ಶ್ರೀ ಪುರಂದರದಾಸಕೃತ ಶ್ರೀನಿವಾಸಕಲ್ಯಾಣ
ರಾಗ: ಮಧ್ಯಮಾವತಿ
ಆದಿತಾಳ
ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು|
ವೇಂಕಟಾದ್ರಿಗೆ ಹೋಗಿ ಶ್ರೀಕಾಂತ ನಿಂತ ||
ನಾಲ್ಕು ಕಡೆಯೂ ನೋಡಿ ವಲ್ಮೀಕವನೆ ಕಂಡು |
ಏಕಾಂತಸ್ಥಳವೆಂದು ಬಹುಕಾಲವಲ್ಲಿದ್ದ || ೧ ||
ಚೋಳ ಭೃತ್ಯನು ಶಿರವನೊಡೆದ ಗಾಯವ ನೋಡಿ |
ತಾಳಲಾರದೆ ಸ್ವಾಮಿ ಗುರುಗಳನೆ ಕರೆಸಿ ||
ಹೇಳಿದೌಷಧ ಮಾಡಿ ಕ್ರೋಢರೂಪಿಯ ಕಂಡು |
ಕೇಳಿ ಸ್ಥಳವನೆ ಕೊಂಡು ಲೀಲೆ ತೋರುತಲಿ || ೨ ||
ಇರುತಿರಲೊಂದಿನ ತುರಗವನೆ ಸ್ಮರಿಸುತಲಿ |
ತುರಗ ಬರಲು ಕಂಡು ಮುದದಿ ತಾನೇರಿ ||
ಪರಿಪರಿ ಮೃಗಗಳ ಅಡವಿಯಲಿ ತಾ ಕೊಂದು |
ಕರುಣಾಸಾಗರ ಒಂದು ವನವ ಕಂಡನು || ೩ ||
ವನದಲ್ಲಿ ವನಜಾಕ್ಷಿ ರಾಜಪುತ್ರಿಯ ಕಂಡು |
ಮನಕೆ ಬಂದಂತಾಡಿ ಕಲಹ ಮಾಡಿದರು ||
ಮನಸಿಜಪಿತ ತಾನು ಅಶ್ವವ ಕಳಕೊಂಡು |
ಘನವಾದ ಗಿರಿ ಏರಿ ಮಲಗಿದ ಹರಿಯು || ೪ ||
ನಗಧರ ಮಲಗಲು ಬಕುಳಾವತಿಯು ಆಗ |
ಬಗೆ ಬಗೆ ಕೇಳಲು ಶೋಕದಿಂ ನುಡಿದ ||
ಗಗರಾಜನ ಪುತ್ರಿ ಪದ್ಮಾವತಿಯ ಕಂಡು |
ಹಗಲು ಇರಳು ಆಕೆಯ ಮುಖವ ಸ್ಮರಿಸುವನು || ೫ ||
ಅವಳಿಗೋಸುಗವಾಗಿ ಇದ್ದಲ್ಲಿಗೆ ಹೋದೆ |
ಅವಳಿಂದ ಎನ್ನಶ್ವ ಹತವಾಯಿತಮ್ಮ ||
ಅವಳ ಹೊರೆತು ಎನ್ನ ಪ್ರಾಣವೇ ನಿಲ್ಲದು |
ಅವಳ ಘಟನೆಯ ನೀನು ಮಾಡಬೇಕಮ್ಮ || ೬ ||
ಅಂದ ಮಾತನು ಕೇಳಿ ಬಕುಳಾವತಿಯು ಆಗ |
ಆನಂದದಿಂ ರಾಜನ ಪುರಕೆ ತೆರಳಿದಳು ||
ಸುಂದರಿಯರ ಕಾರ್ಯ ಸ್ಥಿರವಾಗದೆಂದು |
ಚೆಂದುಳ್ಳ ಸ್ತ್ರೀರೂಪ ಧರಿಸಿದನು ಹರಿಯು || ೭ ||
ಕೊರವಂಜಿ ತಾನಾಗಿ ನೃಪನ ಪುರಕೆ ಹೋಗಿ |
ಧರಣಿದೇವಿಯ ಮುಂದೆ ಶಕುನ ಹೇಳಿದನು ||
ತಿರುಗಿ ಬರಲಾತಗೆ ಮಗಳ ಕೊಡುವೆನೆಂದು |
ಹರಿಗೆ ನಿಶ್ಚಯಮಾಡಿ ಶುಕರ ಕಳುಹಿದನು || ೮ ||
ತಾಪಸೋತ್ತಮ ಬಂದು ಪತ್ರವನೆ ಕೊಡಲು |
ಶ್ರೀಪತಿಯು ತಾನೋದಿ ಬೆನ್ಹ ಹಿಂದೆಯೆ ಬರೆದ ||
ಆ ಪರಮವಂದ್ಯ ತಾ ಸುರಸ್ತೋಮವನೆ ಕರೆಸಿ |
ಈ ಪರಿ ವೈಭೋಗ ಮಾಡಿದನು ಹರಿಯು || ೯ ||
ಅಷ್ಟವರ್ಗದ ಕಾರ್ಯ ಮಾಡಬೇಕೆಂದು |
ಸೃಷ್ಟೀಶನೆದುರಿಗೆ ಹೇಳಿದನು ಬ್ರಹ್ಮ ||
ಅಷ್ಟರೊಳಗೆ ಸ್ವಾಮಿ ಲಕ್ಷ್ಮೀಯ ಸ್ಮರಿಸಿ |
ನಿಟ್ಟುಸಿರುಬಿಟ್ಟು ಶೋಕದಿ ನುಡಿದ || ೧೦ ||
ಆ ಕ್ಷಣದಲಿ ತಾನು ತರಣಿಯನೆ ಕರೆಸಿ |
ಇಕ್ಷುಚಾಪನ ಮಾತೆ ಬಳಿಗೆ ಪೋಗೆಂದ ||
ತಕ್ಷಣದಲಿ ಸೂರ್ಯ ಹೋಗಿ ನಿಲ್ಲಲು ಹರಿಯ |
ಅಕ್ಷೇಮವನೆ ಕೇಳಿ ತೆರಳಿದಳು ಬೇಗ || ೧೧ ||
ಬಂದ ಸತಿಯಳ ಕೂಡಿ ಮಂದಿರಕೆ ಪೋಗಿ |
ಹಿಂದೆ ಹೇಳಿದ ವಾಕ್ಯ ನಡೆಸೆಂದ ಹರಿಯು ||
ಸಂದೇಹವಿಲ್ಲದೆ ಸ್ವಾಮಿಯೇ ನಡೆಸೆಂದು |
ಇಂದಿರಾದೇವಿಯು ನುಡಿದಳು ಹರಿಗೆ || ೧೨ ||
ಸ್ವಸ್ತಿ ವಾಚನ ಮಾಡಿ ಕುಲದೇವರನಿಟ್ಟು |
ಪ್ರಸ್ತವ ಮಾಡಿದ ದ್ವಿಜರ ಸ್ತೋಮಕ್ಕೆ ||
ಅಸ್ತಾದ್ರಿಗೆ ಸೂರ್ಯನು ಹೋಗಿ ನಿಲ್ಲಲು |
ಸ್ವಸ್ಥಚಿತ್ತದಿ ಲಕ್ಷ್ಮೀಸಹಿತ ಮಲಗಿದರು || ೧೩ ||
ಮರುದಿನ ಲಕ್ಷ್ಮೀಶ ರಾಜನ ಆ ಪುರಕೆ |
ಸುರಸ್ತೋಮವನೆ ಕೂಡಿ ತೆರಳಿ ಬಂದ ||
ಬರುವ ಕೃಷ್ಣನ ಕಂಡು ಶುಕಮುನಿ ಸಂಸ್ತುತಿಸಿ |
ಹರಿಗೆ ಭೋಜನವನ್ನು ಮುದದಿ ಮಾಡಿಸಿದ || ೧೪ ||
ಆಕಳಂಕಮಹಿಮನು ಬಂದ ವಾರ್ತೆಯ ಕೇಳಿ |
ಸಕಲ ಜನರನು ಕೂಡಿ ಕರೆಯಲು ಬಂದನಾ ರಾಜ ||
ನಿಖಿಲ ಪರಿವಾರವನು ತಾ ವ್ಯೋಮರಾಜನಿಗೆ |
ಶ್ರೀಕರನು ಹರುಷದಲಿ ಪರಿಚಯವ ಮಾಡಿಸಿದ || ೧೫ ||
ಮುದದಿಂದ ಎದುರುಗೊಂಡು ಗಂಧಪರಿಮಳ ಪೂಸಿ |
ಸದಮಲ ಹೃದಯನ್ನ ಕರೆದು ತಂದರು ಮನೆಗೆ ||
ಪದ್ಮನಾಭನ ಪೀಠದಲಿ ಕುಳ್ಳಿರಿಸಿ |
ಮಧುರ ಮಾತಲಿ ತನ್ನ ತರುಣಿಯೊಡಗೂಡಿ || ೧೬ ||
ಹೇಮಕುಂಭಗಳಿಂದ ದ್ವಿಜರ ಕೈಯೊಳು |
ಸ್ವಾಮಿಪುಷ್ಕರಣಿಯ ತೋಯವನೆ ತರಿಸಿ ||
ಹೇಮತಟ್ಟೆಯಲ್ಲಿ ಸ್ವಾಮಿ ಪಾದವನ್ನಿಟ್ಟು |
ಪ್ರೇಮದಿಂದಭಿಷೇಕ ಮಾಡಿದನು ತಾನು || ೧೭ ||
ಚಿನ್ನದ ಕಿರೀಟ ಆಭರಣಗಳ ತಾನಿಟ್ಟು |
ಕನ್ಯಾದಾನವ ಮಾಡಿ ಧನ್ಯನಾದನು ರಾಜ ||
ತನ್ನ ಮಗಳನು ಶ್ರೀನಿವಾಸನಿಗೆ ಒಪ್ಪಿಸಿ |
ಉನ್ನತದ ಪದವಿಯನು ಚೆನ್ನಾಗಿ ಪಡೆದ || ೧೮ ||
ಮಾವನಪ್ಪಣೆನೊಂಡು ಮೈದಗೊಸ್ತ್ರವ ಕೊಟ್ಟು |
ಭಾವ ಶುದ್ದದಿ ತನ್ನ ಮಾವನಿಗೆ ವಂದಿಸಿದ ||
ಯಾವಾಗ ಕರೆದರೂ ಬರುವೆನು ನಾನೆಂದು |
ಪಾವನ್ನ ಮಾಡೆಂದು ಧರಣಿಗೊಂದಿಸಿದ || ೧೯ ||
ಸೃಷ್ಟೀಶ ಸತಿಯೊಡನೆ ಗರುಡನ ಹೆಗಲೇರೆ |
ಪಟ್ಟಣದ ಜನರೆಲ್ಲ ನಿಂತು ನೋಡುತಲಿ ||
ಅಷ್ಟಗೋಪುರವೇರಿ ಕಣ್ಣಿಟ್ಟು ನೋಡುತಲಿ |
ಎಷ್ಟು ಹೇಳುವುದೀಕೆ ಸುಕೃತ ಫಲವೆನಲು || ೨೦ ||
ಅಜರುದ್ರ ಮೊದಲಾದ ಸುರರು ದ್ವಿಜರುಗಳೆಲ್ಲ |
ಸುಜನರಂದಣವೇರಿ ಪುರಕೆ ಸಾಗಿದರು ||
ಸಜನ ಬಾಂಧವರನು ಕಳುಹಿ ಸ್ವಸ್ಥಳಕ್ಕೆ |
ಅಜನಪಿತ ತಾ ಹೊರಟ ಪದುಮೆಯೊಡಗೂಡಿ || ೨೧ ||
ಆರು ತಿಂಗಳು ಮೀರಿ ಗಿರಿಗೆ ಪೋಗುವೆನೆಂದು |
ಧೀರ ತಾ ನಿಂತನು ಕುಂಭಜರಾಶ್ರಮದಿ ||
ವಾರಿಜಮುಖಿಲಕ್ಷ್ಮೀ ನಾರಾಯಣನಿಗೆ ಹೇಳಿ |
ಚಾರುನಯನೆ ಕೊಲ್ಹಾಪುರಕೆ ನಡೆದಳು || ೨೨ ||
ನಾರಿಯನು ನಗರದಲಿ ಮಂಗಾಪುರದೊಳಗೆ ಬಿಟ್ಟು |
ಗಿರಿಯೊಳಗೆ ತಾ ನಿಂತ ಭೂವೈಕುಂಠ ಮಾಡಿ ||
ಸುರಪತಿಪ್ರಿಯನಾದ ಸುಗುಣಸಾಂದ್ರನು ತಾನು |
ಸಿರಿ ವೇಂಕಟರನ್ನ ವರ ಪುರಂದರವಿಠಲ || ೨೩ ||
SrI puraMdaradAsakRuta SrInivAsakalyANa
rAga: madhyamAvati
AditALa
vaikuMThapati tAnu vaikuMThavane biTTu|
vEMkaTAdrige hOgi SrIkAMta niMta ||
nAlku kaDeyU nODi valmIkavane kaMDu |
EkAMtasthaLaveMdu bahukAlavallidda || 1 ||
cOLa BRutyanu SiravanoDeda gAyava nODi |
tALalArade svAmi gurugaLane karesi ||
hELidauShadha mADi krODharUpiya kaMDu |
kELi sthaLavane koMDu lIle tOrutali || 2 ||
irutiraloMdina turagavane smarisutali |
turaga baralu kaMDu mudadi tAnEri ||
paripari mRugagaLa aDaviyali tA koMdu |
karuNAsAgara oMdu vanava kaMDanu || 3 ||
vanadalli vanajAkShi rAjaputriya kaMDu |
manake baMdaMtADi kalaha mADidaru ||
manasijapita tAnu aSvava kaLakoMDu |
GanavAda giri Eri malagida hariyu || 4 ||
nagadhara malagalu bakuLAvatiyu Aga |
bage bage kELalu SOkadiM nuDida ||
gagarAjana putri padmAvatiya kaMDu |
hagalu iraLu Akeya muKava smarisuvanu || 5 ||
avaLigOsugavAgi iddallige hOde |
avaLiMda ennaSva hatavAyitamma ||
avaLa horetu enna prANavE nilladu |
avaLa GaTaneya nInu mADabEkamma || 6 ||
aMda mAtanu kELi bakuLAvatiyu Aga |
AnaMdadiM rAjana purake teraLidaLu ||
suMdariyara kArya sthiravAgadeMdu |
ceMduLLa strIrUpa dharisidanu hariyu || 7 ||
koravaMji tAnAgi nRupana purake hOgi |
dharaNidEviya muMde Sakuna hELidanu ||
tirugi baralAtage magaLa koDuveneMdu |
harige niScayamADi Sukara kaLuhidanu || 8 ||
tApasOttama baMdu patravane koDalu |
SrIpatiyu tAnOdi benha hiMdeye bareda ||
A paramavaMdya tA surastOmavane karesi |
I pari vaiBOga mADidanu hariyu || 9 ||
aShTavargada kArya mADabEkeMdu |
sRuShTISanedurige hELidanu brahma ||
aShTaroLage svAmi lakShmIya smarisi |
niTTusirubiTTu SOkadi nuDida || 10 ||
A kShaNadali tAnu taraNiyane karesi |
ikShucApana mAte baLige pOgeMda ||
takShaNadali sUrya hOgi nillalu hariya |
akShEmavane kELi teraLidaLu bEga || 11 ||
baMda satiyaLa kUDi maMdirake pOgi |
hiMde hELida vAkya naDeseMda hariyu ||
saMdEhavillade svAmiyE naDeseMdu |
iMdirAdEviyu nuDidaLu harige || 12 ||
svasti vAcana mADi kuladEvaraniTTu |
prastava mADida dvijara stOmakke ||
astAdrige sUryanu hOgi nillalu |
svasthacittadi lakShmIsahita malagidaru || 13 ||
marudina lakShmISa rAjana A purake |
surastOmavane kUDi teraLi baMda ||
baruva kRuShNana kaMDu Sukamuni saMstutisi |
harige BOjanavannu mudadi mADisida || 14 ||
AkaLaMkamahimanu baMda vArteya kELi |
sakala janaranu kUDi kareyalu baMdanA rAja ||
niKila parivAravanu tA vyOmarAjanige |
SrIkaranu haruShadali paricayava mADisida || 15 ||
mudadiMda edurugoMDu gaMdhaparimaLa pUsi |
sadamala hRudayanna karedu taMdaru manege ||
padmanABana pIThadali kuLLirisi |
madhura mAtali tanna taruNiyoDagUDi || 16 ||
hEmakuMBagaLiMda dvijara kaiyoLu |
svAmipuShkaraNiya tOyavane tarisi ||
hEmataTTeyalli svAmi pAdavanniTTu |
prEmadiMdaBiShEka mADidanu tAnu || 17 ||
cinnada kirITa ABaraNagaLa tAniTTu |
kanyAdAnava mADi dhanyanAdanu rAja ||
tanna magaLanu SrInivAsanige oppisi |
unnatada padaviyanu cennAgi paDeda || 18 ||
mAvanappaNenoMDu maidagostrava koTTu |
BAva Suddadi tanna mAvanige vaMdisida ||
yAvAga karedarU baruvenu nAneMdu |
pAvanna mADeMdu dharaNigoMdisida || 19 ||
sRuShTISa satiyoDane garuDana hegalEre |
paTTaNada janarella niMtu nODutali ||
aShTagOpuravEri kaNNiTTu nODutali |
eShTu hELuvudIke sukRuta Palavenalu || 20 ||
ajarudra modalAda suraru dvijarugaLella |
sujanaraMdaNavEri purake sAgidaru ||
sajana bAMdhavaranu kaLuhi svasthaLakke |
ajanapita tA horaTa padumeyoDagUDi || 21 ||
Aru tiMgaLu mIri girige pOguveneMdu |
dhIra tA niMtanu kuMBajarASramadi ||
vArijamuKilakShmI nArAyaNanige hELi |
cArunayane kolhApurake naDedaLu || 22 ||
nAriyanu nagaradali maMgApuradoLage biTTu |
giriyoLage tA niMta BUvaikuMTha mADi ||
surapatipriyanAda suguNasAMdranu tAnu |
siri vEMkaTaranna vara puraMdaraviThala || 23 ||

Leave a Reply
You must be logged in to post a comment.