Neenala Neenala – Trivikrama Panditacharya

Composer: Shri Bannanje Govindacharya on Shri Trivikrama Panditacharya

ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರು

ಮೂರು ವಿಕ್ರಮದ ಪೆಜತ್ತಾಯರನ್ನು ಸ್ತುತಿಸಿದ್ದು ಹೀಗೆ !

ನೀನಲಾ ನೀನಲಾ ನಿಜಕು ಪಂಡಿತವಕ್ಕಿ

ಕಾವು ಮಠದಲಿ ಕಾವುಕೂತ ಹಕ್ಕಿ

ಹುಳಹುಪ್ಪಟೆಯ ಕುಕ್ಕಿ ತಿನುತಿದ್ದ ಹಕ್ಕಿ

ಮತ್ತೆ ಅಮೃತವೆಸಿಕ್ಕಿ ಹಸಿವಳಿದ ಹಕ್ಕಿ    

ನೀನಲಾ ನೀನಲಾ……….

ಬೆಳ್ಳಿ ಮೂಡುವಮುನ್ನ ಮುಂಗೋಳಿ ಹಾಡಿದರೆ

ಬಳ್ಳಿಮಾಡದ ಮೋಡಿಗಾನಂದ ಉಕ್ಕಿದರೆ

ಹತ್ತು ತಿಳಿದವನು ಗುರುವಾಗಿ ಸಿಕ್ಕಿದರೆ

ಹತ್ತುವುದು ಸುಲಭವೋ ಗಾಳಿಗುದುರೆ

ನೀನಲಾ ನೀನಲಾ………..

ತತ್ತ್ವವಾದದಸವಿಯನುಂಡವನು ನೀನು

ತಾನುಂಡು ನಮಗೆಲ್ಲ ಉಣಿಸಿದವನು

ಉಣಿಸಿ ಉಣಿಸೀ ತಣಿಸಿ ಕುಣಿಸಿದವನು

ನಮ್ಮಾಹಂಕಾರವನು ಮಣಿಸಿದವನು

ನೀನಲಾ ನೀನಲಾ……….

ಕಿಟಕಿ ಬಾಗಿಲು ಜಡಿದು ಮಲಗಿದ್ದ ನಮ್ಮನ್ನು

ಭೂಪಾಳಿಯಲಿ ತಟ್ಟಿ ಎಚ್ಚರಿಸ ಬಂದವನು

ಮಿಂದು ಮಡಿಯುಟ್ಟು ಬಂದವರಿಗಿನ್ನು

ತಟ್ಟೆಯಲಿ ಸವಿಯೂಟ ಬಡಿಸಬಂದವನು

ನೀನಲಾ ನೀನಲಾ……….

ಕವಿಗಳಿಗೆ ಕವಿ ನೀನು ವಾದಿಗಳ ವಾದಿ

ನಿಜವನರಿಯಲಿಕೆಂದು ಬಹುಕಾಲ ಕಾದಿ

ಗುರುವಿನೆದುರೇ ನಿಂತು ಕಾದ ಛಲವಾದಿ

ಕಂಡೆ ನಿನ್ನದೆ ಮನೆಯ ಮರೆತ ಹಾದಿ

ನೀನಲಾ ನೀನಲಾ……….

ಕತ್ತಲೆಯಲಿದ್ದವಗೆ ದೀವಟಿಕೆಯಾದಿ

ಜಾರಿದವನಿಗೆ ಮತ್ತೆ ಪಾವಟಿಕೆಯಾದಿ

ಸುಳ್ಳರಿಗೆ ಕಳ್ಳರಿಗೆ ಭುಸುಗುಡುವ ಹಾವಾದಿ

ಶರಣೆಂದು ಬಂದವರ ಕಾಪಾಡಿದಿ

ನೀನಲಾ ನೀನಲಾ……….

ತೋರಯ್ಯ ದಾರಿಯನು ಹರದಾರಿ ಹರಿದಾರಿ

ದಾರಿತಪ್ಪಿದ ನಮಗೆ ನೀನುದಾರಿ

ನಮಗೆ ತಿಳಿದಿರುವುದೋ ಮೂರೆ ಮೂರು ದಾರಿ

ನಾಕನೆಯ ದಾರಿಯಲಿ ನೀ ವಿಹಾರಿ

ನೀನಲಾ ನೀನಲಾ……….

ನಿನ್ನ ವಂಶದ ಕುಡಿಯು ಹಾಡಿರುವ ಹಾಡು

ನಿನ್ನೆಡೆಗೆ ತುಡಿಯುತಿದೆ ಬಗೆಯ ಜಾಡು

ತತ್ತ್ವದೀಪದ ಗುರುವೆ ಕಣ್ತೆರೆದು ನೋಡು

ಓ ಪಂಡಿತವಕ್ಕಿ ನನ್ನೊಳಗೆ ಹಾಡು

ನೀನಲಾ ನೀನಲಾ……….


gurugaLAda bannaMje gOviMdAcAryaru

mUru vikramada pejattAyarannu stutisiddu hIge !

nInalA nInalA nijaku paMDitavakki

kAvu maThadali kAvukUta hakki

huLahuppaTeya kukki tinutidda hakki

matte amRutavesikki hasivaLida hakki    

nInalA nInalA……….

beLLi mUDuvamunna muMgOLi hADidare

baLLimADada mODigAnaMda ukkidare

hattu tiLidavanu guruvAgi sikkidare

hattuvudu sulaBavO gALigudure

nInalA nInalA………..

tattvavAdadasaviyanuMDavanu nInu

tAnuMDu namagella uNisidavanu

uNisi uNisI taNisi kuNisidavanu

nammAhaMkAravanu maNisidavanu

nInalA nInalA……….

kiTaki bAgilu jaDidu malagidda nammannu

BUpALiyali taTTi eccarisa baMdavanu

miMdu maDiyuTTu baMdavariginnu

taTTeyali saviyUTa baDisabaMdavanu

nInalA nInalA……….

kavigaLige kavi nInu vAdigaLa vAdi

nijavanariyalikeMdu bahukAla kAdi

guruvinedurE niMtu kAda CalavAdi

kaMDe ninnade maneya mareta hAdi

nInalA nInalA……….

kattaleyaliddavage dIvaTikeyAdi

jAridavanige matte pAvaTikeyAdi

suLLarige kaLLarige BusuguDuva hAvAdi

SaraNeMdu baMdavara kApADidi

nInalA nInalA……….

tOrayya dAriyanu haradAri haridAri

dAritappida namage nInudAri

namage tiLidiruvudO mUre mUru dAri

nAkaneya dAriyali nI vihAri

nInalA nInalA……….

ninna vaMSada kuDiyu hADiruva hADu

ninneDege tuDiyutide bageya jADu

tattvadIpada guruve kaNteredu nODu

O paMDitavakki nannoLage hADu

nInalA nInalA……….

Leave a Reply

Your email address will not be published. Required fields are marked *

You might also like

error: Content is protected !!