Shri Ramadevara stotra suladi – Gopaladasaru

ಶ್ರೀಗೋಪಾಲದಾಸಾರ್ಯ ವಿರಚಿತ
ಶ್ರೀರಾಮದೇವರ ಸ್ತೋತ್ರ ಸುಳಾದಿ
ರಾಗ: ನೀಲಾಂಬರಿ
ಧ್ರುವತಾಳ

ತರಣಿ ಕುಲೋತ್ಪನ್ನ ತಪುತ ಕಾಂಚನವರ್ನಾ
ಪರಮ ಮಂಗಳಮೂರ್ತಿ ಪಾವನ್ನ ಸೂಕೀರ್ತಿ
ಕ್ಷರ ಅಕ್ಷರರಿಂದ ವಂದಿತ ವ್ಯಾಪುತ
ಶರಣ ಜನರ ಪಾಲಾ ಶತ‌ಆನಂದ ಜನಕ
ಪರಿಪೂರ್ಣ ಗುಣಭರಿತಾ ವರಜ್ಞಾನಪ್ರದಾತಾ
ಅರಿತು ಫಲವ ತ್ರಿವಿಧರಿಗೆ ಇಪ್ಪುವದಾತ
ಧರೆ ಈರೇಳು ರಕ್ಷಕ ಧರ್ಮ ಪ್ರತಿಪಾಲಕ
ಸರಿಯಿಲ್ಲದ ದೇವ ಸರ್ವೋತ್ತಮ
ದುರುಳ ಜನ ಮರ್ದನ ದುಃಖಾದಿಗಳ ದೂರಾ
ತರುಣಿಯಿಂದ ಬೆರೆದು ವರಗಳ ನೀವುತ
ನಿರುತದಿ ನಮ್ಮ ವಸುಧೇಂದ್ರ ಮುನಿಯ ಚಲ್ವ
ಕರಕಮಲದಲಿ ನಿಂದು ಮೆರೆವ ದಾತಾ
ಪರಮ ದಯಾಳು ರಾಮ ಗೋಪಾಲವಿಟ್ಠಲ ನಿನ್ನ
ದರುಶನವೆ ಇಂದಿನ ದಿನವೆ ಸುದಿನವು || ೧ ||

ಮಟ್ಟತಾಳ

ಆದಿಯಲ್ಲಿ ಆದರದಲ್ಲಿ ನಿನ್ನ
ಮೋದದಿ ಅರ್ಚಿಸೆ ಸಾಧಿಸಿ ಪದವಿಯ
ಐದವ ಧರಿಗೆ ಸಾಧು ಜೀವರ ಪೊರಿಯೆ
ಕ್ರೋಧ ರಹಿತ ನಿನ್ನ ಮೇದಿನಿ ಒಳಗಿಟ್ಟು
ಹಾದಿಯ ತೋರಿದ – ಹಾ ಅಜನು ನಿನ್ನ
ಪಾದದ ಸೇವಿಯು ಶೋಧಿಸಿ ಮಾಳ್ಪರಿಗೆ
ಬಾಧೆ ಗೆಲಿಸುವದು ಜನನ ಮರಣಗಳ
ಪಾದ ಸೋಂಕಿದ ಶಿಲೆಯ ಪಾವನ್ನ ಮಾಡಿದ
ಶ್ರೀಧರ ರಾಮ ಗೋಪಾಲವಿಟ್ಠಲ
ವಾದೇಂದ್ರ ಸುತರಗೊಲಿದು ಮೆರೆವ ಪ್ರೀತಾ || ೨ ||

ರೂಪಕತಾಳ

ಛಂದದಿ ಬೊಮ್ಮ ರುದ್ರ ಇಂದ್ರಾದಿಗಳು
ಕುಂದದೆ ಸುರ ಋಷಿ ಗಂಧರ್ವಾದಿಗಳು
ಒಂದೊಂದಂಶದಿಂದ ಬಂದು ನಿನ್ನರ್ಚಿಸಿ
ಮಂದ ಬುದ್ಧಿಗಳುಳ್ಳ ಜಗವ ಪಾಲಿಸುವರು
ಮಂದಮತಿಗಳು ಇವರ ಮನುಜರೆಂದವರಿಗೆ
ಪೊಂದುವರು ಮಹದಾದಿ ನಿರಯದಲ್ಲಿ
ಸಂದರುಶನದಿಂದೆ ಸಕಲ ದೋಷದೂರ
ಇಂದಿರೆ ಅರಸನು ಇಪ್ಪುವ ಇವರಲ್ಲಿ
ಬಂದ ಬಂದವರ ಅಭಿಷ್ಟವ ಪೂರೈಸಿ
ನಿಂದು ಮೆರೆವ ವಸುಧೀಂದ್ರ ಮುನಿಯ ಮನ –
ಮಂದಿರದೊಪ್ಪುವ ರಾಮ ಗೋಪಾಲವಿಟ್ಠಲ
ಬಂಧಕ ಮೋಚಕ ಮಾಳ್ಪ ಶಕ್ತ || ೩ ||

ಝಂಪಿತಾಳ

ನಿನ್ನ ನಾಮ ಒಮ್ಮೆ ಸ್ಮರಿಸಿದಡಾಯಿತೇ
ಘನ್ನ ದುರಿತಗಳೆಲ್ಲ ದೂರಾಗಿ ಪೋಗುವವು
ನಿನ್ನ ಮೂರುತಿ ಒಮ್ಮೆ ನೋಡಿದರಾಯಿತೆ
ಜನುಮಾದಿಗಳು ಜಡ ಕ್ಲೇಶಗಳು ತರಿವುವದು
ನಿನ್ನ ಅವಯವಂಗಳು ಎಲ್ಲಿ ನೋಡಲು ಪೂರ್ಣ
ನಿನ್ನ ಬಳಿಯಲ್ಲಿ ಸಕಲಾದಿ ತೀರ್ಥಗಳುಂಟು
ನಿನ್ನ ವಾಲ್ಗೈಸುತ್ತ ಸುರರಿಪ್ಪುವರು
ಘನ್ನ ಮಹಾಮಹಿಮ ಮೂಲರಾಮ
ನಿನ್ನ ಪರಿವಾರ ಸಹಿತ ಎನ್ನ ಗುರು ವಸುಧೀಂದ್ರ
ಮುನ್ನೆ ನಿನ್ನರ್ಚಿಸುವ ಭಾಗ್ಯವೆಂತೊ
ಚಿನ್ನುಮಯ ಮೂರುತಿ ಗೋಪಾಲವಿಟ್ಠಲ
ನಿನ್ನ ಭಕುತರು ನಿನ್ನ ಮಹಿಮೆಗೆ ನಮೋ || ೪ ||

ತ್ರಿವಿಡಿತಾಳ

ಶರಣರ ಪಾಲಕ ದುರುಳರ ಶಿಕ್ಷಕ
ಶರಣು ಶರಣು ನಿನ್ನ ಚರಣಕಮಲಕ್ಕೆ
ಪರಮ ಪಾವನ ನಾಮ ಪರಿಪೂರ್ಣ ಗುಣಕಾಮ
ಸ್ಥಿರಯೋಗಿಗಳರಸ ಸ್ಥಿರ ಜೀವಿಯೊ
ದುರಿತಗಿರಿಗೆ ಕುಲಿಶ ದೂರ ಅತಿದೂರ
ಚರಣದಂದುಗೆ ಗೆಜ್ಜೆ ವರಜಾನು ಜಂಘ ಕಟಿ
ತರ ಮೇಲೆ ವೊಲಿವ ಕಿಂಕಿಣಿಯ ಘಂಟಿ
ಪರಮ ಶೋಭಿತ ಉದರ ವಕ್ಷ ಕೌಸ್ತುಭ
ಕೊರಳ ಪದಕ ನಾನಾ ಸರಗಳಿಂದೊಪ್ಪುತ
ಸಿರಿಗಂಧ ಕಸ್ತೂರಿ ಪರಿಮಳ ಭೂಷಿತ
ವರ ಶಾರಂಗ ಪಾಣಿ ಕರನ ಕುಂಡಲಧರ
ಸ್ವರೂಪಾದಿ ನಯನ ಸಿರಿಕಿರೀಟಧರ
ಸ್ವರೂಪಾಲಂಕಾರದಿಂದೊಪ್ಪುವ ಶ್ರೀರಾಮ
ಪರಮ ಶೋಭಿತನಾಮ ಗೋಪಾಲವಿಟ್ಠಲ
ನಿರುತ ವಸುಧೀಂದ್ರ ಮುನಿಯ ಮನದಿ ವಾಸಾ || ೫ ||

ಅಟ್ಟತಾಳ

ನಿತ್ಯ ಅನಿತ್ಯ ಜಡದಲ್ಲಿಪ್ಪುವನು ನೀನೆ
ವ್ಯಕ್ತ ಅವ್ಯಕ್ತನಾಗಿದ್ದು ಈ ಧರಿಯ
ಭಕ್ತರುಗಳಿಗೆ ನೀ ಬಲ್ಲಂತೆ ತೋರುತ್ತ
ಮರ್ತ್ಯಲೋಕದಿ ಬಂದು ಈ ಪ್ರತಿಮೆ ಅಂತರ್ಗತನಾಗಿದ್ದು
ನಿತ್ಯ ಉತ್ಸಾಹಗಳು ಭಕ್ತರಿಂದಲಿ ಕೊಂಡು ಬಹುಧರ್ಮದಿಂದಲಿ
ನಿತ್ಯ ವಸುಧೀಂದ್ರ ಹೃತ್ಕಮಲದಿ
ತತ್ತಳಿಸುತ ಮೆರೆವ ಸಿರಿ ರಾಮ
ಮುಕ್ತಿ ಪ್ರದಾಯಕ ಗೋಪಾಲವಿಟ್ಠಲ
ಚಿತ್ತಶುದ್ಧನ ಮಾಡು ಭಕ್ತಿ ಜ್ಞಾನವೆ ನೀಡು || ೬ ||

ಆದಿತಾಳ

ದುರಿತದೂರ ದುಃಖ ನಾಶ
ಕರುಣಾಕರ ಕಪಟ ರಹಿತ
ಶರಣರ ಪಾಲ ಸಿರಿ ಅರಸ
ಗರುಡಗಮನ ಗರ್ವ ರಹಿತ
ಸರಸಿಜಾಕ್ಷ ಸರ್ವೋತ್ತಮ
ಸಾರಭೋಕ್ತ ಸರ್ವವ್ಯಾಪ್ತ
ಕಾರಣನೆ ಕರ್ಮರಹಿತಾ
ಭಾರಕರ್ತ ಭಯನಿವಾರಣ
ತಾರಕನೆ ತ್ರಿಗುಣದೂರಾ
ಮಾರನಯ್ಯಾ ಮಧುಸೂದನ
ಮಾರುತೀಶ ಮಾಯಾರಹಿತಾ
ಜಾರ ಚೋರ ಜನ್ಮರಹಿತಾ
ಧೀರ ಶೂರ ದಿವ್ಯವಿಗ್ರಹ
ಪರಮ ಪುಣ್ಯ ಪರಿಪೂರ್ಣ
ಸುರಾದಿ ವಿನುತ ಗೋಪಾಲವಿಟ್ಠಲ
ಗುರು ವಸುಧೇಂದ್ರ ಮುನಿಯ ಈಶಾ || ೭ ||

ಜತೆ

ಗುರು ವಸುಧೀಂದ್ರರ ಕರಕಮಲದೊಳು ತೋರ್ಪಾ
ಸಿರಿರಾಮ ಗೋಪಾಲವಿಟ್ಠಲ ಶರಣು ಶರಣು ||


SrIgOpAladAsArya viracita
SrIrAmadEvara stOtra suLAdi
rAga: nIlAMbari
dhruvatALa

taraNi kulOtpanna taputa kAMcanavarnA
parama maMgaLamUrti pAvanna sUkIrti
kShara akSharariMda vaMdita vyAputa
SaraNa janara pAlA Sata^^AnaMda janaka
paripUrNa guNaBaritA varaj~jAnapradAtA
aritu Palava trividharige ippuvadAta
dhare IrELu rakShaka dharma pratipAlaka
sariyillada dEva sarvOttama
duruLa jana mardana duHKAdigaLa dUrA
taruNiyiMda beredu varagaLa nIvuta
nirutadi namma vasudhEMdra muniya calva
karakamaladali niMdu mereva dAtA
parama dayALu rAma gOpAlaviTThala ninna
daruSanave iMdina dinave sudinavu || 1 ||

maTTatALa

Adiyalli Adaradalli ninna
mOdadi arcise sAdhisi padaviya
aidava dharige sAdhu jIvara poriye
krOdha rahita ninna mEdini oLagiTTu
hAdiya tOrida – hA ajanu ninna
pAdada sEviyu SOdhisi mALparige
bAdhe gelisuvadu janana maraNagaLa
pAda sOMkida Sileya pAvanna mADida
SrIdhara rAma gOpAlaviTThala
vAdEMdra sutaragolidu mereva prItA || 2 ||

rUpakatALa

CaMdadi bomma rudra iMdrAdigaLu
kuMdade sura RuShi gaMdharvAdigaLu
oMdoMdaMSadiMda baMdu ninnarcisi
maMda buddhigaLuLLa jagava pAlisuvaru
maMdamatigaLu ivara manujareMdavarige
poMduvaru mahadAdi nirayadalli
saMdaruSanadiMde sakala dOShadUra
iMdire arasanu ippuva ivaralli
baMda baMdavara aBiShTava pUraisi
niMdu mereva vasudhIMdra muniya mana –
maMdiradoppuva rAma gOpAlaviTThala
baMdhaka mOcaka mALpa Sakta || 3 ||

JaMpitALa

ninna nAma omme smarisidaDAyitE
Ganna duritagaLella dUrAgi pOguvavu
ninna mUruti omme nODidarAyite
janumAdigaLu jaDa klESagaLu tarivuvadu
ninna avayavaMgaLu elli nODalu pUrNa
ninna baLiyalli sakalAdi tIrthagaLuMTu
ninna vAlgaisutta surarippuvaru
Ganna mahAmahima mUlarAma
ninna parivAra sahita enna guru vasudhIMdra
munne ninnarcisuva BAgyaveMto
cinnumaya mUruti gOpAlaviTThala
ninna Bakutaru ninna mahimege namO || 4 ||

triviDitALa

SaraNara pAlaka duruLara SikShaka
SaraNu SaraNu ninna caraNakamalakke
parama pAvana nAma paripUrNa guNakAma
sthirayOgigaLarasa sthira jIviyo
duritagirige kuliSa dUra atidUra
caraNadaMduge gejje varajAnu jaMGa kaTi
tara mEle voliva kiMkiNiya GaMTi
parama SOBita udara vakSha kaustuBa
koraLa padaka nAnA saragaLiMdopputa
sirigaMdha kastUri parimaLa BUShita
vara SAraMga pANi karana kuMDaladhara
svarUpAdi nayana sirikirITadhara
svarUpAlaMkAradiMdoppuva SrIrAma
parama SOBitanAma gOpAlaviTThala
niruta vasudhIMdra muniya manadi vAsA || 5 ||

aTTatALa

nitya anitya jaDadallippuvanu nIne
vyakta avyaktanAgiddu I dhariya
BaktarugaLige nI ballaMte tOrutta
martyalOkadi baMdu I pratime aMtargatanAgiddu
nitya utsAhagaLu BaktariMdali koMDu bahudharmadiMdali
nitya vasudhIMdra hRutkamaladi
tattaLisuta mereva siri rAma
mukti pradAyaka gOpAlaviTThala
cittaSuddhana mADu Bakti j~jAnave nIDu || 6 ||

AditALa

duritadUra duHKa nASa
karuNAkara kapaTa rahita
SaraNara pAla siri arasa
garuDagamana garva rahita
sarasijAkSha sarvOttama
sAraBOkta sarvavyApta
kAraNane karmarahitA
BArakarta BayanivAraNa
tArakane triguNadUrA
mAranayyA madhusUdana
mArutISa mAyArahitA
jAra cOra janmarahitA
dhIra SUra divyavigraha
parama puNya paripUrNa
surAdi vinuta gOpAlaviTThala
guru vasudhEMdra muniya ISA || 7 ||

jate

guru vasudhIMdrara karakamaladoLu tOrpA
sirirAma gOpAlaviTThala SaraNu SaraNu ||

Leave a Reply

Your email address will not be published. Required fields are marked *

You might also like

error: Content is protected !!