Hariya Prarthana Suladi 3 – Guru Shrisha Vittala

Smt.Nandini Sripad

ಶ್ರೀ ಗುರುಶ್ರೀಶವಿಠಲ ದಾಸಾರ್ಯ ವಿರಚಿತ
ಶ್ರೀಹರಿಯ ಪ್ರಾರ್ಥನಾ ಸುಳಾದಿ
ರಾಗ: ಚಕ್ರವಾಕ

ಧ್ರುವತಾಳ
ಹರಿಯೆ ಉದ್ಧರಿಸೆನ್ನ ಪರಮಪುರುಷ ಧೊರಿಯೆ
ಇರಳು ಹಗಲು ನಿನಗೆ ಮೊರೆ ಇಡುವೆನೊ
ಪರಿಪರಿ ಭವಭಯ ದುರಿತಗಳೋಡಿಸಿ
ಕರಿವರದನೆ ನಿನ್ನ ಸ್ಮರಣೆಯನ್ನು
ಮರೆಯದಂತೆ ನಿನ್ನ ಚರಣಸೇವೆಯೊಳಿಟ್ಟು
ಅರದೂರ ನಿನ್ನ ನಿಜದಾಸನೆನಿಸೊ
ಗುರುಹಿರಿಯರಲ್ಲಿ ಪರಮ ಭಕುತಿ ಇತ್ತು
ವಿರಕುತಿ ವಿಷಯದಲ್ಲಿ ಪುಟ್ಟಿಸಯ್ಯಾ
ಕರುಣಸಾಗರ ನಿನ್ನ ಮರಳೊಂದು ಬೇಡೋದಿಲ್ಲ
ದುರಿತದೂರನೆ ಇದುವೊಂದು ಮಾತ್ರ
ಕರುಣಿಸಬೇಕಯ್ಯಾ ಭಕುತವತ್ಸಲ ಸ್ವಾಮಿ
ಸರುವ ರೂಪಾತ್ಮಕ ಸರುವರೊಡಿಯಾ
ಚರಾ ಅಚರಗಳಲ್ಲಿ ಪರಿಪರಿ ನಿನ್ನ ರೂಪ
ಕುರುಹು ಕಾಂಬುವ ಸುಜ್ಞಾನದಿಂದ
ಪರಮ ಭಕುತಿ ಕೊಟ್ಟು ಗರುಡವಾಹನ ನಿನ್ನ
ಪರಮಾನಂದವಾದ ವಿಹಾರವ
ಅರಲವ ಬಿಡದಲೆ ಚಿಂತಿಸುವಂತೆ ಮಾಡೋ
ಗುರುಶ್ರೀಶವಿಟ್ಠಲನೆ ಕಾವದೇವ || ೧ ||

ಮಟ್ಟತಾಳ
ಇಂದಿರೇಶನೆ ನಿನ್ನ ಛಂದವುಳ್ಳ ರೂಪ
ನಂದದಿ ನೋಡುವಾನಂದಕಿಂತ ಭಾಗ್ಯ
ಹಿಂದೆ ಕಂಡವರಿಗಿಲ್ಲ ಹಿಂದು ಮುಂದು ಕಾಣೆ
ಮಂದನು ಇವನೆಂದು ತಂದುಕೊಳ್ಳದೆ
ಸಂದರುಶನವೀಯೋ ಸುಂದರಮೂರುತಿ
ವಂದಿಸುವೆನು ನಿನಗೆ ಗುರುಶ್ರೀಶವಿಠಲಯ್ಯಾ || ೨ ||

ತ್ರಿವಿಡಿತಾಳ

ದೇವಭಕುತರ ಬಿಡದೆ ಕಾವ ಪ್ರಭು ನೀನೆಂದು
ಭಾವಶುದ್ಧದಿ ಬಿನ್ನಪವ ಮಾಡಿದೆನೊ
ಆವಾವ ಜನ್ಮಗಳ ಈವದಕ್ಕೆ ಎನಗೆ
ನೋವು ಕಾಣದು ಬಿಡದೇ ನಿತ್ಯ , ನಿನ್ನ
ಸೇವಕರೊಳು ಇಟ್ಟು ಸೇವಕನೆನಿಸಯ್ಯಾ
ಶ್ರೀವರ ಗುರುಶ್ರೀಶವಿಠಲಯ್ಯನೇ || ೩ ||

ಅಟ್ಟತಾಳ
ಅಲ್ಪ ಯೋಗ್ಯತಿ ಎನ್ನದಾದಗೋಸುಗ ಸ್ವಾಮಿ
ಸ್ವಲ್ಪ ಸ್ವಲ್ಪಕೆ ನಿನಗಾಲ್ಪರಿವೆನೋ ಅಹಿ –
ತಲ್ಪ ನಿನ್ನ ಭಕ್ತರಂತೆ ನಂಬಲಾರೆ
ಕಲ್ಪ ಕಲ್ಪಗಳಲ್ಲಿ ಎನ್ನಂಥ ಜೀವರು
ಸ್ವಲ್ಪವಾದರು ಇರಬಹುದೋ ಅವರನ್ನ
ಬಲ್ಪರಿಯಲಿ ನೀನು ಸಲಹಲಿಲ್ಲವೆ ದೇವ
ಕಲ್ಪಿಸಿದವರನ್ನ ಕಡೆಹಾಯಿಸುವ ಸಂ –
ಕಲ್ಪ ನಿನ್ನದು ಎಂದು ನಂಬಿದೆ ಸತ್ಯಸಂ –
ಕಲ್ಪ ಪೋಷಿಸೊ ಗುರುಶ್ರೀಶವಿಟ್ಠಲ ಸುಖ –
ತಲ್ಪ ನಿನಗಲ್ಲದೆ ಅನ್ಯರಿಗೆ ಆಲ್ಪರಿಯೆ || ೪ ||

ಆದಿತಾಳ

ಎಷ್ಟು ಪೇಳಲಿ ನಿನಗಷ್ಟು ಅರಿಕಿ ಇನ್ನು
ಗುಟ್ಟು ಏನಿದರೊಳು ಕೊಟ್ಟದ್ದು ಕೊಡು ನಿನ್ನ
ಬಿಟ್ಟು ಅನ್ಯರಿಗೆ ಎಳ್ಳಷ್ಟು ಕೇಳುವನಲ್ಲ
ಕೃಷ್ಣ ಎನಗೆ ನೀನು ಇಷ್ಟ ಮೂರುತಿ ಎನ್ನ
ದೃಷ್ಟಿಗೆ ತೋರೊ ನಿತ್ಯ ಸ್ಪಷ್ಟ ಸುಜ್ಞಾನವಿತ್ತು
ಶಿಷ್ಟರ ದಯವನ್ನು ಹುಟ್ಟಿಸೊ ಎನ್ನಲ್ಲಿ
ಭ್ರಷ್ಟನು ಇವನೆಂದು ಸಿಟ್ಟು ಮಾಡದೆ ಕಾಯೋ
ಕೊಟ್ಟಕೊನಿಗೆ ನಿನಗೆ ಬಿಟ್ಟೀತೆ ಎನ್ನ ಭಾರ
ಘಟ್ಯಾಗಿ ನಿನ್ನ ಪಾದ ಮುಟ್ಟಿ ಭಜಿಸುವೆನಯ್ಯಾ
ಕಷ್ಟದೂರನೆ ಭವದ ಕಟ್ಟು ಪರಿಹರಿಸಯ್ಯಾ
ಶಿಷ್ಟರ ಗುರುಶ್ರೀಶವಿಟ್ಠಲ ದಯವನ್ನು
ಇಟ್ಟು ಸಾಕಲಿಬೇಕು ಸೃಷ್ಟೇಶ ನಿನ್ನವರ || ೫ ||

ಜತೆ
ಈಶ ನಿನ್ನ ನಿಜದಾಸರಂತಲ್ಲ ಆ –
ಭಾಸಕನಾ ಗುರುಶ್ರೀಶವಿಟ್ಠಲ ಪೊರಿಯೊ ||


SrI guruSrISaviThala dAsArya viracita
SrIhariya prArthanA suLAdi
rAga: cakravAka

dhruvatALa
hariye uddharisenna paramapuruSha dhoriye
iraLu hagalu ninage more iDuveno
paripari BavaBaya duritagaLODisi
karivaradane ninna smaraNeyannu
mareyadaMte ninna caraNasEveyoLiTTu
aradUra ninna nijadAsaneniso
guruhiriyaralli parama Bakuti ittu
virakuti viShayadalli puTTisayyA
karuNasAgara ninna maraLoMdu bEDOdilla
duritadUrane iduvoMdu mAtra
karuNisabEkayyA Bakutavatsala svAmi
saruva rUpAtmaka saruvaroDiyA
carA acaragaLalli paripari ninna rUpa
kuruhu kAMbuva suj~jAnadiMda
parama Bakuti koTTu garuDavAhana ninna
paramAnaMdavAda vihArava
aralava biDadale ciMtisuvaMte mADO
guruSrISaviTThalane kAvadEva || 1 ||

maTTatALa
iMdirESane ninna CaMdavuLLa rUpa
naMdadi nODuvAnaMdakiMta BAgya
hiMde kaMDavarigilla hiMdu muMdu kANe
maMdanu ivaneMdu taMdukoLLade
saMdaruSanavIyO suMdaramUruti
vaMdisuvenu ninage guruSrISaviThalayyA || 2 ||

triviDitALa

dEvaBakutara biDade kAva praBu nIneMdu
BAvaSuddhadi binnapava mADideno
AvAva janmagaLa Ivadakke enage
nOvu kANadu biDadE nitya , ninna
sEvakaroLu iTTu sEvakanenisayyA
SrIvara guruSrISaviThalayyanE || 3 ||

aTTatALa
alpa yOgyati ennadAdagOsuga svAmi
svalpa svalpake ninagAlparivenO ahi –
talpa ninna BaktaraMte naMbalAre
kalpa kalpagaLalli ennaMtha jIvaru
svalpavAdaru irabahudO avaranna
balpariyali nInu salahalillave dEva
kalpisidavaranna kaDehAyisuva saM –
kalpa ninnadu eMdu naMbide satyasaM –
kalpa pOShiso guruSrISaviTThala suKa –
talpa ninagallade anyarige Alpariye || 4 ||

AditALa

eShTu pELali ninagaShTu ariki innu
guTTu EnidaroLu koTTaddu koDu ninna
biTTu anyarige eLLaShTu kELuvanalla
kRuShNa enage nInu iShTa mUruti enna
dRuShTige tOro nitya spaShTa suj~jAnavittu
SiShTara dayavannu huTTiso ennalli
BraShTanu ivaneMdu siTTu mADade kAyO
koTTakonige ninage biTTIte enna BAra
GaTyAgi ninna pAda muTTi BajisuvenayyA
kaShTadUrane Bavada kaTTu pariharisayyA
SiShTara guruSrISaviTThala dayavannu
iTTu sAkalibEku sRuShTESa ninnavara || 5 ||

jate
ISa ninna nijadAsaraMtalla A –
BAsakanA guruSrISaviTThala poriyo ||

Leave a Reply

Your email address will not be published. Required fields are marked *

You might also like

error: Content is protected !!