ಶ್ರೀವಿಜಯದಾಸಾರ್ಯ ವಿರಚಿತ
ಪ್ರಾರ್ಥನಾ ಸುಳಾದಿ
(ಶ್ರೀಹರಿಯಲ್ಲಿ ಮತ್ತು ವಿಶೇಷವಾಗಿ
ಹರಿದಾಸರಲ್ಲಿ ಭಕ್ತಿ ಕೊಡು ಮತ್ತು
ಅನ್ಯವಾದ ಮತಿಭ್ರಂಶರ ಮತದಲ್ಲಿ
ಜನನ ಕೊಡಬೇಡವೆಂದು ಶ್ರೀಹರಿಯಲ್ಲಿ ಪ್ರಾರ್ಥನೆ.)
ರಾಗ: ಕಾಂಬೋಧಿ
ಧ್ರುವತಾಳ
ಅಪೇಕ್ಷೆ ಎನ್ನದಿದೆ ಮತ್ತೊಂದಾವುದು ಇಲ್ಲ
ಅಪಾರ ಗುಣನಿಧಿ ಅವಧರಿಸೊ
ಭೂಪಾಲನಾಗುವದು ಎಂದಿಗೆಂದಿಗೆ ಒಲ್ಲೆ
ಕೌಪೀನವಿರಲಿ ಎನಗೆ ಸಂತತದಲ್ಲಿ ಸ್ವಾಮಿ
ಕೋಪಾವೆ ಬೇರರಸಿ ಕಿತ್ತಿ ಕಡೆಗೆ ಮಾಡು
ಕಾಪಾಡು ಇದೆ ನಿನ್ನ ಬೇಡಿಕೊಂಬೆ
ತಾಪತ್ರಯಂಗಳು ತಾಳುವಂತೆ ಪ್ರೇರಿಸಿ
ಆಪತ್ತು ಕಾಲಕ್ಕೆ ಧೈರ್ಯನೀಯೊ
ಅಪವರ್ಗವೆ ಒಲ್ಲೆ ಅನುದಿನ ನಿನ್ನ ನಖ
ದೀಪದ ಬೆಳಗಿನಲ್ಲಿ ಲೋಲ್ಯಾಲಿಡಿಸೊ
ಶ್ರೀಪರಮಾತ್ಮನೆ ನಿನ್ನಲ್ಲಿ ವಿಶ್ವಾಸ –
ವಾ ಪುಟ್ಟುವಂತೆ ಸದಮತಿ ಪಾಲಿಸೊ
ಪಾಪ ಮಾರ್ಗಕ್ಕೆ ಎನ್ನ ಕೆಡಹಲಾಗದು ಚನ್ನ
ಉಪಾಯ ನಿನ್ನದೊಂದೆ ನಾಮ ಗತಿಗೆ
ಗೋಪಾಲಕೃಷ್ಣ ನಮ್ಮ ವಿಜಯವಿಟ್ಠಲ ನಾನಾ –
ರೂಪನೆ ಸರ್ವದ ಮನಸು ನಿನ್ನದಾಗಲಿ || ೧ ||
ಮಟ್ಟತಾಳ
ನಿನ್ನ ದಾಸರು ಪೊದ್ದ ವಸನವೆ ಎನಗಾಗಲಿ
ನಿನ್ನ ದಾಸರು ಉಂಡ ಎಂಜಲು ಎನಗಾಗಲಿ
ನಿನ್ನ ದಾಸರ ಪಾದೋದಕವೆ ಎನಗಾಗಲಿ
ನಿನ್ನ ದಾಸರು ಇಟ್ಟಾಭರಣವೆ ಎನಗಾಗಲಿ
ನಿನ್ನ ದಾಸರು ಚರಿಸಿದ ಉತ್ತಮ ಭೂಮಿ
ಪುಣ್ಯನಿಧಿಗಳೆಲ್ಲ ಎನಗಾಗಲಿ ದೇವ
ನಿನ್ನ ದಾಸರು ಪೇಳಿದ್ದದೆ ಮಹ ಉಪದೇಶ
ನಿನ್ನ ದಾಸರು ಕೇಳಿದ್ದದೆ ಎನಗೆ ಹರುಷ
ನಿನ್ನ ದಾಸರ ಮಾತು ಸಕಲ ಶ್ರುತಿ ವಚನ
ನಿನ್ನ ದಾಸರ ಲೀಲೆ ಎನಗೆ ಪುಷ್ಪದ ಮಾಲೆ
ನಿನ್ನ ದಾಸರ ಕರುಣಾ ಎನಗೆ ವಜ್ರ ಕವಚ
ನಿನ್ನ ದಾಸರ ಸಂದರುಶನವೆ ಎನಗೆ ಲಾಭ
ನಿನ್ನ ದಾಸರ ಕೀರ್ತಿ ಎನಗೆ ಪರಮ ಪೂರ್ತಿ
ನಿನ್ನ ದಾಸರ ಸಂಗ ಮಹದುರಿತ ಭಂಗ
ನಿನ್ನ ಭಕುತಿಗಿಂತ ನಿನ್ನ ದಾಸರ ಪಾದ –
ವನ್ನಜದಲಿ ಭಕುತಿ ಎನ್ನಗದು ಬಲು ಪ್ರೀತಿ
ಮನ್ನಿಸು ಮೋಹನ್ನ ವಿಜಯವಿಟ್ಠಲ ಚನ್ನ
ಇನ್ನು ಇದಲ್ಲದೆ ಪ್ರತಿಮಾತುಗಳಿಲ್ಲ || ೨ ||
ತ್ರಿವಿಡಿತಾಳ
ಅನುಭವವಾದ ಭಕುತಿ ಅನುಭವವಾದ ಜ್ಞಾನ
ಅನುಭವವಾದ ವಿರಕುತಿ ಇತ್ತು
ಅನುದಿನದಲಿ ನಿನ್ನ ದಾಸರ ದಾಸನ
ಅನುಗ್ರಹದಲಿ ಯಿದ್ದು ಇರಳು ಹಗಲು
ಅನುಚಿತ ಕರ್ಮದ ಹೊಳತ ಮರೆದು ಸದ
ಅನುಮಾನತೀರ್ಥರ ಮತದವರ
ಅನುಸರಿಸಿ ಪಂಚಭೇದವೆ ತಿಳಿದು ಆವಾಗ
ಅನುಗುಣ್ಯನಾಗಿ ಸುಮಾರ್ಗವಿಡಿದು
ಅನುಪತ್ಯ ಇದರೊಳು ಒಂದಕ್ಕಾದರೂ ಎನಗೆ
ಅನುಮಾನವಾಗದಂತೀಯೊ ಮನಸು
ಅನುಪಮ ಚರಿತ ಶ್ರೀವಿಜಯವಿಟ್ಠಲರೇಯ
ಅನುಜನಾಗಿ ಸುರಪತಿಯ ಕಾಯಿದ ದೇವ || ೩ ||
ಅಟ್ಟತಾಳ
ಕರ ನಯನ ಕರ್ನ ಚರಣ ವದನ ನಾಸ
ಮರಿಯಾದ ನಾಲಿಗೆ ತರುವಾಯ ನಾನಾ
ಪರಿಪರಿ ಇಂದ್ರಿಯ ಚರಿಸುವ ವ್ಯಾಪಾರಾ
ಪರಿಶುದ್ಧವಾಗಿ ಅಂತರ ಬಾಹಿರವೆಲ್ಲ
ಹರಿ ನಿನ್ನ ಪರವಾಗಿ ಇರಲಿ ಕೊಂಕಾಗದೆ
ದುರುಳ ತರುಳ ನಾನಾದರು ನೋಡಿ ದಯದಿಂದ
ಕರದು ನಿನ್ನವರೊಳು ಇರತಕ್ಕವನ ಮಾಡು
ಕರುಣಾಕರ ಮೂರ್ತಿ ವಿಜಯವಿಟ್ಠಲರೇಯ
ಚಿರಕಾಲದಲ್ಲಿ ಇಂಥ ವರವನ್ನೆ ಪಾಲಿಸು || ೪ ||
ಆದಿತಾಳ
ಶಿಷ್ಟರ ಪಾಲಿಪದು ದುಷ್ಟರ ಬಡಿವದು
ಕಷ್ಟವಾದರು ಸಂತುಷ್ಟವಾಗಲಿ ಎನಗೆ
ಎಷ್ಟು ಭಯ ಬಂದರು ನಿಷ್ಠೆ ನಿನ್ನಲ್ಲಿ ಮನ –
ಮುಟ್ಟಿ ದೊರಕಲಿ ಅರಿಷ್ಟ ದೂರಾಗಲಿ
ಇಷ್ಟಾದ ತರುವಾಯ ಪುಟ್ಟುವದಿದ್ದರೆ
ಭ್ರಷ್ಟ ಮಿಥ್ಯ ಮತದವರ ಹೊಟ್ಟೆಯೊಳಗಿಡದಿರು
ಕಷ್ಟದೊಳಗೆ ಎನ್ನ ಇಟ್ಟರೆ ಅದೆ ನಿತ್ಯ
ಮೃಷ್ಟಾನ್ನ ಉಂಡಂತೆ ಹೃಷ್ಟ ತೋರುವದಯ್ಯ
ಸೃಷ್ಟಿಯೊಳಗೆ ನಾನು ಎಷ್ಟು ಕಾಲ ಉಳ್ಳರು
ಮೆಟ್ಟಿಸದಿರು ಪಾಪದ ಬಟ್ಟಿ ಭಂಗವನು
ಕೃಷ್ಣಮೂರುತಿ ವಿಜಯವಿಟ್ಠಲ ವಿಶ್ವರೂಪ
ಇಷ್ಟಾರ್ಥ ಕೊಡು ಅದೃಷ್ಟ ನಾಮಕ ಹರಿ || ೫ ||
ಜತೆ
ಮನೊ ವಾಚಾ ಕಾಯದಲ್ಲಿ ಕೃಷ್ಣನೆಂದೆಂಬೊ
ನೆನವೆ ಎನಗೆ ಇರಲಿ ವಿಜಯವಿಟ್ಠಲರೇಯ ||
SrIvijayadAsArya viracita
prArthanA suLAdi
(SrIhariyalli mattu viSEShavAgi
haridAsaralli Bakti koDu mattu
anyavAda matiBraMSara matadalli
janana koDabEDaveMdu SrIhariyalli prArthane.)
rAga: kAMbOdhi
dhruvatALa
apEkShe ennadide mattoMdAvudu illa
apAra guNanidhi avadhariso
BUpAlanAguvadu eMdigeMdige olle
kaupInavirali enage saMtatadalli svAmi
kOpAve bErarasi kitti kaDege mADu
kApADu ide ninna bEDikoMbe
tApatrayaMgaLu tALuvaMte prErisi
Apattu kAlakke dhairyanIyo
apavargave olle anudina ninna naKa
dIpada beLaginalli lOlyAliDiso
SrIparamAtmane ninnalli viSvAsa –
vA puTTuvaMte sadamati pAliso
pApa mArgakke enna keDahalAgadu canna
upAya ninnadoMde nAma gatige
gOpAlakRuShNa namma vijayaviTThala nAnA –
rUpane sarvada manasu ninnadAgali || 1 ||
maTTatALa
ninna dAsaru podda vasanave enagAgali
ninna dAsaru uMDa eMjalu enagAgali
ninna dAsara pAdOdakave enagAgali
ninna dAsaru iTTABaraNave enagAgali
ninna dAsaru carisida uttama BUmi
puNyanidhigaLella enagAgali dEva
ninna dAsaru pELiddade maha upadESa
ninna dAsaru kELiddade enage haruSha
ninna dAsara mAtu sakala Sruti vacana
ninna dAsara lIle enage puShpada mAle
ninna dAsara karuNA enage vajra kavaca
ninna dAsara saMdaruSanave enage lABa
ninna dAsara kIrti enage parama pUrti
ninna dAsara saMga mahadurita BaMga
ninna BakutigiMta ninna dAsara pAda –
vannajadali Bakuti ennagadu balu prIti
mannisu mOhanna vijayaviTThala canna
innu idallade pratimAtugaLilla || 2 ||
triviDitALa
anuBavavAda Bakuti anuBavavAda j~jAna
anuBavavAda virakuti ittu
anudinadali ninna dAsara dAsana
anugrahadali yiddu iraLu hagalu
anucita karmada hoLata maredu sada
anumAnatIrthara matadavara
anusarisi paMcaBEdave tiLidu AvAga
anuguNyanAgi sumArgaviDidu
anupatya idaroLu oMdakkAdarU enage
anumAnavAgadaMtIyo manasu
anupama carita SrIvijayaviTThalarEya
anujanAgi surapatiya kAyida dEva || 3 ||
aTTatALa
kara nayana karna caraNa vadana nAsa
mariyAda nAlige taruvAya nAnA
paripari iMdriya carisuva vyApArA
pariSuddhavAgi aMtara bAhiravella
hari ninna paravAgi irali koMkAgade
duruLa taruLa nAnAdaru nODi dayadiMda
karadu ninnavaroLu iratakkavana mADu
karuNAkara mUrti vijayaviTThalarEya
cirakAladalli iMtha varavanne pAlisu || 4 ||
AditALa
SiShTara pAlipadu duShTara baDivadu
kaShTavAdaru saMtuShTavAgali enage
eShTu Baya baMdaru niShThe ninnalli mana –
muTTi dorakali ariShTa dUrAgali
iShTAda taruvAya puTTuvadiddare
BraShTa mithya matadavara hoTTeyoLagiDadiru
kaShTadoLage enna iTTare ade nitya
mRuShTAnna uMDaMte hRuShTa tOruvadayya
sRuShTiyoLage nAnu eShTu kAla uLLaru
meTTisadiru pApada baTTi BaMgavanu
kRuShNamUruti vijayaviTThala viSvarUpa
iShTArtha koDu adRuShTa nAmaka hari || 5 ||
jate
mano vAcA kAyadalli kRuShNaneMdeMbo
nenave enage irali vijayaviTThalarEya ||
Leave a Reply