Composer : Shri Purandara dasaru
ನಿನ್ನ ದಿವ್ಯ ಮೂರುತಿಯ ಕಣ್ಣು ದಣಿಯೆ ನೋಡಿ
ಧನ್ಯನಾದೆನೊ ಧರೆಯೊಳು || ಪ ||
ಇನ್ನು ಈ ಭವ ಭಯಕೆ ಅಂಜಲೇತಕೊ ನಾನು
ಚೆನ್ನ ಶ್ರೀ ವೇಂಕಟೇಶಾ ಶ್ರೀಶಾ || ಅ ಪ. ||
ಏಸು ಜನ್ಮದ ಪುಣ್ಯ ಬಂದೊದಗಿತೋ
ಶ್ರೀ ಸ್ವಾಮಿ ಪುಷ್ಕರಣಿಯೊಳು |
ಸ್ನಾನ ಜಪ ತಪ ಮಾಡಿ ,ವರಾಹ ದೇವರ ನೋಡಿ
ಶ್ರೀ ಸ್ವಾಮಿ ಮಹಾದ್ವಾರಕೆ |
ಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿ
ಲೇಶದಿಂ ಪೊಗಳುತಲಿ |
ಆ ಸುವರ್ಣದ ಗರುಡ ಗಂಭವನೆ ನೋಡಿ
ಸಂತೋಷದಿಂ ಕೊಂಡಾಡಿದೆ – ಬಿಡದೆ || ೧ ||
ನೆಟ್ಟನೆರಡನೆ ದ್ವಾರವನೆ ದಾಂಟಿ ಪೋಗುತಲಿ
ದಟ್ಟಣೆಯು ಬಹು ಜನರಲೀ |
ಘಟ್ಟಿ ಮನದಲಿ ತಲೆಯ ,ಚೆಟ್ಟಿಡುತ ನೆಟ್ಟನೆ
ಕಟ್ಟಂಜನಕೆ ತಾ ಬರುತಲಿ |
ಕೃಷ್ಣಾಜಿನದವರ ಪೆಟ್ಟುಗಳ ತಾಳುತಲಿ ಕಂ –
ಗೆಟ್ಟು ಹರಿಹರೀಯೆನುತಲಿ |
ಬೆಟ್ಟದಧಿಪತಿ ನಿನ್ನ ದೃಷ್ಟ್ಯಿಂದ
ನೋಡುತಲಿ ಸುಟ್ಟಿತೆನ್ನಯ ದುರಿತವು – ಸರ್ವವು || ೨ ||
ಶಿರದಲ್ಲಿ ರವಿಕೋಟಿ ತೇಜದಿಂದೆಸೆವಂತ
ವರ ಕಿರೀಟವು ಕುಂಡಲ |
ಕೊರಳೊಲಿಹ ಸರಿಗೆ ವೈಜಯಂತಿಯ ಮಾಲೆ
ಪರಿಪರಿಯ ಹಾರಗಳನು |
ಉರದಿ ಶ್ರೀವತ್ಸವನು ಕರದಿ ಶಂಖ-ಚಕ್ರಗಳು
ವರನಾಭಿ ಮಾಣಿಕವನು |
ನಿರುಪಮ ಮಣಿ ಖಚಿತ ಕಟಿಸೂತ್ರ ಪೀತಾಂಬ್ರವ
ಚರಣದ್ವಯ-ದಂದುಗೆಯನು – ಇನ್ನು || ೩ ||
ಇಕ್ಷುಚಾಪನ ಪಿತನೆ ಪಕ್ಷೀಂದ್ರ ವಾಹನನೆ
ಲಕ್ಷ್ಮೀಪತಿ ಕಮಲಾಕ್ಷನೆ |
ಅಕ್ಷಯ ಅಜ ಸುರೇಂದ್ರಾದಿವಂದಿತನೆ
ಸಾಕ್ಷಾತ್ ಜಗನ್ನಾಥನೇ |
ರಾಕ್ಷಸಾಂತಕನೆ ನಿರಪೇಕ್ಷ ನಿತ್ಯ ತೃಪ್ತನೇ
ನಿರುಪಮ ನಿಸ್ಸೀಮನೇ |
ಕುಕ್ಷಿಯೊಳಗೀರೇಳು ಲೋಕವನು ತಾಳ್ದವನೆ
ರಕ್ಷಿಸುವುದೆಂದು ದಯದಿ – ಮುದದಿ || ೪ ||
ಉರಗ ಗಿರಿಯರಸು ನಿಮ್ಮ ಚರಣಗಳ
ಕಂಡ ಮೇಲೆ ಉರಗ ಕರಿ ವ್ಯಾಘ್ರ ಸಿಂಹ |
ಅರಸು ಚೋರಾಗ್ನಿ ವೃಶ್ಚಿಕ ಮೊದಲಾದ
ಪರಿಪರಿಯ ಬಹಳ ಭಯವು |
ಪರಮ ವಿಷಯ ಲಂಪಟದೋಳ್ , ನಾ
ಸಿಗದಂತೆ ಕರುಣಿಸುವುದೊಲಿದು ದಯದೀ |
ಸ್ಮರಗಧಿಕ ಲಾವಣ್ಯ ತಂದೆ ಪುರಂದರವಿಠಲ
ಶರಣ ಜನ ಕರುಣಾರ್ಣವಾ ದೇವಾ || ೫ ||
ninna divya mUrutiya kaNNu daNiye nODi
dhanyanAdeno dhareyoLu || pa ||
innu I Bava Bayake aMjalEtako nAnu
cenna SrI vEMkaTESA shrISA || a pa. ||
Esu janmada puNya baMdodagitO
shrI svAmi puShkaraNiyoLu |
snAna japa tapa mADi ,varAha dEvara nODi
SrI svAmi mahAdvArake |
I SarIravanu IDADi pradakShiNe mADi
lEshadiM pogaLutali |
A suvarNada garuDa gaMBavane nODi
saMtOShadiM koMDADide – biDade || 1 ||
neTTaneraDane dvAravane dAMTi pOgutali
daTTaNeyu bahu janaralI |
ghaTTi manadali taleya ,ceTTiDuta neTTane
kaTTaMjanake tA barutali |
kRuShNAjinadavara peTTugaLa tALutali kaM –
geTTu hariharIyenutali |
beTTadadhipati ninna dRuShTyiMda
nODutali suTTitennaya duritavu – sarvavu || 2 ||
Siradalli ravikOTi tEjadiMdesevaMta
vara kirITavu kuMDala |
koraLoliha sarige vaijayaMtiya mAle
paripariya hAragaLanu |
uradi SrIvatsavanu karadi SaMKa-cakragaLu
varanABi mANikavanu |
nirupama maNi Kacita kaTisUtra pItAMbrava
caraNadvaya-daMdugeyanu – innu || 3 ||
ikShucApana pitane pakShIMdra vAhanane
lakShmIpati kamalAkShane |
akShaya aja surEMdrAdivaMditane
sAkShAt jagannAthanE |
rAkShasAMtakane nirapEkSha nitya tRuptanE
nirupama nissImanE |
kukShiyoLagIrELu lOkavanu tALdavane
rakShisuvudeMdu dayadi – mudadi || 4 ||
uraga giriyarasu nimma caraNagaLa
kaMDa mEle uraga kari vyAGra siMha |
arasu cOrAgni vRuScika modalAda
paripariya bahaLa Bayavu |
parama viShaya laMpaTadOL , nA
sigadaMte karuNisuvudolidu dayadI |
smaragadhika lAvaNya taMde puraMdaraviThala
SaraNa jana karuNArNavA dEvA || 5 ||
Leave a Reply