Shri Venkatesha parijata

Composer : Shri Anantadreesharu

By Smt.Shubhalakshmi Rao

Explanation by Shri Kesava Rao Tadipatri

Adhyaya 1

Adhyaya 2

Adhyaya 3

Adhyaya 4

Adhyaya 5

Adhyaya 6

Adhyaya 7

Adhyaya 8

Adhyaya 9

Adhyaya 10

Adhyaya 1

ಶ್ರೀಪತಿರ್ಭೃಗುಣಾ ಸರ್ವಲೋಕೋತ್ಕೃಷ್ಟ ಇತೀಡಿತಃ |
ಗೊಕ್ಷೀರಸಿಕ್ತ ಸರ್ವಾಂಗೋ ವಲ್ಮೀಕಸ್ಥಃ ಶುಭಂ ದಿಶೇತ್ ||

ರಾಗ- ಸೌರಾಷ್ಟ್ರ, ತಾಳ- ತ್ರಿಪುಟ

ಶ್ರೀಸಹಿತ ಶ್ರೀವೆಂಕಟೇಶಗೆ ಸಾಸಿರಾನತಿ
ಮಾಡಿ ಬೇಡುವೆ | ಭಾಷೆಭಾಷೆಗೆ ಯೆನಗೆ
ಬುದ್ಧಿ ವಿಕಾಸ ಕೊಡು ಎಂದು |
ಆಶು ಕೊಲ್ಹಾಪುರದ ದೇವಿಗೆ ಬೇಸರದೆ
ಕರಮುಗಿದು ಬೇಡುವೆ |
ದಾಶರಥಿ ನಿಜದಾಸ ಕಲ್ಹೋಳೀಶಗೊಂದಿಸುವೆ || ೧ ||

ಶ್ರೀಜಯಾರ್ಯರ ಮೊದಲು ಮಾಡಿ
ರಾಜಗುರುಸಂತತಿಗೆ ನತಿಸುವೆ |
ಐಜಿ ವೆಂಕಟರಾಮವರ್ಯರ ಪೂಜೆಯಲ್ಲಿರುವೆ |
ಶ್ರೀಜಯಾರ್ಯ ಮುನಿಂದ್ರ ಸೇವೆಗೆ
ಈ ಜಗತಿಯಲಿ ಜನಿಸಿ ಅವರಾ |
ಪೂಜಿತಾಖ್ಯವು ವಹಿಸಿದವರನ ಪೂಜಿಸುವೆ ಬಿಡದೆ || ೨ ||
ನಿತ್ಯದಲಿ ಕೃಷ್ಣಾರ್ಯರೆಂಬುವ
ಉತ್ತಮರ ಪದ ಪೊಂದಿ ಆ ಗುರು |
ಪುತ್ರರಾಗಿರುವ ವಿಷ್ಣುತೀರ್ಥರನ ನತಿಸಿ ಮತ್ತೆ |
ಸ್ವೋತ್ತಮರಾಗಿ ಇರುವ ಸಮಸ್ತ
ಗುರುಗಳಿಗೊಂದಿಸುತ ಸ | ರ್ವೋತ್ತಮಾನಂತಾದ್ರಿ
ರಮಣನ ಮಹಿಮೆ ಪೇಳುವೆನು || ೩ ||

| ವಚನ |

ಪೂರ್ವದಲಿ ಭೃಗುಮುನಿಗೆ
ಸರ್ವಮುನಿಗಳು ಬುದ್ಧಿ
ಪೂರ್ವಕ್-ಹೀಂಗ್ ಹೇಳಿದರು ಗರ್ವಾದಿರಹಿತ
ಸತ್ಸರ್ವಗುಣ ಸಂಪೂರ್ಣ, ಸರ್ವ ದೇವೋತ್ತಮನು

ಇವನ್ಯಾರೆಂದು ತಿಳಿ ಸರ್ವ ಲೋಕದಲಿ |
ಸರ್ವರಿಗೆ ಹಿತಕ ಮೃದು ಪೂರ್ವ
ವಚನವನು ಕೇಳಿ ಪೂರ್ವದಲಿ ಪೋದ
ತನ್ನ ಪೂರ್ವಿಕನ ಮನೆಯಲ್ಲಿ ಗರ್ವ
ಅವನಲಿ ಕಂಡು ಗರ್ಕನೆ ತಾ ತಿರುಗಿ
ಪಾರ್ವತೀಶನು ಎಲ್ಲಿ ಇರುವ ನಡೆದನಲ್ಲಿ || ೧ ||

ಕೂಡಿ ಪಾರ್ವತಿಯಿಂದ ಕ್ರೀಡೆಯಿಂದಿರುವವನ
ನೋಡಿದನು ಅಗಲ್ಲಿ ಪ್ರೌಢೆ ಪಾರ್ವತಿಯು ಮಾತಾಡಿದಳು
ನಾಚುತಲಿ ಬೆಡ ಬಿಡು ಪ್ರಾಣೇಶ ನೋಡು ಭೃಗು ಮುನಿ ಬಂದ
ಬೇಡಿಕೊಂಬುವೆನೂ |
ಗಾಢನೆ ಕಣ್ಕೆಂಪು ಮಾಡಿ ಮುನಿಯಿದ್ದಲ್ಲಿ ಓಡಿಬಂದನು
ಆಗ ನೋಡಿ ಭೃಗು ಶಾಪ ಈಡಾಡಿದನು ನಿನ್ನ ಪೂಜೆಯು
ಬೇಡ ಈ ಲೋಕದಲಿ ನೋಡಿ ಲಿಂಗವ ಪೂಜೆ ಮಾಡಲೀ ಜನರು ||೨||

ಕೊಟ್ಟು ಈ ಪರಿ ಶಾಪ ಮೆಟ್ಟಿದನು
ವೈಕುಂಠ ಥಟ್ಟನೆ ಮತ್ತಲ್ಲಿ ಧಿಟ್ಟ
ದೇವನ ಕಂಡ ಪಟ್ಟದರಸಿಯ ಕೂಡಿ
ಧಿಟ್ಟಾಗಿ ಮಲಗಿರಲು ಸಿಟ್ಟಿಲೊದ್ದನು ಒಳ್ಳೆ ಪೆಟ್ಟು ಅವನೆದೆಗೆ |
ಪೆಟ್ಟು ತಾಗಲು ನೋಡಿ ಥಟ್ಟನೆ ಹರಿಯೆದ್ದು
ಬಿಟ್ಟು ಮಂಚವನಿಳಿದು ಮುಟ್ಟ ಮುನಿ ಪಾದವನು
ಇಟ್ಟು ಶಿರವನು ಅಲ್ಲಿ ಗಟ್ಟಿ ಆಲಿಂಗನವ ಕೊಟ್ಟು
ಮಾತಾಡಿದನು ತುಷ್ಟನಾಗಿ || ೩ ||

ರಾಗ- ಶಂಕರಾಭರಣ, ತಾಳ- ಅಟ

ಯಾಕೆನ್ನ ಮೇಲಿಷ್ಟು ಸಿಟ್ಟು ಭೃಗುಮುನಿ,
ಯಾಕೆನ್ನ ಮೇಲಿಷ್ಟು ಸಿಟ್ಟು |
ನಾ ಕೊಡುವೆನು ನಿನಗೀ ಕಾಲಕೆ ನೀ,
ಬೇಕಾದ್ದು ಬೇಡು ಯಥೇಷ್ಟ |ಪ|
ಸದ್ದು ಇಲ್ಲದೆ ನಾ ಇದ್ದ ಮನೆಗೆ ಬಂದು
ಒದ್ದ ಕಾರಣ ಪೇಳಿಷ್ಟು |
ಸಿದ್ಧಾಗಿ ನೀನು ಬಂದದ್ದು ನಾ ಅರಿಯೆನು,
ಬುದ್ದಿ ತಪ್ಪಿತು ಕ್ಷಮಿಸಿಷ್ಟು || ೧ ||

ಛಂದಾಗಿ ಕಾಠಿನ್ಯದಿಂದಿದ್ದ ಎನ್ನೆದೆ
ನೊಂದಿಲ್ಲ ಎಳ್ಳ ಕಾಳಷ್ಟು ||
ಇಂದು ಈ ಕೋಮಲ ಸುಂದರ ಪಾದವು
ನೊಂದುಕೊಂಡಿದ್ದಾವು ಎಷ್ಟು || ೨ ||
ಧರೆಯೊಳು ದ್ವಿಜರಿಗೆ ಸರಿ ಯಾರು ಇಲ್ಲೆಂದು,
ಬರುವುದು ಭಯ ಭಾಳಷ್ಟು |
ವರದಾನಂತಾದ್ರೀಶನ ಪರಮ ಭಕ್ತರಿಗೆ,
ಬರಬಾರದೆಂದಿಗು ಸಿಟ್ಟು || ೩ ||

| ವಚನ |

ಇಂದಿರಾಪತಿಯು ಹೀಗೆಂದು ಮುನಿ
ಪಾದಗಳ ಛಂದದಲಿ ಒತ್ತಿ ತ್ವರದಿಂದ
ಉಷ್ಣೋದಕವ ತಂದು ತೊಳೆಯುತ
ಭಕ್ತಿಯಿಂದ ಶಿರದಲಿ ವಹಿಸಿ ಇಂದು
ಪಾವಿತನಾದೆನೆಂದ ಹರುಷದಲೀ |
ಮುಂದೆ ಭೃಗು ಮುನಿಯು ಮುಕುಂದನ
ಕೊಂಡಾಡಿ ಬಂದ ಹರುಷದಲಿ ಅಲ್ಲಿಂದ
ಭೂಲೋಕದಲಿ ಇಂದಿರೇಶನೆ ಸರ್ವರಿಂದಧಿಕ
ಸತ್ಯ ತಿಳಿರೆಂದ ಮುನಿಗಳಿಗೆಲ್ಲ ಮುಂದೆ
ವೈಕುಂಠದಲಿ ಇಂದಿರಾದೇವಿ ಗೊವಿಂದನಾಟವ
ಕಂಡು ಅಂದಳೀ ಪರಿಯು |೧|

ರಾಗ- ಮೊಹನಕಲ್ಯಾಣಿ, ತಾಳ- ಆದಿ

ಹರಿಯೆ ಪೋಗುವೆ ನಾನು ಮುನ್ನಿರುತಿರು ಒಬ್ಬನೆ ನೀನು |
ತಿರುಕನಾಗಿ ಇರುತಿರುವ ಭೂಸುರನು,
ಭರದೊಳೊದ್ದ ನಿನ್-ಹಿರಿಯಾತನೇನೊ || ಪ ||

ನಿನ್ನ ಶ್ರೀವತ್ಸವಿದು, ಬಹು, ಮಾನ್ಯವು
ಎಂದೆನಿಸುವುದು |
ಎನ್ನ ಆಲಿಂಗನವನ್ನು ಕೊಂಬುವದು,
ಇನ್ನು ಈ ಸ್ಥಳವು ಅಮಾನ್ಯವಾಗಿಹುದು || ೧ ||

ಬಡವ ಬ್ರಾಹ್ಮಣರಿಂದ ನೀ ಕಡೆಗೆ
ಕೂಡಿರು ಛಂದ |
ಮಡದಿಯ ಹಂಬಲ ಬಿಡು ದೂರದಿಂದ,
ತಡಮಾಡದೆ ನಾ ನಡೆದೆ ಗೋವಿಂದ || ೨ ||

ಇನ್ನೆನ್ನ ಗೂಡವ್ಯಾಕೆ, ಬಿಡು, ನಿನ್ನ
ಸಂಗತಿ ಸಾಕೊ |
ಎನ್ನ ವೈರಿಗಳ ಮನ್ನಿಸುವ್ಯಾಕೊ,
ನನ್ನಿಚ್ಛೆಯಲಿ ನಾ ಇನ್ನಿರಬೇಕೊ || ೩ ||

ಹಿಂದಕೆ ಕುಂಭೋದ್ಭವನು ಎನ್ನ ತಂದೆಯ
ನುಂಗಿದ ತಾನು |
ಮುಂದೆ ಮೂತ್ರ ಭರದಿಂದ ಬಿಟ್ಟಿಹನು,
ಅಂದಿಗೆ ಎನಗಾನಂದವು ಯೇನೊ ||೪||

ಮತ್ತೆನ್ನ ಸೂಸೆಗವರು ಬಹು, ಭಕ್ತಿಲಿ
ಪೂಜಿಸುವವರು |
ನಿತ್ಯ ನಾಲಿಗೆಯಲಿ ಪೊತ್ತು ಕೊಂಡಿಹರು
ಮತ್ತೆ ವೈರಿಯವರ್-ಹೊರತು ಇನ್ಯಾರೊ || ೫ ||

ಹುಡುಗ ಬುದ್ಧಿಯು ಎಂದು ನಾ,
ಕಡೆಗೆ ಬಲ್ಲೆನು ನಿಂದು |
ಮಡುವು ಧುಮುಕೀ ಕಲ್-ಫೆಡೆಯ ಮೆಟ್ಟಿದುದು
ಪಿಡಿದು ಭೂಮಿಯ ಕಂಭ ಒಡೆದು ಬಂದಿಹುದು || ೬ ||

ಬಡವ ಬ್ರಾಹ್ಮಣನಾದಿ ಚಾಪ
ಕೊಡಲಿಯ ಕೈಯಲಿ ಪಿಡಿದೀ,
ಮಡದಿಯ ಕಳಕೊಂದು ತುಡುಗ ನೀನಾದಿ,
ಹಿಡಿದು ಬತ್ತಲೆ ಖೊಟ್ಟಿ ಕಡವನೇರಿದಿ || ೭ ||

ಎಷ್ಟೆಂಥೇಳಲಿ ನಿನಗೆ ನೀನೆಷ್ಟು ಮಾಡಿದಿ ಹೀಗೆ |
ಅಷ್ಟು ಮನಸಿನೊಳಗಿಟ್ಟೇನು ಆಗ,
ಕಟ್ಟಕಡೆಗೆ ಬಲು ಸಿಟ್ಟು ಬಂತೆನಗೆ || ೮ ||

ಎಲ್ಲರಿಗುತ್ತಮ ನೀನು ಎಂದಿಲ್ಲಿದ್ದೆ ಮೋಹಿಸಿ ನಾನೂ |
ವಲ್ಲೆ ಇನ್ನ ಕರವೀರದಲ್ಲಿರುವೆನು |
ಬಲ್ಲಿದನಂತಾದ್ರಿಯೊಳಿರು ನೀನು || ೯ ||

ರಾಗ- ಸಾರಂಗ, ತಾಳ- ಆದಿ

ಸಿರಿದೆವಿಯು ಹರಿ ಕೂಡೀಪರಿ ಮಾಡಿ ಕಲಹ |
ತ್ವರದಿಂದ ನಡೆದಾಳು ಕರವೀರಪುರಕೆ |
ಪರಮಾತ್ಮನು ತಾ ಮುಂದೀಪರಿ ಚಿಂತಿಸುತಿಹನೂ |
ಸಿರಿಯಿಲ್ಲದ ವೈಕುಂಠ ಸರಿಬಾರದು ಯೆನಗೆ || ೧ ||

ಏನು ಮಾಡಲಿ ಲಕ್ಶ್ಮೀಹೀನನಾದೆನು ನಾನೂ ,
ದೀನನಾದೆನು ಹಾ ನನ್ನೊಳು ನಾನೆ ನೊಂದೂ |
ಪ್ರಾಣದರಸಿಯ ನಾನು ಕಾಣುವೆನೆಂದು,
ಪ್ರಾಣ ನಿಲ್ಲದು ಪಟ್ಟದ ರಾಣಿಯ ಬಿಟ್ಟು || ೨ ||

ಇನ್-ಹ್ಯಾಂಗೆ ಇರಲಿ ನಾ ಇನ್ನಾಕೆಯ ಹೋರ್ತು,
ಕಣ್ಣಿಗೆ ವೈಕುಂಠಾರಣ್ಯ ತೋರುವದು |
ಇನ್ನೆಲ್ಲ್ಹೋಗಲಿ ಎಂದು ಚೆನ್ನಾಗಿ ತಿಳಿದು,
ಮುನ್ನ ಧರೆಯಲಿ ಬಂದ ತನ್ನಿಂದೆ ತಾನು || ೩ ||

ಶ್ರೀವೈಕುಂಠಕಿಂತ ಶ್ರೀವೆಂಕಟಗಿರಿಯು |
ಕೇವಲಾಧಿಕವೆಂದು ಭಾವಿಸಿ ಈ ಪರಿಯು |
ಆವತ್ತಿಗೆ ಬೇಗಲ್ಲೆ ತಾ ವಾಸಕೆ ನಡೆದ,
ದೆವ ತಿಂತ್ರಿಣಿಯೆಂಬೊ ಆ ವೃಕ್ಷವ ಕಂಡ || ೪ ||

ಅಲ್ಲೊಂದು ಇರುವುದು ಬಲ್ಲಿದ ಹುತ್ತ,
ಅಲ್ಲಿ ತಾ ಅಡಗಿದ ಮೆಲ್ಲನೆ ಪೋಗೀ |
ಅಲ್ಯಾ ದೇಶದಲೊಬ್ಬ ಚೋಳಾಖ್ಯನು ರಾಜ,
ಎಲ್ಲರಿಂದಲಿ ತನ್ನ ಪುರದಲ್ಲೆ ಇರುವಾ || ೫ ||

ಅವನ ಮನೆಯಲಿ ಬಂದಾ ಭುವನಾಧಿಕ ಬ್ರಹ್ಮಾ,
ಶಿವನ ಕರುವಿನ ಮಾಡಿ ತಾನಾಕಳುವಾಗಿ |
ಅವನ ತಾಯಿಯು ಲಕ್ಶ್ಮಿ ಅವನ ಮಾರಿದಳು,
ಅವಳು ಬೇಡಿದ್ದು ಕೊಟ್ಟು ಅವನೀಶ ಕೊಂಡಾ || ೬ ||

ಕರೆಸಿಕೊಂಡಷ್ಟು ಹಾಲು ಕರೆವುದು ನಿತ್ಯ
ವರ ಸಾಧುಗುಣದಿಂದ ಇರುತಿಹುದು ಮತ್ತೆ |
ಎರಡು ಸಾವಿರ ಗೋಗಳ ಸರಸಾಗಿ ಕೂಡಿ,
ಚರಿಸಿ ಬರುವುದು ವೆಂಕಟಗಿರಿಗ್-ಹೋಗಿ ನಿತ್ಯಾ || ೭ ||

ಮುಂದಾ ಧೇನುವು ಧ್ಯಾನಕೆ ತಂದು ನಾ ಇಲ್ಲಿ,
ಬಂದ ಕಾರಣವೇನು ಎಂದು ಸ್ಮರಿಸುತಲಿ |
ಇಂದಿರೇಶಗೆ ಭಕ್ತಿಯಿಂದ ಕ್ಷೀರವನು,
ಛಂದಾಗಿ ಕರೆವುದು ಬಂದು ಹುತ್ತಿನಲಿ || ೮ ||

ಹಿಂಡಾಕಳುಗಳ ಕೂಡಿಕೊಂದು ಬರುವುದು,
ಹಿಂಡದು ಕರುವಿನ ಕೊಂಡು ಒಂದಿನವು |
ಕಂಡು ಈ ಪರಿ ರಾಜನ ಹೆಂಡತಿಯು ಆಗ
ಚಂಡ ಕೋಪದಿ ಗೋಪನ ಕಂಡಂದಳು ಹೀಗೆ ||೯||

| ವಚನ |

ಏನೊ ಎಲೆ ಗೋಪಾಲ ಧೆನುವಿನ ಪಾಲ ನೀ ಎನು
ಮಾದುವಿ ನಿತ್ಯ ನೀನೆ ಕೊಂಬುವಿಯೋ, ಅಥವಾ
ತಾನೆ ಕುಡಿವುದೊ ವತ್ಸೇನು ಮಾಡುವದು ,
ಬೇಗನೆ ಪೇಳಿಗ, ನಾನು ಒಳ್ಳೆವಳಲ್ಲ ಪ್ರಾಣ
ಕೊಂಬುವೆನು | ಧೇನುಪನು ಈ ಮಾತು ಮೌನದಿಂದಲಿ
ಕೇಳಿ ತಾನು ಗಾಬರಿಗೊಂಡು ಏನು ಬಂತಿದು
ಎನಗೆ ಏನು ಮಾಡಲಿ ಎಂದು ಧ್ಯಾನಿಸುತ
ಆ ರಾಜ ಮಾನಿನಿಗೆ ನುಡಿದ ಬಹು ದೀನನಾಗಿ |೧|

ರಾಗ- ದೇಶಿ , ತಾಳ- ಅಟ

ಅರಿಯೆ ನಾನಮ್ಮಾ ನಿಮ್ಮರಮನೆ ಸುದ್ದಿಯನು, ಅರಿಯೆ |
ತುರುಗಳ ಕಾಯ್ಕೊಂಡು ಬರುವೆ ನಾ ಇದ ಹೋರ್ತು || ಪ ||

ಕರೆಸಿ ಕೊಂಬುವರ್ಯಾರೊ ಕರುವನು ಕಟ್ಟುವರ್ಯಾರೊ, ಅರಿಯೆ |
ಬರಿದೆ ನೀ ಯೆನ್ನ ಮೇಲೆ ಹರಿಹಾಯುವದ್ಯಾಕೆ, ಅರಿಯೆ || ೧ ||

ಕರುವದು ತಾನುಂಬೋದೊ ಪರರ ಪಾಲಾಗುವುದೋ, ಅರಿಯೆ |
ಸರಸಾಗಿ ತಿಳಿ ನೀನು ನೆರೆ ಹೊರೆಯವರನ, ಅರಿಯೆ || ೨ ||

ಕಳ್ಳತನವ ಮಾಡಿ ಸುಳ್ಳು ಮಾತಾಡೋದು ಅರಿಯೆ |
ಬಲ್ಲಿದಾನಂತಾದ್ರಿ ವಲ್ಲಭ ತಾ ಬಲ್ಲಾ, ಅರಿಯೆ ನಾನಮ್ಮ || ೩ ||

| ವಚನ |

ಪಟ್ಟದರಸಿಯು ಗೋಪನಷ್ಟು ಮಾತನು ಕೇಳಿ
ಶಿಟ್ಟು ಸಹಿಸದೆ ಕ್ರೂರ ದೃಷ್ಟಿಯಿಂದಲಿ ನೊಡಿ
ಇಷ್ಟು ಮಾತಿವಗ್ಯಾಕೆ ಕುಟ್ಟಿರೆನ್ನುತ ಒಳ್ಳೆ
ಘಟ್ಟಿ ಚಬುಕಿಲಿ ಬಹಳ ಪೆಟ್ಟು ಹೊಡೆಸಿದಳು |

ಪೆಟ್ಟಿಗಂಜುತ ಗೊಪ ಥಟ್ಟನೆ ಮರುದಿನವು
ಕಟ್ಟಿದಾಕಳ ಕಣ್ಣ ಬಿಟ್ಟು ಬೆನ್-ಹತ್ತಿದನು
ಬಿಟ್ಟಂಥ ಆಕಳವು ನೆಟ್ಟನೆ ಗಿರಿಗ್-ಹೋಗಿ
ಬಿಟ್ಟಿತಾ ಹುತ್ತಿನಲಿ ಅಷ್ಟು ಪಾಲನೂ || ೧ ||

ಶಿಟ್ಟಿಲದರ ನೋಡಿ ದುಷ್ಟ ಗೋಪಾಲ
ತಾ ಮುಟ್ಟಿ ಕೊಡಲಿಯ ಯೆತ್ತಿ ಕುಟ್ಟುವ
ಸಮಯದಲಿ ಥಟ್ಟನೆ ಹರಿಯು ಆ ಪೆಟ್ಟು
ತನ್ನಲಿ ಕೊಂಡ ದೃಷ್ಟಿಂದ ತನ್ನವರ ಕಷ್ಟ ನೋಡದಲೆ,
ಸೃಷ್ಟಿ ಕರ್ತನ ಶಿರದಿ ತಟ್ಟಿ,
ಪುಟ್ಟಿತು ರಕ್ತ ನೆಟ್ಟನೆ ಏಳು ತಾಳ ವೃಕ್ಶ
ಪರಿಮಿತಿಯಾಗಿ ಎಷ್ಟೊಂದು ಭೀತಿಕರ ಶ್ರೇಷ್ಠ ಶಬ್ದ್ವಾದುದು
ಅಷ್ಟು ನೋಡುತ ಪ್ರಾಣ ಬಿಟ್ಟ ಗೋಪಾಲ || ೨ ||

ಮುಂದಕಾಕಳು ಗಿರಿಯಿಂದ ಧರೆಗಿಳಿವುತಲೆ
ಬಂದು ರಾಜನ ಸಭೆಯ ಮುಂದೆ
ಹೊರಳಾಡುವುದು ಮುಂದೆ ನೃಪ ಕಂಡು
ಹೀಗೆಂದ ಈ ಪರಿಯಾಕೆ ಹೊಂದಗೂಡಿಸಿಡಿರಿ ಗೋವೃಂದದೊಳಗಿದನು |
ಅಂದ ನುಡಿ ಕೇಳಿ ಅಲ್ಲಿಂದ ಪರಿಚಾರಕನು
ಮುಂದಕಾಕಳ ನಡಿಸಿ ಹಿಂದೆ ತಾ ಹೋಗುತಲೆ ಅಂದಿಗಲ್ಲಾದದ್ದು
ಚಂದದಲಿ ನೋಡಿ ಭಯದಿಂದ ಅರಸಗೆ ಓದಿ ಬಂದು ಪೇಳಿದನು || ೩ ||

ಅರಸ ಕೇಳುತ ಬೇಗ ತರಿಸಿ ನರಯಾನವನು
ವಿರಸದಿಂದಲಿ ಕುಳಿತು ಕರಿಸಿ ಸೈನ್ಯವನೆಲ್ಲ
ಚರಿಸುತಲೆ ಆ ರಕ್ತ ಸುರಿಸುವ ಸ್ಥಳ ನೋಡಿ
ಸ್ಮರಿಸಿ ತಿಳಿಯದೆ ದಣಿದು ವರಸಿದನು ಬೆವರು |
ಅರಸು ಬಂದದ್ದು ನೋಡಿ ಸರಸಿಜೊದ್ ಭವ
ಪಿತನು ಸರಸರನೆ ಹೊರಗ್-ಹೊರಟ,
ವರಸರ್ಪ ಬಂದಂತೆ ಶಿರಸಿನಲಿ ಅಂಗೈಯನಿರಿಸಿ ಘಾಯವನೊತ್ತಿ
ಸುರಿಸುತಲೆ ಕಣ್ಣೀರು ವರೆಸುತಲೆ ನುಡಿದಾ || ೪ ||

ರಾಗ- ನೀಲಾಂಬರಿ, ತಾಳ- ಅಟ

ಕೇಳು ನೀ ಯೆಲೋ ಪಾಪಿ ಚೋಳರಾಜನೆ,
ಇದನು ಹೇಳ ಕೇಳದ ಇಂಥಾ ವೇಳೆಯು
ಬಂತೆನಗೆ || ಪ ||
ಮಂದಮತಿಯೆ ನೀ ಮದಾಂಧನಾಗಿರುವಿಯೋ,
ಇಂದು ಬಡವರ ಸುದ್ದಿ ಒಂದು ಬಲ್ಲೇನೋ |
ತಂದೆತಾಯಿಗಳಿಲ್ಲ ಬಂಧುಬಳಗವಿಲ್ಲ, ಇಂದು
ಯೆನಗಾರಿಲ್ಲವೆಂದು ಮಿಡುಕುವೆನೋ || ೧ ||

ಎಡತೊಡೆಯಲಿ ಒಪ್ಪುವ ಯೆನ್ನ ಮಡದಿಯು
ಎನ್ನನು ಬಿಟ್ಟು, ಸಿಡಿದು ಸಿಟ್ಟಿಲಿ ದೂರ
ನಡೆದಳು ನಾ ಇಲ್ಲೆ | ಗಿಡದಾಶ್ರಯದಲಿರುತಿರಲು
ಬಿಡದೆ ನಿನ ಗೋಪಾಲಾ, ಕೊಡಲಿಯ ಪಿಡಿದು ಎನ್ನ

ತಲೆಯ್ ವಡೆದನಯ್ಯಯಯ್ಯೋ || ೨ ||

ಲೇಪಿಸಿ ಮೈಯಲಿ ರಕ್ತವು ವ್ಯಾಪಿಸಿತಾನಂತಾದ್ರಿ,
ಈ ಪರಿ ದುಃಖವ ನಾನು ನಿರೂಪಿಸಲಿನ್ನೆಷ್ಟು, ತಾಪಸರೊಡೆಯನು
ನಾ ಸಂತಾಪಿಸುತಲೆ ನಿನ್ನೊಳು,
ಕೋಪಿಸಿ ದುಃಖವ ಸಹಿಸದೆ ಶಪಿಸುವೆನು ಬಿಡದೆ |೩|

ರಾಗ – ಯರಕಲಕಾಂಬೋದಿ, ತಾಲ- ಬಿಳಂದೀ

ಹಾ ಚೋಳಾಧಿಪನೆ ಕಲಿ ಆಚರಿಸುವ ಪರ್ಯಂತ ನೀ ಚರಿಸುತಿರು
ಹೋಗು ಪಿಶಾಚನು ಆಗಿನ್ನು |
ಈ ಚಂಡಾಗಿಹ ಶಪವು ತಾ ಚಿತ್ತಿಡುತ ಕೇಳಿ, ಆ ಚೋಳಾಧಿಪ
ಬಿದ್ದನು ಮೂರ್ಛಿತನಾಗ್ಯಲ್ಲೆ || ೧ ||

ಎರಡು ಘಳಿಗೆಯ ಮೇಲೆ ಸ್ಮರಣೆಯಿಂದಲೆ ಎದ್ದು,
ತರತರನೆ ನಡುಗುತ ಈ ಪರಿ ಮಾತಾಡಿದನು |
ಹರಿಯೆ, ನೀ ಎನಗ್ಯಾಕೆ ಈ ಪರಿ ಶಾಪವ ಕೊಡುವಿ,
ಅರಿತು ಎನ್ನಪರಾಧವು ಇರುವುದು ಏನ್-ಹೇಳೊ || ೨ ||

ಈ ಪರಿ ಮಾತನು ಕೇಳಿ ಆ ಪರಮಾತ್ಮನು ಆಗ,
ಪಾಪಿಗಳನು ಮೋಹಿಸುತಲೆ ಈ ಪರಿ ತಾ ನುಡಿದ,
ನಾ ಪಾಪಿ ನಾ ಖಳ ಮುಂಗೋಪಿ ನಾ ನಿನಗೀಗ,
ಶಾಪಿಸಿ ತಿಳಿಯದೆ ಪಶ್ಚಾತ್ತಾಪವ ಪಡುವೆನೂ || ೩ ||

ನೆತ್ತಿಯ ಘಾಯಕೆ ನಾ ಮೈಮರೆದು ಪರವಶನಾಗಿ
ವ್ಯರ್ಥ ಶಾಪವ ಕೊಟ್ಟೀಹೊತ್ತು ಅಯ್ಯಯ್ಯೊ |
ಸತ್ಯಸಂಕಲ್ಪಕ್ಕೆ ಮತ್ತುಪಾಯವು ಇಲ್ಲ,
ಮಿಥ್ಯವಾಗದು ಶಾಪ ಸತ್ಯವು ತಿಳಿ ನೀನು || ೪ ||

ಆಕಾಶರಸನು ಕನ್ಯಾ ತಾ ಕೊಡುವನು ಮುಂದೆನಗೆ,
ಶ್ರೀಕರ ಪದ್ಮಾವತಿ ಯೆಂದಾಕೆಯ ನಾಮವಿದು |
ಆ ಕಾಲಕೆ ತಿಳಿ ಮತ್ತೆ ನಾನಾ ಅನೇಕ ರತ್ನಗಳುಳ್ಳ
ಶ್ರೀಕಿರೀಟವ ಕೊಡುವ ತೂಕವು ಬಹಳದಕೆ || ೫ ||

ಎಂದಿಗೆ ಶುಕ್ರವಾರ ಬಂದಿಹುದು ನಾ ಬಿಡದೆ,
ಅಂದಿಗೆ ಆ ಕಿರೀಟವು ಛಂದದಿ ಧರಿಸುವೆನೂ |
ನೊಂದುತಲಿ ಆಗ ಕಣ್ಣಿಂದ ತುಳುಕಲು ನೀರು
ಅಂದಾರುಗಳಿಗೆ ಆನಂದವಾಗಲಿ ನಿನಗೆ || ೬ ||

ಹಿಂಗೆಂದಾತನ ಕಳುಹಿ ಆಗನಂತಾದ್ರೀಶ,
ಹೀಗೆಂದು ತನ್ನ ಮನದಲಿ ಚಿಂತಿಸಿದ,
ಈ ಘಾಯವು ಮುಂದಿನ್ನು ಹ್ಯಾಗೆ ಮಾಯುವದೆಂದು,
ಆಗಲ್ಲೆ ಸ್ಮರಿಸಿದನು ಬೇಗ ಬೃಹಸ್ಪತಿಯ || ೭ ||

| ವಚನ |

ಬಂದನಾ ದೇವಗುರು ಇಂದ್ರಲೋಕವ ಬಿಟ್ಟು
ಅಂದಿಗಾ ಕ್ಷಣ ಹರಿಗೆ ಅಂದನೀಪರಿ ತಾನು
ಇಂದಿರೇಶನೆ ನೀನು ಇಂದೆನ್ನ ಕರೆದ್ಯಾಕೆ
ಮುಂದೆ ಕಾರ್ಯಗಳೇನು ಛಂದದಲಿ ಪೇಳೊ ||

ಅಂದ ಮಾತನು ಕೇಳಿ ಹಿಂದಾದ ವೃತ್ತಾಂತ
ಛಂದದಲಿ ತಿಳಿಸಿ, ಹೀಗೆಂದು ನುಡಿದನು
ಮತ್ತೆ ಒಂದೊಂದು ಹೀಗೆ ನೂರೊಂದು ಮಾತುಗಳ್ಯಾಕೆ
ಮುಂದೆ ತಲೆಗೌಷಧವು ಇಂದು ಪೇಳೆನಗೆ || ೧ ||

ಉತ್ತಮಾಗಿರಬೇಕು ನೆತ್ತಿಗ್-ಹಿತಕರವಾಗಿ ಮತ್ತಿ
ಸುಲಭಿರಬೇಕು ಸತ್ಯ ನೀ ಪೇಳು , ದುಡ್ಡೆತ್ತಿ
ಕೊಡುವಂತಾದ್ದು ಮತ್ತೆ ಪೇಳಲು ಬೇಡ ವಿತ್ತ
ಯೆನ್ನಲಿ ಇಲ್ಲ ಅತ್ಯಂತ ರಿಕ್ತಾ |

ಉತ್ತರಕೆ ಹೀಗೆ ಪ್ರತ್ಯುತ್ತರವ ನುಡಿದ
ಗುರು ಉತ್ತಮನೆ ನೀ ಬಹಳ ರಿಕ್ತನಾದರೆ
ಕೇಳು ಅತ್ತಿಯ ಹಾಲೊಳಗೆ ಮತ್ತೆ ಎಕ್ಕೆಯ
ಫಲದ ಹತ್ತಿಯನು ಕೂಡಿಸುತ ಒತ್ತಿ ಗಾಯದಲಿಟ್ಟು
ಸುತ್ತ ಮೇಲ್ವಸ್ತ್ರವನು ನಿತ್ಯ ಈ ಪರಿ ಮಾಡು
ಮತ್ತೇನು ಬೇಡ || ೨ ||

ಇಂಥ ಔಷಧಿಗೆ ಇದರಂತೆ ಪೇಳುವೆ
ಪಥ್ಯ ಶಂತಸಾಮೆಯ ಅನ್ನ ಜೇನ್ತುಪ್ಪ
ಸ್ವೀಕರಿಸು ಇಂಥ ಗಾಯಕೆ ನೀನು
ಚಿಂತೆ ಮಾಡಲು ಬೇಡ ಶಾಂತವಾಗುವದಯ್ಯ
ಶಾಂತಮೂರುತಿಯೆ |
ಇಂಥ ಮಾತಿಗೆ ಹರಿಯು ಸಂತೋಷ ತಾ ಪಟ್ಟು
ಅತ್ಯಂತ ತಲೆದೂಗಿ ಯೆನ್ನನ್ತರಂಗಕ್ಕೆ
ಒಪ್ಪುವಂಥಾದ್ದು ಪೇಳಿದಿ ಯೆಂತ ಸ್ತುತಿಸ್ಯವನು
ಅದರಂತೆ ಮಾಡುತಲೆ ತಾ ನಿಂತ ಗಿರಿಯಲ್ಲೆ || ೩ ||

ಹುತ್ತವೇ ಕೌಸಲ್ಯೆ ತಿಂತ್ರಿಣಿಯು ದಶರಥನು
ಮತ್ತೆ ಶೇಷಾದ್ರಿ ಸೌಮಿತ್ರಿಯೆಂದೆನಿಸುವನು ಸುತ್ತ
ವೇಂಕಟಗಿರಿಯು ಉತ್ತಮಾಯೊಧ್ಯ ಸರ್ವೊತ್ತಮನು
ತಾ ರಾಮಮೂರ್ತಿ ಆಗಿರುವ |
ಹುತ್ತವೇ ದೇವಕಿಯು ತಿಂತ್ರಿಣಿಯು ವಸುದೇವ
ಮತ್ತೆ ಶೇಷಾದ್ರಿ ಬಲಭದ್ರನೆಂದೆನಿಸುವನು
ಸುತ್ತ ವೇಂಕಟ ಗಿರಿಯು ಉತ್ತಮಾ ಮಧುರೆ
ಸರ್ವೋತ್ತಮನು ತಾ ಕೃಷ್ಣಮೂರ್ತಿ ಆಗಿರುವ || ೪ ||

ಸ್ವಾಮಿಪುಷ್ಕರಿಣಿಯೇ ನಾಮದಿಂದಲಿ ಯಮುನೆ
ಆ ಮಹಾ ಯದವಸ್ತೋಮವೆ ಮೃಗವೃಂದ
ಕಾಮಚರ ಧೇನುಗಳು ನೇರದಲಿ ಗೋಪಿಯರು
ತಾ ಮಹಾ ಗೋಪಾಲ ನಾಮದಿಂದಿರುವಾ |
ಆ ಮುಕ್ತ ಬ್ರಹ್ಮಾದಿಸ್ತೋಮ ಮೃಗಪಕ್ಷಿಗಣ
ಆ ಮಹಾ ವಾನರಸ್ತೊಮ ಸನಕಾದಿಗಣ ಪ್ರೇಮಕರ
ಗಿರಿರಾಜ ಭೂಮಿಯಲಿ ವೈಕುಂಠ ಶ್ರೀಮಹಾ
ಲಕ್ಷ್ಮೀಶ ತಾ ಮುಕ್ತಿಗೊಡೆಯ || ೫ ||

ಇಂದಿರೇಶನು ಹೀಗೆ ಒಂದೊಂದು ವರ
ರೂಪದಿಂದ ಬ್ರಹ್ಮಾದಿ ಸುರವೃಂದವನು ಕೂದಿ
ಆನಂದದಿಂದಾಡುವನು ಮುಂದೆ ಪರಿಮಿತಿ
ಇಲ್ಲವೆಂದು ಆತನ ಸ್ಮೃತಿಗೆ ತಂದು ನಮೋ ಯೆಂಬೆ |
ಛಂದಾದ ವೈಕುಂಠ ಮಂದಿರವು ಬಿಟ್ಟು ಸುರ-
ವಂದಿತಾನಂತಾದ್ರಿ ಮಂದಿರವ ಮಾಡಿ ಬಹು
ಮಂದಿಯನು ಸಲಹುವಾನಂದ ಮೂರುತಿಯ
ದಯದಿಂದ ಮುಗಿಯಿತು ಇಲ್ಲಿಗೊಂದು ಅಧ್ಯಾಯ || ೬ ||

ಮೊದಲನೆಯ ಅಧ್ಯಾಯವು ಸಮ್ಪೂರ್ಣವು |

Adhyaya 2

ಎರಡನೆಯ ಅಧ್ಯಾಯ

| ಶ್ರೀ ಭೂವರಾಹಾತ್ಮಕಾಯ ನಮ: |

ಸ್ವಾತ್ಮನಾಪಿ ವರಾಹೇಣ ದತ್ತವಾಸಸ್ಥಲೋಽಚ್ಯುತಃ |
ಮಾಯಾವಿ ಬಕುಲಾಲಾಭತುಷ್ಟೋಽವ್ಯಾದ್ವೇಂಕಟೇಶ್ವರಃ ||

ರಾಗ – ಸೌರಾಷ್ಟ್ರ, ತಾಳ- ತ್ರಿವಿಡಿ

ಒಂದು ದಿನ ವೇಂಕಟಪತಿಯು ತ್ವರದಿಂದ
ಅರುಣೋದಯದಲೆದ್ದನು, ಮುಂದಕೌಷಧವನ್ನು
ತರಬೇಕೆಂದು ತೆರಳಿದನು | ಅಂದಿಗಲ್ಲೇ ಭೂವರಾಹನು
ಬಂದು ಗರ್ಜನ ಮಾಡುತೆದುರಿಗೆ | ಮುಂದಕಲ್ಲೇ
ಅಡಗಿದನು ಭಯದಿಂದ ವೇಂಕಟನು || ೧ ||

ಛಂದದಲಿ ಅಡಗಿರುವ ದೇವನ ಬಂದು ಪಿಡಿದನು
ಭೂವರಾಹನು | ಮಂದಜನರನೆ ಮೋಹಿಸುತ ಹೀಗೆಂದ
ವೇಂಕಟಗೆ | ಇಂದು ನೀನ್ಯರೆಲೋ ನರಾಧಮ ಬಂದ
ಕಾರಣವೇನು ಇಲ್ಲಿಗೆ | ಮುಂದೆ ಪೋಗುವಿ ಯೆಲ್ಲಿ ನೀ ಯೆನ್ನ
ಮುಂದೆ ನುಡಿ ಬೇಗ || ೨ ||

ಮಾತ ಕೇಳುತಲೀ ಪರಿಯು ಬಹು ಸೋತು ಮಾತಾಡಿದನು ವೇಂಕಟ
ಮಾತುಮಾತಿಗೆ ಉಸಿರುಗಳೆವುತ ಆತುರನ ಪರಿಯೂ |
ಕೂತು ಪೇಳಿದನಾಗ ತನ್ನ ಪುರಾತನದ ಕಥೆಯೆಲ್ಲ ಆತಗೆ
ಈ ತಲೆಯ ಔಷಧಕೆ ಬಂದೆನು ನೀ ತಿಳಿಯೊ ಎಂದಾ || ೩ ||

ಅಪ್ಪಿಕೊಂಡೀ ಮಾತಿಗವನಾ ಮುಪ್ಪಿನವ ತಾ ಕ್ರೋಡರೂಪಿಯು
ತಪ್ಪದಲೆ ಕಣ್ಣೀರು ಸುರಿಸುತಲಿಪ್ಪ ದುಃಖದಲೇ |
ಅಪ್ಪಿಕೊಂಡಿಹ ಭೂವರಾಹನು ಅಪ್ಪ ವೇಂಕಟರಾಯರಿಬ್ಬರು |
ಒಪ್ಪಿ ತೋರಿದರಾಗ ಹಾಲಿಗೆ ಹೆಪ್ಪು ಕೊಟ್ಟಂತೆ || ೪ ||

ತಮ್ಮೊಳಗೆ ತಾವಿಬ್ಬರೂ ತಂತಮ್ಮ ಸುಖದುಃಖಗಳ
ಪೇಳುತ | ಸುಮ್ಮನಾಗದೆ ಮತ್ತೆ ನುಡಿದರು
ರಮ್ಯವಚನಗಳಾ | ನಮ್ಮ ನಿಮ್ಮ ಭೇಟಿ ಇದು
ಸಂಭ್ರಮವು ಇಬ್ಬರಿಗೆ ಆಯಿತು ಬಹು
ಸಮ್ಮತಾನಂತಾದ್ರಿಯೆಂಬುವ ರಮ್ಯ ಗಿರಿಯಲ್ಲೀ || ೫ ||

ರಾಗ: ಶಂಕರಾಭರ ತಾಳ- ಆದಿ

ಮುಂದಾ ವೇಂಕಟೇಶ ತಾ ಹೀಗೆಂದು ಮಾತನಾಡಿದನು |
ನಂದೊಂದು ಮಾತಿರುವುದು ಕೇಳೋ ಶ್ರೀಧರಣಿಕಾಂತ |
ಇಂದು ನಮ್ಮಿಬ್ಬರೊಳಗೆ ಒಂದು ಮಾತು ಉಳಿಯಲಿಲ್ಲ |
ನಿಂದೊಂದು ಮಾತೇನು ಪೇಳೋ ಶ್ರೀಲಕ್ಷ್ಮಿಕಾಂತ || ೧ ||

ಕಲಿಯುಗ ಪೋಗುವ ತನಕ ಚಲಿಸದೆ ನಿಂತಲ್ಲೆ ಇರುವೆ |
ಸ್ಥಳ ಒಂದಿಷ್ಟು ಕೊಡು ನೀ ಯೆನಗೆ ಶ್ರೀಧರಣಿಕಾಂತ |
ಸ್ಥಳದ ಸುದ್ದಿ ಒಂದು ಬಿಟ್ಟು ಉಳಿದ ಮಾತನಾಡೊ ನೀನು
ತಿಳಿದಿಹುದು ನಿನ್ನ ಬುದ್ಧಿ ಶ್ರೀಲಕ್ಷ್ಮಿಕಾಂತ || ೨ ||

ಎನ್ನ ಬುದ್ಧಿ ತೆಗೆಯದೀರು ಅನ್ಯರೀಗೆ ಹೇಳದೀರು
ನಿನ್ನವನಾಗಿರುವೆ ಕೇಳೊ ಶ್ರೀಧರಣಿಕಾಂತ |
ನನ್ನವನಾದರೆ ಒಳ್ಳಿತು ನಿನ್ನಿಂದ ಫಲವೇನೊ ಯೆನಗೆ,
ಹೊನ್ನು ಎಷ್ಟು ಕೊಡುವಿ ಪೇಳೊ ಶ್ರೀಲಕ್ಷ್ಮಿಕಾಂತ || ೩ ||

ಕೊಡುವೆ ನಾ ನಿನಗೇನು ಇನ್ನೂ ಬಡವ ನಾ ಮಡದಿಯ ಕಳದು |
ಅಡವಿ ಪಾಲಾಗಿದ್ದು ಅರಿಯೆಯಾ ಶ್ರೀಧರಣಿಕಾಂತ |
ಬಡವ ನೀನಾದರೆ ಏನು ಬಡವರಲ್ಲ ನಿನ್ನ ಭಕ್ತರು |
ಮುಡುಪು ತಂದ ಮೇಲೆ ಕೊಡು ನೀ ಶ್ರೀಲಕ್ಷ್ಮಿಕಾಂತ || ೪ ||

ಅದು ಒಂದು ಬಿಟ್ಟು ಹೇಳೊ ಮುಂದೆ ಪದುಮಾವತಿಯ ಕೊಡಿಕೊಂಡು |
ಮದುವೆಸಾಲ ಮುಟ್ಟಿಸುವೆನೊ ಶ್ರೀಧರಣಿಕಾಂತ |
ಮದುವೆ ಸಾಲವನ್ನು ಕೊಟ್ಟು ಮುದದಿಂದ ಋಣಮುಕ್ತನಾಗಿ,
ಅದರ ಮೇಲೆ ಕೊಟ್ಟೀಯೇನೋ ಶ್ರೀಲಕ್ಷ್ಮಿಕಾಂತ || ೫ ||

ಋಣಮುಕ್ತ ನಾನಾದ ಮೇಲೆ ಕ್ಷಣಮಾತ್ರ ಇಲ್ಲಿರುವನಲ್ಲಿ,
ಒಣಮಾತೇನೊ ಸ್ಥಳ ಪೇಳೆನಗೆ ಶ್ರೀಧರಣಿಕಾಂತ |
ಗುಣಗಳು ನಿನ್ನಲ್ಲೆ ಇಲ್ಲ ಹಣವು ಕೊಡಲಾಗದು ಮತ್ತೆ |
ಒಣಸ್ನೇಹಕ್ಕೆ ಸ್ಥಳ ಬಂದೀತೆ ಶ್ರೀ ಲಕ್ಷ್ಮೀಕಾಂತ || ೬ ||

ಮುಂಚಿದ್ದ ಈ ಸ್ಥಳವು ಮುತ್ತೆ ಮುಂಚಿನ್-ಹಾಗಿರುವುದು ಇಲ್ಲೆ |
ಚಂಚಲನಾಗಲು ಬೇಡ ಶ್ರೀಧರಣೀಕಾಂತಾ |
ವಂಚಕ ನೀ ಸರಿಯೊ ಒಂದಕು ಕೊಡದ ಲೋಭಿ ಒಳ್ಳೆ,
ಹಂಚಿಕೆಯವನೋ ನೀನು ಶ್ರೀಲಕ್ಷ್ಮಿಕಾಂತ || ೭ ||

ನಿನ್ನೊಳು ವಂಚನೆಯಿಲ್ಲ ನಿನ್ನ ಎನ್ನ ಹಿರಿಯತನ ಕಡೆಗೆ,
ಚೆನ್ನಾಗಿ ನಾ ನಡೆಸುವೆನು ಶ್ರೀಧರಣಿಕಾಂತ |
ಹಿರಿಯತನವೇನು ಚೆನ್ನಾಗಿ ನಡೆಸುವುದೇನು
ಎನ್ನ ಮುಂದೆ ಪೇಳೊ ನೀನು ಶ್ರೀಲಕ್ಷ್ಮಿಕಾಂತ || ೮ ||

ನಿನ್ನ ದರ್ಶನವು ಮುಂಚಿ ನಿನ್ನ ತೀರ್ಥದಲ್ಲೆ ಸ್ನಾನ,
ನಿನ್ನ ಅಭಿಷೇಕವು ಮುಂಚೆ ಶ್ರೀಧರಣಿಕಾಂತೆ |
ನಿನ್ನ ಮಾತು ಗೆಲಿಸುವೀಯೊ ಧನ್ಯ ನೀನು ಧರೆಯೊಳಗೆ |
ನಿನ್ನಂತೆ ಆಗಲಿ ಹೋಗೋ ಶ್ರೀಲಕ್ಷ್ಮಿಕಾಂತ || ೯ ||

ನೂರು ಪಾದಾ ಅಳದು ಕೊಡು ನೀ ಬೇರೆ ಸ್ವಾಮಿಪುಷ್ಕರಣಿಯಾ,
ತೀರದಲ್ಲೆ ಇರುವೆ ನಾನು ಶ್ರೀಧರಣಿಕಾಂತಾ |
ಮೂರು ಪಾದದಿಂದ ಹಿಂದಕೆ ಮೂರು ಲೋಕವನ್ನು ಗೆದ್ದೆ
ನೂರು ಪಾದಕಂತು ಎಷ್ಟೋ ಶ್ರೀಲಕ್ಷ್ಮಿಕಾಂತ || ೧೦ ||

ಮತ್ತ್ಯಾಕೀ ಪರಿ ಮಾತಾಡುವಿ ಹೊತ್ತು ಬಹಳಾಯಿತು ಯೆನಗೆ |
ಪಥ್ಯಕೆ ತಡವಾಯಿತೇಳೊ ಶ್ರೀಧರಣಿಕಾಂತ |
ಸತ್ಯ ನೂರುಪಾದ ಸ್ಥಳವು ಕ್ಲೃಪ್ತಮಾಡಿ ಕೊಟ್ಟೆ ನಿನಗೆ
ಸ್ವಸ್ಥದಿಂದ ಇರು ಹೋಗೋ ನೀ ಶ್ರೀಲಕ್ಷ್ಮಿಕಾಂತ || ೧೧ ||

ಸ್ವಸ್ಥದಿಂದ ಇರುವೆನ್ಹ್ಯಾಂಗೆ ಪಥ್ಯಾದಡಿಗೆ ಮಾಡುವಂಥಾ,
ಹೆತ್ತತಾಯಿ ಇಲ್ಲವೋ ಎನಗೆ ಶ್ರೀಧರಣಿಕಾಂತ |
ಹೆತ್ತಾಯೀ ಪರಿಯಾಗಿ ನಿನಗೆ ಪಥ್ಯದಡಿಗೆ ಮಾಡುವುದಕ್ಕೆ |
ಮತ್ತೆ ಬಕುಲಾವತಿಯ ಕೊಡುವೆ ಶ್ರೀಲಕ್ಷ್ಮಿಕಾಂತ || ೧೨ ||

ಇಂಥ ಘಾಯ ಮಾಯುವ ತನಕ ಜೇನ್ತುಪ್ಪ ಸಾಮೆಯ ಅನ್ನ,
ಸಂತತ ಬೇಕಲ್ಲ ಎನಗೆ ಶ್ರೀಧರಣಿಕಾಂತ |
ಚಿಂತಾಮಣಿಗೆ ಸರಿಯಾದಂಥಾನಂತಾದ್ರಿಯಲ್ಲಿದ್ದ ಮೇಲೆ,
ಚಿಂತೆ ಯಾಕೆ ಅದನು ಕೊಡುವೆ ಶ್ರೀಲಕ್ಷ್ಮಿಕಾಂತ || ೧೩ ||

| ವಚನ |

ಧರಣಿಯಾ ರಮಣ ಈ ಪರಿಯು ಬೇಡಿದ್ದು ಕೊಟ್ಟು
ತಿರುಗಿದನು ಸ್ವಸ್ಥಳಕೆ ಸಿರಿದೇವಿಯರಸು ತಾಂ ತೆರಳಿದನು
ಸ್ವಾಮಿಪುಷ್ಕರಣಿಯ ತೀರಕ್ಕೆ ಸರಸದಲ್ಲಿ ಮುಂದಲ್ಲೆ ಇರುವ
ನಿತ್ಯದಲಿ | ಪರಮಭಕುತಳು ಆಗಿ ಇರುವ ಬಕುಲಾವತಿಯ
ಕರದಿಂದ ಪಥ್ಯ ಸ್ವೀಕರಿಸುತಲೆ ನಿತ್ಯದಲಿ
ಸುರನತಾನಂತಾಖ್ಯ ಗಿರಿಯಲ್ಲಿ ಇರುವವನ ಕರುಣದಲಿ
ಮುಗಿಯಿತಿಲ್ಲೆರಡು ಅಧ್ಯಾಯ || ೧ ||

ಎರಡನೆಯ ಅಧ್ಯಾಯವು ಸಮ್ಪೂರ್ಣವು |

Adhyaya 3

ಮೂರನೆಯ ಅಧ್ಯಾಯ

| ಶ್ರೀ ಪದ್ಮನಾಭಪ್ರಿಯಾಯ ನಮ: |

ಜನ್ಮನಾಽಽಕಾಶವರದಾ ವಸುದಾನಾಗ್ರಜಾ ನಿಜಾನ್ |
ಪದ್ಮಾವತೀ ಪದ್ಮಭವಾ ವನಕ್ರೀಡಾರತಾಽವಾತ್ ||

| ವಚನ |

ಛಂದದಲಿ ವೇಂಕಟಗೆ ಮುಂದೆ ಪದ್ಮಾವತಿಯ
ಸಂದರ್ಶನಾದದ್ದು ಸಂಧಾನ ತರಬೇಕು
ಎಂದು ಪದ್ಮಾವತಿಯ ತಂದೆಯ ಕಥೆ ಸ್ಮೃತಿಗೆ
ತಂದು ಅದು ವಿಸ್ತಾರದೀಂದ ಪೇಳುವೆನು |
ಚಂದ್ರವಂಶದಲೊಬ್ಬ ಛಂದಾದ ನೃಪ
ಸುಧರ್ಮ ನೆಂದು ಇರುವನು ಅವಗೆ ಮುಂದೆ
ಇಬ್ಬರು ಸುತರು ಛಂದದಲಿ ಆಕಾಶನೆಂದು ಹಿರಿಯಗೆ
ಮುಂದೆ ಕಿರಿಯನು ತೋಂಡಮಾನನೆನಿಸುವನು || ೧ ||

ಆ ಕಾಲಕೊಂದು ದಿನ ಆಕಾಶನೃಪ ಚಿತ್ತ-
ವ್ಯಾಕುಲದಿ ಹೀಗೆ ಚಿಂತಾಕುಲಾಗಿರುತಿದ್ದು
ತೋಕಗಳು ಇಲ್ಲೆಂದು ಶೋಕದಲಿ ಕಣ್ಣೀರು
ಹಾಕಿ ಸ್ಮರಿಸಿದ ದೇವಲೋಕ ಗುರುವ |
ಆ ಕ್ಷಣಕೆ ಗುರು ದೇವಲೋಕದಿಂದಲಿ ಬಂದು
ಯಾಕೆ ಸ್ಮರಿಸಿದಿ ಯೆನ್ನನೀ ಕಾಲದಲಿ, ಏನು
ಬೇಕು ಬೇಡೆಲೊ ನೀನು, ನಾ ಕೊಡುವೆನೆಂದೆನಲು
ಆಕಾಶನೃಪ ತನ್ನ ಶೋಕವನು ನುಡಿದ || ೨ ||

ಏನು ಪೇಳಲಿ ಗುರುವೆ ನಾನು ಬಲು ಪಾಪಿಷ್ಠ
ಏನು ಇದ್ದೇನು ಸಂತಾನ ಮುಂದೆನಗಿಲ್ಲ
ಯೇನು ಪೂರ್ವದಲ್ಯಾಗ ನಾನು ಮಾಡಿದ ಪಾಪ
ಏನು ತಿಳಿಯದು ಎನಗೆ ನೀನು ಪೇಳೋ |
ಹೀನ ಬುದ್ಧಿಂದ ಪರಮಾನವರ ಮಕ್ಕಳ ನಾನು
ಕೊಲಿಸಿದೆನೇನು ದಾನ ಪಾತ್ರರಿಗೆ ಫಲ-
ದಾನ ಮಾಡಿಲ್ಲೇನು ಏನು ಕಾರಣವು ಸಂ
ತಾನ ಕಣ್ಣಿಲಿ ಕಾಣೆ ನಾನು ಅಯ್ಯಯ್ಯೋ || ೩ ||

ಮಕ್ಕಳಿದ್ದರೆ ರಾಜ್ಯ ಮಕ್ಕಳಿದ್ದರೆ ಮನೆಯು
ಮಕ್ಕಳಾಡಿದರೆ ಬಹಳಕ್ಕರತೆ ಜೀವಕ್ಕೆ
ಮಕ್ಕಳಿಲ್ಲದೆ ಮತ್ತೆ ಮಿಕ್ಕ ರಸಪದವ್ಯಾಕೆ
ಮಕ್ಕಳಿದ್ದರೆ ಎಲ್ಲ ಸೌಖ್ಯವೆನಿಸುವದೂ |
ಮಕ್ಕಳಿಂದಲೆ ಹಬ್ಬ ಹುಣ್ಣಿಮೆಯು ಉಲ್ಲಾಸ
ಮಕ್ಕಳಿಂದಲೆ ಮುಂಜಿಮದುವೆಯ ಕಾರ್ಯ
ಮಕ್ಕಳಿಗೆ ಸರಿಯು ಮಾಣಿಕ್ಯ ಧರೆಯೊಳಗಿಲ್ಲ
ಮಕ್ಕಳಿಂದಲೆ ಇಹವು ಮಕ್ಕಳಿಂದಲೆ ಪರವು
ಮಕ್ಕಳಿಲ್ಲೆನ್ನ ಭಾಗ್ಯಕ್ಕೆ ಅಯ್ಯಯ್ಯೋ || ೪ ||

ಮಕ್ಕಳಾ ಮೋರೆ ಎವೆ ಇಕ್ಕದಲೆ ನೋಡಿಲ್ಲ
ಮಕ್ಕಳಾಡಿದ ಮಾತು ನಕ್ಕು ಕೇಳಿಲ್ಲ ನಾ
ಮಕ್ಕಳಿಂದಲೆ ಕೂಡಿ ಅಕ್ಕರದಿ ಉಣಲಿಲ್ಲ
ಮಕ್ಕಳನ ಎತ್ತಿ ಮುದ್ದಿಕ್ಕಿದವನಲ್ಲ |
ಮಕ್ಕಳಿಲ್ಲದ ಮನುಜ ಲೆಕ್ಕ ದಾವದರೊಳಗೆ
ಬೆಕ್ಕು ಮೊದಲಾದಂಥ ಮಿಕ್ಕ ಪ್ರಾಣಿಗಳೆಲ್ಲ
ಮಕ್ಕಳಾಡಿದ ಬಹಳ ಚಕ್ಕಂದವನು ನೋಡಿ
ಸೌಖ್ಯ ಪಡುತಿಹವಯ್ಯ ಧಿಕ್ಕರಿಸು ಎನ್ನ ಜನ್ಮ
ಅದಕಿಂತ ವ್ಯರ್ಥ || ೫ ||

ಮುನ್ನ ನಮ್ಮೊಳಗಾರು ಉಣ್ಣದಲೆ ಈ ಬದುಕು
ಮಣ್ಣು ಪಾಲಾಗುವುದು ಘನ್ನ ಈ ಚಿಂತೆಯಲಿ
ಬಣ್ಣಗೆಟ್ಟೆನು ನಾನು ಕಣ್ಣಿಗಿಲ್ಲವು ನಿದ್ರೆ
ಸುಣ್ಣದಂತಲೆ ಕದ್ದು ಸಣ್ಣಾದೆನಯ್ಯಾ |
ಇನ್ನೇನು ಗತಿಯೆನಗೆ ಚೆನ್ನಾಗಿ ಉಭಯಕುಲ
ವನ್ನು ತಾರಿಸುವಂಥ ಹೆಣ್ಣು ಮೊದಲಾಗಿಲ್ಲ
ಪುಣ್ಯಹೀನನು ನಾನು ಅಣ್ಣತಮ್ಮರ ಒಳಗೆ
ಪುಣ್ಯ ಇಲ್ಲೊಬ್ಬನಲಿ ಪುಣ್ಯಗುರುವೆ || ೬ ||

ರಾಗ- ಶಂಕರಾಭರಣ ತಾಳ – ಬಿಳಂದಿ

ಇಂಥ ಮಾತಿಗೆ ಜೀವ ಹೀಗೆಂದು ನುಡಿದನು
ಚಿಂತೆ ಮಾಡಬ್ಯಾಡ ಭೂಕಾಂತ ಎಂದನು || ೧ ||

ಪುತ್ರಕಾಮೇಷ್ಠಿ ಮಾಡು ಭಕ್ತಿಯಿಂದಲಿ |
ಪುತ್ರನಾಗುವನು ನಿಮಗೆ ಸತ್ಯ ನೀ ತಿಳಿ || ೨ ||

ಗುರುವಿನ ಮಾತು ಕೇಳಿ ಪರಮ ಹರುಷದಿಂದಲೆ |
ಅರಸ ಬ್ರಾಹ್ಮರನೆಲ್ಲ ಕರೆಸಿದಾಗಲೆ || ೩ ||

ಮುಂದೆ ಯಜ್ಞ ಮಾಡಬೇಕು ಎಂದು ತ್ವರದಲಿ |
ಬಂದು ಭೂಮಿ ಶೋಧಿಸಿದನು ಛಂದದಿಂದಲೀ || ೪ ||

ಚೆಲುವ ನೇಗಿಲ ಜಗ್ಗಿ ಎಳೆವ ಕಾಲಕೆ |
ಹೊಳೆವ ಪದ್ಮ ಬಂತು ಅಲ್ಲೆ ಸುಳಿದು ಮೇಲಕೆ || ೫ ||

ಇರುವಳೊಬ್ಬಳಲ್ಲೆ ಮತ್ತೆ ಪರಮಸುಂದರೀ |
ಅರಸ ನೋಡಿ ಬೆರತು ನಿಂತ ಸ್ಮರಿಸಿ ಪರಿಪರೀ || ೬ ||

ಕಾಣಿಸದಲೆ ಗಗನದಲ್ಲಿ ವಾಣಿ ಆಯಿತು |
ಕಾಣದಿದ್ದರು ಆಗ ಸಕಲ ಪ್ರಾಣಿ ಕೇಳಿತು || ೭ ||

ಇನ್ನು ಚಿಂತೆ ಮಾಡಬೇಡ ಧನ್ಯ ಅರಸ ನೀ |
ನಿನ್ನ ಮಗಳು ಎಂದು ತಿಳಿಯೊ ಚೆನ್ನಾಗಿ ನೀನು || ೮ ||

ಇಂದಿನಾರಭ್ಯ ಕ್ಲೇಶ ಹಿಂದೆ ಬಿಡುವಿಯೊ |
ಮುಂದ ಮುಂದಕಿನ್ನು ಆನಂದಬಡುವಿಯೊ || ೯ ||

ಗಗನ ವಾಣಿಯನು ಕೇಳಿ ಅರಸ ಲಗುಬಗೀಯಲೀ |
ಮಗಳನೆತ್ತಿಕೊಂಡನಾಗ ಮುಗುಳುನಗೆಯಲಿ || ೧೦ ||

ತಂದೆ ಮಗಳ ಜನ್ಮ ಪದ್ಮದಿಂದ ತಿಳಿದನು |
ಮುಂದೆ ಪದ್ಮಾವತಿಯೆಂದು ಕರೆದನು || ೧೧ ||

ಮಗಳ ಕಾಲಗುಣದಿ ಮುಂದೆ ಮಗನು ಆದನು |
ಮಗನ ಕರೆದ ವಸುದಾನೆಂದು ಗಗನರಾಜನು || ೧೨ ||

ತಕ್ಕವಾಗಿ ಅರಸಗ್-ಹೀಂಗ ಮಕ್ಕಳಾದರು |
ಸೌಖ್ಯದಿಂದ ಮುಂದೆ ದಿನದಿನಕ್ಕೆ ಬೆಳೆದರು || ೧೩ ||

ಬಂತು ಯೌವನವು ಬೂಕಾಂತಪುತ್ರಿಗೆ
ಬಂತು ಆಗ ಮತ್ತೆ ಬಹಳ ಚಿಂತೆ ಅರಸಗೆ || ೧೪ ||

ಇಂಥ ಮಗಳಿಗಿನ್ನು ತಕ್ಕಂಥ ಪುರುಷನು |
ಪ್ರಾಂತದೊಳಗೆ ಇಲ್ಲ ದಿವ್ಯಕಾಂತಿಮಂತನು || ೧೫ ||

ಎಂತು ನೋಡಲಿನ್ನು ಹುಡುಕಿ ಶ್ರಾಂತನಾದೆನು |
ಚಿಂತೆಯೊಳಗೆ ಬಿದ್ದು ಮುಂದೆ ಪ್ರಾಂತಗಾಣೆನು || ೧೬ ||

ಅಂತರಂಗದೊಳಗೆ ಹೇಗೆಂತ ಅನುದಿನ |
ಚಿಂತಿಸಿದನು ಮರೆತು ಅನಂತಾದ್ರೀಶನಾ || ೧೭ ||

| ವಚನ |

ಒಂದಾನು ಒಂದು ದಿನ ಮುಂದೆ ಪದ್ಮಾವತಿಯು
ಛಂದಾದ ಕುಸುಮಗಳ ಇಂದು ಮುಡಿಯಲು ಬೇಕು
ಎಂದು ಸಖಿಯರ ಕೂಡಿ ಮುಂದೆ ವನಕ್-ಹೋಗಬೇ
ಕೆಂದು ಶೃಂಗರಿಸಿದಳು ಛಂದದಿಂದ |
ಇಂದುಮುಖಿ ತನ್ನಳತೆಯಿಂದಿರುವ ಕನ್ನಡಿಯ
ಮುಂದಿರಿಸಿ ನೋಡುತಲೆ ಮುಂದೆ ರತ್ನದ ಹಣಿಗೆ
ಯಿಂದ್ ಹಿಕ್ಕಿ ಬೈತಲೆಯ ಛಂದಾಗಿ ತೆಗೆದು ತ್ವರದಿಂದ
ಆಭರಣಗಳ ಮುಂದೆ ತರಿಸಿದಳು || ೧ ||

ಕೆತ್ತಿಸಿದ ರಾಗಟಿಯು ಒತ್ತಿ ಮೊದಲ್-ಹಾಕ್ಕಿ
ಹತ್ತೊತ್ತಿದಳು ಅದರ್-ಹಿಂದೆ ಮುತ್ತಾದ ಚೌರಿಯನು
ಮತ್ತೆ ಸಾಲ್ಹಿಡಿದು ಇತ್ತುತ್ತ ಕೇತಕಿಗಳನು
ಒತ್ತಿ ಹೆಣದಳು ಗೊಂಡೆ ಮತ್ತೆ ತುದಿಗೆ |
ಅತ್ತಿತ್ತ ನೋಡದಲೆ ಅರ್ಥಿಂದ ಮುಖ ತೊಳಿದು
ಮತ್ತೆ ಮೇಲರಿಷಿಣವ ಅತ್ಯಂತ ತಿಲಕ್-ಹಚ್ಚಿ
ಚಿತ್ರ ಕುಂಕುಮ ಫಣೆಗೆ ಚಿತ್ತಗೊಟ್ಟು ಹಚ್ಚಿದಳು
ಚಿತ್ತಾರ ಬರೆದಂತೆ ಮತ್ತಗಜಗಮನೆ || ೨ ||

ಥಳಥಳನೆ ಜಾತಿಯಿಂದ್-ಹೊಳೆವ ಮುತ್ತಿನ ಭವ್ಯ
ಯೆಳೆಯ ಇಮ್ಮಡಿ ಮಾಡಿ ನಳಿನಾಕ್ಷಿ ಬೈತಲೆಗೆ
ಅಳತೆಯಿಂದ್-ಹಾಕಿದಳು ತಳಪಿನಲಿ ಎಡಬಲಕೆ
ಯೆಳೆದು ಕಟ್ಟಿದಳ್-ಹಿಂದೆ ಹೆರಳಿಗ್-ಹಾಕಿ |
ತೊಳೆದು ಮುತ್ತಿನ ಬುಗುಡಿ ಪೊಳೆವ ಮೀನ್-
ಬಾವಲಿಯು ಝಳಝಳಿತವಾಗಿರುವ ಗಿಳಿಘಂಟೆ
ಚಳತುಂಬುಗಳನಿಟ್ಟು ಕರ್ಣದಲಿ ಉಳಿದ ದ್ರಾ-
ಕ್ಷಲತೆಯನೆಳೆದು ಬಿಗಿದಳು ಮೇಲೆ ಸುಳಿಗುರುಳಿನಲ್ಲಿ || ೩ ||

ಇದ್ದ ಮುತ್ತುಗಳೆಲ್ಲ ಗೆದ್ದು ಬಹು ಮೇಲಾಗಿ
ಇದ್ದ ಮುತ್ತುಗಳ್-ಹಚ್ಚಿ ತಿದ್ದಿ ಮಾಡಿದ ನತ್ತು
ಉದ್ರೇಕದಿಂದಿಡಲು ಮುದ್ದು ಸುರಿವುತ ಮುಂಚೆ
ಇದ್ದ ಮುಖ ಮತ್ತಿಷ್ಟು ಎದ್ದು ಕಾಣಿಸಿತೂ |
ಪ್ರದ್ಯುಮ್ನಚಾಪದಂತಿದ್ದೆರೆಡು ಹುಬ್ಬುಗಳ
ಮಧ್ಯ ನೊಸಲಿನ ಮೇಲೆ ಶುದ್ಧ ಕಸ್ತೂರಿಯನು
ತಿದ್ದಿ ತಿಲಕವನಿಟ್ಟು ತಿದ್ದಿದಳು ಕಾಡಿಗೆಯ
ಪದ್ಮಲೊಚನಗಳಿಗೆ ಪದ್ಮಜಾತೆ || ೪ ||

ಚಂದ್ರಗಾವಿಯನುಟ್ಟು ಛಂದಾದ ಕುಪ್ಪುಸವು
ಮುಂದೆ ಬಿಗಿ ಬಿಗಿ ತೊಟ್ಟು ಮುಂದೆಲೆಗೆ ಶೋಭಿಸುವ
ಚಂದ್ರಸೂರ್ಯರನಿಟ್ಟು ಛಂದಾಗಿ ಬೈತಲೆಗೆ
ಚಂದಿರವ ಸುರಿಸಿದಳು ಚಂದ್ರಮುಖಿಯು |
ಕಂದರ್ಪ ಬಾಣಗಳ ವೃಂದವನು ಒಮ್ಮೆಲೇ
ಸಂಧಿಸಿದ ಪರಿ ಗೀರುಗಂಧವನು ಕೈಗ್ಹಚ್ಚಿ
ಮುಂದೆ ಕೊರಳಿಗೆ ಒರೆಸಿ ಚಂದ್ರಸರ ಮೊದಲಾದ
ಒಂದೊಂದು ಹಾರಗಳ ಮುಂದೆ ಹಾಕಿದಳು || ೫ ||

ಕಟ್ಟಿ ಕೊರಳಿಗೆ ಚಿಂಚಪಟ್ಟಿ ಸರ ಮುತ್ತು ಮೇ-
ಲಿಟ್ಟು ಚಿಂತಾಕವನು ಕಟ್ಟಿ ಗೆಜ್ಜೆಯಟೀಕಿ,
ಕಟ್ಟಾಣಿಯನು ಮತ್ತೆ ಕಟ್ಟಿ ತಾಯಿತ ಮುತ್ತು
ಇಟ್ಟು ಮೋಹನಮಾಲೆ ಶ್ರೇಷ್ಠ ಪದಕಾ |
ಬಟ್ಟಕುಚಗಳ ಮೇಲೆ ದಟ್ಟ ಗೋಧಿಯ ಸರವು
ದಿಟ್ಟ ಏಕಾವಳಿಯು ಇಟ್ಟು ಪುತ್ಥಳಿಸರವು
ಅಷ್ಟು ಸರಗಳನೆಲ್ಲ ಮೆಟ್ಟಿ ಮೇಲ್ಮೆರವಂಥ
ಶ್ರೇಷ್ಠಸರಿಗಿಯ ತರಿಸಿ ಇಟ್ಟಳಾಕೆ || ೬ ||

ವಂಕಿ ತೋಳಿಗೆ ಹರಡಿ ಕಂಕಣವು ಕೈಗಿಟ್ಟು
ಟೊಂಕದಲಿ ವಡ್ಯಣ ಬಿಂಕದಲಿ ಬಿಗಿದಿಟ್ಟು
ಪಂಕಜಾಕ್ಷಿಯು ಮುಂದಲಂಕರಿಸಿದಳು ಪಾದ-
ಪಂಕಜಂಗಳಿಗೆ ಅಹಂಕಾರದಿಂದಾ |
ಪೊಂಕದಿಂದಿಟ್ಟು ಅಕಳಂಕ ರುಳಿ ಕಾಲ್ಕಡಗ
ಪಂಕಜಾವತಿ ತಾನು ಕೊಂಕವನು ಮಾಡುತಲೆ
ಬಿಂಕದಲೆ ನಡಿವಾಗ ಝೇಂಕರಿಸುವಂಥ ಬಹು
ಕಿಂಕಿಣಿ ಪೈಜಾಣ ಇಟ್ಟಲಾಕೆ || ೭ ||

ಕಾಲಬೆರಳಿಗೆ ಮುಂದೆ ಕಾಲಂಗುರಗಳು ಪಿಲ್ಲಿ
ಮೇಲಾದ ಮೆಂಟಿಕಿಯು ಮೇಲೆ ಮತ್ತಣಿ ಮೆಂಟು
ಬಾಲೆಯಿಟ್ಟಳು ಮತ್ತೆ ಸಾಲದಲೆ ಅರಗಿಳಿಯ
ಶಾಲು ಮುಸುಕಿಕ್ಕಿ ಬಹು ಲೇಸಾದಳಾಕೆ |
ಕಾಲಕಾಲಕೆ ಮಡಿಚಿ ಬಾಲೆಯರು ಕೊಟ್ಟ ತಾಂ-
ಬೂಲವನು ಮೆಲ್ಲುತಲೆ ಸಾಲ ಗೆಳತೇರ ಕೂಡಿ ಬ-
ಹಳ ಹರುಷದಿ ಗೆಜ್ಜೆ ಕಾಲ ಕುಣಿಸುತ ತನ್ನ
ಆಲಯದಿ ಹೊರಟಳಾ ಕಾಲದಲೀ || ೮ ||

| ವಚನ |

ಈ ಪರಿ ಪದ್ಮಾವತಿಯು ಬರುತಿರಲಾಗ
ಗಜಗಮನದಿಂದಾ ವನದೇವತೆಯು
ಮದನಸತಿಯಂತಿಪ್ಪ ತರುಣಿರೂಪವ ತಾಳಿ
ವನಮಧ್ಯದಲೆ ತಾಂ ಬೆಸಗೊಂಡಳು |
ಯಾರೆಲೆ ಬಾಲೆ ನೀ ಬಾಲಚಂದ್ರ ಲಲಾಟೆ
ಕಾಳಾಹಿವೇಣಿ ನಿಜಾಲಿಯರ ಕೂಡಿ ಯೆಲ್ಲಿಗೆ
ಪೋಗುವೆ ತಂದೆತಾಯ್ಗಳು ಬಂಧುಬಳಗವು ಕಾಂತನ್ಯಾರು ಪೇಳೆಂದು ||

ರಾಗ – ಯರಕಲಕಾಂಬೋದಿ, ತಾಲ – ಅಟ

ಕುಸುಮಗಂಧಿಯೆ ಎನ್ನ ಹೆಸರು ಪದ್ಮಾವತಿ ಕೇಳೆ |
ಕುಸುಮಕ್ಕೆ ನಾ ಬಂದೆ ತಿಳಿಯೆ ಮಾತಿನರಗಿಳಿಯೆ || ೧ ||

ವಸುಧೆಯು ನಮ್ಮ ತಾಯಿ ವಸುದಾನ ನಮ್ಮ ತಮ್ಮ |
ಅಸಮ ತೋಂಡಮಾನನೆಂಬುವನು ನಮ್ಮ ಕಕ್ಕನು || ೨ ||

ಆಕಾಶರಾಜನು ನಮ್ಮ ಸಾಕಿದಂಥ ತಂದೆಯು |
ನಾ ಖೂನವನು ಪೇಳಿದೆ ಸಾರಿ ಹೇಳಿದೇ || ೩ ||

ನಾರಾಯಣ ಪುರವು ನಮ್ಮ ತವರುಮನೆಯು ಅದು |
ಬೇರೆ ಅತ್ತೆ ಮನೆ ಯಾವುದು ಮುಂದೆ ತಿಳಿಯದು || ೪ ||

ಅಂತರಂಗದೊಳಗೆ ಶಾಂತಾನಂತಾದ್ರೀಶನೆ |
ಕಾತನಾಗಬೇಕೆಂದು ನಾ ಬೇಡಿಕೊಂಬುವೇ || ೫ ||

| ವಚನ |

ಈ ಮಾತ ಲಾಲಿಸಿ ನಿಜಾಂತರಂಗದಿ ಇವಳ ತತ್ತ್ವವ
ತಿಳಿದಪಾರ ಮೋದದಿ ತುಂಬಿ ತುಳುಕಿ
ಆ ರಮಾರೂಪಿಣಿಯಂ ಮನದಲಿ ನಮಿಸುತ
ಕುಸುಮಫಲಗಳಿಂದುಪಚರಿಸಿದಳು |
ಮತ್ತೆ ತಾನ್ ಸಖಿಯರ ಕೂಡೆ ಬೆರೆಸಿ
ಚರಿಸುವಳಂತೆ ನಟಿಸಿ ಎಲ್ಲರಿಗು
ತಿಳಿಯದ್ಹಾಂಗವರು ಕುಸುಮವನದ ಸೊಬಗ
ನೋಡುತಿರಲು ಕಣ್ಮರೆಯಾಗಿ ದೇವಿಯ ವಿಲಾಸವಂ
ತೋಡುತಿದ್ದಳು || ೧ ||

ರಾಗ – ಶಂಕರಾಭರಣ, ತಾಳ – ಆದಿ

ಹಗರಣದಿಂದಲೆ ನಗುವುತ ಕೆಲವುತ
ಬಗೆಬಗೆ ಗೆಳೆತೆರ ಕೂಡಿ |
ಬೊಗರಿ ಕುಚದ ಸೆರಗು ತೆಗೆತೆಗೆದ್ಹಾಕುತ
ಸುಗುಣಿ ಬಂದಳು ವನದಲ್ಲಿ || ೧ ||

ಮಂದಗಮನೆ ತಾನು ಬಂದು ಕುಳಿತಳಲ್ಲಿ
ಒಂದು ವೃಕ್ಷದ ಮೂಲದಲ್ಲಿ |
ಛಂದಛಂದದ ಪುಷ್ಪ ತಂದು ಮಾಲೆಯ
ಮಾಡಿ ಮುಂದೆ ಕೊಟ್ಟರು ಸಖಿಯರು || ೨ ||

ಒಂದೊಂದು ಹಾರವು ಛಂದದಿಂದಿಡಿತಿರೆ
ಬಂದ ನಾರದನು ಆಗಲ್ಲಿ |
ಬಂದ ಮುನಿಯ ಕಂಡು ಅಂದಳು ಈ ಪರಿ
ಬಂದವನ್ಯಾರು ಕೇಳಿರಮ್ಮಾ || ೩ ||

ಮುನ್ನ ಆ ಸಖಿಯರು ಮನ್ನಿಸಿ ಕೇಳಿದರು
ಘನ್ನ ಪುರುಷ ನೀನ್ಯಾರೋ
ಕಣ್ಣಿಲಿ ನೋಡಲು ಮಾನ್ಯನಾಗಿರುವೆಯೋ
ಚೆನ್ನಾಗಿ ಪೇಳಯ್ಯ ನೀನು || ೪ ||

ಕಮಲಾಕ್ಷಿಯರ ಮುಖಕಮಲದಿಂದ್~
ಹೊರಟಂಥ ವಿಮಲಮಾತುಗಳನೆ ಕೇಳೀ,
ಸುಮಹಿಮಾನಂತಾದ್ರಿ ರಮಣನ
ಪೌತ್ರನು ಕಮಲಾವತಿಗೆ ಹೀಗೆಂದಾ || ೫ ||

ರಾಗ – ಕಾನಡ ಕಾಮ್ಬೊದಿ, ತಾಲ – ಆದಿ

ನಿಮ್ಮ ಕುಲಗುರು ನಾನು ಕೇಳೆ ಅಮ್ಮಯ್ಯ ನೀನು |
ನಮ್ಮನು ಮರೆಯಲು ಬೇಡ ಅಕ್ಕಯ್ಯ || ೧ ||

ನಮ್ಮ ಕುಲಗುರು ಆದರೊಳಿತು ಅಪ್ಪಯ್ಯಾ ಇಲ್ಲಿ |
ನಿಮ್ಮ ಆಗಮನವು ಯಾಕೆ ಅಣ್ಣಯ್ಯಾ || ೨ ||

ಕೈಯಾ ತೋರೆ ಕೈಯಾ ತೋರೆ ಅಮ್ಮಯ್ಯಾ ನಿನ್ನ |
ಮೈಯ್ಯಾ ಲಕ್ಷಣವು ಪೇಳೇನಕ್ಕಯ್ಯಾ || ೩ ||

ಬಾಯಾ ಮಾತಿನಿಂದ ಪೇಳೋ ಅಪ್ಪಯ್ಯಾ, ಯೆನ್ನಾ |
ಕೈಯ ತೋರುವುದು ಯಾಕೆ ಅಣ್ಣಯ್ಯಾ || ೪ ||

ಸಂದೇಹ ಮಾಡಲು ಬೇಡವಮ್ಮಯ್ಯಾ |
ನಿನ್ನಾ ತಂದೆ ಸರಿಯೆ ನಾನು ಕೇಳೆ ಅಕ್ಕಯ್ಯಾ || ೫ ||

ಸತ್ಯ ಪೇಳೋ ಕೈಯ್ಯ ನೋಡಿ ಅಪ್ಪಯ್ಯಾ ಯೆನ್ನಾ |
ಉತ್ತಮ ಲಕ್ಷಣಗಳ ಅಣ್ಣಯ್ಯ || ೬ ||

ವರದಾನಂತಾದ್ರೀಶನಾಣೆ ಅಮ್ಮಯ್ಯಾ ನಾನು
ಸರಸದಿಂದ ಪೇಳುವೆ ಕೇಳಕ್ಕಯ್ಯಾ || ೭ ||

| ವಚನ |

ತಂಗಿ ನೋಡಮ್ಮ ನಿನ್ನಂಗೈಯಲಿ ಪದ್ಮ
ಮಂಗಳ ಸ್ವಸ್ತಿಕವು ಅಂಗಾಲಿನಲಿ ಉಂಟು
ಅಂಗನೆಯೆ ನಿನ್ನ ಮುಖ ಹಿಂಗದಲೆ ನಿತ್ಯ
ಬೆಳದಿಂಗಳವು ಮಾಡುವುದು ಭಂಗ ಇಲ್ಲದಲೆ |
ಮಂಗಳಾಂಗಿಯೆ ನಿನ್ನ ಕಂಗಳವು ಎರಡು
ಪದ್ಮಂಗಳನೆ ಗೆದ್ದಿಹವು ರಂಗುಮಾಣಿಕದಂತೆ
ರಂಗುದುಟಿ ನಿನ್-ಹುಬ್ಬು ಸಿಂಗಾಡಿವಿಲ್ಲ ತಿಳಿ
ಹ್ಯಾಗೆ ಸಂಪಿಗೆ ಮೊಗ್ಗೆ ಹಾಗೆ ನಿನ ಮೂಗು || ೧ ||

ಗಲ್ಲ ಕನ್ನಡಿಯಂತೆ ಹಲ್ಲು ದಾಳಿಂಬದ
ಬೀಜದಂತೆ ಮೃದು ಬಲೆ ನಿನ್ನ ನಾಲಿಗೆಯು
ಫುಲ್ಲಾಕ್ಷಿ ನಿನ್ನ ಕೊರಳು ಎಲ್ಲರಿಗಿಂತಲಿ ಸೂಕ್ಷ್ಮ
ಅಲ್ಲೆ ತಾಂಬೂಲ ರಸವೆಲ್ಲ ತೋರುವುದು |
ಬಲ್ಲಿದಹಿಯಂತೆ ಧಮ್ಮಿಲ್ಲ ಇರುವುದು ನಿಂದು
ಬಿಲ್ವ ಫಲದಂತೆ ಉರದಲ್ಲಿ ಶೋಭಿಸುವಂಥ
ಚೆಲ್ವ ಕುಚಗಳು ಹೊಟ್ಟೆ ತೆಳ್ಳನೆ ಬಾಳೆಯೆಲೆ
ಅಲ್ಲೆ ಬಲಸುಲಿನಾಭಿ ರೋಮಪಂಕ್ತಿ || ೨ ||

ಚಾರು ಮಧ್ಯಸ್ಥಳವು ಊರು ಬಾಳೆಯ ಕಂಭ
ಸಾರಪದ್ಸ್ಥಲದೇಶ ನಾರಿ ನಿನಗಾಗುವನು
ಶ್ರೀರಮೇಶನೇ ಪತಿಯು ಸಾರಿ ಹೇಳುವೆನೆಂದು
ನಾರದನು ಕಂಗಳಿಗೆ ತೋರದ್ಹೋದಾ |
ಉರ್ವಿಯಲಿ ಬಹು ರಮ್ಯ ತೋರುವಾನಂತಾಖ್ಯ
ಸಾರಗಿರಿ ವೈಕುಂಠ ಸಾರವಿದು ಯೆಂದು ಬಹು
ಸಾರುತಲೆ ವರಗಳನು ಬೀರುತಲೆ ಇರುವವನ
ಪೂರ್ಣದಯದಿಂದ ಸಂಪೂರ್ಣವಾಯಿತು
ಇಲ್ಲೆ ಮೂರು ಅಧ್ಯಾಯ ||

ಮೂರನೆಯ ಅಧ್ಯಾಯವು ಸಂಪೂರ್ಣವು |

Adhyaya 4

ನಾಲ್ಕನೆಯ ಅಧ್ಯಾಯ

| ರಮಾರಮಣಾಯ ನಮ: |

ಮೃಗಯಾಯೈ ಹಯಾರೂಢಂ ಗಹನೇ ಹಸ್ತಿನಾ ಹೃತಮ್ |
ಪದ್ಮಾವತೀಕಟಾಕ್ಷೇಷುತಾಡಿತಂ ನೌಮಿ ಶ್ರೀಡಿತಮ್ ||

| ವಚನ |

ಎಂದು ಪದ್ಮಾವತಿಯು ಬಂದಳಾ ವನದಲ್ಲಿ
ಅಂದಿಗಾ ವೇಂಕಟನು ಮುಂದೆ ಮೃಗಬೇಟೆಯಲಿ
ನಿಂದು ಪೋಗಲುಬೇಕೆಂದು ಸ್ಮರಿಸಿದ ಕುದುರೆ
ಬಂದು ನಿಂತಿತವನ ಮುಂದೆ ಆಕ್ಷಣದಿ |
ಛಂದಾದ ಮೈ ಬಣ್ಣದಿಂದ ಇರುವುದು ಸ್ವರ್ಣ-
ಬಿಂದುಗಳು ಅಲ್ಲಲ್ಲೆ ಮುಂದೆ ಕಾಲ್ಗಗ್ಗರಿಯು
ಮುಂದೆಲೆಯ ಮೇಲ್ಗರಿಯು ಒಂದೊಂದು ಹರಳ್-ಹಚ್ಚಿ
ಕುಂದಣವ ಕೂಡಿಸಿದ ಛಂದರಳೆಲೆ ದೂರದಿಂದ ಹೊಳೆಯುವದು || ೧ ||

ಮುತ್ತಿನಾ ಹಾರಗಳು ಪುತ್ಥಳಿಯ ಸರ ಮೇಲೆ
ಮತ್ತೆ ಸರಗಳನೆಲ್ಲ ಒತ್ತಾಗಿ ಧರಿಸಿಹದು
ಉತ್ತಮಾಶ್ವಕ್ಕೆ ಇನ್ನು ಮತ್ತೆ ಪರಿಮಿತಿಯಿಲ್ಲ
ಮುತ್ತುಗಳೆ ತೋರುವವು ಯೆತ್ತ ನೋಡಿದರೂ |
ಉತ್ತಮಾಶ್ವವ ನೋಡಿ ಉತ್ತಮೋತ್ತಮ ಹರಿಯು
ನಿತ್ಯಭೂಷಿತ ತಾನು ಮತ್ತೆ ಭೂಷಿತನಾದ
ನೆತ್ತಿ ಕೇಶಗಳೆಲ್ಲ ಸುತ್ತಿ ಕಟ್ಟಿದ ಮೇಲೆ
ಸುತ್ತಿದನು ಕೌಸುಂಭ ರಕ್ತವಸ್ತ್ರ || ೨ ||

ಕುಂಕುಮಾದಿಗಳಿಂದ ವೇಂಕಟನು ಊರ್ಧ್ವ-
ಪುಂಡ್ರಾಂಕಿತನು ಆಗಿ ಅಕಳಂಕ ಕೇಸರ
ಕುಂಕುಮಾಂಕಿತ ಶ್ರಿಗಂಧಪಂಕದಲಿ
ಮೈಗ್-ಹಚ್ಚಿ ಕಂಕಣವು ಇಟ್ಟ ಕರ
ಪಂಕಜಂಗಳಿಗೆ |
ಟೊಂಕದಲಿ ಕಾಂಚಿಯನು ಬಿಂಕದಿಂದಲೆ ಬಿಗಿದು
ಸಂಖ್ಯದಲಿ ಎಲೆ ಅಡಿಕೆ ಸಣ್ಣ ಸುಣ್ಣದಕಾಯಿ
ಶಂಖ ಸಮಮೃತ್ತಿಕೆಯು ಕೊಂಕಯಿಲ್ಲದ ಕನ್ನಡಿ
ಕುಂಕುಮದ ಕರಡಿಗೆಯು ಟೊಂಕದಲಿ ಕಟ್ಟಿದನು ವಸ್ತ್ರದಿಂದ || ೩ ||

ಕಂಠಿ ಮೊದಲಾಗಿರುವ ಕಂಠ ಭೂಷಣವೆಲ್ಲ
ಕಂಠದಲಿ ಇಟ್ಟು ವೈಕುಂಠ ಪತಿ ತಾನು ಹದಿ-
ನೆಂಟು ಬಟ್ಟ ಜರತಾರಿ ಒಂಟಿ ಚಾದರವನ್ನು
ಕಂಠದಲಿ ಚೆಲ್ಲಿ ರಿಪುಕಂಟಕಾಗಿರುವಂಥ
ಒಂಟಿ ಖಡ್ಗದಲೆ ಹೊರಹೊಂಟು ಯೇರಿದ ಕುದರೆ ಭಂಟನಾಗಿ |
ಅಂಟರಾಗಾಲ್ಕೊಡುತ ಕಂಠವನು ಮೇಲೆತ್ತಿ
ಗಂಟಲವ ಬಿಗಿದು ನೂರೆಂಟು ಖ್ಯಾಂಕರಿಸುತಲೆ
ಟಂಟಣನೆ ಜಿಗಿಯುತ್ತ ವೈಕುಂಠನಾಥನು ಎಂಬ
ಬಂಟನಾ ಕುದುರೆ ಹೊರ ಹೊಂಟಿತಾಗ || ೪ ||

ವನವನವ ಚರಿಸುತಲೆ ಘನಮಹಿಮ ವೇಂಕಟನು
ವನದಲ್ಲಿ ಇರುವ ಬಹು ಘನ ಮೃಗಂಗಳ ಹೊಡೆದು
ಘನವಾದ ಮದ್ದಾನೆಯನು ಕಂಡು ಅಲ್ಯೊಂದು
ಕ್ಷಣವು ನಿಲ್ಲದೆ ಬೆನ್ನನು ಹತ್ತಿ ನಡೆದಾ |
ವನಜನಾಭನ ಭಯದಿ ವನಗಜವು ಸಾರ್ಧ ಯೋ –
ಜನವ ಓಡುತ್ತ ಮುಂದೆ ದಣಿದು ಬಿದ್ದಿತು ಜನಾರ್ದನನ
ಸಮ್ಮುಖವಾಗಿ ವಿನಯದಿಂದಲಿ ಸೊಂಡಿಯನು
ಮ್ಯಾಲೆ ಯೆತ್ತಿ ಗರ್ಜನವ ಮಾಡುತಲೆ || ೫ ||

ಘಡಘಡನೆ ಗರ್ಜಿಸುವ ಅಡವಿಯಾನೆಯ ಕಂಡು
ಗಡ ಬಡಿಸಿದರು ಅಲ್ಲೆ ಕಡು ಚಿಲ್ವೆಯರೆಲ್ಲ
ಯಡವುತಲೆ ಮುಗ್ಗುತಲೆ ವಡಗೂಡಿ ಒಂದಾಗಿ
ಗಿಡದ ಮರೆಯಲಿ ಪೋಗಿ ಅಡಗಿದರು ಬೇಗ |
ದೃಡ ಭಕ್ತಿಯಿಂದ ಜಗದೊಡೆಯ-ಗೊಂದಿಸಿ ಗಜವು
ನಡೆದು ಅಲ್ಲಿಂದ ಘೋರಡವಿಯಲಿ ಪೋಗುತಿರೆ
ಬಿಡದೆ ಹಣಿಹಣಿಕಿ ನೋಡ್ಯಡಗಿದರು ಮತ್ತಲ್ಲೆ
ಮಡದಿಯರ ನೋಡಿ ಹರಿ ನಡೆಸಿದನು ಕುದುರೆ || ೬ ||

ಕುದುರೆಯನು ಕಾಣುತಲೆ ಹೆದರಿ ಚಪ್ಪಾಳಿಕ್ಕಿ
ವದರಿದರು ಅಮ್ಮಯ್ಯ ಚದುರೆ ನೋಡಿವನ್ಯಾರು
ಕುದುರೆಯನು ಏರಿ ನಮ್ಮೆದುರಿಗೆ ಬರುತಿರುವ
ನೆದುರಿಗೆ ತೋರುತಿಹ ಚದುರನಾಗೀ |
ಮಧುರ ನುಡಿದಳು ಆಗ ಚದುರೆ ಪದ್ಮಾವತಿಯು
ಹೆದರ ಬೇಡಿರಿ ನೀವು ಬೆದರಿದೆರಳೆಗಳಂತೆ
ಕುದುರೆ ಮೇಲೆನವನ್ಯಾರು ಚದುರ ವೃತ್ತಾಂತವನು
ಕೆದರಿ ಕೇಳಿರಿ ಅವನ ಇದಿರಿಗ್-ಹೋಗಿ || ೭ ||

ಅಂದ ಮಾತನು ಕೇಳಿ ಮಂದಗಮನೆಯರೆಲ್ಲ
ಬಂದ ಪುರುಷನ ನೋಡಿ ಅಂದರೀ ಪರಿ ಆಗ
ಸುಂದರನೆ ನೀನ್ಯಾರು ಇಂದು ಇಲ್ಲಿಗೆ ನೀನು
ಬಂದ ಕಾರಣವೇನು ಮುಂದೆಲ್ಲಿ ಗಮನ |
ತಂದೆ ತಾಯಿಗಳ್ಯಾರು ಬಂಧು ಬಾಂಧವರ್ಯಾರು
ಮುಂದಿರವು ಎಲ್ಲ್ಯುಂಟು ಮಂದಿ ಯೆಲ್ಲರು ಏ-
ನೆಂದು ಕರೆವರು ನಿನಗೆ ಛಂದಾಗಿ ಕುಲಗೋತ್ರ
ಒಂದು ಬಿಡದಲೆ ನಮ್ಮ ಮುಂದೆ ನೀ ಪೇಳೊ || ೮ ||

ಇಂದುಮುಖಿಯರ ಮಾತಿಗಿಂದಿರೇಶನು ನುಡಿದ
ಇಂದು ನಮ್ಮ ಕಾರ್ಯ ನೃಪ ನಂದಿನಿಯ ಬಳಿಯುಂಟು
ಮುಂದೆ ಕೇಳಿರಿ ನಮ್ಮ ಛಂದಾದ ವೃತ್ತಾಂತ
ಒಂದೊಂದು ಬಿಡದೆ ಕ್ರಮದಿಂದ ಪೇಳುವೆನೂ |
ಚಂದ್ರಕುಲ ವಸುದೇವ ತಂದೆ ದೇವಕಿ ತಾಯಿ
ಬಂಧು ತಾ ಬಲರಾಮ ಬಾಂಧವರು ಪಾಂಡವರು
ಇಂದುಮುಖಿ ಸುಭದ್ರೆ ಯೆಂದೆನಿಸುವಳು ತಂಗಿ
ಸುಂದರಾರ್ಜುನ ನಮ್ಮ ಹೊಂದಿರ್ದ ಬೀಗ || ೯ ||

ಕೃಷ್ಣವೇಣಿಯರು ನೀವಿಷ್ಟು ಕೇಳಿರಿ ನಾಮ
ಕೃಷ್ಣ ಪಕ್ಷದಲಿ ನಾ ಪುಟ್ಟಿರ್ದ ಕಾರಣದಿ
ಕೃಷ್ಣನೆಂತೆಂದು ಹೆಸರಿಟ್ಟು ಕರೆವರು ಯೆನಗೆ
ಕೃಷ್ಣವರ್ಣದಿ ಮತ್ತು ಕೃಷ್ಣನೆಂಬುವರೂ |
ಇಷ್ಟು ವೃತ್ತಾಂತವೆ ಶ್ರೇಷ್ಠ ಕರ್ಣಾಭರಣ
ಕೊಟ್ಟೆನಿದು ಕಿವಿಯಲ್ಲಿ ಇಟ್ಟು ಬಹು ಸಂತೋಷಪಟ್ಟು
ನೃಪನಂದಿನಿಯ ಶ್ರೇಷ್ಠಾದ ವೃತ್ತಾಂತ
ವಷ್ಟು ಪೇಳಿರಿ ಯೆನಲು ಥಟ್ಟನೆ ನುಡಿದಳಾ
ದಿಟ್ಟೆ ಪದ್ಮಾವತಿಯು ಸ್ಪಷ್ಟ ತಾನೆ || ೧೦ ||

ಭೋ ಕಿರಾತಾಧಿಪನೆ ನೀ ಕೇಳು ನಮ್ಮ ಸುವಿ-
ವೇಕದ ವೃತ್ತಾಂತ ಲೋಕದಲಿ ಮಾನಿತ ನಿ-
ಶಾಕರನ ವಂಶ ತಿಳಿ ಶ್ರೀಕರಾತ್ರಿಯ ಗೋತ್ರ
ಆಕಾಶನೃಪ ತಂದೆ ಆಕೆ ನಮ್ಮ ತಾಯಿಯೆಂ-
ಬಾಕೆ ಧರಣೀದೇವಿ ತಾ ಕಕ್ಕನೆನಿಸುವನು
ತೋಂಡಮಾನ |
ಏಕಾಕಿ ವಸುದಾನ ತಾಂ ಖೂನದಲಿ ತಮ್ಮ
ನಾ ಕಮಲದಲಿ ಬಂದಾಕೆ ಪದ್ಮಾವತಿಯು
ನೀ ಕೇಳಿ ನಡಿಯೆನಲು ಶ್ರೀಕಾಂತ ನಗುನಗುತ
ಆಕೆಯಾ ಮ್ಯಾಲ್ ಸ್ವಲ್ಪ ಧುಮುಕಿಸಿ ನೋಡಿದ
ಕುದುರೆ ಆಕಾಶ ನೃಪಪುತ್ರಿ ತಾ ಕೋಪವನು
ಮಾಡಿ ಏಕೆ ನೋಡುವಿರಿವನ ನೂಕಿ ಹಿಂದಕೆ ಯೆಂದ-
ಳಾ ಕಾಲದಲಿ ಹರಿ ವಿವೇಕದಲೆ ನುಡಿದಾ || ೧೧ ||

ರಾಗ: ಶಂಕರಭರಣ, ತಾಳ-ಬಿಳಂದೀ

ಇಷ್ಟು ಎನ್ನ ಮ್ಯಾಲೆ ಯಾಕೆ ಸಿಟ್ಟು ಮಾಡುವಿ |
ಬಟ್ಟ ಕುಚದ ಬಾಲೆ ಬಹಳ ನಿಷ್ಟುರಾಡುವಿ || ೧ ||

ದಿಟ್ಟಪುರುಷ ನೀನು ನಡೆತೆಗೆಟ್ಟು ಇರುವರೆ
ಖೊಟ್ಟಿ ಕುದುರೆ ಯೇರಿ ಮೈಯ ಮುಟ್ಟ ಬರುವರೆ || ೨ ||

ಮೆಚ್ಚಿ ಬಂದೆ ನಿನಗೆ ನಾನು ಹೆಚ್ಚಿನ್-ಹೆಂಗಳೆ |
ಇಚ್ಛೆ ಪೂರ್ಣ ಮಾಡು ನೀನು ಮಚ್ಛ ಕಂಗಳೆ || ೩ ||

ಹೆಚ್ಚು ಕಡಿಮೆ ಆಡದಿರು ಹೆಚ್ಚಿನಾತನೆ |
ಎಚ್ಚರಿಲ್ಲ ಮೈಯ ಮ್ಯಾಲೆ ಹುಚ್ಚು ಪುರುಷನೆ || ೪ ||

ಏನು ಹೆಚ್ಚು ಕಡಿಮೆ ಆಡಿದೆನು ಅನುಚಿತಾ |
ನೀನು ಕನ್ಯಾ ನಾನು ವರನು ಯೇನು ಅನುಚಿತ || ೫ ||

ಮೂಢ ನೀನು ಇಂಥ ಮಾತು ಆಡೋದುಚಿತವೆ |
ಬೇಡ ಅರಸಿಗ್-ಹೇಳಿ ನಿನಗೆ ಬೇಡಿ ಬಿಗಿಸುವೆ || ೬ ||

ಮಡದಿ ನಿನ್ನ ಕಡೆಯಗಣ್ಣು ಕುಡಿಯ ಹುಬ್ಬುವೆ |
ಕಡಿಯದಂಥ ಬೇಡಿ ಎನಗೆ ಕಡಿಗೆ ಅಲ್ಲವೇ || ೭ ||

ಮಂದಮತಿಯೆ ಉಳಿಹಿಕೊಳ್ಳೊ ಇಂದು ಪ್ರಾಣವ |
ತಂದೆ ಕಂಡರೀಗ ನಿನ್ನ ಕೊಂದುಹಾಕುವಾ || ೮ ||

ಜಾಣೆ ನಿನ್ನ ಬಿಡೆನು ಎನ್ನ ಪ್ರಾಣ ಹೋದರು |
ಪ್ರಾಣದರಸಿಯೆನಿಸು ಪಟ್ಟರಾಣಿ ಆಗಿರು || ೯ ||

ತಂದೆ ತಾಯಿ ಬಿಟ್ಟು ಮರಣ ಇಂದು ವ್ಯರ್ಥವು |
ಹಂದಿ ನಾಯಿ ಹದ್ದು ಕಾಗೆ ತಿಂದುಬಿಡುವುವು || ೧೦ ||

ಎನ್ನ ಫಣೆಯಲಿದ್ದ ಲಿಖಿತ ಮುನ್ನ ತಪ್ಪದು |
ಚಿನ್ನವಾಗಿ ನಿನ್ನ ಕೂಡಿ ಇನ್ನು ಇರುವುದು || ೧೧ ||

ಸೊಲ್ಲ ಕೇಳಿ ಶಿಟ್ಟಿನಿಂದ ನಿಲ್ಲೊ ಎಂದಳು |
ಎಲ್ಲ ಗೆಳತೆರಿಂದ ಕೂಡಿ ಕಲ್ಲ ಒಗೆದಳು || ೧೨ ||

ಕಲ್ಲು ತಾಗಿ ಕುದರೆ ಭೂಮಿಯಲ್ಲಿ ಬಿದ್ದಿತು |
ಬಲ್ಲಿದಾನಂತಾದ್ರೀಶನಲ್ಲೆ ಸ್ಮರಿಸಿತು || ೧೩ ||

| ವಚನ |

ಶ್ರೀಕಾಂತ ತಾ ಮುಂದೆ ಲೌಕಿಕವ ತೋರಿಸುವ
ಆ ಕುದುರೆಯನು ಬಿಟ್ಟು ನಾಲ್ಕು ಕಡೆ ನೋಡುತಲೆ
ವ್ಯಾಕುಲನು ಆಗುತ ವಿವೇಕದಲಿ ಹೀಗೆಂದ
ಏಕೆ ಈ ಪರಿ ಆಯಿತೀ ಕಾಲದಲ್ಲೀ |
ಲೋಕದಲಿ ತಾಯಿ ಯೆಂಬಾಕೆ ಪರದೇವತೆಯು
ನಾ ಕಾಲಬೀಳದಲೆ ಆ ಕಾಲದಲಿ ಹೊರಟೆ-
ಆ ಕಾರಣದಿ ಯೆನಗೆ ಸೋಕಿತೀ ಸಂಕಟವು
ಮಾಡಿದಾ ಕರ್ಮಫಲ ದೊರೆಯದಿರದೂ || ೧ ||

ಆ ಕಾಲಕ್-ಹೀಗೆಂದು ಕಾಲ ಹೆಜ್ಜೆಯನು
ಹಾಕಿ ಗಿರಿಯೇರುತಲೆ ಗೃಹಾಕಾರವಾಗಿರುವ
ಏಕಾಂತ ಹುತ್ತಿನಲಿ ಮೂಕತನದಲಿ ಮು-
ಸುಕ ಹಾಕಿ ಮಲಗಿದ ತಾನು ವೈಕುಂಠಪತಿ ಶೇಷಶಾಯಿಯಂತೆ |
ಲೋಕದಲಿ ವಿಖ್ಯಾತ ಶ್ರೀಕರಾನಂತಗಿರಿ
ಆಕ್ರಮಿಸಿ ಮುಂದಕೆ ಅನೇಕವಿಧ ಭಕ್ತರಿಗೆ
ಬೇಕಾದ ವರಗಳನು ತಾ ಕರೆದು ಕೊಡುವವನ
ಸಿರಿ ಕರುಣದಿ ಆಯ್ತು ನಾಲ್ಕು ಅಧ್ಯಾಯ || ೨ ||

ನಾಲ್ಕನೆಯ ಅಧ್ಯಾಯವು ಸಂಪೂರ್ಣವು |

Adhyaya 5

ಐದನೆಯ ಅಧ್ಯಾಯ

ಕಾಮರ್ತೋ ಬಕುಲವಾಕ್ಯಮೋದಿತೋ ಲೋಕಮೋಹಕಃ |
ಆಕಾಶನೃಪಗೇಹಂ ತಾಂ ಪ್ರೇಷಯನ್ ಪಾತು ಮಾಧವಃ ||

ರಾಗ – ಯರಕಲಕಾಂಬೋದಿ, ತಾಳ – ಅಟ

ಸೋಕಿತು ಕಾಮನ ಘಾಳಿ ಆಕಾಶನ ಪುತ್ರಿಗೆ |
ವೈಕುಂಠೇಶನು ತಿರುಗಿ ವೇಂಕಟಗಿರಿ ಏರಲು |ಪ|

ಪದ್ಮನಾಭನ ಸ್ಮರಿಸಿ ಬಿದ್ದಳು ಮೂರ್ಛಿತಳಾಗಿ |
ಸದ್ದು ಮಾಡಿದಲ್ಲಿ ಇದ್ದ ಗೆಳತಿಯರೆಲ್ಲ |
ಮುದ್ದು ಮುಖದವಳೆ ನೀ ಯೆದ್ದು ನುಡಿಯದೆ ಇರಲು |
ಸಿದ್ಧ ಮಾಡಿ ಬೇಗೊಬ್ಬ ಬುದ್ಧಿವಂತೆಯ ಕಳುಹಿ |
ಗದ್ದಲವು ಮಾಡದೆ ಅಂದಣವನು ತರಿಸಿ |
ಪದ್ಮಗಂಧಿಯ ಕೊಂಡು ಎದ್ದು ನಡೆದರು ಪುರಕೆ |
ಸುದ್ದಿ ಹರಡಿತು ಅಲ್ಲೆ ಗದ್ದಲಾಯಿತು ಬಹಳ ||೧||

ಬಂದಳಲ್ಲಿಗೆ ತಾಯಿ ಅಂದಳೀ ಪರಿ ನೋಡಿ |
ಇಂದು ಎಲ್ಲಿಗೆ ಚಿಕ್ಕ ಕಂದಮ್ಮ ನೀ ಪೋಗಿದ್ದೆ |
ಛಂದದ ನಿನ್ನ ಮುಖ ಇಂದು ಬಾಡಿಹುದ್ಯಾಕೆ |
ಇಂದು ಮೈಯೊಳು ಜ್ವರ ಬಂದಿಹುದೇಕಮ್ಮಯ್ಯ |
ಮುಂದೆ ಮಾತಾಡದಿರಲು ತಂದೆ ಕೇಳಿದನಾಗ |
ಸುಂದರಿಯಳೆ ದಾರೇನೆಂದರಮ್ಮಯ್ಯ ನಿನಗೆ |
ಇಂದು ಅವರನು ಬಿಡದೆ ಕೊಂದು ಹಾಕುವೆ ಪೇಳು |
ಅಂದ ಮಾತಿಗೆ ತಾನು ಬಂದು ಮಾತಾಡೊಲ್ಲಳು |೨|

ತಿಳಿಯವೊಲ್ಲದು ಎಂದು ಬಳಲಿ ಆಕಾಶರಾಜಾ |
ಕಳವಳಿಸುತ ಕರೆ ಕಳಿಸಿ ಬಲ್ಲವರನಾ |
ತಿಳಿಯಬಲ್ಲವರೆಲ್ಲ ತಿಳಿದು ಹೇಳಿರಿ ಯೆಂದ |
ಕೆಲವೆರೆಂದರು ಪಿತ್ತ ತಲೆಗೆ ಏರಿಹುದೆಂದು |
ಕೆಲವೆರೆಂದರು ಭೂತ ಬಲಿಯ ಚೆಲ್ಲಿರಿ ಎಂದು |
ಕೆಲವರೆಂದರು ಗ್ರಹಗಳ ಬಾಧೆಯಿರುವದು |
ಉಳಿದ ಮಂದಿಗೆ ಮತ್ತೆ ತಿಳಿಯಲಾಗದಾಯಿತು |
ಚೆಲುವನಂತಾದ್ರೀಶನ ಚೆಲುವಿಕಯನು ಕಂಡೂ ||೩||

| ವಚನ |

ಆ ಕಾಲದಲಿ ಮುಂದೆ ಆಕಾಶರಾಜ ಬಹು
ಶೋಕವನು ಮಾಡುತಲೆ ತೋಕನ ಕಳುಹಿ ಸುರ-
ಲೋಕ ಗುರುಯೆನಿಸುವ ತಾ ಕರಿಸಿ ಕೇಳಿದನು
ಮೂಕಳಾದಳು ಪೇಳು ಯಾಕೆ ಯೆನ್ನ ಮಗಳೂ ||
ನಾಕೇಶ ಗುರು ಹೀಗೆ ತಾ ಕೇಳುತಲೆ ನುಡಿದ
ಆಕಾಶನೃಪ ಚಿಂತೆ ಯಾಕೆ ಬ್ರಾಹ್ಮನರ
ನೀ ಕರಿಸಿ ಶಿವಗೆ ಅಭಿಷೇಕ ಮಾಡಿಸು ರುದ್ರ
ಏಕಾದಶಾವರ್ತಿ ಏಕ ಚಿತ್ತದಲಿ ||೧||

ಏಸೊಂದು ಚಿಂತೆಗಳ ರಾಶಿ ದೂರಾಗವದು
ಲೇಸಾಗಿ ತಿಳಿಯೆಂದು ತಾ ಸ್ವರ್ಗಪುರಕ್- ಹೋದ
ಆ ಸಮಯದಲಿ ಊರ್ವೀಶ ಭಕ್ತಿಯಿಂ ಬಿನ್ನೈಸಿ
ಕರಕಳಿಸಿದನು ಭುಸುರರನೆಲ್ಲ ||
ಆಸನಾದಿಗಳಿಂದ ಲೇಸಾಗಿ ವರವಸ್ತ್ರ
ಭೂಷಣಾದಿಗಳಿಂದ ಭೂಸುರರಿಗರ್ಚಿಸಿ
ಅಶೇಷರಿಗೆ ದಕ್ಷಿಣೆ ವಿಶೇಷವನು
ಕೊಟ್ಟು ಸಂತೋಷವನು ಪಡಿಸಿ ಕೈಲಾಸಪತಿ
ಪೂಜೆ ಚಿತ್ತೈಸಿ ಮಾಡಿರಿ ಆಶು
ಕಳುಹಿದನಗಸ್ತೀಶ್ವರನಾಲಯಕೇ ||೨||

ರಾಗ -ಶಂಕರಾಭರಣ, ತಾಳ- ಆದಿ

ಶ್ರೀವೇಂಕಟಾದ್ರಿಯೊಳ್ ದೇವ ತಾ
ಮಲಗಿರಲು ಕೇವಲ ಚಿಂತೆಯಿಂದಲ್ಲೆ |
ಆವತ್ತಿಗಾತನ ಸೇವೆಗೆ ನಡೆದಳು
ದೇವಿ ಬಕುಲಾವತಿ ತಾನು ||೧||

ವರ ಷಡ್ರಸದನ್ನ ಪರಿಪರಿ ಸಾಹಿತ್ಯ
ಹರಿವಾಣದಲ್ಲಿಟ್ಟು ಕೊಂದು |
ಹರಿಯ ಸಮೀಪಕ್ಕೆ ಹರುಷದಿ ಬಂದಳು
ಕರುವು ಇದ್ದಲ್ಲೆ ಗೋವಿನಂತೆ ||೨||

ಆಲಯದಿ ಜಗತ್ಪಾಲ ಮಲಗಿದ್ದು ಕಂಡು
ಬಾಲೆ ತಾ ಮಾತಾಡಿದಳೂ |
ಏಳಯ್ಯ ಉಣಲೇಳೊ ಬಾಲಯ್ಯ ವೇಂಕಟ
ಬಹಳ್-ಹೊತ್ತು ಆಯಿತು ಇಂದು ||೩||

ಮತ್ಸ್ಯಮೂರುತಿ ಏಳೋ
ಸ್ವಚ್ಛ ಕೂರ್ಮನೇ ಏಳೋ
ಹೆಚ್ಚಿನ ವರಹ ನೀ ಏಳೋ |
ವತ್ಸ ಪ್ರಹ್ಲಾದಗೆ ಮೆಚ್ಚಿದಾತನೆ ಏಳೋ
ಅಚ್ಯುತ ವಾಮನ ಏಳೋ ||೪||

ಶುದ್ಧ ಭಾರ್ಗವ ಏಳೋ
ಬಿದ್ದಂಥ ಶಿಲೆಯನ್ನು ಉದ್ಧರಿಸಿದಾತನೆ ಏಳೋ |
ಉದ್ಧವಸಖ ಎಳೋ ಬೌದ್ಧವತಾರ ಏಳೋ
ಮುದ್ದು ಹಯವಾಹನ ಏಳೋ ||೫||

ಇಷ್ಟು ಮಾತಿಗೆ ತಾ ಒಂದಿಷ್ಟು ಉತ್ತರ ಕೊಡದೆ ಸೃಷ್ಟಿಕರ್ತನು ಸುಮ್ಮನಿದ್ದ |
ಥಟ್ಟನೆ ಹರಿವಾಣ ಇಟ್ಟಳು ಕೆಳಗಲ್ಲೆ
ದಿಟ್ಟೆ ನಡದಳು ಬದಿಯಲ್ಲಿ ||೬||

ಅತ್ಯಂತ ಗುಣದವ ಅಂತ ತಿಳಿಯಬೇಕು
ಯೆಂತ ಮುಸುಕ ತೆಗೆದಳು |
ಚಿಂತೆಯಲಿ ಮಲಿಗಿರುವಾನಂತಾಧ್ರೀಶನ
ಕಂಡು ಅಂತಃಕರಣದಿ ನುಡಿದಳೂ ||೭||

ರಾಗ-ಕಾಪಿ, ತಾಳ -ಅತ

ಯಾಕೆ ಮಲಿಗಿದಿ ನೀ ಏಳೋ ಅಣ್ಣಯ್ಯಾ ವೇಂಕಟ |
ಯಾಕೆ ಮಲಿಗಿದಿ ಏಳೋ ಏನು ಚಿಂತೆಯು ಪೇಳೋ |
ಲೋಕ ಸಾಕುವ ದಯಾಳೊ ಅಣ್ಣಯ್ಯ ||ಪ||

ಬಹಳ ಬಳಲಿದೆಯೊ ಹಸಿದು ಮಾತಾಡದಂಥ ಮೂಲಕಾರಣವೇನಿದು |
ಹಾಲು ಸಕ್ಕರೆ ತುಪ್ಪಾ ಯಾಲಕ್ಕಿ ಪರಮಾನ್ನ
ಬಾಲಯ್ಯ ನೀನು ಉಣಲೇಳೊ |

ತಲೆಯು ನೋಯುವದು ಏನೊ ವನದೊಳು ಹೆಬ್ಬುಲಿಯ ಕಂಡಂಜಿದಿಯೇನೋ |
ನೆಲೆಯು ತಿಳಿಯದು ನಿನ್ನಾ ಪ್ರಳಯಕಾಲಕ್ಕೆ
ಆಲದೆಲೆಯೊಳು ಮಲಗಿದವನೊ ||೨||

ಹೊತ್ತು ಬಹಳಾಯಿತು ಏಳೋ ಎಂದಿಗು
ಹಗಲ್-ಹೊತ್ತು ಮಲ್ಗಿದವನಲ್ಲೊ |
ಹೆತ್ತ ತಾಯಿಯ ಆಣೆ ಸತ್ಯಾಗಿ ನೀನು
ಪೇಳೊ ಚಿತ್ತ ವೈಕಲ್ಯವು ಯಾಕೊ ||೩||

ತಂದೆ ತಾಯಿಗಳು ನಿನ್ನಾ ನೋಡಿದರೆಷ್ಟು
ನೊಂದುಕೊಂಬುವರೊ ಮುನ್ನ |
ಕಂದಯ್ಯ ನೀನು ದಾವ ಸುಂದರಿಯಳ
ಕಂಡು ಇಂದು ಮೋಹಿತನಾಗಿರಿವೀ ||೪||

ವರ ತೇಜಿಯನೇರಿಕೊಂಡು ವನವನದಲಿ
ತಿರುಗಿ ಬಾಹುವದು ಕಂಡು |
ಸ್ಮರನ ತಾಪದಿ ಯಾವ ಪರಮ
ಪುಣ್ಯವತಿಯು ಮರುಳು ಮಾಡಿದಳೊ ನಿನ್ನ ||೫||

ದುಃಖವೇತಕ್-ಹೇಳೊ ನೀನು ಮಾಡುವೆ
ತಕ್ಕ ಉಪಾಯವ ನಾನು | ಚಿಕ್ಕ
ಬಾಲನೆ ನೀನು ನಕ್ಕು ಕೆಲದಾಡಿದರೆ
ಅಕ್ಕರವಾಗುವುದೆನಗೆ ||೬||

ನಿನ್ನ ಭಾವವು ಏನಯ್ಯ ಬೇಗನೆ
ಎದ್ದು ಎನ್ನ ಮುಂದೆ ನೀ ಪೇಳಯ್ಯ |
ಚೆನ್ನಾಗಿ ನಾ ಮಾಡುವೆ ಮುನ್ನ ಸಂಶಯ
ಬಿಡು ಚೆನ್ನಿಗಾನಂತಾದ್ರೀಶನೆ ||೭||

| ವಚನ |

ಈರೀತಿ ನುಡಿ ಕೇಳಿ ಶ್ರೀರಮಾರಮಣಾ ಕ-
ಣ್ಣೀರು ವರೆಸುತಲೆದ್ದು ಈ ರೀತಿ ಲೌಕಿಕವ
ತೋರುತಲೆ ತಾ ನುಡೀದ ಕೀರವಾಣಿಯೆ ಕೇಳು
ಆರು ಎನ್ನ ದುಃಖ ಪರಿಹಾರ ಮಾಡುವರು |
ಘೋರ ದುಃಖವು ತನಗೆ ಮೀರಿ ಬಂದರೆ ಮುನ್ನ
ಆರು ತನ್ನವರಿಲ್ಲ ಆರಿಗುಸುರಲೀ ನಾನು
ಆರಿಗ್-ಹೇಳಲಿ ಮತ್ತೆ ನೂರು ಮಾತುಗಳ್ಯಾಕೆ
ಸಾರಿ ಹೇಳುವೆ ನಿನಗೆ ಸಾರಾಂಶ ಮಾತು ||೧||

ನೀನೆ ತಾಯಿಯು ಎನಗೆ ನೀನೆ ತಂದೆಯು ಮತ್ತೆ
ನೀನೆ ಎನಗ್-ಹಿರಿಯಣ್ಣ ನೀನೆ ಸೋದರಮಾವ |
ನೀನೆ ಎನಗುದ್ಧವನು ನೀನೆ ಎನಗಕ್ರೂರ |
ನೀನೆ ಗಜರಾಜೇಂದ್ರ ನೀನೆ ಪ್ರಹ್ಲಾದಾ |
ನೀನೆ ಎನಗಜಮಿಳನು ನೀನೆ ವರ ಧ್ರುವರಾಯ |
ನೀನೆ ಎನಗರ್ಜುನನು ನೀನೆ ದ್ರೌಪದಿ ದೇವಿ |
ನೀನು ಸರ್ವವು ಎನಗೆ ನಾನು ನಿನ್ನವನು ತಿಳಿ
ನೀನೆ ಸರಿ ಎನ್ನ ಅಭಿಮಾನ ರಕ್ಷಕಳು ||೨||

ನಿನ್-ಹೊರತು ಮತ್ತಿನ್ನು ಎನ್ನ ಹಿತಕರು ಎಂಬೊ-
ರನ್ಯರನು ನಾ ಕಾಣೆ ನಿನ್ನ ಮುಂದಾಡುವದ-
ಕಿನ್ನು ಸಂಶಯವೇಕೆ ಎನ್ನ ಮನಸಿನಿನ ದುಃಖ –
ವನ್ನು ಪೇಳುವೆ ಕೇಳು ಚೆನ್ನವಾಗಿ |
ಘನ್ನವಾಗಿರುವ ಅರಣ್ಯದೊಳು ನಾ ಒಂದು
ಹೆಣ್ಣು ಕಂಡೆನೆ ತಾಯಿ ಮುನ್ನವಳ ರೂಪ ಲಾ-
ವಣ್ಯ ಪೇಳುವೆ ಲಿಂಬೆ ಹಣ್ಣಿನಂದದಲಿ ಮೈಯ-
ಬಣ್ಣ ಇರುವುದು ಮುಖವು ಹುಣ್ಣಿಮಿಯ ಚಂದ್ರಾ ||೩||

ಸಣ್ಣ ಬಳಕುವ ನಡುವು ಸಣ್ಣ ಕುಚ ಕುಡಿ
ಹುಬ್ಬು ಕಣ್ಣು ಮೂಗಿಲಿ ಚೆಲುವಿ ಬಣ್ಣಿಸಲಿ
ಎಷ್ಟು ಹಿಂದಿನ್ನು ಸಾವಿರ ಸಂಖ್ಯ ಜನ್ಮದಲಿ
ಮಾಡಿದ್ದು ಪುಣ್ಯ ಇದ್ದರೆ ಅಂಥ ಹೆಣ್ಣು ದೊರಕುವದು |
ಅನ್ಯಾಯದಲಿ ಎನ್ನ ಕಲ್ಲು ಕಲ್ಲಿಲೆ ಒಗದಳೆನ್ನ
ಕುದುರೆಯು ಪ್ರಾಣವನ್ನು ಬಿಟ್ಟಿತು ಅಲ್ಲೆ ಪುಣ್ಯದಾ
ತಾಯಿ ನಿನ್ನ ಪುಣ್ಯದಿಂದಲೆ ಉಳಿದೆ
ಮುನ್ನವಳ ಹೊರತು ಮನ ಉಣ್ಣಲೊಲ್ಲದು ನಿದ್ರೆ ಕಣ್ಣಿಗಿನ್ನೆಲ್ಲಿ ||೪||

ನಾನು ಹಿಂದಕೆ ಸುತಗೆ ಜಾಣ ಸೃಷ್ಟಿಯ ಮಾಡು
ನೀನು ಎಂದುದು ತಪ್ಪು ಅವನು ಈ ಕಾಲದಲೆ
ನಾನು ಮೋಹಿಸುವಂಥ ಜಾಣೆಯನು ಪುಟ್ಟಿಸಿದ
ನಾನು ಅಪಕೃತಿ ಅವಗೆ ಏನು ಮಾಡೀದ್ದೆ |
ಏನು ಮಾಡಲಿ ಇನ್ನು ಏನುಪಾಯವು ಎನ್ನ
ಮಾನವನು ಕಳೆದಂಥ ಮಾನಿನಿಯ ತರುವುದಕೆ
ನೀನೆ ಸರಿ ಹೆಬ್ಬುಲಿಯು ನೀನೆ ತಾರದೆ ಇರಲು
ನಾನು ಬದುಕುವನಲ್ಲ ಖೂನ ಪೇಳುವೆನು ||೫||

ಮೀನಾಕ್ಷಿ ತಿಳಿ ಜೀವದಾನ ಮಾಡಲು ದೇವ-
ಯಾನ ಬರುವದು ಹೆಚ್ಚು ಏನು ಹೇಳಲಿ ಹಿರಿಯ-
ತನ ನಿನ್ನಲ್ಲಿ ಉಂಟು ಕ್ಷೋಣಿಯಲಿ ಕೀರ್ತಿ ಪಡಿ
ನೀನು ಇದು ಒಂದು ಕಲ್ಯಾಣ್ವನು ಕಟ್ಟಿ |
ದಾನದೊಳು ಶ್ರೇಷ್ಟ ಗಜದಾನ ಸಾವಿರ ಅಶ್ವ-
ದಾನ ದಶ ಸಾಹಸ್ರದಾನ ಪಾತ್ರರಿಗೆ ಗೋ-
ದಾನ ಸಾವಿರ ಕೋಟಿ ಮಾನದಲೆ ಇಷ್ಟಕ್ಕೆ ಸ-
ಮಾನ ತಿಳಿ ಒಂದು ಕಲ್ಯಾಣ ಕಟ್ಟಿದರೆ ||೬||

ರಾಗ -ಸಾರಂಗ, ತಾಳ -ಆದಿ

ದೇವೇಶನು ನುಡಿದಂಥ ಆ ವಾಕ್ಯಕ್ಕೆ ಬಕುಲಾ
ದೇವಿ ತಾ ನುಡಿದಳು ಆ ಕಾಲಕ್ಕೆ ಹೀಗೆ |
ದೇವಾಧೀಶನೆ ನಿನ್ನ ಕೇವಲ ಮರುಳು
ಈವತ್ತಿಗೆ ಮಾಡಿದಳು ಯಾವಾಕೆ ಅವಳು ||೧||

ಯಾವಲ್ಲಿರುವಳಾಕೆ ಯಾವಾತನ ಮಗಳು
ಪೂರ್ವಜನ್ಮದಲಾಕೆ ಯಾವಾಕೆ ಪೇಳು |
ಯಾವ ಕಾರಣದಿಂದ ಈ ಊರ್ವಿಯೊಳು
ಭಾವಿಸಿ ಬಂದಿಹಳು ಆ ವಾರ್ತೆ ಪೇಳೋ ||೨||

ಅಂತಃಕರಣವ ಮಾಡುವಂಥ ಜನನಿಯಳಾ
ಇಂಥ ಮಾತನು ಲಕ್ಸ್ಮೀಕಾಂತ ತಾ ಕೇಳೀ |
ಅಂತರಂಗದಲಿರುವ ವೃತ್ತಂತಗಳೆಲ್ಲಾ
ಚಿಂತಿಸಿ ನುಡಿದಾ ಶ್ರಿಮದನಂತಾದ್ರೀಶ ||೩||

| ವಚನ |

ಪೂರ್ವದಲಿ ಶ್ರೀರಾಮದೇವ ಸೀತೆಯ ಕೂಡಿ
ತಾ ವನದಲ್ಲಿರುತುರಲು ರಾವಣನು ಇಬ್ಬರಿಗೆ
ತಾ ವಿಯೋಗವ ಮಾಡಿ ದೇವಿಯನು ಅಪಹರಿಸಿ
ತಾ ಒಯ್ಯ ಬೇಕೆಂಬೊ ಭಾವದಲಿ ಬಂದಾ |
ಆ ವೇಳೆಯಲಿ ರಾಮದೇವ ಪತ್ನಿಯು ತನ್ನ
ರೂಪ ನಿರ್ಮಿಸಿ ಅಗ್ನಿದೇವ ಪತ್ನಿಯಲಿದ್ದ
ಶ್ರೀವೇದವತಿಯನ್ನು ದೇವೇಂದ್ರನ ಸಹಿತ
ಆವಾಹನವ ಮಾಡಿ ತಾ ವಾಸ ಮಾಡಿದ್ದಳು
ಕೈಲಾಸದಲ್ಲಿ ||೧||

ಮಂದಮತಿರಾವಣನು ಸುಂದರಾಕೃತಿ ಒಯ್ದ
ಮುಂದೆ ರಾಮನು ಅವನ ಕೋದು ಆ ಸೀತೆಯನು
ತಂದು ಅಪವಾದ ಭಯದಿಂದ ತಾನಗ್ನಿಯಲಿ
ಛಂದದಿ ಪ್ರವೇಶ ತ್ವರದಿಂದ ಮಾಡಿಸಿದ |
ಬಂದರಿಬ್ಬರು ಅಗ್ನಿಯಿಂದ ಸೀತೆಯರಾಗ
ಛಂದಾಗಿ ನೋಡಿ ನಿಜಸುಂದರಿಗೆ ತಾ ನುಡೀದ
ಇಂದು ನಿನ್ನಂಥಾಕೆ ಬಂದವಳು ಇವಳಾರು
ಎಂದ ಮಾತಿಗೆ ಸೀತೆ ಅಂದಳ್-ಹೀಂಗೆ ||೨||

ಲೋಕನಾಥನೆ ಕೇಳು ಈಕೆ ತಿಳಿ ವೇದವತಿ
ಈಕೇನೆ ಹಿಂದಕೆ ಅಶೋಕವನದಲಿ ಬಹಳ
ಶೋಕಬಟ್ಟಂಥಾಕೆ ಈಕೆಯ ಸ್ವೀಕರಿಸು
ಈ ಕಾಲಕೆ ಎನ್ನ ಮೇಲೆ ನೀ ಕರುಣದಿಂದ |
ಕಾಕುತ್ಸ್ಥನೀ ಮಾತು ತಾ ಕೇಳಿ ಮೌನದಲಿ
ಹೇ ಕಾಂತೆ ನೀ ಕೇಳು ಏಕಪತ್ನಿಯ ವ್ರತವು
ಈ ಕಾಲಕೆನಗುಂಟು ಈಕೆ ಕಲಿಯುಗದಲ್ಲಿ
ಆಕಾಶನೃಪಪುತ್ರಿ ಆಗುವಳು ಮುಂದೆ ||೩||

ಆ ಕಾಲದಲಿ ನಾನು ವೇಂಕಟೇಶನು ಆಗಿ
ಈಕೆಯನು ವಿಧಿಯಿಂದ ಸ್ವೀಕರಿಸುವೆಂತೆಂದ
ಆಕೆ ಪದ್ಮಾವತಿಯು ನೀ ಕೇಳು ಎಲೆ ತಾಯಿ
ಆಕೆಯ ಕೂಡಿಸು ವಿವೇಕಂದಿಂದ |
ಆ ಕಾರ್ಯವನು ಮಾಡು ನೀ ಕಾಲಕಳೆಯದಲೆ
ಯಾಕೆ ತಡ ನಿನ್ನ ಮನಕೆ ಬೇಕಾದ ಕುದುರೆಯಲಿ
ನೀ ಕುಳಿತು ನಡೆಯೆಂದ ಆಗ ಬಕುಲಾವತಿಯು
ತಾಂ ಕೇಳಿ ನುಡಿದಳಾ ವೈಕುಂಠಪತಿಗೆ ||೪||

ರಾಗ- ರೇಗುಪ್ತಿ, ತಾಳ- ಝಂಪೆ

ಇದಕ್ಯಾಕಿಷ್ಟೊಂದು ಚಿಂತೆ ವೇಂಕಟರಾಯ ||ಪ||

ಇದಕ್ಯಾಕಿಷ್ಟೊಂದು ನಾ ಪದುಮಾವತಿಯ ತರುವೆ
ಪದುಮನಾಭನೆ ತಿಳಿ ಪದರಿಗೆ ಗಂಟಿದು ||ಅ.ಪ||

ಮಾತಿಲಿ ಒಲಿಸುವೆನು ಹಾದಿಯ ತೋರೊ
ಹಾತೊರೆಯಬೇಡೊ ನೀನು |
ಸೋತು ಕಣ್ಣೀಗೆ ನಿದ್ರೆ ಆತುರಾದರೆ ಏಣು
ಕೂತು ಮಲಗಲುಬೇಕು ನೀ ತಿಳಿ ದೇವನೆ ||೧||

ಬರುವೆನೀ ಕಾರ್ಯವ ಮಾಡಿ ಸುಮ್ಮನೆ
ಅನಕಾ ಇರುತಿರು ಧೈರ್ಯಮಾಡಿ |
ತ್ವರ ಮಾಡಿ ಹಸಿವೆಯ ಭರ ಇದ್ದ ಕ್ಷಣಕೇನು
ಎರಡು ಕೈಲುಂಬೋರೆ ಪರಮ ಪುರುಷನೆ ||೨||

ಧರೆಯೊಳೆಲ್ಲಿದ್ದರೇನು ನಿನ್ನ್ವಳಾಕೆ
ಸರಸದಿ ತಿಳಿಯೋ ನೀನು |
ಕರಗಿದ ತುಪ್ಪವು ಹರಿವಾಣವನು ಬಿಟ್ಟು
ಹರಿದು ಹೋಗುವುದೇನೋ ವರದಾನಂತಾದ್ರೀಶ ||೩||

| ವಚನ |

ಇಷ್ಟು ಮಾತಿಗೆ ಹರಿಯು ಥಟ್ಟನೆ ಮಾಯದಲೆ
ದಿಟ್ಟಾದ ಕುದುರೆಯನ್ನು ಸೃಷ್ಟಿಯನು ತಾ ಮಾಡಿ-
ಕೊಟ್ಟು ನುಡಿದ ನೆಟ್ಟನೆ ಮಾರ್ಗವಿದು
ಮೆಟ್ಟಿ ನೀ ನಡಿಯಮ್ಮ ಬೆಟ್ಟವನು ಇಳಿದು |
ಬೆಟ್ಟದ ಕೆಳಗಿರುವ ಶ್ರೇಷ್ಠ ಕಪಿಲೇಶ್ವರನ
ದೃಷ್ಟಿಂದ ಕಾಣುತಲೆ ಥಟ್ಟನೆ ಕೈಮುಗಿದು
ಘಟ್ಟಿಮುಟ್ಟ ವರ ಬೇಡಮ್ಮ ಬೆಟ್ಟದ ವೇಂಕಟಗೆ
ಥಟ್ಟನೆ ಕಲ್ಯಾಣ ಕಟ್ಟಲೆಂದು ||೧||

ಮುಂದೆ ಶುಕ ಮುನಿಯಿದ್ದ ಛಂದಾದಶ್ರಮಕ್-
ಹೋಗಿ ವಂದಿಸ್ಯಾತಗೆ ನೀನು ಮುಂದೆ ಕಲ್ಯಾಣ ಬರ-
ಲೆಂದು ಬಯಸುವಂಥ ಕಂದ ಗೋವಿಂದ ನಿನಗೊಂದಿಸಿದನೆಂದ್-ಹೇಳು ಛಂದದಿಂದ |
ಮುಂದೆ ಪದ್ಮಾಖ್ಯ ಬಹು ಛಂದಾದ ತೀರ್ಥದಲಿ
ಸುಂದರನು ಕೃಷ್ಣರಾಮೆಂದು ಎನಿಸುವರಲ್ಲಿ
ವಂದಿಸ್ಯವರಿಗೆ ಭಕ್ತಿಂಯಿಂದ ಪೂಜಿಸು ಕಾರ್ಯ
ಛಂದಾಗಿ ಕೈಗೂಡಲೆಂದು ನೀನು ||೨||

ಹಾಗೆ ಮುಂದಕೆ ಮತ್ತೆ ಸಾಗಿ ಆಕಾಶಪುರಕ್-
ಹೋಗಿ ಪದ್ಮಾವತಿಯ ಬೇಗ ಘಟನೆಯ ಮಾಡು ||
ಯೋಗಬಲ್ಲವಳಿಗ್-ಹೆಚ್ಚಾಗಿ ಪೇಳಲಿಯೇನು
ಹ್ಯಾಗೆ ಕಾರ್ಯಾದೀತೋ ಹಾಗೆ ಮಾಡು |
ನಾಗಶಯನನ ಮಾತು ನಾಗವೇಣಿಯು ಕೇಳಿ
ನಾಗಗಿರಿ ಇಳಿದು ಚೆನ್ನಾಗಿ ನಡೆದಳು ಹರಿಯು
ಹ್ಯಾಗೆ ಹೇಳಿದನು ಅದರ್-ಹಾಂಗೆ ಮಾಡುತ ಮುಂದೆ
ಬೇಗಗಸ್ತ್ಯಾಶ್ರಮಕೆ ಸಾಗಿದಳು ತಾನು ||೩||

ಮುಂದೆಗಸ್ತೀಶ್ವರನ ಮೋದದಲೆ ಬಲಗೊಂಡು
ಐದುಸಂಖ್ಯಾಕ ನತಿಗೈದು ಕುಳ್ಳಿರಲು ಅಲ್ಲೆ
ಶ್ರೀಧರನ ಕಾರ್ಯದಲಿ ಸಾಧಕಳು ಆಗಿ |
ಬೋಧಿಸೀ ಪರಿಯು ಬಕುಲಾ ದೇವಿಯನು ಕಳುಹಿ
ಹಾದಿ ತೋರಿಸಿದಂಥ ಶ್ರೀಮದನಂತ
ಭೂಧರೇಶನ ಪೂರ್ಣದಯದಿ ವಿಘ್ನಗಗಳೆಲ್ಲ
ಕೊಯಿದು ಮುಗಿಯಿತು ಇಲ್ಲಿಗೈದು ಅಧ್ಯಾಯ ||೪||

ಐದನೆಯ ಅಧ್ಯಾಯವು ಸಂಪೂರ್ಣಂ |

Adhyaya 6

ಕೊರವಂಜಿ ಪದಗಳು

ಅಘಟ್ಯಘಟನಾಪಟ್ವೀ ಪುಲಿಂದಾ ಶ್ರೀಪತೇಸ್ತನುಃ |
ನೃಪಜಾಸ್ಮರಪೀಡಾಂ ತಾಂ ಕಥಯಂತೀ ಹರೇದಘಮ್ ||

ರಾಗ: ನಾಟಿ , ತಾಳ : ಝಂಪೆ

ಜಯ ಜಯಾ || ಪ ||
ಜಯ ಜಯಪ್ರದವೇಷ ಜಯ ನಿತ್ಯ ಸಂತೋಷ |
ಜಯತು ಜಯ ಲಕ್ಷ್ಮೀಶ ಜಯ ವೇಂಕಟೇಶ || ೧ ||

ಪದ್ಮಜಾಕೃತಯಾತ್ರ ಪದ್ಮವಿಕಸಿತನೇತ್ರಾ |
ಪದ್ಮಜಾಸನಮುಖ್ಯ ಪದ್ಮನಾಭಾಖ್ಯ || ೨ ||

ಗುರ್ವನುಗ್ರಹಗಮ್ಯ ಗುರುಗುಣಾರ್ಣವ ಸೌಮ್ಯ |
ಗುರ್ವನಂತಾದ್ರೀಶ ಗುರುಸುಪ್ರಕಾಶ || ೩ ||

| ವಚನ |

ಸಿರಿಸಹಿತ ಶೇಷಾಖ್ಯಗಿರಿಯಲ್ಲಿ ಇರುವಂಥ
ಪರಮಪುರುಷನ ಪಾದ ಸರಸಿಜಂಗಳ ನಿತ್ಯ
ಸ್ಮರಿಸಿ ನತಿಸುವೆ ಮತ್ತೆ ಮರೆಯದೆ ಮನದಲ್ಲಿ
ಸ್ಮರಿಸಿ ಗುರುಗಳಿಗೆಲ್ಲ ಕರವ ಮುಗಿವೆ |
ವರ ಬುದ್ಧಿಯಲ್ಲಿ ಎನ್ನ ಶಿರಮೆಟ್ಟಿ ಹಾರುತಲೆ
ಇರುವಂಥ ಲೋಕದಲಿ ವರ ಕವೀಶ್ವರರುಗಳಿಗೆ
ಕರಮುಗಿದು ಎನ ಬುದ್ಧಿ ಹರಿದಷ್ಟು ಪೇಳುವೆನು
ವರ ವೇಂಕಟಾಧೀಶ ಕೊರವಂಜಿ ಕಥೆಯ || ೧ ||

ಚೆನ್ನಿಗನು ಘನಮಹಿಮ ಪನ್ನಗಾದ್ರೀಶ ತಾ
ಮುನ್ನಾಗಿ ನಾರಿಕುಲರನ್ನಬಕುಲಾವತಿಗೆ
ಚೆನ್ನಾಗಿ ಬೋಧಿಸುತ ತನ್ನ ಕಾರ್ಯಕೆ ಕಳುಹಿ
ಮುನ್ನ ಅಲೋಚಿಸಿದ ತನ್ನ ಮನದೊಳಗೆ |
ಎನ್ನ ಕಾರ್ಯಕ್ಕೆ ಅನ್ಯರೂಪವ ಧರಿಸಿ
ಇನ್ನು ನಾ ಪೋಗುವೆನು ತನ್ನ ಕಾರ್ಯವು ಮತ್ತೆ
ಅನ್ಯರಿಗೆ ಪೇಳಿದರೆ ತನ್-ಹಾಗೆ ಮನಗೊಟ್ಟು
ಮುನ್ನ ಮಾಡುವರಲ್ಲ ಚೆನ್ನವಾಗೀ || ೨ ||

ಒಬ್ಬ ಮಗ ಮಗನಲ್ಲ ಒಕ್ಕಣ್ಣು ಕಣ್ಣಲ್ಲ
ಉಬ್ಬುಬ್ಬಿ ವನಿತೆಯರು ಕೊಬ್ಬಿಲಾಡಿದ ಮಾತು
ಒಬ್ಬರಲಿ ನಿಜವಲ್ಲವೆಂಬ ಈ ರೀತಿ ಅವ-
ಲಂಬಿಸುತ ಕೊರವಂಜಿಯೆಂಬೊ ರೂಪವಾದ |
ಗಂಭೀರ ಕೊರವಿ ಮುಖವೆಂಬುವದು ಬಾಡಿಹದು
ಗುಂಭ ಬಾಯ್ವಳಗ್-ಹಲ್ಲು ವೆಂಬುವದು ಒಂದಿಲ್ಲ
ಲಂಬ ಕರ್ಣಗಳಿಹವು ಲಂಬ ಕುಚಗಳು ಮತ್ತೆ
ಲಂಬೋದರೀಯೆನಿಸಿಕೊಳ್ಳುವಳು ತಾನು || ೩ ||

ಚೀರ ವಸ್ತ್ರವನುಟ್ಟು ಛಿದ್ರ ಕುಪ್ಪಸ ತೊಟ್ಟು
ಥೋರ ಜಡೆಗಳ ಧರಿಸಿ ಧೀರ ಕಮಲೋದ್ಭವನ
ಆರೊಂದು ತಿಂಗಳಿನ ಚೀರ ಶಿಶುವನು ಮಾಡಿ
ಸಾರ ಬ್ರಹ್ಮಾಂಡವೆ ಥೋರ ಬುಟ್ಟಿಯ ಮಾಡಿ
ಚಾರು ನವಧಾನ್ಯಗಳ ಪೂರ ತುಂಬಿದಳು |
ಚಾರು ಫಣೆಯಲ್ಲಿ ಕಸ್ತೂರಿತಿಲಕವನಿಟ್ಟು
ಹಾರ ಪದಕವ ಧರಿಸಿ ಥೋರ ಮೂಗುತಿಯಿಟ್ಟು
ಗೀರು ಕಂಕಣ ಕೈಗೆ ಚಾರು ಬಿರುದಾವಳಿಯ
ತೋರುತಲೆ ಕಟ್ಟಿದಳು ನಾರಿ ತಾನೈವತ್ತುಪೂರ
ವಯದವಳಾಗಿ ತೋರುತಿಹಳು || ೪ ||

ಜೋಲುಗಿವಿಯಲಿ ತಕ್ಕ ವಾಲೆಯನು ಇಟ್ಟು ಮಣಿ-
ಮಾಲೆಗಳ ಧರಿಸಿದಳು ಮೂಲದಲಿ ಶಂಖಮಣಿ
ಮೇಲೆ ಗುಲುಗುಂಜಿಮಣಿ ಮೇಲಾದ ಶ್ರೀ ತುಲಸೀಮಣಿ
ಮೇಲೆ ಶ್ರೀಗಂಧಮಣಿ ಮೇಲೆ ಕರ್ಪೂರಮಣಿ ಮೆಲ್ಲಗ್-ಹಾಕಿದಳು |
ಮೇಲೆ ಸ್ಫಟಿಕದ ಮಣಿಯು ಮೇಲೆ ಕಮಲಾಕ್ಷಮಣಿ
ಜೋಲೆ ಮೊಲೆಗಳ ಮೇಲೆ ಸಾಲ್-ಹಿಡಿದು ವಿವಿಧಮಣಿ
ಮಾಲೆಗಳ ತಾ ಧರಿಸಿ ಬಾಲೆ ಕಟ್ಟಿದಳು ತನ್ನ
ಬಾಲಕನ ಉಡಿಯಲ್ಲಿ ಕೋಲು ಕೈಯಲಿ ಪಿಡಿದು ನಡೆದಳಾಗಾ || ೫ ||

ರಾಗ- ಸಾರಂಗ, ತಾಳ – ಆದಿ

ಗಿರಿಯಿಂದ ನಾರಾಯಣಪುರಕೆ ಬಂದಳು
ಪುರ ಬಾಗಿಲುಗಳನೆಲ್ಲ ತ್ವರದಿ ದಾಟಿದಳೂ,
ತಿರುವಿದ ಸೆರಗು ತಿರುತಿರುಗಿ ಹೋದವು ತಲೆ
ತಿರುಗಾಡುತ ಬಂದಳು ತಿರುಕೊಂಬುವರಂತೆ || ೧ ||

ಮನೆಮನೆ ಬಾಗಿಲನು ಮೆಟ್ಟುತಿಹಳು
ಮನಸಿಗೆ ಬಂದ್-ಹಾಗೆ ಧ್ವನಿ ಮಾಡುತಿಹಳು
ಮನಗೊಟ್ಟು ಕೇಳಿರಿ ಎನ್ನ ತಾಯಿಗಳಿರಾ
ಮನದ ಮಾತುಗಳ್-ಹೇಳುವೆ ಮನೆಯವ್ವಗಳಿರಾ || ೨ ||

ಹಿಂದಾದುದ ಹೇಳೇನು ಇಂದಾದುದ ಮತ್ತೆ
ಛಂದಾಗಿ ಪೇಳೇನು ಮುಂದಾಗುವುದೆಲ್ಲ |
ಹಿಂದಕ್ಕೆ ನಾ ಬಹಳ ಮಂದಿಗ್-ಹೇಳಿದೆನು
ಒಂದೂ ಸುಳ್ಳಾಗಿಲ್ಲ ಸಂದೇಹವಿಲ್ಲ || ೩ ||

ಸಾಮ ಭೇದವು ಬಲ್ಲೆ ಸಾಮುದ್ರಿಕೆ ಬಲ್ಲೆ
ಹೈಮಾದಿ ಜ್ವರಕೌಷಧ ನಾ ಮಾಡಲು ಬಲ್ಲೆ |
ಕಾಮಿನಿಯರಿಗಾದ ಕಾಮಜ್ವರ ಬಲ್ಲೆ
ಕೌಮಾರಿಗಳಿಗಂತು ನಾ ಮುಂಚೆ ಬಲ್ಲೆ || ೪ ||

ಭೂತಬಿಡಿಸಲು ಬಲ್ಲೆ ಬೇತಾಳವು ಬಲ್ಲೆ
ಮಾತಾಡದ ಮೂಕರನು ಮಾತಾಡಿಸಬಲ್ಲೆ |
ನೀತಿ ನುಡಿಗಳ ಬಲ್ಲೆ ಜ್ಯೊತಿಷ್ಯವ ಬಲ್ಲೆ
ಕೂತು ಕೇಳಿದರೆಲ್ಲ ಮಾತ್-ಹೇಳಲು ಬಲ್ಲೆ || ೫ ||

ಹಸನಾಗಿ ಪೇಳುವೆ ಕುಶಲಾದ ವಾಣೀ
ಹುಸಿಯಲ್ಲವಿದು ಎನ್ನ ಹಸುಗೂಸಿನಾಣೆ |
ಅಸು ಹೋದರು ನಾನಲ್ಲ ಹುಸಿಯಾಡುವ ಕೊರವಿ |
ವಸುಧೀಯೊಳಗೆ ನಾನು ಹೆಸರಾದ ಕೊರವಿ ||೬||

ನರನಾರಾಯಣರಲ್ಲೆ ಇರುವಂಥ ಕೊರವಿ |
ವರದನಂತಾದ್ರೀಶನ ವರವುಳ್ಳ ಕೊರವೀ |
ಕೊರವಿ ಮಾತನು ಕೇಳಿ ಪುರದ ನಾರಿಯರು
ಅರಸಿನ ರಾಣಿಗೆ ತ್ವರದಿ ಪೇಳಿದರು |೭|

ರಾಗ: ಪೂರ್ವಿ , ತಾಳ- ಬಿಳಂದೀ

ಕೊರವಿ ಬಂದಳಮ್ಮ ಇಲ್ಲಿಗೆ ಈ ಕೇರಿಗೆ || ಪ ||

ಕೊರವಿ ಬಂದಳಮ್ಮ ಇಲ್ಲೆ ಖರೆಯ ಮಾತ ಪೇಳುತಿಹಳು |
ಪುರದ ಜನರು ನೆರೆದು ಬಹಳ ಆದರಬಟ್ಟು ಕೇಳುತಿಹರು || ಅ.ಪ ||

ಹೃದಯಭಾವ ಬಲ್ಲವಳು ಮಧುರ ಮಾತನಾಡುತಿಹಳು |
ಮುದದಿ ಕೇಳಿದ್-ಹೇಳುವಳು ಮುದುಕಿಯಾಗಿ ತೋರುತಿಹಳು || ೧ ||

ಚಿಕ್ಕ ಹೆಣ್ಣುಮಕ್ಕಳೀಗೆ ತಕ್ಕ ವರರ ಹೇಳುತಿಹಳು |
ಮಕ್ಕಳ ಹೇಳುವಳು ತನ್ನ ಮಕ್ಕಳಾಣೆ ಕೊಡುತಿಹಳು || ೨ ||

ನರನಾರಾಯಣರು ಎಲ್ಲಿ ಇರುವರಲ್ಲೆ ಇರುವಳಂತೆ |
ವರದನಂತಾದ್ರೀಶ ಕೊಟ್ಟು ವರವನುಳ್ಳ ಕೊರವಿಯಂತೆ || ೩ ||

ರಾಗ : ಕನಡಕಾಂಬೋದಿ ತಾಳ : ಆಟ

ಕೊರವಿ ಬಂದದ್ದು ಕೇಳಿ ಕರೆಯಿರೆಂದಳು ಬೇಗ |
ಅರಸನ ಪಟ್ಟದರಾಣಿ ಪನ್ನಗವೇಣಿ || ೧ ||

ಅರಸಿ ಮಾತನು ಕೇಳಿ ಅರಸಂಚೆಗಮನೇರು |
ತಿರುಗಿ ಬಂದರು ಮತ್ತಲ್ಲೆ ಕೊರವಿ ಇದ್ದಲ್ಲೆ || ೨ ||

ಕೊರವಿ ಬಾರಮ್ಮ ನಿನ್ನ ಕರೆದಳರಸಿಯು ಎಂದು |
ಕರೆದಾರು ಕೈಯ ಬೀಸುತ ಕಣ್ಣ ತೆರವುತ || ೩ ||

ಕುಡುತೆಕಂಗಳೇರ ನುಡಿ ಕೇಳಿ ಕೊರವಂಜಿ |
ನುಡಿದಳೀ ಪರಿಯು ವಾಣೀ ಮಾತಿನ ಜಾಣೀ || ೪ ||

ಆಕೆ ಕರದಾಳು ಎನ್ನ ಲೋಕನಾಥನ ರಾಣಿ |
ಆಕೆ ಸೌಭಾಗ್ಯದ ವಡವೀ ಹುಟ್ಟು ನಾ ಬಡವೀ || ೫ ||

ಎನ್ನ ವಸ್ತ್ರವು ನೋಡೀ ಎನ್ನ ಕುಪ್ಪುಸ ನೋಡೀ |
ಎನ್ನ ಒಡವೆಯ ನೋಡಿರಿ ಮಾತನಾಡಿರೀ || ೬ ||

ಅನ್ನ ಹೀನಳು ನಾನು ಘನ್ನ ರಾಜನ ರಾಣೀ |
ಎನ್ನ ಕರೆದಾಳೆಂಬುವದು ಅಪಹಾಸ್ಯವಿದು || ೭ ||

ಚಿಕ್ಕಪ್ರಾಯದವರೆ ಚಕ್ಕಂದವೆ ನಿಮಗಿದು |
ನಕ್ಕು ಮಾಡುವಿರ್ಯಾ ಬಂಡು ಮುದುಕಿಯ ಕಂಡು || ೮ ||

ಕಂಜ ಮುಖಿಯರು ಕೊರವಂಜಿ ಮಾತನು ಕೇಳೀ |
ಅಂಜಿ ಮಾತಾಡಿದರಾಗ ವಿನಯದಿ ಬೇಗ || ೯ ||

ಧರ್ಮದೇವಿ ನಿನ್ನ ಮುಂದೆ ಸುಮ್ಮನೆ ಸುಳ್ಳಾಡಲು |
ಒಮ್ಮೆಗಾದರು ದಕ್ಕೀತೆ ಆಡೋದು ರೀತ್ಯೇ || ೧೦ ||

ಅಂದ ಮಾತನು ಕೇಳಿ ಮಂದ ಹಾಸದಿ ನಕ್ಕು |
ಬಂದೆ ನಡಿರೆಂದಳು ಮುಂದೆ ಆನಂದದಿಂದ || ೧೧ ||

ಹರಿ ನಾರಾಯಣಿಯೆಂಬೊ ಕೊರವಿ ನಡೆದಳಲ್ಲಿಗೆ |
ಅರಮನೆ ಬಾಗಿಲದೊಳಗೆ ಅಂಗಳದೊಳಗೆ || ೧೨ ||

ಮೇಳ ಸ್ವರದಿಂದಾನಂತ ಶೈಲೇಶನ ಕೊಂಡಾಡಿ
ಕೋಲು ಕೋಲೆಂದು ಪಾಡುವಳು ಮಾಯಾ ತೋರುವಳು || ೧೩ ||

ರಾಗ – ಶಂಕರಾಭರಣ, ತಾಳ – ಅದಿ

ಕೋಲು ಕೋಲೆನ್ನ ಕೋಲು, ಮುತ್ತಿನ, ಕೋಲು ಕೋಲೆನ್ನ ಕೋಲು |
ಕೋಲನಾಡುವ ಬನ್ನಿ, ಬಾಲ ವೇಂಕಟಪತಿ,
ಲೀಲೆ ಕೊಂಡಾಡುತಲೆ || ಪ ||

ಪರಮದಯಾಳು ಹರಿ, ಭೃಗುಮುನಿ
ಭರದಿಂದೊದೆವುತಿರೇ |
ತಿರುಗಿ ಕಾಲ್-ಹಿಡಕೊಂಡು ಪರಿಪರಿ ಸ್ತುತಿಸಿದಾ || ೧ ||

ಪರಮ ಚಂಚಲ ಲಕ್ಷ್ಮೀ,
ತಾ ಶ್ರೀಹರಿ ನಡತೆಯ ನೋಡಿ |
ಭರಿಸದೆ ಕೊಲ್ಹಾಪುರಕೆ ನಡೆದಳು || ೨ ||

ಸಿರಿಯಿಲ್ಲದೆ ನಾನು, ಒಬ್ಬನೆ ಇರಲಾರೆನು ಎಂದು |
ಹರಿ ವೈಕುಂಠದಿ ಧರೆಗಿಳಿದನು || ೩ ||

ಉತ್ತಮ ವೈಕುಂಠಾ, ಇರಲು ಮತ್ತುರಗಾದ್ರಿಯಲಿ |
ಹುತ್ತ ಮನೆಯ ಮಾಡಿ ಗುಪ್ತದೊಳಿರುತಿಹ || ೪ ||

ನಿತ್ಯ ನಿರ್ವಿಕಾರ, ಶ್ರೀಹರಿ ಭಕ್ತರ ಅಭಿಮಾನೀ |
ನೆತ್ತಿಯ ಒಡಕೊಂಡು ಭಕ್ತನ ಸಲಹಿದ || ೫ ||

ಭವರೋಗದ ವೈದ್ಯ, ತಾನೆನಿಸುವನು
ಗುರುವ ಕರೆದಾ |
ಅವನಿಂದಲ್ಲೆ ಘಾಯವ ಕಳೆದನೂ || ೬ ||

ಭೂಮಿರಮಣ ವರಹಾ, ದೇವನ ಭೂಮಿಯ ತಾ ಬೇಡೀ |
ಸ್ವಾಮಿ ಪುಷ್ಕರಣೀ ಸೀಮೆ ಸಾಧಿಸಿದಾ || ೭ ||

ನೋಟದಿಂದ ಚೆಲುವ, ತಾ ಬಹುಮಾಟ ಕುದುರೆ ಏರೀ |
ಧಾಟಿನಿಂದ ಮೃಗಬೇಟೆಗೆ ನಡೆದನೂ || ೮ ||

ವನ ವನ ಸಂಚರಿಸಿ, ಅಲ್ಲೊಬ್ಬ್ವನಿತೆಯಳನು ಕಂಡಾ |
ಮನಸಿಟ್ಟನು ಆ ವನಿತೆಯ ಮೇಲೇ || ೯ ||

ಆ ವನಿತೆಯು ಕನ್ಯಾ, ತಾ ಪದ್ಮಾವತಿಯೆನಿಸುವಳೂ
ಹೂವಿಗೆ ಬಂದಳಾ ವನದಲ್ಲೆ || ೧೦ ||

ವಾರಿಗೆ ಗೆಳತಿಯರಾ, ಕೂಡಿ ವಿಹಾರ ಮಾಡುತಿಹಳೂ |
ಸಾರೇಕ ನಡೆದನು ಶ್ರೀರಮಣನು ತಾ || ೧೧ ||

ನಾಡೊಳಗಿನ ರೀತಿ, ಎಲ್ಲರು ಆಡುವಂಥ ಮಾತು |
ಆಡಿದ ಕಲ್ಲೀಡ್ಯಾಡಿದಳಾಕೇ || ೧೨ ||

ಪೆಟ್ಟುತಾಗಿ ಕುದುರೆ ಪ್ರಾಣವ ಬಿಟ್ಟಿತು ಆಗಲ್ಲೇ |
ಬಿಟ್ಟಾ ಕುದುರೆಯ ಬೆಟ್ಟವನೇರಿದಾ || ೧೩ ||

ಆ ಮಾನಿನಿ ಅವಗೆ, ಮೋಹಿಸಿ ತಾ ಮಾತಾಡದಲೇ |
ಕಾಮಜ್ವರದಿಂ ತಾ ಮಲಗಿಹಳು || ೧೪ ||

ಪ್ರಾಂತಕನಂತಾದ್ರಿ, ಯಲ್ಲಿಹ ಶಾಂತಮೂರುತಿ ಹೊರ್ತು |
ಅಂತರಂಗ ಜ್ವರ ಶಾಂತವಾಗದು ಕೋಲು ಕೋಲೆನ್ನ ಕೋಲು || ೧೫ ||

| ವಚನ |

ಕೊರವಿಧ್ವನಿ ಕೇಳುತಲೆ ಅರಸನಾ ಪುತ್ರಿ ತಾ
ಸ್ಮರಣೆಯಿಂದಲೆ ಎದ್ದು ಪರಮಚಂಚಲಳಾಗಿ
ಹೊರಗೆ ಬಂದಳು ಅಲ್ಲೆ ಕೊರವಿಯನು ಕಂಡು ಹೊಸ
ಕೊರವಿ ಇವಳ್ಯಾರೆಂದು ಬೆರಗಾದಳಾಗ |
ಅರಸಿ ಮಗಳನು ಕಂಡು ಹರುಷದಲೆ ಬಿಗಿದಪ್ಪಿ
ಕೊರವಿ ಕಾಲ್ಗುಣದಿಂದ ಹೊರಗೆ ನೀ ಬಂದ್ಯಮ್ಮ
ಸರಸವಾಯಿತು ಎಂದು ಇರಿಸಿ ತನ್ನ ತೊಡೆಮ್ಯಾಲೆ
ಕೊರವಿಯನು ಮುಂದಕ್ಕೆ ಕರೆದಳಾಗ || ೧ ||

ಕೊರವಿ ನೀ ಬಾರಮ್ಮ ವರ ಧರ್ಮ ದೇವತೆಯೆ
ಸರಿಯುಂಟು ನಿನ್ನಿಂದ ಪರಮ ಲಾಭಿವಳಿಗೆ
ಜ್ವರ ತಾಪವಾದದ್ದು ಪರಿ ಕೇಳಬೇಕೆಂದು
ಕರಿಯ ಕಳಿಉಹಿದೆ ನಿನ್ನ ತ್ವರದಿಂದ ನಾ ಇಲ್ಲೆ
ಪರಮ ಆಸನದ ಮ್ಯಾಲೆ ಸರಸಾಗಿ ಕೂಡೆ |
ಜ್ವರ ತಾಪದಿಂದೀಕೆ ಹೊರಳಾಡುವುದ ಕಂಡು
ಮರುಗುತಲೆ ನಿನ್ನನ್ನು ತ್ವರದಿಂದ ವದರಿದೆರೆ
ತೆರೆಯಲಿಲ್ಲವು ಕಣ್ಣು ಹೊರಡಲಿಲ್ಲವು ಮಾತು
ಸ್ಮರಣಿಲ್ಲ ಮೈಮೇಲೆ ಕೊರವಿ ನಿನ ಧ್ವನಿ ಕೇಳಿ
ಹೊರಗೆ ಬಂದಳು ಹ್ಯಾಗೆ ಪರಮ ಆಸ್ಚರ್ಯವಿದು
ಸರಸಾಗಿ ಪೇಳೆ || ೨ ||

ಮಾನಿತಾಸನದಲ್ಲಿ ಮಾನಿತಳು ಕೊರವಿ
ಸನ್ಮಾನದಿಂದಲೆ ಕುಳಿತು ತಾನು ಮಾತಾಡಿದಳು
ನೀನು ಕೇಳುವುದೆಲ್ಲ ನಾನು ಪೇಳುವೆ ರಾಜ –
ಮಾನಿನಿಯೆ ನೀ ಯೆನಗೆ ಏನು ಕೊಡುವೀ |
ಏನು ನಾ ಕೊಡಲೆಂದು ನೀನು ಧ್ಯಾನಿಸಬೇಡ
ಖೂನ ಪೇಳುವೆ ನಿನಗೆ ಜಾನಕಿಯು ಪೂರ್ವದಲ್ಲಿ
ಜಾಣೆ ಆ ಕೌಸಲ್ಯೆ ಮಾನದಲಿ ರುಕ್ಮಿಣಿಯು
ದಾನಶೂರಳು ಸತ್ಯಭಾಮಿನಿಯು ಅವರೆಲ್ಲ
ಏನು ಕೊಟ್ಟದ್ದು ಕೊಡು ನೀನು ಅದಕಿಂತ ಹೆಚ್ಚೇನು ಕೊಡಬೇಡವಮ್ಮ || ೩ ||

ಬರೆ ಮಾತನು ಕೇಳಿ ತಿರುಗಿ ಇನ್ನೊಮ್ಮೆ ಬಾ
ಕೊರವಿ ಯೆಂದರೆ ಮತ್ತೆ ಬರುವವಳು ನಾನಲ್ಲ
ಅರಸಿ ಬೇಗನೆ ಮುಂಚಿ ತರಿಸಿ ಮುಂದಿಡು ನೀನು
ವರ ಸುವರ್ಣದ ಮೂರು ಮೊರ ತುಂಬ ಮುತ್ತುಗಳು
ಕರಮುಗಿದು ಆಮೇಲೆ ಸರಸಾಗಿ ಕೇಳೆ
ಕೊರವಿ ಮಾತಿಗೆ ಮತ್ತೆ ತಿರುಗಿ ಮಾತಾಡದಲೆ
ಅರಸಿ ತಾ ಆಕ್ಷಣಕೆ ತರಿಸಿ ಇಟ್ಟಳು ಮುಂದೆ
ವರ ಸುವರ್ಣದ ಮೂರು ಮೊರ ತುಂಬ ಮುತ್ತುಗಳು
ಅರಸಿ ಕೊಟ್ಟದ್ದು ನೋಡಿ ಹರುಷದಲಿ
ಹರಿಯೆಂಬೊ ಕೊರವಿ ನುಡಿದಳು ನಾಡಕೊರವಿಯಂತೆ || ೪ ||

ಧನ್ಯಧನ್ಯಳು ಲೋಕಮಾನ್ಯಳರಸಿಯೆ ನೀನು
ನಿನ್ನ ಸರಿ ಸೌಭಾಗ್ಯ ಇನ್ನೊಬ್ಬರಲಿ ಕಾಣೆ
ನಿನ್ನ ಪುಣ್ಯವು ಬಹಳ ಚೆನ್ನಾಗಿ ಸಂಪತ್ತು
ಮುನ್ನ ಸಂತಾನ ಸಂಪನ್ನಳಾಗಿರುವಿ |
ಇನ್ನು ಮುಂದಕ್ಕೆ ನಿನಗುನ್ನತೈಷ್ವರ್ಯ ತಿಳಿ
ನಿನ್ನ ಮನಸಿನ ಮಾತು ಚೆನ್ನಾಗಿ ಪೇಳೇನು
ಪುಣ್ಯವಂತೆಯೆ ಹೊಟ್ಟೆ ಥಣ್ಣಗಾಗಲಿ ಇಂದು
ಎನ್ನ ಕೂಸಿಗೆ ತುತ್ತನ್ನ ನೀಡೇ || ೫ ||

ಬೇಡಿದಾ ಕ್ಷಣಕೆ ತ್ವರಮಾಡಿ ಹರಿವಾಣದಲಿ
ನೀಡಿದಳು ಕ್ಷಿರಾನ್ನ ನೋಡಿ ಕೊರವಿಯು ತುತ್ತು
ಮಾಡಿ ಉಣಿಸಲು ಥೂಥೂ ಮಾಡಿ ಉಗುಳಿತು ಕೂಸು
ನೋಡಿ ಮರ್ತ್ಯಾನ್ನವನು ಬೇಡಲಿಲ್ಲ |
ನೋಡಿ ಶಿಶುವನು ಶಿಟ್ಟುಮಾಡಿ ಬಡಿಯುತ ನಿಂದೆ
ಮಾಡಿ ಬೈದಳು ಆಗ ಖೋಡಿಯೆಲೊ ನಿರ್ಭಾಗ್ಯ
ನಾಡೊಳಗೆ ತಿರುಕೊಂಡು ಬೇಡಿ ನೀ ಉಂಬುವದು
ರೂಢಿಯಲಿ ನಿನಗುಚಿತ ಬೇಡವಿದು ರಾಜಾನ್ನ
ಬೇಡಿ ಬಂದಿಲ್ಲ || ೬ ||

ತಾಡನದಿ ಬಹಳ ಚೀರಾಡಿ ಅಳುವುದು ಶಿಶು
ನೋಡಿ ಧರಣಿಯು ತಾನು ಕೂಸಿನ ಬಡಿಬೇಡೆನಲು,
ಕೊರವಿ ಮಾತಾಡಿದಳು ಹೀಗೆಂದು ನೋಡಮ್ಮ ಇದು
ಎನ್ನ ಕಾಡುತದೆ ಹಗಲೆಲ್ಲ ಮಾಡಲಿನ್ನೇನೂ |
ಖೋಡಿ ಉಣಲಿಲ್ಲ ದಯಮಾಡಿ ನೀ ಕೊಟ್ಟನ್ನ
ಹಾಡ್-ಹ್ಯರಸಿ ನಾ ಉಂಬೆ ಕೇಡೇನು ಮೊಲೆಹಾಲ
ಕುಡಿವುದು ತಾ ಎಂದು ಆಡಿ ಮಾತಿನ ಭಿಡೆಯ
ಮಾಡದಲೆ ಮತ್ತಿಷ್ಟು ಬೇಡಿ ಬೇಕಾದ್ದು
ಕೊಂಡಾಡಿ ಸೌಖ್ಯದಲಿ ತಾ ಉಂಡು ತೇಗಿದಳು || ೭ ||

ತೃಪ್ತಳಾದಳು ಕೊರವಿ ನಿತ್ಯತೃಪ್ತಳು ಸ್ವಸ್ಥ-
ಚಿತ್ತದಿಂದಲಿ ಕುಳಿತು ಅತ್ತ ಕೂಸಿನ ತೊಳೆದು
ಮುತ್ತು ನೀ ಬಾ ಎಂದು ಅತ್ಯಂತ ಪ್ರೇಮದಲಿ
ಎತ್ತಿ ಮುದ್ದಾಡಿದಳು ಮತ್ತೆ ತೊಡೆಮ್ಯಾಲಿರಿಸಿ
ಹುತ್ತಿನಲಿ ಮಾಡಿದ್ದ ಅತ್ಯಂತ ಉಪಕಾರ
ಪೊತ್ತು ತೀರಿಸಿದಳಾ ಹೊತ್ತು ಮರೆಯದಲೆ |
ಮತ್ತೆ ಮುಂದಕೆ ತಾನು ಬೆತ್ತ ಕೈಯಲಿ ಪಿಡಿದು
ಎತ್ತಿ ಮ್ಯಾಲಕ್ಕೆ ಸರ್ವೋತ್ತಮನೆ ಮೊದಲಾದ
ಸತ್ಯದೇವತೆಗಳನೆ ಚಿತ್ತದಲಿ ನೆನೆಯುತಲೆ
ಒತ್ತಿ ಒದರಿದಳಾಗ ಭಕ್ತಿ ತೋರಿಸುತಾ || ೮ ||

ಶ್ರೀದ ಶ್ರೀರಮಣ ಭೋ ಆದಿನಾರಾಯಣ
ಆದಿಯಲಿ ನಾ ನಿನ್ನ ಆದರದಿ ನೆನೆವೆ ಬ್ರ-
ಹ್ಮಾದಿ ದೇವತೆಗಳಿರ ಸಾಧು ನುಡಿಗಳ ನಾನು
ಸಾಧಿಸಿ ಹೇಳುವೆ ನಿಮ್ಮ ಸಾಧು ಕೃಪೆಯಿಂದಾ |
ಲೋಕದಲಿ ವಿಖ್ಯಾತ ಶ್ರೀ ಕಾಶಿ ವಿಶ್ವೇಶ
ಗೋಕರ್ಣ ಪುರ ನಿಲಯ ಶ್ರೀ ಕುಂಭಘೋಣೇಶ
ಶ್ರೀ ಕುಮಾರ ಸ್ವಾಮಿ ಶ್ರೀಕಾಂತ ದಯಮಾಡು
ವೈಕುಂಠಪುರದೊಡೆಯ ಶ್ರೀವೆಂಕಟೇಶ || ೯ ||

ಮಂಗಳಪ್ರದ ಪಾಂಡುರಂಗ ಶ್ರೀವಿರೂಪಾಕ್ಷ-
ಲಿಂಗ ಶ್ರೀಶೈಲೇಶ ಗಂಗೆ ಗೋದಾವರೀ
ತುಂಗಭದ್ರೆಯೆ ಮತ್ತೆ ಮಂಗಳಪ್ರದ
ಸತ್ತರಂಗಗಳುಳ್ಳ ತೀರ್ಥಂಗಳಿರಾ ನಿಮ್ಮನು
ಹಿಂಗದಲೆ ನಾ ಅಂತರಂಗದಲಿ ನೆನೆವೆ |
ಕಾವೇರಿಯಲ್ಲಿರುವ ಕರುಣಾಬ್ಧಿ ಶ್ರೀರಂಗ
ಕಾಶಿಪುರ ನಿಲಯ ಕಾಳಭೈರವ ಮಹಾ –
ಕಾಳಿ ನಾ ನಿನ್ನ ಈ ಕಾಲದಲಿ ನೆನೆವೆ
ಭೋ ಕಡು ವೀರಭದ್ರ ಮೂಕಾಂಬಿಕೆಯೆ
ದಯಮಾಡು ಕಂಚಿಯಲಿ ಕಾಮಾಕ್ಷಿ
ಮಧುರೆಯಲ್ಲಿ ಮೀನಾಕ್ಷಿ
ಕಾಶಿಯ ವಿಶಾಲಾಕ್ಷಿ ಕಾಯಿರೆಲ್ಲರು
ಕೂಡಿ ಕರುಣದಿಂದ || ೧೦ ||

ಬಹು ಸತ್ಯವುಳ್ಳಂಥ ಬಹುಳದೇವತೆಗಳಿರಾ
ಬಲಗೊಂಬೆ ನಾ ನಿಮ್ಮ ಬಲವಿರಲಿ ಎನಮೇಲೆ
ಹಲವು ದೇವತೆಗಳಿಗೆ ಬಲು ಹೆಚ್ಚಿನವಳೆ ಚಂ-
ಚಲಳಾಗಿ ನೀ ಪೋಗಿ ಚೆಲುವ ಕೊಲ್ಹಾಪುರದ
ಒಳಗಿದ್ದು ಭಕ್ತರಿಗೆ ಒಲಿವಂಥ ಮಹಮಾಯೆ
ಒಲಿ ನೀನು ಎನ್ನ ಮೇಲೆ ವಚನ ಪೇಳುವೆ
ನಿನ್ನ ಒಲುಮೆಯಿಂದ |
ಅರಸಿ ನೀ ಕೇಳಮ್ಮ ಸರಸಾಗಿ ಪೇಳುವೆನು
ತರಿಸು ತಾಂಬೂಲವನು ಸರಸಾದ ಕಾಯಿ ಪತ್ರಿ
ಕರ್ಪೂರ್ದಡಿಕೆಗಳು ಕಿರಿಗಾಂಚು ಏಲಕ್ಕಿ
ವರಮೌಕ್ತಿಕದ ಸುಣ್ಣ ಮರಿಬೇಡೆಂದು || ೧೧ ||

ಕೊರವಿ ವಚನವ ಕೇಳಿ ಕಿರುನಗೆಯ ನಗುವುತಲೇ
ತಿರುತಿರುಗಿ ಬೇಡುವದು ಕೊರವಿಯರ ನಡತೆ ಇದು
ಸರಿಯೆಂದು ಅರಸಿ ತಾ ಸರಸಾಗಿ ಎಲ್ಲನು
ತರಿಸಿ ಮುಂದಿಟ್ಟು ಈ ಪರಿ ನುಡಿದಳಾಗ || ೧೨ ||

ರಾಗ: ದೇಶಿ, ತಾಳ – ಅಟ

ಸತ್ಯ ಪೇಳಮ್ಮ ನೀ ಉತ್ತಮ ಕೊರವಂಜೀ, ಸತ್ಯ ಪೇಳೆ |
ಚಿತ್ತಕ್ಕೆ ಬೇಕಾದ್ದು ಮತ್ತೆ ನಾ ಕೊಡುವೆನು, ಸತ್ಯ ಪೇಳೆ || ಪ ||

ತರಿಸಿಟ್ಟೆ ನಾ ಮೂರು ಮೊರತುಂಬ ಮುತ್ತನು, ಸತ್ಯ ಪೇಳೆ |
ಸರಸಾಗಿ ಮನಸಿಗೆ ಹರುಷವಾಗೋ ಹಾಂಗೆ, ಸತ್ಯ ಪೇಳೆ || ೧ ||

ಗಂಟಲ ಬಿಗಿದು ನೂರೆಂಟು ಮಾತಾಡದೆ, ಸತ್ಯ ಪೇಳೆ |
ಬಂಟತನವ ಪೇಳಿ ಘಂಟಿಸ ಭೇಡೆನ್ನ, ಸತ್ಯ ಪೇಳೆ || ೨ ||

ಮಾನವಂತೆಯೆ ಅನುಮಾನ ಮಾಡಲಿ ಬೇಡ, ಸತ್ಯ ಪೇಳೆ |
ಅನಂತಾದ್ರೀಶನ ಆಣೆ ನಿನಗೆ ಉಂಟು, ಸತ್ಯ ಪೇಳೆ || ೩ ||

| ವಚನ |

ಮನ್ನಿಸ್ಯರಸಿಯ ಮಾತು ಮುನ್ನ ನುಡಿದಳು ಕೊರವಿ
ಎನ್ನವ್ವ ನೀ ಕೇಳೆ ನಿನ್ನನ್ನ ನಾ ಉಂಡು
ನಿನ್ನೊಳು ವಂಚನೆಯ ಇನ್ನು ನಾ ಮಾಡಿದರೆ
ಅನ್ನ ಹುಟ್ಟದು ಎನಗೆ ಅನ್ಯಾಯದಿಂದ |
ಎನ್ನ ಬುಟ್ಟಿಯೊಳಿರುವ ಧಾನ್ಯದೇವತೆ ಆಣೆ
ಎನ್ನ ತಾಯಿಯ ಆಣೆ ಎನ್ನ ತಂದೆಯ ಆಣೆ
ಚಿನ್ನ ಬದರಿಯೊಳಿರುವ ಎನ್ನ ಒಡೆಯನ ಆಣೆ
ಎನ್ನ ಗುರುವಿನ ಆಣೆ, ಎನ್ನಾಣೆ ತಿಳಿ ಮತ್ತೆ
ಎನ್ನ ಕೂಸಿನ ಆಣೆ ಮುನ್ನ ನೀ ಬೇಡಿದ್ದು
ಇನ್ನು ಆಣೆಯ ಕೊಡುವೆ, ಎನ್ನ ವಚನವು
ಸತ್ಯ ಚೆನ್ನಾಗಿ ತಿಳಿಯೆ || ೧ ||

ಅರಸಿ ನೀ ಕೇಳುವ ದು:ಖ ಈ ಮೂರು ಮಾತುಗಳು
ವರಪುತ್ರಿಗಾಗಿರುವ ಜ್ವರದ ಕಾರಣ ಒಂದು
ಕೊರವಿಯಾ ಧ್ವನಿ ಕೇಳಿ ಹೊರಗೆ ಬಂದು ಮತ್ತೆ
ಪರಮ ಉತ್ತಮನಾದ ವರ ಹ್ಯಾಗೆ ಈಕೆಗೆ
ದೊರಕುವನು ಎಂದು |
ಸರಸಿಜಾಕ್ಷಿಯೆ ಕೇಳು ಜ್ವರದ ಕಾರಣ ನೀನು
ಸರಿ ಗೆಳತಿಯರ ಕೂಡಿ ಸರಸಾಗಿ ವನದಲ್ಲಿ
ಇರುವ ಕಾಲದಲೀ ಪರಮ ಪುರುಷನ ಕಂಡು
ಮರುಳಾಗಿ ಮೋಹಿಸುತ ಮರುಗುವಳು ಮತ್ತುಳಿದ
ಜ್ವರವಲ್ಲವಿದು ಕಾಮಜ್ವರವಮ್ಮ ತಿಳಿಯೆ || ೨ ||

ಕೊರವಿಯಾ ಧ್ವನಿ ಕೇಳಿ ಹೊರಗೆ ಬಂದದ್ದು ಕೇಳು
ಮರುಳು ಮಾಡಿರುವ ಆ ಪರಮ ಪುರುಷನ ಮಹಿಮೆ
ಸರಸಾಗಿ ನಾ ಮೇಲು ಸ್ವರದಿಂದ ನುಡಿಯುತಲೆ
ಬರುವಾಗ ತಾ ಕೇಳಿ ಹೊರಗೆ ಬಂದಳು ಈಕೆ ಸ್ಮರಿಸಿ
ಆವನ |
ಪರಮ ಉತ್ತಮನಾದ ವರ ಹ್ಯಾಗೆ ಈಕೆಗೆ
ದೊರಕುವನು ಎಂತೆಂಬ ಪರಮ ಈ ಚಿಂತೆಯಲಿ
ಸೊರಗ ಬೇಡಮ್ಮ ನೀ ವರ ಅವನೆ ತಿಳಿ ಸತ್ಯ
ಕರೆದು ಕೊಡು ಅವಗೆ ಈ ವರ ಪುತ್ರಿಯನ್ನಾ || ೩ ||

ಎಲ್ಲಿರುವನವನ್ಯಾರು ಬಲ್ಲವರು ಯಾರೆಂದು
ಪುಲ್ಲಾಕ್ಷಿ ನೀನು ಮನದಲ್ಲಿ ಚಿಂತಿಸ ಬೇಡ
ಬಲ್ಲೆನಾತನ ನಾನು ಬಲ್ಲಿದ ವೈಕುಂಠ –
ದಲ್ಲಿರುವ ಶ್ರೀರಮಾ ವಲ್ಲಭನು ಕಾಣೆ |
ಚೆಲ್ವ ಶ್ರೀ ಶೇಷಾದ್ರಿಯಲ್ಲಿರುವ ಈ ಕಾಲ
ದಲ್ಲಿ ಆತನ ಕಂಡು ವಲ್ಲಭನು ಇವ ಎನಗೆ
ಸಲ್ಲುವನು ಎಂದು ಮನದಲ್ಲಿ ಬಯಸುತ ಖೂನ-
ದಲ್ಲಿ ಕುಲ ಗೋತ್ರಗಳು ಎಲ್ಲ ಕೇಳುತ ಪ್ರೇಮ-
ದಲ್ಲಿ ಕಲಹವ ಮಾಡಿ ಎಲ್ಲ ಗೆಳತೆರ ಕೂಡಿ
ಕಲ್ಲು ಕಲ್ಲಿಲೆ ಒಗೆದು ಬಲ್ಲಿದಾತನ ಕುದುರೆ
ಅಲ್ಲೆ ಕೊಂದಳು ಈಕೆ ಎಲ್ಲಾನು ಈ ಮಾತು
ಅಲ್ಲಾದರೀಕೆನ ಇಲ್ಲೆ ಕೇಳೇ || ೪ ||

ಅಂದ ಮಾತನು ಕೇಳಿ ಮುಂದೆ ಪದ್ಮಾವತಿಯು
ಮಂದಹಾಸದಿ ನಕ್ಕು ಮುಂದೆ ತಲೆ ಬಾಗುತಲೆ
ಛಂದಾಗಿ ಮನಸಿಗೆ ತಂದು ಪಾದಾಂಗುಷ್ಠ-
ದಿಂದ ನೆಲ ಬರೆದಳಾಗೊಂದು ನುಡಿಯದಲೆ |
ಮುಂದೆ ಪದ್ಮಾವತಿಯ ಮುಂದೆ ನುಡಿದಳು
ಕೊರವಿ ಸುಂದರಿಯೆ ಜ್ವರತಾಪದಿಂದ ನಿನ್ನೊಳು ನೀನೆ
ನೊಂದುಕೊಂಬುವಿ ದಾರ ಮುಂದೆ ಆಡುವಳಲ್ಲ
ಮುಂದಕ್ಕೆ ಬಾ ನಿನಗೆ ಮುಂದೆ ಹಿತ ಪೇಳುವೆನು
ಸಂದೇಹಪಟ್ಟು ಭಯದಿಂದ ಅಂಜಲು ಬೇಡ
ಇಂದುಮುಖಿ ನಾ ಪ್ರೀತಿಯಿಂದ ವೇಂಕಟಪತಿಯ
ಛಂದಪಾದದ ರೇಣು ಇಂದು ಕೊಡುವೆನು ನಿನಗೆ
ಬಂದ ಜ್ವರ ಈಗ ತ್ವರದಿಂದ ಓಡುವದು || ೫ ||

ವಾರಿಜಾಕ್ಷಿಯೆ ಕೈಯ ತೋರು ಪೇಳುವೆ ನಿನ್ನ
ಸಾರ ಸಾಮುದ್ರಿಕೆಯ ಪೂರ್ವದಲಿ ಪೇಳಿದ
ನಾರದನು ವನದಲ್ಲೆ ನಾರಿ ಸುಳ್ಳಲ್ಲ ತಿಳಿ |
ಬೇರೆ ಪೇಳುವೆ ಮತ್ತೆ ಚಾರು ಚಿಹ್ನಾ ||
ತೋರುವದು ಕೈಯಲ್ಲಿ ಚಾರು ಚಕ್ರದ ಚಿಹ್ನಾ
ಸಾರ ಮತ್ಸ್ಯ ರೇಖೆ ತೋರುವದು ಧನರೇಖೆ
ಪಾರ್ಶ್ವ ಕನ್ನದ ರೇಖೆ ತೋರುವದು ಮಂಗಳಾ –
ಕಾರಾಗಿ ಬಹು ಪ್ರೀತಿಕರವಾದ ಮತ್ತೆ
ಚಾರು ದಂಪತಿ ರೇಖೆ ತೋರುವದು ನೋಡೆ || ೬ ||

ಉತ್ಸವದಿ ಆಯುಷ್ಯ ಹೆಚ್ಚು ಮಾಡುವ ರೇಖೆ
ಸ್ವಚ್ಛದಿಂದಲಿ ನೋಡು ಹೆಚ್ಚಿನಾಭರಣದಲಿ
ಮುಚ್ಚಿರುವ ಮೊಲೆ ಮೂಗು ಅಚ್ಚ
ಭಂಗಾರಕ್-ಹರಳ್-ಹಚ್ಚಿ ಕೂಡಿಸಿದಂತೆ
ಸ್ವಚ್ಛ ತೋರುವದು ಮಚ್ಛ ಕಂಗಳೆ
ನಾನು ಮುಚ್ಚಿ ಹೇಳುವಳಲ್ಲ |
ಸ್ವಚ್ಛ ಎಡ ತೊಡೆಯಲ್ಲಿ ಮಚ್ಛ ಲಕ್ಷಣ
ಉಂಟು ಹೆಚ್ಚು ಪೇಳಲಿ ಯೇನು ಹೆಚ್ಚಿನೊಳಗೆಲ್ಲಾ
ಹೆಚ್ಚು ಮಂಗಳರೇಖೆ ನಿಚ್ಚಳಾಗಿರುತಿಹುದು
ನಿಷ್ಚಯದಿ ಕೊರಳಲ್ಲಿ ಅಚ್ಯುತನೆ ತಾ ನಿನಗೆ
ಮೆಚ್ಚಿ ಪತಿ ಆಗುವನು ನಿಶ್ಚಯವು ತಿಳಿಯೆ || ೭ ||

ಇಷ್ಟು ಮಾತುಗಳ ಹೇಳಿ ದಿಟ್ಟ ವೇಂಕಟಪತಿಯ
ಶ್ರೇಷ್ಠಪಾದದ ರೇಣು ಕೊಟ್ಟು ಪದ್ಮಾವತಿಗೆ
ಇಟ್ಟು ಫಣೆಯಲಿ ತಿಲಕ ಇಷ್ಟಾರ್ಥಕರಹಸ್ತ
ಇಟ್ಟು ಶಿರದಲಿ ಅಭಯ ಕೊಟ್ಟು ಅರಸಿಯ ಮುಂದೆ
ಸ್ಪಷ್ಟ ನುಡಿದಳು ಭಿಡೆಯ ಬಿಟ್ಟು ಕೊರವಿ |
ಪಟ್ಟದರಸಿಯೆ ನೀನು ಘಟ್ಟಿ ಮಮಸನು ಮಾಡಿ
ಬೆಟ್ಟದಾ ವೇಂಕಟಗೆ ಕೊಟ್ಟು ಬಿಡು ಈಕೆಯನು
ಬಿಟ್ಟು ಸಂಶಯ ಸೌಖ್ಯ ಪಟ್ಟಾಳು ತಿಳಿ ಕೊಡದೆ
ಬಿಟ್ಟರೀಕೆಗೆ ಮರಣ ತಟ್ಟುವುದು ಇಂದೆ || ೮ ||

ದುಷ್ಟಕೊರವಿಯು ಎಂಥ ಕೆಟ್ಟ ನುಡಿದಳು ಎಂದು
ಸಿಟ್ಟು ಮಾಡಲು ಬೇಡ ಘಟ್ಟ್ಯಾಗಿ ನಾ ನಿನಗೆ
ಸ್ಪಷ್ಟ ಹಿತ ಪೇಳುವೆನು ಕಟ್ಟ ಪದರಿಗೆ ಗಂಟು
ಹುಟ್ಟಿಸಿ ಹೇಳುವಳಲ್ಲ ಕಟ್ಟಕಡೆಗದರಿಂದ
ಹುಟ್ಟುವದು ಏನೆನಗೆ ಶ್ರೇಷ್ಠ ಲಾಭ |
ದಿಟ್ಟಾದ ಕುದರೆ ಗುರಿಯಿಟ್ಟು ಕೊಂದಳು ಎಂಬ
ಶಿಟ್ಟಿರಲು ಈಕೆನ ಕೊಟ್ಟರಂಗೀಕಾರ
ಪಟ್ಟಾನು ಹ್ಯಾಗೆಂದು ಇಷ್ಟಕ್ಕೆ ಸಂದೇಹ
ಪಟ್ಟು ನೀ ಬಿಡಬೇಡ ಶಿಟ್ಟಿನಲ್ಲಿ ನಿತ್ಯಸಂತುಷ್ಟ ಮೂರುತಿಗೆ || ೯ ||

ಇನ್ನೊಂದು ನಾ ನಿನಗೆ ಮುನ್ನ ಪೇಳುವೆ ಗುರುತ
ಇನ್ನೊಂದು ಘಳಿಗೆ ಮೇಲುನ್ನತಾಶ್ವವನೇರಿ
ಚನ್ನಾಗಿ ಶೀಲಸಂಪನ್ನಳೊಬ್ಬಳು ಬಾಲೆ
ಪನ್ನಗಾಚಲದಿಂದ ನಿನ್ನಲ್ಲಿ ಬರುಮೋಳು
ಕನ್ಯಾರ್ಥಿಯಾಗೀ |
ನಿನ್ನ ಪತಿಗೀ ಮಾತು ಚೆನ್ನಾಗಿ ತಿಳಿಹೇಳು
ನಿನ್ನ ಮೈದುನಗ್-ಹೇಳು ನಿನ್ನ ಪುತ್ರಗೆ ಪೇಳು
ನಿನ್ನ ಮಗಳನ ಕರೆದು ಮುನ್ನ ಏಕಾಂತದಲಿ
ಇನ್ನೊಮ್ಮೆ ನೀ ಕೇಳು ಚೆನ್ನವಾಗಿ || ೧೦ ||

ಖರೆಯಾದರಿನ್ನೊಮ್ಮೆ ಕರೆದು ಕೊಡು ಬೇಡಿದ್ದು
ಗುರುತದಲೆ ನಾ ನಿತ್ಯ ಇರುವೆನು ಬದರಿಯಲಿ
ಸರ್ಸಾಗಿ ನಾನು ಬೇಸರದೆ ಬ್ರಹ್ಮಾಂಡೆಲ್ಲ
ತಿರುಗಿ ಬಂದೆನು ಇಲ್ಲೆ ತಿರುಕೊಂಬ ಆಸೆಯಲಿ
ತಿರುಗುವಳು ನಾನಲ್ಲ ಪರಹಿತಾರ್ಥವೆ
ಎನಗೆ ಪರಮ ಕಾರ್ಯ |
ಪರಿಪರಿಯ ಜನರಿಗನುಸರಿಸಿ ಹೇಳಿದೆ ಹಿತವ
ಉರಗ ಮಂತ್ರವ ಬಲ್ಲೆ ಉರಿಯ ನುಂಗಲು ಬಲ್ಲೆ
ಹರಿವ ಹಾವನು ಹೋಗಿ ಹರುಷದಲಿ ಹಿಡಿಬಲ್ಲೆ
ಪರರು ಹಾಕಿದ ವಿಷವ ಪರಿಹರಿಸಬಲ್ಲೆ ನಾ
ಪರತತ್ತ್ವವನು ಬಲ್ಲೆ ಮರಣ ಹೊಂದಿದವರನಾ
ತಿರುಗಿ ಬದುಕಿಸಬಲ್ಲೆ || ೧೧ ||

ಹಿರಿಯ ಹೊತ್ತಿಗೆ ಬಲ್ಲೆ ಶಿರಿಯ ಶಿಂಬಿಯ ಮಾಡಿ
ಶಿರದಲ್ಲೆ ಬ್ರಹ್ಮಾಂಡ ಧರಿಸಿ
ತನಗಾಧಾರವಿರದೆ ಬೈಲೊಳಗೆ
ಕುಳಿತಿರುವಂಥ ಆ ದಿವ್ಯ ಪರಮಪುರುಷನ ಬಲ್ಲೆ
ಹರವ ಬ್ರಹ್ಮಾಂಡದೊಳಗಿರುವ ಬೂಗೋಲ
ವಿಸ್ತಾರವೆಲ್ಲವು ಬಲ್ಲೆ ಸ್ಥಿರವಾಗಿ ಪರಮ ಆದರದಿ
ಕೇಳಿದರೆ ಬೇಸರದೆ ದೇಶಗಳೆಲ್ಲ ಸರಸಾಗಿ
ಪೇಳುವೆನು ಸರಸಿಜಾಕ್ಷಿ || ೧೨ ||

ರಾಗ – ಶಂಕರಾಭರಣ, ತಾಳ – ಆದಿ

ಕೊರವಿ ಮಾತನ್ನು ಕೇಳಿ ಹಿರಿಹಿರಿ ಹಿಗ್ಗುತ
ಅರಸಿ ಮಾತಾಡಿದಳಾಗ |
ವರ ಧರ್ಮದೇವೀ ನೀ ಸರಿಯೆ ನಿನ್ನ ಮಾತಿಗೆ
ಹರುಷವಾಯಿತು ಎನಗಿಂದು || ೧ ||

ಧನ್ಯಳಾದೆನು ನಾನು ನಿನ್ನಂಥ ಕೊರವಿಯಾ
ಇನ್ನೊಬ್ಬಳನು ನಾ ಕಾಣೆ |
ಇನ್ನು ನೀ ಪೇಳಿದಂತೆ ಮುನ್ನ ನಾ ಮಾಡುವೆ
ನಿನ್ನ ಮಾತಿನ ಹೋರ್ತು ಇಲ್ಲೆ || ೨ ||

ಭುವನ ವಿಲಕ್ಷಣದವಳೆ ನಿನ್ನನು ನೋಡಿ
ಎವೆಯನಿಕ್ಕವು ಎರಡು ಕಣ್ಣೂ |
ನವನವ ತೋರುವ ಸವಿಯ ಮಾತನು ಕೇಳಿ
ಕಿವಿಯು ಎರಡು ಹಿಗ್ಗಿದವು || ೩ ||

ಹೋಗಿ ಬ್ರಹ್ಮಾಂಡವೆಲ್ಲ ಹ್ಯಾಗೆ ತಿರುಗಿ ಬಂದಿ
ಹ್ಯಾಗಿರುವದು ಬ್ರಹ್ಮಾಂಡ |
ಯೋಗಿ ಪರಮಪುರುಷ ಹ್ಯಾಗೆ ಧರಿಸಿಹನದನು
ಹ್ಯಾಗೆ ಬೂಗೋಲ ವಿಸ್ತಾರ || ೪ ||

ಬೇಸರಿಲ್ಲದೆ ಎಷ್ಟು ದೇಶ ತಿರುಗಿ ಬಂದಿ
ಲೇಸಾಗಿ ಪೇಳೆನ್ನ ಮುಂದೆ |
ಶೇಷ ಶ್ರೀಮದನಂತಾದ್ರೀಷ ಕೊರವಿ
ಮಂದ ಹಾಸದಿಂದಲಿ ನುಡಿದಳು ||೫||

| ವಚನ |

ಬೂಲೋಕದೊಳಗಿರುವ ಬಾಲೆಯರ ಒಳಗೆ ಬಹು
ಮೇಲಾದವಳೆ ನೀನು ಕೇಳಮ್ಮ ನಾ ನಿನಗೆ
ಪೇಳುವೆನು ಹರುಷದಲಿ ಕೇಳುವರು ಆದರದಿ
ಕೇಳಿದರೆ ಮತ್ತಿಷ್ಟು ಹೇಳುವರಿಗಾಗುವುದು
ಭಾಳ ಉಲ್ಲಾಸ |
ಆಲಿಸೀ ಕೇಳಮ್ಮ ಮೂಲ ಪೇಳುವೆನು
ಈರೇಳು ಲೋಕಕೆ ಎಲ್ಲ ಆಲಯಾಗಿರುವ ಸುವಿಶಾಲ
ಬ್ರಹ್ಮಾಂಡದ್-ಹೊರಗಾಲಯವು ಒಂದಿಲ್ಲ
ಲೇಸಾಗಿರುವದು ಮೂಲ ಅವ್ಯಾಕೃತಾಕಾಶ ತಾನೆ || ೧ ||

ಅತ್ತಿತ್ತ ನಾಲ್ಕು ಕಡೆ ಮತ್ತೆ ಮೇಲಕೆ ಕೆಳಗೆ
ಎತ್ತ ನೋಡಿದರೇನು ಸುತ್ತಲೆ ಬೈಲುಂಟು
ಮತ್ತಲ್ಲೆ ಪರಮ ಪುರುಷೆಂಬ ಹರಿ ತಾನು
ಅಂತರಲೆ ಕುಳಿತಿರುವ ಅಂತ ತಿಳಗೊಡದೆ |
ಶಕ್ತಿ ನಾಮಕಳಾದ ಚಿತ್ತದೊಲ್ಲಭೆ ಎನ್ನ
ಸುತ್ತಿ ಸಿಂಬಿಯ ಮಾಡಿ ನೆತ್ತಿಯಾ ಮೇಲಿಟ್ಟು
ಪೊತ್ತಿಹನು ಬ್ರಹ್ಮಾಂಡ ಸುತ್ತಲಿರುವದು ಅದಕೆ
ಸಪ್ತದಶ ಆವರಣ ಕ್ಲೃಪ್ತವಾಗೀ || ೨ ||

ಶ್ರೀವಾಸುದೇವ ಪ್ರಥಮಾವರಣ ಹೊರಗೆ ತಾ
ಶ್ರೀವಿಷ್ಣು ತಿಳಿ ದ್ವಿತೀಯ ಆವರಣ
ತೃತೀಯ ತಾ ದೇವ ಸಂಕರ್ಷಣನು
ಕೇವಲಾಗಿಹ ಚತುರ್ಥಾವರಣ ಪ್ರದ್ಯುಮ್ನ-
ದೇವ ಅದರೊಳು ಪಂಚಮಾವರಣ ಅನಿರುದ್ಧ
ದೇವಿ ವಿರಜಾನದಿಯು ಆವರಣ ಷಷ್ಠ ತಿಳಿ
ದೇವಿ ಶ್ರೀಸಹ ಸಪ್ತಮಾವರಣವೆನಿಸುವಳು
ಮೂಲಪ್ರಕೃತಿ |
ಭಾವದಲಿ ತಿಳಿ ಮೂರು ಆವರಣ ಮೂರು ಗುಣ
ಆವರಣ ಅದರೊಳಗೆ ಅದು ಮಹತ್ತತ್ವ ಮುಂದಾ-
ವರಣ ಅದರೊಳಗ್-ಅಹಂಕಾರ ತತ್ತ್ವ ಮತ್ತಾ-
ವರಣವೊಳಗೈದು ಪಂಚಭೂತಗಳು || ೩ ||

ಅದಕಿಂತ ಮತ್ತೊಳಗೆ ಉದಕುಂಟು ಸುತ್ತೆಲ್ಲ
ಅದಕೆ ಬಹಿರಾವರಣ ಉದಕವೆಂತೆಂಬುವರು
ಅದರೊಳಗೆ ಕೂರ್ಮರೂಪದಲಿ ಪೊತ್ತಿಹ ವಿಷ್ಣು
ಮುದದಿ ಬ್ರಹ್ಮಾಂಡದಲ್ಲೆ ಅದು ನೂರು ಕೋಟಿ ಗಾ-
ವುದ ಉಂಟು ತಿಳಿ ಚಂದ್ರವದನೆ ನೀನು |
ಅಪರ ಖರ್ಪರ ಘಡತರೈವತ್ತು ಕೋಟಿ
ಮುಂದದರೊಳಗೆ ವಿಸ್ತಾರ ಐವತ್ತು ಕೋಟಿ ತಿಳಿ
ಅದರೊಳಗೆ ತಳದಲ್ಲಿ ಉದಕ ಇರುವದು ಮತ್ತೆ
ಅದರ ಪರಿಮಿತಿ ಕೇಳು ಹದಿನೈದು ಕೋಟಿ ಗಾವದ
ಉಂಟು ಛಂದಾಗಿ ಅದಕೆ ಹೆಸರುಂಟು
ಗರ್ಭೋದಕವು ಎಂದು || ೪ ||

ಕೇಳಮ್ಮ ಅದರೊಳಗೆ ಮೂಲ ಕೂರ್ಮನು ವಿಷ್ಣು
ಮೇಲೆ ಕೂರ್ಮನು ವಾಯು ಮ್ಯಾಲೆ ಶೇಷನು ತಾನು
ಸಾಲ್-ಹಿಡಿದು ಸಾವಿರ ವಿಶಾಲ ಹೆಡೆಗಳ ಒಳಗೆ
ಮೇಲಾದ ಒಂದ್-ಹೆಡೆಯ ಮೇಲೊಂದು ಸಾಶಿವೆ-
ಕಾಳು ಇಟ್ಟಂತೆ ಭೂಗೋಲ ಪೊತ್ತಿಹನು |
ಮೂಲ ಗರ್ಭೋದಕ ಮ್ಯಾಲೆ ದಶಕೋಟಿ
ಒಂದೇ ಲಕ್ಷ ಕಡಿಮೆ ಭೂಗೋಲ ಲಕ್ಷ
ಪರಿಮಿತಿ ಉಂಟು ಮುಂದೆ ಭೂಲೋಕದಾರಭ್ಯ
ಮೇಲೆ ಸೂರ್ಯನ ತನಕ ಕೇಳು ಆಕಾಶ
ಒಂದೆ ಲಕ್ಷ ಪರಿಮಿತಿಯು ಲೋಲಲೋಚನೆಯೆ || ೫ ||

ಸುತ್ತ ಬ್ರಹ್ಮಾಂಡದೊಳ-ಗತ್ಯಂತ ಮಧ್ಯಕಾ-
ದಿತ್ಯ ಮಂಡಲ ಉಂಟು ಉತ್ತಮಳೆ ಕೇಳು
ಆದಿತ್ಯ ಮಂಡಲ ಹಿಡಿದು ಮತ್ತೆ ಖರ್ಪರ ತನಕ
ಸುತ್ತೆಲ್ಲ ನಾಲ್ಕು ಕಡೆ ಮತ್ತೆ ಮೇಲಕೆ ಕೆಳಗೆ
ಕ್ಲೃಪ್ತ ಯೋಜನವು ಇಪ್ಪತ್ತೈದು ಕೋಟೀ |
ಮೂಲ ಶೇಷನ ತಲೆಯ ಮೇಲೆ ಪಾಷಾಣಮಯ
ಮೂಲಭೂಮಿಯು ಉಂಟು ಮೇಲುಂಟು ನರಕವೆಂಬೋ
ಲೋಕ ಮುಂದದರ ಮೇಲೆ ಸಾಲ್-ಹಿಡಿದು ಹದಿ-
ನಾಲ್ಕು ಲೋಕಗಳುಂಟು ಲೇಸಾಗಿ ಎಲ್ಲಕು ಮೇಲೆ ವೈಕುಂಠ || ೬ ||

ಈ ಲೋಕದಾ ಕೆಳಗೆ ಏಳು ಲೋಕಗಳುಂಟು
ಈ ಲೊಕದಾರಭ್ಯ ಮೇಲೇಳು ಲೋಕಗಳು
ಕೇಳು ಅವುಗಳ ಹೆಸರು ಭೂಲೋಕ ಭುವರ್ಲೋಕ
ಸ್ವರ್ಲೋಕ ಮಹರ್ಲೋಕ ಮೇಲಕೆ ಜನೋಲೋಕ
ಮೆಲಕೆ ತಪೋಲೋಕ ಮೇಲುಂಟು ಸತ್ಯವೆಂಬೋ
ಲೋಕ ತಿಳಿಯೆ |
ಮಾತೆ ಈ ಭೂಲೋಕದ ಕೆಳಗೆ ಲೋಕಗಳು
ನೀ ತಿಳಿಯೆ ಅವು ಅತಳ ವಿತಳ ಸುತಳವು ಮತ್ತೆ
ತಳಾತಳ ಮಹಾತಳ ರಸಾತಳವು ಮೂಲದಲಿ
ಪಾತಾಳ ಎಂದೆನಿಸಿ ನಾಥ ಶ್ರೀಹರ್ಯಂಗ
ಜಾತವಾಗಿಹವಲ್ಲೆ ಆತನೆ ವಿರಾಡ್ರೂಪಿ
ಕ್ಯಾತನಾಗಿರುವ || ೭ ||

ಪಾತಾಳವೆಂಬುವದು ಆತನಂಗಾಲವು ರ-
ಸಾತಲವು ಎಂಬುವದು ಆತನ ಹಿಂಬಡ ಪಾದ
ಆತನಾ ಹರಡವು ಮಹಾತಲವು ಮೇಲಕೆ ತ-
ಳಾತಳವು ಎಂಬುವದು ಆತನ ಕಣಕಾಲು
ಅತನಾ ಮೊಣಕಾಲಿಗಾತು ಸುತಲಿರುವದು
ಅತನಾ ತೊಡೆಗಿಹವು ಆತು ವಿತಳಾತಳವು
ಆತನಾ ಪತ್ಸಳವು ಭೂತಳೆನಿಸುವದು |
ಆತನಾ ನಾಭಿ ವಿಖ್ಯಾತ ಭುವವೆನಿಸುವದು
ಆತನಾ ಹೃದಯ ಪ್ರಖ್ಯಾತ ಸ್ವರ್ಲೋಕವದು
ಅತನಾ ಕಂಠ ಸಂಜಾತ ಮಹವೆನಿಸುವದು
ಅತನಾ ವದನ ಸಂಭೂತ ಜನವೆನಿಸುವದು
ಅತನಾ ಫಣೆಯು ವಿಖ್ಯಾತ ತಪ ಎನಿಸುವದು
ಅತನಾ ಶಿರವು ಪ್ರಖ್ಯಾತವದು ಸತ್ಯ || ೮ ||

ಸುತ್ತೆಲ್ಲ ತಿರುಗಿ ಈ ಪೃಥ್ವಿಯಲಿ ನಾ ಬಂದೆ
ಮತ್ತಿದರ ವಿಸ್ತಾರ ಚಿತ್ತಿಟ್ಟು ಕೇಳು ಐ-
ವತ್ತು ಕೋಟಿಯು ಇದಕೆ ಸಪ್ತ ದ್ವೀಪಗಳುಂಟು
ಮತ್ತಲ್ಲೆ ನಡು ನಡುವೆ ಸುತ್ತಲೆ ಸಮುದ್ರಗಳು
ಸಪ್ತ ಪರಿಮಿತಿಯಿಂದ ಕ್ಲೃಪ್ತವಾಗಿಹುದು |
ಬಿಂಬೋಷ್ಟೆ ಕೇಳೆ ಸಪ್ತವೆಂಬುವ ದ್ವೀಪಗಳು
ಜಂಬೂದ್ವೀಪವು ಪ್ಲಕ್ಷವೆಂಬೋ ದ್ವೀಪ ಶಾಲ್ಮ-
ಲೆಂಬೊ ದ್ವೀಪ ಮತ್ತೆ ಇಂಬಾದ ಕುಶದ್ವೀಪ
ಕಂಬುಕಂಠಿಯೆ ಕ್ರೌಂಚವೆಂಬುವ ದ್ವೀಪ
ಶಾಕವೆಂಬೋ ದ್ವೀಪ ಪುಷ್ಕರೆಂಬುವ ದ್ವೀಪವು
ತಿಳಿಯೆ ಅಂಬುಜಾಕ್ಷೀ || ೯ ||

ಬೋಧಿಸುವೆ ಕೇಳು ನೀ ಸಪ್ತೋದಧಿಗಳ ಇನ್ನು
ಲವಣೋಧಧಿ ಇಕ್ಷು ಸಾರೋದಧಿಯು ಮುಂದಕೆ
ವೃಸ್ತೃತ ಸುರೋದಧಿಯು ಮುಂದಕೆ
ಘೃತೋದಧಿಯು ದಧಿಯ ಮಂಡೋದಧಿಯು
ಕ್ಷೀರಸಾರೋದಧಿಯು ದಿವ್ಯ ಸ್ವಾದೋದಧಿಯು
ತಿಳಿ ನುಡಿಯ ಸ್ವಾದ ಬಲ್ಲವಳೆ |
ಲಕ್ಷ ಗವುದ ಚಂಚಲಾಕ್ಷಿ ಜಂಬೂ ದ್ವೀಪ
ಪ್ಲಕ್ಷ ದ್ವೀಪವು ಎರಡು ಲಕ್ಷ ಗಾವುದ ನಾಲ್ಕು
ಲಕ್ಷ ಶಾಲ್ಮಲ ಎಂಟು ಲಕ್ಷ ಕುಶ ಹದಿನಾರು
ಲಕ್ಷ ಕ್ರೌಂಚವು ಶಾಕ ಲಕ್ಷ ಮೂವತ್ತೆರಡು
ಲಕ್ಷ ಅರುವತ್ನಾಲ್ಕು ಪುಷ್ಕರದ್ವೀಪಾ || ೧೦ ||

ಇದರಂತೆ ತಿಳಿಯಮ್ಮ ಚದುರೆ ಸಾಗರ ಸಪ್ತ
ಅದರ ಸುತ್ತಲೆ ಸುವರ್ಣದ ಭೂಮಿ ಇರುವುದು
ಅದರ ಸುತ್ತುಂಟು ವಜ್ರದ ಭೂಮಿ ಮುಂದೆ ಮತ್ತ-
ದರ ಸುತ್ತಲೆ ಅವಾದಪರಿಯುಗಿರಿ ಉಂಟು
ಸುದತಿ ಲೋಕಾಲೋಕವದು ತಿಳಿಯೆ ನೀನೂ |
ಅದರ ಸುತ್ತಲೆ ಇರುವದದು ಅಂಧಂತಮ ಮತ್ತೆ
ಅದರ ಸುತ್ತಲೆ ಇರುವದದು ಘನೋದಕ
ಮತ್ತೆ ಅದರ ಸುತ್ತಲೆ ಇರುವದು ಅನಂತಾಸನವು
ಅದರ ಸುತ್ತಲೆ ಇರುವದು ಅಂಡಖರ್ಪರವು
ಅದು ಬಲ್ಲಿ ನೀನು ಹೇಳಿದೆ ಮುಂಚೆ ನಾನೂ || ೧೧ ||

ಹೆತ್ತವ್ವ ನೀ ಕೇಳೆ ಮತ್ತೆ ಸ್ವರ್ಣದ ಭೂಮಿ
ಕ್ಲೃಪ್ತ ಪೇಳುವೆನು ಎಂಭತ್ತ ನಾಲ್ಕರ ಮೇಲೆ
ಮತ್ತರ್ಧಲಕ್ಷ ಅದಕ್-ಹತ್ತಿ ಇರುವದು ವಜ್ರ-
ಯುಕ್ತಭೂಮಿಯು ಲಕ್ಷ ಕ್ಲೃಪ್ತ ಒಂದುವರೆಯು
ಸುತ್ತ ಲೋಕಾಲೋಕ ಕ್ಲೃಪ್ತ ತಿಳಿ ನೀನು ಐವತ್ತು
ಸಾವಿರವು ಐವತ್ತು ಲಕ್ಷಾ |
ಸಪ್ತಕೋಟಿಯು ತಮಸು ಕ್ಲೃಪ್ತ ಲಕ್ಷವು ಕಡಿಮೆ
ಹತ್ತಿರುವ ದಧಿಯು ಪರಿಸುತ್ತಲೆ ಘನೋದಕವು
ಸಪ್ತಕೋಟಿಯು ಮೇಲೆ ಸಪ್ತ ಕೋಟಿಯು ಮತ್ತೆ ಕ್ಲೃಪ್ತ
ಅದರೊಳಗೆರಡು ಲಕ್ಷ ಕಡಿಮೆಯು ತಿಳಿಯೆ ಮತ್ತನಂತಾಸನವು
ಕ್ಲೃಪ್ತ ಲಕ್ಷವು ಮೂರು ಸುತ್ತಲೆ ಒಳಗೆ ಮಧ್ಯ-
ವರ್ತಿ ಜಂಬೂದ್ವೀಪ ಮಧ್ಯ ಭೂಮಿಯ ಹಿಡಿದು
ಮತ್ತೆ ಖರ್ಪರ ತನಕ ಎತ್ತ ನೋಡಿದರು
ಇಪ್ಪತ್ತೈದು ಕೋಟೀ || ೧೨ ||

ಜಂಬಾಲಜಾಕ್ಷಿ ಕೇಳು ಜಂಬೂದ್ವೀಪದ ವಿವರ
ಒಂಭತ್ತು ಖಂಡಗಳು ಇಂಬಾಗಿ ಒಂದೊಂದೆ
ಒಂಭತ್ತು ಸಾವಿರವು ಎಂಬೊ ಗಾವುದ ಇಹವು
ಒಂಭತ್ತು ಖಂಡಕೇನೆಂಬ ನಾಮವು ನಿನಗೆ
ಬಿಂಬಿಸುವೆ ಕೇಳು ಚಂದ್ರ ಬಿಂಬ ವದನೆ |
ವರ ಇಲಾವೃತ ಖಂಡ ಪರ ಖೇತುಮಾಲ ಖಂಡ
ಪರಮ ರಮ್ಯಕ ಖಂಡ ಪರಹಿರಣ್ಮಯ ಖಂಡ
ಕುರುಖಂಡ ಭದ್ರಾಶ್ವ ಸರಸವಾಗಿಹ ಖಂಡ
ಹರಿವರ್ಷ ಖಂಡ ಕಿಂಪುರುಷೇಂಬೊ ಖಂಡ ಈ ಭರತಖಂಡಾ || ೧೩ ||

ಗುರುತದಿಂದಲಿ ಎಂಟು ಪರ್ವತಂಗಳು ಇಹವು
ಸರಸಾಗಿ ಎಲ್ಲಕ್ಕು ಎರಡೆರಡು ಸಾವಿರದ
ಪರಿಮಿತಿಯು ಅವು ಅಲ್ಲೆ ಇರುವ ನವಖಂಡಕ್ಕೆ
ಮರ್ಯಾದೆ ತಿಳಿ ಬಹು ಮರ್ಯಾದೆಯವಳೇ |
ಸರಸಾಗಿ ಕೇಳು ಆ ಗಿರಿಗಳನು ಮಾಲ್ಯವಾನ್
ಗಿರಿ ನೀಲಗಿರಿ ಶ್ವೇತಗಿರಿ ಶೃಂಗವಾನ್ ಗಿರಿಯು
ಗಿರಿಗಂಧ ಮಾದನವು ಗಿರಿ ನಿಷಧವೆಂಬುವದು
ಗಿರಿ ಹೇಮಕೂಟ ವರ ಗಿರಿ ಹಿಮಾಲಯವು || ೧೪ ||

ಮಧ್ಯದಲ್ಲಿರುವದು ಶುದ್ಧ ಚತುರಸ್ರಾಗಿ
ಇದ್ದಿಲಾವೃತಖಂಡ ಶುದ್ಧ ಕನಕಾತ್ಮಕಾ
ಗಿದ್ದಂಥ ಮೇರುಗಿರಿ ಉದ್ದ ಲಕ್ಷವು ಅದರ
ಮಧ್ಯದಲ್ಲಿರುವದು ಮದ್ಗುಣಿಕಿ ಹೂವಿನಂತಿದ್ದ
ಅದರಾಕಾರ ಬುದ್ದಿವಂತೆಯೆ ತಿಳಿಯೆ ಬುದ್ಧಿಯಿಂದಾ |
ಧರೆಯೊಳಗೆ ಉದ್ದನಟ್ಟಿರುವುದ್-ಹದಿನಾರು ಸಾ-
ವಿರವು ಹೊರಗುದ್ದ ಸಾವಿರವು ಎಂಭತ್ತ ಮೇಲ್ ನಾಲ್ಕು
ಇರುತಿಹುದು ಕೇಳು ಮೇಲಿರುವ ಅಡ್ಡಾಗಲವು
ಸರಸಾಗಿ ಮೂವತ್ತೆರಡು ಸಾವಿರ ತಳಕೆ
ಇರುವುದ್-ಹದಿನಾರು ಸಾವಿರದ ಅಡ್ಡಾಗಲವು
ಪರಿಮಿತಿಯು ಕಾಣೆ || ೧೫ ||

ಕ್ಲೃಪ್ತದಲಿ ಖಂಡ ಒಂಭತ್ತು ಸಾವಿರ ಇರಲು
ಹತ್ತು ಸಾವಿರ ಮೇಲೆ ಮತ್ತಾರು ಸಾವಿರದ
ವಿಸ್ತಾರಗಿರಿ ಅಲ್ಲೆ ಮತ್ತಿರುವುದ್-ಹೇಗೆಂದು
ಚಿತ್ತಸಂಶಯ ಬೇಡ ಸತ್ಯ ಆ ಮೇರುವಿನ
ಹೊರ್ತಿಲಾವೃತಕಂಡ ಸುತ್ತಲಿರುವದು ಒಂಭತ್ತುಸಾವಿರವೆ|
ಶುದ್ಧ ಪಶ್ಚಿಮ ಪೂರ್ವಕಿದ್ದಂಥ ಲವಣ
ಸಮುದ್ರ ಅವಧಿಯು ಆಗಿದ್ದಂಥ ಕೇತುಮಾಲ-
ಭದ್ರಾಶ್ವ ಖಂಡಗಳು ಮದ್ದಲೆಯ ಪರಿ ತಗ್ಗು
ಇದ್ದ ಕಾರಣದಿಂದ ಒದ್ದು ಬರುವದು ನೀರು
ಶುದ್ಧ ವಣಭೂಮಿ ಒಂಭತ್ತು ಸಾವಿರವೇ || ೧೬ ||

ಹರಿಣಾಕ್ಷಿ ದಕ್ಷಿಣಕೆ ಹರಿವರ್ಷಖಂಡ ಕಿಂ-
ಪುರುಷಖಂಡವು ಮತ್ತೆ ಸರಸಾಗಿ ಉತ್ತರಕೆ
ಪರಮ ರಮ್ಯಕಖಂಡ ವರ ಹಿರಣ್ಮಯಖಂಡ
ಸರಸಾಗಿ ಅವು ನಾಕು ಕೊರದ ದಂಡಾಕಾರಪರಿ
ಇಹವು ನೋಡೇ |
ಅಲ್ಲ್ಯುತ್ತರಾಬ್ಧಿ ಬದಿಯಲ್ಲಿರುವ ಕುರುಖಂಡ
ಇಲ್ಲೆ ದಕ್ಷಿಣಕಿರುವ ಬಲ್ಲಿದಬ್ಧಿಯ ತೀರದಲ್ಲೆ ಭಾರತಖಂಡ
ಫುಲ್ಲಾಕ್ಷಿ ನೀನು ಮನದಲ್ಲಿ
ತಿಳಿ ಸಮ ಎರಡು ಬಿಲ್ಲಿನಾಕಾರಾ || ೧೭ ||

ಗಿರಿಗಂಧ ಮಾದನವು ಇರುತಿಹುದು ಪೂರ್ವಕ್ಕೆ
ವರಮಾಲ್ಯವಾನ್ ಗಿರಿಯು ಇರುತಿಹುದು ಪಶ್ಚಿಮಕೆ
ಗಿರಿ ನೀಲಗಿರಿ ಶ್ವೇತಗಿರಿ ಶೃಂಗವಾನೆಂದು
ಇರುತಿಹವು ಉತ್ತರಕೆ ಗಿರಿ ನಿಷಧವೆಂಬುವದು
ಗಿರಿ ಹೇಮಕೂಟ ವರ ಗಿರಿ ಹಿಮಾಲಯವೆಂದು
ಇರುತಿಹವು ದಕ್ಷಿಣಕೆ ಅರಸಿ ನೀ ಆ ಎಂಟು
ಗಿರಿಯ ಆಕಾರ ತಿಳಿ ಗೇರಿಯ ಕೊರೆದಂತೇ |
ಸುತ್ತ ಗಿರಿಗಳ ಮಧ್ಯವರ್ತಿಯೆನಿಸುವ ಮೇರು-
ಮಧ್ಯಭಾಗವ ಹಿಡಿದು ಮತ್ತೆ ಸಾಗರ ತನಕ-
ಎತ್ತ ನೋಡಿದರು ಐವತ್ತು ಸಾವಿರ ಕ್ಲೃಪ್ತ
ಸತ್ಯವಂತೆ ತಿಳಿಯೆ ಸತ್ಯವಾಣಿ || ೧೮ ||

ದಿಟ್ಟಾದ ಆ ಮೇರು ಬೆಟ್ಟದಾ ಮೇಲ್ ಕೇಳು
ಅಷ್ಟದಿಗ್ ಭಾಗದಲಿ ಅಷ್ಟ ದಿಕ್ಪಾಲಕರ
ಅಷ್ಟ ಗೃಹಗಳು ಉಂಟು ನಟ್ಟನಡವಿರುತಿಹುದು
ಸೃಷ್ಟಿ ಕರ್ತನ ಮನೆಯು ಶ್ರೇಷ್ಠವಾಗೀ |
ಮೇಲಂತರಿಕ್ಷದಲಿ ಕಾಲಚಕ್ರವು ಆಲ್ಲೆ
ಕೇಳು ಸೂರ್ಯನ ರಥದ ಗಾಲಿ ತಿರುಗುವುದಲ್ಲೆ
ಮೂಲದಲಿ ನಾ ಅದರ ಮೂಲ ಪೇಳುವೆ ಮುಂಚೆ
ಮೇಲೆ ವಿಸ್ತಾರವು ಆ ಮೇಲೆ ಕೇಳೆ || ೧೯ ||

ಮೂಲ ಆ ಮೇರುಗಿರಿ ಮೇಲೆ ಶಿಂಶುಮಾರ ಹರಿ
ಮೂಲದಲಿ ಮುಖ ಮಾಡಿ ಮೇಲೆ ಪುಚ್ಛವ ಮಾಡಿ
ಲೀಲೆಯಿಂದಿರುತಿರುವ ಕಾಲಚಕ್ರಕೆ ಅವನೆ
ಮೂಲ ಆಧಾರ ತಿಳಿ ತೈಲಗಾಣದ ಖಣಿಯ
ಮೇಲೆ ದಿಂಡಿನ ಪರಿಯು ಕಾಲಚಕ್ರವು ತಿಳಿಯೆ
ಕಾಳಾಹಿವೇಣಿ |
ಮೂಲೆ ಪುಷ್ಕರದ್ವೀಪ ಮೇಲೆ ವಲಯಾಕಾರ
ಮಾನಸೋತ್ತರಗಿರಿಯು ಮೂಲ್ಹಿಡಿದು ಉದ್ದೆಷ್ಟು
ಮೇಲೆ ಅಡ್ಡಾಗಲವು ಕೇಳು ದಶ ಸಹಸ್ರ
ಮೇಲೆ ಸೂರ್ಯನ ರಥದ ಗಾಲಿ ತಿರುಗುವದು || ೨೦ ||

ಸಪ್ತಾಶ್ವಗಳು ರಥಕೆ ಕ್ಲೃಪ್ತವಾಗಿಹವು ಆ-
ದಿತ್ಯ ರಥವನು ಜಗ್ಗಿ ಅಂತರಲೆ ಹಾರಿ
ಅತ್ಯಂತ ಓಡುತ ಮೇರು ಸುತ್ತಲೆ ಪ್ರದಕ್ಷಿಣೆಯ
ನಿತ್ಯ ಮಾಡುತಲಿಹವು ಹೊತ್ತುಗಳೆಯದಲೇ |
ಮತ್ತೆ ಮುಂಭಾಗಕರವತ್ತು ಸಾವಿರ ಸಂಖ್ಯ
ಕ್ಲೃಪ್ತ ಮುನಿಗಳು ಸೂರ್ಯನತ್ಯಂತ ಸ್ತುತಿಸುವರು
ಗಾತ್ರದಿಂದಂಗುಷ್ಟ ಮಾತ್ರ ಪರಿಮಿತಿ ಅವರು
ಎಲ್ಲಾರು ತಿಳಿ ವಾಲಖಿಲ್ಯರೆನಿಸುವರೂ || ೨೧ ||

ಮತ್ತಲ್ಲೆ ಗಂಧರ್ವರತ್ಯಂತ ಗಾಯನವು
ಒತ್ತಿ ಮಾಡಿತಲಿಹರು ಸಪ್ತ ಸ್ವರಗಳ ಮೆಟ್ಟಿ
ಮತ್ತೆ ಸಂಗೀತ ಸಾಹಿತ್ಯದಿಂದಪ್ಸರೆರು
ನರ್ತನವ ಮಾಡುವರು ಮತ್ತೆ ಗಜ ಗಮನೆ ಕೇಳು
ಮಾತವರು ಎಲ್ಲಾರು ಕ್ಲೃಪ್ತ ಹಿಂಬರಕಿಯಲಿ
ನಿತ್ಯ ನಡೆವರು ಮೆಟ್ಟಿ ಎತ್ತಿನಂತೆ |
ಕಾಲಚಕ್ರದಲಿರುವ ಸಾಲುಗ್ರಹಗಳು ಮತ್ತೆ
ಕೇಳು ನಕ್ಷತ್ರಗಳು ಮೇಲೆ ಧ್ರುವ ಪದತನಕ
ಸಾಲ್-ಹಿಡಿದು ಪೇಳುವೆನು ಮೂಲ ಭೂಮಿಯ ಹಿಡಿದು
ಮೇಲೆ ರಾಹುವ ತನಕ ಕೇಳು ಯೋಜನವು
ತೊಂಭತ್ತು ಸಾವಿರವೂ || ೨೨ ||

ಮೇಲ್ಹತ್ತುಸಾವಿರದ ಮೇಲ್ ಸೂರ್ಯಮಂಡಲವು
ಮೇಲ್ಲಕ್ಷದಲಿ ಚಂದ್ರ ಮೇಲ್ಲಕ್ಷ ತಾರೆಗಳು
ಮೇಲೆರಡು ಲಕ್ಷ ಕವಿ ಮೇಲೆರಡು ಲಕ್ಷ ಬುಧ
ಮೇಲೆರಡು ಲಕ್ಷ ಕುಜ ಮೇಲೆರಡು ಲಕ್ಷ ಗುರು
ಮೇಲೆರಡು ಲಕ್ಷ ಶನಿ ||
ಮೇಲ್ಲಕ್ಷ ಹನ್ನೊಂದು ಕೇಳೆ ಸಪ್ತ ಋಷಿಗಣವು
ಮೇಲ್ಲಕ್ಷ ಹದಿಮೂರು ಮೇಲಾದ ಧ್ರುವಪದವು
ಮೇಲಾತನಾಗಿಂತ ಮೇಲಾದವರು ಇಲ್ಲ ಮೂಲ
ಶಿಂಶುಮಾರನಾ ಮೇಲಾದ ಪುಚ್ಛದಲಿ
ಮೇಲೆ ಕುಳಿತಿರುವಾ || ೨೩ ||

ನಿತ್ಯ ಧ್ರುವ ಮಂಡಲವ ಸುತ್ತಿ ತಿರುಗುವರೆಲ್ಲ
ಕ್ಲೃಪ್ತ ಕಲ್ಪದ ತನಕ ಮತ್ತಲ್ಲೆ ಮೇಲಿಂದ
ಇತ್ತ ಹರಿದು ಬರುತಿರುವ ಉತ್ತಮ ಸ್ವರ್ಣದಿಯ
ಉತ್ಪತ್ತಿ ನೀ ಕೇಳೆ ಉತ್ಸಾಹದಿಂದ |
ಸತ್ತ್ರಿವಿಕ್ರಮನೆಂಬ ಮೂರ್ತಿಯಾಗಿರುವ ಸ-
ರ್ವೋತ್ತಮನ ವಾಮ ಪಾದೋತ್ತಮಾಂಗುಷ್ಠ ನಖ-
ವತ್ತಿ ಮ್ಯಾಲ್ ಬ್ರಹ್ಮಾಂಡಕ್-ಹತ್ತಿ ಖರ್ಪರ ಒಡೆದು
ಮತ್ತಲ್ಲೆ ಬಾಹ್ಯಜಲ ಇತ್ತ ಬಂದ್-ಹರಿಪಾದಕ್-ಹತ್ತಿ
ತೊಳೆವುದರಿಂದ ಉತ್ಪನ್ನಳಾಗಿ ಭಗವತ್ಪದೀ
ಎನಿಸುವಳು ಸತ್ಯ ನಾಮದಲಿ || ೨೪ ||

ಮುಂದೆ ಕೇಳ್ ಬಹು ಕಾಲದಿಂದ ಧ್ರುವ ಮಂಡಲಕೆ
ಬಂದು ಆ ಮೇಲೆ ಅಲ್ಲಿಂದ ಶಶಿ ಮಂಡಲವು
ಚಂದಾಗಿ ತೋಯಿಸಿ ಅಲ್ಲಿಂದ ಬ್ರಹ್ಮನ ಮನೆಗೆ
ಬಂದು ಬೀಳುತ ಮತ್ತೆ ಮುಂದೆ ಭಿನ್ನಳು ಆಗಿ
ಒಂದೊಂದು ನಾಮದಲಿ ಛಂದಾಗಿ ನಾಲ್ಕು ಕಡೆ
ಮುಂದೆ ಲವಣೋದಧಿಯ ಬಂದು ಕೂಡಿದಳು |
ಮಂದಗಮನೆಯು ಮೇರುವಿನಿಂದ ಪೂರ್ವಕ ನಾಮ-
ದಿಂದ ಸೀತಾನದಿಯು ಹಿಂದೆ ಚಕ್ಷುರ್-ನದಿಯು
ಎಂದೆನಿಸಿ ಆ ಮೇರುವಿಂದುತ್ತರಕೆ ನಾಮ
ದಿಂದ ಭದ್ರಾನದಿಯು ಯೆಂದೆನಿಸಿ ಮತ್ತೆ ಅದ
ರಿಂದ ದಕ್ಷಿಣಕೆ ಈ ಛಂದಾದ ಖಂಡದಲಿ
ಬಂದಿಹಳು ತಾ ಅಲಕನಂದಾಖ್ಯ ನದಿಯು || ೨೫ ||

ಕಂಡಾಕ್ಷಣಕೆ ಪಾಪ ಖಂಡನವ ಮಾಡುವಾ ಉ –
ದ್ದಂಡ ನದಿಗಳು ಮತ್ತೆ ಗಂಡು ನದಿಗಳು ಭರತ –
ಖಂಡದಲಿ ಇರುತಿಹವು ಕಂಡು ಬಂದೆನು ಕೇಳು
ದುಂಡು ದುರುಬಿನ ಬಾಲೆ ಥಂಡ ಥಂಡದಲಿ |
ಚಂದ್ರ ವಂಶಾ ನದಿಯು ಚಂದ್ರಭಾಗಾ ನದಿಯು
ಛಂದಾಗಿ ಭೀಮರಥಿಯೆಂದೆನಿಸುವಾ ನದಿಯು
ಮಂದ ನಗೆ ಮುಖದವಳೆ ಮಂದಾಕಿನೀ ನದಿಯು
ವಿಂಧ್ಯಾಖ್ಯಾ ನದಿಯು ಕಾಳಿಂದಿ ನದಿಯೂ || ೨೬ ||

ಸಿಂಧುನದ ಶೋಣನದವೆಂದೆರಡು ಗಂಡು ತಿಳಿ
ಮುಂದೆ ನದಿಗಳು ಬಹಳ ಎಂದು ಅವುಗಳನೆಲ್ಲ
ಒಂದೆ ಮಾತಿಲೆ ನಾನು ಮುಂದಾಗಿ ಪೇಳಿದೆನು
ಮುಂದೆ ಗಿರಿಗಳ ಹೆಸರು ಛಂದಾಗಿ ಕೇಳೆ |
ವಿಂಧ್ಯವೆಂಬುವ ಗಿರಿ ಮಹೇಂದ್ರವೆಂಬುವ ಗಿರಿಯು
ಚಂದನಾಶ್ರಯವಾದ ಚಂದಾದ ಮಲಯಗಿರಿ
ಮುಂದೆ ಮೈನಾಕಗಿರಿ ಛಂದ ಛಂದದ ನಾಮ-
ದಿಂದಿರುವ ಗಿರಿಗಳನು ಕುಂದರದನೆಯೆ ಮತ್ತೆ
ಮುಂದೆ ಕೇಳೆ || ೨೭ ||

ಗೋವರ್ಧನಾಖ್ಯಗಿರಿ ರೈವತಕವೆಂಬ ಗಿರಿ
ಶ್ರೀವೇದಗಿರಿ ಮತ್ತೆ ಶ್ರೀಶೈಲವೆಂಬ ಗಿರಿ
ಕೇವಲಾಧಿಕವಾದ ಶ್ರೀವೇಂಕಟಾಖ್ಯಗಿರಿ
ದೇವಿ ಕೇಳೇ ನಿನ್ನಳಿಯ ದೇವ ಅಲ್ಲಿರುವಾ |
ವಪ್ಪಾಗಿ ಭೂಮಿಯಲ್ಲಿಪ್ಪ ಗಿರಿಗಳನೆಲ್ಲ
ತಪ್ಪದಲೆ ಪೇಳಿದೆನು ಕ್ಲೃಪ್ತದಲಿ ಬಹಳುಂಟು
ಛಪ್ಪನ್ನ ದೇಶಗಳು ತಪ್ಪದಲೆ ಪೇಳುವೆನು
ಕೊಪ್ಪಿನಾ ಕಿವಿಯವಳೆ ವಪ್ಪಾಗಿ ಕೇಳೆ || ೨೮ ||

ಅಂಗದೇಶವು ಮತ್ತೆ ವಂಗದೇಶವು ವರ ಕ-
ಳಿಂಗವೆಂಬುವ ದೇಶ ಶೃಂಗಾರವಾಗಿರುವ
ಬಂಗಾಲದೇಶ ಕಾಲಿಂಗಾಖ್ಯದೇಶ ಕಾ-
ಳಿಂಗವೇಣಿಯೆ ಕೇಳು ಹಾಂಗೆ ಮುಂದೆ |
ಕಾಮರೂಪದೇಶ ಕಾಶ್ಮೀರದೇಶ ವರ-
ಕಾಂಭೋಜದೇಶ ಶುಭಕೋಸಲೆಂಬುವ ದೇಶ
ಕೈರಾತಿದೇಶ ವರಕೈಕಯದೇಶ ಕೇಳ್
ಕಂಕಣದ ಕೈಯಳೆ ಕೊಂಕಣದ ದೇಶಾ || ೨೯ ||

ಗುರ್ಜರೆಂಬುವ ದೇಶ ಪಾರ್ಶ್ವೈಕದೇಶ ಸುವಿ-
ದರ್ಭದೇಶವು ಶುಭದಶಾರ್ಣವೆಂಬುವ ದೇಶ
ಸೌರಾಖ್ಯದೇಶ ಸೌವೀರದೇಶವು ಮತ್ತೆ
ಶೂರದೇಶವು ಕೇಳೆ ಶೂರಪತ್ನೀ |
ನಾಟಕದ ದೇಶ ಕರ್ನಾಟಕದ ದೇಶವು ಕ –
ರಾಟಕದ ದೇಶವು ಪನಾಟಕೆಂಬುವ ದೇಶ
ನೀಟಾಗಿ ಇರುವ ಸೌರಾಷ್ಟ್ರದೇಶವು
ಮಹಾಆಷ್ಟ್ರದೇಶಾ || ೩೦ ||

ಏಣಲೋಚನೆ ಕೇಳು ಹೂಣನಾಮಕ ದೇಶ
ಖೂನದಲಿ ಕುರುದೇಶ ಸೇನದೇಶವು ದೇಹ-
ಹೀನದೇಶವು ಮಂಜುಗಾನೆ ಟಂಕಣದೇಶ
ಗೌಡದೇಶ |
ಸೈಂಧವೆನಿಸುವ ದೇಶ ಸಿಂಧುವತಿ ದೇಶ ಕೇಳೆ
ಮಂದ್ರದೇಶವು ಪರಪುರಂಧಿ ಯೆನಿಸುವ ದೇಶ ಆಂಧ್ರಾಖ್ಯದೇಶ
ಜಾಲಂದ್ರಯೆನಿಸುವ ದೇಶ ಗಾಂಧಾರದೇಶ ವರಗಂಧಿ ಕೇಳೇ || ೩೧ ||

ಚೋಳಾಖ್ಯ ದೇಶ ಪಾಂಚಾಲ ನಾಮಕ ದೇಶ
ಮಾಲವೆಂಬುವ ದೇಶ ಸಾಲ್ವಾಖ್ಯ ದೇಶ ಸುವಿ –
ಶಾಲವಾಗಿರುವ ನೇಪಾಲದೇಶವು ಮತ್ತೆ
ಕೇಳ್ ಬರಬರ ದೇಶ ಬಾಹ್ಲೀಕ ದೇಶಾ |
ಯವನ ಯಾವನವೆಂಬ ಅವು ದೇಶಗಳು ಎರಡು
ದ್ರವಿಡ ದ್ರಾವಿಡವೆಂಬ ಅವು ಎರಡು ದೇಶಗಳು
ಮಲಯ ಮಾಗಧವೆಂದು ಮಲಯಗಂಧಿಯೆ ಎರಡು
ತಿಳಿಯಮ್ಮ ನೀ ಬಹಳ ತಿಳುವಳಿಕೆಯವಳೇ || ೩೨ ||

ಸಿಂಹದ ನಡುವಳೆ ಸಿಂಹಲೇಂಬುವ ದೇಶ
ಮಚ್ಛಗಂಗಳೆ ಕೇಳು ಮಚ್ಛ ದೇಶವು
ಭ್ರಮರ ಕುಂತಳೆಯೆ ನೀ ಕೇಳು ಕುಂತಳೆಂಬುವ
ದೇಶ ಪಂಡಿತಳೆ ನೀ ಕೇಳು ಪಾಂಡ್ಯದೇಶ |
ಇಷ್ಟು ದೇಶಗಳಿಂದ ಅಷ್ಟು ತೀರ್ಥಗಳಿಂದ
ದಿಟ್ಟಾಗಿರುವುದೀ ಶ್ರೇಷ್ಠ ಭಾರತಖಂಡ
ಶಿಷ್ಟರೆಂಬುವರಿಲ್ಲೆ ಹುಟ್ಟಿ ಪುಣ್ಯದ ಬುತ್ತಿ
ಕಟ್ಟಿ ವೈಕುಂಠವನು ಮೆಟ್ಟುವರು ಕಾಣೇ || ೩೩ ||

ಕಂಡು ಬಂದದ್ದು ಮನಗಂಡು ಪೇಳಿದೆನು
ಬ್ರಹ್ಮಾಂಡದೊಳಗಿರುವ ಭೂಮಂಡಲಾದೊಳಗೆ
ಏಳು ಥಂಡ ದ್ವೀಪಗಳೊಳಗೆ ದುಂಡ ಜಂಬೂದ್ವೀಪ
ಮಂಡಲಾದೊಳಗೆ ನವಖಂಡದೊಳಗೀ
ಭರತಖಂಡ ಶೇಷ್ಠಾ |
ಇಲ್ಲಿ ಪುಟ್ಟಿದ ಜನರಿಗೆಲ್ಲ ಸಾಧನ ಉಂಟು
ಬಲ್ಲವಳೆ ನೀನು ಇದೆಲ್ಲ ಕೇಳುತ ಎನ್ನ
ಸೊಲ್ಲ ಮರಿಯಲು ಬೇಡ ಫುಲ್ಲಾಕ್ಷಿ ಎನಲು ಆಗಲ್ಲೆ
ನುಡಿದಳು ರಾಜ ವಲ್ಲಭೆಯು ತಾನು || ೩೪ ||

ರಾಗ – ಶಂಕರಾಭರಣ, ತಾಳ – ಆದಿ

ಹರುಷವಾಯಿತಮ್ಮ ನಿನ್ನ ಸರಸ ಮಾತು ಕೇಳಿ ಮುನ್ನ
ಮರೆಯಲ್ಯ್ಹಾಂಗೆ ನಿನ್ನ ಮಾತು ಏ ಧರ್ಮದೇವೀ |
ಮರೆವೊದುಂಟು ಅರಸರಿಗೆ ಮರೆತಾರು ಉಳಿದದ್ದು
ಮರೆಯೆ ಮರಿಯಬೇಡುರಗಾದ್ರೀಶನಾ ಏ ಧರಣಿ ದೇವೀ || ೧ ||

ನಿನ್ನ ಮಾತಿನ ಹೊರ್ತು ಇಲ್ಲ ಇನ್ನು ಮೇಲಾತನಿಗೆ ನಾನು
ಯೆನ್ನ ಈ ಮಗಳನ್ನ ಕೋಡುವೆ ಯೇ ಧರ್ಮದೇವೀ |
ನಿನ್ನ ಮಾತು ಸತ್ಯವೆಂದು ಮುನ್ನ ನಾ ತಿಳಿಯೋದು ಹ್ಯಾಂಗೆ
ಎನ್ನಾಣೆ ಕೊಟ್ಟರೆ ಸತ್ಯ ನೀ ಧರಣಿದೇವೀ || ೨ ||

ನಿನ್ನಾಣೆ ಎನ್ನಾಣೆ ಮತ್ತೆಯೆನ್ನ ಮಗಳಾಣೆಯ ಕೊಡುವೆ
ಇನ್ನು ಮೇಲೊಳಿತೆನ್ನ ನೀನು ಯೇ ಧರ್ಮದೇವೀ |
ಮುನ್ನಾತನಿಗೆ ಕೊಟ್ಟರೊಳಿತು ನಿನ್ನ ಈ ಮಗಳಿಗೆ ವಳಿತು
ಮುನ್ನ ಎಲ್ಲರೀಗೆ ವಳಿತು ಯೇ ಧರಣಿದೇವೀ || ೩ ||

ಸಂದೇಹವ್ಯಾಕಮ್ಮ ಎಲ್ಲ ಮಂದೀ ಮನಸು ತಿಳಿಯಬಲ್ಲೆ
ಚೆಂದಾಗೆನ್ನ ಮನಸು ಅರಿಯೆ ಯೇ ಧರ್ಮದೇವೀ |
ಇಂದು ನಿನ್ನ ಮಾತಿಗೆ ಆನಂದವಾಯಿತಮ್ಮ ಎನಗೆ
ಮುಂದಿನ್ನು ನಾ ಹೋಗಿ ಬರುವೆ ಯೇ ಧರಣಿದೇವೀ|| ೪ ||

ಹೋಗಿ ನೀ ಬಾರಮ್ಮ ನಿನಗೆ ಬಾಗಿ ನಾ ನಮಿಸುವೆನು
ಚೆನ್ನಾಗಿರಲಿ ನಿನ್ನ ದಯವು ಯೇ ಧರ್ಮದೇವೀ |
ಆಗೆಲ್ಲಾನು ಕೊಂಡು ತಾ ಬೆನ್ನಿಗೆ ಆ ಕೂಸಿನ ಕಟ್ಟಿ
ಸಾಗಿದಳಾನಂತಾದ್ರಿಗೆ ಆ ಧರ್ಮದೇವೀ || ೫ ||

| ವಚನ |

ಈ ರೀತಿ ಲೌಕಿಕಾಚಾರಗಳ ಮಾಡುತಿಹ
ಚಾರು ವೇಂಕಟಪತಿಯ ಚಾರು ಕೊರವಂಜಿ ಕಥೆ
ಆರು ಭಕ್ತಿಯಲಿ ಸಂಪೂರ್ಣ ಕೇಳ್ವರು ಅವರ
ಘೋರ ಸಂಕಟವು ಪರಿಹಾರ ತಾ ಮಾಡಿ ಶುಭ
ದೋರಿ ಮುಂದಾಗ್ಯವರ ಕಾರ್ಯ ಮಾಡುವ ಸಕಲ
ಕಾರ್ಯಗಳು ಬಿಟ್ಟು |
ಏರ್ವಿಯಲಿ ಬಹು ರಮ್ಯ ತೋರುವಾನಂತಾಖ್ಯ
ಸಾರಗಿರಿಯಲ್ಲಿದ್ದು ಆರಿಗಾದರು ಒಳಗೆ ಪ್ರೇರಕನು
ಆಗಿ ವ್ಯಾಪರಮಾಡಿಸುತಿಹ ಅಪಾರಮಹಿಮನ ದಯದಿ
ಪೂರ ಮುಗಿಯಿತು ಇಲ್ಲಿಗಾರು ಅಧ್ಯಾಯ ||

ಆರನೆಯ ಅಧ್ಯಾಯವು ಸಮ್ಪೂರ್ಣವು |

Adhyaya 7

ಏಳನೆಯ ಅಧ್ಯಾಯ

| ಶ್ರೀನಿವಾಸಾಯ ನಮ: |

ಜ್ಞಾಪಿತೋ ಬಕುಲಾವಾಕ್ಯಾಚ್ಛುಕ ಜೀವಾನುಮೋದಿತಃ |
ಭೂಪೇನ ನಿಶ್ಚಿತಃ ಪಾಯಾದ್ ವಿವಾಹಾಯ ವರೋ ಹರಿಃ ||

| ವಚನ |

ತಿರುಗಿ ಹೋಗಲು ಕೊರವಿ ತಿರುತಿರುಗಿ ನೋಡುತಲೆ
ಅರಸಿ ತನ ತೊಡೆಯಲ್ಲಿರುವ ಆ ಮಗಳ ಮುಂ-
ಗುರುಳ ತೀಡುತಲೆ ಈ ಪರಿಯು ಮಾತಾಡಿದಳು
ಕೊರವಿ ಆಡಿದ ಮಾತು ಖರೆ ಯೇನು ಎನ್ನ ಮಾತಿ-
ನರಗಿಣಿಯೆ ನೀನು |
ಅರಸಿ ಮಾತಿಗೆ ಬಾಯ ತೆರೆದು ಮಾತಾಡದಲೆ
ಪರಮ ಗಂಭೀರಳಾ-ಗಿರುವ ಪದ್ಮಾವತಿಯ
ಪರಮ ಮನಸಿನ ಭಾವ ಹೊರಗ್-ಹೊರಡಬೇಕೆಂದು
ಕರ ಪಿಡಿದು ಏಕಾಂತದಲಿ ಕರೆದು ಕೇಳಿದಳಾಗ
ಪರಮ ಅಂತಃಕರಣ ಪರವಶಳು ಆಗೀ ||೧||

ರಾಗ-ಭೈರವಿ, ತಾಳ-ಆಟ

ಆತಗೆ ನಾ ಕೊಡಲೋ, ನಿನ್ನನು ಮತ್ತೊಬ್ಬಾತಗೆ
ನಾ ಕೊಡಲೋ |
ಪ್ರೀತಿ ಮಗಳೆ ನಿನ್ನ ಮಾತಿನ ಹೊರತಿಲ್ಲ
ಖ್ಯಾತಿಲಿ ವೇಂಕಟನಾಥ ಯೆಂದೆನಿಪಗೆ ||ಪ||

ಅರಸಿಗೆ ಪೇಳಲೋ ಬಲ್ಲಂಥಾ ಹಿರಿಯರ ಕೇಳಲ್ಯೋ |
ಕೊರವಿ ಮಾತೇನೆಂದು ಭರವಸೆ ಹಿಡಿಯದೆ
ಸರಿ ಬಂದ ವರ ನೋಡಿ ಕಳುಹಲ್ಯೋ ||೧||

ಏಕೋ ಭಾವದಲಿರಲೋ ನಾ ಮತ್ತು ಅನೇಕ
ಮಂದಿಯ ಕೇಳಲೋ |
ಜೋಕೇಲಿ ಬಹುಕಾಲ ಸಾಕಿದ ಗಿಳಿಯನು
ನಾ ಕೊಡಲಾರದೆ ಜರಿಯಲ್ಯೋ ||೨||

ಚಿತ್ತದ ಚಾಪಲ್ಯವೋ ನೀ ಹೋದದ್ದು
ಮಿತ್ರೇರ ಸಂಗತಿಯೋ |
ಉತ್ತಮನಂತಾದ್ರಿ ಸಕ್ತನ ಕಂಡದ್ದು
ಸತ್ಯವೋ ಅದು ಮಿಥ್ಯವೋ ||೩||

| ವಚನ |

ಜನನಿಮಾತಿಗೆ ಜಗಜ್ಜನನಿ ನುಡಿದಳು ಕಾಮ-
ಜನಕನ ಸ್ಮರಿಸುತಲೆ ಜನನಿ ನೀ ಕೇಳಮ್ಮ
ಮನಸಿನಾ ಭಾವವನು ಜನರ ಮುಂದ್-ಹೇಳುವದ-
ಕನುಮಾನ ಮಾಡಿದೆನು ಅನುತಾಪದಿಂದ ||
ತನಗೆ ಬಂದುದ ತಾನೆ ಅನುಭೋಗಿಸದೆ ಉಳಿದ
ಜನರಿಗ್-ಹೇಳಿದರೇನು ಘನವಾಗಿ ಅಪಹಾಸ್ಯವನು
ಮಾಡಿ ನಗುವವರು ಜನರು ಬಲ್ಲರೆ ಒಬ್ಬರ ನೋವು
ತನಗೆಂಬುವುದು ಎನಗೆ ಹಿತಕಳು ನೀನು
ನಿನ್ನ ಮುಂದೆ ಪೇಳುವುದಕನುಮಾನವ್ಯಾಕೆ ||೧||

ರಾಗ -ನೀಲಾಂಬರಿ, ತಾಳ – ಬೊಳಂದೀ

ಅವನೆ ಪತಿ ಎನ್ನವ್ವನೆ ನೀ ಕೇಳು
ಅವನ ಸರಿಯಿಲ್ಲವನಿಯೊಳಗೆ |
ಅವನ ಹೊರತೆನ್ನ ಜೀವನ ನಿಲ್ಲದು
ಅವನೆ ಜಗಜ್ಜೀವನನೇ ||ಪ||

ಮಂಜುಗಾನೆಯ ಕೊರವಂಜಿಯ ಆಡಿದ
ಮಂಜುಳ ಮಾತಿಗೆ ರಂಜನವಾಯಿತು
ಕಂಜಾಕ್ಷಿ ನೀ ಯೆನ್ನ ಕಂಜನಾಭನ
ಪಾದಕಂಜಕೆ ಅರ್ಪಿಸು ಅಂಜದಲೆ |

ಪಂಜರದ ಗಿಳಿ ಪಂಜರ ಬಿಟ್ಟನ್ಯ
ಪಂಜರಕ್-ಹೋಗಲು ಅಂಜುವುದ್ಯಾಕಮ್ಮ
ಅಂಜನಾದ್ರೀಶಗೆ ಅಂಜಲು ಬೇಡ
ನಿರಂಜನನೆ ಭಯ ಬಂಜನನೆ ||೧||

ಆಟದ ಗೆಳತಿಯರಾಟಕೆ ಮೆಚ್ಚಿ ನಾ
ನೀಟಾಗಿ ಹೂವಿನ ತೋಟಕೆ ಪೋಗಲು |
ನೋಟದಿ ನೋಡ್ಯವನಾಟನ ಒಲ್ಲೆನು
ಊಟವು ಚಿತ್ತಪಲ್ಲಟವಾಗಿ |
ಆಟದಿಂದಾನಂತಕೋಟಿ ಬ್ರಹ್ಮಾಂಡವ
ನೀಟಾಗಿ ನಿರ್ಮಿಸಿ ಆಟವ ಮಾಡುವ
ನೀಟಾಗಿ ದಾರವನಾಟವ ಬಲ್ಲರು ಚಾಟಕ
ಕಪಟ ನಾಟಕನೆ ||೨||

ಬಲ್ಲೆನಾತನ ಕಂಠದಲಿ ಕೌಸ್ತುಭ ಮಾಲೆ
ಎಲ್ಲ ಭೂಷಣ ಉರದಲ್ಲಿ ಶ್ರೀವತ್ಸವು
ಚೆಲ್ವಿಕೆ ನೋಡಲು ಎಲ್ಲ ಜ್ಯೊತಿಗಳವನಲ್ಲಿ
ನಿವಾಳಿಸಿ ಚೆಲ್ಲುವುದು |
ಅಲ್ಲೆ ಇಲ್ಲೆಂದು ಮತ್ತಲ್ಲೆ ಹಂಬಲಿಸದೆ
ಅಲ್ಲವಂಗರ್ಪಿಸು ಅಹ್ಲಾದದಿಂದಲ್ಲೇ
ಬಲ್ಲಿದಾನಂತಾದ್ರಿಯಲ್ಲಿರುವ ಎನ್ನೊಲ್ಲಭನೆ
ಪ್ರಾಣದೊಲ್ಲಭನೆ ||೩||

| ವಚನ |

ಮಗಳ ಮಾತಿಗೆ ತಾಯಿ ಮುಗುಳು ನಗುತಲೆ
ಮಗಳಿಗೆಂದಳು ಎನ್ನ ಮಗಳೆ ನಿನ್ನ
ನುದ್ಡಿ ಕೇಳಿ ಮುಗುಲ ಮುಟ್ಟಿತು ಜೀವನಗಿಯಲ್ಲ
ನಾ ನಿನ್ನ ಜಗದೀಶಗರ್ಪಿಸುವೆ ಲಗಬಗೆಯ ಮಾಡಿ |
ಗಗನ ರಾಜನ ರಾಣಿ ಮಗಳ ಮುಂದ್-ಹೀಗೆ
ಮಾತುಗಳಾಡುತಿರಲಾಗಿ ಸುಗುಣಿ ಬಕುಲಾವತಿಯು
ಅಗಜೇಶನ ಅಭಿಷೇಕ ಮುಗಿಸಿ ಬರುವರ ಕೂಡಿ
ಸೊಗಸಿನಲಿ ಕುದುರೆಯನು ಜಿಗಿಸುತಲೆ ಬಂದಳಾ
ಅಗಸಿಯೊಳಗೆ ||೧||

ಭರದಿಂದ ಬೀದಿಯಲಿ ಬರುವ ಬಕುಲಾವತಿಯ
ಹೊರಳಿ ನೋಡಿದಳರಸಿ ಎರಳೆ ನೋಟಗಳಿಂದ
ಬರುವಳಿವಳಾರೆಂದು ಕೊರವಿ ಹೇಳಿದ ಗುರುತ
ಸ್ಮರಿಸಿ ತಾನಿದ್ದಲ್ಲೆ ಕರೆಸಿದಳು ಬೇಗ |
ಸರಸಿಜಾಕ್ಷಿಯೆ ಬಾರೆ ಸರಸವಾಯಿತು ಎಂದು
ಸುರಿಸಿ ಅಮೃತದ ವಾಣಿ ಬೆರಸಿ ಸ್ನೇಹವು ಮತ್ತೆ
ತರಿಸಿ ರತ್ನದ ಪೀಠ ಇರಿಸಿ ಕೂಡೆಂದು
ಕುಳ್ಳಿಇಸಿ ಕೇಳಿದಳಾಗ ಹರುಷದಿಂದ ||೨||

ರಾಗ -ಗೌರಿ, ತಾಳ- ಅಟ

ಲಲನೆ ನೀ ದಾರಮ್ಮ ಹೆಸರೇನು |
ಶೇಷಾಚಲವಾಸಿ ಬಕುಲಾವತಿ ನಾನೂ ||೧||
ಎಲ್ಹಿಗ್ಹೋಗುವಿ ಮುಂದಕೆ ನೀನು |
ತಿಳಿ ಇಲ್ಲಿಗೆ ಬಂದೆ ನೇಮಿಸಿ ನಾನೂ ||೨||
ನಿನ್ನ ಮನದ ಕಾರ್ಯಗಳೇನು |
ಮುಖ್ಯ ಕನ್ಯಾರ್ಥಿಯಾಗಿ ಬಂದೆ ನಾನೂ ||೩||
ದಾವಾತ ವರನಾಗಿರಿವನು | ದಿವ್ಯ
ದೇವನೆಂದೆನಿಸುವ ತಿಳಿ ನೀನೂ ||೪||
ಕೃಷ್ಣವೇಣಿಯೆ ಅವನ್-ಹೆಸರೇನು |
ಕೃಷ್ಣನೆಂದೆನಿಸುವ ತಿಳಿ ನೀನು ||೫||
ತಾಯಿತಂದೆಗಳೆಂಬುವರಾರು | ತಿಳಿ
ದೇವಕಿ ವಸುದೇವರು ಅವರು ||೬||
ಛಂದಾಗಿ ಕುಲದಾವುದ್-ಹೆಳಮ್ಮಾ |
ಶುಭ ಚಂದ್ರಮನ ಕುಲ ಕೇಳಮ್ಮಾ ||೭||
ಶ್ರೇಷ್ಟವಾಗಿಹ ಗೋತ್ರ ದಾವದು |
ವಾಸಿಷ್ಠ ನಾಮಕವಾಗಿರುತಿಹುದು ||೮||
ನಕ್ಷತ್ರ ಪೇಳು ಪನ್ನಗವೇಣೀ |
ಶ್ರವಣ ನಕ್ಷತ್ರ ತಿಳಿ ರಾಜನ ರಾಣೀ ||೯||
ವಿದ್ಯೆಯಿಂದಲಿ ಹ್ಯಾಂಗಿರುವವಾ |
ಬ್ರಹ್ಮ ವಿದ್ಯೆಯಿಂದಲಿ ಗಮ್ಯ ಯೆನಿಸುವಾ ||೧೦||
ಧನವಂತನೇ ನಮ್ಮ ಗುಣನಿಧಿಯೇ |
ಬಹು ಧನವಂತರಾಗುವರವನಿಂದೇ ||೧೧||
ಕಣ್ಣು ಮೂಗಿಲೆ ಹ್ಯಾಂಗಿರುವವಾ |
ಕೋಟಿ ಮನ್ಮಥ ಲಾವಣ್ಯ ಯೆನಿಸುವ ||೧೨||
ಹೆಣ್ಣೀನ ಮನಸಿಗೆ ಬಂದೀತೆ |
ಅವನ ಕಣ್ಣಿಲಿ ಕಂಡರೆ ತಿಳಿದೀತೇ ||೧೩||
ಆದಾವು ದಿವಸೆಷ್ಟು ಪೇಳಮ್ಮ |
ಇಪ್ಪತ್ತೈದರ ಮೇಲಿಲ್ಲ ತಿಳಿಯಮ್ಮ ||೧೪||
ಚಿಕ್ಕಂದು ಮದುವೆ ಇಲ್ಯಾಕಮ್ಮ |
ಅವನ ತಕ್ಕ ಹೆಂಡತಿ ಇರುತಿಹಳಮ್ಮ ||೧೫||
ಮುಖ್ಯಳಿರಳು ಮದುವ್ಯಾಕಮ್ಮ |
ತಿಳಿ ಮಕ್ಕಳಿಲ್ಲದ ಕಾರಣವಮ್ಮ ||೧೬||
ನೇಮದಿಂದಿರುತಿಹ ತಾನೆಲ್ಲಿ |
ತಿಳಿ ಶ್ರೀಮದನಂತಾದ್ರಿಯಲ್ಲಿ ||೧೭||

ರಾಗ -ಯರಕಲಕಾಂಬೋದಿ, ತಾಳ- ಬಿಳಂದಿ

ಇಂಥ ಮಾತನು ಕೇಳಿ ಸಂತೋಷದಿಂದಲೆ
ಕಾಂತನ ಮುಂದ್-ಹೇಳಿದಳೇಕಾಂತದಲೆ ಅರಸಿ |
ಕಾಂತ ನೀ ಇನ್ನು ಮೇಲೆ ಅಂತರಂಗದೊಳು
ಚಿಂತೆ ಮಾಡಲು ಬೇಡ ಕೇಳು ಸಂತೋಷದ ಸುದ್ದೀ ||೧||

ನರನಾರಾಯಣರೆಲ್ಲಿ ಇರುವರೋ ಅಲ್ಲಿಂದೊಬ್ಬಳು
ಕೊರವಿ ಬಂದಿದ್ದಳು ನಮ್ಮರಮನೆ ಒಳಗೀಗ |
ಜ್ವರ ತಾಪದಿಂದಲ್ಲೆ ಮರುಗುತ ಮಲಗಿದ ಮಗಳು
ಜ್ವರ ಹೋಗೆ ಎದ್ದಳು ಆ ಕೊರವಿ ಕಾಲ್ಗುಣದೀ ||೨||

ನೋಡೀ ಪರಿ ನುಡಿದಳು ಮಾಡಿ ಶಪಥವ ಕೊರವೀ
ನಾಡ ಕೊರವಿಯರಂತೆ ಆಡವಳ್ವಳ್-ಹುಸಿಯು |
ಅಡಾತಾಡುತ ಸಖಿಯರ ಖೂಡಿ ವನದಲಿ ಪುತ್ರಿ
ನೋಡಿದಳಂತಲ್ಲೊಬ್ಬ ಪ್ರೌಢ ಪುರುಷನ್ನಾ ||೩||

ಪರವಶಳಾಗಿಹಳಂಥ ಪುರುಷನ ಕಾಣುತ ಪ್ರಾಕೃತ
ಪುರುಷಲ್ಲ ಕೇಳವನೆ ಪುರುಷೋತ್ತಮನಂತೆ |
ಜ್ವರ ಮಗಳಿಗೆ ಬಂತೆಂದು ಮರುಗಿದೆವು ನಾವೆಲ್ಲ
ಜ್ವರವಲ್ಲವಿದು ಕಾಮಜ್ವರವಂತೆ ಕೇಳೂ ||೪||

ಲೇಸ್ಯಾಗಾತನ ಕಥೆ ಚಿತ್ತೈಸಿ ಕೇಳಲು ಜ್ವರವು
ನಾಶವಾಯಿತು ಇನ್ನು ಶೇಷ ಉಳಿದಿಹುದು |
ಶೇಷಾಚಲದಲಿ ನಿತ್ಯ ನಿವಾಸಿಯೆನಿಸುವ ಅವಗೆ
ತೋಷದಿ ಕೊಟ್ಟರೆ ಜ್ವರ ನಿಶ್ಯೆಷ ಹೋಗುವುದು ||೫||

ಇನ್ನೊಬ್ಬಳು ಬಂದಿಹಳು ಉನ್ನತ ತೇಜಿಯನೇರಿ
ಎನ್ನ ಮನೆಯಲ್ಲಿ ತಾ ಕನ್ಯಾರ್ಥಿಯಾಗೀ |
ತನ್ನಲ್ಲಿರುತಿಹ ವರನ ಚೆನ್ನಾಗಿ ಪೇಳುವೆನು
ಕಣ್ಣು ಮೂಗಿಲಿ ಚೆಲುವ ಚೆನ್ನಿಗನಂತವನೂ ||೬||

ಚೆನ್ನಿಗನವನ್ಯಾರೆಂದು ಚೆನ್ನಾಗಿ ಕೇಳಿದರೆ
ಚೆನ್ನಿಗನಂತಾದ್ರೀಶನ್ನೆ ಪೇಳುವಳು |
ನಿನ್ನ ಮಗಳಾದರು ಆತನ್ನೆ ಇಚ್ಛಿಸುವಳು
ಇನ್ನ್ಯಾತಕೆ ಸಂಶಯ ಮಾಡಿನ್ನು ಶುಭ ಶೀಘ್ರಾ ||೭||

| ವಚನ |

ರಂಬೆ ಆಡಿದ ಮಾತಿಗಂಬರಾಖ್ಯನು ರಾಜ-
ಸಂಭ್ರಮದಿ ಆನಂದವೆಂಬ ಬಾಷ್ಪವು ಕಣ್ಣು
ತುಂಬಿ ತುಳುಕುತ ಮೈಯ ತುಂಬ ರೋಮಗಳೂಬ್ಬಿ
ರಂಬೆಗಾಡಿದನು ಹೀಗೆಂಬ ಮಾತುಗಳೂ |
ರಂಬೆ ಪೂರ್ವದ ಪುಣ್ಯವೆಂಬುವದು ಫಲಿಸಿ-
ತೆಂಬ ನಮ್ಮ ಪೂರ್ವಿಕರು ಎಂಬುವರು ಮುಕ್ತಿ
ಅವಲಂಬನವ ಮಾಡಿದರು ಸಂಭ್ರಮಾಯಿತು
ಬಹಳ ಗಂಭೀರಳಾದ ಮಗಳೆಂಬ ಪದ್ಮಾವತಿಯು
ಅಂಬುಜೋಧ್ಭವ ಪಿತನ ರಂಬೆಯೆನಿಸುತ ಅವನ
ನಂಬಿ ಎಡದೊಡೆಯಲ್ಲಿ ತುಂಬಿ ಕುಳಿತಿದ್ದು ಕಣ್ಣ-
ತುಂಬ ನೋಡ್ಯೇನು ಎಂದು ಅಂಬುಜಾಕ್ಷೀ ||೧||

ಮಡದಿ ಮುಂದೀ ಪರಿಯು ನುಡಿದು ಆಕಾಶಪರಿ-
ವೃಡನು ಕ್ಲೇಶದ ಪಾಶ ಕಡುಹರ್ಷ ಖಡ್ಗದಲೆ
ಕಡಿದು ಮಗಳಿದ್ದಲ್ಲೆ ನಡಿದು ಬಂದೀ ಪರಿಯು
ವಡಲೊಳಗೆ ಇದ್ದದ್ದು ವಡದು ಆಡಿದನೂ |
ಕುಡುತಿ ಗಂಗಳೆ ನಿನ್ನ ನಡತೆ ನೋಡಲು ಹರುಷ
ನುಡಿಯಲಾಗದು ಎನಗೆ ಹಿಡಿ ಅಭಯ ನಾ ನಿನಗೆ
ಕೊಡುವೆ ನಿನ್ನೊಳು ನೀನೆ ಮಿಡುಕಿ ಚಿಂತೆಲಿ ಸೊರಗಿ
ಬಡವೆಯಾಗಲು ಬೇಡ ಎನ್-ಹಡದವ್ವನೆ ನೀನು
ಬಿಡು ಮನದ ಕ್ಲೇಶಗಳನು ಕಡು ಚೆಲ್ವ
ಮೂಡಲಗಿರಿ ಒಡೆಯ ವೇಂಕಟ ಪತಿಗೆ ಕೊಡುವೆ ನಿನ್ನಾ ||೨||

ಪುತ್ರಿಗೀ ಪರಿ ನುಡಿದು ಪುತ್ರನ ಕಳುಹಿ ಶುಭ-
ಪತ್ರವನು ಕೊಟ್ಟು ಆಗತ್ತ ಕರೆಕಳುಹಿದನು
ಅತ್ತ ಆ ಬೃಹಸ್ಪತಿಯ ವೃತ್ರಾರಿ ಗುರು ಬಂದ
ಪತ್ರ ಕಂಡಾಕ್ಷಣ ಧರಿತ್ರಿಯಲ್ಲೀ |
ಪೃಥ್ವೀಶ ತಾನು ಬಂದಂಥ ಗುರುವನು
ಕಂಡು ಭಕ್ತಿಂದ ನತಿಸಿ ವಿಧ್ಯುಕ್ತ
ಪೂಜೆಯ ಮಾಡಿ ಯುಕ್ತ ಮಾತಾಡಿದನು ಉತ್ತಮನೆ
ನೀ ಕೇಳು ಸತ್ಯ ಪೌರೋಹಿತ್ಯ ಕೃತ್ಯ ನಿನ್ನದು
ಕಡೆಗೆ ಮತ್ತು ಹಿತಕನು ನಮಗೆ ನಿತ್ಯ ನೀನೆ ||೩||

ಎನ್ನ ಮಗಳಿಗೆ ಒಬ್ಬ ಘನ್ನ ವರ ಬಂದಿಹನು
ಪನ್ನಗಾಚಲದಲ್ಲಿ ಉನ್ನತೈಶ್ವರ್ಯಸಂ-
ಪನ್ನ ಇರುವನಂತೆ ನಿನ್ನ ಅನುಮತಿಯಿಂದ
ಮುನ್ನ ಮಾಡುವೆ ಮದುವೆ ಮಾನ್ಯ ಗುರುವೇ |
ಬಿನ್ನಹ ನುಡಿ ಕೇಳಿ ಮುನ್ನ ಆ ಗುರು ನುಡಿದ
ನಿನ್ನ ಮಾತಿಗೆ ರಾಜ ಎನ್ನ ಮನಸಿಗೆ ಹರುಷ
ಘನ್ನವಾಯಿತು ಸತ್ಯ ಇನ್ನೊಂದು ನಾ ನಿನಗೆ
ಮುನ್ನ ಪೇಳುವೆ ಕೇಳು ಚೆನ್ನಾಗೀ ||೪||

ಶೇಷಗಿರಿಯಲಿ ನಿತ್ಯವಾಸಿಯೆನಿಸುವ ಅವನ
ಆ ಸವಿಸ್ತರವೆಲ್ಲ ಲೇಸಾಗಿ ತಾ ಬಲ್ಲ
ವ್ಯಾಸತನಯನು ಪಂಚ ಕ್ರೋಶದಲಿ ಇಲ್ಲಿರುವ
ವಾಸ ನಮ್ಮದು ದೂರ ದೇಶದಲ್ಲಿ |
ವ್ಯಾಸ ತನಯನು ಅವನೆ ಶ್ರೀಶುಕಾಚಾರ್ಯ ತಿಳಿ
ಲೇಸಾಗಿ ಅವಗೆ ಬಿನ್ನೈಸಿ ಪತ್ರವ ಬರೆದು
ನೀ ಶೀಘ್ರ ಕರೆ ಕಳಿಸು ಶೇಷಗಿರಿಯವನ
ಸವಿಶೇಷ ವೃತ್ತಾಂತ ನಿಶ್ಯೇಷ ತಿಳಿಯುವುದೂ ||೫||

ಪಂಡಿತನ ಮಾತು ಭೂಮಂಡಲೇಶನು ಕೇಳಿ
ತೋಂಡಮಾನಗೆ ಕರೆದು ಕೊಂಡು ನೀ ಬಾ ಎಂದ
ಕೊಂಡು ರಾಜಾಜ್ಞೆ ತಕ್ಕೊಂಡು ಶುಭಪತ್ರ ಮನ-
ಗಂಡ ರಥದಲಿ ಕುಳಿತುಕೊಂಡು ಪೋಗುತ ಮುನಿಯ
ಕಂಡು ಪತ್ರವ ಕೊಟ್ಟು ದಂಡವನ್ನತಿಸಿ ಆ
ತೋಂಡಮಾನನು ನಿಂತುಕೊಂಡ ವಿನಯದಲೀ |
ಕೊಂಡು ಪತ್ರವನೋದಿಕೊಂಡು ಆಕ್ಷಣ ಮುನಿ ಕ-
ಮಂಡಲವನೊಡೆದು ಉದ್ದಂಡ ಹರುಷದಲೆದ್ದು
ಗಂಡರಳೆ ಚರ್ಮವನು ತುಂಡುಮಾಡಿದ ಹರದು
ದುಂಡು ಮಣಿಮಾಲೆ ಹರಕೊಂಡು ಕುಣಿದಾಡಿದನು ಥಂಡಥಂಡದಲೀ ||೬||

ಹೀಗೆಂದು ನುಡಿದು ಸರ್ವಾಂಗ ರೋಮಗಳುಬ್ಬಿ
ಅಂಗ ಕೇಳೆ ಎನ್ನಂತರಂಗ-ಕೊಪ್ಪುವುದು ಜನ-
ಸಂಘದಲಿ ನಿತ್ಯ ನಿಃಸ್ಸಂಗ ಮೂರುತಿಯ ಈ
ಮಂಗಲೋತ್ಸವ ಪರಮ ಮಂಗಳಪ್ರದ
ತಿಳಿ ಜಗಂಗಳೀಗೆ ಎಲ್ಲ |
ಹೀಗೆಂದು ತೀರ್ಥದಲಿ ಸಾಂಗ ಸ್ನಾನವ ಮಾಡಿ
ಹಿಂಗದಲೆ ಹರಿಯ ಧ್ಯಾನಂಗಳನು ತ್ವರೆ ಮುಗಿಸಿ
ಅಂಗಜನ ಗೆದ್ದ ತನ್ನಂಗರಥವನು ಬೇಗ
ಶೃಂಗರಿಸಿದನು ಭೂಷಣಗಳಿಂದಾಗ ||೭||

ತುಂಗವಾಗಿಹ ಕೋಮಲಾಂಗ ಕುಶಗಳ ಕೊಂಡು
ಹಿಂಗದಲೆ ಹೆಣೆದು ಉತ್ತುಂಗ ಮುಕುಟವ ಮಾಡಿ
ಅಂಗೈಯಲೊತ್ಯುತ್ತ-ಮಾಂಗದಲಿ ಇಟ್ಟು ಮತ್ಹಾಂಗೆ
ಶ್ರೀತುಳಸಿ ಪದ್ಮಾಂಗಮಣಿಮಾಲೆಗಳ
ಸಂಘ ಧರಿಸಿದನು ವ್ಯಾಸಾಂಗಜಾತಾ |
ಅಂಗಾಕ್-ಹಾಕಿದನು ಶುದ್ಧಾಂಗ ಕೃಷ್ಣಾಜಿನದ
ಅಂಗಿಯನು ಕೆಳಗೆ ಪಾದಾಂಗಗಳ ಪರ್ಯಂತ
ಹಿಂಗದಲೆ ಜ್ಞಾನೆಂಬ ತುಂಗ ತೇಜಿಯನೇರಿ
ಸಂಗ ರಹಿತನು ಅವನ ಸಂಗತ ನಡದ ನೃಪ ಮಂಗಳಾಲಯಕೇ ||೮||

ಬಂದ ಶುಕಮುನಿ ಎದೂರಿಂದ ಕಾಣುತಲೆದ್ದು
ಮುಂದೆ ರಾಜನು ಗುರುವ ಮುಂದೆ ಮಾಡುತ ಬೇಗ
ಬಂದು ಎದುರಿಗೆ ಭಕ್ತಿಯಿಂದ ವಂದನೆ ಮಾಡಿ
ಮಂದಿರಕೆ ಕರೆದು ವಿಧಿಯಿಂದ ಪೂಜಿಸುತ
ಹೀಗೆಂದನಾಗ |
ಛಂದಾಗಿ ಸೌಂದರ್ಯದಿಂದಿದ್ದ ಮಗಳನ್ನು
ಮುಂದೆ ವೇಂಕಟಪತಿಗೆ ಛಂದಾಗಿ ವೇದವಿಧಿ-
ಯಿಂದ ಕೊಡಬೇಕು ಎಂತೆಂದು ಮಾಡಿದೆ ನಾನು
ಇಂದು ಎನ್ನ ಮನದಲ್ಲಿ ಮುಂದೆ ನಿಮ್ಮುಭಯತರ
ಚಂದಾಗಿ ಮನಸಿಗೆ ಬಂದರೆ ಕೊಡುವೆ ||೯||

ಚೆನ್ನಾಗಿ ನುಡಿ ಕೇಳಿ ಮುನ್ನ ಶುಕಮುನಿ ನುಡಿದ
ಘನ್ನ ರಾಜನೆ ಕೇಳು ಧನ್ಯ ಧನ್ಯನು ನೀನು
ನಿನ್ನ ಕುಲದುದ್ಧಾರ ಮುನ್ನಾಯಿತೆಂದು ತಿಳಿ
ನಿನ್ನ ಸರಿ ಮತ್ತಧಿಕ ಮುನ್ನೆಲ್ಲಿಯಿಲ್ಲ ಬಹು
ಪುಣ್ಯವಂತನು ನೀನು ಪನ್ನಗಾದ್ರೀಶ ತಾ
ನಿನ್ನಳಿಯನಾದ ಮೇಲಿನ್ನೇನು ಕಡಿಮೇ |
ಚೆನ್ನಾಗಿ ಈ ಕಾರ್ಯ ಎನ್ನ ಮನಸಿಗೆ ಬಂತು
ಮುನ್ನ ಸಂಶಯ ಬೇಡ ಇನ್ನು ಧೇನಿಸಬೇಡ
ಇನ್ನೊಬ್ಬರನ ನೀನು ಮುನ್ನ ಕೇಳಲು ಬೇಡ
ಇನ್ನು ತಡ ಮಾಡಬೇಡಿನ್ನು ಶುಭ ಶೀಘ್ರಾ ||೧೦||

ಪ್ರೌಢ ಮುನಿ ಮಾತು ಸವಿಮಾಡಿ ಕೇಳುತ ರಾಜ
ಮಾಡಿ ನಮನವ ಕೈಯ ಜೋಡಿಸುತ ಮತ್ತೆ
ಮಾತಾಡಿದನು ಹೀಗೆ ದಯಮಾಡಿ ವಧುವರರ್ಗಳಿಗೆ
ಕೂಡಿ ಬರುವದು ಏನು ನೀವು ನೋಡಿರೆಂದೂ ||
ಆಡಿದ ನುಡಿ ಕೇಳಿ ಗಾಡನೆ ಬೃಹಸ್ಪತಿಯು
ನೋಡಿ ಬಕುಲಾವತಿಗೆ ಆಡಿದನು ಮಾತು ತ್ವರಮಾಡಿ
ವರಗೋತ್ರಜನಿರೂಢ ನಕ್ಷತ್ರ ಬಿಚ್ಚ್ಯಾಡು
ಬಾಯಿಲೆ ಎನಲು ನೋಡಿ ಈ ಪರಿಯು
ಮಾತಾಡಿದಳು ಬಕುಲಾ ||೧೧||

ರಾಗ-ಕಾನಡಕಾಂಬೋದಿ, ತಾಳ- ಅತ

ಚಿತ್ತಗೊಟ್ಟು ಕೇಳಿರಿ ಗೋತ್ರ ನಕ್ಷತ್ರಗಳು |
ಸತ್ಯ ಶ್ರವಣವೆಂಬೊ ನಕ್ಷತ್ರ ವಾಸಿಷ್ಠ ಗೋತ್ರಾ ||೧||

ಗಗನ ರಾಜನು ನುಡಿದ ಮಗಳ ಜನ್ಮ ನಕ್ಷತ್ರ |
ಮೃಗಶಿರಾವೆಂಬ ನಕ್ಷತ್ರ ಆತ್ರೇಯ ಗೋತ್ರಾ ||೨||

ಬಲ್ಲಂಥ ಆ ದೇವಗುರು ಎಲ್ಲ ಕೂಟಗಳನ್ನು |
ಅಲ್ಲಿ ಕೂಡಿಸಿ ನೋಡಿದ ಮಾತನಾಡಿದಾ ||೩||

ನಾಡಿಕೂಟ ಕೂಡಿತು ಪ್ರೌಢ ರಾಜನೆ ಕೇಳು |
ಕೂಡಿತು ಸೂತ್ರ ಕೂಟವು ಯೋನಿ ಕೂಟವೂ ||೪||

ಕೂಡಿತೆಲ್ಲ ಯೋಗವು ಮಾಡು ನಿಶ್ಚಯ ತ್ವರ |
ಮಾಡಿ ಪತ್ರವ ಕಳಿಸು ಹರಿಗೆ ತಿಳಿಸೂ ||೫||

ಗುರುವಿನ ಆ ಮಾತಿಗೆ ಪರಮ ಸಂಭ್ರಮದಿಂದ |
ಧರಿಸಿದ ಆನಂದ ಬಾಷ್ಪ ಆಕಾಶ ಭೂಪಾ ||೬||

ಕಾಂತಿವುಳ್ಳ ಮಗಳನಂತಾದ್ರೀಶಗೆ ಕೊಡುವೆ |
ನೆಂತ ನಿಶ್ಚಯ ಮಾಡಿದನು ಪತ್ರ ಬರದನು ||೭||

| ವಚನ |

ಸಕಲಗುಣ ಸಂಪನ್ನ ನಿಖಿಲ ವ್ಯಾಪಕ ರಮಾ
ಸುಕಳತ್ರ ಸುಕುಮಾರ ಸಕಲಮಾನ್ಯನೆ ಅಲೌಕಿಕ
ಮೂರ್ತಿ ನೀನು ಲೌಕಿಕ ಮಾಡುವೆನು ನಾನು
ಸುಖಕರಾಶೀರ್ವಾದ ಸುಖಪೂರ್ಣ ನಿನಗೆ |
ಸಕಲರೆಲ್ಲರು ನಾವು ಸುಖದಲಿರಿವುದು ತಿಳಿದು
ವಿಖನಸಾರ್ಚಿತ ನಿಮ್ಮ ಸಕಲ ಸುಕ್ಷೇಮಗಳು
ಲಿಖಿತವಾಗಿಹ ಪತ್ರ ಮುಖದಿಂದ ನೀ ತಿಳಿಸಿ
ಸುಖ ಬಡಿಸು ಅನಿಮಿತ್ತ ಸಖ ವೆಂಕಟೇಶ ||೧||

ಮುಂದೆ ಪದ್ಮಾವತಿಯ ಛಂದಾಗಿ ವೇದವಿಧಿ-
ಯಿಂದ ಕೊಡುವೆನು ನಿನಗೆ ಸಂದೇಹವಿಲ್ಲ
ಗೋವಿಂದ ನೀ ಸ್ವೀಕರಿಸು ಬಂದು ಇಲ್ಲಿಗೆ ನಿನ್ನ
ಬಂಧು ಬಾಂಧವರಿಂದ ಛಂದಾಗಿ ಕೂಡೀ |

ಮುಂದೆ ವೈಶಾಖದಲಿ ಮುಂದಾಗಿ ಬರುತಿರುವ
ಛಂದದ ದಶಮಿಯಲಿ ಬಂದ ಶುಕ್ರವಾರ-
ವೆಂದು ತಿಳಿ ಲಗ್ನ ತಿಥಿ ಮುಂದೆಲ್ಲ ವೃತ್ತಾಂತ
ಚಂದಾಗಿ ನುಡಿವ ನಿನ್ನ ಮುಂದೆ ಶುಕಮುನಿಯೂ ||೨||

ಹೀಗೆ ಪತ್ರವ ಬರೆದು ಆಗ ಶುಕಮುನಿಯನ್ನು
ಬೇಗ ಕಳುಹಿದ ರಾಜ ಹಾಗೆ ಹರದಾರಿ
ಹೋಗಿ ಬೆನ್-ಹತ್ಯವಗೆ ಹೀಗೆ ಮಾತಾಡಿದನು
ಹೋಗಿ ಈ ಕಾರ್ಯವನು ಬೇಗ ಮಾಡಿರಿ ನಿಮಗೆ
ಬೇಕಾದ್ದು ಕೊಡುವೆ |
ಯೋಗಿಗಳು ನಿಮಗೆ ಹೆಚ್ಚಾಗಿ ಹೇಳಲಿ ಯೇನು
ನಾಗಶಯನನು ಇಲ್ಲೆ ಬೇಗ ತಾ ಬರುವಂಥ
ಯೋಗ ಹ್ಯಾಗಾದೀತು ಹಾಗೆ ಮಾಡಿರಿ ಯೆನಲು
ಆಗ ತಲೆದೂಗಿ ಚೆನ್ನಾಗಿ ಶುಕಮುನಿ
ನಡೆದ ನಾಗಗಿರಿಗೆ ||೩||

ರಾಗ-ಶಂಕರಾಭರಣ, ತಾಳ-ಬಿಳಂದಿ

ಬಂದ ಮುನಿಯು ಹರಿಯು ಚಿಂತೆಯಿಂದ ಇರುತಿರೆ|
ಬಂದವರನು ನೋಡುತಲ್ಲೆ ಮುಂದೆ ನಿಂತಿರೆ ||ಪ||

ಹೋದ ತಾಯಿ ಬರದೆ ಎತ್ತ ಪೋದಳೆನುತಿರೆ |
ಹೋದ ಕಾರ್ಯ ಹ್ಯಾಗೊ ಯೆಂದು ಬಾಧೆ ಪಡುತಿರೆ ||೧||

ಒಮ್ಮೆ ಹುತ್ತಿನೊಳಗೆ ಪೋಗಿ ಸುಮ್ಮನಿರುತಿರೆ |
ರಮ್ಮಿಸದಲೆ ಹೊರಗೆ ಮತ್ತೊಮ್ಮೆ ಬರುತಿರೆ ||೨||

ವಾರೆನೋಟದಿಂದ ದೃಷ್ಟಿ ದೂರ ಇಡುತಿರೆ |
ಶ್ರೀರತಾನಂತಾದ್ರೀಶ ಘೋರ ಪಡುತಿರೆ ||೩||

|ವಚನ |

ಬಂದಂಥ ಮುನಿಯ ದೂರಿಂದ ನೋಡುತ ಕೈಯ
ಮುಂದೆಲೆಯ ಮೇಲಿಟ್ಟು ಮುಂದೆದುರಿಗ್-ಹೋಗಿ
ಮತ್ತೊಂದು ಮಾತಾಡದಲೆ ಇಂದಿರೇಶನು
ಚಿಂತೆಯಿಂದ ಪರವಶನಾಗಿ ಅಂದನ್-ಹೀಂಗೆ |
ಇಂದು ಎನ ಕಾರ್ಯ ವಿಪ್ರೇಂದ್ರ ಫಲಿಸಿತೋ ಇಲ್ಲೊ
ಚಂದಾಗಿ ಬೇಗ ಯೆನ್ನ ಮುಂದೆ ನೀ ಪೇಳು
ಎಂತೆಂದ ಮಾತಿಗೆ ಮುನಿಯು ಮಂದಹಾಸದಿ
ನಕ್ಕು ಇಂದಿರೇಶನೆ ಕೇಳು ಇಂದು ನಿನ್ನ
ಕಾರ್ಯಕ್ಕೆ ಸಂದೇಹವಿಲ್ಲವೆಂತೆಂದು
ಪತ್ರವ ತೆಗೆದು ಮುಂದಿಟ್ಟನಾಗ ||೧||

ಅಚ್ಯುತನು ಆ ಪತ್ರ ಬಿಚ್ಚಿ ಓದಿದ ತಾನು
ಉಚ್ಛ ಸ್ವರದಲಿ ಸ್ಪಷ್ಟ ಉಚ್ಚಾರವನು ಮಾಡಿ
ಉತ್ಸಾಹದಿಂದವನ ಸ್ವಚ್ಛ ಪಾದಕೆ ಹಣೆಯ
ಹಚ್ಚಿ ನತಿಸುತ ಹರುಷ ಹೆಚ್ಚಾಗಿ ಅಪ್ಪಿ ಶ್ರೀ-
ವತ್ಸಲಾಂಛನ ನುಡಿದ ವಾತ್ಸ್ಯಲ್ಯದಿಂದಾ |
ಹೆಚ್ಚಿನ ಮುನಿಯೆ ಎನ್ನಿಚ್ಛೆ ಪೂರೈಸಿದೆಯೊ
ಮೆಚ್ಚಿದೆನು ನಾ ನಿನಗೆ ನಿಶ್ಚಯದಿ
ಉಪಕಾರ ಹೆಚ್ಚು ಮಾಡಿದಿ ಇದಕೆ
ಮಚ್ಛರೀರದಕಿಂತ ಹೆಚ್ಚೇನು ಕೊಡಲಿನ್ನು
ತುಚ್ಛವೆಲ್ಲ ||೨||

ತಾಪಸನೆ ಯೆನ್ನ ಈ ರೂಪ ನಿಂದಿಹದು
ಅಪರೂಪ ಅನ್ಯರಿಗೆಂದು ಈ ಪರಿಯು ಮಾತಾಡಿ
ತಾನು ಪತ್ರವ ಬರೆದು ಆ ಪತ್ರ ಬೆನ್-ಹಿಂದೆ
ಶ್ರೀಪತಿಯು ಆಕಾಶಭೂಪಗ್-ಹೀಂಗೆ |
ರಾಜ ಸಿರಿ ಸಂಪನ್ನ ರಾಜ ಪೂಜಿತ ವಿಯದ್ರಾಜ
ನಿನಗೊಂದಿಸುವೆ ರಾಜಿಸುವ ಪತ್ರ ಮುನಿರಾಜ
ತಂದಿತ್ತ ಈ ವ್ಯಾಜದಿಂದ್-ಹರುಷ ಉತ್ತೇಜವಾಯಿತು
ಮಹಾರಾಜ ಎನಗೇ ||೩||

ಸುದ್ದಿ ತಿಳಿ ಕ್ಷೇಮದಿಂದ್ದೇವೆ ಮುಂದೆ ಬರು
ತಿದ್ದಂಥ ವೈಶಾಖ ಶುದ್ಧ ದಶಮಿಯಲಿ
ಇದ್ದ ಶುಕ್ರವಾರ ಶುದ್ಧ ಶುಭ ತಿಥಿಯಲ್ಲ್ಲಿ
ಮುದ್ದು ಮುಖದವಳಾಗಿ ಇದ್ದ ನಿನ್ನ ಕನ್ನಿಕೆಯ
ಶುದ್ಧ ಪಾಣಿಗ್ರಹಣ ಸಿದ್ಧಾಗಿ ಮಾಡುವೆನು
ಬುದ್ಧಿ ಪೂರ್ವಕ ಸ್ನೇಹ ಬದ್ಧನಾಗಿ ||
ಹೀಗೆ ಪತ್ರವ ಬರೆದು ಯೋಗೀಶರ ಕಳುಹಿ
ನಾಗಶಯನನು ಕಂಡನಾಗ ಬಕುಲಾವತಿಯ
ಬೇಗ ತಾ ಭಕ್ತಿಯಲಿ ಬಾಗಿ ನಮಿಸುತ ನುಡಿದ
ಹಿಗ್ಗಿ ಬಡವಗೆ ಬಹಳ ಭಾಗ್ಯ ಬಂದಂತೆ ||೪||

ತಾಯಿ ನೀ ದಣಿದೆಮ್ಮ ಕಾಯಕ್ಲೇಶದಿ ಎನ್ನ
ಕಾರ್ಯಕ್ಕೆ ನೀ ಪೋಗಿ ಬಾಯಿಲುಪಚಾರಲ್ಲು-ಪಾಯಗಳು
ಪಾಯಗಳು ನೂರೆಂಟು ಬಾಯಿಲ್-ಹೇಳಲು ಬಹುದು
ಕೈಲಿ ಮಾಡುವದಕ್ಕೆ ಆಯಾಸ ಎಷ್ಟೂ ||
ಕಾಯಕ್ಲೇಶದಿ ನೀನು ಕಾರ್ಯ ಮಾಡಿದ್ದು ಮುನಿ
ರಾಯ ತಿಳಿಸಿದ ಯೆನಗೆ ತಾಯಿ ಕೇಳುವೆ ನಿನ್ನ
ಬಾಯಿಂದ ಯೆಂತೆನಲು ಬಾಯಿ ಮಾತಿಲೆ ಅಭಿಪ್ರಾಯ
ನುಡಿದಳು ಅವನ ತಾಯಿ ಬಕುಲಾ ||೫||

ರಾಗ-ಸಾಳಂಕ, ತಾಳ-ಆದಿ

ದೈವವೆ ಕಾಣವೆಂಬೆ
ದೇವಾಧಿ ದೇವನೆ ನಾನು |
ಕೇವಲ ಪ್ರಯತ್ನದಿಂದ
ಆವ ಕಾರ್ಯಾದೀತೂ ||ಪ||

ಅಚ್ಯುತ ಕೇಳಾ ದೈವ
ನಿನ್ನಿಚ್ಛಧೀನಾಗಿಹದಯ್ಯಾ |
ನಿಚ್ಚ ನಿನ್ನ ಕಾರ್ಯಕ್ಕೆ
ನಾ ಹೆಚ್ಚಿನವಳೇನೊ ||೧||

ಕೇವಲ ಯತ್ನದಿ ನಾನು
ಧಾವಿಸಿ ಪೋಗದೆ ಮುನ್ನ |
ದೈವ ಯೋಗದಿಂದ ಧರ್ಮ
ದೇವಿ ಮಾಡಿದಳೂ ||೨||

ಚೆನ್ನಿಗಾನಂತಾದ್ರೀಶ ಕೇಳು
ಚೆನ್ನಾಗಿ ದೈವವಿಲ್ಲದವಗೆ |
ಘನ್ನವಾದ ಯತ್ನದಿಂದ
ಮುನ್ನೇನು ಫಲಾ ||೩||

|ವಚನ |

ಕೇಳಿ ಬಕುಲಾವತಿಯು ಹೇಳಿದಾ ಮಾತು ಆ
ವೇಳೆಗಾಯಿತು ಹರಿಗೆ ಬಹಳ ಸಂತೋಷ
ಈ ಲೀಲೆಯನು ಆದರದಿ ಕೇಳಿದರೆ ಶುಭವಾರ್ತೆ
ಕೇಳುವರು ಮುಂದಿಹದು ಸಂಟೋಷಾ ||೧||

ಭೂಲೋಕದಲಿ ಮಂಗಳಾಲಯಾನಂತಾಖ್ಯ
ಶೈಲದಲಿ ಇದ್ದು ಈ ಲೀಲೆಯಿಂದಲಿ ಜಗ-
ತ್ಪಾಲನವ ಮಾಡುವ ದಯಾಳು ನಿನ್ನ
ದಯದಿಂದ ಹೇಳಿ ಮುಗಿಯಿತು ಇಲ್ಲಿಗೇಳು ಅಧ್ಯಾಯ ||೨||

ಏಳನೆಯ ಅಧ್ಯಾಯವು ಸಂಪೂರ್ಣವು |

Adhyaya 8

ಎಂಟನೆಯ ಅಧ್ಯಾಯ

| ಕಮಲಾಪತಯೇ ನಮ: |

ಸ್ವಪ್ರೇಷತಭುಜಂಗಾರಿಸಮಾನೀತಾಮರೋ ಹರಿಃ |
ಮಾಯಯಾಽಽನೀಯ ಕಮಲಾಂ ಪರಿಣೀತ್ಯುನ್ಮುಖೋಽವತಾತ್ ||

ರಾಗ – ಯರಕಲಕಾಂಬೋದಿ ತಾಳ – ಬಿಳಂದಿ

ಮುಂದಾ ವೇಂಕಟಪತಿಯು ಮಂದರನಾ ಮೋಹಿಸುತ
ನೊಂದು ಮನದಲಿ ತಾಯಿಯ ಮುಂದೀ ಪರಿ ನುಡಿದಾ
ಇಂದುಮುಖಿ ನಿನ್ನ ಹೊರತು ಬಂಧು ಬಳಗಗಳಿಲ್ಲಾ
ಇಂದು ಯೆನಗ್ಯಾರಿಲ್ಲ ಛಂದೇನು ಮದುವೆ || ೧ ||

ನಿಬ್ಬಣಕ್-ಹೋಗುವರು ನಾವಿಬ್ಬರು ಇದ್ದೇವಿಲ್ಲೆ
ಇಬ್ಬರನ ಹೊರತು ಮತ್ತೊಬ್ಬರ ನಾ ಕಾಣೆ
ಕೊಬ್ಬಿಲೆ ಬಳ್ಳಿಯು ಹಂದರಕ್-ಹಬ್ಬಿದರೆ ಅದು ಛಂದಾ
ಉಬ್ಬಿಲೆ ಬಳಗವ ಕೊಡಿದ ನಿಬ್ಬಣವು ಛಂದಾ || ೨ ||

ಅಕ್ಕರೆಯಿಂದಲಿ ಮಂದಿ ಮಕ್ಕಳು ಇದ್ದರೆ ಛಂದಾ
ಮಿಕ್ಕದಿರಲು ಮನಸಿಗೆ ತಕ್ಕಲ್ಲವೆಂಬೆ
ಅಕ್ಕರುಳ್ಳರಸಿಗೆ ತಕ್ಕಲ್ಲವಿದುಯೆಂದು
ಮಿಕ್ಕ ಜನರೆಲ್ಲರು ನಕ್ಕಾರು ನಮಗೆ || ೩ ||

ಬಂಧು ಬಳಗಗಳಿಂದ ಛಂದಾಗಿರುವವ ರಾಜ
ಬಂಧು ಹೀನಗೆ ಕನ್ಯಾ ಮುಂದ್-ಹ್ಯಾಂಗೆ ಕೊಡುವ
ಇಂದಿರೇಶನು ಈ ಪರಿಯೆಂದ ಮಾತನು ಕೇಳಿ
ಮಂದಹಾಸದಿ ತಾ ಹೀಂಗೆಂದಳು ಬಕುಲಾ || ೪ ||

ಅಂಬುಜನಾಭನೆ ವಿಶ್ವಕುಟುಂಬಿ ಯೆನಿಸುವಿ ನೀನು
ತುಂಬಿದ ಜಗದೊಳು ನಿನ್ನ ಬಳಗೆಂಬುವದು ಕಡಿಮೆ |
ಅಂಬುಜಭವಮುಖ ದೇವ ಕದಂಬಕೆ ಕಡಿಮಿಲ್ಲದನು
ಸಂಬ್ರಮದಿಂದಲಿ ಸ್ಮರಿಸು ಕುಟಂಬವೆ ನಿಂದಲ್ಲೆ || ೫ ||

ಲಕ್ಷ್ಮೀಪತಿ ಈ ಮಾತು ಲಕ್ಷ್ಯದಿಂದಲೆ ಕೇಳಿ
ಈಕ್ಷಿಸಿ ಮನದಲಿ ಸ್ಮರಿಸಿದ ಪಕ್ಷಿಪ ಫಣಿವರನಾ |
ಆ ಕ್ಷಣದಲಿ ಬಂದವರು ಅಪೇಕ್ಷಿಸುವರು ಆಜ್ಞೆಯನು
ಈಕ್ಷಿಸಿ ಕರುಣದಿ ನುಡಿದನು ಅಕ್ಷಯ ಗುಣಪೂರ್ಣ || ೬ ||

ಗರುಡ ನೀ ಪೋಗಯ್ಯ ತ್ವರ ಸತ್ಯಲೋಕದಲಿ
ಉರಗೇಶ ನೀ ಪೋಗೊ ವರ ಕೈಲಾಸದಲಿ
ಸರಸದಿ ಈ ಪರಿ ಪೇಳಿ ವರದಾನಂತಾದ್ರೀಶ
ಬರೆದನು ಮುಂದೀ ಪರಿ ಆ ಪರಮೇಷ್ಠಿಗೆ ಪತ್ರಾ || ೭ ||

| ವಚನ |

ಜೀವಜನಿಕರ ಚಿರಂಜೀವಿಯೆನಿಸುವ ಬ್ರಹ್ಮ
ದೇವ ಮಾಡುವೆ ನಿನಗೆ ಕೇವಲಾಶೀರ್ವಾದ
ನಾವು ಕ್ಷೇಮದಲ್ಲಿದ್ದ ಭಾವವನು ತಿಳಕೊಂಡು
ನೀವು ಕ್ಷೇಮದಲ್ಲಿದ್ದ ಭಾವ ತಿಳಿಸುವದು |
ಈ ವಸುಧೆಯಲ್ಲಿ ಎನ್ನ ವೈವಾಹಿಕೋತ್ಸವಕೆ
ಯಾವತ್ತು ಸುರರೆಲ್ಲ ಈವತ್ತೆ ಬಾಹುವದು
ದೇವ ನಿನ್ನನ್ನು ಕೂಡಿ ಬಾಯ ಮಾತಿಲೆ ಉಳಿದ
ಯಾವತ್ತು ವೃತ್ತಾಂತಭಾವ ತಿಳಿಸುವ
ಪಕ್ಷಿದೇವ ನಿನಗೆ || ೧ ||

ಹರಿಯು ತಾ ಬೇಗನೀ ಪರಿಯ ಶುಭ ಪತ್ರವನು
ಬರೆದು ಕೈಯಲಿ ಕೊಟ್ಟು ಗರುಡನ ಕಳುಹಿದನು
ವರ ಸತ್ಯಲೋಕಕ್ಕೆ ಸರಸಾಗಿ ತಾ ಮತ್ತೆ
ಹರಗೆ ಪತ್ರವ ಬರೆದು ಹರುಷದಿಂದಾ |
ಸರಸದಲಿ ಕೈಲಾಸಗಿರಿಯಲಿರುವವ ಎನ್ನ
ಪರಮ ಆಶೀರ್ವಾದ ತ್ವರ ಮಾಡಿ ನೀ ಎನ್ನ ವರ
ವರವಿವಾಹೋತ್ಸವಕೆ ಪರಿವಾರ ಸಹಿತಾಗಿ ಬರುವದು
ಅಗತ್ಯ ಉರಗಭೂಷಣ ನಿನಗೆ ಉರಗೇಶ
ಪೇಳುವನು ಉಳಿದ ವೃತ್ತಾಂತ || ೨ ||

ಬೆಟ್ಟದೊಡೆಯನು ಹೀಗೆ ಥಟ್ಟನೆ ತಾ ಬರದು
ಕೊಟ್ಟು ಕಳುಹಿದ ಸರ್ಪ ಶ್ರೇಷ್ಠನ ಮುಂದವನು
ನೆಟ್ಟನೆ ಕೈಲಾಸ ಬೆಟ್ಟಕ್ಕೆ ಪೋಗುತಿರೆ
ಸೃಷ್ಟಿ ಕರ್ತನ ಮನೆಗೆ ಮುಟ್ಟಿದನು ಗರುಡಾ |
ಮೆಟ್ಟಿ ಗೃಹ ಸೋಪಾನವಷ್ಟು ದಾಟುತ ಮುಂದೆ
ಶ್ರೇಷ್ಠರ ಸಭೆಯಲ್ಲಿ ಸೃಷ್ಟಿಕರ್ತನ ಕಂಡ
ಥಟ್ಟನೆ ನತಿಸ್ಯವಗೆ ಸ್ಪಷ್ಟಾಗಿ ವೃತ್ತಾಂತ
ವಷ್ಟು ಪೇಳುತ ಪತ್ರ ಕೊಟ್ಟನಾಗಾ || ೩ ||

ಪತ್ರವನು ನೋಡಿ ವಿಧಿ ಅತ್ಯಂತ ಹರ್ಷದಲಿ
ಸತ್ಯ ಲೋಕಸ್ಥ ಯಾವತ್ತು ಜನರನ ಕರಿಸಿ
ಒತ್ತಿ ಮಾತಾಡಿದನು ಹೊತ್ತುಗಳೆಯದಲೆ
ಯಾವತ್ತು ಬೇಗ್-ಹೊರಡಿರೀ ಹೊತ್ತು ನಿಬ್ಬಣ
ನೀವು ಪತ್ರ ಬಂದಿಹುದು ಎನ್-ಹೆತ್ತಯ್ಯನ
ಮದುವೆ ಮರ್ತ್ಯ ಲೋಕದಲಿ |
ಸತ್ಯಲೋಕೇಶ ಆ ಹೊತ್ತು ಈ ಪರಿ ನುಡಿದು
ಹೊತ್ತುಗಳೆಯದೆ ಬೇಗ್-ಹತ್ತಿ ತಾ ಹಂಸವನು
ಎತ್ತಿ ಹೊಡಿಸಿದ ಭೇರಿ ಉತ್ತಮಾಗಿರುವ ನೌಬತ್ತು
ಮೊದಲಾದ ಯಾವತ್ತು ವಾದ್ಯಗಳೆಲ್ಲ ಒತ್ತಿ
ನುಡಿದವು ಕೊಡಿ ಕ್ಲೃಪ್ತ ಯಿಲ್ಲದಲೆ || ೪ ||

ಪುತ್ರ ಪೌತ್ರರು ವರ ಕಲತ್ರ ಮೊದಲಾದವರು
ಮತ್ತವನ ಬಾಂಧವರು ಹತ್ತಿಹೊಂದಿದ ಜನರು
ಸುತ್ತೆಲ್ಲ ಬಳಗ ಬೆನ್-ಹತ್ತಿ ಬರುತಿಹುದು
ಅತ್ಯಂತ ಭೂಷಿತವಾಗಿ ಚಿತ್ತ ಸಂಭ್ರಮದೀ |
ಮತ್ತವನ ಎಡಬಲಕೆ ಛತ್ರ ಚಾಮರದವರು
ರತ್ನ ಘಟಿತ ಸ್ವರ್ಣ ಬೆತ್ತಗಳು ಪಿಡಿದವರು
ಮತ್ತೆ ಮುಂಭಾಗದಲಿ ವತ್ತಿ ಹೊಗಳುವ ಭಟರು
ನೃತ್ಯ ಗಾಯನದವರು ಸುತ್ತೆಲ್ಲ ಸೈನ್ಯ ಆ
ಸತ್ಯಲೋಕದ ಹಿಡಿದು ಮತ್ತುರಗಗಿರಿತನಕ
ಸತ್ಯ ಸಾರಾಸೇತು ಹತ್ತಿಹುದು ಬಿಡದೆ || ೫ ||

ರಾಗ – ಸೌರಾಷ್ಟ್ರ, ತಾಳ- ತ್ರಿವಿಡಿ

ಬಾಲ ಬರಲಿಲ್ಲೆಂದು ಹರಿ ಆ ಕಾಲದಲಿ
ಚಿಂತಿಸುತಲಿರುತಿರೆ |
ಕೇಳಿದನು ಆಕಾಶದಲಿ ಹೆಗ್ಗಾಳಿ ಊದುವುದು |
ಭಾಳ ಮಂಗಳವಾದ್ಯ ನುಡಿದವು ಕೇಳಿ
ಮತ್ತದು ಮ್ಯಾಲೆ ನೋಡುವ ಕಾಲದಲಿ |
ಮಗ ಬಂದು ತಂದೆಯ ಕಾಲಿಗೆರಗಿದನು || ೧ ||

ಅಪ್ಪ ಯೇಳೆಂದವನ ಯೆಬ್ಬಿಸಿ ಅಪ್ಪಿಕೊಂಡವನಪ್ಪ
ವೇಂಕಟ |
ತುಪ್ಪಹಾಲು ಕೂಡಿದಂತಲೆ ಒಪ್ಪಿದರು ಅವರು |
ಸರ್ಪಶಯನನು ಮಗಗೆ ಲೌಕಿಕಕೊಪ್ಪುವಂತಹ
ಮಾತು ಪೇಳಿದ |
ಅಪ್ಪನೇ ಎನ ತಾಯಿಗೊಂದಿಸು ತಪ್ಪದಲೆಯೆಂದು || ೨ ||

ತಂದೆ ಮಾತಿಗೆ ಕಂದ ನುಡಿದನು ಎಂದು
ಇಲ್ಲದೆ ನಿನ್ನ ತಾಯಿಯು |
ಬಂದಳೀಗೆಲ್ಲಿಂದ ಇಲ್ಲಿಗೆ ಛಂದದಲಿ ಪೇಳೋ |
ಕಂದನಾ ನುಡಿ ಕೇಳಿ ಹರುಷದಿ ಇಂದಿರೇಶನು
ಅಂದನೀ ಪರಿ |
ಹಿಂದಕೀಕೆಯು ತಿಳಿ ಯಶೋದಾ ಯೆಂದು ಕರೆಸುವಳೂ || ೩ ||

ಬಾಲಲೀಲೆಯ ನೋಡಿ ಮುಂದಿನ ಲೀಲೆ ನೋಡದೆ
ಮತ್ತೆ ತಾ ಈ ಕಾಲದಲಿ ಬಕುಲಾಖ್ಯಳೆನಿಸುತ
ಪಾಲಿಸಿದಳೆನ್ನ |
ಬಹಳ ಸಂತೋಷದಲಿ ಶ್ರೀಹರಿ ಹೇಳಿದ ಮಾತನು
ಈ ಪರಿ ಕೇಳಿ |
ಅವಳಡಿಗೊಂದಿಸಿದ ಮೊಮ್ಮಗನೂ || ೪ ||

ಕಂದನಾ ವೃತ್ತಾಂತ ಶ್ರೀಹರಿ ಛಂದದಲಿ
ಕೇಳುತಲೆ ಭೃಗುಮುನಿ |
ಬಂದ ಮೊದಲಾದದ್ದು ಪೇಳಿದ ಹಿಂದಿನದ ಸುದ್ದೀ |
ಬಂದನಾ ಕಾಲದಲಿ ಹರುಷದಿ ನಂದಿವಾಹನ ದೇವ
ಪಾರ್ವತಿಯಿಂದ ಷಣ್ಮುಖನಿಂದ ತನ್ನವರಿಂದ
ವಡಗೂಡಿ || ೫ ||

ಬಂದ ನರವಾಹನನು ಆ ಮೇಲ್ಬಂದ ಮೇಷಾರೂಢ ದೇವನು |
ಬಂದ ಮಹಿಷಾರೂಢ ತ್ವರ ದೇವೇಂದ್ರ ತಾ ಬಂದಾ |
ಬಂದ ವರುಣನು ವಾಯು ಬಂದನು ಚಂದ್ರ ಸೂರ್ಯರು ಬಂದರಾಗಲೆ |
ಸುಂದರಾಶ್ವವನೇರಿ ಮನ್ಮಥ ಬಂದ ರತಿಯಿಂದಾ || ೬ ||

ಶಿಷ್ಟ ಗೌತಮ ಕಶ್ಯಪಾತ್ರಿ ವಸಿಷ್ಠ ವಿಶ್ವಾಮಿತ್ರ ಮೊದಲಾ |
ದಷ್ಟು ಮುನಿಗಳು ಬಂದರಾಗ ವಿಶಿಷ್ಟ ಉತ್ಸವಕೆ |
ಶ್ರೇಷ್ಠ ಗಂಧರ್ವಾಪ್ಸರರು ಮತ್ತಷ್ಟು ನಿಬ್ಬಣ ಕೂಡಿತಾಗಲೆ |
ಶ್ರೇಷ್ಠ ಶ್ರೀಮದನಂತ ನಾಮಕ ಬೆಟ್ಟದಲಿ
ಬಂದು || ೭ ||

| ವಚನ |

ಬಂದವರಿಗಾದರವು ಛಂದದಿಂದಲಿ ಮಾಡಿ
ಮುಂದಕೆ ಕರದು ಮುಕುಂದ ತಾ ಮುದದಿ
ಹೀಗೆಂದು ಮಾತಾಡಿದನು ಬಂದ ಕಾರಣ ಯೆನ್ನ
ಬಾಂಧವರು ನೀವು ಆನಂದ ಇಂದೆನಗೇ |
ಮುಂದೆ ಆಕಾಶ ನೃಪನಂದನೆಯ ಪಾಣಿ
ವಿಧಿಯಿಂದ ಪಿಡಿಯಲು ಬೇಕು ಯೆಂದು ಮಾಡಿದೆ
ನಾನು ಛಂದಾಗಿ ನಿಮ್ಮನಕೆ ಬಂದರಿದು
ಮಾಡುವೆನು ಯೆಂದ ಮಾತಿಗೆ ಎಲ್ಲರೆಂದರ್-ಹೀಗೆ || ೧ ||

ಉತ್ತಮಾಯಿತು ಪರಮ ಉತ್ತಮೋತ್ಸವವಿದು
ಅಗತ್ಯ ನೀ ಮಾಡು ಸರ್ವೋತ್ತಮನೆ ಸತ್ವರದಿ
ಸತ್ಯವಿದು ನೋಡುವದು ಮತ್ತೆ ನಮಗಪರೂಪ
ನಿತ್ಯ ಉತ್ಸವ ನಿನಗೆ ನಿತ್ಯ ಮಂಗಳವೆ |
ಸತ್ಯದಿಂದೀ ಪರಿಯ ಉತ್ತರವ ಕೇಳಿ
ಪ್ರತ್ಯುತ್ತರವ ನುಡಿದ ಹರಿ ಉತ್ತಮಾಯಿತು ನಿಮ್ಮ
ಚಿತ್ತಕ್ಕೆ ಬಂದ ಮೇಲ್-ಮತ್ತಿನ್ನು ತಡವೇಕೆ
ಹೊತ್ತುಗಳಿಯದಲೆ ಈ ಹೊತ್ತು ನಿರ್ಮಿಸಿರಿನ್ನು
ಉತ್ತಮೊತ್ತಮ ಸಭೆಯು ಕ್ಲೃಪ್ತದಿಂದಲಿ
ಮೂವತ್ತು ಗಾವುದವು || ೨ ||

ಶ್ರೀಶನಪ್ಪಣೆಗೆ ಆಲಸ್ಯವನು ಮಾಡದಲೆ
ಆ ಸಮಯದಲಿ ಅಲ್ಲಿ ಭಾಸುರಾಗಿರುವಂಥ
ಶ್ರೀಸಭಾ ನಿರ್ಮಿಸಿದ ವಿಶ್ವ ಕರ್ಮನು ತಾನು
ವಿಶ್ವವ್ಯಾಪಕನಲ್ಲಿ ವಿಶ್ವಾಸದಿಂದಾ |
ಆ ಸಮಯದಲಿ ಶ್ರೀನಿವಾಸ ನುಡಿದನು ಅವಗೆ
ಈ ಸಮಯದಲಿ ಆಕಾಶಪುರಕ್-ಹೋಗಿ ನೀ
ಈ ಸಭಾಗಿಂತಧಿಕ ಆ ಸಭಾ ನಿರ್ಮಾಣ
ಬೇಸರಿಲ್ಲದೆ ಮಾಡು ಲೇಸಾಗೀ || ೩ ||

ಇಂದಿರಾಪತಿಯು ಹೀಗೆಂದು ಪೇಳ್ಯವನ
ಮೇಲಿಂದ್ರನ ಕಳುಹಿದನು ಛಂದಾಗಿ
ನೀನು ಇವನಿಂದ ಈ ಕಾರ್ಯ ತ್ವರದಿಂದ
ಮಾಡಿಸು ಯೆಂದು ಮುಂದೆ ದೇವೇಂದ್ರ ಹರಿ
ಅಂದ್-ಹಾಗೆ ಮಾಡಿದನು ಒಂದು ಬಿಡದೆ |
ಮುಂದಷ್ಟವರ್ಗ ವಿಧಿಯಿಂದ ಮಾಡಲು
ಬೇಕು ಎಂದು ಮಾತಾಡಿ ಗೋವಿಂದ ತಾ ಬಹು
ವಿನಯದಿಂದ ತನ್ನ ಕಾರ್ಯಕ್ಕೆ ಮುಂದೆ
ಒಬ್ಬೊಬ್ಬರಿಗೆ ಒಂದೊಂದು ನೇಮಿಸಿದ
ಛಂದಾಗೀ ||೪||

ಸ್ಪಷ್ಟ ನುಡಿದನು ಹರಿ ವಸಿಷ್ಠ
ವಿಶಿಷ್ಟ ಮುನಿ ವಿಶಿಷ್ಟ ಪೌರೋಹಿತ್ಯ
ಶ್ರೇಷ್ಠ ಷಣ್ಮುಖ ಕೇಳು ಅಷ್ಟೂರಿಗೆ
ಸನ್ಮಾನ ಕೊಟ್ಟು ಕರೆಕಳೀಸುವ ವಿಶಿಷ್ಟ
ಕಾರ್ಯವು ನಿಂದು ಇಷ್ಟರೊಳಗೆ |
ದಿಟ್ಟ ಮನ್ಮಥ ಕೇಳು ಶಿಷ್ಟರನ ಕಾಣುತಲೆ
ವಿಶಿಷ್ಟ ಪ್ರತ್ಯುತ್ಥಾನ ಕೊಟ್ಟು ಮೇಲಕ್ಕೆ ಕರೆ
ತುಷ್ಟನಾಗ್ಯವರಿಗೆ ಥಟ್ಟನೆ ಆಸನವ ಕೊಟ್ಟು
ಕೂಡಿಸು ನೀನು ಶ್ರೇಷ್ಠ ಶಂಕರನೆ ||೫||

ಕಿನ್ನರೇಶನೆ ಕೇಳು ಸತ್ಪಾತ್ರರಿಗೆ ಚೆನ್ನಗಿ
ಕೊಡೂವಂಥ ಎನ್ನ ಧನ ವಸ್ತ್ರಗಳು
ನಿನ್ನ ಸ್ವಾಧೀನ ತಿಳಿ ಇನ್ನು ಚಂದ್ರಮನೆ ಕೇಳ್-
ಘನ್ನತರ ದೀವಟಿಗೆ ಚನ್ನಾಗಿ ಪಿಡಿವದಕೆ
ಚನ್ನಿಗನು ನೀನೂ |
ಅನ್ನಾದಿ ಪಾಕವಿದು ವಹ್ನಿ ನಿನ್ನ ಕೂಡಿಹುದು
ಘನ್ನ ವರುಣನೆ ನೀರು ನಿನ್ನ ಕೂಡಿಹುದು ತಿಳಿ
ಮುನ್ನ ವಸುಗಳಿರಾ ನಿಮ್ಮನ್ನ ಕೂಡಿರುವುವು
ಅನ್ನಾದಿ ಭಾಂಡಗಳು ಚೆನ್ನಗಿ ತೊಳೆಯುವುದು
ಘನ್ನ ಗ್ರಹಗಳಿರಾ ನಿಮ್ಮನ್ನು ಕೂಡಿರುವದು
ದೊನ್ನೆ ಪತ್ರಾವಳಿಯು ಚೆನ್ನವಾಗಿ ||೬||

ದುಷ್ಟರಿಗೆ ದಂಡವು ಶಿಷ್ಟರಿಗೆ ಸನ್ಮಾನ
ಬಿಟ್ಟುಬಿಡದಲೆ ಮಾಡು ಇಷ್ಟು ನಿನ್ನದು ಯಮುನೆ
ಘಟ್ಟಿ ನೀನಿದರಲ್ಲೆ ಇಷ್ಟೆಲ್ಲ ಮಾಡಿಸುವಿ
ಶಿಷ್ಟ ಯಜಮಾನ ಪರಮೇಷ್ಠಿ ನೀನು |
ಇಷ್ಟು ಈ ಪರಿ ಪೇಳಿ ಇಷ್ಟದಾಯಕ ಹರಿಯು
ಶಿಷ್ಟಕಾರ್ಯವ ಮತ್ತೆ ಅಷ್ಟೂರಿಗೆ ಪೇಳಿದನು
ಥಟ್ಟನೆ ಮುಂದವರು ಕಟ್ಟಿ ಟೊಂಕವ ತಮಗೆ
ಕೊಟ್ಟ್ ಕಾರ್ಯವ ಬಿಡದೆ ದಿಟ್ಟಾಗಿ ಮಾಡುತಿರೆ
ಬೆಟ್ಟದೊಡೆಯಗೆ ನುಡಿದ ಸೃಷ್ಟಿಕರ್ತಾ || ೪ ||

ರಾಗ – ಕಾಪಿ, ತಾಳ – ಅಟ

ಮಂಗಳ ಸ್ನಾನ ಮಾಡೇಳೋ ಜಗ
ಮಂಗಲದಾಯಕ ಹರಿಯೆ ದಯಾಳೋ || ಪ ||

ಸಣ್ಣ ನಾಮವ ಬರೆದಿಟ್ಟು ಬಹು ಬಣ್ಣದ
ಕುಂಕುಮ ಮಧ್ಯದಲಿಟ್ಟು
ಸಣ್ಣಿಟ್ಟು ಕಸ್ತೂರಿ ಬೊಟ್ಟು ಮಾಡು
ಪುಣ್ಯಾಹವಾಚನ ಪೀತಾಂಬರುಟ್ಟು || ೧ ||

ದೇವರಿಗೊಂದನ ಮಾಡು ಕುಲದೇವತೆ
ಸ್ಥಾಪನೆ ಮನೆಯಲ್ಲಿ ಮಾಡು |
ಕೇವಲ ಲೌಕಿಕ ನೋಡು ಭೂ
ದೇವರಿಗೊಂದಿಸಿ ವರಗಳ ಬೇಡೂ || ೨ ||

ನಾನಾ ದೇಶದಿ ಬಂದ ಜನರು ನಿನ್ನ
ಆನಂದೋತ್ಸವವಿದು ನೋಡೇವೆಂಬುವರು |
ಸ್ನಾನ ಮಾಡಿಸುವ ಸೇವಕರು
ಅಚ್ಯುತಾನಂತಾದ್ರೀಶನೆ ಸಿದ್ಧರಾಗಿಹರು || ೩ ||

ರಾಗ: ನೀಲಾಂಬರಿ, ತಾಳ – ಅಟ

ಲೋಕನಾಯಕ ಸ್ವಾಮೀ ವ್ಯಾಕುಲನಾದನಾಗಾ
ಲೋಕ ರೀತಿಯ ತೋರಿದ ಶೋಕ ಮಾಡಿದಾ || ೧ ||

ಸಿರಿಯಿಲ್ಲದೆ ಈ ಸಭೆಯು ಸರಿಬಾರದಯ್ಯ ಬ್ರಹ್ಮಾ |
ಸುರಸ ತೋರದು ಕಣ್ಣಿಗೆ ಇರುವೊದು ಹ್ಯಾಗೇ || ೨ ||

ಸುರರು ನೀವೆಲ್ಲ ಯಿಲ್ಲೆ ನೆರದು ಕುಳಿತರೇನು |
ಬರೆ ಮನೆಯಂತೆ ತೋರುವದು ಹರುಷವಾಗದೂ || ೩ ||

ಥಳಥಳಿಸುವ ತಾರೆಗಳು ಬಹಳಾದರಾಕಾಶಾ |
ಚೆಲುವ ಚಂದ್ರಮನಿಲ್ಲದೆ ಶೊಭಿಸುವದೇ || ೪ ||

ಅನುದಿನಾನಂತಾದ್ರಿಯೊಳು ನೆನಪು ಮಾಡುವೆನವಳ |
ಮನೆಯು ಯೆಂಬುವದೊಲ್ಲದು ಮನಸು ನಿಲ್ಲದೂ || ೫ ||

| ವಚನ |

ಹರಿಯ ಶೋಕವ ಕೇಳಿ ಹರ ನುಡಿದನೀ ಪರಿಯು
ಹರಿಯೆ ಇದು ಯೇನು ಈ ಪರಿ ವಿಡಂಬನದಿಂದ
ಬರಿದೆ ಶೋಕವು ಏಕೆ ಸಿರಿದೇವಿ ಯೆಂಬವಳು
ಪರಮ ಚಂಚಲೆಯಾಕೆ ಇರುವಳಲ್ಲೊಂದು ಕಡೆ
ಸ್ಮರಿಸು ವ್ಯಾಕವಳ ನೀ ಸ್ವರಮಣನಲ್ಲೇನೋ |
ಬರುವಳಿನ್ನೊಬ್ಬಳತಿ ಹರುಷ ಕೋಡುವಂಥ
ನಿನ್ನರಸಿ ಪದ್ಮಾವತಿಯು ಸರಸಾಗಿ ಕೊಡ್ಯವಳ
ಹರುಷದಿಂದಿರು ಎನಲು ಹರಿಯು ತಾ ಮನದಲ್ಲಿ
ವರಮಹಾಲಕ್ಷ್ಮಿಯನು ಮರೆಯದಲೆ ಮತ್ತೆ
ಈ ಪರಿ ನುಡಿದನಾಗಾ || ೧ ||

ರಾಗ – ನೀಲಾಂಬರಿ, ತಾಳ – ಆದಿ

ಇರುಲಾರೆನಾಕೆಯ ಹೊರತು ಇರಲಾರೇ || ಪ ||

ಆಕೆಯ ಹೊರತು ಯಾಕೆನ್ನ ಸುರತು |
ಲೋಕ ಸುಂದರಿಯಳ ಮರೆತು ಮರೆತು || ಅನು ಪ ||

ಕಡೆ ಪ್ರಳಯದಲಿ ಕಡು ಹರುಷದಲಿ
ಬಿಡದೆ ಇರುವಳೆನ್ನ ಬದಿಲೆ ಬದಿಲೆ || ೧ ||

ಕರವೀರದಲ್ಲೆ ಇರುವಳಲ್ಲೆ |
ಬರುವಳಿನ್-ಹ್ಯಾಂಗಿಲ್ಲೆ ಇಲ್ಲೆ || ೨ ||

ಇಂದಿಗನಂತಾದ್ರಿಯೊಳಗಂಥ |
ಸುಂದರಿ ಇದ್ದರೆ ಶಾಂತ ಶಾಂತ || ೩ ||

| ವಚನ |

ಹರನ ಮುಂದ್-ಹರಿಯು ಈ ಪರಿಯ ಶೋಕವ ಮಾಡಿ
ತ್ವರದಿಂದ ಸೂರ್ಯನ ಕರೆದು ಪೇಳಿದನಾಗ
ಸಿರಿಯ ಹೊರತಿನ್ನ ನಾ ಇರಲಾರೆ ಇರಲಾರೆ
ಕರಕೊಂಡು ಬಾ ನೀನು ಕರವೀರಕ್-ಹೋಗೀ |
ಪರಮಚಂಚಲಳಾಕೆ ಬರುವ ಬಗೆ ಹ್ಯಾಗೆಂದು |
ಬರಿದೆ ಧ್ಯಾನಿಸ ಬೇಡ ಪರಮ ಯುಕ್ತಿಯ ಕೇಳು
ತ್ವರದಿ ಪೋಗುತ ಪಾದಕೆರಗಿ ಎದುರಿಗೆ ನಿಂತು
ಸುರಿಸಿ ಕಣ್ಣೀರನು ವರೆಸುತಲೆ ನೀ ತೋರು
ಪರಮ ದುಃಖವ ನಿನ್ನ ತ್ವರದಿ ನೋಡುವಳಾಕೆ
ಕರುಣದಿಂದಲಿ ಮುಂದೆ ಕರೆದು ಕೇಳುವಳೂ || ೧ ||

ಏನಯ್ಯ ಸೂರ್ಯ ನಿನಗೇನು ಬಂತಿದು ದುಃಖ
ನೀನು ಇಲ್ಲಿಗೆ ಬಂದಿ ಏನು ಕಾರಣ ಎನಲು
ನೀನು ಮಾತಾಡದಕೆ ಯೇನು ಪೇಳಲಿ ದೇವಿ
ನಾನು ನಿನ್ನ ಮುಂದಿನ್ನು ದೀನನಾಗೀ |
ಶ್ರೀನಿವಾಸನು ಬಹಳ ಕ್ಷೀಣನಾಗಿರುವ
ಯೇನೇನು ಉಳಿದಿಲ್ಲ ತಿಳಿ ನೀನು ನೋಡಿದರಂತು
ಯೇನೆಂಬಿಯೊ ಅವನ ಧ್ಯಾನ ಇನ್ನೊಂದಿಲ್ಲ
ತಾ ನಿನ್ನ ದಾವಾಗ ನೋಡೇನೆಂಬಾ || ೨ ||

ಛಂದಾಗಿ ನೀನು ಹೀಗೆಂದು ಮಾತಾಡು
ತ್ವರದಿಂದ ಬರುವಳಾಕೆ ಸಂದೇಹವಿಲ್ಲ ತಿಳಿ
ಅಂದ ಮಾತಿಗೆ ಸೂರ್ಯ ಮುಂದೆ ರಥದಲ್ಲಿ ಕುಳಿತು
ಬಂದ ಕೊಲ್ಹಾಪುರಕೆ ಛಂದಾಗಿ ಮುಂದೆ ಹರಿ
ಅಂದ್-ಹಾಗೆ ಮಾಡಿದನು ಒಂದು ಬಿಡದೇ |
ಬಂದಳಾ ಕ್ಷಣಕೆ ತ್ವರದಿಂದ ರಥವನು
ಯೇರಿ ಇಂದಿರಾದೇವಿ ಗೋವಿಂದನಾಲಯದಲ್ಲಿ
ಬಂದಿರುವ ತನ್ನ ಆ ಸುಂದರಿಯ ಸುದ್ದಿ
ಕಿವಿಯಿಂದ ಕೇಳುತಲೆದ್ದು ಮುಂದಲ್ಲೆ
ನೋಡಬೇಕೆಂದು ಹರಿ ನಡದಾ || ೩ ||

ಛಂದಾಗಿ ಆ ಶತಾನಂದ ಹೆಗಲ
ಮೇಲೊಂದು ಕೈಯಿಟ್ಟು ಮತ್ತೊಂದು ಕೈ ಹಾಕಿದನು
ಚಂದ್ರ ಶೇಖರನಲ್ಲಿ ಒಂದೊಂದೆ ಹೆಚ್ಚೆಯನು
ಮುಂದಕ್ಕೆ ಸರಿಸಿಟ್ಟು ಮಂದಗತಿಯನು ತೋರಿ
ಮಂದಿಯರ ಮೋಹಿಸುತ ಬಂದನೆದುರಿಗೆ
ರೋಗದಿಂದಿರುವನಂತೇ |
ಮುಂದೆದುರಿಗೀ ರೀತಿಯಿಂದ ಬರುತಿರುವ
ಗೋವಿಂದನ ಕಂಡು ತ್ವರೆಯಿಂದ ರಥವನು
ಇಳಿದು ಇಂದಿರಾದೇವಿ ತಾ ಮಂದಹಾಸದಿ ನಗುತ
ಬಂದು ಆತನ ಪಾದಕೊಂದಿಸುತ ಪರಮ
ಆನಂದದಿಂದಪ್ಪಿ ಬಹು ಚಂದ ತೋರಿದಳಾಗ
ಇಂದ್ರನೀಲದ ಮಣಿಗೆ ಕುಂದಣಿಟ್ಟಂತೆ || ೪ ||

ಪಟ್ಟದರಸಿಯ ಕೊಡಿ ಗಟ್ಟಿ ಆಲಿಂಗನದಿ
ಪುಷ್ಟನಾದನು ಆಗ ವಿಷ್ಟರಶ್ರವ ತಾನು
ಗಟ್ಟ್ಯವಳ ಕೈ ಪಿಡಿದು ಥಟ್ಟನೇ ಕರಕೊಂಡು
ಪಟ್ಟದಾಸನದಲ್ಲಿ ದಿಟ್ಟಾಗಿ ಕುಳಿತಾ |
ಸ್ಪಷ್ಟ ನುಡಿದನು ತನ್ನ ಅಷ್ಟು ವೃತ್ತಾಂತವನು
ಬಿಟ್ಟು ಬಿಡದಲೆ ಆಕೆ ಬಿಟ್ಟು ಹೋದದ್-ಹಿಡಿದು
ಅಷ್ಟು ಕೇಳುತಲ್ಯವನ ದಿಟ್ಟಿಸಿ ನೋಡುತಲೆ
ದಿಟ್ಟೆ ಮಾತಾಡಿದಳು ದಿಟ್ಟ ತನದಲ್ಲಿ || ೫ ||

ರಾಗ – ಸಾರಂಗ, ತಾಳ – ಬಿಳಂದೀ

ಎಂಥಾ ನಡತೆ ನಿನ್ದು ನಾ
ಪ್ರಾಂತಗಾಣೆನಿಂದು ಹರಿ |
ಎಂಥ ನಡತೆ ನಿನ್ನದು || ಪ ||

ಎಂಥಾ ನಡತೆ ಕಾಂತ ನಿನ್ನಂಥ
ಕಪಟವಂತರಿಲ್ಲ |
ಅಂತರಂಗದಿ ಚಿಂತಿಸಿದರೆ
ಎಂಥವರಿಗು ಅಂತ ತಿಳಿಯದು || ಅ ಪ ||

ಎನ್ನ ಬಿಟ್ಟು ಅನ್ಯಳಲ್ಲಿ
ನಿನ್ನ ಚಿತ್ತವನ್ನು ಇಟ್ಟು |
ಮುನ್ನ ಲಜ್ಜೆಯನ್ನು ಬಿಟ್ಟು
ಎನ್ನ ಕರೆವುದಿನ್ನು ಯಾಕೆ || ೧ ||

ಹರಿಯು ಬಹಳ ಸೊರಗಿ
ಇರುವನೆಂಬ ಪರಿಯ ತಿಳಿಸಿ
ಕರೆಯೊ ಭಾಸ್ಕರನೆ ಎಂದು
ತ್ವರದ ಎನ್ನ ಕರೆಯ ಕಳಿಸಿದಂಥ || ೨ ||

ಪಟ್ಟದರಸಿ ಬಿಟ್ಟು ನಿಂತು
ಬೆಟ್ಟದಲ್ಲಿ ಸ್ಪಷ್ಟ ನೀನು |
ಇಷ್ಟು ಘಟ್ಟಿ ಮುಟ್ಟು ಇರಲು
ಎಷ್ಟು ಸುಳ್ಳು ಹುಟಿಸಿದೆಯೋ ||೩||

ರಾಗ – ಘಂಟಾಲ ಭೈರವಿ, ತಾಳ – ಆದಿ

ಪಟ್ಟದರಸಿಯ ಮಾತಿಗಾಗಿ ಗೋವಿಂದ
ಸ್ನೇಹ ಇಟ್ಟು ಮಾತಾಡಿದ ಛಂದವಾಗಿ |
ಸಿಟ್ಟು ಮಾಡಬೇಡ ಪ್ರಾಣಕಾಂತೆ
ನಾ ನಿನ್ನ ಕೊರಳ
ಮುಟ್ಟಿ ಹೇಳುವೆನು ಮನದಂತೆ || ೧ ||

ಹಿಂದಕ್ಕೆ ಆ ತ್ರೇತಾಯುಗದಲ್ಲಿ
ನೀ ಅಂದ ಮಾತು ಛಂದವಾಗಿ
ಸ್ಮರಿಸು ಮನದಲ್ಲೆ |
ಸುಂದರಿ ಆ ವೇದವತಿ ಇಲ್ಲೆ ಪದ್ಮಿನಿಯಾಗಿ
ಬಂದಿಹಳು ಕಲಿಯುಗದಲ್ಲಿ || ೨ ||

ಪ್ರೌಡೆ ಕೇಳು ನಿನ್ನ ಮಾತಿನಿಂದೆ
ಅವಳ ಮದುವೆ ಮಾಡಿಕೊಂಬೆ ನಿನ್ನ
ಸಾಕ್ಷಿಯಿಂದೇ |
ರೂಢಿಲಿ ಬರುವವಳಲ್ಲವೆಂದು
ತಿಳಿದು ಸುಳ್ಳಾಡಿ ಕರೆಕಳಿಸಿದೆನಿಂದು || ೩ ||

ಆಡಿದ ಮಾತಿಗೆ ಹರುಷಬಟ್ಟು ಲಕುಮಿ
ಮಾತಾಡಿದಳು ಮತ್ಸರವ ಬಿಟ್ಟು |
ಮಾಡಿಕೊ ಮದುವೆ ಬೇಗಿನ್ನು ಗೋವಿಂದ
ತಡಮಾಡದೆ ಉದ್ಯೋಗ ಮಾಡು ಮುನ್ನ || ೪ ||

ಎನ್ನ ಮಾತು ಸತ್ಯಮಾಡು ಎಂದು ಲಕ್ಷುಮಿ ಅ
ವನ ಬಣ್ಣಿಸಿ ಕೈಪಿಡಿದಳು ಬಂದು |
ಚೆನ್ನಾಗಿ ಅನಂತಗಿರಿಯಲ್ಲೆ ಇಬ್ಬರಿಗೆ ಹಾಲು
ಹಣ್ಣು ಕುಡಿದಂತಾಯಿತು ಅಲ್ಲೆ || ೫ ||

| ವಚನ |

ಎಂಟು ಮದ ಬಿಟ್ಟು ಎನ್ನ ಕಂಠದಿಂದ್-
ಹೊರಟ ವೈಕುಂಠಪತಿ ಲೀಲೆಯಿದು ಕುಂಠಿತಾಗದಲೆ
ಉತ್ಕಂಠದಲಿ ಕೇಳಿದರೆ ಕಂಟಕವ ತೆಗೆದು
ಉತ್ಕಂಠದಿಂದಲ್ಲೆ ಹೊರಟು ಬರುವಳು ಲಕುಮಿ
ಗಂಟುಪದರಲ್ಲೇ |
ಎಂಟು ಐಶ್ವರ್ಯಗಳು ಉಂಟನಂತಾದ್ರಿಯಲಿ
ಹೊರಟು ಬಂದಿಲ್ಲೆ ನೂರೆಂಟು ವಿಘ್ನಗಳೆಂಬ
ಕಂಟಕವ ಹರಿಸಿ ಎನ್ನ ಕಂಠದಲಿ ನಿಂತು
ವೈಕುಂಠಪತಿ ಮುಗಿಸಿದಿಲ್ಲೆಂಟು ಅಧ್ಯಾಯ || ೧ ||

ಎಂಟನೆಯ ಅಧ್ಯಾಯವು ಸಂಪೂರ್ಣವು |

Adhyaya 9

ಒಂಭತ್ತನೆಯ ಅಧ್ಯಾಯ

| ಲಕ್ಷ್ಮೀ ಪತಯೇ ನಮ: |

ಶ್ರೀವಾಣೀಭಾರತೀಗೌರೀಶಚೀಭಿಃ ಸ್ನಾಪಿತೋಽವವಾತ್ |
ಕುಬೇರಾಲ್ಲಬ್ಧವಿತ್ತೋಽರ್ಚನ್ ವಿಪ್ರಾನ್ ಲಕ್ಷ್ಮೀಪ್ರಿಯಂಕರಃ ||

| ವಚನ |

ಸಿರಿಸಹಿತನಾಗಿರುವ ಹರಿಯ ಆಜ್ಞೆಯ ಕೊಂಡು
ಪರಮೇಷ್ಠಿ ಮಾಡಿದನು ಪರಮಾಷ್ಟವರ್ಗಕ್ಕೆ
ತ್ವರದಿ ಮುಂದುದ್ಯೋಗ ಸರಸ್ವತಿಯು ಮೊದಲಾದ
ಸರಸಿಜಾಕ್ಷಿಯರೆಲ್ಲ ಸರಸಾಗಿ ಬೇಗ
ಶೃಂಗರಿಸಿ ಕೊಂಡರು ತಾವು ಗಿರಿಜೆಯಾದಳು
ಆಗ ವರ ಕಳಸಗಿತ್ತಿ ತಾ ವರನಾಗಿ ಶೋಭಿಸಿದ
ವರ ವೇಂಕಟೇಶ |
ಹರಿದಿಯರು ಮುಂದಾಗ ಹರುಷದಲಿ ನಾಲ್ಕು ಕಡೆ
ವರ ಸುವರ್ಣದ ಪೂರ್ಣ ವರ ಕಲಶಗಳನಿಟ್ಟು
ವರರತ್ನ ಪೀಠವನು ತರಿಸಿ ಮಧ್ಯದಲಿಟ್ಟು
ಸುರಗಿರಿಯನು ಸುತ್ತಿ ಶ್ರೀಹರಿಗೆ ಮಾತಾಡಿದರು
ಸುರಗಿರಿಯಲಿ ಕೂಡೇಳೊ ಸುರರೊಡೆಯ ಬೇಗಿನ್ನು
ತ್ವರದಿ ಮಜ್ಜನ ಮಾಡು ಹರಿಯೆ ನೀನೂ || ೧ ||

೨. ರಾಗ – ನೀಲಾಂಬರಿ, ತಾಳ – ಆದಿ

ಇಂದುಮುಖಿಯರ ಮಾತು ಇಂದಿರೇಶನು ಕೇಳಿ
ಕಂದಗಂದನು ಶೋಕದಲಿ ನೋದು ಮನದಲೀ || ೧ ||

ಸರಸ ಸಂಪಿಗೆಯೆಣ್ಣೆ ಎರದು ಪೂಸುವುದಕ್ಕೆ |
ಹಿರಿಯರೆಂಬುವರಾರೆನಗೆ ಹರಸುವರಾರೀಗ || ೨ ||

ಅಕ್ಕರದಿಂದ ಪೂಸಿ ಹಿಕ್ಕಿ ಎರೆಯುವುದಕ್ಕೆ |
ಅಕ್ಕತಂಗಿಯರಾರಿಲ್ಲ ಅಕ್ಕರವಿಲ್ಲ || ೩ ||

ಪಡದ ತಾಯಿಯು ಇಲ್ಲ ವಡ ಹುಟ್ಟಿದವರಿಲ್ಲ |
ಬಿಡದೆ ಕರ್ಮಕ್ಕೆ ಮಾಡುವದು ಬಿಡುವದೆ ಇದು || ೪ ||

ಛಂದದಾನಂತಾದ್ರಿಯೊಳು ಛಂದಲ್ಲ ಈ ಉತ್ಸವ |
ತಂದೆತಾಯಿಗಳಿಲ್ಲದೆ ನೊಂದು ಬಳಲಿದೆ || ೫ ||

| ವಚನ |

ಇಂದಿರೇಶನ ಮಾತಿಗಂದನೀ ಪರಿ ಬ್ರಹ್ಮ
ಯೆಂದಿಗಾದರು ನಿನಗೆ ತಂದೆ ತಾಯಿಗಳಿಲ್ಲ
ಮುಂದೆ ವಡ ಹುಟ್ಟಿದವರಿಂದೆಲ್ಲಿ ಬರುವರು
ಮಂದಿಯರ ಮೋಹಿಸುತ ಸಂದೇಹ ಬಡಿಸುವುದು
ಚಂದೇನೊ ನಿನಗೆ ಇದು ಇಂದಿರಾದೇವಿ ಕೈಯಿಂದ
ನೀ ಪೂಸಿಕೊ ಚಂದವಾಗಿ |
ಎಂದಿಗಗಲದೆ ನಿನ್ನ ಹೊಂದಿರುವಳೀಕೆ
ಇವಳಿಂದಧಿಕ ಮತ್ತಿಲ್ಲ ಸಂದೇಹವ್ಯಾಕೆ
ಎಂತೆಂದ ಮಾತಿಗೆ ಹರಿಯು ಮಂದಹಾಸದಿ
ನಗುತ ಮುಂದಿರುವ ತನ್ನ ಆ ಸುಂದರಿಯ
ಮುಖವನ್ನು ಚಂದಾಗಿ ಕಡೆ
ನೋಟದಿಂದ ನೋಡಿದನು || ೧ ||

ಹರಿಯ ಮನಸಿನ ಭಾವ ಸಿರಿದೇವಿ ತಾ ತಿಳಿದು
ತರಿಸಿದಳು ತೈಲವನು ವರ ರುಗ್ಮ ಪಾತ್ರದಲಿ
ಹರಿಯು ಹರುಷದಲೆದ್ದು ತ್ವರದಿ ಋಷಿಗಳ
ಪಾದಕೆರಗಿ ಆಜ್ಞೆಯ ಕೊಂಡು ವರ ರತ್ನ
ಪೀಠದಲಿ ಸರಸಾಗಿ ಕುಳಿತಾ |
ಹರದೆಯರ ಒಡಗೂಡಿ ಹರಿಣಾಕ್ಷಿ ತಾ ಬಂದು
ಹರಿಯ ಕೇಶಗಳನ್ನು ಹರವಿ ಬಹು ಸ್ನೇಹದಲಿ
ಸರಸಾದ ಸಂಪಿಗೆಯ ವರ ತೈಲ ಧಾರೆಯನು
ಹರುಷದಿಂದಲಿ ಯೆರೆದು ಹರಸಿದಳು ಹೀಗೇ || ೨ ||

ಖಂಡವಿರಹಿತ ವರ ಅಖಂಡ ಮಹದೈಶ್ವರ್ಯ –
ಮಂಡಿತನೆ ಭಕ್ತರಿಗ್-ಉದ್ದಂಡ ಆಯುಷ್ಯ ಕೊಡು
ಪುಂಡರೀಕಾಕ್ಷನೆ ಅಖಂಡವರ ಸಂತತಿ
ಉದ್ದಂಡ ಸಂಪತ್ತು ಮನಗಂಡು ನೀ ಕೊಟ್ಟು
ಬ್ರಹ್ಮಾಂಡ ನಾಯಕನೆ ಭೂ ಮಂಡಲಾಧಿಪನಾಗಿ
ಥಂಡಥಂಡದ ಜನರ ಕಂಡು ಪಾಲಿಸು
ಕೊಡಿಕೊಂಡು ಎನ್ನ |
ಈ ಪರಿಯು ಹರಸುತಲೆ ತಾ ಪೂಸಿ ಅರಷಿಣದಿ
ಲೇಪಿಸಿದಳಾ ಜಗದ್ವ್ಯಾಪಕನ ಮೈಯಲ್ಲೆ
ರೂಪವತಿಯರ ಕೂಡಿ ಶ್ರೀಪತಿಗೆ ಯೆರೆವವಳು
ತಾ ಪಿತೋದಕದಿ ಸಂತಾಪ ಹಾರಕಳೂ || ೩ ||

ಮಂದಗಮನೆಯರಿಂದ ತಂದಿತ್ತ ಕಸ್ತೂರಿ
ಗಂಧ ಪರಿಮಳದಿಂದ ಚಂದಾಗಿ ಮೈಗೊರಸಿ
ಮುಂದಕ್ಕೆ ಎರೆವುತಿರೆ ತಂದಳಾ ರತಿದೇವಿ
ಚಂದದಾರತಿ ಆಗ ಇಂದಿರಾದೇವಿ ಅವಳಿಂದ
ಒಡಗೂಡಿ ಮುಕುಂದನ ಫಣೆಗೆ ಮುದದಿಂದ
ಕುಂಕುಮವಿಟ್ಟು ಮುಂದೆ ಆರತಿ ಬೆಳಗಿ |
ಮುಂದೆ ಮತ್ತೆರದು ತ್ವರದಿಂದ ಹರಸಿದಳಾಗ
ಹಿಂದಿನ್-ಹಾಗೆ ಸುಂದರಾಂಗಿಯು ತನ್ನ ಚಂದಾದ
ಮೂಗುತಿಯ ಮುಂದುಚ್ಚಿ ಹರಿವಾಣದ್-
ಹಿಂದಿಟ್ಟು ಎತ್ತಿ ಗೋವಿಂದನ ಮೇಲ್ಪಿಡಿದು
ಚಂದಚಂದದ ಕಲಶ
ವೃಂದದಿಂದೋಕುಳಿಯ ಚಂದಾಗಿ
ಎರದಳಾನಂದದಲಿ ಸುಂದರಿಯರಿಂದ ಕೂಡೀ || ೪ ||

ಚಿತ್ತ ಸಮ್ಭ್ರಮ್ದಿ ಸಾವಿತ್ರಿ ತಂದಿತ್ತ ವರ
ವಸ್ತ್ರದಲಿ ಮೈವರಸಿ ಸುತ್ತು ಜರತಾರಿಯಿಂದ-
ತ್ಯಂತ ಶೋಭಿಸುವ ವಸ್ತ್ರ ಪೀತಾಂಬರವ
ಮತ್ತೆ ಉಪ ವಸ್ತ್ರವನು ಹಸ್ತದಲಿ ಕೊಟ್ಟು
ಬಹು ಭಕ್ತಿಯಲಿ ಗಿರಿಜೆ ತಂದಿತ್ತ ಧೂಪದ
ಹೊಗೆಯ ಯುಕ್ತಿಯಿಂದ್-ಹಾಕಿದಳು ಸುತ್ತ
ಕೇಶಗಳಲ್ಲಿ ಮತ್ತೆ ಅವುಗಳನ್ನೆಲ್ಲ ಸುತ್ತಿ
ಕಟ್ಟಿದಳು |
ಭಕ್ತವತ್ಸಲ ತನ್ನ ಪುತ್ರಿ ಭಾಗೀರಥಿಯು
ಭಕ್ತಿಂದ ತಂದಿತ್ತ ರತ್ನದ್-ಹಾವಿಗೆ ಮೆಟ್ಟಿ
ಪತ್ನಿಯಳ ಕೈಪಿಡಿದು ಹಸ್ತ ಲಾಘವದಿಂದ
ಹತ್ತು ಹೆಜ್ಜೆಯ ನಡೆದು ಉತ್ತಮಾಸನದಲ್ಲಿ
ಹತ್ತಿ ಕುಳಿತಾ || ೫ ||

ರಾಗ – ಶಂಕರಾಭರಣ, ತಾಳ – ಆದಿ

ಎಲ್ಲಾರು ಬಂದರು ಬಹು
ಉತ್ಸಾಹದಿಂದಲ್ಲೆ ಅವನ |
ಚೆಲ್ವಿಕೆಯ ನೋಡುತಲೆ
ಅಲ್ಲೆ ಕುಳಿತರೂ || ೧ ||

ಕಂದರ್ಪನ ರಾಣಿ ಮತ್ತೆ
ಇಂದ್ರನ ರಾಣಿ ಇಬ್ಬರು |
ಚಂದದ ಚಾಮರಗಳ
ಬಂದು ಪಿಡಿದರು || ೨ ||

ಭಕ್ತಿಂದ ಭಾರತಿದೇವಿ
ಛತ್ರವ ಪಿಡಿದಳು |
ಸಾವಿತ್ರಿ ತಂದು ಕೊಟ್ಟಳು
ವಿಚಿತ್ರದ ಕನ್ನಡೀ || ೩ ||

ಕನ್ನಡಿಯ ನೋಡಿಕೊಂಡು
ಸಣ್ಣ ನಾಮವನ್ನು ಹಣೆಗೆ |
ಚನ್ನಾಗಿ ಹಚ್ಚಿಕೊಂಡ
ಚೆನ್ನಿಗ ತಾನು || ೪ ||

ಬದಿಯಲ್ಲಿದ್ದ ಬಕುಲಾವತಿಯು
ಮುದದಿಂದ್-ಹೀಂಗೆಂದಳು ಸೊಸೆಗೆ |
ಮದುಮಗನಿಗೆ ಕುಂಕುಮ
ಹಚ್ಚು ಮದಗಜ ಗಮನೆ || ೫ ||

ಸಿದ್ಧಾಗಿ ಲಕುಮಿ ತಾನು
ಎದ್ದು ಪ್ರಾಣಪತಿಯ ಫಣೆಗೆ |
ತಿದ್ದಿ ಕುಂಕುಮನಿಟ್ಟಳು
ಮುದ್ದು ಸುರಿವುತಾ || ೬ ||

ಮುಂದಲ್ಲೆ ಕುಬೇರ ಕೊಟ್ಟ
ಚಂದದಾಭರಣಗಳಿಟ್ಟು |
ಸಂಧ್ಯಾನುಷ್ಠಾನವು
ವಿಧಿಯಿಂದ ಮಾಡಿದ || ೭ ||

ಮನ್ನಿಸಿ ಮುನಿಗಳಿಗೆ ನತಿಸಿ
ಪುಣ್ಯದಾ ತಾಯಿಗೆ ನತಿಸಿ |
ಪುಣ್ಯಾಹವಾಚನಕೆ ಕುಳಿತಾ
ಪುಣ್ಯಾತ್ಮ ತಾನು || ೮ ||

ತಡ ಮಾಡದೆ ಬಂದು ಅವನ
ಮಡದಿ ಮಹಾಲಕುಮಿಯು
ಒಡಗೂಡಿ ಕುಳಿತಲ್ಲೆ
ಸಡಗರದಿಂದ || ೯ ||

ಮತ್ತಲ್ಲೆ ವಸಿಷ್ಠಮುನಿಯು
ಮುತ್ತಿನ ರಾಶಿಗಳಿಂದ |
ಉತ್ತಮ ಗದ್ದಿಗೆಯ ಬರದ
ಕ್ಲೃಪ್ತದಿಂದಲ್ಲೆ || ೧೦ ||

ಮಧುಸೂದನನ ಕೈಯಿಂದಲ್ಲೆ
ಮುದದಿ ಪುಣ್ಯಾಹವಾಚನ |
ವಿಧಿಯಿಂದ ಮಾಡಿಸಿದನು
ವಿಧಿಸುತ ತಾನು || ೧೧ ||

ಆ ಬ್ರಹ್ಮ ಸಮುದಾಯಕ್ಕೆಲ್ಲ
ತಾಂಬೂಲ ದಕ್ಷಿಣೆಗಳು |
ಸಂಭ್ರಮದಿಂದಲ್ಲೆ ಕೊಟ್ಟ
ತಾ ಬ್ರಹ್ಮದೇವಾ || ೧೨ ||

ದೇವತೆಗಳೆಲ್ಲ ಸ್ನೇಹ
ಭಾವದಿಂದ ವಸ್ತ್ರಗಳನು |
ದೇವಾಧಿ ದೇವಗೆ ಕೊಟ್ಟರಾ
ವೇಳೆಯಲ್ಲೀ || ೧೩ ||

ಮುತ್ತಿನ ಆರತಿ ತಂದು
ಅರ್ಥಿಯಿಂದ ಬೆಳಗಿದರು |
ಮುತ್ತಿನ ಅಕ್ಷತೆನಿಟ್ಟು
ಮುತ್ತೈದೆರಲ್ಲೆ || ೧೪ ||

ಕಲಭಾಷಣದಿಂದಲ್ಲೆ
ಹರಿಗೆ ಕುಲ ಪುರೋಹಿತ ನುಡಿದ |
ಕುಲದೇವಿ ಯಾವಾಕೆ ನಿನಗೆ
ಶ್ರೀನಾಥ ಪೇಳೋ || ೧೫ ||

ಹಲವು ಕಾಲದಲ್ಲಿ ಎನ್ನ
ಕುಲ ಪುರೋಹಿತನಾದ ಮೇಲೆ |
ಕುಲದೇವಿ ಯಾವಾಕೆ ಅರಿಯೆ
ಮುನಿನಾಥ ನೀನೂ || ೧೬ ||

ಚೆಲುವ ಚೆನ್ನಿಗನೆ ನಿನಗೆ
ಕುಲ ಗೋತ್ರಗಳಿದ್ದರೆ ನಾನು |
ಕುಲ ಪುರೋಹಿತನೆನಿಸುವೆನೊ
ಶ್ರೀನಾಥ ನಿನಗೆ || ೧೭ ||

ಫಲ ಕಾಲದಲ್ಲೀಗ ನೀನು
ಕುಲಗೋತ್ರ ತೆಗಿಯಲು ಬೇಡ |
ಕುಲದೇವಿ ಎನಗೆ ಉಂಟು
ಮುನಿನಾಥ ಕೇಳೋ || ೧೮ ||

ಯಾವಾಕೆ ನಿನಗೆ ಕುಲದೇವಿ
ಯೆನಿಸುವಳು ಮುಖ್ಯ |
ಯಾವ ರೂಪದಿಂದಿರುವಳು
ಶ್ರೀನಾಥ ಪೇಳೋ || ೧೯ ||

ಶಮಿಯೆಂದು ಕರೆಸುವಳಾಕೆ
ಪ್ರಮಿತ ವೃಕ್ಷ ರೂಪದಿಂದ |
ಅಮಿತಾದ ಫಲ ಕೊಡುವಳಯ್ಯ
ಮುನಿನಾಥ ಕೇಳು || ೨೦ ||

ಎಲ್ಲರಿಗೆ ಬೇಕಾದಂಥ ಬಲ್ಲಿದ
ಶಮಿಯೆಂಬೋ ವೃಕ್ಷ |
ಎಲ್ಲಿ ಇರುತಿಹುದು ಪೇಳೋ
ಶ್ರೀನಾಥ ನೀನು || ೨೧ ||

ಇಲ್ಲೆ ಈ ಉತ್ತರದಿಕ್ಕಿನಲ್ಲಿ
ಕೌಮಾರೆಂಬೊ ತೀರ್ಥ |
ದಲ್ಲೆ ಇರುತಿಹುದು ವೃಕ್ಷ
ಮುನಿನಾಥ ಕೇಳೊ || ೨೨ ||

ವರದಾನಂತಾದ್ರೀಶ ತಾ ಈ
ಪರಿಯೆಂದು ಪರಿವಾರ ಸಹಿತ
ತ್ವರದಿ ನಡೆದ ಕುಲ ದೇವಿಯ
ಕರೆವುದಕೆ || ೨೩ ||

| ವಚನ |

ಕಮಲನಾಭನು ಬಂದ ಶಮಿಯ ಸನ್ನಿಧಿಯಲ್ಲಿ
ಕ್ರಮದಿಂದ ಪೂಜಿಸುತ ನಮಿಸಿ ವರ ಬೇಡಿದನು
ಶಮಿಯೆ ನೀ ದಯಮಾಡು ನಮಗೆ ಕುಲ ದೇವತೆಯೆ
ಅಮಿತ ವಿಘ್ನವ ಹರಿಸಿ ಪ್ರಮಿತ ಕಾರ್ಯವ ಮಾಡು
ಕ್ರಮದಿಂದ ನಿನ್ನ ಪರಾಕ್ರಮವ ಬಲ್ಲೆನು ’ಶಮಿ
ಶಮಯ ಮೇ’ ಎಂತೆಂಬ ವಿಮಲೋಕ್ತಿಯಿಂದಾ |
ಬೇಡುತೀ ಪರಿ ಸ್ತುತಿ ಮಾಡಿ ಕುಲದೇವತೆಯ
ಕೂಡಿ ನಡೆದನು ತಿರುಗಿ ಪ್ರೌಢ ವಾದ್ಯಗಳೆಲ್ಲ
ಕೂಡಿ ನುಡಿದವು ಆಗ ಮಾಡಿ ಬಹು ಶಬ್ದವನು
ನೋಡುವರಿಗ್-ಹರುಷ ಸೂರಾಡುತಲೆ ಬಂದ ಹರಿ
ಕ್ರೋಡ ರೂಪಿಯ ಬದಿಲೆ ಗಾಢನೆ
ಸ್ನೇಹಸಂರೂಢನಾಗೀ || ೧ ||

ವರಹ ಮೂರುತಿಗಂದ ವರನಾದ ವೆಂಕಟನು
ವರಹದೇವನೆ ಎನ್ನ ವರ ವಿವಾಹೋತ್ಸವಕೆ
ತ್ವರಮಾಡಿ ಬರಬೇಕು ಧರಣಿದೇವಿಯ ಕೂಡಿ
ಸರಸಾಗಿ ಎಲ್ಲರಿಗೆ ಹರಿಯೆ ನೀನೂ |
ಹರಿಯಂದ ಮಾತಿಗಾ ವರಹದೇವನು ನುಡಿದ
ಹರಿಯೆ ಎನ್ನ ಸ್ಥಳದಲ್ಲಿ ಹಿರಿಯಳೆಂತೆಂದು ತಿಳಿ
ಪರಮ ಬಕುಲಾವತಿಯು ಹರುಷದಲೆ ಬಿಡು ಎನ್ನ
ಇರುವೆ ಕೃಷಿ ಕಾರ್ಯದಲಿ ನಿರತನಾಗೀ || ೨ ||

ಎಲ್ಲ ಈ ಪರಿ ಕೇಳಿ ಪುಲ್ಲನಾಭನು ಅವನ
ಬಲ್ಲಿದಾಜ್ಞ ಕೊಂದು ಉಲ್ಲಾಸಬಟ್ಟು ಮನದಲ್ಲಿ
ಕುಲ ದೇವತೆಯ ಅಲ್ಲೆ ಸ್ಥಾಪನೆ ಮಾಡಿ
ನಿಲ್ಲದಲೆ ಸ್ವಸ್ಥಾನದಲಿ ಬರುತ ರಮಾ-
ವಲ್ಲಭನು ನುಡಿದನಾಗಲ್ಲೆ ಈ ಪರಿಯು |
ಎಲ್ಲ ಹೊರಡಿರಿ ಇನ್ನು ಸುಳ್ಯಾಕೆ ತಡ ದೂರದಲ್ಲೆ
ಇರುತಿಹುದು ಆ ಬಲ್ಲಿದಾಕಾಶಪುರ
ಇಲ್ಲಿದ್ದ ಬಾಲಕರು ಎಲ್ಲ ವೃದ್ಧರು ಮತ್ತೆ
ಮೆಲ್ಲಗ್-ಹೋಗಲಿ ಮುಂದೆ ನಿಲ್ಲದಲೆ ಸಾಗೀ || ೩ ||

ತನ್ನ ತಂದೆಯ ವಚನವನ್ನು ಕೇಳೀಪರಿ
ಮುನ್ನ ನುಡಿದನು ಬ್ರಹ್ಮ ಪುಣ್ಯ ಪುರುಷನೆ
ಕೇಳು ಪುಣ್ಯಾಹವಾಚನವು ಚೆನ್ನಾಗಿ ನೀ ಮಾಡಿ
ಮುನ್ನ ಆ ಕುಲದೇವಿಯನ್ನು ಸ್ಥಾಪನೆ ಮಾಡಿ
ಉಣ್ಣದಲೆ ಪೋಗುವದು ಉಚಿತವಲ್ಲಾ |
ಸಣ್ಣ ಬಾಲರು ಮತ್ತೆ ಹೆಣ್ಣು ಮಕ್ಕಳು ದೇಹ
ಹಣ್ಣಾಗಿ ಇರುವಂಥ ಬಹು ಪುಣ್ಯಶೀಲರು ಮತ್ತೆ
ನಿನ್ನ ಕುಲ ಬಾಂಧವರು ಮಾನ್ಯ ಮುನಿಗಳು ಎಲ್ಲ
ಉಣ್ಣದಲೆ ಹಸಿವೆಯಲಿ ಬಣ್ಣ ಗೆಟ್ಟಿಹರು || ೪ ||

ತನ್ನ ತನಯನ ವಚನವನ್ನು ಕೇಳೀಪರಿಯು
ಮುನ್ನ ಶ್ರೀಹರಿ ನುಡಿದ ಎನ್ನ ಪುತ್ರನೆ ಕೇಳು
ಎನ್ನ ಕಾರ್ಯಕೆ ಸುಲಭವನ್ನು ಪೇಳುವರಿಲ್ಲ
ನನ್ನ ಅನುಸಂಕಟ ನಾನು ಬಲ್ಲೆನೆ ಹೊರತು
ನಿನ್ನ ಮುಂದಾಡಿದರೆ ಇನ್ನು ಖರೆ ಕಾಂಬುವದು
ಚನ್ನವಾಗೀ |
ಮುನ್ನ ಈ ಜನಕೆಲ್ಲ ಅನ್ನ ಖರ್ಚಿಗೆ ಎನಗೆ
ಹೊನ್ನು ಎಲ್ಲಿಹುದ್-ಹೇಳು ಘನ್ನಾದ ಬಡತನವನ್ನು
ಭೋಗಿಸಿ ಬಿಡದೆ ಚೆನ್ನಾಗಿ ಬಹು ಕಾಲವನ್ನು
ಕಳೆದೆನು ಇಲ್ಲೆ ಮುನ್ನ ನಾ ಸ್ವಲ್ಪ ಈಗಿನ್ನ
ಉಚ್ಛ್ರಾಯದಿ ಸಂಪನ್ನಾಗಿರುವೆನು ಎನ್ನ
ನೋಡುವಿ ಹ್ಯಾಂಗೆ ಕಣ್ಣಿನಿಂದಾ || ೫ ||

ರಾಗ – ಶಂಕರಾಭರಣ, ತಾಳ – ಆದಿ

ಬ್ರಹ್ಮದೇವನು ಪರಬ್ರಹ್ಮನ ಮಾತಿಗೆ |
ಸುಮ್ಮನಾದನು ತಾ ಮಾತಾಡದಲೇ || ೧ ||

ಪಂಕಜ ಸಂಭವ ಶಂಕೆಯಿಂದಿರುತಿರೆ
ಶಂಕರ ನುಡಿದ ನಿಃಶಂಕದಲೆ || ೨ ||

ಪೇಳುವೆ ನಾ ಒಂದು ಕೇಳಯ್ಯ ಕೇಶವ |
ಬಾಲನ ಮೇಲೆ ಸಿಟ್ಟು ಮಾಡದಲೇ || ೩ ||

ಮಂದಿಯೊಳಗೆ ಇದು ಚಂದಲ್ಲ ನಿನ್ನ ಮಾತು |
ಸಂದೇಹವ್ಯಾಕೆ ಸಾಲ ತೆಗೆ ನೀನು || ೪ ||

ಮದುವೆಯ ಕೆಲಸಕ್ಕೆ ಮನೆಯ ಕಟ್ಟುವುದಕ್ಕೆ |
ಎದೆಗೊಟ್ಟು ಸಾಲವ ತೆಗೆಯುವದು || ೫ ||

ಮೊಮ್ಮಗನ ಮಾತಿಗೆ ಸಂಭ್ರಮ ಬಡುತಲೆ
ಬ್ರಹ್ಮನಯ್ಯನು ಏಕಾಂತಕೆ ನಡದಾ || ೬ ||

ಮಗನಿಂದ ಕೂಡಿ ಆ ಮಗನ ಮಗನಿಂದ ಕೂದಿ |
ಲಗಬಗೆ ಕುಬೇರನ ಕರೆಸಿದನೂ || ೭ ||

ಬಂದ ಕುಬೇರಗೆ ಅಂದನು ಈ ಪರಿ |
ಇಂದೆನಗೆ ಕೊಡು ಸಾಲ ಧನ ಪತಿಯೆ || ೮ ||

ಸಾಲವೆಂಬುದೆಷ್ಟು ಮ್ಯಾಲೆ ಬಡ್ಡಿಯು ಎಷ್ಟು |
ಪೇಳು ಎನಗೆ ನೀನು ಶ್ರೀಪತಿಯೇ || ೯ ||

ದೊಡ್ಡ ಸಾಲವು ನಿಧಿ ಬಡ್ಡಿ ಏಕೋತ್ತರ |
ದುಡ್ಡಿಡದೆ ಮುಟ್ಟಿಸುವೆ ಧನಪತಿಯೇ || ೧೦ ||

ಕೊಟ್ಟ ಸಾಲವು ಮುಂದೆ ಮುಟ್ಟುವ ಬಗೆ ಹ್ಯಾಗೆ |
ಬೆಟ್ಟ ಸೇರಿದಿ ನೀನು ಶ್ರೀಪತಿಯೇ || ೧೧ ||

ಕಡು ಭಕ್ತಿಯಿಂದಲ್ಲೆ ನಡೆವ ಭಕ್ತರು ಯೆನಗೆ
ಮುಡಿಪ ಕೊಟ್ಟದ್ದು ಕೊಡುವೆ ಧನಪತಿಯೇ || ೧೨ ||

ಬದಿಲಿ ಬರದು ಕೊಡು ಇದರಂತೆ ಪತ್ರವ
ಚದುರ ಅನನ್ತಾದ್ರಿ ರಮಣನೇ || ೧೩ ||

| ವಚನ |

ಧನಪತಿ ನುಡಿ ಕೇಳಿ ವನಜನಾಭನು
ಪತ್ರವನು ಬರೆದ ಹೀಗೆಂದು ಎಣಿಸಿ ಇಪ್ಪತ್ತೆಂಟು-
ಗಣಿತ ಕಲಿಯುಗದಲ್ಲಿ ಋಣವಂತ ವೇಂಕಟನು
ಧನವಂತ ವೈಶ್ರವಣ ದಿನದಿನಕೆ ಅಧಿಕಾ |
ಅಬ್ದದೊಳಗೀ ವಿಳಂಬಾಬ್ದದಲಿ ವೈಶಾಖ
ಸುದ್ಧ ಸಪ್ತಮಿಯಲ್ಲಿ ಶುದ್ಧ ಶುಭ
ಕಾರ್ಯದಲ್ಲಿದ್ದ ವೇಂಕಟಪತಿಗೆ ವೃದ್ಧ
ವೈಶ್ರವಣ ಕೊಟ್ಟದ್ದು ಖರೆ ನಿಧಿ
ದ್ರವ್ಯ ವೃದ್ಧಿ ಸಹಿತಾಗಿ ಕೊಟ್ಟದ್ದು
ಕೊಡುವುದು ಇದಕೆ ಪದ್ಮಜಾಸನ ಸಾಕ್ಷಿ
ರುದ್ರ ದೇವನ ಸಾಕ್ಷಿ ಸಿದ್ಧಾಗಿ
ನಮ್ಮಿದುರಿಗಿದ್ದಂಥ ಅಶ್ವತ್ಥ
ವೃದ್ಧವೃಕ್ಷವು ಸಾಕ್ಶಿ ಸಿದ್ಧ
ನಿಶ್ಚಯವೂ || ೧ ||

ಪಂಡಿತನು ಹೀಂಗೆ ಧನ ಮಂಡಿತಗೆ
ಬರಕೊಟ್ಟು ಖಂಡ ಮಾಡಿದ್ದು ಇಸಕೊಂಡು
ಪ್ರಸ್ಥಕೆ ಮೂಲ ತಂಡುಲವು ಮೊದಲಾಗಿ
ತಂಡ ತಂಡವು ಎಲ್ಲಕೊಂಡು ತರಿಸಿದ ತಾ
ಉದ್ದಂಡವಾಗಿ |
ಕರೆಸಿ ಬೇಗಗ್ನಿಯನು ಸುರಿಸಿ ಅವನಲಿ ಸ್ನೇಹ
ಸುರಸಾದ ಪಾಕವನು ಸರಸಾಗಿ ಮಾಡೆಂದ
ಸರಸಿಜೋದ್ಭವ ಪಿತನ ಸರಸಾದ ಮಾತಿಗನು-
ಕರಿಸಿ ನುಡಿದನು ಅಗ್ನಿ ಸುರಸಾದ ಪಾಕಕ್ಕೆ
ಸರಸಾದ ಭಾಂಡಗಳು ಸರಸರನೆ
ನೀ ತರಿಸು ಸರಸಿಜಾಕ್ಷ || ೨ ||

ಅನ್ನಕ್ಕೆ ಒಂದು ಪರಮಾನ್ನಕ್ಕೆ ಮತ್ತೊಂದು
ಇನ್ನೊಂದು ಸೂಪಕ್ಕೆ ಮುನ್ನ ಮತ್ತೆಲ್ಲಕ್ಕು
ಇನ್ನು ಬೇಕಾಗಿಹವು ನಿನ್ನಲ್ಲಿ ಒಂದಿಲ್ಲ
ಇನ್-ಹ್ಯಾಂಗೆ ನಾ ಪಾಕವನು ಮಾಡಲಿ ಪೇಳು
ಚನ್ನವಾಗೀ |
ವಹ್ನಿ ವಚನವು ಕೇಳಿ ಮುನ್ನ ಶ್ರೀಹರಿ ನುಡಿದ
ಚನ್ನಿಗನೆ ನಿಮ್ಮಲ್ಲೆ ಘನ್ನ ಕಾರ್ಯವು ಬರಲು
ಅನ್ನಾದಿ ಭಾಂಡಗಳು ಚನ್ನಾಗಿ ಬಹಳುಂಟು
ಎನ್ನ ಕಾರ್ಯಕ್ಕೆ ನಿಮಗಿನ್ನು ಭಾಂಡಗಳಿಲ್ಲ
ಅನ್ಯರಾದವರು ನೀವಿನ್ನೇನು ಮಾಡೀರಿ ಎನ್ನ ದೈವಾ || ೩ ||

ಇಲ್ಲದ ಭಾಂಡ ಇನ್ಯೆಲ್ಲಿ ಬರುವದು ಕಂಠ
ಬಿಗಿದು ಪರರಿಗೆ ಬಾಯ ತೆಗೆದು ಬೇಡುವದೇಕೆ
ಸ್ವಾಮಿ ಪುಷ್ಕರಣಿಯಲ್ಲಿ ನೀ ಮಾಡು ಅನ್ನವನು
ಪಾಪನಾಶಿನಿಯಲ್ಲಿ ಸೂಪವನು ಮಾಡು ||
ಆಕಾಶ ಗಂಗೆಯಲಿ ಪಾಕಪರಮಾನ್ನ ತಿಳಿ
ತುಂಬುರೆಂಬುವ ತೀರ್ಥ ತುಂಬಿರಲಿ ತುಪ್ಪ ತಿಳಿ
ಪಂಡಿತನೆ ಸಾರರಸ ಪಾಂಡು ತೀರ್ಥದಲಿರಲಿ
ಪೂರ ಭಕ್ಷಗಳೆಲ್ಲ ಪೂರೈಸು ಸುಕುಮಾರಧಾರಿಕಾ
ತೀರ್ಥದಲಿ ಉಳಿದ ತೀರ್ಥಗಳಲ್ಲಿ ಉಳಿದದ್ದು ಮಾಡೂ || ೪ ||

ಬುದ್ಧಿವಂತನು ಅಗ್ನಿ ಬುದ್ಧಿ ಪೂರ್ವಕದಿ
ಹೇಳಿದ್ದ ರೀತಿಯು ಸಿದ್ಧ ಮಾಡ್ಯಡಿಗೆಯನು
ಸಿದ್ಧಾಗಿ ತಾ ನುಡಿದ ಪದ್ಮನಾಭನೆ ಪಾಕ
ಸಿದ್ಧವಾಯಿತು ಮುಂದೆ ಉದ್ಯೋಗ ಮಾಡೇಳೊ
ಉದ್ಧವನ ಸಖನೇ |
ಶ್ರೀಲಲಾಮನು ತಾನು ಕೇಳಿ ಈ ಪರಿಯು ಆ
ಕಾಲದಲಿ ಷಣ್ಮುಖಗೆ ಹೇಳಿ ಕರೆಕಳಿಸಿದ
ಸುಶೀಲ ಬ್ರಾಹ್ಮರನೆಲ್ಲ ಆಲಸ್ಯ ಬಿಟ್ಟು
ತತ್ಕಾಲದಲೇ ಭೋಜನದ ಶಾಲೆಯಲಿ
ಬಂದವರು ಸಾಲ್-ಹಿಡಿದು ಕುಳಿತರು
ವಿಶಾಲಾದ ಪಾಂಡುಸರ ಮೂಲ್ಹಿಡಿದು
ಮುಂದೆ ಶ್ರೀಶೈಲ ಪರ್ಯಂತ || ೫ ||

ರಾಗ – ದೇಶಿ, ತಾಳ – ಅಟ

ತಪ್ಪದೆ ತಾ ಶಿವನಪ್ಪಗೆ
ನುಡಿದವನಪ್ಪ ವೇಂಕಟರಾಯನೂ |
ತಪ್ಪದೆ ದೇವರಿಗರ್ಪಣ ಮಾಡು
ನೀ ಒಪ್ಪಾಗಿ ನೈವೇದ್ಯವೂ || ೧ ||

ದೇವನ ಮಾತಿಗೆ ಆ ವೇಳೆಯಲಿ ಬ್ರಹ್ಮದೇವ
ಹೀಂಗೆಂದ ತಾನು |
ಕೇವಲ ನಿನ್-ಹೊರತು ದೇವರೆಂಬುವರಾರು
ದೇವರ ದೇವ ನೀನೂ || ೨ ||

ಕಂದನ ಮಾತಿಗೆ ಅಂದನು ಶ್ರೀಹರಿ
ಮಂದಹಾಸದಿ ನಗುತ
ಛಂದಾಗಿ ಅರ್ಪಿಸು ಇಂದು ಅಹೋಬಲ
ನೆಂದೆನಿಸುವ ದೇವಗೆ || ೩ ||

ಹರಿಯು ಹೇಳಿದ ರೀತಿ ಮರಿಯದೆ ಮಾಡಿ
ಭೂಸುರರಿಗರ್ಚಿಸಿದ ಬ್ರಹ್ಮ |
ತರಿಸಿದ ಬೇಗನೆ ವರ ಪತ್ರಾವಳಿಗಳ
ಕರಸಿ ಆ ಗ್ರಹಗಳನಾ || ೪ ||

ಥಟ್ಟನೆ ಬಂದವರಷ್ಟು
ಪಾತ್ರಗಳನ್ನು ದಿಟ್ಟಾಗಿ ಹಾಕಿದರು |
ಥಟ್ಟಣೆ ಬಡಿಸಿದರಷ್ಟ ದಿಕ್ಪಾಲಕರಷ್ಟೂರು
ಮೊದಲು ಮಾಡಿ || ೫ ||

ಉಪ್ಪು ಮೊದಲು ಮಾಡಿ ತುಪ್ಪವು ಕಡೆಯಾಗಿ
ಒಪ್ಪಾಗಿ ಬಡಿಸಿದರೂ |
ಅಪ್ಪ ವೇಂಕಟರಾಯ ತಪ್ಪದೆ ಬಂದು
ಕೃಷ್ಣಾರ್ಪಣ ಅಂದ ತಾನು || ೬ ||

ಮೇಲ್ಮತ್ತೆ ಭೋಜನಕಾಲಕ್ಕೆ ತಾ
ಬಂದು ಹೇಳಿಕೊಂಡನು ಈಪರಿ |
ಬಹಳ್-ಹೊತ್ತು ಆಯಿತು ಬಳಲಿದಿರೆಲ್ಲರು
ಹುಳಿಯನ್ನ ಬಡವನಲ್ಲೆ || ೭ ||

ಹರಿಯಂದ ಮಾತಿಗೆ ಹರುಷಬಟ್ಟು
ಅಲ್ಲಿರುವಂಥ ಭೂಸುರರೂ |
ವರಮುನಿಗಳು ಮತ್ತು ಪರಮಹಂಸರು
ಎಲ್ಲ ತಿರುಗಿ ಮಾತಾಡಿದರೂ || ೮ ||

ಘನ್ನ ಮಹಿಮ ನಿನ್ನ ಅನ್ನ ಭೋಜನದಿಂದ
ಧನ್ಯರಾದೆವು ನಾವೆಲ್ಲ |
ಚೆನ್ನಾಗಿ ವರ ಮುಕ್ತಿಯನ್ನೆ ತೋರಿಸುವದು
ಅನ್ನಲ್ಲ ಅಮೃತವಿದು || ೯ ||

ಹೀಗೆಂದು ನುಡಿದು ಛಂದಾಗಿ
ಭೋಜನಮಾಡಿ ತೇಗಿ ಕೈ ತೊಳೆದರೆಲ್ಲ |
ಆಗಲ್ಲೆ ತಾಂಬೂಲ ಬೇಗನೆ ಕೊಟ್ಟನು
ಭಾಗೀರಥಿಯ ಪಿತನು || ೧೦ ||

ಚೆನ್ನಾಗಿ ತಾರತಮ್ಯವನ್ನು ಬಿಡದೆ
ಬಹು ಘನ್ನ ದಕ್ಷಿಣೆಗಳನು |
ಮುನ್ನ ಎಲ್ಲರಿಗೆ ಮನ್ನಿಸಿ ಕೊಟ್ಟ
ಸುವರ್ಣ ಮುದ್ರಿಕೆಗಳನೂ || ೧೧ ||

ಕೊಂಡು ಆಶೀರ್ವಾದ ಪುಂಡರೀಕಾಕ್ಷ
ಉದ್ದಂಡ ಸಂತೋಷದಿಂದಾ |
ಹೆಂಡತಿ ಸಹ ತನ್ನ ಹಿಂಡು ಬಳಗ
ಕೂಡಿಕೊಂಡು ಭೋಜನ ಮಾಡಿದಾ || ೧೨ ||

ಅಲ್ಲಿಂದ ಆ ರಾತ್ರಿಯಲ್ಲೆ ತಾ ಮಲಗಿದ
ವಲ್ಲಭೆಯಿಂದ ಕೂಡಿ |
ಬಲ್ಲಿದಾನಂತಾದ್ರಿಯಲ್ಲೆ ಸೌಖ್ಯದಿಂದ
ಎಲ್ಲರು ಮಲಗಿದರೂ || ೧೩ ||

| ವಚನ |

ಭಕ್ತವತ್ಸಲನಲ್ಲಿ ಭಕ್ತಿ ಪರವಶದಿಂದ
ಉಕ್ತವಾದೀ ಕಥೆಯ ಚಿತ್ತಿಟ್ಟು ಕೇಳುವರಿ-
ಗತ್ಯಂತವಾಗಿ ಪುರುಷೊತ್ತಮನ ದಯ ಉಂಟು
ಮತ್ತವರ ಕಾರ್ಯಕ್ಕೆ ಸತ್ಯ ಸಹಕಾರಿಗಳು
ಸುತ್ತೆಲ್ಲ ಜನರೂ |
ಪೃಥ್ವಿ ಯಲ್ಲಿರುವ ಬಹು ಭಕ್ತರನ ಪಾಲಿಸುತ
ಉತ್ತಮಾನಂತಾದ್ರಿ ಸಕ್ತನಾಗಿರುವ
ಸರ್ವೋತ್ತಮನ ದಯವಿರಲು ಮತ್ತಿರುವ ವಿಘ್ನಗಳು
ಹತ್ತದಲೆ ಮುಗಿಯಿತೊಂಭತ್ತು ಅಧ್ಯಾಯ |೧|

ಒಂಭತ್ತನೆಯ ಅಧ್ಯಾಯವು ಸಂಪೂರ್ಣವು |

Adhyaya 10

ಹತ್ತನೆಯ ಅಧ್ಯಾಯ

| ರಮೇಶಾಯ ನಮ: |

ತಾರ್ಕ್ಷ್ಯಸ್ಕಂಧಸಮಾರೂಢಃ ಶ್ರೀಬ್ರಹ್ಮಾದಿಭಿರಾವೃತಃ |
ಶುಕದತ್ತಫಲಾಹಾರಃ ಪಾಯಾತ್ ಪದ್ಮಾವತೀಪ್ರಿಯಃ ||

ರಾಗ – ಶಂಕರಾಭರಣ ತಾಳ – ಅಟ

ಹೊರಟಿತು ನಿಬ್ಬಣ ಈ ಪರಿ ಶ್ರೀಹರಿ
ಕೂಡಿ ಮರುದಿನ ಪರಿ || ಪ ||

ಗರುಡನೇರಿದ ಶ್ರೀನಿವಾಸನು
ರಾಜ ವರ ಹಂಸನೇರಿದ ಬ್ರಹ್ಮನು |
ತ್ವರ ನಂದಿಯೇರಿದ ರುದ್ರನು ಆ ವರ
ನಡು ಮಧ್ಯ ನಡದ ಶ್ರೀಹರಿ ತಾನೂ || ೧ ||

ದೇವಿ ಯೇರಿದಳಾಗ ರಥದಲಿ ಬಕುಲಾ
ದೇವಿ ಏರಿದಳೊಂದು ರಥದಲೀ |
ಕೇವಲ ತಮ್ಮ ತಮ್ಮ ರಥದಲ್ಲಿ ಉಳಿದ
ದೇವಿಯರೇರಿಕೊಂಡರು ಅಲ್ಲೀ || ೨ ||

ಉತ್ತಮ ಮಂಗಳವಾದ್ಯವು
ನೌಬತ್ತು ನಗಾರಿಗಳಾದವು |
ಮತ್ತೆ ಉಳಿದ ಎಲ್ಲ ವಾದ್ಯವು ಬಹು
ಒತ್ತಿ ಶಬ್ದ ಮಾಡಿ ನುಡಿದವು || ೩ ||

ನಡದರು ಋಷಿ ಗಂಧರ್ವರು
ಬಹು ಸಡಗರದಿಂದಲ್ಲೆ ಅಪ್ಸರರು |
ಬಡವ ಬಗ್ಗರು ಉಳಿದ ಮನುಜರು
ಬಹು ಗಡಿಬಿಡಿಯಿಂದಲ್ಲೆ ನಡದರು || ೪ ||

ಕುಂಟರು ಕುರುಡರು ಕಿವುಡರು
ಕಲ್ಲು ಕಂಟಕ ಕಾಲಿಲೆ ತುಳಿವವರೂ |
ಗಂಟು ತಲೆಯಲಿಟ್ಟು ನಡಿವವರು
ತಪ್ಪಗಂಟಾಗಿ ವದರುತಲೀಹೋರೂ || ೫ ||

ಕೆಲವರು ಗಂಡನ ವದರುವರು
ಮತ್ತು ಕೆಲವರು ಹೆಂಡಿರನೊದರುವರೂ |
ಕೆಲವರು ತಂದೆಯನೊದರುವರು ಮತ್ತು
ಕೆಲವರು ಮಕ್ಕಳಾನೊದರುವರೂ || ೬ ||

ಕೆಲವರು ಯೆಡವುತಲಿರುವರು ಮತ್ತು
ಕೆಲವರು ಭರದಿಂದ ಬೀಳುವರೂ |
ಕೆಲವರೇಳೆಂದು ಯೆಬ್ಬಿಸುವರು ಮತ್ತು
ಕೆಲವರು ನೋಡುತ ನಗುವರೂ || ೭ ||

ಬಾಲರಳುವ ಧ್ವನಿ ಆಯಿತು ಜಗತ್
ಪಾಲಕನ ಸೈನ್ಯ ನಡೆಯಿತೂ |
ಮೇಲಾದನಂತಾದ್ರಿ ಇಳಿಯಿತು ಭೂ
ಪಾಲನ ಪುರದ್-ಹಾದಿ ಹಿಡಿಯಿತು || ೮ ||

| ವಚನ |

ಶೈಲವನು ಹಿಡಿದು ಭೂಪಾಲನ ಪುರತನಕ
ಸಾಲ್-ಹಿಡಿದು ನಡೆವಂಥ ಕಾಲದಲಿ
ಮತ್ತಲ್ಲಿಡುವದಕೆ ಎಳ್ಳು ಕಾಳಷ್ಟು ಸ್ಥಳವಿಲ್ಲ
ಶ್ರೀಲಲಾಮನು ಮಧ್ಯ ಸಾಲಿನ ಮಧ್ಯಾಹ್ನ
ಕಾಲದಲಿ ಶುಕಮುನಿಯ ಆಲಯಕೆ ಬಂದಾ |
ಕಾಲಿಗೆರಗಿದನು ಆ ಕಾಲಕ್ಕೆ ಮುನಿ ಬಂದು
ಹೇಳಿಕೊಂಡೀ ಪರಿಯು ಶೈಲದೊಡೆಯನೆ ಎನ್ನ
ಆಲಯಕೆ ನೀ ಬಂದ ಮೇಲೆ ಭೋಜನವು ಈ
ಕಾಲದಲಿ ಮಾಡಿ ಆಮೇಲೆ ಪೋಗುವದು
ಎನ್ನ ಮೇಲೆ ಕರುಣೆಯಿಂದಾ || ೧ ||

ಹೀಗೆಂದು ನುಡಿದ ಶುಕಯೊಗಿ ವಚನವು ಕೇಳಿ
ಬಾಗಿ ತಾ ನಮಿಸುತಲೆ ಆಗ ಶ್ರೀಹರಿ ನುಡಿದಾ
ಯೋಗಿಗಳು ನೀವು ಸುವಿರಾಗಿಗಳು ಸಂಸಾರ
ನೀಗಿದಂಥವರು ಬೇಕಾಗಿ ನಾ ಸಂಸಾರಿ
ಆಗಿ ಇರುವೆ |
ಇಲ್ಲೆ ಉಂಡರೆ ಮಿತಿಯು ಇಲ್ಲದಲೆ ಜನವು
ನಮ್ಮಲ್ಲೆ ಇರುವದು ಬಹಳ ಎಲ್ಲೆ ನಿಲ್ಲದಲೆ
ನಾವೆಲ್ಲರು ಭೋಜನಕೆ ಎಲ್ಲಿದ್ದರೀ ಹೊತ್ತು
ಅಲ್ಲೆ ಆ ರಾಜ ಪುರದಲ್ಲೆ ಪೋಗುವದು || ೨ ||

ತಂಡತಂಡದ ಮಾತು ಪಂಡಿತರಾಗಿರುವ ಮುನಿ-
ಮಂಡಲೇಶನು ಕೇಳಿಕೊಂಡು ಹೀಗೆಂದ
ಬ್ರಹ್ಮಾಂಡಪತಿ ನೀ ಒಬ್ಬ ಉಂಡರೆ ಜಗವೆಲ್ಲ
ಉಂಡಂತೆ ಆಗುವುದು ಪುಂಡರೀಕಾಕ್ಷಾ |
ಬಹಳ ಪರಿಯಿಂದಲ್ಲೆ ಹೇಳಿಕೊಂಡಿಹ ಮಾತು
ಕೇಳುತಲೆ ಮುಂದೆ ಆ ಕಾಲದಲಿ ತ್ವರ
ಜಗತ್ಪಾಲ ಯೆನಿಸುವ ತನ್ನ ಬಾಲಕನ ಮುಖ
ನೋಡಿ ಬಾಲೆ ನುಡಿದಳು ಬಕುಲಮಾಲಿಕೆಯು ತಾನೂ || ೩ ||

ರಾಗ: ವಸಂತಭೈರವಿ, ತಾಳ – ಆದಿ

ಇದು ಯೇನು ನಡದೆ ತರವೇ, ತರವೆ
ಹರಿಯೆ ಈ ಪರಿಯ ಮಾಡುವದು || ಪ ||

ಸುಖಕರವಾಗಿಹ ಶುಕಮುನಿ ವಚನವು
ಲೆಕ್ಕಿಸದೆ ಶುಭ ಕಾರ್ಯಕ್ಕೆ ಪೋಗುವದೂ || ೧ ||

ಬಲ್ಲಿದ ಶಕುನವು ಇಲ್ಲೆ ನಿನಗೆ ತಿಳಿ
ನಿಲ್ಲದೆ ಊಟಕೆ ಒಲ್ಲೆನೆಂಬುವದೂ || ೨ ||

ಶ್ರೀಶ ಅನಂತಾದ್ರೀಶ ಮಹಾತ್ಮರ
ಭಾಷೆಯ ಕೇವಲುದಾಸೀನ ಮಾಳ್ಪುದು || ೩ ||

| ವಚನ |

ಹೆತ್ತ ತಾಯಿ ಈ ಪರಿಯಾಗಿ ಹೊತ್ತು ಹೊತ್ತಿಗೆ ತನಗೆ
ಅತ್ಯಂತ ಹಿತ ಮಾಡುತಿರ್ದ ಬಕುಲಾವತಿಯ
ಸತ್ಯ ವಚನವ ಹರಿಯು ಚಿತ್ತಿಟ್ಟು ಕೇಳುತಲೆ
ಉತ್ತಮಾಯಿತು ಅಂದ ಮತ್ತೆ ಶುಕಮುನಿಗೇ |
ಉತ್ತರವ ಕೇಳಿ ಮುನಿ ಉತ್ತರಣೆಯ ಬೀಜ
ವತ್ತಿ ಕೈಯಲಿ ವರಿಸಿ ಮತ್ತದರ ತಂಡುಲದಿ
ಉತ್ತಮಾನ್ನವ ಮಾಡಿ ವೃತ್ತಾದ ಗುಳ್ಳಫಲ-
ದುತ್ತಮೋತ್ತಮ ಶಾಕ ತಿಂತ್ರಿಣಿಯ ರಸ ಸಹಿತ
ಪಾತ್ರದಲಿ ಬಡಿಸಿ ಸತ್ಪಾತ್ರ ನಾಗಿರುವ
ಸರ್ವೋತ್ತಮಗೆ ಅರ್ಪಿಸಿದ ಭಕ್ತಿಯಿಂದಾ || ೧ ||

ತೃಪ್ತನಾದನು ನಿತ್ಯ ತೃಪ್ತ ಹರಿ ತಾ ಉಂಡು
ಮತ್ತೆ ಮುನಿಗಳು ಎದ್ದರತ್ಯಂತ ಕೋಪದಲಿ
ಚಿತ್ತಜನ ಪಿತ ಅವರ ಚಿತ್ತ ವೃತ್ತಿಯ ತಿಳಿದು
ಸತ್ಯದಲಿ ಎಲ್ಲರಿಗೆ ತೃಪ್ತಯಾಗಲಿ ಯೆಂದು
ಫೂತ್ಕಾರ ಮಾಡಿದನು ತತ್ಕಾಲದಲ್ಲೀ ||
ಉತ್ತಮಳು ಶ್ರೀರಮಾ ಮತ್ತೆ ಬ್ರಹ್ಮಾದಿಗಳು
ಸುತ್ತ ಸನಕಾದಿಗಳು ಮತ್ತೆ ಶುಕ ಮೊದಲಾದ
ಸತ್ವಶೀಲರು ಉಳಿದ ಸುತ್ತೆಲ್ಲ ಜನರು
ಸಂತೃಪ್ತರಾದರು ಹರಿಯ ಫೂತ್ಕಾರದಿಂದ || ೨ ||

ನಿದ್ರೆಯನು ಮಾಡಿ ಅಲ್ಲಿದ್ದು ಆ ರಾತ್ರಿಯಲಿ
ಎದ್ದು ಮರುದಿನಕೆ ಸನ್ನದ್ಧರಾದರು ಎಲ್ಲ
ಪದ್ಮನಾಭನ ಕೂಡಿ ವಾದ್ಯ ವೈಭವದಿಂದ
ಸಿದ್ಧಾಗ್ಗಿ ಬಂದರು ವಿಯದ್ರಾಜನಪುರಕೆ
ಶುಧ ಸಂಜೆಯಲೀ |
ಮುದ್ದು ವೇಂಕಟ ಬಂದ ಸುದ್ದಿಯನು ಕೇಳುತ
ವಿಯದ್ರಾಜ ತಾ ಬಹಳ ಉದ್ರೇಕದಿಂದಲ್ಲೆ
ಇದ್ದ ಜನರನ ಕೂಡಿ ಯೆದ್ದು ಯೆದುರಿಗೆ ಬಂದ
ವಾದ್ಯ ವೈಭವದಿಂದ ಸಿದ್ಧನಾಗೀ ||೩||

ರಾಗ – ಕಾಂಭೋದಿ, ತಾಳ – ಆದಿ

ಆ ಕಾಲದಲಿ ಕಂಡಾನು ಹರಿಯ ಮುಖ
ಆ ಕಾಲದಲಿ ಕಂಡಾನು,
ಎಲ್ಲರ ಕೂಡ ಆಕಾಶರಾಜ ತಾನು || ೧ ||

ಹರುಷದಿಂದಲಿ ಉಬ್ಬಿದ ಹರಿಯ ಕಂಡು
ಹರುಷದಿಂದಲಿ ಉಬ್ಬಿದ ||
ಎದುರುಗೊಂಡು ವರಪೂಜೆಯನು ಮಾಡಿದ || ೨ ||

ಆಳಿಯಗಾಭರಣವನು ವಸ್ತ್ರವ ಕೊಟ್ಟು
ಅಳಿಯಗಾಭರಣವನು |
ಉತ್ಸವದಿಂದ ಕಳಿಸಿ ಮನೆಗೆ ಪೋದನು || ೩ ||

ಶ್ರೀನಾಥದೇವ ತಾನು ಆ ಕಾಲಕ್ಕೆ
ಶ್ರೀನಾಥದೇವ ತಾನು |
ಕರದು ತೋಂಡಮಾನರಾಜಗೆ ನುಡಿದನು || ೪ ||

ಹಸಿದು ಬಂದೆವು ನಾವೆಲ್ಲ ಉಣ್ಣದೆ
ಬಹಳ ಹಸಿದು ಬಂದೆವು ನಾವೆಲ್ಲ |
ಬೇಗನೆ ಪಾಕ ಹಸನಾಗಿ ಮಾಡಿಸೆಲ್ಲ || ೫ ||

ಅಕ್ಕರದಿ ರಾಜನು ಆ ನುಡಿ ಕೇಳಿ
ಅಕ್ಕರದಲಿ ರಾಜನು |
ಮಾಡಿಸಿದನು ರುಕ್ಕೋತದಡಿಗೆಯನು || ೬ ||

ಮಂಡಿಗೆ ಗುಳ್ಳೋರಿಗೆ ಶಾವಿಗೆ
ಮೊದಲು ಮಂಡಿಗೆ ಗುಳ್ಳೋರಿಗೆ |
ಮಾಡಿಸಿ ಎಲ್ಲ ತೋಂಡಮಾನನು ಚಂದಾಗಿ || ೭ ||

ಹರಿಗೆ ಅರ್ಪಣೆಮಾಡಿದ ದಿವ್ಯಾನ್ನವನು
ಹರಿಗೆ ಅರ್ಪಣೆಮಾಡಿದ |
ಎಲ್ಲರ ಕೂಡಿ ಹರಿಯು ಭೋಜನ ಮಾಡಿದ || ೮ ||

ಆನಂದದಿಂದಿದ್ದನು ಆ ರಾತ್ರಿಯೊಳ್
ಅನಂದದಿಂದ್ದಿದ್ದಾನು |
ಮಾಡಿದ ನಿದ್ರೆ ಅನಂತಾದ್ರೀಶ ತಾನು || ೯ ||

| ವಚನ |

ಶ್ರೀನಿವಾಸನು ಎದ್ದು ತಾನು ಮರುದಿನದಲ್ಲಿ
ಮಾನಿತ ವಸಿಷ್ಠ ಮುನಿ ನೀನು ಕೇಳೆಂದ
ಬಹುಮಾನದಲಿ ಈ ಹೊತ್ತು ನಾನು ಲಕ್ಷ್ಮಿಯ ಸಹಿತ
ನೀನು ಬ್ರಹ್ಮನು ಮತ್ತೆ ಮಾನಿತಳು ಎನ ತಾಯಿ
ತಾನು ಐವರು ಅನ್ನ ಹೀನರಾಗಿರುವುದು
ಖೂನದಲಿ ಕನ್ನಿಕೆಯ ದಾನಪರ್ಯಂತಾ |
ಮಾನಿತನು ಆ ರಾಜ ಮಾನಿನಿಯು ಮತ್ತವನ
ಮೀನಾಕ್ಷಿ ಕನ್ನಿಕೆಯು ಜ್ಞಾನಿ ಗುರು ಮತ್ತೆ
ವಸುದಾನರಾಜನು ಅನ್ನ ಹೀನರೈವರು ಅವರು
ಖೂನದಲಿ ಕನ್ನಿಕೆಯ ದಾನ ಪರ್ಯಂತ || ೧ ||

ಮೇಲೆ ಉಳಿದವರೆಲ್ಲ ವೇಳೆಗುಂಬುವರೆಂದು
ಪೇಳು ಅರಸಗೆ ಯೆಂದು ಹೇಳಿ ಕಳಿಸಿದನಾಗ
ಹೇಳಿದನು ಮುನಿ ಹರಿಯು ಹೇಳಿದಂತಲೆ ಭೂಮಿ-
ಪಾಲ ಮಾಡಿದನು ಮುನಿ ಹೇಳಿದಂಟೆ |
ಮೇಲೆ ಮುನ್ನ ಸಾಯಾಹ್ನ ಕಾಲದಲಿ ಚತುರಂಗ
ಸಾಲಸೈನ್ಯವ ನಡಿಸಿ ಕಾಳಿಕರ್ಣಿಯು ತೂರ್ಯ
ತಾಳ ಮದ್ದಲೆ ಮೊದಲು ಭಾಳ ವಾದ್ಯಗಳಿಂದ
ಮೇಲಾದ ಗುರು ಮುಂದೆ ಮೇಲೆ ತನ್ನವರಿಂದ
ಕಾಲ ನಡಿಗಿಲೆ ಹರಿಯ ಆಲಯಕೆ ಬಂದಾ || ೨ ||

ಆ ವೇಳ್ಯದಲಿ ಧರಣಿ ದೇವಿ ತಾ ಲಜ್ಜೆಯಲಿ
ದೇವ ಗುರು ಬೃಹಸ್ಪತಿಯ ಕೇವಲಾಜ್ಞದಿ ದೇವ
ದೇವ ಯೆನಿಸುವ ಅಳಿಯ ದೇವಗರ್ಚಿಸಿ ಶುದ್ಧ-
ಭಾವದಲಿ ಅರ್ಪಿಸುತ ಶ್ಯಾವಿಗೆಯ ಪರಮಾನ್ನ
ಕೇವಲಾನಂದ ಸದ್ಭಾವ ವಹಿಸಿದಳೂ |
ಆ ವಿಯದ್ರಾಜ ಮುಂದಾ ವೇಳೆಯಲ್ಲಿ
ಐರಾವತಾನೆಯ ಮೇಲೆ ದೇವನಾ ಕುಳ್ಳಿರಿಸಿ
ದೇವ ಋಷಿ ಮೊದಲಾದ ಯಾವತ್ತರಿಂದ ನರ-
ದೇವ ಬಂದನು ಮನೆಗೆ ತೀವ್ರದಿಂದ || ೩ ||

ಬಹಳ ಉತ್ಸವದಿಂದ ಬಾಗಲಿಗೆ ಬರಲು ಆ
ಕಾಲದಲಿ ತೋಂಡ ಭೂಪಾಲನಾ ಸತಿ ಜಗತ್
ಪಾಲಕನ ಮೇಲೆ ನಿವಾಳಿಸುತ ಚೆಲ್ಲಿದಳು
ಶೈಲದೊಡೆಯನು ಗಜದ ಮೇಲಿಂದ ಇಳಿದು ಆ
ಮೇಲೆ ತಾ ಬಂದ ಸುವಿಶಾಲ ಮಂಟಪಕೇ |
ಮೇಲಾದ ಗದ್ದಿಗೆಯ ಮೇಲೆ ವರ ವೇಂಕಟನು
ಕಾಲಿಟ್ಟು ಕುಳಿತನಾ ಮೇಲೆ ಬ್ರಹ್ಮಾದಿಗಳು
ಗಾಲವ ವಸಿಷ್ಠ ಮುನಿ ವಾಲ್ಮೀಕ ಭೃಗು ಜಟಾ
ಜಾಲ ಸಂಪನ್ನ ಶುಕ ದಾಲ್ಭ್ಯ ಮೊದಲಾದವರು
ಸಾಲ್-ಹಿಡಿದು ಕುಳಿತರಾ ಕಾಲಕೆ ಯೆಲ್ಲ || ೪ ||

ವದಗಿ ಬೇಗನೆ ವಿಷ್ಣುಪದರಾಜ ಆ ವಿಷ್ಣು
ಪದಯುಗ್ಮ ಸಂಕಲ್ಪ ವಿಧಿಯಿಂದ ತೊಳೆದು ಆ
ಉದಕ ಶಿರದಲಿ ವಹಿಸಿ ಮುದದಿಂದ ಮಾಡಿದನು
ಮಧುಸೂದನನ ಪೂಜೆ ಮಧು ಪರ್ಕದಿಂದ |
ಬುಧ ಜನರು ಪೇಳಿದಾಜ್ಞೆಯಲಿ ಗೃಹದೇವತಾ
ಸದನದಲ್ಲಿ ಹರಿಯ ಧ್ಯಾನದಲಿ ಇರುತಿರುವ ಆ
ವಧುವಿನ ಕರತಂದು ಮದನ ಮೋಹನನ
ಸನ್ನಿಧಿಗೆ ಸಮ್ಮುಖವಾಗಿ ಮುದದಿ ಇರಿಸಿದನಾಗ
ಬದಿಲಿದ್ದ ಬೃಹಸ್ಪತಿಯು ಒದಗಿ ವಧುವರಗಳಿಗೆ
ವಿಹಿತಾದಂತ:ಪಟವ ಮುದದಿ ಮಧ್ಯದಲ್-ಹಿಡಿದು
ವದರಿದನು ಈ ಪರಿಯು ಮದುವೆಯ ಕಾಲಕ್ಕೆ
ಮಧುರೋಕ್ತಿಯಿಂದಾ || ೫ ||

ರಾಗ – ಸೌರಾಷ್ಟ್ರ, ತಾಳ – ಅಟ

ಸಾವಧಾನಾಗಿರಿನ್ನು ಸುಮೂಹೂರ್ತ ಕಾಲಕೆ ಸಾವಧಾನಾ |
ದೇವಾಧೀಶನ ಲಗ್ನ ದಿವ್ಯ ವೇಳೆಯಲ್ಲಿ ಸಾವಧಾನಾ || ಪ ||

ಪದ್ಮನಾಭನೆ ನೀನು ಸಿದ್ಧಾಗಿ ಇರು ಕಂಡ್ಯ ಸಾವಧಾನಾ |
ಪದ್ಮಾವತಿಯೆ ನೀನು ಪದ್ಮನಾಭನ ಸ್ಮರಿಸು ಸಾವಧಾನಾ || ೧ ||

ಫಲಕಾಲದಲಿ ಚಂಚಲರಾಗದಲೆ ನೀವು ಸಾವಧಾನಾ |
ಕುಲದೇವಿ ಸ್ಮರಣೆ ನಿರ್ಮಲವಾಗಿ ಮಾಡಿರಿ ಸಾವಧಾನಾ || ೨ ||

ಶ್ರೆಷ್ಠಾದ ಅತ್ರಿ ವಸಿಷ್ಠ ಮುನಿಗಳೆಲ್ಲ ಸಾವಧಾನಾ |
ಸ್ಪಷ್ಟಾಗಿ ಶ್ರೀ ಮಂಗಳಾಷ್ಟಕ ಪಠಿಸಿರಿ ಸಾವಧಾನಾ || ೩ ||

ಮಂಗಳ ಮೂರ್ತಿಯ ಮನದಲ್ಲಿ ಸ್ಮರಿಸಿರಿ ಸಾವಧಾನಾ |
ಗಂಗಾದಿ ಸಕಲ ತೀರ್ಥಂಗಳ ಸ್ಮರಿಸಿರಿ ಸಾವಧಾನಾ || ೪ ||

ತಕ್ಕಾನಂತಾದ್ರಿಯೊಳು ಮುಖ್ಯಾಗಿರುವನಿಗೆ ಸಾವಧಾನಾ |
ಅಕ್ಕರದಿಂದಲ್ಲೆ ಅಕ್ಕಿಕಾಳ್-ಹಾಕಿರಿ ಸಾವಧಾನಾ || ೫ ||

| ವಚನ |

ನುಡಿ ಕೇಳಿ ಬೃಹಸ್ಪತಿಯ ನುಡಿದರಾ ದ್ವಿಜರೆಲ್ಲ
ದೃಢ ಮಂಗಳಾಷ್ಟಕವ ನುಡಿನುಡಿಗೆ
ಸುಮುಹೂರ್ತ ನುಡಿಗಳನು ನುಡಿವುತಲೆ
ತಡವಿಲ್ಲದಲೆ ಪೂರ್ಣಘಳಿಗೆ ತುಂಬಲು ಆಗ
ಹಿಡಿ ಮುತ್ತಿನಾಕ್ಷತೆಯ ಹಿಡಿದು ಕರಕಮಲದಲೆ
ಬಿಡದೆ ವಧುವರಗಳಿಗೆ ಗಡಗಡನೆ ಹಾಕಿದರು
ಗಡಿಬಿಡಿಯ ಮಾಡೀ |
ನುಡಿದವಾ ಕಾಲದಲಿ ಕಡು ಸುರರ ಭೇರಿಗಳು
ಬಿಡದೆ ನುಡಿದವು ಮತ್ತೆ ಬಿಡಿವಾದ್ಯಗಳು ಎಲ್ಲ
ತಡ ಮಾಡದಲೆ ಸುರರು ದೃಢವಾಗಿ
ಸಂಭ್ರಮ-ಬಡುತ ಜಯಜಯ ಶಬ್ದ ನುಡಿದು
ಪುಷ್ಪದ ವೃಷ್ಟಿ ಬಿಡದೆ ಮಾಡಿದರೂ || ೧ ||

ಬಲ್ಲಿದಾ ಸುಮುಹೂರ್ತದಲ್ಲೆ ಪದ್ಮಾವತಿಯ
ಚಲ್ವ ಹಸ್ತದಲ್ಲಿದ್ದ ಬೆಲ್ಲ ಜೀರಿಗೆ ಸಹಿತ
ಬಲ್ಲಿದಾಕ್ಷತೆಯು ಶ್ರೀವಲ್ಲಭನ ಮಧ್ಯ
ಶಿರದಲ್ಲಿ ಹಾಕಿಸಿದ ತಡವಿಲ್ಲದಲೆ ರಾಜಾ ||
ಸರಸರನೆ ಆಮೇಲೆ ಸರಸಿಜಾಕ್ಷಿಯ ಮಧ್ಯ
ಶಿರದಲ್ಲಿ ಬೇಕಾದ ವರಗಳನು ಕೊಡುವಂಥ
ಕರಗಳನು ಮೇಲೆತ್ತಿ ವರಜೀರಗುಡಯುಕ್ತ
ಪರಮಾಕ್ಷತೆಗಳನು ಹರಿಯು ಹಾಕಿದನು
ತಾನು ಹರುಷದಿಂದಾ || ೨ ||

ಮತ್ತಾಗ ಗುರು ವಿಯತ್ ಪುತ್ರಿಯಳ ಜಲಸಹಿತ
ಹಸ್ತ ಯುಗ್ಮವು ಹರಿಯ ಹಸ್ತದಲ್ಲಿರಿಸಿ ತಾ
ಒತ್ತಿ ನುಡಿದೀ ಪರಿಯು ಅತ್ರಿ ಋಷಿ ಗೋತ್ರದಲಿ
ಉತ್ಪನ್ನಳೆನಿಸುತ ಸುಗಾತ್ರಿಯು ಸುಶರ್ಮಗೆ
ಪ್ರಪೌತ್ರಿ ಯೆಂದೆನಿಸುವಳು ಉತ್ತಮ ಸುಧರ್ಮ
ನೃಪ ಪೌತ್ರಿ ಯೆಂದೆನಿಸುವಳು ಮತ್ತೆ
ಆಕಾಶನೃಪ ಪುತ್ರಿ ಪದ್ಮಾವತಿಯು
ಸತ್ಯ ನಾಮದಲಿ ಅತ್ಯುತ್ತಮಳು ಕನ್ಯಾ |
ಪಾತ್ರಭೂತನೆ ದಯಾಮಾತ್ರದಲೆ ಸ್ವೀಕರಿಸು
ಸೂತ್ರ ವಿಧಿಯೆಂಬ ಉತ್ತರಕೆ ನುಡಿದ
ಪ್ರತ್ಯುತ್ತರ ವಸಿಷ್ಠಮುನಿ ಗೋತ್ರ ವರ
ವಾಸಿಷ್ಠ ಗೋತ್ರದಲಿ ಉತ್ಪನ್ನ ಉತ್ತಮ
ಯಯಾತಿಯ ಪ್ರಪೌತ್ರ ಯೆನಿಸುವ ಶೂರ ಪೌತ್ರೆನಿಪ
ವಸುದೇವ ಪುತ್ರ ವೇಂಕಟಪತಿಯು ಸತ್ಯ ನಾಮದಲಿ ಸರ್ವೋತ್ತಮನು ವರನೂ || ೩ ||

ನೀತಿಯಲಿ ಕನ್ನಿಕೆಯ ಈತಗಂಗೀಕರಿಸಿ
ಪ್ರೀತರಾದೆವೆನಲು ಆತ ಆಕಾಶನೃಪ
ಪ್ರೀತನಾದನು ಕೊಟ್ಟು ಪ್ರೀತಿಯಿಂದಲೆ ರಮಾ –
ನಾಥಗಾ ಕಾಲದಲಿ ನೀತ ಕೊಡ ತಕ್ಕದ್ದು
ನಾಥ ಕೊಟ್ಟನು ಮತ್ತೆ ಪ್ರೀತನಾಗೆಂದು ||
ನೀಟಾಗಿ ದಕ್ಷಿಣೆಯು ಕೋಟಿ ನಿಷ್ಕವು ಕಪಟ
ನಾಟಕಗೆ ತಾ ಕೊಟ್ಟ ನೀಟ ಶತಭಾರದ
ಕಿರೀಟ ಕೊಟ್ಟನು ಸ್ನೇಹ ಕೂಟದಲಿ ಕೊಟ್ಟ ಬಹು
ಮಾಟ ಭುಜಭೂಷ ಮೈಮಾಟ ಉಳ್ಳವಗೇ || ೪ ||

ವಂಟ್ಯೊಂಟಿ ಮುತ್ತುಗಳು ಉಂಟು ನೈಬದಪರಿಯು
ಉಂಟಾದ ಜೋಡೆರಡು ವಂಟಿ ಮುತ್ತನು ಕೊಟ್ಟ
ಕಂಠದಲಿ ಶೋಭಿಸುವ ಕಂಠಭೂಷಣ
ಕೊಟ್ಟ ಕಂಠಿಯನು ಕೊಟ್ಟ ವೈಕುಂಠಪತಿಗೆ |
ವೆಂಕಟೇಶಗೆ ಕೊತ್ತ ಟೊಂಕಕುಡುದಾರ
ವಜ್ರಾಂಕ ಬೆಲೆಯಿಲ್ಲದಕೆ ಕಿಂಕರಾಭಯ ಹಸ್ತ
ಪಂಕಜ ದ್ವಂದ್ವಕೆ ಅಲಂಕಾರವಾಗಿರುವ
ಕಂಕಣವ ಕೊಟ್ಟ ಅಕಳಂಕಮೂರುತಿಗೇ || ೫ ||

ಕಂತುಪಿತ ತಾನು ತನ ಕಾಂತೆಯೆನಿಸುವಳಿಗೆ
ಅನಂತ ಸೌಭಾಗ್ಯ ಕೊಡುವಂಥ ಮಂಗಳಸೂತ್ರ
ಕಾಂತ ಕಟ್ಟಿದ ಕೊರಳ ಪ್ರಾಂತದಲಿ ಮಾಂಗಲ್ಯ-
ತಂತುನೇತ್ಯಾದಿ ಸನ್ಮಂತ್ರದಿಂದಾ ||
ಶಿಷ್ಟರೆಂಬುವರಾಗ ಶ್ರೇಷ್ಠ ವಧು
ವರರ್ಗಳಿಗೆ ಕಟ್ಟಿದರು ಕಂಕಣವ ಬೆಟ್ಟದಾಧಿಪ ತಾ
ವಸಿಷ್ಠನಾಜ್ಞವ ಕೊಂಡು ಪಟ್ಟದರಸಿಯ ಕೂಡಿ
ಶ್ರೇಷ್ಠ ಲಾಜಾಹೋಮ ಥಟ್ಟನೆ ಮಾಡಿ ಸಂತುಷ್ಟನಾದ || ೬ ||

ಆ ಮೇಲೆ ಭೋಜನಕೆ ಆ ಮಹಾತ್ಮನು ನಡೆದ
ಪ್ರೇಮದಲಿ ವಧುಸಹಿತ ಶ್ರೀಮಹಾಲಕ್ಷ್ಮೀ ಆ
ಭೂಮ ಕೊಪ್ಪುವರೆಲ್ಲ ನೇಮದಲಿ ಕುಳಿತರಾ
ಭೂಮದಲಿ ಸಾಲ್ಹಿಡಿದು ಪ್ರೇಮದಿಂದಾ |
ರೂಪವಂತೆಯರು ಅಪರೂಪ ಪಕ್ವಾನ್ನಗಳು
ಆ ಪಕ್ವ ಬಹುವಿಧಾಪೂಪ ಶಾಕಾದಿಗಳು
ಸೂಪ ಬಡಿಸಿದರೆಲ್ಲ ಶ್ರೀಪತಿಯು ತಾ
ತುಪ್ಪದಾಪೋಶನವ ಕೊಂಡ ಆ ಪತ್ನಿ
ಕರದಿಂದ ಆ ಪರಮಪುರುಷನಿಂದಾ
ಪಂಕ್ತಿ ಸಾಗುತಿರೆ ರೂಪವಂತೆಯರು ಸಲ್ಲಾಪ
ನುಡಿ ನುಡಿದರಾಲಾಪದಿಂದಾ || ೭ ||

ರಾಗ: ಪೂರ್ವಿ, ತಾಳ- ಆದಿ

ಊಟಕೆ ಬಂದರು ನೋಡಿರಿ ಬೀಗರು ಇವರೆಲ್ಲಾರು |
ಊಟಕೆ ಬಂದರು ನೋಡಿರಿ ಬೀಗರು || ಪ ||

ಊಟಕೆ ಬಂದರು ಬೀಗರು ಆ –
ರ್ಭಟದಿ ಒಡಲೊಳಗ್-ಹಾಕುವರೂ |
ನೀಟದಿ ಅರಸರು ಉಂಬುವ ಅನ್ನದ
ಊಟದ ರುಚಿಯನು ಅರಿಯಾರೂ || ಅ ಪ ||

ಎಷ್ಟು ಹಾಕಿದರುಂಬುವರು ಜಗ
ಜಟ್ಟಿ ಅಗ್ನಿ ಮೊದಲಾದವರು |
ಹೊಟ್ಟೆಯ ಪರಿಮಿತಿ ಇಲ್ಲದೆ ಇರುವರು
ಹೊಟ್ಟೆ ಬಾಕರೆಂದೆನಿಸುವರೂ || ೧ ||

ಒಬ್ಬರು ನಾಲ್ಕು ಮುಖದಿಂದುಂಬುವರು
ಒಬ್ಬರು ಐದು ಮುಖದಿಂದುಂಬುವರು |
ಒಬ್ಬರು ಆರು ಮುಖದಿಂದುಂಬುವರು
ಅಬ್ಬರ ನೋಡಿರಿ ಬೀಗರದು || ೨ ||

ಇಣಿ ಮೂಗಿನವನು ಒಬ್ಬ
ಇಳಿ ಮೂಗಿನವನು ಒಬ್ಬ
ಇಳೆಯೊಳಗಿಂಥವರಿಲ್ಲ ಎಲ್ಲಿಂ
ದಿಳಿದು ಬಂದರು ಇಂದಿವರೂ || ೩ ||

ಕೊಬ್ಬಿಲೆ ಬಂದವರೆಲ್ಲಾರು
ಹೆಬ್ಬುಲಿಯಂತಲೆ ಇರುತಿಹರು |
ಉಬ್ಬಿಲೆ ಊಟಾ ಉಂಬುವರಿಲ್ಲೆ
ಹಬ್ಬದ ಶೆಡ ತೆಗೆಯುವರೂ || ೪ ||

ಎಂಥಾ ಬೀಗರು ಬಂದವರು
ಹಂತಕ ತನದಲಿರುತಿಹರು |
ಅಂತಹತ್ತ ಗುಡದಲೆ ಇರುತಿರುವಾ-
ನಂತಾದ್ರೀಶನ ಬಾಂಧವರು || ೫ ||

ರಾಗ: ಪೂರ್ವಿ, ತಾಳ – ಆದಿ

ಊಟಕೆ ಬಂದವರಲ್ಲಾ | ಬೀಗರು ನಾವೆಲ್ಲರು |
ಊಟಕೆ ಬಂದವರಲ್ಲಾ || ಪ ||

ಚಾಟಕ ತನದಿ ರಾಜಕುಮಾರಿಯ |
ಬೇಟಕೆ ಮೆಚ್ಚಿದಾತನ ಮದುವೆ |
ನೋಟಕೆ ಬಂದೆವೆಲ್ಲಾ ಹೊರತೂ || ಅ ಪ ||

ಸುರವರ ಲೋಕದಲಿರುವವರು
ಸರಸದಿ ಅಮೃತವ ಸುರಿವವರು |
ಹರಿಯಾ ಭಿಡೆಯಕೆ ನಿರುವಾಹ ಇಲ್ಲದೆ
ನರರಾ ಪಂಕ್ತಿಲೆ ಕುಳಿತವರೂ || ೧ ||

ಉಬ್ಬಿಲೆ ನಿತ್ಯದಲಿರುತಿಹರು
ಒಬ್ಬರಲ್ಲ ಬಹಳಾದವರು |
ಹಬ್ಬ ನಿತ್ಯ ದಾವಾತಗೆ ಆತನ
ಗರ್ಭ ವಾಸದಲ್ಲಿರುತಿಹರೂ || ೨ ||

ಸಂತತ ನಿಸ್ಪೃಹರಾಗಿಹರು
ಹರಿಯಂತಲೆ ಅನುಸರಿಸಿರುವವರು |
ಹಂತಕರಲ್ಲಾನಂತಾದ್ರೀಶನ
ಚಿಂತಕರೇ ಸರಿ ಎಲ್ಲಾವರು || ೩ ||

| ವಚನ |

ನೀಟಾದ ಈ ವಿನೋದಾಟ ನುಡಿ ಕೇಳಿ ಕಡಿ
ನೋಟ ನೋಡುತ ರತ್ನ ಪೀಠಸ್ಥ ಆ ಕಪಟ-
ನಾಟಕನು ತಾ ನಗುತ ನೀಟಾಗಿ ಭೂಮದಲಿ
ಊಟ ಮಾಡಿದ ಮೇಲೆ ಉರುಟಣೆಗೆ ನಡೆದಾ |
ಬಂದು ಕುಳಿತನು ಬಹಳ ಛಂದದಾಸನದಲ್ಲಿ
ಇಂದುಮುಖಿಯಳ ಕೂಡಿ ಬಂದರೆಲ್ಲರು
ಗೋವಿಂದನುರುಟಣೆ ನೋಡೇವೆಂದು ಆಕಾಶದಲಿ
ಮುಂದೆ ಪದ್ಮಾವತಿಯು ಇಂದಿರಾದೇವಿ
ಕೈಯಿಂದ ಅರಸಿನ ಕೊಂದು ಅಂದಳೀಪರಿ ಆಕೆ
ಅಂದ್-ಹಾಂಗೆ ತಾನೂ || ೧ ||

ರಾಗ:ಮೋಹನಕಲ್ಯಾಣಿ, ತಾಳ – ಆದಿ

ಜಯಜಯ ವೇಂಕಟರಾಯ ಜಯಜಯ ಸುಂದರಕಾಯ |
ಜಯಜಯ ಲಕುಮಿಪ್ರೀಯ ಜಯ ಮಹಾರಾಯ || ಪ ||

ಎನ್ನರಸಾ ಘನ್ನರಸಾ ಎನ್ನ ಪ್ರಾಣದರಸಾ |
ನಿಮ್ಮ ಮುಖವ ತನ್ನೀ ಅರಸಿನ ಹಚ್ಚುವೆನು || ೧ ||

ಉಣ್ಣದೆ ಮೆಲ್ಲನೆ ಪೋಗಿ ಕಣ್ಣಿಗೆ ಬೀಳದೆ ಕದ್ದು |
ಬೆಣ್ಣೆಯ ತಿನ್ನುವ ಮುಖಕೆ ಅರಸಿನ ಹಚ್ಚುವೆನು || ೨ ||

ಅಂಜದೆ ಹೇಸಿಗೆಯಾದ ಕಂಜನಾಭನೆ ಶಬರೀ |
ಎಂಜಲ ಕೊಳ್ಳುವ ಕೈಗೆ ಅರಸಿನ ಹಚ್ಚುವೆನು || ೩ ||

ವಲ್ಲಭ ನೀ ಎನ ಕೈಲೆ ಕಲ್ಲಿಲೆ ತಾಡಿತವಾದ |
ಬಲ್ಲಿದ ನಿಮ್ಮಯ ಹಣೆಗೆ ಕುಂಕುಮ ಹಚ್ಚುವೆನು || ೪ ||

ಎದೆಮ್ಯಾಲೊಬ್ಬಳು ಇರಲು ಹದಿನಾರು ಸಾವಿರ |
ಸುದತಿಯರಪ್ಪಿದ ಎದೆಗೆ ಪರಿಮಳ ಹಕುವೆನು || ೫ ||

ಹಗಲೆಲ್ಲ ಗೋಪಿಯರ ಹೆಗಲ ಮೇಲಿಟ್ಟಿರುವ |
ಸುಗುಣಾ ನಿಮ್ಮಯ ಕೈಗೆ ಗಂಧ ಹಚ್ಚುವೆನೂ || ೬ ||

ಇಂಥಾ ಮಾತುಗಳೆಲ್ಲ ಅಂತಃಕರಣದಿ ನುಡಿದೇ |
ಸ್ವಾಂತಕ್ಕೆ ತರ ಬೇಡ ಅನಂತಾದ್ರೀಶಾನೇ || ೭ ||

| ವಚನ |

ಆಂದು ಈ ಪರಿಯು ಗೋವಿಂದಗರಸಿನ ಹಚ್ಚಿ
ಮುಂದೆ ಕುಂಕುಮ ಫಣೆಗೆ ಛಂದಾಗಿ
ಹಚ್ಚಿದಳು ಗಂಧ ಪರಿಮಳ
ಮಾಲೆಯಿಂದಲಂಕರಿಸುತಲೆ ವಂದನೆಯ
ಮಾಡಿದಳು ಒಂದೆ ಮನಸಿನಲೀ |
ಇಂದೀವರಾಕ್ಷಿ ಹೀಂಗೆಂದು ಆಡಿದ ಮಾತು
ತಂದು ಮನಸಿಗೆ ಆಗ ಇಂದಿರಾರಮಣ ತಾ
ಇಂದಿರಾದೇವಿ ಕೈಯಿಂದ ಅರಸಿನ ಕೊಂಡು
ಮಂದಹಾಸದಿ ನಗುತ ಅಂದನೀ ಪರಿಯು ||

ರಾಗ – ಮೋಹಕಲ್ಯಾಣಿ, ತಾಳ – ಆದಿ

ಜಯಜಯ ಕಂಜೋದ್ಭೂತೆ ಜಯಜಯ ಮಂಜುಳಗೀತೆ |
ಜಯಜಯ ಕಂಜಜಮಾತೇ ಜಯ ಪ್ರಖ್ಯಾತೇ || ಪ ||

ಎನ್ನರಸೀ ಘನ್ನರಸೀ ಎನ್ನ ಪ್ರಾಣದ ಅರಸೀ |
ನಿನ್ನಯ ಮುಖವನು ತಾ ಅರಸಿನ ಹಚ್ಚುವೆನೂ || ೧ ||

ಮಡದಿ ನೀ ವಂದಿಷ್ಟು ಭಿಡಿಯ ಇಲ್ಲದೆ ಎನಗೇ |
ನುಡಿದರುವ ಮುಖವನು ತಾ ಅರಸಿನ ಹಚ್ಚುವೆನೂ || ೨ ||

ಕೊರವಿ ಕೈಯಲಿ ಯೆನ್ನಾ ಪರಮ ಪಾದದ ರೇಣೂ |
ಕರೆಉ ಹಚ್ಚಿದ ಹಣೆಗೆ ಕುಂಕುಮ ಹಚ್ಚುವೆನೂ || ೩ ||

ನಾರೀ ನಾಚಿಗೆ ಬಿಟ್ಟು ನಾರದ ಮುನಿಗೆನ್ನ |
ಧಾರೆಯಾಗಿತ್ತ ಕೈಗೆ ಗಂಧ ಹಚ್ಚುವೆನೂ || ೪ ||

ಕದನ ಮಾಡುತ ಯೆನ್ನ ಕುದುರೆಯ ಕೊಂದಿರುವ |
ಎದೆ ಗಾರತಿ ನಿನ್ನೆದೆ ತಾ ಪರಿಮಳ ಹಾಕುವೆ ನಾನೂ || ೫ ||

ಚೆನ್ನಿಗ ರಾಜಕುಮಾರೀ ನಿನ್ನ ಮಾತಿಗೆ ನಾನೂ |
ಮನ್ನಿಸಿ ಉತ್ತರ ಕೊಟ್ಟೆ ಎನ್ನೊಳು ಕೋಪವಿಲ್ಲಾ || ೬ ||

ಕಾಂತೇ ನೀ ಭಕ್ತಿಯಲ್ಲಿ ಎಂಥಾ ಮಾತಾಡಿದರು |
ಸಂತೋಷವೆನಗೆ ಅನಂತಾದ್ರೀಶನಿಗೇ || ೭ ||

| ವಚನ |

ಆಡಿ ಈ ಪರಿ ಮಾತು ಮಾಡಿದನು ಉರುಟನೇಯ
ನೋಡುವರಿಗ್-ಹರುಷ ಸೂರಾಡುತಲೆ ಕಡೆನೋಟ
ನೋಡುತಲೆ ಸತಿಯಿಂದ ಕೂಡಿ ಶೋಭಿಸಿದಾಗ
ರೂಢಿಯಲಿ ದೃಷ್ಟಾಂತ ಕೂಡದ್-ಹಾಗೆ ||
ಕ್ರೀಡಾದಿ ಗುಣ ಸಹಿತ ಪ್ರೌಢ ಹರಿ ಈ ರೀತಿ
ಮಾಡಿ ಪದ್ಮಾವತಿಯ ಕೂಡಿ ಕುಳಿತಿರುವುದು
ನೋಡಿ ನಾರಿಯರಾಗ ಕೂಡಿ ಲಕ್ಷ್ಮಿಯ ಮುಂದೆ
ಮಾಡುತಲೆ ಆರತಿಯ ಮಾಡಿದರು ಹರಿಯ
ಕೊಂಡಾಡಿ ಪಾಡುತಲೆ || ೧ ||

ರಾಗ – ಸಾವೇರಿ, ತಾಳ – ಆದಿ

ಮಂಗಳಂ ಜಯ ಮಂಗಳಂ || ಪ ||

ವರೈಕುಂಠದಿ ಬಂದವಗೆ
ವರಗಿರಿಯಲಿ ಸಂಚರಿಸುವಗೆ |
ವರಹದೇವನ ಅನುಸರಿಸಿ ಸ್ವಾಮಿ
ಪುಷ್ಕರಣಿ ತೀರದಲ್ಲಿರುವವಗೆ || ೧ ||

ಸರಸದಿ ಬೇಟೆಯ ಹೊರಟವಗೆ
ಸರಸಿಜಾಕ್ಷಿಯಳ ಕಂಡವಗೆ |
ಮರುಳಾಟದಿ ತಾ ಪರವಶನಾಗುತ
ಕೋರವಿ ವೇಷ ಧರಿಸಿರುವವಗೆ || ೨ ||

ಗಗನರಾಜಪುರಕ್ಹೋದವಗೆ
ಬಗೆ ಬಗೆ ನುಡಿಗಳ ನುಡಿದವಗೆ |
ಅಗವಾಸಿಗೆ ನಿನ್ನ ಮಗಳನ ಕೊಡು ಯೆಂದು
ಗಗನ ರಾಜನ ಸತಿಗ್-ಹೇಳ್ದವಗೆ || ೩ ||

ತನ್ನ ಕಾರ್ಯ ತಾ ಮಡಿದವಗೆ
ಇನ್ನೊಬ್ಬರ ಹೆಸರ್-ಹೇಳ್ದವಗೆ
ಮುನ್ನಮದುವೆ ನಿಶ್ಚಯವಾಗಿರಲು
ತನ್ನ ಬಳಗ ಕರಿಸಿರುವವಗೆ || ೪ ||

ಎತ್ತಿ ನಿಬ್ಬಣ ಹೊರಟವಗೆ
ನಿತ್ಯ ತೃಪ್ತನಾಗಿರುವವಗೆ |
ಉತ್ತರಾಣೆಯ ವಾಗರನುಂಡು
ತೃಪ್ತವಾಗಿ ತೇಗಿರುವವಗೆ || ೫ ||

ಒದಗಿ ಮುಹೂರ್ತಕೆ ಬಂದವಗೆ
ಸದಯ ಹೃದಯನಾಗಿರುವವಗೆ |
ಮುದದಿಂದಲಿ ಶ್ರೀ ಪದುಮಾವತಿಯಳ
ಮದುವೆ ಮಾಡಿಕೊಂಡ ಮದುಮಗಗೆ || ೬ ||

ಕಾಂತೆಯಿಂದ ಸಹಿತಾದವಗೆ
ಸಂತೋಷದಿ ಕುಳಿತಿರುವವಗೆ
ಸಂತತ ಶ್ರೀಮದನಂತಾದ್ರೀಶಗೆ
ಶಾಂತಮೂರುತಿ ಸರ್ವೋತ್ತಮಗೆ || ೭ ||

| ವಚನ |

ಹೀಗೆಂದು ಆರತಿಯ ಬಾಗಿ ಬಳಕುತ ಮಾಡಿ
ಸಾಗಿದರು ನಾರಿಯರು ಹೀಗೆ ಪರಮೋತ್ಸವದಿ
ಹಿಂಗದಲೆ ನಾಲ್ಕುದಿನ ಸಾಂಗ ಮಾಡಿದ ರಾಜ
ನಾಗಬಲಿ ಮಾಡಿ ಮುಂದಾಗಮೋಕ್ತದಿ ಮಗಳ –
ನಾಗ ಒಪ್ಪಿಸಿದ ಚಂದಾಗಿ ಶ್ರೀಹರಿಗೆ |
ಆಗ ತಾ ಕೃತಕೃತ್ಯನಾಗಿ ಆ ರಾಜ
ಚತುರಂಗ ಸೈನ್ಯವ ಕೊಟ್ಟು ಪೋಗಿ ದೂರದಲೆ
ತಾನಾಗಿ ಕಳಿಸಿದ ಮುಂದೆ ನಾಗ ವೇಣಿಯ ಕೂಡಿ
ನಾಗಶಯನನು ನಡೆದ ನಾಗಗಿರಿಗೆ || ೧ ||

ಬೆಟ್ಟದೊಡೆಯನ ಈ ವಿಶಿಷ್ಟ ಕಥೆಯನು ಬಹಳ
ನಿಷ್ಠೆಯಲಿ ಕೇಳಿದರೆ ಎಷ್ಟು ಪೇಳಲಿ ಫಲವ
ಕಷ್ಟ ದೂರಾಗುವದು ಕಟ್ಟುವದು ಕಲ್ಯಾಣ
ದುಷ್ಟ ಗ್ರಹಗಳ ಬಾಧೆ ಬಿಟ್ಟು ಓಡುವುದೂ |
ಕಷ್ಟದಲಿ ಪುತ್ರಕಾಮೇಷ್ಟಿ ಮಾಡಿದ ಫಲವು
ಇಷ್ಟರಿಂದಲೆ ಕೊಡುವ ಇಷ್ಟ ದಾಯಕ ಹರಿಯು
ಕೊಟ್ಟು ಸಲಹುವ ಮತ್ತೆ ತುಷ್ಟನಾಗುತ
ಕರೆದಭೀಷ್ಟ ಕೊಡುವನು ಎಲ್ಲ
ಕೊಟ್ಟು ಬಿಡುವನು ಮುಕ್ತಿ ಕಟ್ಟಕಡೆಗೆ || ೨ ||

ವಿಸ್ತರಿಸಿ ನಾ ಇನ್ನು ಎತ್ತ ವರ್ಣಿಸಲಿ
ಪುರುಷೋತ್ತಮನ ಮಹಿಮೆ ತನ್ನ
ಚಿತ್ತದೊಲ್ಲಭೆಗಂತ ಹಸ್ತಗೊಡದಲೆ
ಇರುವ ಎತ್ತ ಬೇಕಾದತ್ತ ಮತ್ತನಂತಾದ್ರಿಯಲಿ
ನಿತ್ಯದಲ್ಲಿರುವಾ |
ಮತ್ತೆ ಬಿಡದಲೆ ಎನ್ನ ಚಿತ್ತದಲಿ ನಿಂತು
ಯಾವತ್ತು ಕಾರ್ಯಗಳನ್ನು ನಿತ್ಯ ಮಾಡಿಸುವ
ಸರ್ವೋತ್ತಮನು ತಾ ಎನ್ನ ಭಕ್ತಿಯಲಿ ಮೆಚ್ಚಿ
ಬೆನ್ಹತ್ತಿ ಮಾಡಿಸಿದ ಈ ಹತ್ತು ಅಧ್ಯಾಯ || ೩ ||

ಹತ್ತನೆಯ ಅಧ್ಯಾಯವು ಸಮ್ಪೂರ್ಣವು |

ಇತಿ ಶ್ರೀ ಅನಂತಾದ್ರೀಶರು ವಿರಚಿತ ವೇಂಕಟೇಶ ಪಾರಿಜಾತ ಸಮ್ಪೂರ್ಣವು |

ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು


You might also like

error: Content is protected !!