀಪತಿ ಆದ ಬಳಿಕ
ಹಲವು ಬಗೆಯಲಿ ಹರಿಯ ಸಂಪಾದಿಸು
ಇಳಿಯೊಳು ವಾಜಿಪೇಯ ಪೌಂಡರಿಕಾದಿ ಯಜ್ಞ
ನಿರ್ಮಲವಾದ ಧ್ಯಾನ ಜಪ ನೇಮವೊ
ಜಾಲ ನಕ್ಷತ್ರ ಸಂಖ್ಯ ಮೀರಿದ ಮಹಾದಾನಾ
ಕಾಲೋಚಿತವಾದಕರ್ಮಧ್ಯಾನ ಮೌನ
ಜ್ವಾಲವಾದ ಕ್ರೂರ ತಪ ಹೋಮ ಸುರರರ್ಚನ
ಸ್ಥೂಲ ಕರ್ಮಾಭಿಜಾತ ಪುಣ್ಯದಿಂದ
ತ್ರಿಲೋಕಾಧಿಪತಿ ಸ್ಥಾನವೈದಿದ ನಂತರ
ಇಳಿಯಬೇಕೋ ಧರಿಗೆ ಭೂಯೊ ಭೂಯೊ
ಒಲಿಯನು ಇದಕ್ಕೆ ಜಲಜಾಯತೇಕ್ಷಣ
ಒಲಿಸಬೇಕೆಂಬೋದು ಮನದಲ್ಲಿತ್ತೆ
ಪೇಳಿದ ಮಾತಿನಲ್ಲಿ ಸಂದೇಹ ಮಾಡದಲೆ
ಸುಲಭವಾದಪಥಪಿಡಿಯೊ ಬೇಗ
ನೀಲಾಂಬುದ ಶ್ಯಾಮ ಗುರುವಿಜಯವಿಠ್ಠಲರೇಯ
ಪಾಲಿಸುವನು ಇದಕೆ ಶ್ರುತಿಯೇ ಸಾಕ್ಷಿ || ೧ ||

ಮಟ್ಟತಾಳ
ಪ್ರವೃತ್ತಿ ನಿವೃತ್ತಿ ಅಭಿಧಾನದಿ ಕರ್ಮ
ದ್ವಿವಿಧವಾಗಿ ಉಂಟು ತಿಳಿವದು ಚೆನ್ನಾಗಿ
ಪ್ರವೃತ್ತಿ ಕರ್ಮವನು ಸ್ವಪ್ನದಿ ಕಾಮಿಸಿದೆ
ನಿವೃತ್ತಿ ಕರ್ಮದಲಿ ರತಿವುಳ್ಳವನಾಗಿ
ದೇವ ಎನ್ನೊಳಗಿದ್ದುಕಾಲಕರ್ಮಾನುಸಾರ
ಆವಾವದು ಮಾಳ್ಪ ಮಾಡುವೆನದರಂತೆ
ಆವ ಮಾಡಿಸದಿರಲು ನಾನ್ಯಾತಕೆ ಸಲ್ಲೆ
ಕಾವ ಕೊಲ್ಲುವ ತಾನೆ ಅನ್ಯರು ಎನಗಿಲ್ಲ
ಸರ್ವಾಧಿಷ್ಠಾನದಲಿ ಹರಿಯೇ ವ್ಯಾಪಿಸಿ ಇದ್ದು
ಶರ್ವಾದಿಗಳಿಂದ ವ್ಯಾಪಾರವ ಗೈಸಿ
ನಿರ್ವಾಹಕನಾಹ ಸ್ವತಂತ್ರ ತಾನಾಗಿ
ಓರ್ವನಾದರು ಶ್ವಾಸ ಬಿಡುವ ಸೇದಿಕೊಂಬ
ಗರ್ವಿಗಳಿಲ್ಲವೊ ಈ ಫೃಥ್ವಿ ಮಧ್ಯ
ಈ ವಿಧದಲಿ ತಿಳಿದು ಜೀವರ ಲಕ್ಷಣ
ಸಾವಧಾನದಿ ಗುಣಿಸು ಹರಿ ಕರ್ತೃತ್ವವನು
ದೇವದೇವ ಬಿಂಬ ಜೀವನೆ ಪ್ರತಿಬಿಂಬ
ಭಾವ ಕೆಡದಂತೆ ಯೋಚಿಸು ಸರ್ವತ್ರ
ಜೀವಭಿನ್ನ ಗುರುವಿಜಯವಿಠ್ಠಲರೇಯ
ಸೇವಕರಭಿಮಾನ ಎಂದೆಂದಿಗೆ ಬಿಡನು || ೨ ||

ತ್ರಿವಿಡಿತಾಳ
ತನುವಿನೊಳಗೆ ಹೊರಗೆ ವಿಭಕ್ತಿ ಅವಿಭಕ್ತ
ಅಣುಮಹದ್ರೂಪದಿ ಹರಿ ವಾಸವಕ್ಕು
ವನಜಜಾಂಡಾಧಾರವಾಗಿಪ್ಪ ರೂಪವನ್ನು
ಮನುಜರ ದೇಹಾಶ್ರಯವಾಗಿಪ್ಪದೊ
ನೀನೊಲಿದು ಕೇಳುವದು ಇದನೇವೆ ಅವಿಭಕ್ತ
ಘನರೂಪವೆಂಬೋರು ಜ್ಞಾನಿಗಳು
ಮುನಿಗಳ ಮತವಿದು ಸಂದೇಹ ಬಡಸಲ್ಲ
ಮನದಿ ಚಿಂತಿಸು ಈ ಶೂನ್ಯಾಭಿದನ ವ –
ದನದ ಮೇಲೆ ವದನ ಶ್ರೋತ್ರದ ಮೇಲೆ ಶ್ರೋತ್ರ ನ –
ಯನದ ಮೇಲೆ ನಯನ ಈ ಕ್ರಮದಿಂದಲಿ
ತನು ಸಮಸ್ತದಲ್ಲಿ ಹರಿ ತನ್ನ ಅಂಗದಿಂದ
ಅನುಸಾರವಾಗಿ ಆಶ್ರಯವಾಗಿಪ್ಪ
ಕ್ಷೋಣಿವೊಳಗೆ ಈ ರೂಪ ಅನುಪೇಕ್ಷದಿಂದ
ತನುವು ನಿಲ್ಲದಯ್ಯಾ ವಿಧಿಗಾದರೂ
ಇನಿತು ಸೊಬಗು ಪರಿಜ್ಞಾನ ರಹಿತರಾಗಿ
ವನಜ ಭವಾಂಡ ದಾನವಿತ್ತರೂನು
ವನಜನಾಭನೊಮ್ಮೆ ದೃಷ್ಟಿಲಿ ನೋಡನಯ್ಯಾ
ಅನುಮಾನ ಇದಕ್ಕಿಲ್ಲ ಶ್ರುತ್ಯುಕ್ತವೊ
ವಿನಯದಿಂದಲಿ ಇದು ಸ್ಮರಿಸಿದ ಜನರಿಗೆ
ಜನುಮ ಜನುಮದ ಪಾಪ ಪ್ರಶಾಂತವೊ
ಬಿನಗು ಮೈಲಿಗೆಯುಂಟೆ ಸ್ಪ್ರಷ್ಟಾಸ್ಪ್ರಷ್ಟದಿಂದ
ಅನುದಿನ ಪವಿತ್ರನು ಅಕೃತದಿಂದ
ಋಣತ್ರಯದಿಂದಲಿ ಮುಕ್ತನಾಗಿ ಸತತ
ದನುಜಾರಿ ಪುರವನ್ನೇ ಐದುವರೋ ಮಲಿನ
ಮನುಜರ ಮನಸಿಗೆ ತೋರನೊಮ್ಮೆ
ನೀನೇ ಗತಿ ಎಂದು ನಂಬಿದವರ
ಮನಕೆ ಪೊಳೆವನು ಬಿಡದೆ ಮಾತರಿಶ್ವನ ದಯದಿ
ಮನುಜಾ ತಿಳಿ ಇದನೆ ಭಕುತಿಯಿಂದ
ಗುಣಗಣ ಪೂರ್ಣ ಗುರುವಿಜಯವಿಠ್ಠಲರೇಯ
ಜನನ ಮರಣಗಳಿಂದ ದೂರ ಮಾಳ್ಪ || ೩ ||

ಅಟ್ಟತಾಳ
ಈ ರೀತಿಯಿಂದಲಿ ದೇಹಧಾರಿಯ ರೂಪವ
ಸಾರಿ ಸಾರಿಗೆ ತಿಳಿದು ಪೂಜಿಸು ಗುಪ್ತದಿ
ಶಾರೀರ ಉಪಯೋಗವಾದ ವಿಷಯ ಜಾಲ
ಹರಿಗೆ ಷೋಡಶ ಉಪಚಾರವೆಂದೆನ್ನು
ಆರಾರು ಮಾಡುವ ವಂದನಾ ನಿಂದ್ಯೆಯು
ಶ್ರೀರಮಣನಿಗಿದು ಬಲು ಸ್ತೋತ್ರವೆಂದೆನ್ನು
ದಾರಾ ಪುತ್ರಾದಿ ಸಮಸ್ತ ಬಂಧುವರ್ಗ
ಪರಿಚಾರಕರೆನ್ನು ಘನ ಮಹಾಮಹಿಮಂಗೆ
ಮೆರೆವದೆಲ್ಲವು ಹರಿ ಮೆರವುದೆಂದೆನ್ನು
ನಿರುತದಲಿ ಇದು ಮರೆಯದೆ ಮನದೊಳು
ಕರಚರಣಾದಿ ಯಾವದ್ದವಯವ ಚೇಷ್ಟೆಯ
ಗುರುಮುಖದಲಿ ತಿಳಿದು ಯಜ್ಞಕ್ರಮದಿಂದ
ನೀರಜನಾಭನಿಗರ್ಪಿಸು ಅವದಾನ ಪೂರ್ವಕ
ಮಾರಜನಕ ಗುರುವಿಜಯವಿಠ್ಠಲರೇಯ
ಕರವ ಪಿಡಿವನು ಇದನೇವೆ ಕೈಕೊಂಡು || ೪ ||

ಆದಿತಾಳ
ಬೊಮ್ಮಾಂಡದೊಳಗಿದ್ದ ಸ್ಥೂಲವಾದ ವಸ್ತುಗಳು
ನಿಮ್ನವಾಗಿ ದೇಹದಲ್ಲಿ ಸೂಕ್ಷ್ಮವಾಗಿ ಉಂಟು ಕೇಳು
ಈ ಮಹಾ ಲಕ್ಷಣದಿಂದಲೇ ಕ್ಷೇತ್ರವೆಂದು
ಸನ್ಮಾನ್ಯವಾಗಿಪ್ಪದೊ ಜಡಗಳ ಮಧ್ಯದಲ್ಲಿ
ಆ ಮಹಾ ಮಹಿಮನಾದ ಕ್ಷೇತ್ರಜ್ಞನನ್ನು ಭಜಿಸು
ಜನ್ಮವ ನೀಗುವದು ಅವ್ಯವಧಾನದಿಂದ ವೈ –
ಷಮ್ಯರಹಿತ ಗುರುವಿಜಯವಿಠ್ಠಲರೇಯ
ಸಮ್ಮುಖನಾಗುವನು ಈ ಪರಿ ತಿಳಿದರೆ || ೫ ||

ಜತೆ
ಸಕಲ ಸಾಧನ ಮಧ್ಯ ಉತ್ಕೃಷ್ಟವೆನಿಪದು
ನಖಶಿಖ ಪರಿಪೂರ್ಣ ಗುರುವಿಜಯವಿಠ್ಠಲ ವೊಲಿವ ||


SrI modalakallu SEShadAsara racane
(guruvijayaviThThala aMkita)

AdityavArada suLAdi
rAga: BauLi

dhruvatALa
Alisi kELuvadu AdaradiMdali
SrI lakumISana BakutarellA
kAla dESa vyAptaLenipaLigAdaru
SIla mUrutiyiMda suKaveMbodo
kELi balladde sari Sruti smRuti muKadiMda
AlOcane idakkilla eNisi guNise
mUla jIvara suKake SrIpati Ada baLika
halavu bageyali hariya saMpAdisu
iLiyoLu vAjipEya pauMDarikAdi yaj~ja
nirmalavAda dhyAna japa nEmavo
jAla nakShatra saMKya mIrida mahAdAnA
kAlOcitavAda karma dhyAna mauna
jvAlavAda krUra tapa hOma surararcana
sthUla karmABijAta puNyadiMda
trilOkAdhipati sthAnavaidida naMtara
iLiyabEkO dharige BUyo BUyo
oliyanu idakke jalajAyatEkShaNa
olisabEkeMbOdu manadallitte
pELida mAtinalli saMdEha mADadale
sulaBavAda patha piDiyo bEga
nIlAMbuda SyAma guruvijayaviThThalarEya
pAlisuvanu idake SrutiyE sAkShi || 1 ||

maTTatALa
pravRutti nivRutti aBidhAnadi karma
dvividhavAgi uMTu tiLivadu cennAgi
pravRutti karmavanu svapnadi kAmiside
nivRutti karmadali rativuLLavanAgi
dEva ennoLagiddu kAla karmAnusAra
AvAvadu mALpa mADuvenadaraMte
Ava mADisadiralu nAnyAtake salle
kAva kolluva tAne anyaru enagilla
sarvAdhiShThAnadali hariyE vyApisi iddu
SarvAdigaLiMda vyApArava gaisi
nirvAhakanAha svataMtra tAnAgi
OrvanAdaru SvAsa biDuva sEdikoMba
garvigaLillavo I PRuthvi madhya
I vidhadali tiLidu jIvara lakShaNa
sAvadhAnadi guNisu hari kartRutvavanu
dEvadEva biMba jIvane pratibiMba
BAva keDadaMte yOcisu sarvatra
jIvaBinna guruvijayaviThThalarEya
sEvakaraBimAna eMdeMdige biDanu || 2 ||

triviDitALa
tanuvinoLage horage viBakti aviBakta
aNumahadrUpadi hari vAsavakku
vanajajAMDAdhAravAgippa rUpavannu
manujara dEhASrayavAgippado
nInolidu kELuvadu idanEve aviBakta
GanarUpaveMbOru j~jAnigaLu
munigaLa matavidu saMdEha baDasalla
manadi ciMtisu I SUnyABidana va –
danada mEle vadana SrOtrada mEle SrOtra na –
yanada mEle nayana I kramadiMdali
tanu samastadalli hari tanna aMgadiMda
anusAravAgi ASrayavAgippa
kShONivoLage I rUpa anupEkShadiMda
tanuvu nilladayyA vidhigAdarU
initu sobagu parij~jAna rahitarAgi
vanaja BavAMDa dAnavittarUnu
vanajanABanomme dRuShTili nODanayyA
anumAna idakkilla Srutyuktavo
vinayadiMdali idu smarisida janarige
januma janumada pApa praSAMtavo
binagu mailigeyuMTe spraShTAspraShTadiMda
anudina pavitranu akRutadiMda
RuNatrayadiMdali muktanAgi satata
danujAri puravannE aiduvarO malina
manujara manasige tOranomme
nInE gati eMdu naMbidavara
manake poLevanu biDade mAtariSvana dayadi
manujA tiLi idane BakutiyiMda
guNagaNa pUrNa guruvijayaviThThalarEya
janana maraNagaLiMda dUra mALpa || 3 ||

aTTatALa
I rItiyiMdali dEhadhAriya rUpava
sAri sArige tiLidu pUjisu guptadi
SArIra upayOgavAda viShaya jAla
harige ShODaSa upacAraveMdennu
ArAru mADuva vaMdanA niMdyeyu
SrIramaNanigidu balu stOtraveMdennu
dArA putrAdi samasta baMdhuvarga
paricArakarennu Gana mahAmahimaMge
merevadellavu hari meravudeMdennu
nirutadali idu mareyade manadoLu 
karacaraNAdi yAvaddavayava cEShTeya
gurumuKadali tiLidu yaj~jakramadiMda
nIrajanABanigarpisu avadAna pUrvaka
mArajanaka guruvijayaviThThalarEya
karava piDivanu idanEve kaikoMDu || 4 ||

AditALa
bommAMDadoLagidda sthUlavAda vastugaLu
nimnavAgi dEhadalli sUkShmavAgi uMTu kELu
I mahA lakShaNadiMdalE kShEtraveMdu
sanmAnyavAgippado jaDagaLa madhyadalli
A mahA mahimanAda kShEtraj~janannu Bajisu
janmava nIguvadu avyavadhAnadiMda vai –
Shamyarahita guruvijayaviThThalarEya
sammuKanAguvanu I pari tiLidare || 5 ||

jate
sakala sAdhana madhya utkRuShTavenipadu
naKaSiKa paripUrNa guruvijayaviThThala voliva ||

Leave a Reply

Your email address will not be published. Required fields are marked *

You might also like

error: Content is protected !!