Composer : Shri Vijaya dasaru
ಶ್ರೀವಿಜಯದಾಸಾರ್ಯ ವಿರಚಿತ
ಶ್ರೀರಾಮದೇವರ ಸುಳಾದಿ
ರಾಗ: ಮಧ್ಯಮಾವತಿ
ಧ್ರುವತಾಳ
ರಾಜ ರಾಜರಮಣಿ ರಾಜಶೇಖರ ವಿನುತಾ
ರಾಜ ತೇಜೋನಿಧಿ ರಾಜಾಧೀಶ
ರಾಜಹಂಸಾ ನಯನಾ ರಾಜಶೇಖರ ವಿ –
ರಾಜಿತ ಕೀರ್ತಿ ಗಜರಾಜವರದಾ
ರಾಜವದನಾ ರಿಪುರಾಜ ಮಸ್ತಕಶೂಲಾ
ರಾಜರಾಜೋತ್ತುಮ ರಾಜವಿನುತಾ
ರಾಜೀವದೊಳಗಿದ್ದ ರಾಜೀವನ ಪುಟ್ಟಿಸಿದ
ರಾಜಮಾರ್ತಾಂಡ ದ್ವಿಜರಾಜಗಮನಾ
ರಾಜ ರಾಜರು ನಿನ್ನ ರಾಜಿಸುವ ಚರಣಾ –
ರಾಜೀವದಲ್ಲಿ ವಾಲಗ ಮಾಳ್ಪರು
ರಾಜ ರಾಜಾಗ್ರಣ್ಯ ರಾಜಾಭಿಷೇಕಕ್ಕೆ
ರಾಜ ನೀನಲ್ಲದೆ ರಾಜರುಂಟೇ
ರಾಜಗಂಭೀರ ಅಪರಾಜಿತನಾಮ ನಮ್ಮ ವಿಜಯವಿಟ್ಠಲ ರಂಗ –
ರಾಜ ಸಮುದ್ರರಾಜ ಶಯನನೆ || ೧ ||
ಮಟ್ಟತಾಳ
ದಶಶಿರನೆಂಬುವನು ಅಸಮ ವೀರನಾಗಿ
ಬಿಸನಿಧಿ ಮಧ್ಯದಲ್ಲಿ ತ್ರಿದಶರ ಶೆರೆಯಿಡಲು
ದಶದಿಕ್ಕಿನ ಒಳಗೆ ಪೆಸರಾಗಿ ಪಸರಿಸುತ
ಪಶುಪನ ವರದಿಂದ ಕುಸಿಯದಲಿರುತಿರೇ
ಅಸುರನ ಉಪಹತಿಗೆ ವಸುಧಿ ಭಾರವಾಗೆ
ಬಿಸಿಜಭವ ಸುಮನಸರೆಲ್ಲರು ಪೋಗಿ
ಬಿಸಿಜದಳನಯನ ವಸುಧಿ ಸಂರಕ್ಷಕನೇ
ಅಸುರರ ಶಿಕ್ಷಕನೆ ಆ ಸಮಯ ಬಂದಿದೆ
ದೆಶೆಗೆಟ್ಟವರ ಪಾಲಿಸಬೇಕೆಂದೆನುತ
ಶಿಶುಗಳೊದರಿದಂತೆ ಎಸದು ಮೊರೆಯಿಡಲು
ವೃಷಭನಾಮಕದೇವ ವಿಜಯವಿಟ್ಠಲರೇಯನ
ಬಿಸಜ ಚರಣದಲ್ಲಿ ಹಸನಾಗಿ ಬಿನ್ನೈಸೇ || ೨ ||
ರೂಪಕತಾಳ
ಮೂರು ಗುಣರಹಿತ ಮೂರುತಿ ಈತನ
ಕಾರುಣ್ಯವನ್ನು ಇನ್ನಾರು ಬಲ್ಲವರಿಲ್ಲ
ವಾರಿಜಾದ್ಯರ ಸಾರೆಗರದು ಶ –
ರೀರವ ತಡವರಿಸಿ ತಾರತಮ್ಯದಿಂದ
ಭಾರ ಎನ್ನದು ಎಂದು ಭರವಸವನಿತ್ತು
ಕ್ರೂರನಿಂದಲಿ ಬಂದ ಭಾರ ಇಳಿಸುವೆನೆಂದು
ಧಾರುಣಿಯೊಳಗಿತ್ತ ಈರೈದು ರಥದವನು
ನಾರಾಯಣನು ಕುಮಾರನಾಗಲೆಂದು
ಆರಾಧನೆಯ ಮಾಡೆ ಶ್ರೀರಾಮನೆಂದೆಂಬವ –
ತಾರವನ್ನು ಧರಿಸಿದ ರಮಾರಮಣನೂ
ಚಾರುಗುಣ ನಿಲಯ ವಿಜಯವಿಟ್ಠಲರೇಯಾ
ಸಾರಿದವರ ಮನೋಹರವ ತೋರುತ್ತಾ || ೩ ||
ಝಂಪೆತಾಳ
ಮುನಿಪ ಕೌಶಿಕನ ಯಾಗವ ಕಾಯಿದು ತಾಟಕಿ
ದನುಜಿಯ ಮುರಿದು ನಿಜಾನನುಜನ ಕೂಡ
ಜನಕ ಪುರಕೆ ಗಮನವಾಗಿ ಪೋಗುತ್ತ
ಮುನಿಯಾಂಗನಿಯ ಶಾಪವನ್ನೆ ತೊಡದೂ
ಅನಲಾಕ್ಷನ ಧನಸು ಮುರಿದು ನಿಕ್ಕಡಿ ಮಾಡಿ
ಜನಕರಾಯನ ನಂದನಿಯ ನೆರದು
ಅನುವರದೊಳಗೆ ಭೃಗು ತನುಜನ್ನ ಪೊಕ್ಕಳಲಿ
ದನುಜ ಸೇರಿರಲು ಬಾಣದಲಿ ಸದೆದೂ
ತನಗೆ ತಾನೇ ಲೀಲೆ ತೋರಿದ ಮಹದೈವ
ವಾತನೆ ಕಾಣೊ ಗೋಹಿತ ವಿಜಯವಿಟ್ಠಲ ರಾಮ || ೪ ||
ತ್ರಿವಿಡಿತಾಳ
ಪಿತನ ಮಾತನು ಮನ್ನಿಸಿ ಸತಿಸಹಿತ ಭಾಗೀ –
ರಥಿಯ ದಾಟುತಲಿ ಭಕುತಗೊಲಿದು
ಅತಿಶಯವಾದ ಪರ್ವತ ಚಿತ್ರಕೂಟದಲಿ
ಯತಿಗಳಿಂದಲಿ ಪೂಜಿತನಾಗುತ
ಮತಿಹೀನನಾಗಿ ಬಾಳುತಲಿದ್ದ ಕಾಕನ್ನ
ಗತ ಲೋಚನನ ಮಾಡಿ ಕ್ಷಿತಿಗಟ್ಟಿದೇ
ಹಿತವಾಗಿ ಬಂದ ಭರತಗೆ ಹಾವಿಗೆ ಕೊಟ್ಟು
ವೃತವ ಧರಿಸಿದ ಉನ್ನತ ಮಹಿಮಾ
ಪಥಚಾರನಾಗಿ ಶೋಭಿಸುತ ದಂಡಕಾರಣ್ಯ
ಯತಿಪುಂಗವ ಕುಂಭಸುತನ ಕಂಡು
ಪ್ರತಿರಥನಾಮಾ ವಿಜಯವಿಟ್ಠಲ ರಘು –
ಪತಿ ನೀನೆ ಉತ್ಪತ್ತಿ ಸ್ಥಿತಿ ಲಯ ಕರ್ತನೇ || ೫ ||
ಅಟ್ಟತಾಳ
ಮೋಸದಾ ಅಸುರಿಯ ಮೂಗು ಕೊಯ್ದು ಖರ –
ದೂಷಣಾದ್ಯರನ್ನ ಕೊಂದು ಗೌತುಮೆಯಲ್ಲಿ
ವಾಸವಾಗಿದ್ದ ಮಾರೀಚ ಮಾಯಾಮೃಗ
ವೇಷವಾಗಿ ಬರೆ ಕೊಂದು ಮಾರ್ಗದಲ್ಲಿ
ಘಾಸಿಯಾಗಿದ್ದ ವಿಹಂಗನ್ನ ಮನ್ನಿಸಿ
ದ್ವೇಷಿ ಕಬಂಧನ ಕಡಿದು ಶಬರಿಯ
ಮೀಸಲ ಭಕುತಿಗೆ ಹಣ್ಣುಸವಿದು ಸಂ –
ತೋಷದಿಂದಲಿ ತುಂಗಾತೀರದಲ್ಲಿ ಪವ –
ನಾ ಸೂನು ಎರಗಲು ಎತ್ತಿ ಮಾತಾಡಿ ದಿ –
ನೇಶ ತನುಜಗೆ ಅಭಯವನು ಇತ್ತು
ಬೀಸಿ ವಗೆದೆ ಕಾಲಲಿ ದುಂಧುಮಾರನ್ನ
ನೀ ಸವರಿದೆ ಏಳು ತಾಳವ ಒಮ್ಮೆಲೆ
ಸಾಸಿರನಾಮನೇ ವಿಜಯವಿಟ್ಠಲ ನರ –
ವೇಷವ ಧರಿಸಿದ ವೈಕುಂಠವಾಸ || ೬ ||
ಆದಿತಾಳ
ಭೀತಿ ಶೂನ್ಯನಾದ ಪುರಹೂತ ಮಗನ ಕೊಂದು ರವಿ
ಜಾತಗೆ ಪಟ್ಟವಗಟ್ಟಿ ಪ್ರೀತಿದೂತ ವಾಯುಜನ್ನ
ಆ ಸೀತೆ ಬಳಿಗೆ ಕಳುಹೆ ಪೋಗೀ
ಮಾತು ತಂದ ಪೇಳಿದಾತಗೆ ವರವನ್ನಿತ್ತು
ಕೋತಿ ಕರಡಿ ಸಹಿತವಾಗಿ ಸೇತುವೆ ಬಿಗಿಸಿ ಬಂದ
ನೀತ ವಿಭೀಷಣನ ಕೂಡ ಕಾತುರದಿಂದಲಿ ದಾಟಿ
ಧೂರ್ತ ರಾವಣಾದಿಗಳ ಯಾತನಿಗೆ ಬೀಳ್ಕೊಡಿಸಿ
ಪ್ರೀತಿಯಾಸ್ಪದನಾದ ತಾತ ವಿಭೀಷಣಗೆ ಪ್ರ –
ದ್ಯೋತ ಶಶಿ ಉಳ್ಳನಕ ಭೂತಳದೊಳಗೆ ಲಂಕೆ –
ಯ ತಪ್ಪದಂತೆ ಆಳೆಂದಾತಗೆ ಪಟ್ಟವಗಟ್ಟಿ
ಸೀತೆ ಸಹಿತ ಬಂದು ಸಾಕೇತಪುರದಲ್ಲಿ ನಿಂದು
ಧಾತಾದಿಗಳ ಮನಕೆ ಪ್ರೀತಿ ಬಡಿಸಿ ಶೆರೆಯ ಬಿಡಿಸಿ
ಸೀತೆಯರಸ ವಿಜಯವಿಟ್ಠಲ ಭೂತ –
ನಾಥನಿಂದ ಬಂದ ಮಾತು ಮನ್ನಿಸಿದ ಮಹಾತ್ಮಾ || ೭ ||
ಜತೆ
ಸಾರ್ವಭೌಮನೆ ರಾಮಾ ದುರುಳ ದೈತ್ಯ ವಿರಾಮಾ
ಸರ್ವಯೋಗಿ ವಿನಿಶ್ರುತಾ ವಿಜಯವಿಟ್ಠಲ ||
SrIvijayadAsArya viracita
SrIrAmadEvara suLAdi
rAga: madhyamAvati
dhruvatALa
rAja rAjaramaNi rAjaSEKara vinutA
rAja tEjOnidhi rAjAdhISa
rAjahaMsA nayanA rAjaSEKara vi –
rAjita kIrti gajarAjavaradA
rAjavadanA ripurAja mastakaSUlA
rAjarAjOttuma rAjavinutA
rAjIvadoLagidda rAjIvana puTTisida
rAjamArtAMDa dvijarAjagamanA
rAja rAjaru ninna rAjisuva caraNA –
rAjIvadalli vAlaga mALparu
rAja rAjAgraNya rAjABiShEkakke
rAja nInallade rAjaruMTE
rAjagaMBIra aparAjitanAma namma vijayaviTThala raMga –
rAja samudrarAja Sayanane || 1 ||
maTTatALa
daSaSiraneMbuvanu asama vIranAgi
bisanidhi madhyadalli tridaSara SereyiDalu
daSadikkina oLage pesarAgi pasarisuta
paSupana varadiMda kusiyadalirutirE
asurana upahatige vasudhi BAravAge
bisijaBava sumanasarellaru pOgi
bisijadaLanayana vasudhi saMrakShakanE
asurara SikShakane A samaya baMdide
deSegeTTavara pAlisabEkeMdenuta
SiSugaLodaridaMte esadu moreyiDalu
vRuShaBanAmakadEva vijayaviTThalarEyana
bisaja caraNadalli hasanAgi binnaisE || 2 ||
rUpakatALa
mUru guNarahita mUruti Itana
kAruNyavannu innAru ballavarilla
vArijAdyara sAregaradu Sa –
rIrava taDavarisi tAratamyadiMda
BAra ennadu eMdu Baravasavanittu
krUraniMdali baMda BAra iLisuveneMdu
dhAruNiyoLagitta Iraidu rathadavanu
nArAyaNanu kumAranAgaleMdu
ArAdhaneya mADe SrIrAmaneMdeMbava –
tAravannu dharisida ramAramaNanU
cAruguNa nilaya vijayaviTThalarEyA
sAridavara manOharava tOruttA || 3 ||
JaMpetALa
munipa kauSikana yAgava kAyidu tATaki
danujiya muridu nijAnanujana kUDa
janaka purake gamanavAgi pOgutta
muniyAMganiya SApavanne toDadU
analAkShana dhanasu muridu nikkaDi mADi
janakarAyana naMdaniya neradu
anuvaradoLage BRugu tanujanna pokkaLali
danuja sEriralu bANadali sadedU
tanage tAnE lIle tOrida mahadaiva
vAtane kANo gOhita vijayaviTThala rAma || 4 ||
triviDitALa
pitana mAtanu mannisi satisahita BAgI –
rathiya dATutali Bakutagolidu
atiSayavAda parvata citrakUTadali
yatigaLiMdali pUjitanAguta
matihInanAgi bALutalidda kAkanna
gata lOcanana mADi kShitigaTTidE
hitavAgi baMda Baratage hAvige koTTu
vRutava dharisida unnata mahimA
pathacAranAgi SOBisuta daMDakAraNya
yatipuMgava kuMBasutana kaMDu
pratirathanAmA vijayaviTThala raGu –
pati nIne utpatti sthiti laya kartanE || 5 ||
aTTatALa
mOsadA asuriya mUgu koydu Kara –
dUShaNAdyaranna koMdu gautumeyalli
vAsavAgidda mArIca mAyAmRuga
vEShavAgi bare koMdu mArgadalli
GAsiyAgidda vihaMganna mannisi
dvEShi kabaMdhana kaDidu Sabariya
mIsala Bakutige haNNusavidu saM –
tOShadiMdali tuMgAtIradalli pava –
nA sUnu eragalu etti mAtADi di –
nESa tanujage aBayavanu ittu
bIsi vagede kAlali duMdhumAranna
nI savaride ELu tALava ommele
sAsiranAmanE vijayaviTThala nara –
vEShava dharisida vaikuMThavAsa || 6 ||
AditALa
BIti SUnyanAda purahUta magana koMdu ravi
jAtage paTTavagaTTi prItidUta vAyujanna
A sIte baLige kaLuhe pOgI
mAtu taMda pELidAtage varavannittu
kOti karaDi sahitavAgi sEtuve bigisi baMda
nIta viBIShaNana kUDa kAturadiMdali dATi
dhUrta rAvaNAdigaLa yAtanige bILkoDisi
prItiyAspadanAda tAta viBIShaNage pra –
dyOta SaSi uLLanaka BUtaLadoLage laMke –
ya tappadaMte ALeMdAtage paTTavagaTTi
sIte sahita baMdu sAkEtapuradalli niMdu
dhAtAdigaLa manake prIti baDisi Sereya biDisi
sIteyarasa vijayaviTThala BUta –
nAthaniMda baMda mAtu mannisida mahAtmA || 7 ||
jate
sArvaBaumane rAmA duruLa daitya virAmA
sarvayOgi viniSrutA vijayaviTThala ||
Leave a Reply