Hidako bidabyada – Dirgha kriti

Composer : Shri Purandara dasaru

By Smt.Shubhalakshmi Rao

ಹಿಡಕೋ ಬಿಡಬ್ಯಾಡ ರಂಗನ ಪಾದ ||ಪ||

ಹಿಡಕೋ ಬಿಡಬ್ಯಾಡ ಕೆಡುಕ ಕಾಳಿಂಗನ
ಮಡುವಿನೊಳ್ ಧುಮುಕಿ ಕುಣಿದಾಡೊ ಕೃಷ್ಣನ ಪಾದ ||ಅ||

ಪುಟ್ಟಿದಾಗಲೆ ಇವ ದುರ್ಜನನೆನುತಲಿ
ಅಟ್ಟಿದರಾಗಲೆ ತಾಯ್ತಂದೆಯರು
ಮುಟ್ಟಿ ತನಗೆ ಮೊಲೆಗೊಟ್ಟಳ ಮಡುಹಿದ
ದುಷ್ಟ ಕೃಷ್ಣನ ಹೋಗಬಿಟ್ಟರೆ ಸಿಕ್ಕನು |೧|

ಒಚ್ಹೊತ್ತನ್ನಕೆ ನಡೆದರೆ ಬಂಡಿಯ
ನುಚ್ಚು ಮಾಡಿ ಕಾಲಲಿ ಒದ್ದ
ಶಿಕ್ಷಿಸಲು ಜೋಡು ವೃಕ್ಷವ ತರಿದಿಟ್ಟ
ರಚ್ಚೆಗಾರನೆಂದು ಬೆಚ್ಚದೆ ಜಗದೊಳು |೨|

ಇದ್ದಲ್ಲಿ ಇರನಿವ ಬುದ್ಧಿ ಎಳ್ಳಷ್ಟಿಲ್ಲ
ಹದ್ದನೇರಿ ತಿರುಗಾಡುವನು
ಮೆದ್ದೆಯಾತಕೆ ಮಣ್ಣ ತೆಗೆ ಬಾಯನೆಂದರೆ
ಅದ್ಯಂತ ಜಗವನು ತೋರಿ ಅಂಜಿಸಿದನ |೩|

ಮಕ್ಕಳೊಳಗೆ ಪುಂಡ ಮನೆ ಮನೆಗಳ ಹೊಕ್ಕು
ಸಕ್ಕರೆ ನೊರೆಹಾಲು ಸವಿಸವಿದು
ಬೆಕ್ಕಿನ ಮೇಲಿಟ್ಟು ಬೆಣ್ಣೆಯ ತಾ ಮೆದ್ದು
ಸಿಕ್ಕದೆ ಜಿಗಿದೋಡಿ ಪೋಗುವ ಕಳ್ಳನ |೪|

ಸಾರ ಹೃದಯನಲ್ಲ ಭಾರಿಯ ಗುಣವಿಲ್ಲ
ಆರ ಮಾತನು ಇವ ಲೆಕ್ಕಿಸನು
ನೀರೊಳಗಿಳಿದು ನಾರೇರ ಸೀರೆಯ ಕದ್ದು
ಹಾರಿ ಹೊನ್ನೆಯ ಮರವೇರಿದ ಕೃಷ್ಣನ |೫|

ಕಾಳರಕ್ಕಸರೊಳು ಕದನ ಬೇಡೆಂದರೆ
ಹೇಳಿದ ಹಾಗೆ ಕೇಳುವನಲ್ಲ
ಕೂಡೆ ಆಡುವ ಮಕ್ಕಳಂಜಿಕೊಂಡರಾಗ
ಗಾಳಿಯ ಮುರಿದಿಟ್ಟ ಗೈಯಾಳಿ ರಂಗನ |೬|

ಜೀರಿಗೆ ಬೆಲ್ಲವ ಪಿಡಿದಂಬಿಕೆಯನು
ಸಾರಿ ಬಂದ ರುಕ್ಮಿಯನು ಕೊಂದು
ಹೋರಬೇಡೆಂದರೆ ರುಕ್ಮನ ಹೆಡೆಗಯ್ಯ
ತೇರಿಗೆ ಬಿಗಿದಂಥ ಚೋರ ಕೃಷ್ಣನ ಪಾದ |೭|

ಅಟ್ಟಿ ಹಾಯುವ ಏಳು ಗೂಳಿಗಳನ್ನು
ಕಟ್ಟಿ ಸತ್ರಾಜಿತಗೆ ರತ್ನವಿತ್ತು
ಅಷ್ಟ ಮಹಿಷಿಯರ ಅರ್ತಿಯ ಸಲಿಸಿದ
ಸೃಷ್ಟಿಗೊಡೆಯ ಶ್ರೀ ಕೃಷ್ಣನ ಪಾದವ |೮|

ಇರುಳೊಳು ಹೆಂಗಳ ಕೂಡಿ ಆಡುತಲಿ
ವರ ಯಮುನೆಯ ತೀರದಿ ನಿಂತ
ಬರಿಮಾತಿಲ್ ಹದಿನಾರು ಸಾವಿರ ತರಳೇರ
ಮರುಳು ಮಾಡಿದ ಈ ಮದನ ಗೋಪಾಲನ |೯|

ಘಕ್ಕನೆ ಮಥುರೆಗೆ ಪೋಗಿ ಬರುವೆನೆಂದು
ಅಕ್ಕಯ್ಯ ಗೋಪಿಗೆ ಪೇಳುತಲಿದ್ದ
ಘಕ್ಕನೆ ಬಲರಾಮನೊಡಗೂಡಿ ರಥವೇರಿ
ಸಿಕ್ಕದೆ ಹೋಗುವ ಅಕ್ರೂರವರದನ ||

ಆನೆಯ ಮಡುಹಿದ ಅಗಸನ ಕೆಡಹಿದ
ತಾನರಸಗೆ ತಂದ ಹೂವನೆ ಮುಡಿದ
ಮಾನಿನಿ ಕುಬುಜೆಗೊಲಿದು ಗಂಧ ಧರಿಸಿದ
ಗಾನವಿನೋದಿ ಶ್ರೀಲಕುಮಿಯ ಅರಸನ |೧೦|

ಮಲ್ಲರನೆಲ್ಲರ ಚೆಲ್ಲಾಡಿ ಕೆಡಹಿದ
ಬಿಲ್ಲು ಮುರಿದು ಮಾವನ ಮಡುಹಿ
ನಿಲ್ಲದೆ ದೇವಕಿ ಸೆರೆಯನು ಬಿಡಿಸಿದ
ಫುಲ್ಲಲೋಚನ ಶ್ರೀ ಕೃಷ್ಣನ ಪಾದವ |೧೧|

ನರಕುರಿಗಳನೆಲ್ಲ ಭರದಿ ರಕ್ಷಿಪುದಕ್ಕೆ
ಪರಮಪಾವನ ನಾಮ ಇದು ಸಾಲದೆ
ಕರಿ ಧ್ರುವ ಬಲಿ ಪಾಂಚಾಲಿಗೆ ವರವಿತ್ತ
ಪುರಂದರವಿಠಲನ ಚರಣ ಕಮಲವನು |೧೨|


hiDakO biDabyADa raMgana pAda ||pa||

hiDakO biDabyADa keDuka kALiMgana
maDuvinoL dhumuki kuNidADo kRuShNana pAda ||a||

puTTidAgale iva durjananenutali
aTTidarAgale tAytaMdeyaru
muTTi tanage molegoTTaLa maDuhida
duShTa kRuShNana hOgabiTTare sikkanu |1|

oc~hottannake naDedare baMDiya
nuccu mADi kAlali odda
SikShisalu jODu vRukShava taridiTTa
raccegAraneMdu beccade jagadoLu |2|

iddalli iraniva buddhi eLLaShTilla
haddanEri tirugADuvanu
meddeyAtake maNNa tege bAyaneMdare
adyaMta jagavanu tOri aMjisidana |3|

makkaLoLage puMDa mane manegaLa hokku
sakkare norehAlu savisavidu
bekkina mEliTTu beNNeya tA meddu
sikkade jigidODi pOguva kaLLana |4|

sAra hRudayanalla BAriya guNavilla
Ara mAtanu iva lekkisanu
nIroLagiLidu nArEra sIreya kaddu
hAri honneya maravErida kRuShNana |5|

kALarakkasaroLu kadana bEDeMdare
hELida hAge kELuvanalla
kUDe ADuva makkaLaMjikoMDarAga
gALiya muridiTTa gaiyALi raMgana |6|

jIrige bellava piDidaMbikeyanu
sAri baMda rukmiyanu koMdu
hOrabEDeMdare rukmana heDegayya
tErige bigidaMtha cOra kRuShNana pAda |7|

aTTi hAyuva ELu gULigaLannu
kaTTi satrAjitage ratnavittu
aShTa mahiShiyara artiya salisida
sRuShTigoDeya SrI kRuShNana pAdava |8|

iruLoLu heMgaLa kUDi ADutali
vara yamuneya tIradi niMta
barimAtil hadinAru sAvira taraLEra
maruLu mADida I madana gOpAlana |9|

Gakkane mathurege pOgi baruveneMdu
akkayya gOpige pELutalidda
Gakkane balarAmanoDagUDi rathavEri
sikkade hOguva akrUravaradana ||

Aneya maDuhida agasana keDahida
tAnarasage taMda hUvane muDida
mAnini kubujegolidu gaMdha dharisida
gAnavinOdi SrIlakumiya arasana |10|

mallaranellara cellADi keDahida
billu muridu mAvana maDuhi
nillade dEvaki sereyanu biDisida
PullalOcana SrI kRuShNana pAdava |11|

narakurigaLanella Baradi rakShipudakke
paramapAvana nAma idu sAlade
kari dhruva bali pAMcAlige varavitta
puraMdaraviThalana caraNa kamalavanu |12|

Leave a Reply

Your email address will not be published. Required fields are marked *

You might also like

error: Content is protected !!