Composer : Shri Jagannatha dasaru
ಸ್ಮರಿಸಿ ಬೇಡುವೆನು ನಾ ಹೇ ಗುರುಸಾರ್ವಭೌಮಾ [ಪ]
ನಿರುತ ನೀ ಪೊರೆಯನ್ನ ವಾದಿ ಗಜಸಿಂಹ [ಅ.ಪ]
ದಿತಿ ಸುತಗೆ ಸುತನೆನಿಸಿ ಅತಿಮುದದಿ ಸುರಮುನಿಯ
ಮತ ಹಿಡಿದು ಹರಿಯ ಮಹಿಮೆ ಪಿತಗೆ ಪೇಳಿ
ಖತಿಗೊಂಡು ನಿನ್ನ ಮೂರುತಿ ತೋರೆನಲು ಶ್ರೀ
ಪತಿಯ ಸ್ತಂಭದಿ ಕರೆದ ಪ್ರಲ್ಹಾದರಾಜ [ ೧ ]
ಬಾಲ್ಯದಲಿ ಯತಿಯಾಗಿ ಲೀಲೆಯಿಂದಲಿ ಭೂಮಿ
ಪಾಲಗೊದಗಿರ್ದ ಕುಹಯೋಗ ಬಿಡಿಸಿ
ಖೂಳ ಮಾಯ್ಗಳ ಜಯಿಸಿ ಚಂದ್ರಿಕಾ ಗ್ರಂಥವನು
ಪೇಳಿ ಹರಿಪೀಠವೇರಿದ ವ್ಯಾಸರಾಜ [ ೨ ]
ಕಾಮರಿಪುನುತ ಮೂಲರಾಮ ಪದಯುಗ ಕುಮುದ
ಸೋಮನೆನಿಸುವ ಭಕ್ತ ಸ್ತೋಮಕೆಲ್ಲ
ನೇಮದಿಂದಲಿ ವಿವಿಧ ಕಾಮಿತಾರ್ಥ ಸ್ಫುಟಿತ
ಹೇಮ ಸನ್ನಿಭ ಗಾತ್ರ ಪಾವನಚರಿತ್ರ [ ೩ ]
ಶಾಂತತೆಯ ಪೊಂದಿ ಮಂತ್ರಾಲಯದಿ ವೃಂದಾವನ
ನಾಂತರದೊಳಿರುತ ಸಿರಿಕಾಂತಹರಿಯ
ಚಿಂತಿಸುತಲಿಹ ಸರ್ವತಂತ್ರ ಸ್ವತಂತ್ರ ಕರು
ಣಾಂತರಂಗನೆ ರಾಘವೇಂದ್ರ ಯತಿವರ್ಯಾ [ ೪ ]
ಮೂಕ ಬಧಿರಾಂಧತ್ವಗಳ ಪೊಂದಿ ಧರಣಿಯೊಳು
ವ್ಯಾಕುಲವ ಪಡುವವರ-ನುದ್ಧರಿಸುತ
ನಾಕಪತಿ ವಿನುತ ಜಗನ್ನಾಥವಿಠ್ಠಲ ಮಧುಪ
ನೀಕೊಟ್ಟು ಸಲಹೆನ್ನಭೀಷ್ಟ ಸಮುದಾಯ [ ೫ ]
smarisi bEDuvenu nA – hE gurusArvaBaumA [pa]
niruta nI poreyanna – vAdi gajasiMha [a.pa]
diti sutage sutanenisi atimudadi suramuniya
mata hiDidu hariya mahime pitage pELi
khatigoMDu ninna mUruti tOrenalu SrI
patiya staMBadi kareda pralhAdarAja [ 1 ]
bAlyadali yatiyAgi leeleyiMdali BUmi
pAlagodagirda kuhayOga biDisi
KULa mAygaLa jayisi caMdrikA graMthavanu
pELi haripIThavErida vyAsarAja [ 2 ]
kAmaripunuta mUlarAma padayuga kumuda
sOmanenisuva Bakta stOmakella
nEmadiMdali vividha kAmitArtha sPuTita
hEma sanniBa gAtra pAvanacaritra [ 3 ]
SAMtateya poMdi maMtrAlayadi vRuMdAvana
nAMtaradoLiruta sirikAMtahariya
ciMtisutaliha sarvataMtra svataMtra karu
NAMtaraMgane rAGavEMdra yativaryA [ 4 ]
mUka badhirAMdhatvagaLa poMdi dharaNiyoLu
vyAkulava paDuvavara-nuddharisuta
nAkapati vinuta jagannAthaviThThala madhupa
nIkoTTu salahennaBIShTa samudAya [ 5 ]
Leave a Reply