Parvati Kalyana – Dirgha kriti

Composer : Shri Tande Purandara vittala

By Smt.Shubhalakshmi Rao

ಅಂಗಜ ಜನಕಗೆ ಮಂಗಳ ಮಹಿಮಗೆ
ಹಿಂಗದೆ ಲಕ್ಷ್ಮೀಗೆರಗುವೆನು |
ಹಿಂಗದೆ ಪ್ರೇಮದಾನಂದತೀರ್ಥರ
ಪಾದಾಂಬುಜಕ್ಕೆರಗಿ ವಂದಿಸುವೆನು (೧)

ಗಂಗೆಯ ಜಡೆಯಲ್ಲಿ ಧರಿಸಿಪ್ಪ ದೇವನೆ
ನಂದಿವಾಹನನೆ ಶಂಕರನೆ |
ಅಂಬಿಕಾದೇವಿಯ ಅಮರವಂದಿತನೆ
ನಂಜುಂಡ ಪಾಲಿಸು ನಿಜಮತಿಯ (೨)

ಶಿವಕಥೆಯ ಕೇಳಿ ಭವಬಂಧ ಹರಿವುದು
ಶಿವನ ಪ್ರಾರ್ಥನೆಯ ಮಾಡಿದರೆ |
ಮನದ ಇಷ್ಟವ ಬೇಕಾದವರಂಗಳ
ಪರಮೇಶ್ವರ ಕರುಣಿಸುವ (೩)

ಒಂದು ದಿವಸ ಗಿರಿರಾಜ ಓಲಗದಿ
ಆನಂದದಿಂದಲಿ ಕುಳ್ಳಿರಲು |
ಅಂದುಗೆ ಕಿರುಗೆಜ್ಜೆ ಘಲಿರೆನುತ ಬಾಲೆ
ಬಂದಳಾಗಲೆ ಪಾರ್ವತಿಯು (೪)

ಆವಣಿ ವಾಲೆಯು ಅಲಿಗಲಿಗಾಡುತ್ತ
ಹೂವಿನ ಜಡೆ ನಲಿಯುತಲಿ |
ಆಭರಣ ಘಮ್ಮು ಘಲಿರೆನುತ ಬಾಲೆ
ಬಂದಳಾಗಲೆ ಪಾರ್ವತಿಯು (೫)

ಬಂದ ಮಗಳ ಬಿಗಿದಪ್ಪಿ ಮುದ್ದಾಡುತ್ತಾ
ಚೆಂದದಿ ತೊಡೆಯ ಮೇಲಿಟ್ಟು |
ಮುಂಗುರುಳ ತಾ ಸರಿಸುತ್ತಾ ಮೋಹದಿ
ಚೆಂದದಿಂದ ಗಿರಿರಾಜನಿದ್ದ (೬)

ಗಗನ ಮಾರ್ಗದಿ ವೀಣೆ ಸ್ವರಗೈಯುತ್ತಾ
ಬಂದ ನಾರದನೋಲಗಕೆ |
ಬಂದ ಮುನಿಗೆ ಷೋಡಶೋಪಚಾರವು
ವಂದನೆಗಳ ಮಾಡಿದರು (೭)

ವಂದಿಸಿ ಕರಮುಗಿಯುತಲಿ ಗಿರಿರಾಜ
ಇಂದು ಕೃತಾರ್ಥ ತಾನೆಂದ
ಪುತ್ರಿಯು ಅತಿಜಾಣೆ ಕಡುಚೆಲುವೆಯು
ಮಕ್ಕಳೊಳಗೆ ಮಾಣಿಕ್ಯವು (೮)

ತಕ್ಕ ವರನ ಕಾಣಿ ಸುರನರಾದಿಗಳಲಿ
ತನ್ನ ಪುತ್ರಿಗೆ ವರನ್ಯಾರೆಂದ |
ಮುನ್ನಿವಳ ಹೋಲುವ ಸತಿಯರ ನಾಕಾಣೆ
ನನ್ನ ಮಗಳ ಚೆಲುವಿಕೆಯ (೯)

ಕನ್ನಿಕೆ ಯಾರಿಗೆ ಕೊಡಲೆಂದೆನುತಲಿ
ಬಣ್ಣಿಸಿದನು ಗಿರಿರಾಜ |
ಹಿಂದೆ ದಕ್ಷಗೆ ಮಗಳಾಗಿ ಜನಿಸಿ
ಪತಿನಿಂದ್ಯವ ಕಿವಿಯಲ್ಲಿ ಕೇಳಿ (೧೦)

ತಂದೆಯ ಮುಂದೆ ಶರೀರವ ಬಿಟ್ಟಳು
ಬಂದಳು ನಿನ್ನರಮನೆಗೆ |
ಎಷ್ಟು ಜನ್ಮದ ತಪಸಿನ ಫಲದಿಂದ
ಪಾರ್ವತಿ ಮಗಳಾಗಿ ನಿನಗೆ (೧೧)

ಭೂತೇಶ ಶಿವಬಂದು ಅಳಿಯನಾಗುವ
ಪುಣ್ಯರಾಶಿ ನಿನಗೆ ಸರಿಯುಂಟೆ |
ಸಕಲ ಲೋಕೇಶನೆ ಅಳಿಯನಾಗುವನು
ಸಕಲ ಲೋಕದ ತಾಯಿ ಮಗಳು (೧೨)

ಪ್ರಕಟಿಸುವರೆ ನಿನ್ನ ಭಾಗ್ಯವ ಪುಣ್ಯವ
ಸುಕೃತವನೇನ ಬಣ್ಣಿಸುವೆ |
ಇಂತೆಂದು ರಾಯರ ಕೊಂಡಾಡಿ ನಾರದ
ಇಂದ್ರಲೋಕಕೆ ಮುನಿಹೋದ (೧೩)

ಇಂದುಮೌಳಿಯ ಮನದಲ್ಲಿ ಧ್ಯಾನಿಸುತ್ತ
ಚೆಂದದಿಂದ ಗಿರಿರಾಜನಿದ್ದ |
ಕೇಳುತ್ತ ಪಾರ್ವತಿ ಬಹಳ ಸಂತೋಷದಿ
ತಾಯಿ ತಂದೆಗೆ ಅಭಿನಮಿಸಿ (೧೪)

ಸೋಮಶೇಖರನನ್ನು ತಪದಿಂದ
ಒಲಿಸುವೆ ಬೇಗ ಎನ್ನನು ಕಳುಹೆಂದ್ಲು |
ತುಪ್ಪ ಅನ್ನವನುಂಡು ಪಟ್ಟೆ ಮಂಚದಲಿರುವ
ಚಿಕ್ಕವಳಿಗೆ ತಪಸ್ಸುಂಟೆ (೧೫)

ಬಾಲೆ ನಿನ್ನನು ಬಿಟ್ಟು ಇರುವುದು ಹ್ಯಾಂಗೆ
ಅರಣ್ಯದಲಿ ಹೇಗಿರುವೆ |
ನಿರ್ಮಲ ಮನದಲ್ಲಿ ಭಜಿಸಿದಲ್ಲದೆ
ಸುಮ್ಮನೆ ಶಿವ ಒಲಿಯುವನೆ (೧೬)

ನಿಮ್ಮ ಅನುಜ್ಞೆಯ ಮೇಲೆ ತಪವನ್ನು ಮಾಡುವೆ
ಸೋಮಶೇಖರನ ಮೆಚ್ಚಿಸುವೆ |
ಭಾವ ಭಕ್ತಿಯಿಂದ ಭಜಿಸಿದಲ್ಲದೆ ಶಿವ
ಪ್ರೇಮದಿ ನಮಗೆ ಒಲಿಯುವನೆ (೧೭)

ನಿಮ್ಮನುಜ್ಞೆಯ ಮೇಲೆ ತಪವನ್ನು
ಮಾಡಿ ನಾಗಭೂಷಣನ ಮೆಚ್ಚಿಸುವೆ |
ಮಗಳ ಮಾತನು ಕೇಳಿ ತಲೆ ತೂಗಿ ಗಿರಿರಾಜ
ನರರೂಪಿನ ನಾರಿಯಲ್ಲ (೧೮)

ಹರನ ಶರೀರದ ಅರ್ಧಾಂಗಿ ಇವಳೆಂದು
ಮಗಳ ತಪಕೆ ಕಳುಹಿದನು |
ಮಗಳಿಗೆ ಅಂಗರಕ್ಷೆ ಪರಿವಾರವು
ವನದ ಸುತ್ತಲು ನಿಲ್ಲಿಸಿದನು (೧೯)

ನಡೆದಳು ಪಾರ್ವತಿ ವನಕೆ ಸಂತೋಷದಿ
ಹರನ ಪಾದವ ಧ್ಯಾನಿಸುತಾ |
ಮಿಂದಳು ನದಿಯಲ್ಲಿ ನಾರು ಸೀರೆಯನುಟ್ಟು
ಅಂಗನೆ ಜಡೆಗಳ ಹೆಣೆದು (೨೦)

ಅಂಗನೆ ವಿಭೂತಿ ರುದ್ರಾಕ್ಷಿಗಳನು
ಆನಂದದಿಂದಲಿ ಧರಿಸಿದಳು |
ಅಷ್ಟದಿಕ್ಕಿಗೆ ಕೈಯ ಮುಗಿದು ಪ್ರಾರ್ಥಿಸಿಕೊಂಡು
ನಿಷ್ಠೆಯಿಂ ತಪವ ನಿಶ್ಚಯಿಸಿ (೨೧)

ಮುಕ್ಕಣ್ಣ ಹರನ ಮೂರ್ತಿಯ ಧ್ಯಾನಿಸುತ
ಮಿತ್ರೆ ತಾ ತಪಸ್ಸು ಮಾಡಿದಳು |
ಬಂದ ಒಬ್ಬ ರಾಕ್ಷಸ ಮಾಯಾ ರೂಪಿನಲಿ
ಅಂಗನೆಯನು ಮಾತಾಡಿಸಿದನು (೨೨)

ಚೆಂದುಳ್ಳ ಹೆಣ್ಣೆ ನಿನ್ನ ಕೊಂಡೋಗಿ ಎನ್ನ
ಅಂಗನೆಯನು ಮಾಡಿಕೊಂಬೆ |
ಎಂದಸುರನ ಧ್ವನಿ ಕೇಳುತ್ತ ಪಾರ್ವತಿ
ಕಂಗಳು ತೆರೆದು ನೋಡಿದಳು (೨೩)

ನಿಂದುಗ್ರ ದೃಷ್ಟಿಲಿ ನೋಡಲು ಅಸುರನು
ಬೆಂದುಹೋದನು ಆ ಕ್ಷಣವೇ |
ನೋಡಲು ಅಸುರನು ಬೂದಿಯಾಗ್-ಹೋಗಲು
ಪಾರ್ವತಿ ಮನದಲ್ಲಿ ಮರುಗಿ (೨೪)

ಯಾರು ಬಂದರು ಗಂಡು ಹೆಣ್ಣಾಗಲಿ ಎಂದು
ಬಾಲೆ ತಾ ಶಪಿಸಿ ನುಡಿದಳು
ಹರನೊಬ್ಬನಲ್ಲದೆ ಸುರನರಾದಿಗಳು
ಮೃಗಕುಲ ಪಕ್ಷಿಜಾತಿಗಳು (೨೫)

ವನಕೆ ಬಂದರೆ ಗಂಡು ಹೆಣ್ಣಾಗಲಿಯೆಂದು
ವನಿತೆ ತಾ ಶಪಿಸಿ ನುಡಿದಳು |
ಇಂತೆಂದು ಶಾಪವ ಕೊಟ್ಟು
ಕಂಗಳು ಮುಚ್ಚಿನಿಂದಳು ತಪ ನಿಷ್ಠೆಯಲಿ (೨೬)

ಆರು ತಿಂಗಳು ತಪಸ್ಸು ಮಾಡಲು ಬಾಲೆ
ಫಾಲಲೋಚನ ತಾನರಿತು |
ಪಾರ್ವತಿ ತಪದಿಂದ ಬಳಲಿದಳೆನ್ನುತಲಿ
ಬೇಗದಿಂದಲಿ ಶಿವ ಬಂದ (೨೭)

ನಂದಿ ಸಕಲ ಪರಿವಾರವೆಲ್ಲವನು
ಹಿಂದೆ ನಿಲ್ಲಿಸಿದನಾಕ್ಷಣದಿ |
ಬಂದನು ಶಿವ ತಾನು ವಿಪ್ರ ವೇಷದಲ್ಲಿ
ಅಂಗನೆಯನು ಮಾತಾಡಿಸಿದನು (೨೮)

ಬಂದದ್ದನರಿಯದೆ ಬಾಲೆ ಕಂಗಳು ಮುಚ್ಚಿ
ನಿಂದಳು ತಪದ ನಿಷ್ಠೆಯಲಿ |
ಅಂಗನೆ ಧ್ಯಾನಿಪ ಮೂರ್ತಿಯ ಸೆಳೆದನು
ಕಂಗಳು ತೆರೆದು ನೋಡಿದಳು (೨೯)

ನಾರಿ ನೀನ್ಯಾತಕೆ ತಪವನ್ನು ಮಾಡುವೆ
ಯಾರ ಚಿಂತಿಸುವೆ ಚಿತ್ತದಲಿ |
ಏನು ಮನಸಿನ ಇಷ್ಟ ಬಯಕೆಗಳೆಂದು
ಕೇಳಿದನಾ ವಿಪ್ರ ನಗುತ (೩೦)

ಚಂದ್ರಶೇಖರ ನನ್ನ ಪತಿಯಾಗಬೇಕೆಂದು
ನಿಂದೆನು ತಪದ ನಿಷ್ಠೆಯಲಿ |
ಸೋಮಶೇಖರ ನನ್ನ ಪತಿಯಾಗಬೇಕೆಂದು
ಮಾಡಿದೆ ತಪವ ನಿಷ್ಠೆಯಲಿ (೩೧)

ಹುಚ್ಚು ಮರುಳು ಮಂಕು ಚಿಕ್ಕಬುದ್ಧಿಯು ನಿನಗೆ
ಚಿತ್ತದ ಭ್ರಮೆ ಹಿಡಿದಿಹುದೆ |
ಮುಕ್ಕಣ್ಣ ಶಿವನ್ಯಾವ ಚೆಲುವನು ಎಂದು
ಹೇಳಿ ಮಿತ್ರೆ ನೀನು ಬಯಸಿದೆಯೆ (೩೨)

ರೂಪಿಲ್ಲ ಗುಣವಿಲ್ಲ ಶ್ರೀಕಾರ ಮೊದಲಿಲ್ಲ
ಬೇಕೆಂಬೊ ಐಶ್ವರ್ಯ ಮುಂದಿಲ್ಲ |
ಪಿನಾಕಿ ಮದುವೆಯಾಗಿ ಏನುಂಡೆ ಏನು
ವನಿತೆ ನಿನಗೆ ಗುಣವಿಲ್ಲ (೩೩)

ಅರಿಯದವಳು ನೀನು ಹರನು ಮುದುಕನು
ವರ ಅವ ನಿನಗೆಂತಾಗುವನು |
ನಗುವರು ಎಲ್ಲ ತಪವನ್ನು ಮಾಡಿ
ಮುದಿಯಾನ ಗೌರಿಯು ಪಡೆದಳೆನುತಾ (೩೪)

ಹರನ ಬೇಕೆಂಬೊ ಹೆಣ್ಮಕ್ಕಳ ನಾ ಕಾಣೆ
ಮರುಳು ನೀನೇ ಒಬ್ಬಳ ನಾ ಕಂಡೆ |
ನಗುವರು ನಿನ್ನ ಸಂಗಾತಿಯರೆಲ್ಲರೂ
ಬಿಡು ತಪವನ್ನು ಗುಣವಲ್ಲ (೩೫)

ಈ ಪರಿ ಶಿವನ ನಿಂದಿಸಿ ನುಡಿಯಲು
ಕೋಪ ಉಕ್ಕುತ ಕಾಂತೆ ಒಡಲೊಳಗೆ |
ಪಿನಾಕಿಯ ಮಹಿಮೆ ನೀನೇನು ಬಲ್ಲೆ
ಏ ಕಾಕು ಬ್ರಾಹ್ಮಣನೇ ಹೋಗೆಂದ್ಲು (೩೬)

ಇಂದ್ರಾದಿ ಕೋಟಿ ದೇವರ್ಕಳೆಲ್ಲರು ಶಿವನ
ಅಂಘ್ರಿ ನಿಂದು ಓಲೈಸೋರು |
ನಂದಿ ವಾಹನನ ಮಹಿಮೆ ಏನು ಬಲ್ಲೆಯೊ
ಮಂದಮತಿಯೇ ಹೋಗೆಂದ್ಲು (೩೭)

ತೆತ್ತಿಸ ಕೋಟಿ ದೇವರ್ಕಳೆಲ್ಲರು ಶಿವನ
ಹತ್ತಿರ ನಿಂದು ಓಲೈಸೋರು |
ಪ್ರತ್ಯಕ್ಷ ಶಿವನ ಮಹಿಮೆ ಏನು ಬಲ್ಲೆಯೊ
ಹುಚ್ಚು ಬ್ರಾಹ್ಮಣನೇ ಹೋಗೆಂದ್ಲು (೩೮)

ಮಿತ್ರೆ ತಾ ನುಡಿದಳು ವಿಪ್ರನೆಂದು ಬಿಟ್ಟಿ
ಮತ್ತೊಬ್ಬರಾದರೆ ಈಗಲೇ |
ತಕ್ಕ ಬುದ್ದಿಯನ್ನೇಳಿ ಶಿಕ್ಷಿಸಿ ಕಳುಹುವೆ
ಇಷ್ಟರಲ್ಲಿ ಹೋಗು ಎಂದಳು (೩೯)

ನೋಡಿದನು ಪಾರ್ವತಿ ಮನದ ಭಕ್ತಿಗಳನ್ನು
ಬೇಗದಿ ಶಿವ ಕೈ ಹಿಡಿದ |
ನೋಡುತ್ತ ನಡುಗುತ್ತ ಅಂಜುತ್ತಲಿರೇ ಶಿವ
ತೋರಿದನೇ ನಿಜರೂಪ (೪೦)

ಜಾಹ್ನವಿ ಜಡೆಯಲ್ಲಿ ಪಾಲದಿ ಚಂದ್ರರು
ಮೂರು ಕಣ್ಣಿನ ಮುಖಕಾಂತಿ |
ನೀಲಕಂಠನು ಚತುರ್ಭುಜ ಮೂರ್ತಿಯ
ಬಾಲೆಗೆ ಶಿವ ತೋರಿಸಿದ (೪೧)

ಬಿಡಿಸಿದ ಜಡೆನಾರು ಸೀರೆಯ ಶಿವ ತಾನು
ಕೊಡರಿದ ಮೈಯ ಧೂಳುಗಳ |
ಕೊಡಿಸಿದ ಸರ್ವಾಭರಣವ ಗೌರಿಗೆ
ಉಡಕೊಟ್ಟ ದಿವ್ಯಾಂಬರವ (೪೨)

ಬಳಲಿದಳೆನ್ನುತ್ತ ಗಿರಿಜೆಯ ಮನ್ನಿಸಿ
ತೊಡೆಯ ಮೇಲೆ ಕುಳ್ಳಿರಿಸಿ |
ಬಂದರು ನಂದಿ ಸಮಸ್ತರು ಸಹಿತಾಗಿ
ಕರೆದರು ಹೂವಿನ ಮಳೆಯ (೪೩)

ಕಾಮಧೇನು ಕಲ್ಪವೃಕ್ಷವು ತುಂಬುರು
ನಾರದ ರಂಭೆ ಊರ್ವಶಿಯು |
ದೇವೇಂದ್ರರು ಅಷ್ಟದೊರೆಗಳು ವಸುಗಳು
ವಿವಾಹಕ್ಕೆ ಬಂದರರ್ತಿಯಲಿ (೪೪)

ಮುನ್ನೂರು ಮೂವತ್ತುಮೂರು ಕೋಟಿ ದೇವರು
ಬ್ರಹ್ಮದೇವರು ಹರಿಸಹಿತ |
ಪನ್ನಗಧರನ ಮಹಿಮೆ ನೋಡಬಂದರು
ಉನ್ನಂತ ಅಧಿಕ ಸಂಭ್ರಮದಿ (೪೫)

ಪಾರ್ವತಿಗೆ ಶಿವ ಒಲಿದನು ಎಂದ್-ಹೇಳಿ
ಬೇಗದಿ ಗಿರಿರಾಜನಿಗ್-ಹೇಳಿ |
ಬಹಳ ಸಂತೋಷದಿ ಬಂದನು ಗಿರಿರಾಜ
ದೇವನಂಘ್ರಿಗೆ ನಮಿಸಿದನು (೪೬)

ಭಕ್ತವತ್ಸಲ ಕರುಣಾಕರ ಶಂಕರ
ರಕ್ಷಿಸಬೇಕು ನೀವೀಗ |
ಭಕ್ತಿಯಿಂದಲಿ ಗಿರಿರಾಜ ಸ್ತುತಿಸಿದ
ಅರ್ತಿಲಿ ಶಿವ ಮನ್ನಿಸಿದ (೪೭)

ಚಂದ್ರಶೇಖರ ಪಾರ್ವತಿ ಸಹಿತ
ಹೊನ್ನಂದಣವ ಏರಿದರು |
ಭೋರೆಂಬ ವಾದ್ಯ ಮುತ್ತೈದೆಯರು
ಪಾಡಲು ಬಂದರು ಮಾವನ ಮನೆಗೆ (೪೮)

ಬಾಗಿಲಲ್ಲಿ ಹರನ ಪಾರ್ವತಿಯ ಪಾದವ
ತೊಳೆದು ಆರುತಿಗಳನ್ನು ಎತ್ತಿದರು |
ಆರುತಿಯನೆತ್ತಿ ವೇದ ಮಂತ್ರಗಳಿಂದ
ದೇವ ಬಂದನು ಮಂಟಪಕೆ (೪೯)

ಎಡದಲ್ಲಿ ಬ್ರಹ್ಮನು ಬಲದಲ್ಲಿ ಶ್ರೀವಿಷ್ಣು
ನಡುವೆ ಶಂಕರನು ಕುಳ್ಳಿರಲು |
ಸುರನರಾದಿಗಳು ಚಾಮರ ಬೀಸುತಲಿರೆ
ಹರನು ಕುಳ್ಳಿರೆ ಠೀವಿಯಲಿ (೫೦)

ತೆತ್ತಿಸ ಕೋಟಿ ಸೂರ್ಯಪ್ರಕಾಶದಿ
ಇಟ್ಟಾಭರಣವು ಹೊಳೆಯೆ |
ಕಟ್ಟಿದ್ದ ಬಾಷಿಂಗ ಕೈಯ ಕಂಕಣದಿಂದ
ಒಪ್ಪಿದ ಶಿವ ಹಸೆಯ ಮೇಲೆ (೫೧)

ಮುಡಿದ ಹೂವಿನ ಜಡೆ ಹರಳೋಲೆ ಬಂದಿಯು
ಕಡಗ ಕಂಕಣ ಬಾಷಿಂಗವು |
ಉದಯದ ರವಿಕೋಟಿ ಹೊಳೆದಂತೆ ಪಾರ್ವತಿ
ಹರನ ಸನ್ನಿಧಿಯಲ್ಲೊಪ್ಪಿದಳು (೫೨)

ನವರತ್ನ ಪೀಠದಿ ಹರ ಬಂದು ಕುಳಿತಿರೆ
ಗಿರಿರಾಜ ಮೇನಕೆ ಸಹಿತ |
ಹರನ ಪಾದವನು ತೊಳೆದು ತೀರ್ಥವನು
ಶಿರದಲ್ಲಿ ಧರಿಸಿದನಾಗ (೫೩)

ಮಾಡಿದರು ಮಧುಪರ್ಕ ಪೂಜೆಯನು
ಆಭರಣ ಸಕಲ ಸಂಭ್ರಮದಿ |
ಪೂಜೆಯ ಮಾಡಿದರು ಹರನ ಪಾದಗಳಿಗೆ
ಧಾರೆಯನೆರೆದ ಶೀಘ್ರದಲಿ (೫೪)

ಚಿಕ್ಕವಳು ನಮ್ಮ ಅರಿಯದ ಬಾಲೆಯು
ರಕ್ಷಿಸಬೇಕು ಪಾರ್ವತಿಯ |
ಪ್ರತ್ಯಕ್ಷ ಶಿವನಿಗೆ ಧಾರೆಯನೆರೆದನು
ಉತ್ಸಾಹದಿಂದ ಗಿರಿರಾಜ (೫೫)

ಈ ಪರಿಯಲಿ ನಾಲ್ಕು ದಿವಸ ಸಂಭ್ರಮದಿ
ಅನೇಕ ಉತ್ಸವಗಳ ನಡೆಸಿ |
ಪಿನಾಕಿಗೂ ಗೌರಿಗೂ ನಾಗವಲ್ಲಿಯ ಮಾಡಿ
ಬೇಕೆಂಬೊ ಉಡುಗೊರೆಯನಿತ್ತ (೫೬)

ಭಕ್ಷ್ಯ ಪಾಯಸ ಧೃತ ಮೃಷ್ಟಾನ್ನವು
ಮದುಮಕ್ಕಳೆಲ್ಲರ ಪಂಕ್ತಿಯಲಿ |
ಚಿತ್ರಾನ್ನಗಳಿಂದ ವಿಪ್ರರ ಉಣಿಸಿದ
ಕೊಟ್ಟನೊ ವೀಳ್ಯ ದಕ್ಷಿಣೆಯ (೫೭)

ಬಾಲೆಯರಿಗೆ ಮರದ ಬಾಗಿನ ಕೊಟ್ಟು
ಬಂದವರನ್ನು ಮನ್ನಿಸಿದ |
ಕದಳಿ ತೆಂಗಿನಕಾಯಿ ಪದುಮತಾವರೆ ಹೂವು
ಅರಳು ಮಲ್ಲಿಗೆ ಹೂವೀಳ್ಯವನು (೫೮)

ಪರಮೇಶ್ವರನಿಗೆ ಕಾಣಿಕೆಯಿತ್ತರು
ನಿಜಭಕ್ತರೆಲ್ಲ ವಂದಿಸುತ್ತಾ |
ಅಷ್ಟದಿಕ್ಕಿನ ರಾಯರುಗಳು ದೊರೆಗಳು
ನಿಷ್ಠೆಯಿಂ ತಪದಿ ಋಷಿಗಳು (೫೯)

ಪಟ್ಟವಾಳಿಯ ಚೌಳಿಯನೊದಿಸಿದರು
ಪ್ರತ್ಯಕ್ಷ ಶಿವಗೂ ಪಾರ್ವತಿಗೂ |
ಪೀತಾಂಬರ ಸೆರಗಿನ ಸೀರೆ ಹಚ್ಚಡ
ನೂತನ ದಿವ್ಯಾಂಬರವು (೬೦)

ಪ್ರೀತೀಲಿ ನಾರಾಯಣರು ಓದಿಸಿದರು
ಸಂಪ್ರೀತೀಲಿ ಶಿವಗೂ ಪಾರ್ವತಿಗೂ |
ಸಣ್ಣಂಚಿನ ಸೀರೆ ಚಿನ್ನದ ಸೆರಗಿನ
ಉನ್ನತ್ತ ದಿವ್ಯಾಂಬರವು (೬೧)

ಬ್ರಹ್ಮದೇವರು ಜವಳಿಯನೋದಿಸಿದರು
ಪನ್ನಗಧರಗೂ ಪಾರ್ವತಿಗೂ |
ಮಿತ್ರೆ ಮೇನಕೆ ಮುತ್ತಿನ ಹಸೆಯಿಟ್ಟು
ತಟ್ಟೆಯಲ್ಲಿ ಹೊಸ ಮುತ್ತು ತುಂಬಿ (೬೨)

ಪಟ್ಟೆಯನುಡಿಸಿ ಪಾರ್ವತಿಯ ಪಟ್ಟನು
ಮುತ್ತು ಸೊಬಲನು ತುಂಬಿದಳು |
ಅಪ್ಪಿಕೊಳ್ಳುತ್ತಾ ಮುದ್ದಾಡಿ ಬುದ್ಧಿ ಹೇಳಿ
ಮಿತ್ರೆ ಮೇನಕೆ ಗಿರಿರಾಜ (೬೩)

ಅಕ್ಕ ಪಾರ್ವತೀ ನಿನ್ನ ಬಿಟ್ ಹ್ಯಾಗೆ ಇರುವೆವು
ಅರ್ತಿಯಿಂದಲಿ ಎಂದರವರು |
ಹಿಡಿದರಿಶಿನ ಬಣ್ಣ ಬಂಡಾರ ವಸ್ತು
ವಡವೆಯು ಕಂಚು ಮುತ್ತುಗಳು (೬೪)

ಹರಿವಾಣ ಪೆಟ್ಟಿಗೆ ಜವಳಿಯ ಪಿಂಡಿಯು
ಮಗಳಿಗೆ ಬಳುವಳಿಯಿತ್ತ |
ರಜತಗಿರಿಯ ಕೈಲಾಸಕ್ಕೆ ಬಂದರು
ಗೃಹಪ್ರವೇಶದ ಉತ್ಸವದಿ (೬೫)

ಹೋದಲ್ಲಿ ದೇವಪತ್ನಿಯರು ಆರುತಿಯೆತ್ತಿ
ನಾಗಭೂಷಣಗೂ ಪಾರ್ವತಿಗೂ |
ಬಂದಲ್ಲಿ ದೇವಪತ್ನಿಯರು ಆರುತಿಯೆತ್ತಿ
ನಂದಿವಾಹನಗೂ ಪಾರ್ವತಿಗೂ (೬೬)

ನಿಂದಲ್ಲಿ ದೇವಪತ್ನಿಯರು ಆರುತಿಯೆತ್ತಿ
ಚಂದ್ರಶೇಖರಗೂ ಪಾರ್ವತಿಗೂ |
ಬಂದನು ಕೈಲಾಸಗಿರಿಯಲ್ಲಿ ನಂಜುಂಡ
ಲಿಂಗನಿದ್ದನು ಹರುಷದಲಿ (೬೭)

ಅಂಧಕಾಂತಕ ಬಂದ ಕಂತುಸಂಹರ ಬಂದ
ಶಂಕರ ಶಿವ ತಾನು ಬಂದ |
ಕಾಂತೆ ಪಾರ್ವತಿದೇವಿ ಸಹಿತ ಬಂದಾನೆಂದು
ಸಂತೋಷದಿ ಕಹಳೆ ಹಿಡಿದರು (೬೮)

ಸಾರವಾಳಿಯ ಸೀರೆ ಹೂವಿನ ಸರಗಳು
ಬೇಗದಿ ಶಿವ ತರಿಸಿದನು |
ಲಕ್ಷ್ಮೀ ಸರಸ್ವತಿ ದೇವಿಯರಿಗಿತ್ತನು
ಅತ್ಯಂತ ಅಧಿಕ ಸಂಭ್ರಮದಿ (೬೯)

ಮುತ್ತೈದೆ ಹೇಳಿದರೆ ಇಟ್ಟೋಲೆ ಸ್ಥಿರವಾಗಿ
ಅಕ್ಷಿಲ್ಲದವರು ಹೇಳಿದರೆ |
ಅಕ್ಷಿಯು ಬರುವುದು ಬಡವರು ಹೇಳಿದರೆ
ಹೆಚ್ಚಿನ ಪದವಿ ಸೇರುವರು (೭೦)

ಬರಡೆ ಹೇಳಿದರೆ ಕಂದನ್ನೆತ್ತಿಕೊಂಬುವಳು
ಹೆಳವ ಹೇಳಿದರೆ ನಡೆಯುವನು |
ಮದುವೆಯಿಲ್ಲದವರು ಹೇಳಿದರೆ
ವಿವಾಹ ಒದಗುತ್ತ ಕಂಕಣ ಬಹುದು (೭೧)

ಸೋಮವಾರ ಅಮಾವಾಸ್ಯೆ ಶಿವರಾತ್ರಿ ಪೌರ್ಣಮಿ
ಪಾಡ್ಯವು ಮನೆಮಂದಿಯೆಲ್ಲ |
ಸೋಮಶೇಖರನ ವಿವಾಹ ಹೇಳಿದರೆ
ಬೇಡಿದಿಷ್ಟಾರ್ಥ ಕೊಡುವನು (೭೨)

ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ
ಚಂದ್ರಶೇಖರ ಪಾರ್ವತಿಯು |
ಕಂಗಳು ತೆರೆದು ಕಟಾಕ್ಷದಿ ನೋಡಲು
ಹಿಂಗುವುದು ಸಕಲ ಪಾಪಗಳು (೭೩)

ಚಂದ್ರಶೇಖರ ದೇವಿ ಪಾರ್ವತಿ ಮದುವೆ
ಚೆಂದದಿಂ ಹೇಳಿ ಕೇಳಿದರೆ |
ತಂದೆ ಪುರಂದರ ವಿಠ್ಠಲ ತಾನೊಲಿದು
ಕುಂದದೆ ಭಾಗ್ಯ ಕೊಡುವನು (೭೪)


aMgaja janakage maMgaLa mahimage
hiMgade lakShmIgeraguvenu |
hiMgade prEmadAnaMdatIrthara
pAdAMbujakkeragi vaMdisuvenu (1)

gaMgeya jaDeyalli dharisippa dEvane
naMdivAhanane SaMkarane |
aMbikAdEviya amaravaMditane
naMjuMDa pAlisu nijamatiya (2)

Sivakatheya kELi BavabaMdha harivudu
Sivana prArthaneya mADidare |
manada iShTava bEkAdavaraMgaLa
paramESvara karuNisuva (3)

oMdu divasa girirAja Olagadi
AnaMdadiMdali kuLLiralu |
aMduge kirugejje Galirenuta bAle
baMdaLAgale pArvatiyu (4)

AvaNi vAleyu aligaligADutta
hUvina jaDe naliyutali |
ABaraNa Gammu Galirenuta bAle
baMdaLAgale pArvatiyu (5)

baMda magaLa bigidappi muddADuttA
ceMdadi toDeya mEliTTu |
muMguruLa tA sarisuttA mOhadi
ceMdadiMda girirAjanidda (6)

gagana mArgadi vINe svaragaiyuttA
baMda nAradanOlagake |
baMda munige ShODaSOpacAravu
vaMdanegaLa mADidaru (7)

vaMdisi karamugiyutali girirAja
iMdu kRutArtha tAneMda
putriyu atijANe kaDuceluveyu
makkaLoLage mANikyavu (8)

takka varana kANi suranarAdigaLali
tanna putrige varanyAreMda |
munnivaLa hOluva satiyara nAkANe
nanna magaLa celuvikeya (9)

kannike yArige koDaleMdenutali
baNNisidanu girirAja |
hiMde dakShage magaLAgi janisi
patiniMdyava kiviyalli kELi (10)

taMdeya muMde SarIrava biTTaLu
baMdaLu ninnaramanege |
eShTu janmada tapasina PaladiMda
pArvati magaLAgi ninage (11)

BUtESa SivabaMdu aLiyanAguva
puNyarASi ninage sariyuMTe |
sakala lOkESane aLiyanAguvanu
sakala lOkada tAyi magaLu (12)

prakaTisuvare ninna BAgyava puNyava
sukRutavanEna baNNisuve |
iMteMdu rAyara koMDADi nArada
iMdralOkake munihOda (13)

iMdumauLiya manadalli dhyAnisutta
ceMdadiMda girirAjanidda |
kELutta pArvati bahaLa saMtOShadi
tAyi taMdege aBinamisi (14)

sOmaSEKaranannu tapadiMda
olisuve bEga ennanu kaLuheMdlu |
tuppa annavanuMDu paTTe maMcadaliruva
cikkavaLige tapassuMTe (15)

bAle ninnanu biTTu iruvudu hyAMge
araNyadali hEgiruve |
nirmala manadalli Bajisidallade
summane Siva oliyuvane (16)

nimma anuj~jeya mEle tapavannu mADuve
sOmaSEKarana meccisuve |
BAva BaktiyiMda Bajisidallade Siva
prEmadi namage oliyuvane (17)

nimmanuj~jeya mEle tapavannu
mADi nAgaBUShaNana meccisuve |
magaLa mAtanu kELi tale tUgi girirAja
nararUpina nAriyalla (18)

harana SarIrada ardhAMgi ivaLeMdu
magaLa tapake kaLuhidanu |
magaLige aMgarakShe parivAravu
vanada suttalu nillisidanu (19)

naDedaLu pArvati vanake saMtOShadi
harana pAdava dhyAnisutA |
miMdaLu nadiyalli nAru sIreyanuTTu
aMgane jaDegaLa heNedu (20)

aMgane viBUti rudrAkShigaLanu
AnaMdadiMdali dharisidaLu |
aShTadikkige kaiya mugidu prArthisikoMDu
niShTheyiM tapava niScayisi (21)

mukkaNNa harana mUrtiya dhyAnisuta
mitre tA tapassu mADidaLu |
baMda obba rAkShasa mAyA rUpinali
aMganeyanu mAtADisidanu (22)

ceMduLLa heNNe ninna koMDOgi enna
aMganeyanu mADikoMbe |
eMdasurana dhvani kELutta pArvati
kaMgaLu teredu nODidaLu (23)

niMdugra dRuShTili nODalu asuranu
beMduhOdanu A kShaNavE |
nODalu asuranu bUdiyAg-hOgalu
pArvati manadalli marugi (24)

yAru baMdaru gaMDu heNNAgali eMdu
bAle tA Sapisi nuDidaLu
haranobbanallade suranarAdigaLu
mRugakula pakShijAtigaLu (25)

vanake baMdare gaMDu heNNAgaliyeMdu
vanite tA Sapisi nuDidaLu |
iMteMdu SApava koTTu
kaMgaLu mucciniMdaLu tapa niShTheyali (26)

Aru tiMgaLu tapassu mADalu bAle
PAlalOcana tAnaritu |
pArvati tapadiMda baLalidaLennutali
bEgadiMdali Siva baMda (27)

naMdi sakala parivAravellavanu
hiMde nillisidanAkShaNadi |
baMdanu Siva tAnu vipra vEShadalli
aMganeyanu mAtADisidanu (28)

baMdaddanariyade bAle kaMgaLu mucci
niMdaLu tapada niShTheyali |
aMgane dhyAnipa mUrtiya seLedanu
kaMgaLu teredu nODidaLu (29)

nAri nInyAtake tapavannu mADuve
yAra ciMtisuve cittadali |
Enu manasina iShTa bayakegaLeMdu
kELidanA vipra naguta (30)

caMdraSEKara nanna patiyAgabEkeMdu
niMdenu tapada niShTheyali |
sOmaSEKara nanna patiyAgabEkeMdu
mADide tapava niShTheyali (31)

huccu maruLu maMku cikkabuddhiyu ninage
cittada Brame hiDidihude |
mukkaNNa SivanyAva celuvanu eMdu
hELi mitre nInu bayasideye (32)

rUpilla guNavilla SrIkAra modalilla
bEkeMbo aiSvarya muMdilla |
pinAki maduveyAgi EnuMDe Enu
vanite ninage guNavilla (33)

ariyadavaLu nInu haranu mudukanu
vara ava ninageMtAguvanu |
naguvaru ella tapavannu mADi
mudiyAna gauriyu paDedaLenutA (34)

harana bEkeMbo heNmakkaLa nA kANe
maruLu nInE obbaLa nA kaMDe |
naguvaru ninna saMgAtiyarellarU
biDu tapavannu guNavalla (35)

I pari Sivana niMdisi nuDiyalu
kOpa ukkuta kAMte oDaloLage |
pinAkiya mahime nInEnu balle
E kAku brAhmaNanE hOgeMdlu (36)

iMdrAdi kOTi dEvarkaLellaru Sivana
aMGri niMdu OlaisOru |
naMdi vAhanana mahime Enu balleyo
maMdamatiyE hOgeMdlu (37)

tettisa kOTi dEvarkaLellaru Sivana
hattira niMdu OlaisOru |
pratyakSha Sivana mahime Enu balleyo
huccu brAhmaNanE hOgeMdlu (38)

mitre tA nuDidaLu vipraneMdu biTTi
mattobbarAdare IgalE |
takka buddiyannELi SikShisi kaLuhuve
iShTaralli hOgu eMdaLu (39)

nODidanu pArvati manada BaktigaLannu
bEgadi Siva kai hiDida |
nODutta naDugutta aMjuttalirE Siva
tOridanE nijarUpa (40)

jAhnavi jaDeyalli pAladi caMdraru
mUru kaNNina muKakAMti |
nIlakaMThanu caturBuja mUrtiya
bAlege Siva tOrisida (41)

biDisida jaDenAru sIreya Siva tAnu
koDarida maiya dhULugaLa |
koDisida sarvABaraNava gaurige
uDakoTTa divyAMbarava (42)

baLalidaLennutta girijeya mannisi
toDeya mEle kuLLirisi |
baMdaru naMdi samastaru sahitAgi
karedaru hUvina maLeya (43)

kAmadhEnu kalpavRukShavu tuMburu
nArada raMBe UrvaSiyu |
dEvEMdraru aShTadoregaLu vasugaLu
vivAhakke baMdarartiyali (44)

munnUru mUvattumUru kOTi dEvaru
brahmadEvaru harisahita |
pannagadharana mahime nODabaMdaru
unnaMta adhika saMBramadi (45)

pArvatige Siva olidanu eMd-hELi
bEgadi girirAjanig-hELi |
bahaLa saMtOShadi baMdanu girirAja
dEvanaMghrige namisidanu (46)

Baktavatsala karuNAkara SaMkara
rakShisabEku nIvIga |
BaktiyiMdali girirAja stutisida
artili Siva mannisida (47)

caMdraSEKara pArvati sahita
honnaMdaNava Eridaru |
BOreMba vAdya muttaideyaru
pADalu baMdaru mAvana manege (48)

bAgilalli harana pArvatiya pAdava
toLedu ArutigaLannu ettidaru |
Arutiyanetti vEda maMtragaLiMda
dEva baMdanu maMTapake (49)

eDadalli brahmanu baladalli SrIviShNu
naDuve SaMkaranu kuLLiralu |
suranarAdigaLu cAmara bIsutalire
haranu kuLLire ThIviyali (50)

tettisa kOTi sUryaprakASadi
iTTABaraNavu hoLeye |
kaTTidda bAShiMga kaiya kaMkaNadiMda
oppida shiva haseya mEle (51)

muDida hUvina jaDe haraLOle baMdiyu
kaDaga kaMkaNa bAShiMgavu |
udayada ravikOTi hoLedaMte pArvati
harana sannidhiyalloppidaLu (52)

navaratna pIThadi hara baMdu kuLitire
girirAja mEnake sahita |
harana pAdavanu toLedu tIrthavanu
Siradalli dharisidanAga (53)

mADidaru madhuparka pUjeyanu
ABaraNa sakala saMBramadi |
pUjeya mADidaru harana pAdagaLige
dhAreyanereda SIGradali (54)

cikkavaLu namma ariyada bAleyu
rakShisabEku pArvatiya |
pratyakSha Sivanige dhAreyaneredanu
utsAhadiMda girirAja (55)

I pariyali nAlku divasa saMBramadi
anEka utsavagaLa naDesi |
pinAkigU gaurigU nAgavalliya mADi
bEkeMbo uDugoreyanitta (56)

BakShya pAyasa dhRuta mRuShTAnnavu
madumakkaLellara paMktiyali |
citrAnnagaLiMda viprara uNisida
koTTano vILya dakShiNeya (57)

bAleyarige marada bAgina koTTu
baMdavarannu mannisida |
kadaLi teMginakAyi padumatAvare hUvu
araLu mallige hUvILyavanu (58)

paramESvaranige kANikeyittaru
nijaBaktarella vaMdisuttA |
aShTadikkina rAyarugaLu doregaLu
niShTheyiM tapadi RuShigaLu (59)

paTTavALiya cauLiyanodisidaru
pratyakSha SivagU pArvatigU |
pItAMbara seragina sIre haccaDa
nUtana divyAMbaravu (60)

prItIli nArAyaNaru Odisidaru
saMprItIli SivagU pArvatigU |
saNNaMcina sIre cinnada seragina
unnatta divyAMbaravu (61)

brahmadEvaru javaLiyanOdisidaru
pannagadharagU pArvatigU |
mitre mEnake muttina haseyiTTu
taTTeyalli hosa muttu tuMbi (62)

paTTeyanuDisi pArvatiya paTTanu
muttu sobalanu tuMbidaLu |
appikoLLuttA muddADi buddhi hELi
mitre mEnake girirAja (63)

akka pArvatI ninna biT hyAge iruvevu
artiyiMdali eMdaravaru |
hiDidariSina baNNa baMDAra vastu
vaDaveyu kaMcu muttugaLu (64)

harivANa peTTige javaLiya piMDiyu
magaLige baLuvaLiyitta |
rajatagiriya kailAsakke baMdaru
gRuhapravESada utsavadi (65)

hOdalli dEvapatniyaru Arutiyetti
nAgaBUShaNagU pArvatigU |
baMdalli dEvapatniyaru Arutiyetti
naMdivAhanagU pArvatigU (66)

niMdalli dEvapatniyaru Arutiyetti
caMdraSEKaragU pArvatigU |
baMdanu kailAsagiriyalli naMjuMDa
liMganiddanu haruShadali (67)

aMdhakAMtaka baMda kaMtusaMhara baMda
SaMkara Siva tAnu baMda |
kAMte pArvatidEvi sahita baMdAneMdu
saMtOShadi kahaLe hiDidaru (68)

sAravALiya sIre hUvina saragaLu
bEgadi Siva tarisidanu |
lakShmI sarasvati dEviyarigittanu
atyaMta adhika saMBramadi (69)

muttaide hELidare iTTOle sthiravAgi
akShilladavaru hELidare |
akShiyu baruvudu baDavaru hELidare
heccina padavi sEruvaru (70)

baraDe hELidare kaMdannettikoMbuvaLu
heLava hELidare naDeyuvanu |
maduveyilladavaru hELidare
vivAha odagutta kaMkaNa bahudu (71)

sOmavAra amAvAsye SivarAtri paurNami
pADyavu manemaMdiyella |
sOmaSEKarana vivAha hELidare
bEDidiShTArtha koDuvanu (72)

maMgaLa jayavenni maMgaLa SuBavenni
caMdraSEKara pArvatiyu |
kaMgaLu teredu kaTAkShadi nODalu
hiMguvudu sakala pApagaLu (73)

caMdraSEKara dEvi pArvati maduve
ceMdadiM hELi kELidare |
taMde puraMdara viThThala tAnolidu
kuMdade BAgya koDuvanu (74)

Leave a Reply

Your email address will not be published. Required fields are marked *

You might also like

error: Content is protected !!