Composer: Shri Purandara dasaru
ಮುತ್ತೈದಾಗಿರಬೇಕು ಮುದದಿಂದಲಿ
ಹತ್ತುನೂರು ನಾಮದೊಡೆಯ ಹರಿ ನಮ್ಮ ಪತಿಯೆಂದು [ಪ]
ಗುರುವಿಂದ ಶಾಸ್ತ್ರವನು ಓದುವುದೆ ಮಾಂಗಲ್ಯ
ವೈರಾಗ್ಯವೆಂಬುದೆ ಒಪ್ಪುವ ಮೂಗುತಿ
ತಾರತಮ್ಯಜ್ಞಾನ ತಾಯಿತ್ತು ಮುತ್ತು ಸರ
ಕರುಣ ರಸವೆಂಬಂಥ ಕಟ್ಟಾಣಿ ಕಟ್ಟಿಕೊಂಡು [೧]
ಹರಿಕಥೆ ಕೇಳುವುದೆ ಕಿವಿಗೆ ಮುತ್ತಿನ ಓಲೆ
ನಿರುತ ಸತ್ಕರ್ಮವು ನಿಜ ಕಾಂತಿಯು
ಪರಮ ಭಕ್ತರ ಪಾದರಜ ಹೆರಳು ಬಂಗಾರ
ಗುರು ಭಕುತಿಯೆಂಬಂಥ ಗಂಧ ಕುಂಕುಮ ಧರಿಸಿ [೨]
ಪೊಡವಿಯೊಳು ಪರಹಿತದ ಪಟ್ಟವಾಳಿಯನುಟ್ಟು
ಕೊಡುವ ಧರ್ಮವೆಂಬ ಕುಬುಸ ತೊಟ್ಟು
ಬಿಡದೆ ಎನ್ನೊಡೆಯ ಶ್ರೀ ಪುರಂದರವಿಠಲನ
ಧೃಡ ಭಕುತಿ ಎಂಬಂಥ ಕಡಗ ಬಳೆ ಇಟ್ಟುಕೊಂಡು [೩]
muttaidAgirabEku mudadiMdali
hattunUru nAmadoDeya hari namma patiyeMdu [pa]
guruviMda SAstravanu Oduvude mAMgalya
vairAgyaveMbude oppuva mUguti
tAratamyaj~jAna tAyittu muttu sara
karuNa rasaveMbaMtha kaTTANi kaTTikoMDu [1]
harikathe kELuvude kivige muttina Ole
niruta satkarmavu nija kAMtiyu
parama Baktara pAdaraja heraLu baMgAra
guru BakutiyeMbaMtha gaMdha kuMkuma dharisi [2]
poDaviyoLu parahitada paTTavALiyanuTTu
koDuva dharmaveMba kubusa toTTu
biDade ennoDeya SrI puraMdaraviThalana
dhRuDa Bakuti eMbaMtha kaDaga baLe iTTukoMDu [3]
Leave a Reply