Raghavendra gururayara sevisiro
ತಾರತಂಯ ಭಜನೆ – ಅರಿಜ಼ೋನಾ ಮಧ್ವ ಸಂಘ
|| ಶ್ರೀ ಹರಿ ವಾಯು ಗುರುಭ್ಯೋ ನಮಃ ||
|| ಶ್ರೀ ಲಕ್ಷ್ಮೀ ವೇಂಕಟೇಶಾಯ ನಮ:||
ಪ್ರಾರ್ಥನಾ:
ಶ್ರೀ ಗುರುಭ್ಯೋ ನಮಃ
ಪರಮ-ಗುರುಭ್ಯೋ ನಮಃ
ಶ್ರೀಮದಾನಂದ ತೀರ್ಥಭಗವತ್-ಪಾದಾಚಾರ್ಯ ಗುರುಭ್ಯೋ ನಮಃ
ಶ್ರೀ ವೇದವ್ಯಾಸಾಯ ನಮಃ
ಶ್ರೀ ಭಾರತ್ಯೈ ನಮಃ
ಶ್ರೀ ಸರಸ್ವತ್ಯೈ ನಮಃ
ಶ್ರೀ ವಾಯವೆ ನಮಃ
ಶ್ರೀ ಲಕ್ಷ್ಮೀ ಹಯಗ್ರೀವಾಯ ನಮಃ
ಶ್ರೀಮನ್ ನಾರಾಯಣಾಯ ನಮಃ
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನ ವದನಂ ಧ್ಯಾಯೆತ್ ಸರ್ವವಿಘ್ನೋಪ ಶಾಂತಯೇ ||
ನಾರಾಯಣಂ ನಮಸ್ಕೃತ್ಯ ನರನ್ ಚೈವ ನರೊತ್ತಮಂ |
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ ||
ಆಪಾದ ಮೌಳಿ ಪರ್ಯಂತಂ ಗುರೂಣಾಂ ಆಕೃತೀಂ ಸ್ಮರೇತ್ |
ತೇನ ವಿಘ್ನಾ ಪ್ರಣಷ್ಯಂತಿ ಸಿಧ್ಯಂತಿಚ ಮನೋರಥಾ: ||
1.ತಾರತಮ್ಯ ಉಗಾಭೋಗ
ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ,
ಮತಿ ಪ್ರೇರಿಸುವಳು ಪಾರ್ವತಿ ದೇವೀ,
ಮುಕುತಿ ಪಥಕೆ ಮನವೀವ ಮಹರುದ್ರ ದೇವರು,
ಹರಿ ಭಕುತಿ ದಾಯಕಳು ಭಾರತಿ ದೇವಿ,
ಯುಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿ
ಸತ್ಕರ್ಮಗಳ ನಡೆಸಿ ಸುಜ್ಞಾನ ಮತಿ ಇತ್ತು
ಗತಿ ಪಾಲಿಸುವ ನಮ್ಮ ಪವಮಾನನು,
ಚಿತ್ತದಲಿ ಆನಂದ ಸುಖವನೀವಳು ರಮಾ,
ಭಕುತ ಜನರೊಡೆಯ ನಮ್ಮ ಪುರಂದರ ವಿಠಲನು
ಸತತ ಇವರಲಿ ನಿಂತು ಈ ಕೃತಿಯ ನಡೆಸುವನು ||
2.ರಚನೆ: ಶ್ರೀ ಶ್ರೀಶ ವಿಠ್ಠಲರು
ಗುರು ಮಧ್ವ ರಾಯರಿಗೆ ನಮೋ ನಮೋ
ನಮ್ಮ ಗುರು ಮಧ್ವ ಸಂತತಿಗೆ ನಮೋ ನಮೋ
ನಮ್ಮ ಗುರು ಮಧ್ವ ರಾಯರಿಗೆ ನಮೋ ನಮೋ (೧)
ಶ್ರೀಪಾದರಾಜರಿಗೆ ಗುರು ವ್ಯಾಸರಾಜರಿಗೆ
ಗುರು ವಾದಿರಾಜರಿಗೆ ನಮೋ ನಮೋ
ನಮ್ಮ ಗುರು ಮಧ್ವ ರಾಯರಿಗೆ ನಮೋ ನಮೋ (೨)
ರಾಘವೇಂದ್ರ ರಾಯರಿಗೆ ವೈಕುಂಠ ದಾಸರಿಗೆ
ಪುರಂದರ ದಾಸರಿಗೆ ನಮೋ ನಮೋ
ನಮ್ಮ ಗುರು ಮಧ್ವ ರಾಯರಿಗೆ ನಮೋ ನಮೋ (೩)
ಗುರು ವಿಜಯ ದಾಸರಿಗೆ ಭಾಗಣ್ಣದಾಸರಿಗೆ
ರಂಗ ಒಲಿದ ದಾಸರಿಗೆ ನಮೋ ನಮೋ
ನಮ್ಮ ಗುರು ಮಧ್ವರಾಯರಿಗೆ ನಮೋ ನಮೋ (೪)
ಪರಮ ವೈರಾಗ್ಯಶಾಲಿ ತಿಮ್ಮಣ್ಣದಾಸರಿಗೆ
ಹುಂಡೇಕರ ದಾಸರಿಗೆ ನಮೋ ನಮೋ
ನಮ್ಮ ಗುರು ಮಧ್ವ ರಾಯರಿಗೆ ನಮೋ ನಮೋ (೫)
ಗುರು ಶ್ರೀಶ ವಿಠ್ಠಲನ ಪರಮ ಭಕ್ತರ ಚರಣ
ಸರಸಿಜಯುಗ ಗಳಿಗೆ ನಮೋ ನಮೋ
ನಮ್ಮ ಗುರು ಮಧ್ವ ರಾಯರಿಗೆ ನಮೋ ನಮೋ (೬)
ಗುರು ಮಧ್ವ ರಾಯರಿಗೆ ನಮೋ ನಮೋ
ನಮ್ಮ ಗುರು ಮಧ್ವ ಸಂತತಿಗೆ ನಮೋ ನಮೋ
ನಮ್ಮ ಗುರು ಮಧ್ವ ರಾಯರಿಗೆ ನಮೋ ನಮೋ (೭)
———
ದಾಸ ಕಕ್ಷ
*** ಶ್ರೀ ಜಗನ್ನಾಥ ದಾಸರು ***
ಜಲಜೇಷ್ಠನಿಭಾಕಾರಂ ಜಗದೀಶ ಪದಾಶ್ರಯಂ
ಜಗತೀತಲ ವಿಖ್ಯಾತಂ ಜಗನ್ನಾಥ ಗುರುಂ ಭಜೆ
*** ಶ್ರೀ ಗೋಪಾಲ ದಾಸರು ***
ಆಗತಾದಿ ತ್ರಿಕಾಲಜ್ಞಂ ಆಗಮಾರ್ಥ ವಿಶಾರದಂ
ತ್ಯಾಗ ಭೋಗ ಸಮಾಯುಕ್ತಂ ಭಾಗಣ್ಣಾರ್ಯ ಗುರುಂ ಭಜೆ
*** ಶ್ರೀ ವಿಜಯ ದಾಸರು ***
ಅಜ್ಞಾನ ತಿಮಿರಚ್ಚೇದಂ ಬುದ್ಧಿ ಸಂಪತ್ ಪ್ರದಾಯಕಂ
ವಿಜ್ಞಾನ ವಿಮಲಂ ಶಾಂತಂ ವಿಜಯಾಖ್ಯ ಗುರುಂ ಭಜೆ
*** ಶ್ರೀ ಪುರಂದರ ದಾಸರು ***
ಮನ್ಮನೋಭೀಷ್ಠ ವರದಂ ಸರ್ವಾಭೀಷ್ಟ ಫಲಪ್ರದಂ
ಪುರಂದರ ಗುರುಂ ವಂದೇ ದಾಸಶ್ರೇಷ್ಟಂ ದಯಾನಿಧಿಂ
—————————————-
Smarisu gurugala
3.ಸ್ಮರಿಸು ಗುರುಗಳ ಮನವೆ | ಸ್ಮರಿಸು ಗುರುಗಳ || ಪ | |
ಸ್ಮರಿಸು ಗುರುಗಳ ನಿನಗೆ ಪರಮ ಮಂಗಳ
ದುರಿತ ಪರ್ವತಕೆ ಪವಿ ಎಂದು ತಿಳಿದು | | ಅ.ಪ. | |
ಉರಗ ವೃಶ್ಚಿಕ ವ್ಯಾಘ್ರ ಅರಸು ಜೋರಾಗ್ನಿ
ಕರಿ ಗರಳ ಜ್ವರ ಮೊದಲಾದ ಭಯಗಳಿಂದ |
ಪೊರೆದು ಮಂಗಳವೀವ ನರಹರಿಯ ದಾಸರ |
ಚರಣ ಕಂಡೆನೊ ದುರಿತ ಪರಿಹಾರವಾಯಿತು ||೧||
ಗುರು ಸ್ಮರಣೆಯಿಂದ ಸಕಲ ಆಪತ್ತು ಪರಿಹಾರ |
ಗುರು ಸ್ಮರಣೆಯಿಂದ ಸಕಲ ಸಂಪದವು ನಿನಗೆ |
ಗುರು ಸ್ಮರಣೆಯಿಂದ ವಿಶೇಷ ಧನ ದೊರಕುವುದು |
ಗುರು ಸ್ಮರಣೆಯಿಂದ ಹರಿ ಒಲಿದು ಪೊರೆವ | | ೨ | |
ಗುರುಗಳಿಂದಧಿಕ ಇನ್ನಾರು ಆಪ್ತರು ನಿನಗೆ | |
ಗುರುಗಳೇ ಪರಮ ಹಿತಕರು ನೋಡು |
ಗುರು ಸ್ವಾಮಿ ವರದ ಗೋಪಾಲವಿಠ್ಠಲ ಸರ್ವ |
ದುರಿತಗಳ ಕಳೆದು ಸುಖಗರೆವ ನೋಡು | | ೩ | |
———————————————–
ಯತಿ ಕಕ್ಷ
ಶ್ರೀ ರಾಘವೇಂದ್ರ ತೀರ್ಥರು
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ ||
Baro Guru raghavendra
4.ಬಾರೋ ಗುರುರಾಘವೇಂದ್ರ ಬಾರಯ್ಯ ಬಾ ಬಾ || ಪ ||
ಹಿಂದುಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ
ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ ಬಂಧೋ || ಅ ||
ಸೇವಕನೆಲೊ ನಾನು – ಧಾವಿಸಿ ಬಂದೆನು
ಸೇವೆ ನೀಡೆಲೊ ನೀನು
ಸೇವಕನ ಸೇವೆಯನು ಸೇವಿಸಿ
ಸೇವ್ಯ-ಸೇವಕ ಭಾವವೀಯುತ
ಠಾವುಗಾಣಿಸಿ ಪೊರೆಯೊ ಧರೆಯೊಳು
ಪಾವನಾತ್ಮಕ ಕಾವ ಕರುಣಿ || ೧ ||
ಕರೆದರೆ ಬರುವಿಯೆಂದು – ಸಾರುವುದು ಡಂಗುರ
ತ್ವರಿತದಿ ಒದಗೋ ಬಂದು
ಜರಿಯ ಬೇಡವೊ ಬರಿದೆ ನಿನ್ನಯ
ವಿರಹ ತಾಳದೆ ಮನದಿ ಕೊರಗುವೆ
ಹರಿಯ ಸ್ಮರಣೆಯ ನಿರುತದಲಿ
ಎನಗ್ಹರುಷದಲಿ ನೀನಿರುತ ಕೊಡುತಲಿ || ೨ ||
ನರಹರಿಪ್ರಿಯನೆ ಬಾ – ಗುರುಶ್ರೀಶವಿಠ್ಠಲನ
ಕರುಣಾಪಾತ್ರನೆ ಬೇಗ ಬಾ
ಗುರುವರನೆ ಪರಿಪೋಷಿಸೆನ್ನನು
ಮರೆಯದಲೆ ತವಚರಣಕೋಟಿಯಲಿರಿಸಿ
ಚರಣಾಂಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ || ೩ ||
———————————————-
[Baro Raghavendra]
5.ಬಾರೋ ರಾಘವೇಂದ್ರ ಬಾರೋ ಕಾರುಣ್ಯವಾರಿಧಿ ಬಾರೋ
ಆರಾಧಿಪ ಭಕ್ತರಭೀಷ್ಟ ಪೂರೈಸುವ ಪ್ರಭುವೆ ಬಾರೋ || ಪ ||
ರಾಜವಂಶೋದ್ಭವನ ಪಾದ, ರಾಜೀವಭೃಂಗನೆ ಬಾರೋ
ರಾಜಾಧಿರಾಜರೊಳು ವಿರಾಜಿಸುವ ಚೆಲುವ ಬಾರೋ || ೧ ||
ವ್ಯಾಸರಾಯನೆನಿಸಿ ನೃಪನಾ, ಕ್ಲೇಶ ಕಳೆದವನೆ ಬಾರೋ
ಶ್ರೀಸುಧೀಂದ್ರ ಕರಸಂಜಾತ ವಾಸುದೇವಾರ್ಚಕನೆ ಬಾರೋ || ೨ ||
ಸನ್ಯಾಸ ಕುಲದೀಪ ಬಾರೋ, ಸನ್ನುತ ಮಹಿಮನೆ ಬಾರೋ
ಮಾನ್ಯ ಜಗನ್ನಾಥವಿಠಲನ ಪ್ರಪನ್ನ ಜನರ ಪ್ರಿಯನೆ ಬಾರೋ || ೩ ||
———————————————
[Jiya neenallade]
6.ಜೀಯಾನಿನ್ನಲದೆ ಇನ್ಯಾರು ಕಾಯ್ವರೊ
ರಾಯ ಬಾರೊ ರಾಘವೆಂದ್ರ ಬಾರೊ
ಸಹ್ಲಾದಣ್ಣನೆ ಬಾರೊ ಪ್ರಹ್ಲದರಾಯ ಬಾರೋ
ವ್ಯಾಸ ಬಾಹ್ಲೀಕನಾಗಿ ಮೆರೆವಂತ ಪ್ರಭುವೆ ಬಾರೊ ||೧
ತುಂಗಾ ವಾಸ ಮುನಿಪುಂಗವ ನೀ ಭಕ್ತ
ಜಂಗುಳಿ ಪಾಲಿಸಲು ಸಂಗೀತ ಪ್ರಿಯನೆ ಬಾರೊ ||೨
ಶ್ರೀಕರುಣಾ ಸಿಂಧು ಬಾರೊ ಸಾಕಬೆಕೈಯ್ಯ ಬಂದು
ಶ್ರಿಕರ ಶ್ರೀದವಿಠ್ಠಲನ್ನ ತೋರು ಬಾರೊ ||೩
————————————————–
[Raya baro]
7.ರಾಯ ಬಾರೋ ತಂದೆ ತಾಯಿ ಬಾರೋ ನಮ್ಮನ್ ಕಾಯ ಬಾರೋ
ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ
ವಂದಿಪ ಜನರಿಗೆ ಮಂದಾರ ತರುವಂತೆ
ಕುಂದದಭೀಷ್ಟವಕೊಡುತಿಪ್ಪ ರಾಯ ಬಾರೋ
ಕುಂದದಭೀಷ್ಟವ ಕೊಡುತಿಪ್ಪ ಸುರ ಮುನಿ
ಮಂದನ ಮತಿಗೆ ರಾಘವೇಂದ್ರ ರಾಯ ಬಾರೋ (೧)
ಆರು ಮೂರೂ ಏಳು ನಾಲ್ಕು ಎಂಟು ಗ್ರಂಥದ ಸಾರಾರ್ಥ
ತೋರಿದಿ ಸರ್ವರಿಗೆ ನ್ಯಾಯದಿಂದ ರಾಯ ಬಾರೋ
ತೋರಿದಿ ಸರ್ವರಿಗೆ ನ್ಯಾಯದಿಂದ ಸರ್ವಜ್ಞ
ಸೂರಿಗಳರಸನೆ ರಾಘವೇಂದ್ರ ರಾಯ ಬಾರೋ (೨)
ರಾಮ ಪದಾಂಬುಜ ಸದ್ಭೃಂಗಾ ಕೃಪಾ ಪಾಂಗ
ಭ್ರಾಮಕ ಜನರ ಮಾನ ಭಂಗಾ ರಾಯ ಬಾರೋ
ಭ್ರಾಮಕ ಜನರ ಮಾನ ಭಂಗ ಮಾಡಿದ
ಧೀಮಂತ ರೊಡೆಯನೆ ರಾಘವೇಂದ್ರಾ ರಾಯ ಬಾರೋ (೩)
ಭಾಸುರ ಚರಿತನೆ ಭೂಸುರ ವಂದ್ಯನೆ
ಶ್ರೀ ಸುಧೀಂದ್ರಾರ್ಯರ ವರ ಪುತ್ರ ರಾಯ ಬಾರೋ
ಶ್ರೀ ಸುಧೀಂದ್ರಾರ್ಯರ ವರ ಪುತ್ರಾ ವರ ಯೋಗಿ
ದೇಶಿಕ ರೋಡೆಯನೆ ರಾಘವೇಂದ್ರ ರಾಯ ಬಾರೋ (೪)
ಭೂತಳ ನಾಥನ ಭೀತಿಯ ಬಿಡಿಸಿದಿ
ಪ್ರೇತತ್ವ ಕಳೆದಿ ಮಹಿಶೀಯ ರಾಯ ಬಾರೋ
ಪ್ರೇತತ್ವ ಕಳೆದಿ ಮಹಿಶೀಯ ಮಹಾ ಮಹಿಮ
ಜಗನ್ನಾಥ ವಿಠಲನ ಪ್ರೀತಿ ಪಾತ್ರ ರಾಯ ಬಾರೋ (೫)
——————————————————————-
[dinakaranudisidanu]
8.ದಿನಕರನುದಿಸಿದನು ಧರೆಯೊಳಗೆ ದಿನಕರನುದಿಸಿದನು
ದಾನವ ಕುಲದಲಿ ಕ್ಷೋಣಿಯೊಳಗೆ ||ಪ||
ಪ್ರಥಮ ಪ್ರಹ್ಲಾದನಾಗಿ ಅವತಾರ ಮಾಡಿ ಸತತ ಹರಿಯ ನುತಿಸಿ
ಮತಿ ಹೀನನಾದ ತಂದೆಗೆ ನರಹರಿ ರೂಪವ
ರತಿಯಿಂದ ತೋರಿದ ಪ್ರಲ್ಹಾದರಾಜರೆಂಬ ||೧||
ವ್ಯಾಸಮುನಿಯು ಎನಿಸಿ ಸೋಸಿಲಿಂದ ವಾಸವನುತನ ಭಜಿಸಿ
ದಾಸನೆಂದು ಮೆರೆದೆ ನವ ವೃಂದಾವನದಿ
ಸೋಸಿಲಿ ಕರೆದರೆ ವಾಸ ಮಾಡುವುದಕ್ಕೆ ||೨||
ತುಂಗಭದ್ರೆಯ ತೀರದಿ ಮಂಗಳ ವರ ಮಂತ್ರಾಲಯ ಸ್ಥಳದಿ
ಅಂಗಜ ಪಿತ ನಮ್ಮ ಐಹೊಳೆ ವೆಂಕಟನ
ಕಂಗಳಿಂದಳಿ ಕಂಡ ಗುರು ರಾಘವೇಂದ್ರನೆಂಬ ||೩ ||
———————————————————-
[Eddu baruttare]
9.ಎದ್ದು ಬರುತ್ತಾರೆ ನೋಡೆ ತಾವು
ಮುದ್ದು ವೃಂದಾವನ ಮಧ್ಯದೊಳಗಿಂದ
ತಿದ್ದಿ ಹಚ್ಚಿದ ನಾಮ ಮುದ್ರೆಗಳೊಪ್ಪುತಲಿ ||ಅ.ಪ||
ಗಳದೊಳು ಶ್ರೀ ತುಲಸಿ ನಲಿನಾಕ್ಷಿ ಮಾಲೆಗಲು
ಚೆಲುವ ಮುಖದೊಲು ಹೊಳೆವ ದಂತಗಳಿಂದ ||೧||
ಹೃದಯ ಸದನದಲ್ಲಿ ಪದುಮನಾಭನ ಭಜಿಸಿ
ಮುದ ಮನದಿಂದ ನಿತ್ಯ ಸದಮಲ ರೂಪ ತಾಳಿ ||೨||
ದಾತ ಗುರು ಜಗನ್ನಾಥ ವಿಠ್ಠಲನ
ಪ್ರೀತೀಯ ಪಡಿಸುತ ದೂತರ ಸಲಹುತ ||೩||
————————————————-
[Bandano Raghavendra]
10.ಬಂದಾನೊ ರಾಘವೇಂದ್ರ ಇಂದಿಲ್ಲಿಗೆ
ಕಂದನ ಮೊರೆ ಕೇಳಿ ಜನನಿಯು ಬರುವಂತೆ
ಗಜವೇರಿ ಬಂದಾ ಜಗದಿ ತಾ ನಿಂತಾ
ಅಜಪಿತ ರಾಮನ ಪಾದಾಬ್ಜ ಸ್ಮರಿಸುತಲಿ ೧
ಹರಿಯ ಕುಣಿಸುತ ಬಂದ ನರಹರಿ ಪ್ರೀಯ ಬಂದ
ಶರಣಾಗತರಾ ಕರವ ಪಿಡಿವೆನೆಂದು ೨
ಪ್ರಹಲಾದ ವ್ಯಾಸ ಮುನೀಂದ್ರ- ರಾಘವೇಂದ್ರ
ನಿಲಿಸುತ ಮನವ ಮಧ್ವೇಶ ವಿಠ್ಠಲನಲ್ಲಿ ೩
——————————————————
[ Tunga teeradi ninta ]
11.ತುಂಗಾತೀರದಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ
ಸಂಗೀತಪ್ರಿಯ ಮಂಗಳಸುಗುಣಿ ತರಂಗ ಮುನಿಕುಲೋತ್ತುಂಗ ಕಾಣಮ್ಮ
ಚಲುವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯ
ಜಲಜಮಣಿಯು ಕೊರಳೊಳು ತುಳಸಿ ಮಾಲೆಗಳು ಪೇಳಮ್ಮಯ್ಯ
ಸುಲಲಿತ ಕಮಂಡಲ ದಂಡವನ್ನೆ ಧರಿಸಿಹನೆ ಪೇಳಮ್ಮಯ್ಯ
ಕ್ಷುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ || ೧ ||
ಸುಂದರ ಚರಣರವಿಂದ ಸುಭಕುತಿಯಲಿಂದ ಪೇಳಮ್ಮಯ್ಯ
ವಂದಿಸಿ ಸ್ತುತಿಸುವ ಭೂಸುರರು ಬಲುವೃಂದ ಪೇಳಮ್ಮಯ್ಯ
ಚಂದದಿಲಂಕೃತಿ ಯಿಂದ ಶೋಭಿಸುವ ಆನಂದ ಪೇಳಮ್ಮಯ್ಯ
ಹಿಂದೆ ವ್ಯಾಸ ಮುನಿಯೆಂದೆನಿಸಿದ ಕರ್ಮಂದಿಗಳರಸಘದಿಂದ ರಹಿತನೆ || ೨ ||
ಅಭಿನವ ಜನಾರ್ಧನವಿಠ್ಠಲನ ಧ್ಯಾನಿಸುವ ಪೇಳಮ್ಮಯ್ಯ
ಅಭಿವಂದಿತರಿಗೆ ಅಖಿಲಾರ್ಥಗಳ ಸಲ್ಲಿಸುವ ಪೇಳಮ್ಮಯ್ಯ
ನಭಮಣಿಯಂದದಿ ಭೂಮಿಯಲ್ಲಿ ರಾಜಿಸುವ ಪೇಳಮ್ಮಯ್ಯ
ಶುಭಗುಣನಿಧಿ ಶ್ರೀ ರಾಘವೇಂದ್ರಯತಿ ಅಬುಜ ಭವಾಂಡದೊಳು ಪ್ರಬಲ ಕಾಣಮ್ಮ || ೩ ||
Tunga teeradi kangolisuva
12.ತುಂಗಾತೀರದಿ ಕಂಗೊಳಿಸುವ ಮುನಿ
ಪುಂಗವರಾಯರ ನಯನದಿ ನೋಡೆ | ಮನದಿ
ಕೊಂಡಾಡೆ ವರಗಳ ಬೇಡೆ ||ಪ||
ಆದಿ ಯುಗದಿ ಪ್ರಹ್ಲಾಲದನೆನಿಸಿ ಕಯಾದುವಿನುದರದಿ
ಜನಿಸುತಲಿ | ಸಖಿ ಜನಿಸುತಲಿ
ವಾದಿಸಿ ಪಿತನೊಳು | ಮಾಧವ ಪರನೆಂದು ಮೋದದಿ
ಸ್ತಂಭದಿ ತೋರಿದ ಧೀರನೆ ||೧||
ಅದ್ವೈತಾಟವಿ ದಗ್ಧ ಕೃತಾನಲ
ಮಧ್ವ ಮತಾಬ್ಧಿಗೆ ಭೇಶನೆಂದೆನಿಸಿ | ಭೇಶನೆಂದೆನಿಸಿ
ಸದ್ವೈಷ್ಣವ ರುದ್ಧಾರಕ ನಾದ ಪ್ರಸಿದ್ಧ
ವ್ಯಾಸ ಕರ್ಮಂದಿ ಕುಲೇಂದ್ರನೆ ||೨||
ಧರಣಿ ತಳದಿ ರಾಘವೇಂದ್ರ ಸುನಾಮದಿ
ಮರಳಿ ಜನಿಸಿ ದಿವ್ಯ ಪರಿಮಳ ರಚಿಸಿ | ಪರಿಮಳ ರಚಿಸಿ
ಕರುಣದಿ ದ್ವಿಜರಿಗೆ ಎರದು ಪೊರೆವ ಗುರು
ಮರುತಾವೇಶದ ದೇವ ಸ್ವಭಾವನೆ ||೩||
ಸ್ವಾಂತದಿ ಭಜಿಪರ ಚಿಂತಿಯ ಕಳೆಯಲು
ಚಿಂತಾಮಣಿಯಂತೆ ಸಂತತ ಸಖಿಯೇ | ಸಂತತ ಸಖಿಯೇ
ಮಂತ್ರನಿಕೇತನ ಕ್ಷೇತ್ರದಿ ಸ್ಥಿರವಾಗಿ
ನಿಂತ ಪರಮ ಸುಶಾಂತ ಮೂರುತಿಯೆ ||೪||
ವಂದಿಸಿ ಸ್ತುತಿಸುವ ವಂದ್ಯಾಂಧಕರಿಗೆ
ಕಂದ ರಕ್ಷಿಗಳು ಕರುಣಿಸುತಿಹರೇ | ಕರುಣಿಸುತಿಹರೇ
ಇಂದು ಧರಾಮರ ಸನ್ನುತ ಶ್ಯಾಮ
ಸುಂದರ ವಿಠಲನ ದಾಸೋತ್ತಮರೆ ||೫||
———————————————————
Raya raghavendra
13.ರಾಯ ರಾಘವೇಂದ್ರ |
ರಾಯ ರಾಘವೇಂದ್ರ ಬಾಗಿ ಬೇಡುವೆ ನಿನ್ನಡಿಗೆ ||
ಬಗೆ ಬಗೆಯಲಿ ನಿನ್ನ ತುತಿಪರವನು ನಾ
ಲಗು ಬಗೆಯಲಿ ಭವ ತಾಪ ಕಳೆಯೆ ಬಾ
ದೂರ ಮಾಡ ಬ್ಯಾಡ, ಬಾಗಿ ಬೇಡುವೆ ನಿನ್ನಡಿಗೆ
ರಾಯ ರಾಘವೇಂದ್ರ ಬಾಗಿ ಬೇಡುವೆ ನಿನ್ನಡಿಗೆ ||೧||
ಸಾಧು ಸೇವಿತ ನಿನ್ನ ಪಾದ ನಂಬಿದೆ
ಪಂಚ ಭೇದ ಸುಜ್ಞಾನವ ಬೋಧಿಸು ದಯದಿ
ಭಾರ ನಿನ್ನದೈಯ್ಯ, ಬಾಗಿ ಬೇಡುವೆ ನಿನ್ನಡಿಗೆ
ರಾಯ ರಾಘವೇಂದ್ರ ಬಾಗಿ ಬೇಡುವೆ ನಿನ್ನಡಿಗೆ ||೨||
ಪಂಕಜ ನಾಭ ಶ್ರೀ ವೇಂಕಟ ವಿಠಲನ
ಕಿಂಕರರೊಳಗೆನ್ನ ಕಿಂಕರನೆನಿಸೊ
ತುಂಗಾ ತೀರವಾಸ, ಬಾಗಿ ಬೇಡುವೆ ನಿನ್ನಡಿಗೆ
ರಾಯ ರಾಘವೇಂದ್ರ ಬಾಗಿ ಬೇಡುವೆ ನಿನ್ನಡಿಗೆ ||೩||
———————————————————
Guru rayara nambiro
14.ಗುರುರಾಯರ ನಂಬಿರೋ ರಘವೇಂದ್ರ ಗುರುರಾಯರ ನಂಬಿರೋ (ಪ.)
ಗುರುರಾಯರ ನಂಬಿ ದುರಿತ ದುಷ್ಕೃತ ಹರಿಸಿ
ಪುರುಷಾರ್ಥ ಪರಮವ ಕರಗತ ಕೈಗೊಳ್ಳಿ ||
ಪರಿಮಳೇತ್ಯಾದಿ ಸದ್ ಗ್ರಂಥ ವಿರಚಿಸಿ, ವರ ಮೋಕ್ಷ ಪ್ರದವೆನಿಸುವಂಥ
ಎರಡೆರಡ್-ಹತ್ತು ಮತ್ತೆರಡೈದು ಗ್ರಂಥವ ಧರಣಿ ಸುರರಿಗಿತ್ತು ಕರುಣವ ತೋರಿದ [೧]
ರಾಮಕೃಷ್ಣ ನರಹರಿ ವೇದವ್ಯಾಸ, ಮಾಮನೋಹರ ವೃಂದಾವನದಿ
ವಾಮಾಂಗ ಎನಿಸಿಹ ಶ್ರೀಮಹಿಳೆ ಸಹಿತಾಗಿ ಕಾಮಿತಾರ್ಥದ ಹರಿ ನೇಮದಿ ನೆಲೆಸೀಹ [೨]
ಕೂಸೆರಡರ ದಯದೀ ಮಂತ್ರಾಲಯ, ದೇಶಕೆ ಪೋಗಿ ಮುದದಿ
ಲೇಸು ಸೆವೆಯ ಗೈಯ್ಯೆ , ಕಾಸರೋಗವನೀಗಿ ಮೇಶ ಗುರುಗೋವಿಂದ ದಾಸನ್ನಾಗಿಸಿದ [೩]
——————————————————-
Guru raghavendra teerthaneeta
15.ಗುರು ರಾಘವೇಂದ್ರ ತೀರ್ಥನೀತ ರಾಜಿಸುವಾತ ||ಪ ||
ಪಾಪೌಘಗಳೆಲ್ಲವ ನೋಡಿಸಿ ಪುಣ್ಯಗಳೀವಾತಾ ||
ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಪಾಹಿಮಾಂ
ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ರಕ್ಷಮಾಂ
ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ – ಬಹಳ
ಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾ
ಪುಣ್ಯವಂತರಿಂದ ಬಹು ಪೂಜೆಗೊಂಬಾತ – ನಮಗೆ
ಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ ||೧||
ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಪಾಹಿಮಾಂ
ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ರಕ್ಷಮಾಂ
ಕಾಮಕ್ರೋಧಾದಿಗಳನೆ ಕಾಲಲೊದ್ದಾತ – ಈತ
ವ್ಯೋಮಕೇಶನಂತೆ ನಾಲ್ಕು ವೇದ ಪ್ರಖ್ಯಾತಾ
ಭೂಮಿಯೊಳು ದುರ್ವಾದಿಗಳನೆ ಭೂರಿ ಗೆದ್ದಾತ
ಶ್ರೀ ಮಧ್ವಯೋಗೀಂದ್ರತೀರ್ಥ ಶಿಷ್ಯನೆಂಬಾತಾ ||೨||
ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಪಾಹಿಮಾಂ
ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ರಕ್ಷಮಾಂ
ಸಿದ್ಧವಿದ್ಯೆಗಳಲಿ ಬಹು ಪ್ರಸಿದ್ಧನಾದಾತಾ – ನಮ್ಮ
ಮಧ್ವಶಾಸ್ತ್ರಗಳನೆ ಮಾಡಿಕೊಟ್ಟಾತ
ಮಧ್ವೇಶವಿಠ್ಠಲನ ಧ್ಯಾನದಲಿದ್ದಾತ – ತುಂಗ
ಭದ್ರತೀರದಲ್ಲಿ ತಾನು ವಾಸವಾದಾತ ||೩||
ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಪಾಹಿಮಾಂ
ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ರಕ್ಷಮಾಂ
ರಾಘವೇಂದ್ರ ಪಾಹಿಮಾಂ ರಾಘವೇಂದ್ರ ರಕ್ಷಮಾಂ
—————————————————————–
Raghavendra gururayara sevisiro
16.ರಾಘವೆಂದ್ರ ಗುರುರಾಯರ ಸೇವಿಸಿರೊ, ಸೌಖ್ಯದಿ ಜೀವಿಸಿರೊ
ತುಂಗಾತೀರದಿ ರಘುರಾಮನ ಪೂಜಿಪರೊ, ನರಸಿಂಘನ ಭಜಕರೋ
ಶ್ರೀ ಸುಧೀಂದ್ರ ಕರ ಸರೋಜ ಸಂಜಾತಾ ಜಗದೊಳಗೆ ಪುನೀತಾ
ದಾಶರತಿಯ ದಾಸತ್ವವ ತಾ ವಹಿಸಿ, ದುರ್ಮತಿಗಲ ಜಯಿಸಿ
ಏ ಸಮೀರ ಮತ ಸಂಸ್ತಾಪಕರಾಗಿ ನಿನ್ದಕರನು ನೀಗಿ
ಬುಸುರರಿಗೆ ಸಮ್ಸೇವ್ಯ ಸದಾಚರಣೀ, ಕಂಗೋಲಿಸುವ ಕರುಣಿ (1)
ಕುಂದದೆ ವರ ಮಂತ್ರಾಲಯದಲ್ಲಿರುವ
ಕರದಲ್ಲಿಗೆ ಬರುವ ಬೃಂದವನಗತ ಮೃತ್ತಿಕೆ ಜಲಪಾನ
ಮುಕುತಿಗೆ ಸೋಪಾನ, ಸಂದರುಶನ ಮಾತ್ರದಲಿ ಮಹತ್ಪಾಪ ಬಡೆದೊಡಿಸಲಾಪ
ಮನ್ಂದ ಭಾಗ್ಯರಿಗೆ ದೊರೆಕದಿವರ ಸೇವ, ಶರಣರ ಸಂಜೀವಾ (2)
ಶ್ರೀದ ವಿಠ್ಠಲನ ಸನ್ನಿಧಾನ ಪಾತ್ರ
ಸಂಸ್ತುತಿಸಲು ಮಾತ್ರ, ಮೋದ ಪಡಿಸುತಿಹ ತಾನಿಹಪರದಲ್ಲಿ ಈತಗೆ ಸರಿಯೆಲ್ಲಿ
ಮೇಧಿನಿಯೊಳಗೆ ಇನ್ನರಸಲು ನಾ ಕಾಣೆ ಪುಸಿಯಲ್ಲಯ ಎನ್ಣಾಣೆ
ಪಾದ ಸ್ಮರಣೆಯ ಮಾಡದವನೆ ಪಾಪಿ, ನಾ ಪೇಳ್ವೆನು ಸ್ಥಾಪಿ (3)
——————————————————-
Bho Yati varadendra
17.ಭೊ ಯತಿವರದೇಂದ್ರ ಶ್ರೀ ಗುರು ರಾಯ ರಾಘವೇಂದ್ರ
ಕಾಯೊ ಎನ್ನ ಶುಭ ಕಾಯ ಭಜಿಸುವೆನು, ಕಾಯ್ವ ತಾಪಕೆ ಚಂದ್ರ ||
ನೇಮವು ಯೆನಗೆಲ್ಲಿ ಇರುವುದು ಕಾಮಾಧಮನಲ್ಲಿ
ಶ್ರೀ ಮಹಾಮಹಿಮನೇ ಪಾಮರ ನಾ ನಿಮ್ಮ ನಾಮ ಒಂದೆ ಬಲ್ಲೇ [೧]
ಶ್ರೀ ಗುರುರಾಯ ರಾಘವೆಂದ್ರ
ಕಂಡ ಕಂಡ ಕಡೆಗೆ ತಿರುಗಿ ಭೆಂಡಾದೆನು ಕೊನೆಗೆ
ಕಂಡ ಕಂಡವರನು ಕೊಂಡಾಡುತ ನಿಮ್ಮ ಕಂಡೆ ಕಟ್ಟ ಕಡೆಗೇ [೨]
ಮಂತ್ರವನಾರಿಯೇ ಶ್ರೀಮನ್ ಮಂತ್ರಾಲಯ ಧೊರೆಯೇ
ಅಂತರಂಗದೊಳು ನಿಂತು ಪ್ರೇರಿಸುವ ಅನನ್ತಾದ್ರೀಶ ಧೊರೆಯೇ [೩]
——————————————————-
Anandatirtha mata varidhi
18.ಆನಂದ ತೀರ್ಥ ಮತ ವಾರೀಧಿ ಚಂದಿರ ಗುರು ರಾಘವೇಂದ್ರಾರ್ಯ
ಧ್ಯಾನಿಸಿ ಬದುಕುವೆ ನಿಮ್ಮ ನಾಮವನು ಗುರು ರಾಘವೇಂದ್ರಾರ್ಯ
ವ್ಯಾಸರಾಯ ಮುನಿಯು ಆಗಿ ನಾಶಮಾಡಿ ಕುಹ್ಯೋಗವ ಗುರು ರಾಘವೇಂದ್ರಾರ್ಯ
ಲೇಸುತನದಿ ಕರ್ನಾಟಕ ಧೀಶನನು ರಕ್ಷಿಸಿದೆ ಗುರು ರಾಘವೇಂದ್ರಾರ್ಯ (೧)
ವೀಣೆ ವೆಂಕಟ ಅಭಿಧಾನದಿಂದಲಿ ಜನಿಸಿ ಗುರು ರಾಘವೇಂದ್ರಾರ್ಯ
ಪ್ರಾಣಪತಿ ಮತ ಧೀಯ ಪಠಿನನೆನಿಸಿ ಗುರು ರಾಘವೇಂದ್ರಾರ್ಯ (೨)
ವರದ ವಿಠಲ ಪರಹರಿ ವರ ಗುರುನಿಜ ಗುರು ರಾಘವೇಂದ್ರಾರ್ಯ
ಮರೆಯದಿರಲಿ ಈ ನುಡಿ ಸ್ಥಿರವಿರಲಿ ಎಂದೆಂದು ಗುರು ರಾಘವೇಂದ್ರಾರ್ಯ (೩)
———————————————————–
Gururaja guru sarvabhouma
19.ಗುರುರಾಜ ಗುರುಸಾರ್ವ ಭೌಮ
ಗುರುರಾಜ ಗುರುಸಾರ್ವಭೌಮ ನಿನ್ನಯ ಪಾದ ಸರಸಿಜ ಯುಗಗಭಿ ನಮಿಸುವೆ |
ಕರುಣಾ ಸಾಗರನೆಂದು ಚರಣವ ನಂಬಿದೆ, ಶರಣನ ಪಾಲಿಸು ಕರುಣೀಯೆ
ಅನ್ಯರ ಭಜಿಸದೆ ನಿನ್ನನೆ ಭಜಿಸುವೆ, ಎನ್ನ ಮರೆಯೋದಿದು ನ್ಯಾಯವೆ [1]
ನಿನ್ನ ಸೇವಿಪರಿಗೆ ಇನ್ನುಂಟೆ ಭಯ ಶೋಕ,ಉನ್ನಂತ ಸುಖದೊಳಗೆ ಇರುವರೋ
ನಿನ್ನ ಸೇವಿಸಿ ಭವ ಬನ್ನ ಪಡುವದಿದು, ಎನ್ನ ಅಪರಾದ ವೇನೈಯ್ಯಾ [2]
ಹಿಂದಿನ ಮಹಿಮದಿಂದೇನು ಎನಗೈಯ್ಯ, ಇಂದು ಮಹಾಮಹಿಮೆ ತೋರಿಸೊ
ನಾತನು ನೀನಲ್ಲೆ ದೂತನು ನಾನಲ್ಲೆ, ಯಾತಕ್ಕೆ ಈ ಥರ ಮಾಡಿದಿ [3]
ಜ್ಞಾನಿಗಳರಸನೆ ಮೌನಿ ಶಿರೋಮಣಿ ಧ್ಯಾನವ ಸಂತತ ನೀಡಯ್ಯ
ಸಂತತ ಎನ್ನ ಮನೊ ಅಂತರದಲಿ ನೀ, ನಿಂತು ಪಾಲಿಸು ಎನ್ನ ಮಹರಾಯಾ [4]
ನಿನ್ನಲ್ಲಿ ಹರಿ ದಯಾ ಉನ್ನಂತ ಇರಲಿನ್ನು, ಎನ್ನಲ್ಲಿ ನಿನ್ನ ದಯಾ ಇರಲಯ್ಯ
ದಾತ ಗುರು ಜಗನ್ನಾಥ ವಿಠ್ಠಲ ನಿನ್ನ ಮಾತು ಲಾಲಿಸಿದಂತೆ ಪೊರೆ ಯೆನ್ನ [5]
—————————————————————–
20.ನೋಡೆಲೆ ಮನವೆ ಕೊಂಡಾಡು ಗುರುಗಳ ಪಾದ-ಈಡು ಇಲ್ಲವೊ ಪುಣ್ಯಕೆ|| ಪ ||
ನಾಡೊಳಗೆ ಗುರುರಾಘವೇಂದ್ರ ರಾಯರ ಸೇವೆ-ಮಾಡಿದವ ಪರಮ ಧನ್ಯ – ಮಾನ್ಯ || ಅ ||
ನಿಷ್ಠೆಯಿಂದಲಿ ಸ್ಮರಿಸೆ ಕಷ್ಟಗಳು ದೂರ ಮನೋ-ಭೀಷ್ಟಗಳ ಪೂರೈಪರೋ
ಅಷ್ಟಸೌಭಾಗ್ಯವನೆ ಕೊಟ್ಟು ಸುಜನರಿಗೆ ಶ್ರೀ-ವಿಷ್ಣುದಾಸ್ಯವ ತೋರ್ಪರೋ
ದೃಷ್ಟಿಯಿಂದಲಿ ನೋಡಲನೇಕ ಜನ್ಮದ ಪಾಪ-ಬಿಟ್ಟು ಪೋಪವೊ ಕ್ಷಣದಲಿ
ಎಷ್ಟು ಹೇಳಲಿ ಇವರ ನಿಷ್ಠ ಮಹಾತ್ಮ್ಯೆಯನು-ದುಷ್ಟರಿಗೆ ದೊರೆಯದಿವರ ಸೇವಾ || ೧ ||
ಹಲವು ಕ್ಷೇತ್ರಗಳೇಕೆ ಹಲವು ತೀರ್ಥಗಳೇಕೆ-ಫಲ ಸುಲಭದಲ್ಲಿ ಇರಲು
ಬಲವು ಇದ್ದದ್ದರೊಳು ಪ್ರದಕ್ಷಿಣೆ ಸುಪದಜಲ-ತಲೆಯಲ್ಲಿ ಧರಿಸಿ ನಿತ್ಯ
ಮಲರಹಿತನು ಆಗಿ ದಂಡಪ್ರಣಾಮವ ಮಾಡೆ-ಒಲಿವರು ಕರುಣದಲಿ ಬೇಗ
ಜಲಜನಾಭನು ನಾಲ್ಕುರೂಪದಿಂದಿವರಲ್ಲಿ-ಸಿಲುಕಿ ಪೂಜೆಯಗೊಂಬ ಸತತ – ಮೋಕ್ಷದಾತಾ || ೨ ||
ಹರಿದಾಸರಿದ್ದ ಸ್ಥಳ ವರಕಾಶಿ ಮೊದಲಾದ-ಕುರುಕ್ಷೇತ್ರಕಿಂತಧಿಕವೋ
ಸುರ ಋಷಿ ಮುನಿಗಳು ಇಲ್ಲಿಹರು ವೈಕುಂಠ-ಸರಿಮಿಗಿಲು ಎಂದೆನಿಪುದೋ
ಪರಮ ಸುಜ್ಞಾನಿಗಳಿಗೀ ಫಲವು ದೊರಕುವುದು-ತರತಮದಿ ಇತರ ಜನಕೆ
ಗುರುಶ್ರೀಶವಿಠ್ಠಲನು ಇವರ ರೂಪನಾಮದಲಿ-ಪರಿಪರಿಯ ವರವಗರೆವಾ – ಪೊರೆವಾ || ೩ ||
————————————————————
Hari sarvottama
ರಚನೆ: ಶ್ರೀ ಕಮಲೇಶ ದಾಸರು
21.ಹರಿ ಸರ್ವೋತ್ತಮ ವಾಯು ಜೀವೋತ್ತಮ
ಗುರು ರಾಘವೇಂದ್ರರೆಂದರಿ ಮನವೇ
ನಿರುತ ನೀ ಗುರುವರ ಭಜನೆಯ ಮಾಡು
ದುರಿತ ಗಳೆಲ್ಲವೂ ಓಡಿ ಹೋಗುವವೂ ||
ಜಪದ ಮಣಿ ಕಮಂಡಲ ದಂಡದಿಂದ ಒಪ್ಪುವ
ಕಮಲೇಶ ಪ್ರಿಯ ರಾಘವೇಂದ್ರರು ||
ಕಲಿಯುಗದಲಿ ಕಾಮಧೇನು ಸುರ ತರುವಂತೆ
ಯೆಲ್ಲರ ಇಷ್ಟವ ನೀವ ಗುರುವೇಂದ್ರ ಇವರೈಯ್ಯ ||
———————————————————-
Teraneri
22.ತೇರನೇರಿ ಮೆರೆದು ಬರುವ ಭೂಸುರವಂದ್ಯ ಯಾರಕ್ಕ|
ಗುರು ರಾಘವೇಂದ್ರರೆಂತೆಂಬೊ ಯತಿಕುಲತಿಲಕ ಕೇಳ್ತಂಗಿ ||ಪ||
ಚಂದದಿ ಕುಂದಣ ಮುಕುಟವ ಧರಿಸಿದ ಸುಂದರನೀತ ಯಾರಕ್ಕ |
ತಂದೇಯ ಅಘ ಹರಿದು ನರಹರಿಯ ತೋರಿದ ಪ್ರಹ್ಲಾದರಾಯ ಕೇಳ್ತಂಗಿ ||೧||
ವಿಪ್ರರು ದಾಸರು ಯತಿತತಿಗಲ ಕೂಡಿ ಬರುತಿಹ ನೀತ ಯಾರಕ್ಕ|
ಕಪ್ಪು ಕೃಷ್ಣನ ಒಪ್ಪಿಸಿ ಕುಣಿಸಿದ ವ್ಯಾಸರಾಯ ಕೇಳ್ತಂಗಿ ||೨||
ವರಹಜ ನದಿಯ ತೀರದಿ ಇದ್ದು ಭಕುತರ ಪೊರೆವವ ಯಾರಕ್ಕ|
ಹರುಷದಿ ಅನಂದ ವಿಠಲನ ಸಾರಿದ ಪರಿಮಳಾರ್ಯ ಕೇಳ್ತಂಗಿ ||೩||
——————————————————-
Satata margadi
23.ರಥವಾನೇರಿದ ರಾಘವೇಂದ್ರ | ಸದ್ಗುಣಗಳ ಸಾಂದ್ರ ||
ಸತತ ಮಾರ್ಗದಿ ಸಂತತ ಸೇವಿಪರಿಗೆ |
ಅತಿ ಹಿತದಲಿ ಮನೋರಥವ ಕೊಡುವೆನೆಂದು |a.pa|
ಚತುರ ದಿಕ್ಕು ವಿದಿಕ್ಕುಗಳಲ್ಲಿ | ಚರಿಪಾಜನರಲ್ಲಿ
ಮಿತಿಯಿಲ್ಲದೆ ಬಂದೋಲೈಸುತಲಿ | ವರವಾ ಬೇಡುತಲಿ
ನುತಿಸುತ ಪರಿಪರಿ ನತರಾಗಿಹರಿಗೆ,
ಗತಿಪೇಳದೆ ಸರ್ವಥಾ ನಾ ಬಿಡೆನೆಂದು ||೧||
ಅತುಳ ಮಹಿಮಾನ ದಿನದಲ್ಲಿ | ದಿತಿಜವಂಶದಲಿ
ಉತ್ಪತ್ತಿಯಾಗಿ ಉಚಿತದಲ್ಲಿ | ಉತ್ತಮ ರೀತಿಯಲ್ಲಿ
ಅತಿಶಯವಿರುತಿರೆ ಪಿತನ ಭಾದೆಗಳು,
ಮನ್ಮಥ ಪಿತನೊಲಿಸಿದ ಜಿತ ಕರುಣದಲಿ ||೨||
ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ |
ಯತಿರಾಘವೇಂದ್ರ, ಗುರುರಾಘವೇಂದ್ರ,
ಪತೀತತೋದ್ಧಾರಿಯೇ ಪಾವನಕಾರಿಯೇ |
ಕರಮುಗಿವೆನು ಧೊರೆಯೆ
ಕ್ಷಿತಿಯೊಳು ಗೋಪಾಲ ವಿಠಲನ ಸ್ಮರಿಸುತ,
ಪ್ರತಿ ಮಂತ್ರಾಲಯದೊಳು ಅತಿ ಮೆರೆವ ||೩||
————————————————-
ಶ್ರೀ ವಾದಿ ರಾಜರು **
ತಪೋ ವಿದ್ಯಾ ವಿರಕ್ತ್ಯಾದಿ ಸದ್ ಗುಣೌ ಘಾಖರಾನಹಂ
ವಾದಿರಾಜ ಗುರುಂ ವಂದೇ ಹಯಗ್ರೀವ ಪದಾಶ್ರಯಾನ್ ||
Vadiraja munipa
24.ವಾದಿರಾಜ ಮುನಿಪಾ ಹಯಮುಖ
ಪಾದಕಮಲ ಮಧುಪಾ [ ಪ ]
ನೀ ದಯದಲಿ ತವ ಪಾದ ಧ್ಯಾನವನು
ಆದರದಲಿ ಕೊಟ್ಟಾದರಿಸೆನ್ನನು [ಅ.ಪ ]
ಮೂಷಕ ಬಿಲದಿಂದ ಉದರಪೋಷಕ ಬರಲಂದು
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷವಗೈಸಿದೆ [ ೧ ]
ಮುಂದೆ ಭೂತನರನಾ ಪ್ರೇರಿಸಿ ಹಿಂದೆ-ವೊಬ್ಬ ನರನಾ
ನಿಂದಿರಿಸಿದೆ ಆನಂದದಿಂದ ಜನ
ವೃಂದ ನೋಡುತಿರೆ ಅಂದಣ ನಡಿಸಿದ್ಯೋ [ ೨ ]
ಶಾಸ್ತ್ರ ಪ್ರಸಂಗದಲಿ ನಾರಾಯಣ ಭೂತರ ಗೆಲಿದಿಲ್ಲಿ
ಖ್ಯಾತಿಯಿಂದ ಬಹು ಮಾತನಾಡಿ ಶ್ರೀ
ನಾಥನ ಮಂದಿರ ಪ್ರೀತಿಲಿ ತರಿಸಿದ್ಯೊ [ ೩ ]
ತುರಗವದನ ಪಾದಾ ಭುಜದಲಿ ಧರಿಸಿಕೊಂಡ ಮೋದ
ವರ ಕಡಲೆ ಮಡ್ಡಿಯನು ಕರದಿಂದ ಧರಿಸಿ
ಉಣಿಸಿದ ಗುರುವರ ಶುಭಕರ [ ೪ ]
ಆ ಮಹಾ ಗೋಪಾಲವಿಠಲನ ಪ್ರೇಮ ಪೂರ್ಣ ಪಾತ್ರ
ಧೀಮಂತರಿಗೆ ಸುಕಾಮಿತಾರ್ಥಗಳ
ನೇಮದಿಂದೀಯುವ ಪಾವನ ಚರಿತ [೫]
—————————————————-
*** ಶ್ರೀ ವ್ಯಾಸರಾಜರ ಸ್ತೋತ್ರ ***
ಅರ್ಥಿಕಲ್ಪಿತ ಕಲ್ಪೋಯಂ ಪ್ರತ್ಯರ್ಥಿ ಗಜಕೇಸರಿ
ವ್ಯಾಸತೀರ್ಥ ಗುರುರ್ಭೂಯಾತ್ ಅಸ್ಮದಿಷ್ಟಾರ್ತ ಸಿದ್ಧಯೆ
25.ಜಯ ಜಯ ವೈಷ್ಣವ ಪಯೊನಿಧಿ ಚಂದ್ರಗೆ, ಜಯ ಜಯ ವ್ಯಾಸ ಯತೀಂದ್ರರಿಗೆ |
ಜಯ ಜಯ ವರ ಕರ್ನಾಟಕ ಪತಿಗೆ, ಜಯ ಸಿಂಹಾಸನ ವೇರಿದಗೆ ||
ನಾಲ್ಕು ಶಾಸ್ತ್ರಂಗಳ ಪಾರಂಗತರಿಗೆ, ಕಾಕು ಮತಗಳನು ತುಳಿದವಗೆ
ಆ ಕಮಲಾಪತಿ ಭಕುತ ವರೇಣ್ಯಗೆ ಶ್ರೀಕರ ಚಂದ್ರಿಕಾಚಾರ್ಯರಿಗೆ (೧)
ಹನುಮನ ಭಾಷ್ಯವ ಅಣಿಮಾಡಿದಗೆ, ಹನುಮಗೆ ಭವನಗಳ್ ಕಟ್ಟಿದಗೆ
ಹನುಮನ ಯಂತ್ರದಿ ಬಿಗಿದಪ್ಪಿದಗೆ, ಮುನಿತ್ರಯದಲಿ ಸೇರಿದ ದೊರೆಗೆ (೨)
ಮಾಯ ವಾದಿಗಳನು ಗೆಲಿದವಗೆ, ಸ್ವೀಯ ಮಥವ ಸ್ಥಾಪಿಸಿದವಗೆ
ನ್ಯಾಯಾಮೃತ ಧಾರೆಯ ಅಭಿಷೇಕದಿ ಆ ಯದುಪತಿಯನು ಕುಣಿಸಿದಗೆ (೩)
ಚಕ್ರ ಧರನ ಸುಳುಗಳ ತಿಲಿದವಗೆ, ಮಿಕ್ಕ ಮತಗಳನು ಅಳಿದವಗೆ
ವಕ್ರ ಯುಕುತಿಗಳ ತುಕ್ಕುಡ ಗೈಯುವ ತರ್ಕ ತಾಂಡವದಿ ನಲಿದವಗೆ (೪)
ಕೃಷ್ಣ ದೇವ ರಾಯನ ಕುಲ ಪತಿಗೆ, ಕಷ್ಟದ ಕುಹ ಯೋಗವ ಕೊಂದವಗೆ
ಶಿಷ್ಟ ಜನಗಳಿಗೆ ಇಷ್ಟಾರ್ಥಗಳನು ವೃಷ್ಟಿಯ ಗೈವ ಪ್ರಸನ್ನರಿಗೆ (೫)
————————————————————-
Guru vyasaraya paliso
26.ಗುರು ವ್ಯಾಸರಾಯಾ ಪಾಲಿಸೋ, ಮೊರೆಹೊಕ್ಕೆ ನಿನ್ನ |
ಶರನೆನ್ನ ಮಾತು ಲಾಲಿಸೋ ||
ಕರುಣಾಕರ ಭವ ಕರಿಕರ ಗಾಣದೆ, ಕರವ ಪಿಡಿದು ಪೊರೆಯೆಂದು |
ನಿನ್ನ ನಾ ಕರೆವೆ | ಬಾಯಿತೆರೆವೆ | ಆಲ್ಪರಿವೆ | ನತಜನ- ಸುರತರುವೆ ||ಅ.ಪ.||
ಮಧ್ವಮುನಿ ಸುಮತೋದ್ಧಾರಕ | ಯತಿಕುಲ ತಿಲಕ | ಅದ್ವೈತಾರಣ್ಯ ಪಾವಕ |
ವಿದ್ವದ್ ಜನತತಿ ಸದ್ವಿನುತನ ಪಾದ ಪದ್ಮಕೆ ನಮಿಸುವೆ,
ಶುದ್ಧ ಸುಜ್ಞಾನವ- ನೀಡೋ | ಅಘದೂಡೋ |
ಕೃಪೆ ಮಾಡೋ | ಸುತನೆಂದು ನೋಡೋ ||೧||
ವಿರಚಸಿ ಗ್ರಂಥತ್ರಯವ | ಬೋಧಿಸಿ ಭೇದ | ಪೊರೆದಿ ದ್ವಿಜ ಪರಿವಾರವ |
ನೆರೆನಂಬಿದ ಭೂವರಗೆ ಧಾವಿಸುತ |
ಬರದಿ ಬರುವ, ಕುಹಯೋಗ ಕಂಟಕವ ದಯದಿ, ನೀ ತರಿದಿ |
ಸುಖಗರೆದಿ | ಧಾರುಣಿಯೋಳು ಮೆರೆದಿ ||೨||
ವಂದಿಪೆ ಸುಗತಿದಾಯಕ | ಶ್ರೀವರ ಶಾಮ-ಸುಂದರ | ಕೃಷ್ಣೋಪಾಸಕ |
ತಂದೆ ಎಂದು | ನಿನ್ನ ಪೊಂದಿ ಪ್ರಾರ್ಥಿಸುವೆ ಬಂದು ಪೊರೆಯೋ,
ಪುರಂದರ ದಾಸರನ ಪ್ರಿಯ |
ಕವಿಗೇಯ ಶುಭಕಾಯಾ, ಕರುಣದಿ ಪಿಡಿ ಕೈಯ್ಯಾ ||೩||
—————————————————————-
*** ಶ್ರೀ ಶ್ರೀಪಾದರಾಜರ ಸ್ತೋತ್ರ ***
ಕಾಲೇ ಫಲತಿ ಸುರದೃಮಃ ಚಿಂತಾಮಣಿರಪಿಯಾಚನೇ ದಾತಾ
ವರ್ಷತಿ ಸಕಲಮಭೀಷ್ಟಂ ದರ್ಶನ ಮಾತ್ರಾತ್ ಶ್ರೀಪಾದರಾನ್ ಮುನಿ:
*** ಶ್ರೀ ಜಯತೀರ್ಥರ ಸ್ತೋತ್ರ ***
ಚಿತ್ರೈ ಪದೈಶ್ಚ ಗಂಭೀರ್ಯೈ: ವಾಕ್ಯೈರ್ ಮಾನೈರಖಂಡಿತೈ:
ಗುರುಭಾವಂ ವ್ಯಂಜಯಂತಿ ಭಾತಿ ಶ್ರೀ ಜಯತೀರ್ಥ ವಾಕ್
ಶ್ರೀಮದಾನಂದ ತೀರ್ಥರು
ಅಭ್ರಮಂ ಭಂಗ ರಹಿತಂ ಅಜಡಂ ವಿಮಲಂ ಸದಾ
ಆನಂದ ತೀರ್ಥಂ ಅತುಲಂ ಭಜೆ ತಾಪತ್ರಯಾಪಹಂ.
ಪಂಚ ಭೇದಾತ್ಮಕ ಪ್ರಪಂಚಕೆ ಪಂಚ
ರೂಪಾತ್ಮಕನೆ ದೈವಕ ಪಂಚ ಮುಖ
ಶಕ್ರಾದಿಗಳು ಕಿಂಕರರು ಶ್ರೀ ಹರಿಗೆ ,
ಪಂಚ ವಿಂಶತಿ ತತ್ವ ತರತಮ ಪಂಚಿಕೆಗಳನು
ಪೇಳ್ದ ಭಾವಿ ವಿರಿಂಚಿ ಎನಿಪಾನಂದ
ತೀರ್ಥರ ನೆನೆವೆನನುದಿನವು |
27.ಅಣು ವಾಯು ಸ್ತುತಿ (ಕಲ್ಯಾಣಿ ದೇವಿ ವಿರಚಿತ)
ಚಂದ್ರವಿಭೂಷಣ ಚಂದ್ರಪುರೋಗೈರ್ವಂದ್ಯಪದಾಂ ಬುರುಹಂ ಪವಮಾನಂ
ಆನಂದತೀರ್ಥ ಮಹಾಮುನಿರಾಜಂ ಗೋವಿಂದ ಭಕ್ತ ಶಿಖಾಮಣಿ ಮೀಡೆ [೧]
ಪ್ರಾಣ ಗಣಾಧಿಪತಿಂ ಭುವಿ ವಾಣಿ ಪ್ರಾಣಸಮಂ ದಯಯಾ ಹ್ಯವತೀರ್ಣಂ
ಆನಂದತೀರ್ಥ ಮಹಾಮುನಿರಾಜಂ ಗೋವಿಂದ ಭಕ್ತ ಶಿಖಾಮಣಿ ಮೀಡೆ [೨]
ಶ್ರೀ ಹನುಮಂತಮನಂತಭುಜಿಶ್ಯಂ ಲಂಘಿತ ಸಿಂಧು ಮುದಸ್ತ ಮಹೀದ್ರಂ
ಆನಂದತೀರ್ಥ ಮಹಾಮುನಿರಾಜಂ ಗೋವಿಂದ ಭಕ್ತಶಿಖಾಮಣಿ ಮೀಡೆ [೩]
ಭೀಷಣ ದುಷ್ಟ ಕುಲಾಂತಕಭೀಮಂ ಭೀಮಮ ಭೀತಿ ದಮಿಷ್ಟ ಜನಾನಾಂ
ಆನಂದತೀರ್ಥ ಮಹಾಮುನಿರಾಜಂ ಗೋವಿಂದಭಕ್ತಶಿಖಾಮಣಿ ಮೀಡೆ [೪]
ಶಾಂತಮನಂತ ನಿಶಾಂತ ಸಮಾಹ್ವೆ ಶಾಂತ ಕುಲೆಖಕುಲೇಖಿಲ ಜಾತಂ
ಆನಂದತೀರ್ಥ ಮಹಾಮುನಿರಾಜಂ ಗೋವಿಂದ ಭಕ್ತಶಿಖಾಮಣಿ ಮೀಡೆ [೫]
—————————————–
28.ಮಧ್ವ ರಾಯರ ಕರುಣಾ ಪಡೆಯದವ ಧರೆಯೊಳಗೆ ಇದ್ದರೇನು, ಇಲ್ಲದಿದ್ದರೇನು
ಮಧ್ವ ಮತವೆ ಮತವು ಸಕಲ ಶೃತಿಸಮ್ಮತವು |
ಮಧ್ವರಾಯರ ಧ್ಯಾನ ಅಮೃತ ಪಾನ ||
ಮಧ್ವರಾಯರ ಲೀಲೆ ನವರತುನದ ಮಾಲೆ |
ಮಧ್ವರಾಯರ ಸ್ಮರಣೆ ಕುಲ ಕೋಟಿ ಉದ್ಧರಣೆ ||೧||
ಮಧ್ವರಾಯರ ಕಥೆ ಕೇಳಲು ದುರಿತ ಹಥ |
ಮಧ್ವರಾಯರ ಭಕುತಿ ಮಾಡೇಮುಕುತಿ ||
ಮಧ್ವರಾಯರ ಸ್ತೋತ್ರ ಮಾಡಿದವ ಸತ್ಪಾತ್ರ |
ಮಧ್ವರಾಯರ ಭಜನೆ ದುಷ್ಕರ್ಮ ತ್ಯಜನೆ ||೨||
ಮಧ್ವರಾಯರ ದಾಸ ನಾದವನೇ ನಿರ್ದೋಷ|
ಮಧ್ವರಾಯರ ಭಂಟ ಜಗಕೆನೆಂಟ
ಮಧ್ವರಮಣ ನಮ್ಮ ವಿಜಯವಿಠಲನಾದ |
ಮಧ್ವೇಶನ ಕರುಣಾ ಪಡೆದವನೇ ಧನ್ಯ ||೩||
————————————————-
29.ಆನಂದ ತೀರ್ಥರ ಆರಾಧನೆ ಇದು ಆನಂದ ಪೂರಿತ ಮಹೋತ್ಸವ
ನಾವಿಂದು ನಿರ್ಮಲ ಮಾನಸದಿಂದ ಗೋವಿಂದ ಭಕುತರ ಪೂಜಿಸುವ ||
ಜೀವನ ಚರಿತೆಯ ಕೇಳಿ ಮಹಾತ್ಮರ ಜೀವನ ಮಾದರಿ ಎಮಗಿರಲಿ
ಜೀವನದಲಿ ಬೇಸರ ಪಡ ಬೇಡಿರಿ , ಜೀವೋತ್ತಮರೆ ರಕ್ಷಿಸಲಿ [೧]
ಎಮ್ಮ ಮತಕೆ ಸಮ ಮತವಿಲ್ಲವು, ಪರಬೊಮ್ಮನ ಸಮ ದೇವತೆ ಇಲ್ಲ
ಎಮ್ಮ ನುಡಿಗೆ ಸಮ ಹಿತ ನುಡಿ ಇಲ್ಲವು , ಹಮ್ಮಿನಲಿ ಪರಿ ಬೋಧಿಸುವ [೨]
ನಿನ್ನಯ ವಿಷಯವ ವರ್ಣಿಪುದೆಲ್ಲ ಪ್ರಸನ್ನ ಹೃದಯದಲಿ ಧೈರ್ಯದಲಿ
ಇನ್ನು ವೀರ ವೈಷ್ಣವನಾಗುವೆ , ಎನ್ನುವ ವಚನ ಕುಸುಮವೆರಚಿ [೩]
—————————————————–
30.ಮಧ್ವರಾಯ ಗುರು ಮಧ್ವರಾಯ ಗುರು
ಮಧ್ವರಾಯ ಗುರು ಮಧ್ವರಾಯ||
ರಾಮಾವತಾರದೊಲೊಮ್ಮೆ ಮಧ್ವರಾಯ
ನೀ ಮಹಾ ಹನುಮನಾದ್ಯೋ ಮಧ್ವರಾಯ
ಕಾಮಿತಾರ್ಥ ಸುರರಿಗಿತ್ಯೋ ಮಧ್ವರಾಯ
ಮುಷ್ಟಿಯಿಂದ ರಾವಣನ ಗೆದ್ಯೋ ಮಧ್ವರಾಯ ||೧
ಕೃಷ್ಣಾವತಾರದೊಲೊಮ್ಮೆ ಮಧ್ವರಾಯ
ನೀ ದಿಟ್ಟ ಕಲಿ ಭೀಮನಾದ್ಯೋ ಮಧ್ವರಾಯ
ಕುಟ್ಟಿದ್ಯೋ ಕೌರವನೆಲ್ಲ ಮಧ್ವರಾಯ ಶ್ರೀ
ಕೃಷ್ಣನ ಹಿತವ ಪಡೆದ್ಯೋ ಮಧ್ವರಾಯ ||೨
ಧರಣಿಯೊಳು ಯತಿಯಾಗಿ ಮಧ್ವರಾಯ
ದುರುಳ ಮಾಯಿ ಮದವ ಮುರಿದ್ಯೋ ಮಧ್ವರಾಯ
ಗುರು ವ್ಯಾಸರ ಹಿತವ ಪಡೆದ್ಯೋ ಮಧ್ವರಾಯ
ಪುರಂದರ ವಿಠ್ಠಲನ ದಾಸನಾದ್ಯೋ ಮಧ್ವರಾಯ||೩
ಶ್ರೀ ವೇದವ್ಯಾಸ ದೇವರು
ವೇದ ಪೀಠ ವಿರಿಂಚಿ ಭವ ಶಕ್ರಾದಿ ಸುರ
ವಿಜ್ಞಾನದಾಯಕ ಮೋದ ಚಿನ್ಮಯ ಗಾತ್ರ
ಲೋಕ ಪವಿತ್ರ ಸುಚರಿತ್ರ, ಛೇದ ಭೇದ
ವಿಷಾದ ಕುಟಿಲಾಂತಾದಿ ಮಧ್ಯ
ವಿದೂರ ಆದಾನಾದಿಕಾರಣ
ಬಾದರಾಯಣ ಪಾಹಿ ಸತ್ರಾಣ ||
31.ಮಧ್ವಾಂತರ್ಗತ ವೇದವ್ಯಾಸ ಕಾಯೊ
ಶುದ್ಧ ಮೂರುತಿಯೆ ಸರ್ವೇಶ ||ಪ||
ಶ್ರದ್ಧೆಯಿಂದಲಿ ನಿನ್ನ ಭಜಿಪ ಭಕ್ತಗೆ
ಬುದ್ಧ್ಯಾದಿಗಳ ಕೊಟ್ಟು ಉದ್ಧರಿಸೋ ದೇವರ ದೇವ ||ಅ.ಪ||
ದ್ವಾಪರದಲಿ ಒಬ್ಬ ಮುನಿಪ ತನ್ನ ಕೋಪದಿಂದಲಿ ಕೊಟ್ಟ ಶಾಪ
ಶಾಪಿಸಲು ಜ್ಞಾನ ಲೋಪ ವಾಗೆ, ಅಪಾರ ತತ್ತ್ವಸ್ವರೂಪ
ಶ್ರೀಪತಿಯೇ ಕಾಯೆಂದು ಮೊರೆಯಿಡೆ ಪಾಪ ವಿರಹಿತಳಾದ ಯಮುನೆಯ
ದ್ವೀಪದಲಿ ಅಂಬಿಗರ ಪೆಣ್ಣಿನ ರೂಪಗೊಲಿದವನಲ್ಲಿ ಜನಿಸಿದೆ || ೧ ||
ವೇದವಾದಿಗಳೆಲ್ಲ ಕೆಡಲು ತತ್ತ್ವ-ವಾದಿ ಜನರು ಬಾಯ ಬಿಡಲು
ಮೇದಿನಿ ಸುರರು ಮೊರೆಯಿಡಲು , ನಾನಾ ವೇದ ವಿಭಾಗ ರಚಿಸಲು
ಮೋದದಿಂದ ತದರ್ಥಬೋಧಕ ವಾದ ಸೂತ್ರ ಪುರಾಣ ರಚಿಸಿ
ವಾದಿಗಳ ನಿರ್ವಾದ ಮಾಡಿದ ಸಾಧು ವಂದಿತ ಬಾದರಾಯಣ || ೨ ||
ಸುಮತಿಗಳಿಗೆ ನೀ ಬೋಧಿಸಿದೆ ಮಿಕ್ಕ ಕುಮತಿಗಳನು ನೀ ಛೇದಿಸಿದೆ
ಕ್ರಿಮಿಯಿಂದ ರಾಜ್ಯವಾಳಿಸಿದ ಜಗತ್ ಸ್ವಾಮಿ ನೀನೆಂದು ತೋರಿಸಿದೆ
ವಿಮಲರೂಪನೆ ಕಮಲನಾಭನೆ ರಮೆಯ ಅರಸನೆ ರಮ್ಯಚರಿತನೆ
ಮಮತೆಯಲಿ ಕೊಡು ಕಾಮಿತಾರ್ಥವ ನಮಿಸುವೆನು ಹಯವದನ ಮೂರುತಿ || ೩ ||
32.ದೇವತಾ ಕಕ್ಷ
ಸತ್ಯ ಜಗತ್ತಿದು ಪಂಚ ಭೇದವು
ಸತ್ಯ ಜಗತ್ತಿದು ಪಂಚ -ಭೇದ ವು ನಿತ್ಯ ಶ್ರೀ- ಗೋವಿಂದನ
ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ ||
ಜೀವ ಈಶಗೆ ಭೇದ ಸರ್ವತ್ರ, ಜೀವ-ಜೀವಕೆ ಭೇದವು
ಜೀವ-ಜಡ ಜಡ-ಜಡಕೆ ಭೇದ, ಜೀವ-ಜಡ ಪರಮಾತ್ಮಗೆ ||
ಮಾನು-ಷೋತ್ತಮ-ಗಧಿಪ ಕ್ಷಿತಿಪರು, ಮನುಜ ದೇವ ಗಂಧರ್ವರು
ಜ್ಞಾನಿ ಪಿತ್ರಾ-ಜಾನ-ಕರ್ಮಜ ದಾನವಾರಿ ತತ್ವಾತ್ಮರು ||
ಗಣಪ ಮಿತ್ರರು ಸಪ್ತ-ಋಷಿಗಳು, ವಹ್ನಿ-ನಾರದ ವರುಣನು
ಇನಜಗೆ ಸಮ ಚಂದ್ರ -ಸೂರ್ಯರು, ಮನು- ಸುತೆಯು ಹೆಚ್ಚು ಪ್ರವಹನು ||
ದಕ್ಷ ಸಮ ಅನಿರುದ್ಧ ಗುರು ಶಚಿ ರತಿ ಸ್ವಾಯಂಭುವರಾರ್ವರು
ಪಕ್ಷ ಪ್ರಾಣನಿಗಿಂದಧಿಕ ಕಾಮನು ಕಿಂಚಿದಧಿಕನು ಇಂದ್ರನು ||
ದೇವೇಂದ್ರನಿಗಧಿಕ ಮಹ-ರುದ್ರ ದೇವ -ಸಮ ಶೇಷ -ಗರುಡರು
ಕೇವಲಧಿಕರು ಶೇಷ ಗರುಡಗೆ ದೇವಿ ಭಾರತಿ ಸರಸ್ವತಿ ||
ವಾಯುವಿಗೆ ಸಮರಿಲ್ಲ ಜಗದೊಳು ವಾಯು-ದೇವರೇ ಬ್ರಹ್ಮರು
ವಾಯು-ಬ್ರಹ್ಮಗೆ ಕೋಟಿ ಗುಣದಿಂದ ಅದಿಕ ಶಕ್ತಳು ಶ್ರೀ ರಮಾ ||
ಅನಂತಗುಣದಿಂ ಲಕುಮಿಗಧಿಕ ಶ್ರೀಪುರಂದರ -ವಿಠಲನು
ಘನಸಮರು ಇವಗಿಲ್ಲ ಜಗದೊಳು ಹನುಮ ಹೃತ್ಪದ್ಮವಾಸಿಗೆ ||
ಗಣಪತಿ ಸ್ತೋತ್ರ
ಶ್ರೀಶನಂಘ್ರಿ ಸರೋಜ ಭೃಂಗ ಮಹೇಶ ಸಂಭವ ಮನ್ಮನದೊಳು
ಪ್ರಕಾಶಿಸನುದಿನ ಪ್ರಾಥಿಸುವೆ ಪ್ರೇಮಾತಿಶಯದಿಂದ
ನೀ ಸಲಹು ಸಜ್ಜನರ ವೇದವ್ಯಾಸ ಕರುಣಾಪಾತ್ರ
ಮಹದಾಕಾಶಪತಿ ಕರುಣಾಳು ಕೈಪಿಡಿದೆಮ್ಮನುದ್ಧರಿಸು |
ರಚನೆ: ಶ್ರೀ ಶ್ರೀಪಾದರಾಜರು
ವಂದಿಪೆ ನಿನಗೆ ಗಣನಾಥ
33.ಮೊದಲೊಂದಿಪೆ ನಿನಗೆ ಗಣನಾಥ, ಬಂದ ವಿಘ್ನ ಕಳೆ ಗಣನಾಥ ||
ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ, ಸಂದ ರಣದಲಿ ಗಣನಾಥ [೧]
ಮಾಧವನ ಆಜ್ಞೆಯಿಂದ ಧರ್ಮರಾಜ ಪೂಜಿಸಲು, ಸಾಧಿಸಿದ ರಾಜ್ಯ ಗಣನಾಥ [೨]
ಮಂಗಳ ಮೂರುತಿ ಗುರು ರಂಗ ವಿಠ್ಠಲನ ಪಾದ, ಹಿಂಗದೆ ಪಾಲಿಸು ಗಣನಾಥ [೩]
ಶ್ರೀ ಸೌಪರ್ಣಿ, ವಾರುಣಿ, ಪಾರ್ವತಿ ದೇವಿಯರು
ಆ ಪರಂತಪನೊಲುಮೆಯಿಂದ ಸ |
ದಾಪರೋಕ್ಷಿಗಳೆನಿಸಿ ಭಗವದ್ರೂಪ
ಗುಣಗಳ ಮಹಿಮೆ ಸ್ವಪತಿಗಳಾನನದಿ ತಿಳಿವ |
ಸೌಪರ್ಣಿ ವಾರುಣಿ ನಗಾತ್ಮಜ ರಾಪನಿತು
ಬಣ್ಣಿಸುವೆ ಎನ್ನ ಮಹಾಪರಾಧಗಳೆಣಿಸದೀಯಲಿ
ಪರಮ ಮಂಗಳವ ||
ಶ್ರೀ ತುಳಸೀ ದೇವೀ
ತುಳಸೀ ಪ್ರಾರ್ಥನೆ
ನಮ: ತುಳಸೀ ಕಲ್ಯಾಣೀ ನಮೊ ವಿಷ್ಣು ಪ್ರಿಯೆ ಶುಭೆ |
ನಮೊ ಮೋಕ್ಷ ಪ್ರದೇ ದೇವಿ ನಮಃ ಸಂಪತ್ ಪ್ರದಾಯಿಕೆ ||
ತುಳಸಿಗೆ ನಮಸ್ಕಾರ
ಯನ್ಮುಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವ ದೇವತಾ |
ಯದಗ್ರೇ ಸರ್ವ ವೇದಾಶ್ಚ ತುಳಸಿ ತ್ವಂ ನಮಾಮ್ಯಹಂ||
ರುದ್ರ ದೇವರು
ವಾಮದೇವ ವಿರಿಂಚಿತನಯ ಉ|ಮಾ ಮನೋಹರ ಉಗ್ರ ಧೂರ್ಜಟಿ ||
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ ||
ಕಾಮ ಹರ ಕೈಲಾಸ ಮಂದಿರ | ಸೋಮ ಸೂರ್ಯನಲ ವಿಲೋಚನ |
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವಾ ||೧೦||
34.ಧವಳ ಗಂಗೆಯ ಗಂಗಾಧರ ಮಹಾಲಿಂಗ
ಮಾಧವನ ತೋರಿಸಯ್ಯ ಗುರುಕುಲೋತ್ತುಂಗ || ಪ ||
ಅರ್ಚಿಸಿದವರಿಗೆ ಅಭೀಷ್ಟವ ಕೊಡುವ
ಹೆಚ್ಚಿನ ಅಘಗಳ ತರಿದು ಬಿಸಾಡುವ
ದುಸ್ಚರಿತಗಳೆಲ್ಲವ ದೂರದಲ್ಲಿಡುವ
ನಮ್ಮ ಅಚ್ಯುತಗಲ್ಲದ ಅಸುರರ ಬಡಿಉವ || ೧ ||
ಮಾರನ ಗೆದ್ದ ಮನೋಹರ ಮೂರ್ತಿ
ಸಾಧು ಸಜ್ಜನರಿಗೆ ಸುರ ಚಕ್ರವರ್ತಿ
ಧಾರುಣಿಯೊಳಗೆ ತುಂಬಿದೆ ನಿನ್ನ ಕೀರ್ತಿ
ಮುರಾರಿಯ ತೋರಿಸಯ್ಯ ನಿನಗೆ ಶರಣಾರ್ತಿ || ೨ ||
ಚೆನ್ನ ಪ್ರಸನ್ನ ಶ್ರೀ ಹಯವದನನ್ನ
ಅನುದಿನ ನೆನೆವಂತೆ ಮಾಡೋ ನೀ ಎನ್ನ
ಅನ್ಯನಲ್ಲವೋ ನಾನು ಗುರುವೆಂಬೆ ನಿನ್ನ,
ಇನ್ನಾದರೂ ಹರಿಯ ತೋರೋ ಧೀರ ಮುಕ್ಕಣ್ಣ || ೩ ||
———————————————————
35.ನಮ: ಪಾರ್ವತಿ ಪತಿ ನುತ ಜನಪರ ನಮೊ ವಿರೂಪಾಕ್ಷ |ಪ|
ರಮಾ ರಮಣನಲಿ ಅಮಲ ಭಕುತಿ ಕೊಡು ನಮೊ ವಿಶಾಲಕ್ಷ |ಅಪ|
ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷ
ಫಾಲನೆತ್ರ ಕಪಾಲ ರುಂಡ ಮಣಿ ಮಾಲಾಧೃತ ವಕ್ಷ ||
ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ
ಶ್ರೀ ಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ (೧)
ವಾಸವನುತ ಹರಿದಾಸ ಈಶ ಕೈಲಾಸವಾಸ ದೇವ
ದಾಶರಥಿಯ ಔಪಾಸಕ ಸುಜನರ ಪೋಶಿತ ಪ್ರಭಾವ|
ಭಾಷಿಸುತಿಹುದು ಅಪೆಕ್ಷ ಜೀವರಿಗೆ ಈಶ ನೆಂಬ ಭಾವ
ಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ (೨)
ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃಥ್ಯನ ಸರ್ವತ್ರ
ಹತ್ತಿರ ಕರೆದು ಅಪತ್ಯನಂತೆ ಕಾ ಯುತ್ತಿರೊ ತ್ರಿನೇತ್ರ
ತೆತ್ತಿಗನಂತೆ ಕಾಯುತ್ತಿದೆ ಜಾಣನ ಸತ್ಯದಿ ಸುಚರಿತ್ರ
ಕರ್ತೃ ಉದುಪಿ ಸರ್ವೋತ್ತಮ ಕೃಷ್ಣನ ಪೌತ್ರ ಕೃಪಾಪಾತ್ರ (೩)
———————————————–
Chandrachuda Shiva shankara
36.ಚಂದ್ರಚೂಡ ಶಿವಶಂಕರ ಪಾರ್ವತಿ
ರಮಣನೆ ನಿನಗೆ ನಮೋ ನಮೋ || ಪ ||
ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರ
ಗಜ ಚರ್ಮಾಂಬರಧರ ನಮೋ ನಮೋ || ಅ.ಪ ||
ನಂದಿವಾಹನಾ-ನಂದದಿಂದ ಮೂರ್ಜಗದಿ ಮೆರವೆನು ನೀನೇ
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇ
ಘಟದಿಂದುದಿಸಿದ ವಿಷ ತಂದು ಭುಂಜಿಸಿದವನು ನೀನೇ
ಇಂದಿರೇಶ ಶ್ರೀ ರಾಮನಾಮವ ಚಂದದಿ ಪೊಗಳುವ ನೀನೇ || ೧ ||
ಬಾಲಮೃಕಂಡನ ಕಾಲನು ಎಳೆವಾಗ ಪಾಲಿಸಿದವನು ನೀನೇ
ಕಾಲಕೂಟವ ಪಾನವಮಾಡಿದ ನೀಲಕಂಠನು ನೀನೇ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡಿದ ದಿಗಂಬರನು ನೀನೇ
ಜಾಲ ಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ || ೨ ||
ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರವಾಸ ನೀನೇ
ಕರದಲಿ ವೀಣೆಯ ಗಾನವ ಮಾಡುವ ಉರಗ ಭೂಷಣನು ನೀನೇ
ಕೊರಳೋಳು ಭಸ್ಮ ರುದ್ರಾಕ್ಷಿ ಧರಿಸಿದ ಪರಮ ವೈಷ್ಣವ ನೀನೆ
ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ || ೩||
————————————–
37.ಕಂಡೆ ಕರುಣನಿಧಿಯ ಗಂಗೇಯ ಮಂಡೆಯೊಳಿಟ್ಟ ದೊರೇಯ |ಪ |
ರುಂಡ ಮಾಲೆ ಸಿರಿಯ ನೊಸಳೋಳೂ ಕೆಂಡ ಗಣ್ಣಿನ ಬಗೇಯಾ, ಹರನ ||ಅ.ಪ||
ಗಜ ಚರ್ಮಾಂಬರನ ಗೌರೀವರ ಜಗದೀಶ್ವರನ
ತ್ರಿಜಗನ್ಮೋಹನನ, ತ್ರಿಲೋಚನ ತ್ರಿಪುರಾಂತಕ ಶಿವನ, ಹರನ|೧|
ಭಸಿತ ಭೂಷಿತ ಹರನ ಭಕ್ತರ ವಶದೊಳಗಿರುತಿಹನ
ಪಶುಪತಿಯೆನಿಸುವನ ವಸುಧೆಲಿ ಶಶಿ ಶೇಖರ ಶಿವನ, ಹರನ |೨|
ಕಪ್ಪು ಗೊರಳ ಹರನ ಕಂದರ್ಪ ಪಿತನ ಸಖನ
ಮುಪ್ಪುರಗೆಲಿದವನ ಮುನಿಸುತ ಸರ್ಪ ಭೂಷಣ ಶಿವನ, ಹರನ |೩|
ಕಾಮಿತ ಫಲವೀವನ ಭಕುತರ ಪ್ರೇಮದಿ ಸಲಹುವನ
ರಾಮ ನಾಮ ಸ್ಮರನ ರತಿ ಪತಿ ಕಾಮನ ಸಂಹರನ ಶಿವನ |೪|
ಧರೆಗೆ ದಕ್ಷಿಣಕಾಶಿ ಎನಿಸುವ ಪಂಪಾ ಪುರವಾಸಿ
ತಾರಕ ಉಪದೇಶೀ ಪುರಂದರ ವಿಠಲ ಭಕ್ತರ ಪೋಶಿ, ಹರನ |೫|
ಶ್ರೀ ಶೇಷ ದೇವರು
ನಾಗ ನಾಗೇಂದ್ರ ಶಯನಂ ನಾಗಾ ನಾಮ ದೀಪ ಪ್ರಭೋ
ಆಗಮಸ್ತುತ ಚಾರಿತ್ರಂ ಯೋಗೀಂದ್ರ ಪ್ರಿಯ ದರ್ಶಯ
ಹರಿಕಥಾಮೃತಸಾರ ಪದ್ಯ
ಯೋಗಿಗಳ ಹೃದಯಕೆ ನಿಲುಕ ನಿಗ |ಮಾಗಮೈಕ ವಿನುತನ ಪರಮನು |
ರಾಗದಲಿ ದ್ವಿಸಹಸ್ರ ಜಿಹ್ವೆಗಳಿಂದ ವರ್ಣಿಸುವ ||
ಭೂಗಗನ ಪಾತಾಳ ವ್ಯಾಪ್ತನ | ಯೋಗನಿದ್ರಾಸ್ಪದನೆನಿಪ ಗುರು |
ನಾಗರಾಜನ ಪದಕೆ ನಮಿಸುವೆ ಮನದೊಳನವರತ ||
ಶ್ರೀ ಗರುಡದೇವರು
ವೀಶಾಯ ರಿಪು ನಾಶಾಯ ತ್ರಾಸಾಯ ಸಹ ರಾಯ ಚ
ಶ್ರೀಶ ದಾಸಾಯ ಲಸಿತ ಆಕಾಶ ವಾಸಾಯ ತೇ ನಮ: |
ಪದ್ಯ
ಜಗದುದರನ ಸುರೋತ್ತಮನ ನಿಜ | ಪೆಗಳೊಳಾಂತು ಕರಾಬ್ಜದೊಳು ಪದ |
ಯುಗಧರಿಸಿ ನಖ ಪಂಕ್ತಿಯೊಳು ರಮಣೀಯ ತರವಾದ ||
ನಗಧರನ ಪ್ರತಿಬಿಂಬ ಕಾಣುತ | ಮಿಗೆ ಹರುಷದಿಂ ಪೊಗಳಿಹಿಗ್ಗುವ |
ಖಗಕುಲಾಧಿಪ ಕೊಡಲಿ ಮಂಗಳ ಸಕಲ ಸುಜನರಿಗೆ || ೮ ||
ಶ್ರೀ ಭಾರತಿ ದೇವಿ
ಕೃತಿರಮಣ ಪ್ರದ್ಯುಮ್ನ ನಂದನೆ, ಚತುರ ವಿಂಶತಿ ತತ್ವಪತಿ
ದೇವತೆಗಳಿಗೆ, ಗುರುವೆನಿಸುತಿಹ ಮಾರುತನ ನಿಜಪತ್ನಿ,
ಸತತ ಹರಿಯಲಿ ಗುರುಗಳಲಿ ಸದ್ರತಿಯ ಪಾಲಿಸಿ,
ಭಾಗವತ ಭಾರತ ಪುರಾಣ ರಹಸ್ಯ ತತ್ವಗಳರುಪು ಕರುಣದಲಿ |
38.ಭಾರತಿ ದೇವಿಯ ನೆನೆ ನೆನೆ
ನಿರತ ಭಕುತಿಗಿದು ಮನೆ ಮನೆ
ಮಾರುತನರ್ಧಾಂಗಿ ಸುಚರಿತ ಕೋಮಲಾಂಗಿ
ಸಾರಸಾಕ್ಷಿ ಕೃಪಾಂಗಿ ಅಪಾಂಗಿ ೧
ಕಿಂಕಿಣಿ ಕಿಣಿ ಪಾದ ಪಂಕಜ ನೂಪುರ
ಕಂಕಣ ಕುಂಡಲ ಅಲಂಕೃತ ದೇಹಾ ೨
ಶಂಕರ ಸುರವರ ವಂದಿತ ಚರಣೆ
ಕಿಂಕರಿ ಪುರಂದರ ವಿಠ್ಠಲನ ಕರುಣೆ ೩
ಸರಸ್ವತಿ ದೇವಿ
ಚತುರವದನನ ರಾಣಿ, ಅತಿರೋಹಿತ
ವಿಮಲ ವಿಜ್ಞಾನಿ, ನಿಗಮಪ್ರತತಿಗಳಿಗೆ
ಅಭಿಮಾನಿ, ವೀಣಾಪಾಣಿ, ಬ್ರಹ್ಮಾಣಿ,
ನತಿಸಿ ಬೇಡುವೆ ಜನನಿ, ಲಕ್ಷ್ಮೀ ಪತಿಯ
ಗುಣಗಳ ತುತಿಪುದಕೆ, ಸನ್ಮತಿಯ ಪಾಲಿಸಿ,
ನೆಲೆಸು ನೀ ಮದ್ವದನ ಸದನದಲಿ |
39.ನಲಿದಾಡೆ ಎನ್ನ ನಾಲಿಗೆ ಮ್ಯಾಲೆ
ನಲಿದಾಡೆ ಎನ್ನ ನಾಲಿಗೆ ಮ್ಯಾಲೆ ಶಾರದಾ ದೇವಿ
ಕುಣಿದಾಡೆ ಎನ್ನ ನಾಲಿಗೆ ಮ್ಯಾಲೆ ||
ಘಿಲು ಘಿಲು ಘಿಲು ಗೆಜ್ಜೆಯ ನಾದ ಹೊಳೆವ ಅಂದುಗೆ,ರುಳಿ ಪೈಜಣವಿಟ್ಟ ಪುಟ್ಟ ಪಾದ
ಸುರವರನುತ ಪಾದ
ಸರಸಿಜೋದ್ಭವನ ವದನ ನಿಲಯಳೇ , ಕರುಣದಿಂದ ಪರಿಪಾಲಿಸು ಮಾತೇ (೧)
ನಸುನಗೆ ಮುಖವು ನಾಸಾಭರಣಾ ಯೆಸೆವ ಕಪೋಲ ಹೊಸ ಮುತ್ತಿನ ಚಲು ತುಂಬಿಟ್ಟ ಶ್ರವಣ
ತಿಲಕವು ಹಸನ
ಶಶಿ ಸೂರ್ಯ ರ ಆಭರಣ ಶೊಭಿತಳೆ, ಕುಸುಮ ಮುಡಿದ ಮೂರ್ಧ್ವಜ ವುಳ್ಳವಳೆ (೨)
ಶೃಂಗಾರವಾದ ಜಡೆ ಭಂಗಾರರಾಗುಟಿ ಚೌರಿ ಹೊಂಗ್ಯಾದಿಗೆ ಮುತ್ತಿನ ಹಾರ
ರಂಗು ಮನೊಹರಾ
ಮಂದಗಮನೆ ಅರವಿಂದ ನಯನೆ ಸಿರಿರಂಗ ವಿಠಲನ ತೋರೇ ಶುಭಾಂಗಿ (೩)
ವಾಯು ದೇವರು
ಆರು ಮೂರೆರಡೊಂದು ಸಾವಿರ |
ಮೂರೆರಡು ಶತಶ್ವಾಸ ಜಪಗಳ ||
ಮೂರು ವಿಧ ಜೀವರೊಳಗಬ್ಜಕಲ್ಪ ಪರಿಯಂತ |
ತಾ ರಚಿಸಿ ಸಾತ್ವರಿಗೆ ಸುಖ ಸಂಸಾರ
ಮಿಶ್ರರಿಗಧಮಜನರಿಗಪಾರ
ದು:ಖಗಳೀವ ಗುರು ಪವಮಾನ ಸಲಹೆಮ್ಮ |
40.ಪವಮಾನ ಪವಮಾನ
ಪವಮಾನ ಜಗದಪ್ರಾಣ ಸಂಕರುಷಣ
ಭವಭಯಾರಣ್ಯ ದಹನಾ, ಪವನ ||ಪ||
ಶ್ರವಣವೆ ಮೊದಲಾದ ನವವಿಧ ಭಕುತಿಯ|
ತವಕದಿಂದಲಿ ಕೊಡು ಕವಿಜನ ಪ್ರಿಯ||ಅ.ಪ||
ಹೇಮಕಚ್ಚುಟ ಉಪವೀತ ಧರಿಪ ಮಾರುತ| ಕಾಮಾದಿ ವರ್ಗರಹಿತ||
ವ್ಯೊಮಾದಿ ಸರ್ವ ವ್ಯಾಪುತ ಸತತ ನಿರ್ಭೀತ | ರಾಮಚಂದ್ರನ ನಿಜದೂತ||
ಯಾಮ ಯಾಮಕೆ ನಿನ್ನಾರಾಧಿಪುದಕೆ |ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ |
ಈಮನಸಿಗೆ ಸುಖಸ್ತೋಮವ ತೋರುತ | ಪಾಮರಮತಿಯನು ನೀ ಮಾಣಿಪುದು ||೧||
ವಜ್ರ ಶರೀರ ಗಂಭೀರ ಮುಕುಟಧರ | ದುರ್ಜನ ವನಕುಠಾರ|
ನಿರ್ಜರ ಮಣಿ ದಯಾಪಾರ ವಾರ ಉದಾರ | ಸಜ್ಜನ ರಘಪರಿಹಾರ ||
ಅರ್ಜುನಗೊಲಿದಂದು ಧ್ವಜವಾನಿಸಿನಿಂದು | ಮೂರ್ಜಗವರಿವಂತೆ ಗರ್ಜನೆ ಮಾಡಿದೆ|
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜಪಾದದ ಧೂಳಿ | ಮೂರ್ಜಗದಲಿ ಭವ ವರ್ಜಿತನೆನಿಸೊ ||೨||
ಪ್ರಾಣ ಅಪಾನ ವ್ಯಾನೋದಾನ ಸಮಾನ | ಆನಂದ ಭಾರತಿ ರಮಣ|
ನೀನೆ ಶರ್ವಾದಿ ಗೀರ್ವಾಣ ದ್ಯಮರರಿಗೆ | ಜ್ಞಾನ ಧನ ಪಾಲಿಪ ವರೆಣ್ಯಾ |
ನಾನು ನಿರುತದಲಿ ಏನೇನೆಸಗಿದೆ | ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ |
ಪ್ರಾಣನಾಥ ಸಿರಿವಿಜಯ ವಿಠ್ಠಲನ|ಕಾಣಿಸಿ ಕೊಡುವುದು ಭಾನು ಪ್ರಕಾಶಾ ||೩||
——————————————————–
41.ಬಿಡುವೆನೇನಯ್ಯ ಹನುಮ, ಸುಮ್ಮನೆ ಬಿಡುವೆನೇನಯ್ಯ||
ಬಿಡುವೆನೇನಯ್ಯ ಹನುಮ, ಬಿಡುವೆನೇನಯ್ಯ
ಬಿಡುವೆನೇನೊ ಹನುಮ ನಿನ್ನ ಅಡಿಗಳಿಗೆ ಶಿರವ ಬಾಗಿ
ದೃಡ ಭಕ್ತಿ ಸುಜ್ಞಾನವನ್ನು ತಡಮಾದದಲೆ ಕೊಡುವೊ ತನಕ |
ಹಸ್ತವ ಮ್ಯಾಲಕ್ ಎತ್ತಿದರೆನು ಹಾಲಗಾರ ಹಾಕಿದರೇನು
ಭೃತ್ಯನು ನಿನ್ನವನು ನಾನು, ಹಸ್ತೀವರದನ ತೋರೋ ತನಕ |1|
ಹಲ್ಲು ಮುಡಿಯ ಕಚ್ಚಿದರೇನು ಅಂಜುವೇನೆ ನಿನಗೆ ನಾನು
ಫುಲ್ಲ ನಾಭನಲ್ಲಿ ಎನ್ನ ಮನಸ ತೋರಿ ನಿಲ್ಲಿಸೋ ತನಕ |2|
ಡೊಂಕು ಮೋರೇ ಬಾಲವ ತಿದ್ದಿ ಹುಂಕರಿಸಿದರೆ ಅಂಜುವನಲ್ಲಾ
ಕಿಂಕರನು ನಿನ್ನವನು ನಾನು ಪುರಂದರ ವಿಠಲನ ತೋರೋ ತನಕ |3|
————————————————————————
42.ಸಂಜೀವನ ಗಿರಿಧರ ಪಾಹಿಮಾಂ || ಪ ||
ಚಕ್ರತೀರ್ಥನಿವಾಸ ಶಕ್ರಾದ್ಯಮರಧೀಶ |
ವಕ್ರಾನನ ಮೂರುತಿ ಪಾಹಿಮಾಂ || ೧ ||
ಮಂತ್ರ ಮೂಲಸ್ಥಿತ ಕಂತು ಪಿತನ ದೂತ |
ಯಂತ್ರೋದ್ಧಾರಕ ಪಾಹಿಮಾಂ || ೨ ||
ಮೋಹನ ವಿಠ್ಠಲದಾಸ ಪೋಷಕ |
ಮಾಯಾ ಮೋಹಕ ಭಂಜನ ಪಾಹಿಮಾಂ || ೩ ||
——————————————————
43.ಸ್ವಾಮಿ ಮುಖ್ಯ ಪ್ರಾಣ, ನಿನ್ನ ಮರೆವರ ಗಂಟಲ ಗಾಣ !
ಹಿಡಿದ್ಯೋ ರಾಮನ ಚರಣ ನೀ ಹೌದೌದು ಜಗತ್ರಾಣ !
ಸಂಜೀವನ ಪರ್ವತವ ನೀ ಅಂಜದೆ ತಂದ್ಯೋ ದೇವ
ಅಂಜನಿ ಸುತ ಸದಾ ಕಾಯ್ವ, ಹೃತ್ಕುಂಜ ವಾಸ ಸರ್ವ ಜೀವ (೧)
ಏಕದಶದ ರುದ್ರ ನೀ ವೈದ್ಯೋ ರಾಮರ ಮುದ್ರಾ
ಸಕಲ ವಿದ್ಯಾ ಸಮುದ್ರ ನೀ ಹೌದೌದು ಬಲ ಭದ್ರ (೨)
ವೈಕುಂಟದಿಂದ ಬಂದು ನೀ ಪಂಪಾಕ್ಷೆತ್ರದಿ ನಿಂದು
ಯಂತ್ರೋದ್ಧಾರಕನೆಂದೂ, ಶ್ರೀ ಪುರಂದರ ವಿಠ್ಠಲ ಸಲಹೆಂದು (೩)
—————————————
44.ಹನುಮ ನಮ್ಮ ತಾಯಿ ತಂದೆ ಭೀಮ ನಮ್ಮ ಬಂಧು ಬಳಗ
ಆನಂದ ತೀರ್ಥರೆ ನಮ್ಮ ಗತಿಗೋತ್ರ ರೈಯ್ಯ
ತಾಯಿತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ
ಆಯಾಸವಿಲ್ಲದೆ ಸಂಜೀವನವ ತಂದೆ
ಘಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆದ
ರಘುರಾಮನಂಗ್ರಿಯುಗಳೇ ಸಾಕ್ಷಿ ತ್ರೇತಾಯುಗದಿ ೧
ಬಂಧುಬಳಗದಂತೆ ಆಪದ್ಭಾಂದವನಾಗಿ ಪಾರ್ಥನೀಗೆ
ಬಂದ ಬಂದ ದುರಿತಂಗಳ ಪರಿಹರಿಸೀ
ಅಂಧಕಾಜಾತರ ಕೊಂದು ನಂದಕಂದಾರ್ಪಣೆಂದಾ
ಗೋವಿಂದನಂಘ್ರಿಯುಗಳೇ ಸಾಕ್ಷಿ ದ್ವಾಪರ ಯುಗದಿ ೨
ಗತಿಗೋತ್ರರಂತೆ ಸಾಧು ತತಿಗಳಿಗೆ ಗತಿಯನಿತ್ತು
ಮತಿಕೆಟ್ಟ ಇಪ್ಪತ್ತೊಂದು ಮತವ ಖಂಡಿಸಿ
ಗತಿಕೆಟ್ಟ ವೈಷ್ಣವರಿಗೆ ಸದ್ಗತಿ ತೋರಿದ ಪರಮಾತ್ಮ
ಗತಿ ಗುರುಪುರಂದರ ವಿಠಲನೆ ಸಾಕ್ಷಿ ಕಲಿಯುಗದಲ್ಲಿ ೩
ಬ್ರಹ್ಮ ದೇವರು
ನಿರುಪಮಾನಂದಾತ್ಮ ಭವ ನಿರ್ಜರ
ಸಭಾ ಸಂಸೇವ್ಯ ಋಜುಗುಣದರಸೆ
ಸತ್ವ ಪ್ರಚುರ ವಾಣೀ ಮುಖ ಸರೋಜೇನ
ಗರುಡ ಶೇಷ ಶಶಾಂಕ ದಳ ಶೇಖರರ
ಜನಕ ಜಗದ್ಗುರುವೆ ತ್ವಚ್ಚರಣ
ಗಳಿಗಭಿವಂದಿಸುವೆ ಪಾಲಿಪುದು ಸನ್ಮತಿಯ |
ಲಕ್ಷ್ಮೀ ದೇವಿ
ಜಗದುದರನತಿ ವಿಮಲಗುಣರೂ |
ಪಗಳನಾಲೋಚನದಿ ಭಾರತ |
ನಿಗಮತತಿಗಳತಿಕ್ರಮಿಸಿ ಕ್ರೀಯ ವಿಶೇಷಗಳ |
ಬಗೆ ಬಗೆಯ ನೂತನವ ಕಾಣುತ |
ಮಿಗೆ ಹರುಷದಿಂ ಪೊಗಳಿ ಹಿಗ್ಗುವ |
ತ್ರಿಗುಣ ಮಾನಿ ಮಹಾಲಕುಮಿ ಸಂತೈಸಲನುದಿನವು ||
45.ಭಾಗ್ಯಾದಾ ಲಕ್ಷ್ಮೀ ಬಾರಮ್ಮ
ಭಾಗ್ಯಾದಾ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯಾದ ಲಕ್ಷ್ಮೀ ಬಾರಮ್ಮ
ಹೆಜ್ಜೆಯ ಮೆಲೆ ಹೆಜ್ಜೆಯ ನಿಕ್ಕುತ ಗಜ್ಜೆಯ ಕಾಲಿನ ನಾದವ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ (೧)
ಕನಕ ವೃಷ್ಟಿಯ ಕರೆಯುತ ಬಾರೆ ಮನಕಾಮನದಾ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಹೊಳೆಯುವ ಜನಕ ರಾಯನ ಕುಮಾರಿ ಬಾರೆ (೨)
ಆತ್ತಿತ್ತಗಲದೆ ಭಕ್ತರ ಮನೆಯೊಳು ನಿತ್ಯ ಮಹೋತ್ಸವ ನಿತ್ಯ ಸುಮಂಗಳ
ಸತ್ಯವ ತೋರುತ ಸಾಧು ಸಜ್ಜನರ ಚಿತ್ತದಿ ಹೊಳೆಯುವ ಪುತ್ಥಳಿ ಗೊಂಬೆ (೩)
ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತೆಪಂಕಜ ಲೋಚನೆ ವೆಂಕಟ ರಮಣನ ಬಿಂಕದ ರಾಣೀ
ಸಕ್ಕರೆ ತುಪ್ಪ ಕಾಲುವೆ ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಅಳಗಿರಿರಂಗನ ಚೊಕ್ಕ ಪುರಂದರವಿಠಲನ ರಾಣಿ (೫)
————————————————————-
46.ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡು ತಿಹಳು ||ಪ||
ಕೋಟಿ ಕೋಟಿ ಭೃತ್ಯರಿರಲು | ಹಾಟಕಾಂಬರನ ಸೇವೆ |
ಸಾಟಿಯಿಲ್ಲದೆ ಮಾಡಿ | ಪೂರ್ಣ ನೋಟದಿಂದ ಸುಖಿಸುತಿಹಳು || ೧||
ಛತ್ರ ಚಾಮರ ವ್ಯಜನ ಪರಿಯಂಕ | ಪಾತ್ರ ರೂಪದಲ್ಲಿ ನಿಂತು |
ಚಿತ್ರ ಚರಿತನಾದ ಹರಿಯ | ನಿತ್ಯ ಸೇವೆ ಮಾಡುತಿಹಳು || ೨||
ಸರ್ವ ಸ್ಥಳದಿ ವ್ಯಾಪ್ತನಾದ | ಸರ್ವ ದೋಷರಹಿತನಾದ |
ಸರ್ವ ವಂದ್ಯನಾದ ಪುರಂದರ ವಿಠ್ಠಲನ್ನ ಸೇವಿಸುವಳೋ ||೩||
—————————————————————
47.ಮರುಳು ಮಾಡಿಕೊಂಡೆಯಲ್ಲೆ ಮಾಯಾದೇವಿಯೇ || ಪ ||
ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪಂತೆ || ಅಪ ||
ಜ್ಞಾನಿಗಳು ನಿತ್ಯ ಅನ್ನಪಾನಾದಿಗಳನ್ನು ಬಿಟ್ಟು
ನಾನಾವಿಧ ತಪದಲಿದ್ದರು ಧ್ಯಾನಕ್ಕೆ ಸಿಲುಕದವನ || ೧ ||
ಸರ್ವ ಸಂಗ ಬಿಟ್ಟು ಸನ್ಯಾಸಿಯಾದ ಕಾಲಕ್ಕೂ
ಸರ್ವದಾ ತನ್ನೆದೆಯ ಮೇಲೆ ಬಿಡದೆ ನಿನ್ನ ಧರಿಸಿಪ್ಪಂತೆ || ೨ ||
ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ್ದಾಗ
ಹಲವು ಆಭರಣಗಳು ಜಲವು ಆಗಿ ಜಾಣತನದಿ || ೩ ||
ರಂಗನು ಭೂಲೋಕದಿ ಭುಜಂಗ ಗಿರಿಯೊಳಲಮೇಲು
ಮಂಗಪತಿಯಾಗಿ ನಿನ್ನ ಅಂಗೀಕರಿಸುವಂತೆ || ೪ ||
ಮಕ್ಕಳ ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು
ಪೊಕ್ಕುಳೊಳು ಮಕ್ಕಳ ಪಡೆದು ಕಕ್ಕುಲಾತಿ ಪಡುವಂತೆ || ೫ ||
ಎಡಕೆ ಭೂಮಿ ಬಲಕೆ ಶ್ರೀಯು ಎದುರಿನಲ್ಲಿ ದುರ್ಗಾದೇವಿ
ತೊಡೆಯ ಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿ ಪಂತೆ || ೬ ||
ಎಂದೆಂದಿಗೂ ಮರೆಯೆ ನಿನ್ನಾನಂದದಿ ಜನರಿಗೆಲ್ಲ
ತಂದು ತೋರೆ ಸ್ವಾಧೀನ ಪುರಂದರ ವಿಠಲ ರಾಯನ || ೭ ||
ಜಯ ಕೊಲ್ಹಾಪುರ ನಿಲಯೇ ಭಜದಿಷ್ಟೇತರ ವಿಲಯೇ
ತವ ಪಾದೌ ಹೃದಿಕಲಯೇ ರತ್ನ ರಚಿತ ವಲಯೇ ||
ಜಯ ಜಯ ಸಾಗರ ಜಾತೇ ಕುರುಕರುಣಾಂ ಮಯಿ ಭೀತೇ
ಜಗದಂಬಾ ಭಿದಯಾತೇ ಜೀವತಿ ತವಪೋತೇ ||೧||
ಜಯ ಜಯ ಸಾಗರ ಸದನೇ ಜಯ ಕಾಂತ್ಯಾಜಿತ ಮದನೇ
ಜಯ ದುಷ್ಟಾಂತಕ ಕದನೇ ಕುಂದ ಮುಕುಲರದನೇ ||೨||
ಸುರ ರಮಣಿ ನುತ ಚರಣೇ ಸುಮನ: ಸಂಕಟ ಹರಣೇ
ಸುಸ್ವರ ರಂಜಿತ ವೀಣೇ ಸುಂದರ ನಿಜ ಕಿರಣೇ ||೩||
ಕುಂಕುಮ ರಂಜಿತ ಫಾಲೇ ಕುಂಜರ ಬಾಂಧವ ಲೋಲೇ
ಕಲಧೌತಾಮಲ ಚೇಲೇ ಕೃಂತ ಕುಜನ ಜಾಲೇ ||೪||
ಭಜದಿಂದೀವರ ಸೋಮೇ ಭವ ಮುಖ್ಯಾಮರ ಕಾಮೇ
ಭಯ ಮುಲಾಳಿವಿರಮೇ ಭಂಜಿತ ಮುನಿ ಭೀಮೇ ||೫||
ಧೃತ ಕರುಣಾ ರಸ ಪೂರೇ ಧನ ದಾನೋತ್ಸವ ಧೀರೇ
ಧ್ವನಿಲವ ನಿಂದಿತ ಕೀರೇ ಧೀರೇ ದನುಜ ಧಾರೇ ||೬||
ಸುರ ಹೃತ್ಪಂಜರ ಕೀರೇ ಸುಮಗೇಹಾರ್ಪಿತ ಹಾರೇ
ಸುಂದರ ಕುಂಜವಿಹಾರೇ ಸುರವರ ಪರಿವಾರೇ ||೭||
ವರಕಬರೀ ಧೃತಕುಸುಮೇ ವರಕನಕಾಧಿಕ ಸುಷಮೇ
ವನನಿಲಯಾ ದಯ ಭೀಮೇ ವದನ ವಿಜಿತ ಸೋಮೇ ||೮||
ಮದಕಲಭಾ ಲಸಗಮನೇ ಮಧು ಮಥನಾ ಲಸನಯನೇ
ಮೃದು ಲೋಲಾಲಕ ರಚನೇ ಮಧುರ ಸರಸ ಗಾನೇ ||೯||
ವ್ಯಾಘ್ರಪುರೀ ವರನಿಲಯೇ ವ್ಯಾಸ ಪದಾರ್ಪಿತ ಹೃದಯೇ
ಕುರು ಕರುಣಾಂ ಮಯಿ ಸದಯೇ ವಿವಿಧ ನಿಗಮಗೇಯೇ ||೧೦||
————————————————–
48.ಶ್ರೀಮಹಾಲಕ್ಷ್ಮೀಯ ಅಲಂಕರಿಸಿ ಕರೆದರು || ಪ ||
ಕೇಶವ ನಿಮ್ಮ ನಾಮ ಮಾಂಗಲ್ಯಸೂತ್ರ ತಾಳಿ |
ನಾರಾಯಣ ನಿಮ್ಮ ನಾಮ ತಾಳಿ ಪದಕವು |
ಮಾಧವ ನಿಮ್ಮ ನಾಮ ಸುರಗಿ ಸಂಪಿಗೆ ಮೊಗ್ಗು |
ಗೋವಿಂದ ನಿಮ್ಮ ನಾಮ ಗೋಧಿಯ ಸರವು || ೧ ||
ವಿಷ್ಣುವೆ ನಿಮ್ಮ ನಾಮ ರತ್ನ ಕುಂಡಲಗಳು |
ಮಧುಸೂಧನ ನಿಮ್ಮ ನಾಮ ಮಾಣಿಕ್ಯದ ಹರಳು |
ತ್ರಿವಿಕ್ರಮ ನಿಮ್ಮ ನಾಮ ವಂಕಿ ನಾಗಮುರುಗಿಯು |
ವಾಮನ ನಿಮ್ಮ ನಾಮ ಓಲೆ ಏಕಾವಳಿಯು || ೨ ||
ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನ ಹಾರ |
ಹೃಷಿಕೇಶ ನಿಮ್ಮ ನಾಮ ಕಡಗ ಗೆಜ್ಜೆಯು |
ಪದ್ಮನಾಭ ನಿಮ್ಮ ನಾಮ ಮುತ್ತಿನಡ್ಡಿಗೆಯು |
ದಾಮೋದರ ನಿಮ್ಮ ನಾಮ ರತ್ನದ ಪದಕವು || ೩ ||
ಸಂಕರ್ಷಣ ನಿಮ್ಮ ನಾಮ ವಂಕಿ ತೋಳಾಯಿತು |
ವಾಸುದೇವ ನಿಮ್ಮ ನಾಮ ಒಲಿದ ತೋಡೆ |
ಪ್ರದ್ಯುಮ್ನ ನಿಮ್ಮ ನಾಮ ಹಸ್ತ ಕಂಕಣ ಬಳೆ |
ಅನಿರುದ್ಧ ನಿಮ್ಮ ನಾಮ ಮುಕುರ ಬುಲಾಕು || ೪ ||
ಪುರುಷೋತ್ತಮ ನಿಮ್ಮ ನಾಮ ಹೊಸ ಮುತ್ತಿನ ಮೂಗುತಿ |
ಅಧೋಕ್ಷಜ ನಿಮ್ಮ ನಾಮ ಚಂದ್ರ ಸೂರ್ಯ |
ನಾರಸಿಂಹ ನಿಮ್ಮ ನಾಮ ಚೌರಿ ರಾಗಟಿ ಗೊಂಡ್ಯ |
ಅಚ್ಯುತ ನಿಮ್ಮ ನಾಮ ಮುತ್ತಿನ ಬೊಟ್ಟು || ೫ ||
ಜನಾರ್ದನ ನಿಮ್ಮ ನಾಮ ಜರಿಯ ಪೀತಾಂಬರ |
ಉಪೇಂದ್ರ ನಿಮ್ಮ ನಾಮ ಕಡಗ ಗೆಜ್ಜೆಯು |
ಶ್ರೀಹರಿ ನಿಮ್ಮ ನಾಮ ಕಂಚು ಅಂಕಿಯ ತುಳಸಿ |
ಶ್ರೀಕೃಷ್ಣ ನಿಮ್ಮ ನಾಮ ನಡುವಿನೊಡ್ಯಾಣವು || ೬ ||
ಸರಸಿಜಾಕ್ಷ ನಿಮ್ಮ ನಾಮ ಅರಶಿಣ ಎಣ್ಣೆ ಹಚ್ಚಿ |
ಪಂಕಜಾಕ್ಷ ನಿಮ್ಮ ನಾಮ ಕುಂಕುಮ ಕಾಡಿಗೆಯು |
ಪುರಂದರ ವಿಠ್ಠಲ ನಿಮ್ಮ ನಾಮ ಸರ್ವಾಭರಣವು |
ನಿಲುವುಗನ್ನಡಿಯಲಿ ಲಲನೆಯ ತೋರಿಸುತ || ೭ ||
—————————————————-
49.ಜಗದ ಇರವು-ಮೇಣಳಿವು– ಹುಟ್ಟು-ಐಸಿರಿಯ ಹಿರಿಯ ಯೋಗ
ಬಾಳು-ತಿಳಿವು-ನಿಯಮನವು ಅಂತೆ ಅಜ್ಞಾನ-ಬಂಧ-ಮೋಕ್ಷ
ಯಾವ ರಮೆಯ ಕಡೆಗಣ್ಣ ನೋಟಕೀಯೆಲ್ಲ ನಡೆಯುತಿಹುದೋ
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ ೧
ಬ್ರಹ್ಮ-ರುದ್ರ-ದೇವೇಂದ್ರ-ಸೂರ್ಯ-ಯಮಧರ್ಮ-ಚಂದ್ರರಾದಿ
ಸುರರ ಗುಂಪು ಈ ಜಗದ ವಿಜಯವನು ತಿಳಿವಿಗೆಟುಕದಂಥ
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನೀಡುತಿಹರೋ
ಅಂಥವಳನೂ ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ ೨
ಧರ್ಮನಿರತ ಸಜ್ಜನರ ಪೂಜೆಯನು ಕೊಳುವ ದೇವತೆಗಳು
ಸತ್ಯದರಿವು-ಧರ್ಮಾರ್ಥ-ಕಾಮ-ಮುಂತಾದ-ಮಂಗಲವನು
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನೀಡುತಿಹರೋ
ಅಂಥವಳನೂ ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ ೩
ಯಾರನಾಶ್ರಯಿಸೆ ಬಾಳ ದುಗುಡ ನಮ್ಮೆಡೆಗೆ ಬರದೊ ಅಂಥ
ಆರು ವೈರಿಗಳ ಗೆದ್ದ ಮುನಿಗಳು ಹರಿಯ ಮಹಿಮೆಯನ್ನು
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನೆನೆಯುತಿಹರೋ
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ ೪
ಶೇಷ-ಗರುಡ-ಗೌರೀಶ-ಇಂದ್ರ-ಮನು ಎಂಬ ತುಂಬ ಬಗೆಯ
ಶೃಷ್ಟಿಯಚ್ಚರಿಯ ಪಡೆದ ವಿಶ್ವವನು ಬ್ರಹ್ಮದೇವ ತಾನು
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ರಚಿಸುತಿಹನೋ
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ ೫
ಇಂದ್ರ-ಚಂದ್ರಮರು ಸೂರ್ಯನಂತಕಂ ಇಂಥ ಎಲ್ಲ ಜಗವ
ಪ್ರಳಯ ಕಾಲದಲಿ ಶಿವನು ಸಂಹರಿಸಿ ದಿವ್ಯ ಶಕ್ತಿ ಪಡೆದು
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ಕುಣಿಯಬಹನೋ
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ ೬
ಶಂಕರಾದಿವಂದಿತನು ಶೇಷ ತಾನಿತರ ಸುರರಿಗಿರದ
ಹರಿಯ ಪಾದಪಂಕಜಕೆ ಪೀಠವಹ ಹಿರಿಯ ಭಾಗ್ಯವನ್ನು
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ಪಡೆದುಬಹನೋ
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ ೭
ಅಮಿತವೇಗ ನಡುಗಿಸುವ ಬಲವ ಪೌರುಷದ ಗರುಡದೇವ
ಸುರರ ಕಲ್ಪನೆಗು ನಿಲುಕದಂಥ ಶ್ರೀಹರಿಯ ಹೊರೆವ ಪುಣ್ಯಂ
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ಪಡೆದುಬಹನೋ
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ ೮
ಮಧ್ವಮುನಿಯ ಮುಖಕಮಲದಿಂದ ಹೊರಹೊಮ್ಮಿದಂಥ ಹಾಡು
ಹಿರಿಯ ಅರ್ಥವನು ಸಾರುತಿದೆ, ಹರಿ-ರಮೆಯರಚ್ಚುಮೆಚ್ಚು
ಭಕ್ತಿಯಿಂದ ಭಗವಂತನನ್ನು ನೆನೆದಿದನು ಹಾಡುವವನು
ಹರಿಯ-ರಮೆಯ ಕೃಪೆಯಿಂದ ಹೊಂದುವನು ತನ್ನ ಬಯಕೆಗಳನು ೯
ಶ್ರೀ ವೇದವ್ಯಾಸ ದೇವರು
ವೇದ ಪೀಠ ವಿರಿಂಚಿ ಭವ ಶಕ್ರಾದಿ
ಸುರ ವಿಜ್ಞಾನದಾಯಕ ಮೋದ ಚಿನ್ಮಯ
ಗಾತ್ರ ಲೋಕ ಪವಿತ್ರ ಸುಚರಿತ್ರ, ಛೇದ
ಭೇದ ವಿಷಾದ ಕುಟಿಲಾಂತಾದಿ ಮಧ್ಯ
ವಿದೂರ ಆದಾನಾದಿಕಾರಣ ಬಾದರಾಯಣ
ಪಾಹಿ ಸತ್ರಾಣ ||
ಶ್ರೀರಮಣಿಕರ ಕಮಲ ಪೂಜಿತ |
ಚಾರುಚರಣ ಸರೋಜ ಬ್ರಹ್ಮ ಸ |
ಮೀರವಾಣಿ ಫಣೇಂದ್ರ, ವೀಂದ್ರ,
ಭವೇಂದ್ರ ಮುಖವಿನುತ |
ನೀರಜಭವಾಂಡೋದಯ ಸ್ಥಿತಿ |
ಕಾರಣನೇ ಕೈವಲ್ಯದಾಯಕ |
ನಾರಸಿಂಹನೆ ನಮಿಪೆ ಕರುಣಿಪುದೆಮಗೆ
ಮಂಗಳವಾ ||೧||
50.ದೇವರ ದರ್ಶನ ಯಾಚನೆ ಹಾಡು.
ಎಂದು ಕಾಂಬೇನೋ ಎನ್ನ ಸಲಹುವ ತಂದೆ ಉಡುಪಿಯ ಜಾಣನಾ
ಮಂದ ಹಾಸ ಪ್ರವೀಣನಾ ಇಂದಿರಾ ಭೂ ರಮಣನಾ
ಕಡಲದಡದೊಲು ಯೆಸೆವ ರಂಗನ ಕಡಗೊಲ್ಮೇಣನು ಪಿದಿದನಾ
ಮೃಡ ಪುರಂದರ ರೊಡೆಯನ ಈರಡಿಗಳಲಿ ಶಿರ ವಿಡುವೆ ನಾ (೧)
ದೇವಕಿಯ ಜಠರದಲಿಬಂದನ ಆವ ಪಳ್ಳಿಲಿ ನಿಂದನ
ಮಾವಕಂಸನಕೊಂದನಾ ಕಾವನಯ್ಯ ಮುಕುಂದನ (೨)
ಪೂರ್ಣ ಪ್ರಜ್ಞರಿಗೊಲಿದು ದ್ವಾರಕೆ ಮಣ್ಣಿನೊಳು ಪ್ರಕಟಸಿದನ |
ಭವಾರ್ಣವಕೆ ಪ್ಲವನಾದನ ಪ್ರಸನ್ನ ವೆಂಕಟ ಕೃಷ್ಣನ (೩)
51.ದೇವರನ್ನು ಕರೆಯುವ ಹಾಡು
ವೆಂಕಟರಮಣನೆ ಬಾರೋ ಶೇಷಾಚಲ ವಾಸನೆ ಬಾರೋ
ಪಂಕಜ ನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೋ
ಮುದ್ದು ಮುಖದ ಮಗುವ ನಿನಗೆ ಮುದ್ದು ಕೊಡುವೆನು ಬಾರೋ
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ ೧
ಮಂದರ ಗಿರಿಯನೆತ್ತಿದಾನಂದ ಮೂರುತಿಯೇ ಬಾರೋ
ನಂದನಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೋ ೨
ಕಾಮನಯ್ಯ ಕರುಣಾಳೊ ಶ್ಯಾಮಲ ವರ್ಣನೆ ಬಾರೋ,
ಕೋಮಲಾಂಗ ಶ್ರೀ ಪುರಂದರ ವಿಠಲನೆ ಸ್ವಾಮಿ ರಾಯನೆ ಬಾರೋ ೩
——————————————————-
52.ವಾರಿಜ ಲಯಪತೆ ವಾರಿಜನಾಭನೆ ,ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರಪ್ರಭಾವನೆ, ವಾರಿಜಜಾಂಡದ ಕಾರಣದೊರೆಯೇ
ಬಾರೈಯ್ಯ ಬಾ ಬಾ ಬಾ ಬಾಬಾ (೫) ಭಕುಥರಪ್ರಿಯಾ ಶ್ರೀನಿವಾಸರಾಯ||
ಮಾರಜನಕಮುಕುತಾರೊಡೆಯ ,ದೇವೈಯ್ಯ ಜೀಯ್ಯ
ಬಾರೈಯ್ಯ ಬಾಬಾಬಾಬಾಬಾಬಾಬಾಬಾಬಾ(೯) ಭಕುಥರಪ್ರಿಯಾ ಶ್ರೀನಿವಾಸರಾಯ|
ಸ್ಯಂದನವೇರಿಬಾಪ್ಪಾ ರಂಗ, ದೇವೋತ್ತುಂಗಾ ನಂದಾ ನಂದನ ಅರಿಮದಭಂಗ, ಕರುಣಾಪಾಂಗ
ಸಿಂಧು,, ಶಯನ ಸುಂದರಾಂಗ ಹೇ ನಾರಸಿಂಗ
ಕಂದವಿರಂಚಿಯು ನಂದಿವಾಹನ ಅಮರೆಂದ್ರ ಸನಕ, ಸನಂ-ದನಾದಿಮುನಿ ವೃಂದ ನಿಂದುಬಂದು
ಧಿಂ ಧಿಂ ಧಿಮಿಕೆಂದು ನಿಂದಾಡಲು ಆನಂದದಿ ಮನೆಗೆ||೧||
ಬಾರೈಯ್ಯ ಬಾಬಾಬಾಬಾಬಾಬಾಬಾಬಾಬಾ(೯) ||
ಜಗ್ಗಜ್ಜನ್ಮಾ ದಿ ಕರ್ತಾಗೋವಿಂದಾ ಉದರದಿಲೋಕ ಲಗುವಾಗಿಧರಿಸೀದಾ ಮುಕುಂದ
ಭಕ್ತರ ಮನಕೆ, ಝಗಝಗಿಸುತ ಪೊಳೆವಾನಂದ, ನಿಗಮಾವಳಿಯಿಂದ
ಅಗಣಿತ ಮುನಿಗಳು ನಗ ಖಗ ಮೃಗ ಶಶಿ ಗಗನಮನ್ಯಾದ್ಯರು ಸೊಗಸಾಗಿ
ಬಗೆಬಗೆ ಪೋಗಳುತಲಿ ಬೇಗ ಜಿಗಿಜಿಗಿದಾಡಲು
ಮುಗುಳುನಗೆಯ ಮಹ ಉರಗ ಗಿರಿವಾಸ ||೨||
ಬಾರೈಯ್ಯ ಬಾಬಾಬಾಬಾಬಾಬಾಬಾಬಾಬಾ(೯) ಭಕುಥರಪ್ರಿಯಾ ಶ್ರೀನಿವಾಸರಾಯ
ತಡಮಾಡಬ್ಯಾಡವೋ ಹೇ ನಲ್ಲ, ವಾಕುಲಾಲಿಸೆನ್ನೋಡೆಯ
ಗೋಪಾಲವಿಠಲ ದೇವ ಪರಾಕು ಅಡಿ ಇಡು ಭಕ್ತವತ್ಸಲ ಶ್ರೀ ಲಕುಮೀ ನಲ್ಲ,
ಮಡುವಿನೊಳಗೆ ಗಜ ಮೊರೆಯಿಡಲಾಕ್ಷಣ ಮಡದಿಗೆ ಹೇಳದೆ
ದುಡದುಡನೆ ಬಂದು ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ
ಸಡಗರದಲಿ ರಮೆ ಪೊಡವಿ ಒಡಗೂಡಿ ||೩||
ಬಾರೈಯ್ಯ ಬಾಬಾಬಾಬಾಬಾಬಾಬಾಬಾಬಾ(೯) ಭಕುಥರಪ್ರಿಯಾ ಶ್ರೀನಿವಾಸರಾಯ||
ವಾರಿಜ ಲಯಪತೆ ವಾರಿಜನಾಭನೆ ,ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರಪ್ರಭಾವನೆ ,ವಾರಿಜಜಾಂಡದ ಕಾರಣದೊರೆಯೇ,
ಬಾರೈಯ್ಯ ಬಾ (೫) ಭಕುಥರಪ್ರಿಯಾ ಶ್ರೀನಿವಾಸರಾಯ ,ಶ್ರೀನಿವಾಸರಾಯ, ಹೇ ಶ್ರೀನಿವಾಸರಾಯ||
—————————————————
53.ಬಾರೊ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವ
ತೋರೊ ಎನಗೆ ಮುಕುಂದ ನಲಿದಾಡು ಮನದಲಿ |
ಮಾರಪಿತ ಆನಂದ ಕಂದಾ ||ಪ||
ಚಾರುತರ ಶರೀರ ಕರುಣಾ ವಾರಿನಿಧಿ ಭವ ಘೋರ ನಾಶನ |
ವಾರಿಜಾಸನವಂದ್ಯ ನೀರಜ ಸಾರಸದ್ಗುಣ ಹೇ ರಮಾಪತೇ ||
ನೋಡೋ ದಯದಿಂದೆನ್ನ ಕರಪದುಮ ಶಿರದಲಿ ನೀಡೋ ಭಕ್ತ ಪ್ರಸನ್ನ ನಲಿದಾಡೊ ಮನದಲಿ |
ಬೇಡಿಕೊಂಬೆನೊ ನಿನ್ನ ಆನಂದ ಘನ್ನ |ಮಾಡದಿರು ಅನುಮಾನವನು
ಕೊಂಡಾಡುವೆನು ಪಾದ ಮಹಿಮೆಗಳನು | ಜೋಡಿಸುವೆ ಕರಗಳನು ಚರಣಕೆ
ಕೂಡಿಸೋ ,ತವ ದಾಸ ಜನರೊಳು ||೧||
ಹೇಸಿ ವಿಷಯಗಳಲ್ಲಿ ತೊಳಲಾಡಿ ನಾ ಬಲು ಕ್ಲೇಶ ಪಡುವುದು ಬಲ್ಲಿ ಘನ ಯುವತಿಯರ ಸುಖ
ಲೇಸು ಎಂಬುದನು ಕೊಲ್ಲಿ ಆಸೆ ಬಿಡಿಸಿಲ್ಲಿ | ಏಸು ಜನುಮದ ದೋಷದಿಂದಲಿ |
ಈಸುವೆನು ಇದರೊಳಗೆ ಇಂದಿಗೆ ಮೋಸವಾಯಿತು ಆದುದಾಗಲಿ |
ಶ್ರೀಶ ನೀ ಕೈಪಿಡಿದು ರಕ್ಷಿಸು ||೨||
ನೀನೆ ಗತಿಯೆನಗಿಂದು ಉದ್ಧರಿಸೊ ಬೇಗನೆ ದೀನಜನರಿಗೆ ಬಂಧು ನಾ ನಿನ್ನ ಸೇವಕ
ಶ್ರೀನಿವಾಸ ಎಂದೆಂದೂ ಕಾರುಣ್ಯಸಿಂಧು| ಪ್ರಾಣಪತಿ ಹೃದಯಾಬ್ಜಮಂಟಪ ಸ್ಥಾನದೊಳಗಭಿವ್ಯಾಪ್ತ ಚಿನ್ಮಯ |
ಧ್ಯಾನ ಗೋಚರನಾಗಿ ಕಣ್ಣಿಗೆ ಕಾಣಿಸುವೆ ಶ್ರೀರಂ ಗ ವಿಠ್ಠಲ ಬಾರೊ ||೩|| ಬಾರೊ
———————
54.ದೇವರು ಬಂದದ್ದು
ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ,
ದೇವರ ದೇವ ಶಿಖಾಮಣಿ ಬಂದನೋ
ಉರಗ ಶಯನ ಬಂದಾ ಗರುಡಗಮನ ಬಂದಾ
ನರ ಗೊಲಿದವ ಬಂದಾ ನಾರಾಯಣ ಬಂದನೋ |೧|
ಮಂಧರೋಧ್ಧರ ಬಂದಾ ಮಾಮನೋಹರ ಬಂದಾ
ಬೃಂದಾವನ ಪತಿ ಗೋವಿಂದ ಬಂದನೋ |೨|
ನಕ್ರಹರನು ಬಂದಾ ಚಕ್ರಧರನು ಬಂದಾ
ಅಕ್ರೂರ ಗೊಲಿದ ತ್ರಿವಿಕ್ರಮ ಬಂದನೋ |೩|
ಪಕ್ಷಿ ವಾಹನ ಬಂದಾ ಲಕ್ಷ್ಮಣಾಗ್ರಜ ಬಂದಾ
ಅಕ್ಷಯ ಫಲದ ಶ್ರೀ ಲಕ್ಷ್ಮೀ ರಮಣ ಬಂದನೋ |೪|
ನಿಗಮ ಗೋಚರ ಬಂದಾ ನಿತ್ಯ ತೃಪ್ತನು ಬಂದಾ
ನಗೆಮುಖ ಪುರಂದರ ವಿಠ್ಠಲ ಬಂದನೋ |೫|
——————————-
55.ಬಂದೆ ಬಂದೆ ಗೋವಿಂದ ಗೋವಳ
ಬಾಂಧವ ಭಕ್ತ ವತ್ಸಲ , ಇಂದಿರೇಶ ಶ್ರೀ ವೇಂಕಟೇಶ ನಿನ್ನ
ಸಂದರುಶನಕೆ ಸಾಗಿ ನಾನಿಲ್ಲಿಗೆ ಬಂದೆ, ಬಂದೆ ಸ್ವಾಮಿ ಬಂದೆ ||
ನಡೆದು ನಡೆಸುತ ನುಡಿದು ನುಡಿಸುತ, ಅಡಿಗಡಿಗೆ ಕಾಪಾಡುತ
ಒಡನೆ ಆಡುತ ಬಿಡದೆ ಕ್ಷಣವನು, ಸಡಗರದಲ್ಲಿ ಕರೆತರಲು ನಾನಿಲ್ಲಿಗೆ
ಬಂದೆ ಸ್ವಾಮಿ ಬಂದೆ ||೧||
ಆಪ್ತ ಅನಿಮಿತ್ತ ವ್ಯಾಪ್ತ ಸರ್ವತ್ರ , ಗುಪ್ತ ಗುಣಗಣ ಪೂರ್ಣನೆ
ಪ್ರಾಪ್ತ ನೀನೆನೆಗಾಗ ಬೇಕೆಂದು ವ್ಯಾಪ್ತಿ , ನಿನ್ನದು ಹುಡುಕತಲಿ ನಾನಿಲ್ಲಿಗೆ
ಬಂದೆ ಸ್ವಾಮಿ ಬಂದೆ ||೨||
ಏನು ಕೊಡಲಿಲ್ಲ ಏನು ಬೇಡಲಿಲ್ಲ , ಏನು ಪಡೆಯಲೊ ಕರುಣಿಯೇ
ನೀನು ಕೊಟ್ಟ ಸ್ವಾತಂತ್ರ್ಯದಾ ಫಲ , ನಿನಗೆ ಅರ್ಪಿಸ ಬೇಕೆನುತ ನಾನಿಲ್ಲಿಗೆ ಬಂದೆ
ಬಂದೆ ಸ್ವಾಮಿ ಬಂದೆ ||೩||
ನಮೋ ನಮೋ ನಾಗಾರಿ ವಾಹನ , ನಮೋ ನಮೋ ಸುರ ಸುಪ್ರಸನ್ನನೇ
ನಮೋ ನಮೋ ಗೊಪಾಲ ವಿಠ್ಠಲ , ನಮಿಪ ಭಕ್ತರ ಸಲಹುವನೆಂದು ,, ಬಂದೆ ಸ್ವಾಮಿ ಬಂದೆ ||೪||
——————————————————-
56.ದಯ ಮಾಡೋ ಹರಿಯೆ ದಯ ಮಾಡೋ
ದಯ ಮಾಡೋ ಹರಿಯೆ ಅಭಯವ ಕೊಡು ಎಂದು ,ಪರಿ ಪರಿ ಇಂದ ನಿನ್ನ ಬೇಡಿಕೊಂಬೆ
ನಾರಸಿಂಹನೆ ನಿನ್ನ ಮೋರೆಗಂಜುವನಲ್ಲ
ಕ್ರೂರವಾದ ನಿನ್ನ ಕೋರೆಗಂಜುವನಲ್ಲ
ಶ್ರೀ ರಮಣನೆ ಸಂಸಾರ ಚಕ್ರ ಕ್ಷುರ ಧಾರೆಗಂಜುವೆನು
ಪಾರು ಮಾಡೋ ||೧||
ಹೃದಯ ಭೇದಿಸುವ ಷಡುವಿಧ ವೈರಿಯು
ಯೆದುರಿಗೆ ಬೀಳದೆ ಕದನ ಮಾಡುವವಯ್ಯ
ಯೆದೆ ಬಡೆದಂಜಿ ನಾ ಗದ ಗದ ನಡುಗುವೆ
ಒದಗಿ ಬೇಗನೆ ಬಂದು ಬದಿಯಲ್ಲಿ ಕೂಡೋ ||೨||
ಸ್ಮರಣೆಯಿಲ್ಲದೆ ಸ್ಮರಿಸಿ ವಿಷ್ಯಂಗಳ
ಮರುಗುವೆ ಮನದೊಳಗೆ ಅನಂತಾದ್ರಿ
ದೊರೆಯೆ ಎಂದೆಂದಿಗು ಮರೆಯದಂತವರ
ತ್ವರಿತದಿ ನೀಡೋ ನಾರಸಿಂಹನೆ ||೩||
—————————————————————–
57.ನಾರಾಯಣ ಎನ್ನಿರೋ, ಶ್ರೀ ನರಹರಿ ಪಾರಾಯಣ ಪಾಡಿರೋ
ನಾರಾಯಣನೆಂದು ಅಜಮಿಳನು ಕೈವಲ್ಯ ಸೇರಿದನೆಂಬೊ ಸುದ್ದಿಯ ಕೇಳಿ ಅರಿಯಿರೋ||
ಕಾಶಿಗೆ ಪೋಗಲೇಕೆ ಕಾವಡಿ ಪೊತ್ತು ಬೇಸತ್ತು ತಿರುಗಲೇಕೆ
ವಾಸುದೇವನ ನಾಮ ಬಾಯ್ತುಂಬ ನೆನೆದರೆ, ಕ್ಲೇಶಗಲೆಂಬೊದು ಲೇಶ ಮಾತ್ರವಿಲ್ಲ ||೧||
ಚೋರರ ಭಯವಿಲ್ಲವೊ ಹರಿ ನಾಮಕೆ ಯಾರ ಅಂಜಿಕೆ ಇಲ್ಲವೊ
ಊರಣಾಳುವ ದೊರೆ ನೀತಿ ಭೀತಿಗಳಿಲ್ಲ ಘೋರ ಪಾತಕವೆಲ್ಲ ದೂರ ಮಾಡುವುದಕ್ಕೆ ||೨||
ಸ್ನಾನವ ಮಾಡಲೇಕೆ ಮಾನವರಿಗೆ ಮೌನ ಮಂತ್ರಗಳೇಕೆ
ದೀನ ಪಾಲಕ ನಮ್ಮ ಬೆಟ್ಟದೊಡೆಯನ್ನ ಧ್ಯಾನಕ್ಕೆ ಸರಿಯುಂಟೆ ಪುರಂದರ ವಿಠ್ಠಲ ||೩||
————————————————————-
55.ರಾಮ ರಾಮ ಎಂಬೆರಡಕ್ಷರ
ರಾಮ ರಾಮ ಎಂಬೆರಡಕ್ಷರ ಪ್ರೇಮದಿ ಸಲಹಿತು ಸುಜನರನು [pa]
ರಾಮ ರಾಮ ರಾಮ ರಾಮ |
ಹಾಲಾಹಲವನ್ನು ಪಾನವ ಮಾದಿದ ಪಾಲಲೋಚನ ನೆ ಬಲ್ಲವನು
ಆಲಾಪಿಸುತ ಶಿಲೆಯಾಗಿದ್ದ ,ಬಾಲೆ ಅಹಲ್ಯೆಯ ಕೇಳೇನು (1)
ಅಂಜಿಕೆಯಿಲ್ಲದೆ ಗಿರಿ ಸಾರಿದ ಕಪಿ ,ಕುಂಜರ ರವಿಸುತ ಬಲ್ಲವನು
ಎಂಜಲ ಫಲಗಳ ಹರಿಗೇ ಅರ್ಪಿಸಿದ ,ಕಂಜಲೋಚನೆಯ ಕೇಳೇನು (2)
ಕಾಲವನರಿತು ಸೇವೆಯ ಮಾಡಿದ, ಲೋಲ ಲಕ್ಷ್ಮಣನೆ ಬಲ್ಲವನು
ವ್ಯಾಳಶಯನ ಶ್ರೀವಿಜಯವಿಠ್ಠಲನ ಲೀಲೆ ಶರದಿಯ ಕೇಳೇನು (3)
————————————————————
58.ಗೋವಿಂದ ಗೋವಿಂದ ನಿನ್ನಾನಂದ
ಗೋವಿಂದ ಗೋವಿಂದ ನಿನ್ನಾನಂದ ಸಾಧನ ಸಕಲವು ನಿನ್ನಾನಂದ |
ಅಣು ರೇಣು ತೃಣ ಕಾಷ್ಟ ಪರಿ ಪೂರ್ಣ ಗೋವಿಂದ |
ನಿರ್ಮಲಾತ್ಮಕನಾಗಿ ಇರುವೋದೆ ಅನಂದ (೧)
ಶೃಷ್ಟಿ ಸ್ತಿಥಿ ಲಯ ಕಾರಣ ಗೋವಿಂದ
ಈ ಪರಿ ಮಹಿಮೆಯ ತಿಲಿಯೋದೆ ಅನಂದ (೨)
ಮಂಗಲ ಮಹಿಮ ಶ್ರೀ ಪುರಂದರ ವಿಠ್ಠಲ
ಹಿಂಗದೆ ದಾಸರ ಸಲಹೋದೆ ಅನಂದ (೩)
—————————————————————
59.ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ
ಒಂದೇ ನಾಮವು ಸಾಲದೆ [ಪ]
ಒಂದೇ ನಾಮವು ಭವಬಂಧನ ಬಿಡಿಸುವುದೆಂದು
ವೇದಂಗಳು ಆನಂದದಿ ಸ್ತುತಿಸುವ
ಉಭಯ ರಾಯರು ಸೇರಿ ಮುದದಿ ಲೆತ್ತವನಾಡಿ
ಸಭೆಯೊಳು ಧರ್ಮಜ ಸತಿಯ ಸೋಲೆ
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನಲು
[ಶ್ರೀ ಕೃಷ್ಣಾ ಎನಲು, ಹರಿ ಕೃಷ್ಣಾ ಎನಲು]
ಇಭರಾಜ ಗಮನಗಕ್ಷಯ ವಸ್ತ್ರವನಿತ್ತ [೧]
ಹಿಂದೊಬ್ಬ ಋಷಿ ಪುತ್ರನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ
ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ
ಕಂದ ನಾರಗನೆಂದು ಕರೆಯಲಭಯವಿತ್ತ [೨]
ಕಾಶಿಯ ಪುರದೊಳಗೆ ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ
ಶ್ರೀಶನ ನಾಮವ ಉಪದೇಶ ಸತಿಗಿತ್ತ
ವಾಸುದೇವ ಶ್ರೀ ಪುರಂದರ ವಿಠಲನ್ನ [೩]
—————————————————–
60.ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೊಡಿದಿರಿ
ರಂಗನ ಎಲ್ಲಿ ನೊಡಿದಿರಿ
ಎಲ್ಲಿ ನೊಡಿದರಲ್ಲಿ ತಾನಿಲ್ಲ ದಿಲ್ಲ ವೆಂದು ಬಲ್ಲ ಜಾಣರೆ
ನಂದಗೊಪನ ಮಂದಿರಂಗಳ ಸಂದು ಬೊಂದಿನಲಿ
ಚಂದ ಚಂದದ ಗೋಪಬಾಲರ ವೃಂದ ವೃಂದದಲಿ
ಸುಂದರಾಂಗದ ಸುಂದರೀಯರ ಹಿಂದು ಮುಂದಿನಲಿ
ಅಂದದಾಕಳ ಕಂದಕರುಗಳ ಮಂದೆ ಮಂದೆಯಲೀ
ಈ ಚರಾಚರದೊಳಗೆ ಅಜಾಂಡದ ಆಚೆ ಈಚೆಯಲಿ
ಖೇಚರೆಂದ್ರನಸುತನ ರಥದ ಅಚ್ಚಾ ಪೀಠದಲಿ
ನಾಚದೆ ಮಾಧವ ಕೇಶವ ಎಂಬ ವಾಚ್ಯ ಕಂಗಳಲಿ
ಮೀಚು ಕೊಂಡದ ಪುರಂದರ ವಿಠಲನ ಲೊಚನಾಗ್ರದಲಿ
———————————————————-
61.ಗೋವಿಂದ ಹರಿ ಗೋವಿಂದ ಕೇಶವ ಕೃಷ್ಣ ಜನಾರ್ಧನ
ಮತ್ಸ್ಯಾವತಾರದೊಳಾಡಿದನೆ ಮಂದರಾಚಲ ಬೆನ್ನೋಳು ತಾಳಿದನೆ
ಅಚ್ಚ ಸೂಕರನಾಗಿ ಬಾಳಿದನೆ ಮದಹೆಚ್ಚೆ ಹಿರಣ್ಯಕನ ಸೀಳಿದನೆ ೧
ಬಲಿಯೊಳು ದಾನವ ಬೇಡಿದನೆ ಕ್ಷಾತ್ರ ಕುಲವ ನಿರ್ಮೂಲ ಮಾಡಿದನೆ
ಜಲನಿಧಿಗೆ ಬಿಲ್ಲ ಹೂಡಿದನೆ ಕಾಮಗೊಲಿದು ಗೊಲ್ಲತಿಯರೊಳಾಡಿದನೆ ೨
ಸಾಧಿಸಿ ತ್ರಿಪುರರ ಗೆಲಿದವನೆ ಬಲು ವಾದಿಸಿ ಹಯವೇರಿ ಮೆರೆದವನೆ
ಭೇದದಿ ವಿಶ್ವವ ಗೆಲಿದವನೆ ಬಡದಾದಿ ಕೇಶವ ನಮಗೊಲಿದವನೆ ೫
—————————————————————-
62.ಎನಗೂ ಆಣೆ ರಂಗ ನಿನಗೂ ಆಣೆ
ಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಾಣೆ
ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ ೧
ತನು ಮನಧನದಲಿ ವಂಚಕನಾದರೆ ಎನಗೆ ಆಣೆ ರಂಗ
ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ ೨
ಕಾಕು ಮನುಜರ ಸಂಗವ ಮಾಡಿದರೆನಗೆ ಆಣೆ ರಂಗ
ಲೌಕಿಕವ ನೀ ಬಿಡಿಸದಿದ್ದರೆ ನಿನಗೆ ಆಣೆ ೩
ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ೪
ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರ ವಿಠಲ ನೀನೊಲಿಯದಿದ್ದರೆ ನಿನಗೆ ಆಣೆ ೫
——————————————-
63.ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ
ಹೊಳೆವ ನೀರೋಲು ಗೆಲುವ ಮೋರೆಯ ನೆಲೆವನೋಡುವ
ಸುಳಿವ ಕಂಬದಿ ಇಳೆಯ ನಳಿಯುವ ಭಳಿರೆ ಭಾರ್ಗವ
ಖಲನ ಛೆದಿಸಿ ಕೊಳಲ ಧ್ವನಿಗೆ ನಳಿನ ಮುಖಿಯರ
ನಾಚಿಸುವ ಬಲು ಹಯದಳದ ಬಹು ಹವಣೆಗಾರನೆ (೧)
ಆರು ಬಲ್ಲರು ನಿಮ್ಮ ಶ್ರೀ ಲಕುಮಿಯ ಮನಸಿಗೆ ತೋರುವಿಯೋ
ಪರಬೊಮ್ಮ ಉಳಿದವರು ಬಲ್ಲರೆ ನೀರಜಾಸನ ಬೊಮ್ಮ ಇದು ನಿನ್ನ ಮರ್ಮ
ನೀರೊಳಗೆ ಮನೆ ಭಾರ ಬೆನ್ನಲಿ ಕೋರೆದಾಡಿಯ
ನಾರಸಿಂಹನೆ ಧರೆಯ ಬೇಡಿದ ಧೀರ ಪುರುಷನೆ
ವಾರಿಭಂದನ ಮಾರ ಜನಕನೆ ನಾರಿಯರ ವ್ರತ ವಳಿದು
ಕುದುರೆಯನೇರಿ ಮೆರೆಯುವ ಸುಂದರಾಂಗನೆ (೨)
ಸಕಲ ಮಾಯವಿದೇನು ವೃಕನ ವಾಯು ಸಖನ ಸಲಹಿದೆ ನೀನು
ಭಕುತಿಯಿಂದಲಿ ತುತಿಪರಿಗೆ ಸುರಧೇನು ಸುರ ಕಾಮಧೆನು
ನಿಖಿಲ ವೇದೋದ್ಧಾರ ಗಿರಿಧರ ಅಖಿಲ ಭೂಮಿಯ
ತಂದ ನರಹರಿ ಯುಕುತಿಯಲಿ ನೆಲೆನಳಿದ ಭಾರ್ಗವ
ಮುಕುತಿಗೊಸುಗ ಫಲವ ಸವಿದನೆ ರುಕುಮನನುಜೆಯ ರಮಣ
ಬೌದ್ಧನೆ ಲಕುಮಿ ರಮಣನೆ ಕಲ್ಕಿ ರೂಪಿಯೆ (೩)
ನಿನ್ನ ರೂಪಿನ ಲೀಲಾ ನೊಡುವ ಜನಕೆ ಕಣ್ಣು ಸಾವಿರವಿಲ್ಲ
ನಾ ಪಾಡಿ ಪೊಗಳಲು ಪನ್ನಗಾಧಿಪನಲ್ಲ ನೀನರಿಯದಿಲ್ಲ
ಕಣ್ಣು ಮುಚ್ಚದೆ ಬೆನ್ನು ತೊರುವಿ ಮಣ್ಣು ಕೆದರುವಿ
ಚಿನ್ನ ಗೊಲಿದನೆ ಸಣ್ಣವಾಮನ ಅಣ್ಣರಾಮನೆ
ಪುಣ್ಯಪುರುಶನೆ ಬನ್ನಬಡಕನೆ , ಹೆಣ್ಣುಗಲ ವ್ರತ
ಕೆಡಿಸಿ ತೇಜಿಯ ಬೆನ್ನನೇರಿದ ವ್ಯಾಸ ವಿಠ್ಠಲ
—————————————————————
65.ಇಂಥಾ ಪ್ರಭುವ ಕಾಣೆನೊ
ಈ ಜಗದೊಳಗಿಂಥಾ ಪ್ರಭುವ ಕಾಣೆನೊ
ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ
ಜಗದಂತ ರಂಗನು ಲಕ್ಷ್ಮೀಕಾಂತ
ಸರ್ವಾಂತರ್ಯಾಮಿ |ಪ|
ಬೇಡಿದ ವರ ಕೊಡುವ ಭಕ್ತರ
ತಪ್ಪು ನೋಡದೆ ಬಂದು ಪೊರೆವ
ಗಾಡಿಕಾರನು ಗರುಡಾರೂಡ
ಗುಣವಂತ ಮಹಾ ಪ್ರೌಢ
ಪ್ರತಾಪ ಜಗದಿ ಗೂಡದಿಂ ಸಂಚರಿಪ
ಪಾಡಿ ಪೊಗಳಿ ಕೊಂಡಾಡುವರ
ಮುಂದಾಡುತಲಿಪ್ಪನು ಕಾಡೊಳಗಿದ್ದರು
ಕೇಡಿಗನೇ ನಾಡಾಡುಗಳಂದದಿ
ಈಡುಂಟೆನೋ ಈ ವೆಂಕಟಗೇ [೧]
ಭಾರ್ಗವಿ ಭೂಮಿ ವಲ್ಲಭ
ಭವದೂರ ಭಕ್ತವರ್ಗಕೆ ಸುಲಭ ,
ನಿರ್ಗುಣ ನಿರ್ವಿಕಾರ ಸ್ವರ್ಗದೈಶ್ವರ್ಯ
ಕಿಂತಾ ನರ್ಘ ಸಂಪದವೀವ
ದೀರ್ಘಾಯುವಂತನಾದ
ಭಾರ್ಗವರಾಮ ನೃಪರ್ಗಳನೆಲ್ಲ
ರಣಾರ್ಗದಿ ಜಯಿಸಿದ ಉಗ್ರಪ್ರತಾಪ
ಸುರಾಗ್ರಗಣ್ಯ ಸದ್ವಿಗ್ರಹ
ಶ್ರೀಮದ್ ಅನುಗ್ರಹ ಮಾಡ್ಯಹ
ದುರ್ಗವ ಕಡಿವಾ [೨]
ಸರಸಿಜಾಸನ ಮನ್ಮಥ
ಈರ್ವರು ಸುತರು ಸುರತರಂಗಿಣಿ
ತನುಜೆ ಪುರವೇ ವೈಕುಂಠ
ಇಂದ್ರಾದ್ಯಮರರೆ ಕಿಂಕರರು
ಗರುಡನೆ ತುರಗ ಉರಗ ಪರಿಯಂಕ
ನಿಷ್ಕಳಂಕ ಸರಿದೊರೆಗಳ
ನಾನರಿಯೆನು ವೆಂಕಟಗಿರಿಯಲಿ
ಮೆರೆಯುವ ಕರುಣಿಗಳರಸನೆ
ಮರೆಯದೆ ಪೊರೆಯುವ ಶರಣಾಗತರನು
ಮರುತಾಂತರ್ಗತ ವಿಜಯವಿಠ್ಠಲ [೩]
ತರಳನು ಕರೆಯೆ ಸ್ಥಂಭವು ಬಿರಿಯೇ
ತುಂಬ ಉಗ್ರವನು ತೋರಿದನು
ಕರುಳನು ಬಗೆದು ಕೊರಳೊಳಗಿಟ್ಟು
ತರಳನ ಸಲಹಿದ ಶ್ರೀ ನರಸಿಂಹನೆ |1|
ಭಕ್ತರೆಲ್ಲ ಕೂಡಿ ಬಹು ದೂರ ಓಡಿ
ಪರಮ ಶಾಂತವನು ಬೇಡಿದರು
ಕರೆದು ತನ್ನ ಸಿರಿಯನು ತೊಡೆಯೊಳು ಕುಳಿಸಿದ
ಪರಮ ಹರುಷವನು ಹೊಂದಿದ ಶ್ರೀ ಹರಿ |2|
ಜಯ ಜಯ ಜಯವೆಂದು ಹೂವನು ತಂದು
ಹರಿ ಹರಿ ಹರಿಯೆಂದು ಸುರರೆಲ್ಲ ಸುರಿಸೆ
ಭಯ ನಿವಾರಣಾ ಭಾಗ್ಯ ಸ್ವರೂಪನೇ
ಪರಮ ಪುರುಷ ಶ್ರೀ ಪುರಂದರ ವಿಠಲನೆ |3|
———————————————————
66.ಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣ ನಿನ್ನ ನಂಬಿದೆ [pa]
ತುಂಬಿದ ಹರಿಗೋಲಂಬಿಗ ಅದಕೊಂಬತ್ತು ಛಿದ್ರ ನೋಡಂಬಿಗ
ಸಂಬ್ರಮದಿಂದ ನೀನಂಬಿಗ ಅದರಿಂಬು ನೋಡಿ ನಡೆಸಂಬಿಗ [1]
ಹೊಳೇಯ ಭರವ ನೋಡಂಬಿಗ ಅದಕೆ ಸೆಳೆವು ಘನವಯ್ಯ ಅಂಬಿಗ
ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದು ಕೊಂಡೊಯ್ಯೋ ನೀನಂಬಿಗ [2]
ಆರು ತೆರೆಯ ನೋಡಂಬಿಗ ಅದುಮೀರಿ ಬರುತಲಿದೆ ಅಂಬಿಗ
ಯಾರಿಂದ ಲಾಗದು ಅಂಬಿಗ ಅದ ನಿವಾರಿಸಿ ಧಾಟಿಸೋ ಅಂಬಿಗ [3]
ಸತ್ಯ ವೆಂಬುದೆ ಹುಟ್ಟಂಬಿಗ ಸದಾ ಭಕ್ತಿ ಎಂಬುದೆ ಪಥವಂಬಿಗ
ಯುಕ್ತಿದಾಯಕ ನಮ್ಮ ಪುರಂದರ ವಿಠಲ, ಮುಕ್ತಿ ಮಂಟಪಕೊಯ್ಯೋ ಅಂಬಿಗ [4]
—————————————————————-
67.ಮುಳ್ಳು ಕೊನೆಯ ಮೇಲೇ ಮೂರು ಕೆರೆಯ ಕಟ್ಟಿ , ಎರಡು ತುಂಬದು ಒಂದು ತುಂಬಲೇ ಇಲ್ಲ
ತುಂಬಲಿಲ್ಲದ ಕೆರೆಗೆ ಬಂದರು ಮೂವರು ಒಡ್ಡರು , ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ
ಕಾಲಿಲ್ಲಧ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ , ಎರಡು ಬರಡು ಒಂದಕೆ ಕರುವೇ ಇಲ್ಲ
ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ , ಎರಡು ಸವಕಲು ಒಂದು ಸಲ್ಲಲೇ ಇಲ್ಲ
ಸಲ್ಲದಿದ್ದ ಹೊಂನೆಗೆ ಬಂದರು ಮೂವರು ನೊಟಗಾರರು , ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ
ಕಣ್ಣಿಲ್ಲದ ನೋಟಗಾರಗೆ ಕೊಟ್ಟರು ಮೂರು ಊರುಗಳ , ಎರಡು ಹಾಳು ಒಂದಕೆ ಒಕ್ಕಲೇ ಇಲ್ಲ
ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಭರರು , ಇಬ್ಬರು ಚೊಂಚರು ಒಬ್ಬಗೆ ಕಯ್ಯೇ ಇಲ್ಲ
ಕೈ ಇಲ್ಲದ ಕುಂಭರನು ಮಾಡಿದ ಮೂರು ಮಡಿಕೆಗಳ , ಎರಡು ಒಡಕು ಒಂದಕೆ ಬುಢವೇ ಇಲ್ಲ
ಬುಢವಿಲ್ಲದ ಮಡಿಕೆಗೆ ಹಾಕಿದರು ಮೂರು ಅಕ್ಕಿಕಾಳ , ಎರಡು ಬೇಯದು ಒಂದು ಬೇಯಲೇ ಇಲ್ಲ
ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು , ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ
ಹಸಿವಿಲ್ಲದ ನೆಂಟಗೆ ಕೊಟ್ಟರು ಮೂರು ಠೊಣಪೆಗಳ , ಎರಡು ತಾಕದು ಒಂದು ತಾಕಲೇ ಇಲ್ಲ
ಹಸಿವಿಲ್ಲದ ನೆಂಟಗೆ ಕೊಟ್ಟರು ಮೂರು ಠೊಣಪೆಗಳ , ಎರಡು ತಾಕದು ಒಂದು ತಾಕಲೇ ಇಲ್ಲ
ತಾಕಲಿಲ್ಲದ ಟೊಣಪೆಯ ತಾಕಿಸಿ ಸದ್ಗತಿಯ ನೀಯಬೇಕು ಪುರಂದರ ವಿಠ್ಠಲ ರಾಯ ||
—————
68.ನೆರೆ ನಂಬಿದೆ ಮದ್ ಹೃದಯ ಮಂಟಪ ದೊಳು
ಪರಿಶೋಭಿಸುತಿರು ಪಾಂಡುರಂಗ || ಪ ||
ಶರಣಜನರ ಸಂಸಾರ ಮಹಾಭಯ
ಹರಣ ಕರುಣ ಸಿರಿ ಪಾಂಡುರಂಗ || ಅ ಪ ||
ನೆರೆದಿಹ ಬಹು ಜನರೊಳಿದ್ದರು ಮನ ಸ್ಥಿರವಿಡು ನಿನ್ನಲಿ ಪಾಂಡುರಂಗ
ಪರಿಪರಿ ಕೆಲಸವು ನಿನ್ನ ಮಹಾಪೂಜೆ ನಿರುತ ಎನಗೆ ಕೊಡು ಪಾಂಡುರಂಗ || ೧ ||
ಪರದೇವನೆ ನಿನ್ನ ಲೀಲಾ ಸ್ಮೃತಿಯನು ನಿರುತ ಎನಗೆ ಕೊಡು ಪಾಂಡುರಂಗ
ಪರರಾಪೇಕ್ಷೆಯ ಬಿದಿಸಿ ನಿರಂತರ ಪರಗತಿ ಪಥ ತೋರೋ ಪಾಂಡುರಂಗ || ೨ ||
ಸುಖವಾಗಲಿ ಬಹು ದು:ಖವಾಗಲಿ ಸಖ ನೀನಾಗಿರು ಪಾಂಡುರಂಗ
ನಿಖಿಲಾಂತರ್ಗತ ವ್ಯಾಸವಿಠಲ ತವ ಮುಖ ಪಂಕಜ ತೋರೋ ಪಾಂಡುರಂಗ || ೩ ||
—————————————————————–
69.ಬಿಡೆನೋ ನಿನ್ನಘ್ರಿ ಶ್ರೀನಿವಾಸ
ಬಿಡೆನೋ ನಿನ್ನಘ್ರಿ ಶ್ರೀನಿವಾಸ, ಎನ್ನ ದುಡಿಸಿಕೊಳ್ಳೆಲೋ ಶ್ರೀನಿವಾಸ
ನಿನ್ನುಡಿಯೇ ಜಿತಲ್ಲೋ ಶ್ರೀನಿವಾಸ, ಎನ್ನ ನಡೆ ತಪ್ಪು ಕಾಯೋ ಶ್ರೀನಿವಾಸ ||ಪ||
ಬಡಿಯೋ ಬೆನ್ನಲ್ಲಿ ಶ್ರೀನಿವಾಸ ನನ್ನೊಡಲ ಹೊಯ್ಯದಿರೊ ಶ್ರೀನಿವಾಸ
ನಾ-ಬಡವ ಕಾಣೆಲೋ ಶ್ರೀನಿವಾಸ, ನಿನ್ನೊಡಲ ಹೊಕ್ಕೆನೊ ಶ್ರೀನಿವಾಸ || ೧ ||
ಪಂಜು ವಿಡಿವೆನೊ ಶ್ರೀನಿವಾಸ ನಿನ್- ಎಂಜಲ ಬಳಿದುಂಬೆ ಶ್ರೀನಿವಾಸ
ನಾಸಂಜೆ ಉಧಯಕೆ ಶ್ರೀನಿವಾಸ, ಕಾಳಂಜೆಯ ಪಿಡಿವೆ ಶ್ರೀನಿವಾಸ || ೨ ||
ಸತ್ತಿಗೆ ಚಾಮರ ಶ್ರೀನಿವಾಸ ನಾ-ನೆತ್ತಿ ಕುಣಿವೆನೋ ಶ್ರೀನಿವಾಸ
ನಿನ್ನ -ರತ್ನಧ ಹಾವಿಗೆ ಶ್ರೀನಿವಾಸ, ನಾ-ಹೊತ್ತು ನಲಿವೆನೋ ಶ್ರೀನಿವಾಸ || ೩ ||
ಹೇಳಿದಂಥಾಲಿಹೆ ಶ್ರೀನಿವಾಸ ನಿನ್ನಾಳಿಗಳಾಗಿಹೆ ಶ್ರೀನಿವಾಸ
ಅವ-ರೂಳಿಗವ ಮಾಳ್ಪೆ ಶ್ರೀನಿವಾಸ, ನನ್ನ ಪಾಲಿಸೋ ಬಿಡದೆ ಶ್ರೀನಿವಾಸ || ೪ ||
ನಿನ್ನ ನಾಮ ಹೋಳಿಗೆ ಶ್ರೀನಿವಾಸ | ಕಳ್ಳ- ಕುನ್ನಿ ನಾನಾಗಿಹೆ ಶ್ರೀನಿವಾಸ
ಕಟ್ಟಿ-ನಿನ್ನವರೊದ್ದರೆ ಶ್ರೀನಿವಾಸ, ನನಗಿನ್ನು ಲಜ್ಜೇತಕೆ ಶ್ರೀನಿವಾಸ || ೫ ||
ಬೀಸಿ ಕೊಲ್ಲಲವರೆ ಶ್ರೀನಿವಾಸ, ಮುದ್ರೆ ಕಾಸಿ ಚುಚ್ಚಲವರೆ ಶ್ರೀನಿವಾಸ
ಮಿಕ್ಕ ಘಾಸಿಗೆ ನಾನಂಜೆನಯ್ಯ ಶ್ರೀನಿವಾಸ ಎಂಜಲಾಸೆಯ ಭಂಟ ನಾ ಶ್ರೀನಿವಾಸ || ೬||
ಹೇಸಿ ನಾನಾಧರೆ ಶ್ರೀನಿವಾಸ, ಹರಿ-ಧಾಸರೊಳು ಪೊಕ್ಕೆ ಶ್ರೀನಿವಾಸ
ಅವರ-ಭಾಷೆಯ ಕೇಳಿಹೆ ಶ್ರೀನಿವಾಸ, ಆವಾಸಿಯ ಸೈರಿಸೊ ಶ್ರೀನಿವಾಸ || ೭ ||
ತಿಂಗಳವನಲ್ಲ ಶ್ರೀನಿವಾಸ, ವತ್ಸ-ರಂಗಳವನಲ್ಲ ಶ್ರೀನಿವಾಸ
ರಾಜಂಗಳ ಸವದಿಪೆ ಶ್ರೀನಿವಾಸ, ಭವಂಗಳ ಧಾಟುವೆ ಶ್ರೀನಿವಾಸ || ೮ ||
ನಿನ್ನವ ನಿನ್ನವ ಶ್ರೀನಿವಾಸ, ನಾನನ್ಯರನರಿಯೆನೊ ಶ್ರೀನಿವಾಸ
ಅಯ್ಯ- ಮನ್ನಿಸೋ ತಾಯ್ತಂದೆ ಶ್ರೀನಿವಾಸ
ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ || ೯ ||
————————————————————–
70.ದಾಸೋಹಂ ದಾಸೋಹಂ
ದಾಸೋಹಂ ದಾಸೋಹಂ ತವದಾಸೋಹಂ ದಾಸೋಹಂ
ವಾಸುದೇವವಿಗತಾಘ ಸಂಘತವ | ದಾಸೋಹಂ ||
ಜೀವಾಂತರ್ಗತ ಜೀವನಿಯಾಮಕಜೀವವಿಲಕ್ಷಣಜೀವನದ
ಜೀವಾಧಾರಕಜೀವರೂಪರಾಜೀವಭವಜನಕಜೀವೇಶ್ವರ ತವ ||೧
ಕಾಲಾಂತರ್ಗತ ಕಾಲನಿಯಾಮಕ ಕಾಲಾತೀತ ತ್ರಿಕಾಲಜ್ಞ
ಕಾಲ ಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕಕಾಲಮೂರ್ತಿ ತವ || ೨
ಕರ್ಮಕರ್ಮಕೃತಕರ್ಮಕೃತಾಗಮಕರ್ಮಫಲಪ್ರದ ಕರ್ಮಜಿತ
ಕರ್ಮ ಬಂಧ ಮಹಕರ್ಮ ವಿಮೋಚಕ ಕರ್ಮನಿಗ್ರಹ ಕರ್ಮ ಸಾಕ್ಷಿ ತವ ||೩
ಧರ್ಮರೂಪಮಹ ಧರ್ಮ ವಿವರ್ಧನ ಧರ್ಮ ವಿದುತ್ತಮ ಧರ್ಮನಿಧೆ
ಧರ್ಮ ಸೂಕ್ಷ್ಮ ಮಹ ಧರ್ಮ ಸಂರಕ್ಷಕ ಧರ್ಮ ಸಾಕ್ಷಿ ಯಮಧರ್ಮಮಿತ್ರ ತವ ||೪
ಮಂತ್ರಯಂತ್ರಮಹಮಂತ್ರ ಬೀಜಮಹಮಂತ್ರರಾಜಗುರು ಮಂತ್ರಧೃತ
ಮಂತ್ರಮೇಯ ಮಹಾಮಂತ್ರನಿಯಾಮಕಮಂತ್ರದೇವಜಗನ್ನಾಥ ವಿಠಲ ತವ ||೫ ||
ಆರತಿ ಹಾಡು
ರಚನೆ: ವಾದಿರಾಜರು
72.ಆನಂದಮಯಗೆ ಚಿನ್ಮಯಗೆ ಶ್ರೀಮನ್ನನಾರಾಯಣಗೆ ಆರತಿ ಎತ್ತಿರೆ ||
ವೇದವ ತಂದು ಬೆಟ್ಟವ ಪೊತ್ತು ಧರಣಿಯ
ಸಾಧಿಸಿ ಕಂಭದಿ ಬಂದವಗೆ
ಭೂದಾನವಬೇಡಿ ನೃಪರ ಸಂಹರಿಸಿದ
ಆದಿಮೂರುತಿಗೆ ಆರತಿ ಎತ್ತಿರೆ ೧
ಇಂದುವದನೆ ಸೀತೆ ಸಹಿತಲರಂಯದಿ ನಂದಗೋಕುಲದಲ್ಲಿ ನಲಿದವಗೆ
ಮಂದಗಮನೆಯರಮುಂದೆನಿರ್ವಾಣದಿ
ನಿಂದ ಆದಿ ಮೂರುತಿಗೆ ಆರತಿ ಎತ್ತಿರೆ ೨
ತುರಗವನೇರಿ ದೈತ್ಯರ ಸೀಳಿ ಸುಜನರಪೊರೆವ ಮಂಗಳ ಹಯವದನನಿಗೆ
ವರದಯಾದವಗಿರಿ ಆದಿನಾರಾಯಣ
ಚರಣ ಕಮಲಕ್ಕೆ ಆರತಿ ಎತ್ತಿರೆ ||೩
ಲಾಲಿ :
73.ಜೋ ಜೋ ಶ್ರೀಕೃಷ್ಣ ಪರಮಾನಂದ
ಜೋ ಜೋ ಗೋಪಿಯಕಂದ, ಮುಕುಂದ ಜೋ ಜೋ ||
ಪಾಲುಗಡಲೋಳು ಪವಡಿಸಿದವನೆ
ಆಲದೆಲಯ ಮೇಲೆ ಮಲಗಿದ ಶಿಶುವೇ
ಶ್ರೀ ಲಲಿತಂಗಿಯರ ಚಿತ್ತದೊಲ್ಲಭನೆ
ಬಾಲನಿನ್ನನು ಪಾಡಿ ತೂಗುವೆನಯ್ಯ ಜೋ ಜೋ ||೧||
ಹೊಳೆವಂಥ ರನ್ನದ ತೊಟ್ಟಿಲಮೇಲೆ
ಥಳ ಥಳಿಸುವ ಗುಲಗಂಜಿಯ ಮಾಲೆ
ಅಳುವದ್ಯಾಕೋ ಎನ್ನಯ ಮುದ್ದುಬಾಲ
ನಳಿನ ನಾಭನೆ ನಿನ್ನ ಪಾಡಿ ತೂಗುವೇನೋ ಜೋ ಜೋ ||೨||
ಯಾರ ಕಂದ ನೀ ಯಾರ ನಿಧಿ ನೀ
ಯಾರ ರತ್ನವೊ ನಿನಾರ ಮಾಣಿಕ್ಯವೊ
ಸೇರಿತು ಯೆನಗೊಂದು ಚಿಂತಾಮಣಿಯೆಂದು
ಪೋರನೆ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ ||೩||
ಗುಣನಿಧಿಯೇನಿನ್ನ ಯೆತ್ತಿ ಕೊಂಡಿದ್ದರೆ
ಮನೆಯ ಕೆಲಸ ವಂಯಾರು ಮಾಡುವರೈಯ್ಯ
ಮನಕೆ ಸುಖ ನಿದ್ರೆಯ ತಂದುಕೊ ಬೇಗ
ಫಣಿ ಶಯನನೆ ನಿನ್ನ ಪಾಡಿ ತೂಗುವೇನೋ ಜೋಜೋ ||೪||
ಅಂಡಜ ವಾಹನ ಆನಂತ ಮಹಿಮ
ಪುಂಡರಿಕಾಕ್ಷ ಶ್ರೀ ಪರಮ ಪಾವನ್ನ
ಹಿಂಡು ದೈವದ ಗಂಡ ಉದ್ಧಂಢನೆ ನಮ್ಮ
ಪಾಂಡುರಂಗ ಶ್ರೀ ಪುರಂದರ ವಿಠಲ ಜೋ ಜೋ ||೫|
74.ಮಂಗಳ
ಅಕ್ರೂರಗೊಲಿದ ತ್ರಿವಿಕ್ರಮಗೆ, ನಕ್ರನ ಗೆಲಿದಪರಾಕ್ರಮಗೆ |
ಶಕ್ರನ ಗರ್ವಪಹಾರವಮಾಡಿದ, ಶುಕ್ರಶಿಷ್ಯನ ಗೆಲಿದವಗೆ (೧)
ಗಂಗೆಯ ಪಡೆದ ಶ್ರೀ ರಂಗನಿಗೆ, ರಂಗು ಮಾಣಿಕದುಂಗುರದವಗೆ |
ಭೃಂಗಕುಂತಳೆಯರ ವ್ರತವನೆ ಕೆಡಿಸಿದ ಅಂಗಜನಯ್ಯ ಶುಭಾಂಗನಿಗೆ (೨)
ಧರೆಯೋಳಧಿಕ ವೆಂಕಟಾಚಲಗೆ| ಸ್ಥಿರವಾಗಿ ಪುಷ್ಕರಣಿಲಿ ನೆಲಸಿಹಗೆ |
ಪರತತ್ವ ಶ್ರೀಪುರಂದರ ವಿಠಲಗೆ, ವರ ವೆಂಕಟ ಶ್ರೀನಿವಾಸನಿಗೆ |
ಮಂಗಳಂ ಜಯ ಮಂಗಳಂ, ಮಂಗಳಂ ನಿತ್ಯ ಶುಭಮಂಗಳಂ |
ಇಂದಿನ ದಿನವೇ ಶುಭ ದಿನವು ಇಂದಿನ ವಾರ ಶುಭವಾರ
ಇಂದಿನ ಯೋಗ ಶುಭ ಯೋಗ, ಇಂದಿನ ಕರ್ಣ ಶುಭ ಕರ್ಣ
ಇಂದುಪುರಂದರ ವಿಠ್ಠಲ ರಾಯನ ಪಾಡಿದ ದಿನವೇ ಶುಭದಿನವು.
ಹಗಲು ನಿನ್ನ ನೆನೆಯಲಿಲ್ಲ ಹಸಿವೆ ತೃಷೆಯಿಂದ,
ಇರುಳು ನಿನ್ನ ನೆನೆಯಲಿಲ್ಲ ನಿದ್ರೆಯ ಬಲದಿಂದ
ಇವೆರಡರ ಬಾಧೆಗೆ ನಾನೋಳಗಾದೆ ಪುರಂದರವಿಠ್ಠಲ
ಜೈಜೈ ಪುರಂದರವಿಠ್ಠಲ
—————————————————-
75.ಶ್ರೀಪತಿಯು ನಮಗೆಸಂಪದವೀಯಲಿ
ವಾಣಿ ಪತಿಯುನಮಗೆದೀರ್ಘಾಯು ಕೊಡಲಿ ||
ವರ ವಿಬುಧರನು ಪೊರೆಯೆ ವಿಷವ ಕಂಠದೋಳಿಟ್ಟ ಹರ ನಿತ್ಯ ನಮಗೆ ಸಹಾಯ ಮಾಡಲಿ |
ನರರೋಳುನ್ನತವಾದ ನಿತ್ಯ ಭೋಗಂಗಳನು ಪುರುಹೂತ ಪೂರ್ಣ ಮಾಡಿಸಲಿ ಬಿಡದೆ (೧)
ವಿನುತ ಸಿದ್ಧಿ ಪ್ರದನು ವಿಘ್ನೇಶನ ದಯದಿಂದ, ನೆನೆದ ಕರ್ಯಗಳೆಲ್ಲ ನೆರವೇರಲಿ ||
ದಿನದಿನದಿ ಧನ್ವಂತ್ರಿ ಆಪತ್ತುಗಳ ಕಳೆದು, ಮನಹರುಷವನಿತ್ತು ಮನ್ನಿಸಲಿ ಬಿಡದೆ ||
ನಿರುತ ಸುಜ್ಞಾನವನು ಈವ ಗುಕಾಲವನರಿತು ಸೇವೆಯ ಮಾಡಿದ, ಲೋಲ ಲಕ್ಷ್ಮಣನೆ ಬಲ್ಲವನು
ಪುರಂದರವಿಠಲನ ಕರುಣೆಯಿಂದ ನಿತ್ಯ ಸುರರೋಲುಮೆ ನಮಗೆ ಸುಸ್ಥಿರವಾಗಲಿ ||
————————————————
ಕಾಯೇನವಾಚಾ ಮನಸೇಂದ್ರಿಯೈರ್ವಾ ಬುಧ್ಯಾತ್ಮನಾವಾ ಅನುಸೃತ ಸ್ವಭಾವಮ್
ಕರೋಮಿ ಯದ್ಯದ್ಸಕಲಂ ಪರಸ್ಮೈ ಶ್ರೀಮನ್ ನಾರಾಯಣಾಯೇತಿ ಸಮರ್ಪಯಾಮಿ
ಶ್ರೀಮದ್ಭಾರತೀರಮಣ ಗುರು ಮುಖ್ಯ ಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
=================================
Leave a Reply