ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ
(ವಾಸುದೇವವಿಟ್ಠಲ ಅಂಕಿತ)
ಪ್ರಮೇಯ ಸುಳಾದಿ
ರಾಗ: ಸಾರಂಗ
ಧ್ರುವತಾಳ
ಬಾರದ ಮೊದಲಿನ್ನು ವಿಷಯ ಬಾರದ ಚಿಂತೆ
ಭರದಿಂದ ಮರದೆನೊ ಹರಿಯೆ ನಿನ್ನ
ಬೆರದ ವಿಷಯದ ಕಾಲದಲ್ಲಿ ಸಂಭೋಗ –
ಪರನಾಗಿ ಮರದೆನೊ ಹರಿಯೆ ನಾ ನಿನ್ನ
ಜರಿಯು ಆದ ಬಳಿಕ ನಿರುತ ಅದರ ಶೋಕಾ –
ತುರನಾಗಿ ಮರದೆನೊ ಹರಿಯೆ ನಿನ್ನ
ಮೂರು ಸಮಯದಲ್ಲಿ ಹೀಗೆನ್ನ ಮರಿಸಲು
ಆರು ತೋರಿಸಬೇಕು ಖರೆ ಸ್ಮೃತಿ ಸಮಯ
ತರಳನ್ನ ಆಲಾಪ ಮನಕೆ ತಂದೀಗಲು
ಕರುಣಿಸೊ ವಾಸುದೇವವಿಟ್ಠಲ ಸ್ವಾಮಿ || ೧ ||
ಮಟ್ಟತಾಳ
ಸ್ಮೃತಿಯಿಲ್ಲ ಸ್ಮೃತಿಯಿಲ್ಲ ಇನಿತೆಂಬ ಸ್ಮೃತಿಮಾತ್ರ
ಮತಿಯಲ್ಲಿ ನಟ್ಟಿದೆ ಇದಲ್ಲದಿನ್ನೊಂದು
ಗತಿಯಿಲ್ಲದೆನಗಿನ್ನು ಇದನೆ ಸಾಧನ ಮಾಡಿ
ಪತಿ ವಾಸುದೇವವಿಟ್ಠಲ ಸ್ಮೃತಿ ಕೊಡು ಎನಗೀಗ || ೨ ||
ತ್ರಿವಿಡಿತಾಳ
ಹಾನಿ ಲಾಭಗಳಿಗೆ ಚಪಲ ಚಿತ್ತನಾಗಿ
ಆನು ಮತ್ತಗಳ ಕಾರಣ ತಿಳಿವೆ
ನೀ ನಿದಾನ ನಿಖಿಳಕೆ ಎಂದು ಮರದಿನೊ
ಏನೊ ಮೋಹನ ಶಕುತಿ ನಿನಗೆ ಎನ್ನಲ್ಲಿ
ಆನು ಬೇಡಿಕೊಂಬೆ ಎಂದಿಗಾದರು ಇಂಥ
ಹೀನ ವಿಸ್ಮೃತಿ ವಲ್ಲೆ ವಾಸುದೇವವಿಟ್ಠಲ || ೩ ||
ಅಟ್ಟತಾಳ
ಮರಹುವ ವೈರಾಗ್ಯ ಮರಹುವ ಸೌಭಾಗ್ಯ
ಮರಹುವ ಭೋಗ ಮರಹುವ ತ್ಯಾಗ
ಪರಿಪರಿ ಇತ್ತರು ಹರಿಯೆ ನಾನೊಲ್ಲೆ ನಿನ್ನ
ಚರಣದ ಸ್ಮೃತಿಯಿಂದ ಚಿರದ ಸಾಧನ ಕೊಡು
ಪರವಿಲ್ಲ ಎನಗಿನ್ನು ವಾಸುದೇವವಿಟ್ಠಲ || ೪ ||
ಆದಿತಾಳ
ನೀ ಕೊಟ್ಟದ್ದದೆ ಲಾಭ ನೀನಿತ್ತದ್ದದೆ ಸೌಖ್ಯ
ನೀ ಮಾಡಿದದೆ ಶಿಕ್ಷ ನೀ ಕೂಡಿದದೆ ರಕ್ಷ
ನೀನೆ ಪರಗತಿ ನೀನೆ ಪರಮಾತ್ಮಾ
ನಿನಗಿಂದಾರಿಂದಾರೊ ವಾಸುದೇವವಿಟ್ಠಲ || ೫ ||
ಜತೆ
ಆನೊಂದನರಿಯೆನು ದೀನರ ಪಾಲಕ
ನೀನೆಂದು ಮೊರೆಹೊಕ್ಕೆ ವಾಸುದೇವವಿಟ್ಠಲ ||
SrIvyAsatatvaj~jatIrtha viracita
(vAsudEvaviTThala aMkita)
pramEya suLAdi
rAga: sAraMga
dhruvatALa
bArada modalinnu viShaya bArada ciMte
BaradiMda maradeno hariye ninna
berada viShayada kAladalli saMBOga –
paranAgi maradeno hariye nA ninna
jariyu Ada baLika niruta adara SOkA –
turanAgi maradeno hariye ninna
mUru samayadalli hIgenna marisalu
Aru tOrisabEku Kare smRuti samaya
taraLanna AlApa manake taMdIgalu
karuNiso vAsudEvaviTThala svAmi || 1 ||
maTTatALa
smRutiyilla smRutiyilla initeMba smRutimAtra
matiyalli naTTide idalladinnoMdu
gatiyilladenaginnu idane sAdhana mADi
pati vAsudEvaviTThala smRuti koDu enagIga || 2 ||
triviDitALa
hAni lABagaLige capala cittanAgi
Anu mattagaLa kAraNa tiLive
nI nidAna niKiLake eMdu maradino
Eno mOhana Sakuti ninage ennalli
Anu bEDikoMbe eMdigAdaru iMtha
hIna vismRuti valle vAsudEvaviTThala || 3 ||
aTTatALa
marahuva vairAgya marahuva sauBAgya
marahuva BOga marahuva tyAga
paripari ittaru hariye nAnolle ninna
caraNada smRutiyiMda cirada sAdhana koDu
paravilla enaginnu vAsudEvaviTThala || 4 ||
AditALa
nI koTTaddade lABa nInittaddade sauKya
nI mADidade SikSha nI kUDidade rakSha
nIne paragati nIne paramAtmA
ninagiMdAriMdAro vAsudEvaviTThala || 5 ||
jate
AnoMdanariyenu dInara pAlaka
nIneMdu morehokke vAsudEvaviTThala ||
Leave a Reply