Hariya Prarthana Suladi 2 – Guru Shrisha Vittala

Smt.Nandini Sripad

ಶ್ರೀ ಗುರುಶ್ರೀಶವಿಟ್ಠಲ ದಾಸಾರ್ಯ ವಿರಚಿತ
ಶ್ರೀಹರಿಯ ಪ್ರಾರ್ಥನಾ ಸುಳಾದಿ
ರಾಗ: ರಂಜಿನಿ

ಧ್ರುವತಾಳ
ನಮೊ ನಮೊ ಶ್ರೀಹರಿಯೆ ನಮೊ ನಮೊ ಎನ್ನ ಧೊರಿಯೇ
ನಮೊ ನಮೊ ಎಂಬೆ ನಿನಗೆ ಸುಮನಸರೊಡಿಯನೆ ನಿನ್ನ ಸಮರೆನಿಪರಿಲ್ಲ
ರಮೆ ಮೊದಲಾದ ಸರ್ವ ಸುರರೊಳಗೆ
ಅಮಿತ ಜೀವರೊಳಗೆ ಅಧಮಾಧಮನು ನಾನು
ನಿಮಿಷವಾದರು ನಿನ್ನ ಸ್ಮರಿಸಲಿಲ್ಲ
ಸುಮತಿಗಳನ್ನು ಬಿಟ್ಟು ಕುಮತಿಗಳನ್ನು ಕೂಡ್ದೆ
ಮಮತೆ ವಿಷಯದಲ್ಲಿ ಘನವಾಯಿತೊ
ಮಮಕುಲ ದೈವವೆ ಸುಮುಖವಾಗಲಿಬೇಕೊ
ವಿಮುಖವಾದರೆ ಎನಗಿನ್ನಾವ ಗತಿಯೊ
ಸಮಯ ಇದೆ ನರಜನ್ಮ ಬಂದಾಗಲೆ ಪೊರಿಯಯ್ಯಾ
ಅಂದು ಕ್ರಿಮಿಕೀಟ ಜನುಮದಲ್ಲಾವ ಸಾಧನವೊ
ರಮೆಯರಸನೆ ಗುರುಶ್ರೀಶವಿಟ್ಠಲ ನಿನ್ನ
ಮಮತೆ ಒಂದಿರೆ ನಾನು ಒಂದು ಬೇಡುವದಿಲ್ಲ || ೧ ||

ಮಟ್ಟತಾಳ

ನಿನ್ನ ಧ್ಯಾನವ ಕೊಡೊ ಎನ್ನ ಧನ್ಯನ ಮಾಡೊ
ನಿನ್ನ ಮಂಗಳ ಗುಣವನ್ನೆ ಕೀರ್ತನೆ ಗೈಸೊ
ನಿನ್ನ ಕಥಾಮೃತವನ್ನೆ ಕುಡಿಸೊ ನಿತ್ಯ
ನಿನ್ನವರ ಸಂಗ ಜನ್ಮ ಜನ್ಮದಲಿರೆ
ಅನ್ಯ ವಿಷಯದಲ್ಲಿ ಇನ್ನು ಇಡಿಸದಿರೊ
ನಿನ್ನ ಭಕ್ತರಂತೆ ಎನ್ನ ಯೋಗ್ಯತೆ ಅಲ್ಲ
ಇನ್ನೇನಾದರೂ ಘನ್ನ ಜ್ಞಾನಿಗಳವರು
ನಿನ್ನ ಚರಣ ಕಮಲವನ್ನು ಬಿಡುವರಲ್ಲ
ಎನ್ನಯ ಗತಿಗಳು ಇನ್ನೆಷ್ಟು ಪೇಳಲಿ
ಎನ್ನಯ ತಪ್ಪುಗಳು ಅನಂತವಿದ್ದರು
ಅನ್ಯರ ದುರ್ಗುಣವನ್ನೆ ಎಣಿಸಿ ಎಣಿಸಿ ಎನ್ನ
ದಣಿಸುವದೈಯ್ಯಾ
ನಿನ್ನ ಕಡಿಗೆ ಮನ ಒಮ್ಮೆ ಪೋಗದು ಕೃಷ್ಣ
ಎನ್ನ ಬಾಳು ಸ್ವಾಮಿ ಇನ್ನು ಹೀಗಾಯಿತು
ಇನ್ನು ನಾ ಮೊರೆ ಇಟ್ಟೆ ಗುರುಶ್ರೀಶವಿಟ್ಠಲ || ೨ ||

ತ್ರಿವಿಡಿತಾಳ

ನೀನೇವೆ ಸರ್ವಜ್ಞ ನಾನು ಪೇಳುವದೇನು
ನೀನೇವೆ ಸ್ವಾತಂತ್ರ ಏನಾಯಿತೆನ್ನಿಂದ
ನೀನೇವೆ ಪ್ರೇರಿಸಿ ನುಡಿಸಿದ ಕಾರಣದಿ
ನಾನು ನುಡಿದೆನಯ್ಯಾ ಕರುಣಾನಿಧೆ
ನೀನೆ ಎನ್ನಯ ದೇಹದೊಳಗೆ ಹೊರಗೆ ಇದ್ದು
ನಾನಾ ವ್ಯಾಪಾರವ ಮಾಡಿಸುವಾಗಲೆ
ನಾನೆ ಮಾಡುವೆನೆಂಬ ಆಹಂಕಾರ ಬಿಡಿಸಿನ್ನು
ನೀನೆ ಮಾಬುವೆನೆಂಬ ಸ್ಮೃತಿಯನಿತ್ತು
ಶ್ರೀನಾಥ ದಯದಿಂದ ನಾನಾ ಠಾವಿನಲ್ಲಿ
ಎನಗೆ ನಿನ್ನಯ ರೂಪ ತೋರಿಸಯ್ಯಾ
ನಿನ್ನಯ ಸ್ಮೃತಿಯೆ ಭಾಗ್ಯ ವಿಸ್ಮೃತಿ ಎಂದಿಗೂ ಬೇಡ
ಮೀನಕೇತನ ಜನಕ ಗುರುಶ್ರೀಶವಿಟ್ಠಲ
ಸಾನುರಾಗದಿ ಕಾಯೊ ಶರಣೆಂಬೆ ನಿನಗೆ || ೩ ||

ಅಟ್ಟತಾಳ

ಇಂದಿರಾಪತಿ ನಿನ್ನ ಪೊಂದಿದವರ ಪಾದಾ
ಪೊಂದಿದವ ನಾನು
ತಂದೆ ನಿನ್ನಯ ಮನಸಿಗೆ ತಂದು ಪಾಲಿಸು
ಹಿಂದಿನ ಜನುಮದಿ ಒಂದು ಸಾಧನ ಕಾಣೆ
ಇಂದಿನ ಜನುಮದಿ ಆದದ್ದು ಇಷ್ಟೇ
ಮುಂದೇನು ಮಾಡಿಪೆಯೊ ನೀನೆ ಬಲ್ಲಿ
ಮಂದಮತಿಗ ನಾನು ತಂದೆ ನಿನ್ನಯ ನಾಮಾ ಆ –
ನಂದದಿಂದಲಿ ನುಡಿಸೊ ಇದನೆ ಬೇಡಿಕೊಂಬೆ
ಸಂದರ್ಶನ ಹೃದಯ ಮಂದಿರದಲ್ಲಿತ್ತು
ಪೊಂದಿಕೊಂಡಿರೊ ಗುರುಶ್ರೀಶವಿಟ್ಠಲಾ || ೪ ||

ಆದಿತಾಳ

ಕೃಷ್ಣಾ ಎನ್ನೊಡಿಯನೆ ಸೃಷ್ಟಾದ್ಯಷ್ಟಕರ್ತ
ಪುಟ್ಟಿದೆ ನಾ ಮುನ್ನೆ ಪುಟ್ಟಿಸೆಂದು
ಬಟ್ಟಿನೆ ದೈನ್ಯವ ವಿಟ್ಠಲ ದಯದಿ ನೀ
ಪುಟ್ಟಿಸಿ ದೇಹವ ಕೊಟ್ಟು ರಕ್ಷಿಸಲಿಲ್ಲೆ
ಎಷ್ಟೆಷ್ಟು ದಿವಸಕ್ಕೆ ಅಷ್ಟಷ್ಟೆ ಸಾಧನ ಮಾಡಿಸಿ
ಶಿಷ್ಟರ ದಯ ಪುಟ್ಟುವಂತೆ ಮಾಡಿ
ಶಿಷ್ಟಾಶಿಷ್ಟ ನಿನ್ನ ನಾಮ ನಾಲಿಗೆಯಲ್ಲಿ
ಘಟ್ಯಾಗಿ ನಂಬದೆ ಭ್ರಷ್ಟ ಜ್ಞಾನವನ್ನು
ಕಟ್ಟಿಕೊಂಬೆನಯ್ಯಾ
ಇಷ್ಟಮೂರುತಿ ದಯವಿಟ್ಟು ಪೊರೆಯೊ
ಗುರುಶ್ರೀಶವಿಟ್ಠಲಾ || ೫ ||

ಜತೆ

ಪೊರೆವ ಧೊರೆಯು ನರಹರಿಯು ತಾ ಇರಲಾಗಿ
ಅರೆಮೊರೆಗೊಳಲೇಕೆ ಗುರುಶ್ರೀಶವಿಟ್ಠಲಾ ||

ಶ್ರೀ ಗುರುಶ್ರೀಶವಿಟ್ಠಲದಾಸರ ಕಿರುಪರಿಚಯ :

ರಾಯಚೂರು ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ಗ್ರಾಮದಲ್ಲಿ ಜನಿಸಿದ ಶ್ರೀನರಸಿಂಹದಾಸರು , ಶ್ರೀಜಗನ್ನಾಥದಾಸರಲ್ಲಿ ೧೨ ವರ್ಷ ಶಿಷ್ಯತ್ವ ವಹಿಸಿ ಅವರನ್ನು ಸೇವಿಸಿದರು. ಗುರುಗಳು ಅನುಗ್ರಹಿಸಿ , ಅವರ ಆಜ್ಞೆಯ ಪ್ರಕಾರ ಶ್ರೀ ಶ್ರೀಶವಿಠಲಾಂಕಿತ ಹುಂಡೇಕಾರ ದಾಸರಿಂದ ” ಗುರುಶ್ರೀಶವಿಠಲ ” ಎಂಬ ಅಂಕಿತ ಪಡೆದರು. ಗಂಗಾವತಿ ತಾಲೂಕಿನ ಕುಂಟೋಜಿ ಎಂಬ ಗ್ರಾಮದಲ್ಲಿ ಇದ್ದುದರಿಂದ ಇವರಿಗೆ ಕುಂಟೋಜಿ ದಾಸರೆಂದೂ ಕರೆಯುವರು. ಇವರು ೬ ಸುಳಾದಿಗಳನ್ನು ರಚಿಸಿದ್ದಾರೆ. ಸಂಖ್ಯೆ ಕಡಿಮೆಯಾದರೂ ಅಸಂಖ್ಯ ಅಂತಃಶಕ್ತಿ ಈ ಸುಳಾದಿಗಳಲ್ಲಿ ಅಡಗಿದೆ.


SrI guruSrISaviTThala dAsArya viracita
SrIhariya prArthanA suLAdi
rAga: raMjini

dhruvatALa
namo namo SrIhariye namo namo enna dhoriyE
namo namo eMbe ninage sumanasaroDiyane ninna samareniparilla
rame modalAda sarva suraroLage
amita jIvaroLage adhamAdhamanu nAnu
nimiShavAdaru ninna smarisalilla
sumatigaLannu biTTu kumatigaLannu kUDde
mamate viShayadalli GanavAyito
mamakula daivave sumuKavAgalibEko
vimuKavAdare enaginnAva gatiyo
samaya ide narajanma baMdAgale poriyayyA
aMdu krimikITa janumadallAva sAdhanavo
rameyarasane guruSrISaviTThala ninna
mamate oMdire nAnu oMdu bEDuvadilla || 1 ||

maTTatALa

ninna dhyAnava koDo enna dhanyana mADo
ninna maMgaLa guNavanne kIrtane gaiso
ninna kathAmRutavanne kuDiso nitya
ninnavara saMga janma janmadalire
anya viShayadalli innu iDisadiro
ninna BaktaraMte enna yOgyate alla
innEnAdarU Ganna j~jAnigaLavaru
ninna caraNa kamalavannu biDuvaralla
ennaya gatigaLu inneShTu pELali
ennaya tappugaLu anaMtaviddaru
anyara durguNavanne eNisi eNisi enna
daNisuvadaiyyA
ninna kaDige mana omme pOgadu kRuShNa
enna bALu svAmi innu hIgAyitu
innu nA more iTTe guruSrISaviTThala || 2 ||

triviDitALa

nInEve sarvaj~ja nAnu pELuvadEnu
nInEve svAtaMtra EnAyitenniMda
nInEve prErisi nuDisida kAraNadi
nAnu nuDidenayyA karuNAnidhe
nIne ennaya dEhadoLage horage iddu
nAnA vyApArava mADisuvAgale
nAne mADuveneMba AhaMkAra biDisinnu
nIne mAbuveneMba smRutiyanittu
SrInAtha dayadiMda nAnA ThAvinalli
enage ninnaya rUpa tOrisayyA
ninnaya smRutiye BAgya vismRuti eMdigU bEDa
mInakEtana janaka guruSrISaviTThala
sAnurAgadi kAyo SaraNeMbe ninage || 3 ||

aTTatALa

iMdirApati ninna poMdidavara pAdA
poMdidava nAnu
taMde ninnaya manasige taMdu pAlisu
hiMdina janumadi oMdu sAdhana kANe
iMdina janumadi Adaddu iShTE
muMdEnu mADipeyo nIne balli
maMdamatiga nAnu taMde ninnaya nAmA A –
naMdadiMdali nuDiso idane bEDikoMbe
saMdarSana hRudaya maMdiradallittu
poMdikoMDiro guruSrISaviTThalA || 4 ||

AditALa

kRuShNA ennoDiyane sRuShTAdyaShTakarta
puTTide nA munne puTTiseMdu
baTTine dainyava viTThala dayadi nI
puTTisi dEhava koTTu rakShisalille
eShTeShTu divasakke aShTaShTe sAdhana mADisi
SiShTara daya puTTuvaMte mADi
SiShTASiShTa ninna nAma nAligeyalli
GaTyAgi naMbade BraShTa j~jAnavannu
kaTTikoMbenayyA
iShTamUruti dayaviTTu poreyo
guruSrISaviTThalA || 5 ||

jate

poreva dhoreyu narahariyu tA iralAgi
aremoregoLalEke guruSrISaviTThalA ||

SrI guruSrISaviTThaladAsara kiruparicaya :

rAyacUru jilleya gaMgAvati tAlUkina kanakagiri grAmadalli janisida SrInarasiMhadAsaru , SrIjagannAthadAsaralli 12 varSha SiShyatva vahisi avarannu sEvisidaru. gurugaLu anugrahisi , avara Aj~jeya prakAra SrI SrISaviThalAMkita huMDEkAra dAsariMda ” guruSrISaviThala ” eMba aMkita paDedaru. gaMgAvati tAlUkina kuMTOji eMba grAmadalli iddudariMda ivarige kuMTOji dAsareMdU kareyuvaru. ivaru 6 suLAdigaLannu racisiddAre. saMKye kaDimeyAdarU asaMKya aMtaHSakti I suLAdigaLalli aDagide.

Leave a Reply

Your email address will not be published. Required fields are marked *

You might also like

error: Content is protected !!