Shravana Shukravara haadu – Dirgha kriti

Composer : Shri Harapanahalli Bheemavva

ಹರನ ಕುಮಾರನ ಚರಣ ಕಮಲಗಳಿಗೆರಗಿ
ಶಾರದೆಗೆ ವಂದಿಸುತ
ಶರಧಿ ಶಯನಗೆ ಸೆರಗೊಡ್ಡಿ ಬೇಡಿಕೊಂಬೆ
ಶರಧಿಸುತೆಯ ಕಥೆಗೆ ವರವ (೧)

ಸಾಕ್ಷಾತ ಶ್ರೀಹರಿ ವಕ್ಷಸ್ಥಳ ವಾಸಿಯೇ
ಇಕ್ಷುಚಾಪದವನ ಪಡೆದ
ಮೋಕ್ಷದಾಯಕಳೇ ಮಾ ಲಕ್ಷುಮಿ ಕರುಣಾ-
ಕಟಾಕ್ಷದಿ ನೋಡಬೇಕೆನ್ನ (೨)

ಶ್ರಾವಣಮಾಸದಿ ಮೊದಲ ಶುಕ್ಕುರವಾರ
ಮಾಧವನರಸಿ ಮಾಲಕ್ಷ್ಮೀ ದೇವೇರ
ಮಹಿಮೆ ಕೊಂಡಾಡುವೋದೀ ಕಥೆ
ಕಿವಿಗೊಟ್ಟು ಕೇಳೋದು ಜನರು (೩)

ಬಡವ ಬ್ರಾಹ್ಮಣನೊಂದು ಪಟ್ಟಣದೊಳಗಿದ್ದ
ಮಡದಿ ಮಕ್ಕಳ ಸಹಿತಾಗಿ
ಹಿಡಿದು ತಂಬೂರಿ ತಂಬಿಗೆಯ ಗೋಪಾಳಕ್ಕೆ
ಬಿಡದೊಂದು ಮನೆಯ ತಿರುಗುತಲಿ (೪)

ಸೊಸೆಯರು ನಾಲ್ಕು ಮಂದಿಯು ಗಂಡುಮಕ್ಕಳೂ
ಹಸುಗೂಸುಗಳು ಮನೆತುಂಬಾ
ಅಶನ ವಸನವಿಲ್ಲ ಹಸಿದ ಮಕ್ಕಳಿಗೆ ಹಾಲು
ಮೊಸರು ಅನ್ನವು ಮೊದಲಿಲ್ಲ (೫)

ಅತಿಗುಣವಂತರು ಗತಿಯಿಲ್ಲ ಗ್ರಾಸಕ್ಕೆ
ಮಿತಭೋಜನವ ಮಾಡುವರು
ವ್ರತನೇಮ ನಿಷ್ಠೆ ನಿರುತ ದರಿದ್ರವನು
ಶ್ರೀಪತಿ ಸತಿ ದಯದಿ ನೋಡಿದಳು (೬)

ಒಂದು ದಿನದಿ ಬಂದ ಮಂದಿ ಮಂದಿರದಲ್ಲಿ
ಚೆಂದಾದ ಸುಣ್ಣ ಸಾರಣೆಯು
ರಂಗವಲ್ಲಿ ಚಿತ್ರ ಬಣ್ಣಕಾರಣೆ ಮನೆ
ಮುಂದೆ ತೋರಣ ಕಟ್ಟುತಿರಲು (೭)

ಮನೆಮನೆಯಲ್ಲಿ ಮಾಲಕ್ಷ್ಮೀದೇವೇರ
ಚಟ್ಟಿಗೆ ಬರೆವುದನು ತಾ ಕಂಡು
ಇದು ಏನು ನೋವಿ ಎನಗೆ ಹೇಳಬೇಕೆಂದು
ಘನ ಭಕ್ತಿಯಿಂದ ಕೇಳಿದನು (೮)

ಕ್ಷೀರಸಾಗರದಲ್ಲಿ ಹುಟ್ಟಿದ
ಮಾಲಕ್ಷ್ಮೀ ದೇವಿ ದೇವರ ಪಟ್ಟದರಸಿ
ಶ್ರಾವಣಮಾಸ ಸಂಪತ್ತು ಶುಕ್ಕುರವಾರ
ನಾವು ಪೂಜೆಯ ಮಾಡಬೇಕು (೯)

ಎನಗೊಂದು ಚಟ್ಟೆಗೆ ಬರೆದುಕೊಟ್ಟರೆ ಎನ್ನ
ಮನೆಯಲ್ಲಿ ಇಟ್ಟು ಪೂಜಿಪೆನು
ವಿನಯದಿಂದ ಹೇಳಿಕೊಂಡರೆ ಒಂದು ಚಟ್ಟಿಗೆ
ಬರೆದುಕೊಟ್ಟರು ಬಲಗೈಲಿ (೧೦)

ಸಿರಿದೇವಿ ಚಟ್ಟಿಗೆ ಹಿಡಿದು ಗೋಪಾಳಕ್ಕೆ
ಹೋದನು ಮನೆ ಮನೆಯಲ್ಲಿ
ಗೋಧಿ ಅಕ್ಕಿ ಬ್ಯಾಳಿ ಬೆಲ್ಲ ತುಪ್ಪವ ತಂದು
ನೀಡೋರು ಹಿಡಿ ಹಿಡಿರೆಂದು (೧೧)

ಕ್ಯಾದಿಗೆ ಕುಸುಮ ಮಲ್ಲಿಗೆ ಪತ್ರಫಲಗಳು
ಪೂಜಾ ಸಾಧನ ಪದಾರ್ಥಗಳು
ಆದಿಲಕ್ಷ್ಮಿ ದಯ ಆದ ಕಾರಣದಿಂದ
ಆದರದಿಂದ ಕೊಡುವರು (೧೨)

ತಂದ ಪದಾರ್ಥ ತನ್ನ ಹೆಂಡತಿ ಕರೆದು
ಮುಂದಿಟ್ಟು ವಾರ್ತೆಗಳ ಹೇಳಿದನು
ಇಂದಿರಾದೇವೇರ ಇಂದು ಪೂಜೆಯ ಮಾಡು
ಆನಂದವ ಕೊಡುವಳು ನಮಗೆ (೧೩)

ಕಬ್ಬು ಬಿಲ್ಲು ಹಿಡಿವೋ ಕಾಮನ ಮಾತೆ
ಮಾಲಕ್ಷ್ಮೀ ಉರ್ವಿಯೊಳು ಉತ್ತಮಳೀಕೆ
ಹಬ್ಬದೂಟಕೆ ಹೇಳಿ ಬಂದೆ ಬ್ರಾಹ್ಮಣಗೆ
ಮತ್ತೊಬ್ಬ ಮುತ್ತೈದೆಗೆ ಹೇಳೆಂದ (೧೪)

ಚಿಕ್ಕ ಸೊಸೆ ಎಣ್ಣೆ ಕುಂಕುಮ ಕೈಯಲ್ಲಿ
ತಕ್ಕೊಂಡು ನಡೆದಳು ಹಾದಿಯಲಿ
ಚೊಕ್ಕ ಚಿನ್ನದ ಗೊಂಬೆಯಂಥ ಮುತ್ತೈದೆ ತಾ
ಗಕ್ಕನೆ ಬಂದು ಕೇಳಿದಳು (೧೫)

ಹುಡುಗೀ ನೀ ಎತ್ತ ಪೋಗುವಿಯೇ ನಿಮ್ಮ
ಮನೆ ಎಲ್ಲೆ ಅಡಿಗೆ ಏನೇನು ಮಾಡುವರು
ಹಿಡಿದೆಣ್ಣೆ ಕುಂಕುಮ ಕೊಡುವುದು
ಇನ್ಯಾರಿಗೆ ಕೊಡಬಾರದೇನೆ ನೀ ಎನಗೆ (೧೬)

ದಾರಾದರೇನಮ್ಮ ದಾರಿ ನೋಡದ ಮುಂಚೆ
ನೀನೇ ಬಾ ನಮ್ಮ ಮಂದಿರಕೆ
ಹೇಳಿ ಮುತ್ತೈದೆಗೆ ಹಿಗ್ಗಿಲೆ ಬಂದು ಅತ್ತೆ
ಮಾವನ ಮುಂದೆ ಅರುಹಿದಳು (೧೭)

ಮನೆಯ ಸಾರಿಸಿ ಸುಣ್ಣ ಕಾರಣೆ ರಂಗೋಲಿಯ
ಬರೆದು ಬಾಗಿಲಿಗೆ ಬಣ್ಣವನು
ತಳಿರು ತೋರಣ ಕಟ್ಟಿ ಸರ್ವ ಸಂಭ್ರಮದಿಂದ
ಎರೆದುಕೊಂಡರು ಎಲ್ಲರೂ ಬೇಗ (೧೮)

ಕಮಲ ಕ್ಯಾದಿಗೆ ಕಬ್ಬು ಕದಳಿ ಕಂಬವು
ಬಾಳೆಗೊನೆ ಕಟ್ಟಿ ಚಿತ್ರ ಮಂಟಪವ
ಎಡಬಲದಲ್ಲಿ ನಾಲ್ಕು ನಂದಾದೀವಿಗೆ ಹಚ್ಚಿ
ನಡುವೆ ಹಾಕಿ ಪದ್ಮ ಪೀಠಗಳ (೧೯)

ಚಟ್ಟಿಗೆಯೊಳಗೆ ಅಕ್ಕಿ ಐದು ಫಲವ ತುಂಬಿ
ಮುತ್ತೈದೆಯರೆಲ್ಲಾ ನೆರೆದು ಕಟ್ಟಿದರು
ಕೊರಳ ಮಾಂಗಲ್ಯ ಮಾಲಕ್ಷ್ಮೀ ಪ್ರತಿಷ್ಠೆ
ಮಾಡಿದರು ಸಂಭ್ರಮದಿ (೨೦)

ಅರಿಷಿಣ ಕುಂಕುಮ ಗಂಧ ಬುಕ್ಕಿಟ್ಟು
ಗೆಜ್ಜೆವಸ್ತ್ರವು ಪಾರಿಜಾತ ಸಂಪಿಗೆಯು
ಮುಡಿಸಿ ಮಲ್ಲಿಗೆ ದಂಡೆ ಒಡೆಸಿ ತೆಂಗಿನಕಾಯಿ
ಉಡಿ ತುಂಬಿ ಉತ್ತತ್ತಿ ಫಲಗಳು (೨೧)

ಭಕ್ಷ್ಯ ಶ್ಯಾವಿಗೆ ಪರಮಾನ್ನ ಚಿತ್ರಾನ್ನ
ಸಣ್ಣಕ್ಕಿ ಶಾಲ್ಯಾನ್ನ ಸೂಪಗಳು
ಚಕ್ಕುಲಿ ಗಿಲಗಂಜಿ ಚೆಂದ ಚಿರೋಟಿ
ಹಪ್ಪಳ ಸಂಡಿಗೆ ಆಂಬೋಡೆಗಳು (೨೨)

ಸಕ್ಕರೆ ಘೃತ ಕ್ಷೀರ ಸಕಲ ಪಕ್ವಾನ್ನ
ಮಂಡಿಗೆ ಬೀಸೋರಿಗೆ ಗುಳ್ಳೋರಿಗೆಯು
ಚಂದ್ರನಂತೆ ಹೊಳೆವ ಶ್ಯಾವಿಗೆಯ ಫೇಣಿಯು
ದಿವ್ಯ ಬುಂದ್ಯ ಬುರುಬುರಿ ಅನಾರಸವು (೨೩)

ಬೇಕಾದ ಬೇಸನ್ನು ಬಿಳಿಯಾದ ಅರಳಿನುಂಡೆ
ಮೋತಿಚೂರು ಚೂರ್ಮಲಾಡು
ಸೇತು ಬಿಳುಪಿನ ಚಕ್ರದಂಥ ಜಿಲೇಬಿ
ಸುಕಿಯದುಂಡೆ ಮುಖವಿಲಾಸಗಳು (೨೪)

ಹೋಳಿಗೆ ಎಣ್ಣೋರಿಗೆ ಹೊಯ್ಗಡವು ಗೇಹೂರಿ
ಕಾಯಿಹಾಲು ಕರಿದ ಹೂರಣ ಕಡುಬು
ತೇಂತೋಳಿ ತಿರುವಿದ ಉದ್ದಿನಬೇಳೆ ಮೆಣಸು ಜೀರಿಗೆ
ಇಂಗು ಹಾಕಿದ ಉಪ್ಪಿನ ಕಡುಬು (೨೫)

ಸಾರು ಸಾಂಬಾರ ಪಡುವಲಕಾಯಿ ಪಳದ್ಯ
ಉಪ್ಪೇರಿ ಉಪ್ಪಿನಕಾಯಿರಸವು
ಖೀರು ಮಾಲತಿ ಗೌಲಿ ಪರಡಿ ಪರಮಾನ್ನ
ಮುಕ್ ಸೌರಿ ಚಟ್ಟಣಿ ಕೋಸಂಬರಿಯು (೨೬)

ಹಾಗಲವು ಹೀರೆ ಸೌತೆ ಹಂದರದ ಅವರೆ ಚೌಳಿ
ಬಾಳೆ ಬೆಂಡೆ ಕುಂಬಳವು
ಮಾಗಿದ ಹಲಸಿನ ಕಾಯಿ ಕಲಸಿ ಮೇಲೋಗರ
ಗೆಣಸು ಗುಳ್ಳದಕಾಯಿ ಬಜ್ಜಿಗಳು (೨೭)

ಸಬ್ಜಿಭಾತು ಸೌತೆಭಾತು ಕೇಸರೀ ಭಾತು
ಕೆನೆಕೆನೆ ಮೊಸರು ಒಗ್ಗರಣೆ
ಹಸಿ ಅಲ್ಲ ಬಿಸಿ ಹಾಲು ಹೊಸಬೆಣ್ಣೆ ಇಂಗುಪ್ಪು
ಕಲಸಿ ಬಕಾಳ ಭಾತುಗಳು (೨೮)

ಮುದ್ದು ಮಾಲಕ್ಷ್ಮೀ ನೈವೇದ್ಯ ಮಾಡಿದರು
ಅನಿರುದ್ಧ ಮೂರುತಿ ಸಹಿತಾಗಿ
ಶುದ್ಧ ಸುಣ್ಣವು ಎಲೆ ಅಡಿಕೆ ಏಲಕ್ಕಿ
ಪತ್ತರಿ ಕಾಯಿ ಕಾಚು ಲವಂಗ (೨೯)

ಹಚ್ಚಿಕೊಂಡರು ಎಲ್ಲ ಅರಿಷಿಣ ಗಂಧ ಕುಂಕುಮ
ಎತ್ತಿ ಚಾಮರವ ಬೀಸುವರು
ಅಚ್ಯುತನ ಅರಸಿ ಅನುಗ್ರಹದಿ ನೋಡಿದಳು
ಮೆಚ್ಚಿ ಮುಚ್ಚಿದ ಕಣ್ಣ ತೆಗೆದು (೩೦)

ಅಮರಾದಿ ಸುರರ ಒಡೆಯನ ರಾಣಿ ಲಕ್ಷ್ಮಿಗೆ
ಸರ್ವವ ಸಮರ್ಪಣ ಮಾಡಿ
ನಮೋ ನಮೋ ಎಂದು ಕೈಮುಗಿದು ಮಂತ್ರಾಕ್ಷತೆ
ಶಿರದಲ್ಲಿ ಹಾಕಿ ವರವ ಬೇಡುವರು (೩೧)

ಹಾಡುತ ಪಾಡುತ ಮಾಡುತಲಾರತಿ
ಬೇಡುತ ಮುಡಿದ ಮಲ್ಲಿಗೆಯ
ನೋಡುತ ನಲಿನಲಿದಾಡುತ ತಾ
ದಯಮಾಡುತ ಕೊಟ್ಟಳು ವರವ (೩೨)

ಹೊತ್ತು ಬಹಳವಾಯ್ತು ಮುತ್ತೈದೆ ಬರಲಿಲ್ಲ
ಮತ್ತೇನು ಇದಕೆ ಉಪಾಯ
ಅಷ್ಟು ಅಡಿಗೆ ಎಲೆ ಬಡಿಸಿ ಕುಂಕುಮ
ವೀಳ್ಯವಿಟ್ಟು ಪುಟ್ಟಿಯನು ಮುಚ್ಚಿದರು (೩೩)

ಗಂಡ ಹೆಂಡಿರು ಬಂದ ಬ್ರಾಹ್ಮಣರೊಡಗೂಡಿ
ಉಂಡು ವೀಳ್ಯವನೆ ತಕ್ಕೊಂಡು
ಇಂದು ನಮಗೆ ಜಯಶುಭಕಾಲ ಬಂದಿತೀಗ
ಎಂದು ಆನಂದ ಹೊಂದಿದರು (೩೪)

ಮರುದಿನ ಸಂಪತ್ತು ಶನಿವಾರ
ಹಿಟ್ಟಿನ ಕಡುಬು ಅಂಬಲಿ ಪರಮಾನ್ನ
ತಿಳಿ ತಿಳಿದೆಣ್ಣೆ ಹಿಂಡಿಯ ಪಲ್ಯ ಗೌರೀ ಪೂಜೆಯ
ಮಾಡಿ ಇಟ್ಟರು ನೈವೇದ್ಯವನು (೩೫)

ಎರಡನೇ ಶುಕ್ಕುರುವಾರ ಮುತ್ತೈದೆಗೆ
ಧೃಢವಾಗಿ ಹೇಳಿ ಬಾರೆನಲು
ಎಡಗೈಯ ಮುಚ್ಚಿಕೊಂಡು ಎಣ್ಣೆ ಕುಂಕುಮವನು
ನಡೆದಳು ಆಗ ಇನ್ನೊಬ್ಬ ಸೊಸೆಯು (೩೬)

ಬಾಜಾರ ಬಿಟ್ಟು ಬದಲು ಮಾರ್ಗ ಹಿಡಿಯಲು
ಹಾದಿಗೆ ಬಂದು ಅಡ್ಡಗಟ್ಟಿ
ಆದಿ ಶುಕ್ಕುರುವಾರ ಹೇಳಿ ಎನ್ನನ್ನು ಬಿಟ್ಟು
ನೀ ದಾರಿಗೆ ಹೇಳುವಿಯೇ ಭೋಜನಕೆ (೩೭)

ನಮ್ಮ ಗೊಡವೆ ಯಾತಕಮ್ಮ ನಿನಗೆ
ಸುಮ್ಮನೆ ಹೋಗು ಶುಕ್ಕುರುವಾರದಲಿ ನಿನ್ನ
ಎಲೆಯ ಬಡಿಸಿಟ್ಟಿದ್ದು ಇಂದಿಗೆ ಅದೆ
ಉಣಬೇಕಾದರೆ ಹೋಗಮ್ಮ (೩೮)

ತಂಗಳೂಟವನು ಉಂಬೋ ಕಂಗಾಲಿ ನಾನಲ್ಲ
ಬಂಗಾರದಂಥ ಮುತ್ತೈದೆ
ತಿಂಗಳಾಗಲಿ ಹಂಗುನೂಲು ಕಟ್ಟಿ ನಿನ್ನೆಲೆ
ತಂಗಳು ನಿನಗೆ ಉಣಿಸುವೆನು (೩೯)

ಬಡಿವಾರ ಮಾತು ಯಾಕೆ ಬಡಸಿಟ್ಟ ಎಲೆ ಉಂಬೋ
ಬಡವಿ ಅಲ್ಲ ನಾ ಭಾಗ್ಯವಂತೆ
ತಡೆಯದೆ ಬರುವೆನು ತಾ ಎಣ್ಣೆ ಕುಂಕುಮ
ಹಿಡಿದೆಳಕೊಂಡು ನಡೆದಳು (೪೦)

ಕೊಟ್ಟೆಣ್ಣೆ ಕುಂಕುಮ ತಟ್ಟನೆ ಬಂದಳು
ಅಷ್ಟು ವಾರ್ತೆಗಳ ಹೇಳಿದಳು
ದಿಟ್ಟ ಮುತ್ತೈದೆ ದೇಶದ ಮ್ಯಾಲೆ ಕಾಣೆನೆಂದು
ಎಷ್ಟು ಹೇಳಲಿ ಆಕೆಯ ಚೆಲ್ವಿಕೆಯ (೪೧)

ಅಡಿಗೆಯಾದವು ಗೌರೀಪೂಜೆಗಳಾದವು
ಬಡಿದವು ಮೂರು ಗಂಟೆಗಳು
ಉಡಿ ಕುಂಕುಮ ಅರಿಷಿಣ ಬಡಿಸಿಟ್ಟರು ಒಂದೆಲೆ
ಸಡಗರದಿಂದ ಉಂಡರಾಗ (೪೨)

ಮೂರನೇವಾರ ಮುತ್ತೈದೆಗೆ ಹೇಳುವರು
ಮತ್ತ್ಯಾರೆಂದು ವಿಚಾರ ಮಾಡುವರು
ಮಾವನವರೆ ಎನ್ನ ಮಾತು ನೋಡಿರಿ ಎಂದು ತಾ
ಹೋದಳು ಇನ್ನೊಬ್ಬ ಸೊಸೆಯು (೪೩)

ಮುಡಿಬಾಗಿ ಮುಚ್ಚಿ ಕೊಂಡೆಣ್ಣೆ ಕುಂಕುಮವನ್ನು
ಹಿಡಿದಳೂ ಇನ್ನೊಂದು ಓಣಿಯನು
ಬಡ ಬಡ ಬಂದು ಹಿಡಿದೆಣ್ಣೆ ಕುಂಕುಮ
ಕೊಡುವುದು ಇನ್ಯಾರಿಗೆ ಔತಣವ (೪೪)

ಔತಣವಲ್ಲಮ್ಮ ಅತಿ ಬಡವರು ನಾವು
ಗತಿಯಿಲ್ಲ ಗೌರಿ ಹಬ್ಬಕ್ಕೆ
ಸುತರು ಆಡ ಹೋಗ್ಯಾರ ಹುಡುಕುತಾ ಬಂದೆ
ಬಿಡು ದಾರಿ ಈ ಪರಿ ಬಯ್ಯುವರು ಎನ್ನ ಮನೆಯಲಿ (೪೫)

ಉಗುಲುತಗಲಿನ ಮಾತಿನ ಬಗೆಯ ನಾ ಬಲ್ಲೆನೆ
ಹಗರಣಗಿತ್ತಿ ನೀ ಹೌದೆ
ಮೊದಲ ಶುಕ್ಕುರುವಾರ ಹೇಳಿ ಎನ್ನನು ಬಿಟ್ಟು
ಬದಲು ಮುತ್ತೈದೆಗೆ ಹೇಳುವರೆ (೪೬)

ಎರಡು ವಾರ ಔತಣ ಬುರುಡಿ ಊಟಾಯಿತು
ಬರಡು ಎಮ್ಮೆ ಹೈನ ಉಂಡಂತೆ
ಕಡಲೆ ಹೂರಣ ಕಡುಬು ಕಟದಬೆಣ್ಣೆ
ಕಾಸಿ ತುಪ್ಪವ ಬಡಿಸು ಎನಗೆ (೪೭)

ಮೆಚ್ಚಿ ಕೊಂಡು ಆಕೆ ಮಾತಿಗೆ ಮರುಳಾದಳೂ
ಹಚ್ಚಿ ಕುಂಕುಮ ಎಣ್ಣೆ ಕೊಟ್ಟು
ನಿಶ್ಚಯವೇನಮ್ಮಾ ನೀ ಬರುವುದು ಎಂದರೆ
ಈ ಕ್ಷಣ ಬರುವೆನು ಹೋಗೆಂದಳು (೪೮)

ಬಂದು ಹೇಳಿದಳಾಕೆ ಚೆಂದ ಚೆಲ್ವಿಕೆ ಮಾತು
ಒಂದೊಂದು ಮಾಡಿ ವರ್ಣಿಸುತಾ
ಇಂದಾಕೆ ಮನಕೆ ಬಂದಂತೆ ಅಡಿಗೆ
ಮಾಡೋಣೆಂದು ಸಂತೋಷ ಪಡುವರು (೪೯)

ಕಡಲೆ ಹೂರಣ ಗಸಗಸೆ ಕೊಬ್ಬರಿ ಏಲಕ್ಕಿ
ಪುಡಿ ದ್ರಾಕ್ಷಿ ಉತ್ತತ್ತಿ ಹಳಕು
ಕಲಸಿ ಕಲ್ಲುಸಕ್ಕರೆ ಕರಿಗಡುಬು
ಬೆಣ್ಣೆ ಕಾಸೀ ತುಪ್ಪವು ಸೋಸಿಲಿಂದ (೫೦)

ಸಿರಿದೇವಿ ಪೂಜೆ ನೈವೇದ್ಯಗಳಾದವು
ಹೊರಗೆ ಹತ್ತು ತಾಸು ಮೀದವು
ಬರಲಿಲ್ಲ ಮುತ್ತೈದೆ ಎಂದು ಎಲೆ ಬಡಿಸಿಟ್ಟು
ಸರ್ವರೂ :ಊಟವನು ಮಾಡಿದರು (೫೧)

ಹುಟಿದ ಮ್ಯಾಲೆ ಇಂಥ ಕಡುಬು ಕಂಡಿದ್ದಿಲ್ಲ
ನಮ್ಮ ಹೊಟ್ಟೆಗೆ ಉಂಡವರು ನಾವಲ್ಲ
ಮುತ್ತೈದೆ ಪುಣ್ಯದಿಂದ ಈ ಊಟ ದೊರಕಿತು
ಎಂದು ಅಷ್ಟರೂ ನಗುತ ನುಡಿದರು (೫೨)

ನಾಲ್ಕನೇವಾರ ನಾ ಹೇಳಿ ಬರುವೆನೆಂದು
ಆಕೆ ಹೋದಳು ಹಿರಿಮಗನ ಅರಸಿ
ಬೇಕಾದವರು ಬಂದು ಹಾಕ್ಯಾಡಲಿ ಎನ ಕೂಡ
ಯಾಕೆ ಎನಗೆ ಒಬ್ಬರ ಭಿಡೆಯ (೫೩)

ದೊಡ್ಡ ಅಗಸೆಯ ಬಿಟ್ಟು ದಿಡ್ಡಿ ಬಾಗಿಲ ಮುಂದೆ
ಸದ್ದು ಮಾಡದೆ ಬರುತಿರಲು
ವಜ್ರದ ಗೊಂಬೆಯಂತೆ ಹೊಳೆವೋ ಮುತ್ತೈದೆ
ನಿಂತಿದ್ದಳಾಗ ಎದುರಿಗೆ ಬಂದು (೫೪)

ಸರ್ವರೊಳಗೆ ಹಿರಿಸೊಸಿಯು ನಾ ಎಂಬಂಥ
ಗರ್ವ ಅಹಂಕಾರದಿ ನೀನು
ಸರಿಯಾಗಿ ಮೂರುವಾರ ಹೇಳಿ ಬಿಟ್ಟು ಎನ್ನ
ಕರೆಯದೆ ಉಂಬುವ ಕಾರಣ ಏನೆ (೫೫)

ಕರಿಲಿಕ್ಕೆ ಬರಲಿಕ್ಕೆ ಕಾಣೆ ನಿಮ್ಮ ಮನೆ
ನಾನು ತಿರುಗೂವಿ ನಾರದರಂತೆ
ಇರುವ ಮಂದಿರವ ತೋರಿದರೆ ಈಗ ನಾ ಬಂದು
ಕರೆದುಣಿಸುವೆನು ನಿಮ್ಮನ್ನು (೫೬)

ದೂರುಂಟು ನಮ್ಮ ಮನೆ ದಾರಿ ಅಸಾಧ್ಯವು
ನೋಡಿ ಬಂದವರು ದಾರಿಲ್ಲ
ಆಹಾರ ನಿದ್ರೆ ಸಂಸಾರ ಸಮುದ್ರವ
ಮೀರಿದವರಿಗೆ ಕಾಂಬುವುದು ೫೭

ಮಧ್ಯಾಹ್ನದ ಹೊತ್ತಿಗೆ ಸಿದ್ಧಾಗಿ ಬರುವೆನು
ಭದ್ರವಾಗಿ ವಚನ ಕೊಡುವೆನು
ಶುಭವಾದಂಥ ಕೊಬ್ಬರಿ ಭಾರೀ ಬಟ್ಟಲು
ತರಿಸಿ ಹುರಿಗಡಲೆ ತುಂಬು ಉಡಿಯ (೫೮)

ಆಗರದೊಳಗಿನ ಅರಗಿಣಿ ಮರನೇರಿ
ಮಾಗಿದ ಫಲವ ಮೆದ್ದಂತೆ
ಬ್ಯಾಗ ಬಂದು ಈಗ ನಿಮ್ಮನೆಯಲ್ಲಿ
ಊಟವನುಂಡು ತೇಗುತ ತೃಪ್ತ್ಯಾಗಿ ಬರುವೆ ೫೯

ಮಾಯಾದೇವಿಯ ಮಾಯಾ ಮಾತಿಗೆ ಮರುಳಾಗಿ
ತಾ ಕೊಟ್ಟೆಳೆಣ್ಣೆ ಕುಂಕುಮವ
ನಾ ಹೋದ ಕಾರ್ಯ ಕಾಯಿ ಆಗೋದೇ ಹಣ್ಣೆಂದು
ಹೇಳಿಕೊಂಡಳು ಹೇಳಿ ಕೊಂಡಳು ಶಿಫಾರಸ್ಸು (೬೦)

ವರಗೌರಿ ಪೂಜೆ ನೈವೇದ್ಯಗಳಾದವು
ಹೊರಗೆ ಆರು ಗಂಟೆ ಬಡಿದವು
ಬರಿಯ ಭರಾಸು ಮಾತಿನ ಜಾಣೆ ಮುತ್ತೈದೆ
ಬರಲಿಲ್ಲವೆಂದು ನುಡಿದರು (೬೧)

ಮತ್ತೊಂದು ಎಲೆ ಬಡಿಸಿಟ್ಟು ಮೃಷ್ಟಾನ್ನಗಳ
ಅಷ್ಟರೂ ಊಟವನು ಮಾಡಿದರು
ಕರ್ಪೂರದ ಅಡಿಕೆ ವೀಳ್ಯಗಳ ತಕ್ಕೊಂಡರು
ಅತ್ಯಂತ ಹರುಷದಿಂದ ಇರುವರು (೬೨)

ಬಂದಿತೀಗ ಐದನೇವಾರ ಮುತ್ತೈದೆಗೆ
ಇಂದು ನೀ ಹೇಳಿಬಾರೆನುತಾ
ಹೆಂಡತಿ ಕರೆದು ಹೇಳಿದ ಕುಂಕುಮ ಎಣ್ಣೆ
ತಕ್ಕೊಂಡು ತಾ ನಡೆದಳು ಬ್ಯಾಗ (೬೩)

ಬೀದಿ ಬಿಟ್ಟು ಬದಲು ಹಾದಿಗೆ ಬಂದಳಾ
ಹಾದಿಗೆ ಬಂದು ಅಡ್ಡಗಟ್ಟಿ
ನೀ ದಯ ಮಾಡಿ ಬಂದೆ ಎನಗೆ ಔತಣವ
ಆದರದಿಂದ ಹೇಳುವುದಕೆ (೬೪)

ಜಪ್ಪಿಸಿಕೊಂಡು ಔತಣವ ತಕ್ಕೊಂಡು ನೀ
ತಪ್ಪಿಸಿಕೊಂಡು ಹೋಗುತಿರೆ
ಒಪ್ಪತ್ತಾದರೂ ಊಟ ಮಾಡದವರ ಮಾತಿಗೆ
ಒಪ್ಪಿಕೊಂಬುವುದು ಹ್ಯಾಗೆ ಹೇಳಮ್ಮಾ (೬೫)

ಬಂದ ಔತಣ ಗಂಡ ಮಕ್ಕಳು ಭಾಗ್ಯ
ಒಲ್ಲೆ ಎಂಬುವರು ಉಂಟೆ ಲೋಕದಲಿ
ಕಂಡಲ್ಲಿ ಔತಣ ಹೇಳಿ ಕರೆಯದೆ ಇರುವುದೇನು
ಚೆಂದವೇ ನಿಮ್ಮ ನಡತೆ (೬೬)

ಲಕ್ಷಣವಂತೆ ನಾ ಎದುರಿಗೆ ಬಂದರೆ
ಲಕ್ಷಣ ಶುಭ ಶಕುನಗಳು
ಇಕ್ಷು ಮ್ಯಾಲೆ ಜೇನು ಇಟ್ಟಂತೆ ಬಂದು ಈಗ
ಲಕ್ಷ್ಮೀ ಸರಿಗೆ ನಾ ಕೂಡುವೆನು (೬೭)

ಅವಕಾಶ ಕೊಡುವೆನು ಸಾವಕಾಶ ಅಡಿಗೆ ಮಾಡು
ದಿವಾಕರ ಮುಣುಗೋ ಕಾಲದಲಿ
ದನಕರು ಬರುವೋ ವ್ಯಾಳ್ಯಕ್ಕೆ ನಾ ಬರುವೆನು
ಮನಕೆ ಸಂದೇಹ ಬ್ಯಾಡಮ್ಮಾ (೬೮)

ಅಂಗಳ ಸಾರಿಸಿ ರಂಗು ಕಾರಣೆ ಕೊಟ್ಟು
ರಂಗವಲ್ಲಿಯ ಚಿತ್ರ ಬರೆದು
ಅಂಬರೂದಿನ ಕಡ್ಡಿ ಅರಮನೆ ಬಾಗಿಲ
ಮುಂದೆ ಒಂದು ಹಚ್ಚಿಡಿಸು ಹಿಲಾಲು (೬೯)

ಮಡಿಪೀತಾಂಬರವುಟ್ಟು ಮಡಿಸೀರೆಯನು ಬಿಟ್ಟು
ಕಡಗ ಕಂಕಣ ಕೈಯಲ್ಲಿಟ್ಟು
ಧೃಢವಾದ ಮುಕುರ ಒಂದಡ್ಡಿಕೆ
ಬುಗುಡಿ ಬಾವುಲಿ ಹೊಳೆಯುತಲಿ (೭೦)

ಕಂಚು ಕಳಶ ಕದಲಾರತಿ ತಕ್ಕೊಂಡು
ಮುಂಚೆ ಬಂದು ಎದುರುಗೊಂಡರೆ ಎನ್ನ
ಮಿಂಚಿನಂತೆ ಹೊಳೆವೋ ಚಿನ್ನದ ಹಲಗೆಯ ತೂಗೋ
ಮಂಚದಿ ಬಂದು ಕೂಡುವೆನು (೭೧)

ಅರಮನೆಯಲ್ಲಿ ನಾವಿರುವೋ ಮೂರಂಕಣ
ಮನೆ ಮುಂದೆ ಮುರುಕು ಚಪ್ಪರವು
ಮರದ ಮಣೆಯು ನಮ್ಮಲ್ಲಿರುವೋದು
ಚಿನ್ನದ ಹಲಗೆ ಮಂಚ ಎಲ್ಲಿ ತರುವೋಣ (೭೨)

ಮಡಿಸೀರೆ ಬಿಟ್ಟರೆ ಇನ್ನೊಂದು ಕೋರಿಗಳಿಲ್ಲ
ಮಡಿ ಪೀತಾಂಬರ ನಾ ಕಂಡಿಲ್ಲ
ಹರಡಿ ಕಂಕಣವೆಲ್ಲೆ ಕರಿಯ ಕಾಜಿನ ಬಳೆ
ಇರಲಮ್ಮ ನಿಮ್ಮ ದಯ ನಮಗೆ (೭೩)

ಬಂಗಾರದ ಬಾಳೆಲಿ ಬೆಳ್ಳಿ ಬಟ್ಟಲು
ಮಂಡಿಗೆ ಹಾಲು ತುಪ್ಪಗಳು
ಉಂಡು ಕೂಡುವೆನು ಕುಂದಣ ಕೆತ್ತಿದ
ತಬಕಿನಲಿ ತಂದು ನೀಡೆನಗೆ ತಾಂಬೂಲ (೭೪)

ಹುಟ್ಟಿದ ಮೇಲೆ ಈ ಬೆಟ್ಟಿಲಿ ಎಲೆಯ ಸುಣ್ಣ ಹಚ್ಚಿ
ಹಾಕಿಕೊಂಡು ನಾನರಿಯೆ
ಕರ್ಪೂರದ ಅಡಿಕೆ ಮುತ್ತಿನ ಸುಣ್ಣ ಎಳೆ
ಎಲೆಗೆ ಹಚ್ಚಿ ನೀ ಮಡಚಿ ಕೊಡು ಎನಗೆ (೭೫)

ಬಂಗಾರ ಎಂಬುದು ನಮ್ಮ ಕಂಗಳು ಕಂಡಿಲ್ಲ
ಮಂಗಳ ಸೂತ್ರದ ಒಂದು ಹೊರತು
ಕುಂದಣ ತಬಕು ಎಲ್ಲಿ ಒಡಕೊಂದು ಹಿತ್ತಾಳೆ
ತುಂಡಾದ ತಾಟೊಂದು ಇರುವುದು (೭೬)

ಬುಟ್ಟದಾರಿ ಬುಗುಡಿ ಅಂಚು ಜರತಾರಿ
ಅಚ್ಚು ಚಿನ್ನದ ಥಳಕಿರವೋ
ಕುಪ್ಪುಸ ಹೊಲಿಸಿಕೊಟ್ಟರೆ ಒಂದರೆ ಕ್ಷಣ
ತೊಟ್ಟು ನಿನಗೆ ಕೊಟ್ಟು ಬರುವೆ (೭೭)

ಹುಟ್ಟಾ ಬಡವರು ನಾವು ಅಷ್ಟದರಿದ್ರರು
ನಿತ್ಯ ಯಾತ್ರೆಯಲಿ ಬದುಕುವರು
ಚಿತ್ತಕ್ಕೆ ತಂದು ನೀವು ದಯಮಾಡಿ ಬರುವೋದು
ಎಂದು ಹಸ್ತವ ಮುಗಿದು ಹೇಳಿದಳು (೭೮)

ಕಡೆಯ ವಾರವು ಕಾಮಧೇನುವಿನಂತೆ ಬರುವೆನು
ಪಡೆದುಕೋ ಮನದ ಇಷ್ಟಾರ್ಥ
ನಡೆದು ಬರುವೆ ನಾಲ್ಕುವಾರದ ದಕ್ಷಿಣಿ
ಕೊಡು ನಾ ಬಿಡುವವಳಲ್ಲ (೭೯)

ಒಂದೊಂದು ಮಾತನಾಡವಳು ಮುತ್ತೈದೆ
ಬಾಯಿಂದ ಮುತ್ತು ಉದುರುವಂದದಲಿ
ಆನಂದದಿಂದ ಹಚ್ಚಿ ಕುಂಕುಮ ಎಣ್ಣೆ ಕೋಟ್ಟಾಗ
ಬಂದಳು ತನ್ನ ಮಂದಿರಕೆ (೮೦)

ಸಾಧ್ಯವಲ್ಲವು ಭಾಳ ಅಸಾಧ್ಯ ಮುತ್ತೈದೆ
ನಿಂತಿದ್ದಳು ಎನ್ನ ಎದುರಿಗೆ ಬಂದು
ನಿದ್ರೆಯೋ ಕನಸೋ ಎಚ್ಚರಿದ್ದಿಲ್ಲ ಎನಗೊಂದು
ನಿರ್ಧಾರವಾಗಿ ತಿಳಿಯದು (೮೧)

ಗತ್ತಿನ ಮಾತು ಚಮತ್ತು ಚಾತುರ್ಯ
ಸಂಪತ್ತಿನ ಸೌಭಾಗ್ಯವಂತೆ
ಎಷ್ಟು ಹೇಳಲಿ ಆಕೆ ಚೆಲ್ವಿಕೆ ಚೆಂದ
ಸಾಕ್ಷಾತ ವಿಷ್ಣುವನ್ನಾದರೂ ಮೋಹಿಸುವಳು (೮೨)

ನಮ್ಮ ಪುಣ್ಯದ ಫಲ ಒದಗಿ ಬಂದಿದ್ದರೆ
ಮನ್ನಿಸಿ ಮನೆಗೆ ಬರುವಳು
ಇನ್ನೇನು ಮಾಡೋಣ ಇದಕೆ ಎಂದು ಆಲೋಚಿಸಿ
ಇನ್ನೊಬ್ಬ ಮುತ್ತೈದೆಗೆ ಹೇಳಿದರು (೮೩)

ಪಾಲು ಸಕ್ಕರೆ ಪಂಚಭಕ್ಷ್ಯ ಪರಮಾನ್ನವು
ಸಾರು ಶಾಕಗಳು ಶಾಲ್ಯಾನ್ನ
ಮಾಲಕ್ಷ್ಮೀ ಪೂಜೆ ನೈವೇದ್ಯ ಮಾಡಿ
ಮಂಗಳಾರತಿ ಬೆಳಗುವರು (೮೪)

ಪಕ್ಷಿವಾಹನ ಪುರುಷೋತ್ತಮನಾದ
ಅಧೋಕ್ಷಜ ಆ ಪರಮಾತ್ಮನ
ಅಕ್ಷದ ಸುತ ಅಡಗುವ ಕಾಲವನ್ನು
ನಿರೀಕ್ಷಿಸಿ ನೋಡುತಿಹರು (೮೫)

ಅತ್ತ ಮಾಲಕ್ಷ್ಮೀ ತಾ ಪಚ್ಚಕರ್ಪೂರ ಪುನುಗಿನ
ಎಣ್ಣೆ ಸಂಪಿಗೆ ತೈಲ
ಕಸ್ತೂರಿ ಬೆರೆಸಿದ ಬಿಸಿನೀರು ಅರಿಷಿಣ
ಹಚ್ಚಿ ತಾ ಎರಕೊಂಡಳಾಗ (೮೬)

ಸುಳಿಗುರುಳು ಹಿಕ್ಕೆ ಬೈತಲೆ ತಿದ್ದಿ ತಳಪು ಹಾಕಿ
ಚೌರಿ ರಾಗಟೆ ಚಂದ್ರ ಗೊಂಡ್ಯ
ಗಿಳಿಗಿಜ್ಜೆ ಹೆರಳು ಬಂಗಾರ ಕ್ಯಾದಿಗೆ ಮ್ಯಾಲೆ
ಅರಳು ಮಲ್ಲಿಗೆ ಮಾಲೆ ಮುಡಿದು (೮೭)

ಬಿಚ್ಚಿ ನಾನುಟ್ಟಳು ಬಿಳಿಯ ಪೀತಾಂಬರ
ಅಚ್ಚ ಜರದ ಸೆರಗ ಹೊದ್ದು
ಕುತ್ತಣಿ ಕುಬುಸ ಮುತ್ತಿನ ಗೊಂಡ್ಯ ತೋಳಿಗೆ
ಕಟ್ಟುತಿದ್ದಳು ಬಾಜು ಬಂದು (೮೮)

ವಜ್ರದ ವಂಕಿಯು ನಾಗಮುರಿಗೆ ನಾಗಡ್ಡಿಕೆ
ಗೆಜ್ಜಡ್ಡಿಕೆಯು ಕೊರಳಲ್ಲಿ
ದೊಡ್ಡ ಸರಿಗೆ ಮ್ಯಾಲೆ ಅಡ್ಡಿಕೆ ಮುತ್ತಿನ ಕೆಂಪು
ಥಳಕು ಜಳಕು ಹೊಳೆಯುತಲಿ (೮೯)

ಪುತ್ಥಳಿಸರ ಏಕಾವಳಿ ಚಂದ್ರಹಾರ
ಕಟ್ಟಿದಳಾಗ ಕಂಠಿ ಕಟ್ಟಾಣಿ
ಪಚ್ಚ ಮಾಣಿಕ ರತ್ನಪದಕ ನಿರಿಗಳಲಿ
ಜತ್ತಾಗಿ ನಲಿದಾಡುತಿರಲು (೯೦)

ಪರಡಿ ಕಂಕಣ ಹಸ್ತಕಡಗ ಕಮಲದ್ವಾರ್ಯ
ನಡುವಿಗೆ ನವರತ್ನ ಪಚ್ಚೆ
ಬಿಡಿಮುತ್ತು ಬಿಗಿದ ವಜ್ರದ ವಾಲೆ ಬುಗುಡಿ
ಚಂದ್ರಮುರುವು ಮುತ್ತಿನ ಸರಪಳಿಯು (೯೧)

ಸಾಲುಕುಂದಣದ ಆಣಿ ಮುತ್ತಿನ ಮುಕುರ್ಯ
ಬುಲಾಕು ಬಲಕೆ ವಜ್ರದ ಹರಳು
ತೀಡಿ ಕಾಡಿಗೆ ಹಚ್ಚಿ ತಿದ್ದಿ ಕುಂಕುಮವ
ಹಣೆ ಮ್ಯಾಲೆ ಹಚ್ಚಿ ಜೋಳದಕುಡಿಯಂತೆ (೯೨)

ಪಿಲ್ಯ ಕಾಲುಂಗುರ ಲುಲ್ಲು ಪೈಜಣ ರುಳಿ
ಘಲ್ಲು ಘಲ್ಲೆಂತ ಹೆಜ್ಜೆನಿಡುತ
ಗೆಲ್ಲು ಮಿಂಚುಗಳಂತೆ ಥಳಥಳಿಸುತ
ಬೀದಿಯಲ್ಲಿ ಬಂದಳು ಗಜಗಮನೆ (೯೩)

ಬೆಳ್ಳನೆ ಬೆಳ್ಳಿಯ ಮಿಳ್ಳೆ ತನ್ನ ಉಂಗುರ
ಬೆರಳಿನಿಂದ ಹಿಡಿದು ಬೀಸುತಲಿ
ತೆಳ್ಳನೆ ಪಾದ ಪುತ್ಥಳಿಯಂತೆ ಹೊಳೆಯುತ
ಚಿನ್ನ ಬಳ್ಳಿಯಂದದಿ ಬಳುಕುತಲಿ (೯೪)

ರಾಜಾಧಿರಾಜರೆಲ್ಲರು ನಿಂತು ನೋಡುತ
ಲಾಜಾವರದ ಗೊಂಬೆಯಂತೆ
ಭೋಜನಕೆತ್ತ ಪೋಗುವಳೋ ನೋಡುವಣೆಂದು
ಬಹು ಜನರು ಹಿಂದೆ ನಡೆದರು (೯೫)

ದಾವಲೋಕದಿಂದ ಇಳಿದಿಲ್ಲಿ ಬಂದಳು
ದಾರ ಸತಿಯೋ ದಾರ ಸುತಳೋ
ಮೋರೆ ನೋಡಲು ಮೂರ್ಛೆ ಬರುವುದು ಒಯ್ಯಾರಿ
ಮುಂಗಾರು ಮಿಂಚುಗಳಂತೆ ತೋರುವಳು (೯೬)

ಇಂದ್ರನ ಶಚಿಯೋ ಚಂದ್ರಮನ ರೋಹಿಣಿಯೋ
ಸುಂದರ ಸೂರ್ಯನರಸಿ ಸಂಜ್ಞೆಯೋ
ಗಾಂಧರ್ವರರಸಿಯೋ ಗಗನದಿಂದ ಇಳಿದಂಥ
ಗಂಗಾ ಶ್ಯಾಮಲ ಸೀತಾಂಗನೆಯೋ (೯೭)

ರತಿಯೋ ರೇವತಿಯೋ ಅರುಂಧತಿಯೋ ಪಾರ್ವತಿಯೋ
ಭಾರತಿ ಭಾಗ್ಯವಂತೆ ಸರಸ್ವತಿಯೋ
ಪತಿಗಳು ಐವರು ಸತ್ಯ ಪಾಂಡವರರ ಅರಸಿ
ದ್ರೌಪದಿ ಬಂದಳಿಲ್ಲಿಗೆ ಎಂಬುವರು (೯೮)

ಸತ್ಯಭಾಮೋ ರುಕ್ಮಣೀ ಜಾಂಬವಂತೀ ಆಷ್ಟಮ
ಸ್ತ್ರೀಯರೊಳಿಗಿದಾರೋ ಇವತ್ತು
ಸಂಪತ್ತು ಶುಕ್ಕುರುವಾರ ಸಾಕ್ಷಾತ
ಲಕ್ಷ್ಮಿಯೇ ಬಂದಳು ಎಂಬುವರು (೯೯)

ಹಸ್ತವ ಮುಗಿವರು ಸಾಷ್ಟಾಂಗಕ್ಕೆರಗೋರು
ಇತ್ತ ಬನ್ನಿ ಎಂದು ಕರೆವರು
ಶ್ರೇಷ್ಠ ವೈಕುಂಠ ಮೋಕ್ಷಪುರ
ಮಾಲಕ್ಷ್ಮೀ ಬಿಟ್ಟಿಲ್ಲೆ ಬಂದಳೆಂಬುವರು (೧೦೦)

ಮುಡಿಬಾಗಿ ನಡೆಯುತ ಮುಡಿದ ಹೂವು ಉದುರುತಾ
ಮುಗುಳ್ನಗೆಯಿಂದ ತಾ ನಗುತಾ
ಎಡಬಲದಲಿ ಓರೆನೋಟವ ನೋಡುತಾ
ನಡೆದಳು ಬಡವರ ಮನೆಗೆ (೧೦೧)

ಸಿರಿ ಬಂದು ತಾ ಕಣ್ಣ ತೆರೆದು ನೋಡುತಲಿರೆ
ಅರಮನೆ ಆಯಿತು ಆ ಕ್ಷಣದಿ
ಸುರಗಿ ಮಲ್ಲಿಗೆ ಶ್ಯಾವಂತಿಗೆ ನಾನಾ ಫಲಗಳಿದ್ದ
ವನವಾಯಿತು ಆ ಮನೆ ಸುತ್ತ (೧೦೨)

ಗಚ್ಚಿನಂಗಳ ವೃಂದಾವನ ಕಟ್ಟೆ
ಕಾರಂಜಿ ಹಚ್ಚನೆ ಗಿಳಿ ಹಂಸ
ಗರುಡ ಪಕ್ಷಿ ನವಿಲು ಪಾರಿವಾಳ
ಪಾಂಚಾಲಿ ವೃಕ್ಷ ಅಶ್ವತ್ಥಗಿಡಗಳು (೧೦೩)

ಪಚ್ಚದಂತೆ ಹೊಳೆವೋ ಶ್ರೀ ತುಳಸಿದೇವಿಯರಲ್ಲಿ
ಅಚ್ಚ ವಜ್ರದ ಗೊಂಬೆಯಂತೆ
ಲಕ್ಷ್ಮಿ ತಾ ನಲಿನಲಿಯುತಲಿ ರಚಿತವಾದ
ಕುರ್ಚಿಯಲಿ ಬಂದು ಕೂಡುವಳು (೧೦೪)

ಬಡವನ ಮಡದಿಗೆ ಒಡವೆ ವಸ್ತ್ರವಾದವು
ಹರಡಿ ಕಂಕಣವು ಕೈಯಲ್ಲಿ
ಮಡಿಸೀರೆ ಉಟ್ಟಿದ್ದು ಹೋಗಿ ಮಡಿಪೀತಾಂಬರವಾಯ್ತು
ಅಡಿಗೆರಗಿ ಎದುರುಗೊಂಬುವರು (೧೦೫)

ಗಂಧ ಕುಂಕುಮ ಅರಿಷಿಣ ದಿವ್ಯ ಬುಕ್ಕಿಟ್ಟು
ತಂದು ಹಚ್ಚಿ ಕಾಲ ಜಾವಡಿಯ
ದುಂಡು ಮಲ್ಲಿಗೆ ಪಾರಿಜಾತ ಸಂಪಿಗೆ ಮಾಲೆ
ದಂಡೆ ಮುಡಿಸಿ ಜಡೆಮುಡಿಗೆ (೧೦೬)

ಕದಳಿ ಫಲಗಳು ಕೊಬ್ಬರಿಬಟ್ಟಲೊಳಗೆ
ಹುರಿಗಡಲೆ ಹಾಕಿ ಉಡಿಯ ತುಂಬುವರು
ಹಿಡಿದು ಕುಂದಣದ ಹರಿವಾಣದೊಳು ಹಾಡಿ
ಪಾಡುತ ಮಾಡಿ ಮುತ್ತಿನಾರತಿಯ (೧೦೭)

ಇಂದಿರಾದೇವಿ ಆನಂದದಿ ಕುಳಿತಿರೆ
ಇಂದ್ರಾದಿ ಸುರರು ನೋಡುತಲಿ
ಮಂದಾರ ಮಲ್ಲಿಗೆ ಮಳೆಯ ಕರೆದರಾಗ
ದುಂದುಭಿ ಭೇರಿ ಬಡಿದವು(೧೦೮)

ಎಡಬಲದಲ್ಲಿ ಚಾಮರವನ್ನು ಬೀಸೋರು
ಹಿಡಿದು ಹಿಲಾಲು ನೋಡುವರು
ಬಿಡಿಮಲ್ಲಿಗೆ ತಂದು ನಡೆಮುಡಿ ಹಾಸೋರು
ಸಡಗರದಿಂದ ಎದ್ದಳಾಗ (೧೦೯)

ಲಕ್ಕುಮಿದೇವಿ ತಾ ಗಕ್ಕನೆ ಬಂದಳು
ಹೊಕ್ಕಳು ದೇವರ ಮನೆಯ
ಚೊಕ್ಕ ಚಿನ್ನದ ಕೊಡವಾಗಿ ತಾ ತೂಗೋ
ಮಾಣಿಕ್ಯ ಮಂಚದಲು ಕೂಡುವಳು (೧೧೦)

ರನ್ನ ಮಾಣಿಕ್ಯ ರತ್ನ ಹೊನ್ನಹಣವು ಚೊಕ್ಕ
ಚಿನ್ನದ ಮೊಹರ ವರಾಹಗಳು
ಬಣ್ಣದ ಹವಳ ಮುತ್ತು ಭಾರಿ
ಬಂಗಾರದಂದಿಗೆಯ ಬಿಂದಿಗೆ ನೋಡುತಿಹರು (೧೧೧)

ಶುಕ್ಕುರುವಾರ ಶುಭಕಾಲ ಇವರಿಗೆ
ಸಿಕ್ಕಳು ಸಿಂಧುನಂದನೆಯು
ಬೊಕ್ಕಸದ ಭಾಗ್ಯ ಭಂಡಾರದ ಜಯಲಕ್ಷ್ಮೀ
ದಕ್ಕಿದಳು ಇವರಿಗೆ ಎಂಬುವರು (೧೧೨)

ಕರ್ಪೂರದಾರತಿ ಮಾಡಿ ಕಾಯಿ ಒಡೆದು
ಬುಕ್ಕಿಟ್ಟು ಕುಂಕುಮ ಹಚ್ಚುವರು
ಪಟ್ಟಣದ ಜನರು ಪತ್ತಲ ಸೀರಿ ಕುಪ್ಪುಸ
ಲಕ್ಷ್ಮಿಗೆ ಉಡುಗೊರೆಯ ಕೊಡುವರು (೧೧೩)

ನಾಲ್ಕುವಾರದ ಎಲೆ ತೆಗೆದು ನೋಡುತಲಿರೆ
ಹಾಕಿದ ಅನ್ನವು ಆಣಿಮುತ್ತು
ಶಾಕ ಪಾಕವು ಪಲ್ಯ ಪರಮಾನ್ನ ಭಕ್ಷ್ಯ
ಬಂಗಾರ ರಜತ ಬಾಳೆಯೆಲೆಯು (೧೧೪)

ಬಂದು ನೋಡುತ ನಾಲ್ಕು ಮಂದಿ ಸೊಸೆಯರು
ಹಂಚಿಕೊಂಡರು ಆಗ ಒಂದೊಂದು ಎಲೆಗಳ
ಹಿಂದೆ ಮಾಡಿದ ಪುಣ್ಯ ಒಂದು ಒದಗಿತು
ನಮಗೆಂದು ಸಂತೋಷ ಪಡುವರು (೧೧೫)

ಬಂದ ಮುತ್ತೈದೆ ಬ್ರಾಹ್ಮಣರೊಡಗೂಡಿ
ಕೊಂಡುಂಡು ವೀಳ್ಯವನೆ ತಕ್ಕೊಂಡು
ಮಂದಗಮನೆ ಲಕ್ಷ್ಮೀ ಮಹಿಮೆ
ಕೊಂಡಾಡುತ ಆನಂದವಾಗಿ ಇರುತ್ತಿದರವರು (೧೧೬)

ಮುದದಿಂದ ಮೂರ್ಜಗದ ಒಡೆಯ ನಾರಾಯಣನ
ಎದೆಯಲ್ಲಿ ಇರವೋ ಲಕ್ಷ್ಮೀ ನಮ್ಮ
ಸದನಕೆ ಬಂದು ಸಂಪತ್ತು ಶುಕ್ಕುರುವಾರ
ಸಮ ದೃಷ್ಟಿಯಿಂದ ನೋಡುವಳು (೧೧೭)

ಕಿವುಡಗೆ ಕಿವಿ ಕುರುಡಗೆ ಕಣ್ಣು ಬರುವುದು
ಬರಡು ಆಕಳು ಹೈನವಾಗುವುದು
ಹಡೆಯದ ಬಂಜೆ ಹೊಟ್ಟೆ ಮಕ್ಕಳಾಗೋರು
ಪಡೆವರೋ ಇಷ್ಟಫಲಗಳ (೧೧೮)

ದನಕರು ತಳಿಯಾಗಿ ಧನಧಾನ್ಯ ಬೆಳೆಯಾಗಿ
ಸದಾಕಾಲ ಶುಭಕಾರ್ಯವಾಗಿ
ಬಳೆ ಕುಂಕುಮ ಅರಿಷಿಣ ಮಾಂಗಲ್ಯ
ಮುತ್ತೈದೆತನವ ಕೊಟ್ಟು ವರವ ನೀಡುವಳು (೧೧೯)

ಬಡವರ ಮನೆಗೆ ನಡೆದು ಬಂದು ಭಾಗ್ಯದ
ಕೊಡವಾಗಿ ಕೂತಂತ ಕಥೆಯು
ಧೃಢಭಕ್ತಿಯಿಂದ ಹೇಳಿ ಕೇಳಿದ ಜನರಿಗೆ
ಕೊಡುವಳು ಸಕಲ ಸಂಪತ್ತು (೧೨೦)

ಸಾಮಜವರದ ಸುಧಾಮನ ಸಖನಾದ
ಸ್ವಾಮಿ ಶ್ರೀಹರಿ ಮೋಹದ ಅರಸಿ
ಶ್ರೀಮಹಾಲಕ್ಷ್ಮೀ ಪೂಜೆಯ ಮಾಡಿದವರಿಗೆ
ಭೀಮೇಶಕೃಷ್ಣ ತಾ ಒಲಿವ (೧೨೧)

ಶ್ರೀ ಕೃಷ್ಣಾರ್ಪಣಮಸ್ತು


SrAvaNa SukravAra hADu

harana kumArana caraNa kamalagaLigeragi
SAradege vaMdisuta
Saradhi Sayanage seragoDDi bEDikoMbe
Saradhisuteya kathege varava (1)

sAkShAta SrIhari vakShasthaLa vAsiyE
ikShucApadavana paDeda
mOkShadAyakaLE mA lakShumi karuNA-
kaTAkShadi nODabEkenna (2)

SrAvaNamAsadi modala SukkuravAra
mAdhavanarasi mAlakShmI dEvEra
mahime koMDADuvOdI kathe
kivigoTTu kELOdu janaru (3)

baDava brAhmaNanoMdu paTTaNadoLagidda
maDadi makkaLa sahitAgi
hiDidu taMbUri taMbigeya gOpALakke
biDadoMdu maneya tirugutali (4)

soseyaru nAlku maMdiyu gaMDumakkaLU
hasugUsugaLu manetuMbA
aSana vasanavilla hasida makkaLige hAlu
mosaru annavu modalilla (5)

atiguNavaMtaru gatiyilla grAsakke
mitaBOjanava mADuvaru
vratanEma niShThe niruta daridravanu
SrIpati sati dayadi nODidaLu (6)

oMdu dinadi baMda maMdi maMdiradalli
ceMdAda suNNa sAraNeyu
raMgavalli citra baNNakAraNe mane
muMde tOraNa kaTTutiralu (7)

manemaneyalli mAlakShmIdEvEra
caTTige barevudanu tA kaMDu
idu Enu nOvi enage hELabEkeMdu
Gana BaktiyiMda kELidanu (8)

kShIrasAgaradalli huTTida
mAlakShmI dEvi dEvara paTTadarasi
SrAvaNamAsa saMpattu SukkuravAra
nAvu pUjeya mADabEku (9)

enagoMdu caTTege baredukoTTare enna
maneyalli iTTu pUjipenu
vinayadiMda hELikoMDare oMdu caTTige
baredukoTTaru balagaili (10)

siridEvi caTTige hiDidu gOpALakke
hOdanu mane maneyalli
gOdhi akki byALi bella tuppava taMdu
nIDOru hiDi hiDireMdu (11)

kyAdige kusuma mallige patraPalagaLu
pUjA sAdhana padArthagaLu
AdilakShmi daya Ada kAraNadiMda
AdaradiMda koDuvaru (12)

taMda padArtha tanna heMDati karedu
muMdiTTu vArtegaLa hELidanu
iMdirAdEvEra iMdu pUjeya mADu
AnaMdava koDuvaLu namage (13)

kabbu billu hiDivO kAmana mAte
mAlakShmI urviyoLu uttamaLIke
habbadUTake hELi baMde brAhmaNage
mattobba muttaidege hELeMda (14)

cikka sose eNNe kuMkuma kaiyalli
takkoMDu naDedaLu hAdiyali
cokka cinnada goMbeyaMtha muttaide tA
gakkane baMdu kELidaLu (15)

huDugI nI etta pOguviyE nimma
mane elle aDige EnEnu mADuvaru
hiDideNNe kuMkuma koDuvudu
inyArige koDabAradEne nI enage (16)

dArAdarEnamma dAri nODada muMce
nInE bA namma maMdirake
hELi muttaidege higgile baMdu atte
mAvana muMde aruhidaLu (17)

maneya sArisi suNNa kAraNe raMgOliya
baredu bAgilige baNNavanu
taLiru tOraNa kaTTi sarva saMBramadiMda
eredukoMDaru ellarU bEga (18)

kamala kyAdige kabbu kadaLi kaMbavu
bALegone kaTTi citra maMTapava
eDabaladalli nAlku naMdAdIvige hacci
naDuve hAki padma pIThagaLa (19)

caTTigeyoLage akki aidu Palava tuMbi
muttaideyarellA neredu kaTTidaru
koraLa mAMgalya mAlakShmI pratiShThe
mADidaru saMBramadi (20)

ariShiNa kuMkuma gaMdha bukkiTTu
gejjevastravu pArijAta saMpigeyu
muDisi mallige daMDe oDesi teMginakAyi
uDi tuMbi uttatti PalagaLu (21)

BakShya SyAvige paramAnna citrAnna
saNNakki SAlyAnna sUpagaLu
cakkuli gilagaMji ceMda cirOTi
happaLa saMDige AMbODegaLu (22)

sakkare GRuta kShIra sakala pakvAnna
maMDige bIsOrige guLLOrigeyu
caMdranaMte hoLeva SyAvigeya PENiyu
divya buMdya buruburi anArasavu (23)

bEkAda bEsannu biLiyAda araLinuMDe
mOticUru cUrmalADu
sEtu biLupina cakradaMtha jilEbi
sukiyaduMDe muKavilAsagaLu (24)

hOLige eNNOrige hoygaDavu gEhUri
kAyihAlu karida hUraNa kaDubu
tEMtOLi tiruvida uddinabELe meNasu jIrige
iMgu hAkida uppina kaDubu (25)

sAru sAMbAra paDuvalakAyi paLadya
uppEri uppinakAyirasavu
KIru mAlati gauli paraDi paramAnna
muk sauri caTTaNi kOsaMbariyu (26)

hAgalavu hIre saute haMdarada avare cauLi
bALe beMDe kuMbaLavu
mAgida halasina kAyi kalasi mElOgara
geNasu guLLadakAyi bajjigaLu (27)

sabjiBAtu sauteBAtu kEsarI BAtu
kenekene mosaru oggaraNe
hasi alla bisi hAlu hosabeNNe iMguppu
kalasi bakALa BAtugaLu (28)

muddu mAlakShmI naivEdya mADidaru
aniruddha mUruti sahitAgi
Suddha suNNavu ele aDike Elakki
pattari kAyi kAcu lavaMga (29)

haccikoMDaru ella ariShiNa gaMdha kuMkuma
etti cAmarava bIsuvaru
acyutana arasi anugrahadi nODidaLu
mecci muccida kaNNa tegedu (30)

amarAdi surara oDeyana rANi lakShmige
sarvava samarpaNa mADi
namO namO eMdu kaimugidu maMtrAkShate
Siradalli hAki varava bEDuvaru (31)

hADuta pADuta mADutalArati
bEDuta muDida malligeya
nODuta nalinalidADuta tA
dayamADuta koTTaLu varava (32)

hottu bahaLavAytu muttaide baralilla
mattEnu idake upAya
aShTu aDige ele baDisi kuMkuma
vILyaviTTu puTTiyanu muccidaru (33)

gaMDa heMDiru baMda brAhmaNaroDagUDi
uMDu vILyavane takkoMDu
iMdu namage jayaSuBakAla baMditIga
eMdu AnaMda hoMdidaru (34)

marudina saMpattu SanivAra
hiTTina kaDubu aMbali paramAnna
tiLi tiLideNNe hiMDiya palya gaurI pUjeya
mADi iTTaru naivEdyavanu (35)

eraDanE SukkuruvAra muttaidege
dhRuDhavAgi hELi bArenalu
eDagaiya muccikoMDu eNNe kuMkumavanu
naDedaLu Aga innobba soseyu (36)

bAjAra biTTu badalu mArga hiDiyalu
hAdige baMdu aDDagaTTi
Adi SukkuruvAra hELi ennannu biTTu
nI dArige hELuviyE BOjanake (37)

namma goDave yAtakamma ninage
summane hOgu SukkuruvAradali ninna
eleya baDisiTTiddu iMdige ade
uNabEkAdare hOgamma (38)

taMgaLUTavanu uMbO kaMgAli nAnalla
baMgAradaMtha muttaide
tiMgaLAgali haMgunUlu kaTTi ninnele
taMgaLu ninage uNisuvenu (39)

baDivAra mAtu yAke baDasiTTa ele uMbO
baDavi alla nA BAgyavaMte
taDeyade baruvenu tA eNNe kuMkuma
hiDideLakoMDu naDedaLu (40)

koTTeNNe kuMkuma taTTane baMdaLu
aShTu vArtegaLa hELidaLu
diTTa muttaide dESada myAle kANeneMdu
eShTu hELali Akeya celvikeya (41)

aDigeyAdavu gaurIpUjegaLAdavu
baDidavu mUru gaMTegaLu
uDi kuMkuma ariShiNa baDisiTTaru oMdele
saDagaradiMda uMDarAga (42)

mUranEvAra muttaidege hELuvaru
mattyAreMdu vicAra mADuvaru
mAvanavare enna mAtu nODiri eMdu tA
hOdaLu innobba soseyu (43)

muDibAgi mucci koMDeNNe kuMkumavannu
hiDidaLU innoMdu ONiyanu
baDa baDa baMdu hiDideNNe kuMkuma
koDuvudu inyArige autaNava (44)

autaNavallamma ati baDavaru nAvu
gatiyilla gauri habbakke
sutaru ADa hOgyAra huDukutA baMde
biDu dAri I pari bayyuvaru enna maneyali (45)

ugulutagalina mAtina bageya nA ballene
hagaraNagitti nI haude
modala SukkuruvAra hELi ennanu biTTu
badalu muttaidege hELuvare (46)

eraDu vAra autaNa buruDi UTAyitu
baraDu emme haina uMDaMte
kaDale hUraNa kaDubu kaTadabeNNe
kAsi tuppava baDisu enage (47)

mecci koMDu Ake mAtige maruLAdaLU
hacci kuMkuma eNNe koTTu
niScayavEnammA nI baruvudu eMdare
I kShaNa baruvenu hOgeMdaLu (48)

baMdu hELidaLAke ceMda celvike mAtu
oMdoMdu mADi varNisutA
iMdAke manake baMdaMte aDige
mADONeMdu saMtOSha paDuvaru (49)

kaDale hUraNa gasagase kobbari Elakki
puDi drAkShi uttatti haLaku
kalasi kallusakkare karigaDubu
beNNe kAsI tuppavu sOsiliMda (50)

siridEvi pUje naivEdyagaLAdavu
horage hattu tAsu mIdavu
baralilla muttaide eMdu ele baDisiTTu
sarvarU :UTavanu mADidaru (51)

huTida myAle iMtha kaDubu kaMDiddilla
namma hoTTege uMDavaru nAvalla
muttaide puNyadiMda I UTa dorakitu
eMdu aShTarU naguta nuDidaru (52)

nAlkanEvAra nA hELi baruveneMdu
Ake hOdaLu hirimagana arasi
bEkAdavaru baMdu hAkyADali ena kUDa
yAke enage obbara BiDeya (53)

doDDa agaseya biTTu diDDi bAgila muMde
saddu mADade barutiralu
vajrada goMbeyaMte hoLevO muttaide
niMtiddaLAga edurige baMdu (54)

sarvaroLage hirisosiyu nA eMbaMtha
garva ahaMkAradi nInu
sariyAgi mUruvAra hELi biTTu enna
kareyade uMbuva kAraNa Ene (55)

karilikke baralikke kANe nimma mane
nAnu tirugUvi nAradaraMte
iruva maMdirava tOridare Iga nA baMdu
kareduNisuvenu nimmannu (56)

dUruMTu namma mane dAri asAdhyavu
nODi baMdavaru dArilla
AhAra nidre saMsAra samudrava
mIridavarige kAMbuvudu 57

madhyAhnada hottige siddhAgi baruvenu
BadravAgi vacana koDuvenu
SuBavAdaMtha kobbari BArI baTTalu
tarisi hurigaDale tuMbu uDiya (58)

AgaradoLagina aragiNi maranEri
mAgida Palava meddaMte
byAga baMdu Iga nimmaneyalli
UTavanuMDu tEguta tRuptyAgi baruve 59

mAyAdEviya mAyA mAtige maruLAgi
tA koTTeLeNNe kuMkumava
nA hOda kArya kAyi AgOdE haNNeMdu
hELikoMDaLu hELi koMDaLu SiPArassu (60)

varagauri pUje naivEdyagaLAdavu
horage Aru gaMTe baDidavu
bariya BarAsu mAtina jANe muttaide
baralillaveMdu nuDidaru (61)

mattoMdu ele baDisiTTu mRuShTAnnagaLa
aShTarU UTavanu mADidaru
karpUrada aDike vILyagaLa takkoMDaru
atyaMta haruShadiMda iruvaru (62)

baMditIga aidanEvAra muttaidege
iMdu nI hELibArenutA
heMDati karedu hELida kuMkuma eNNe
takkoMDu tA naDedaLu byAga (63)

bIdi biTTu badalu hAdige baMdaLA
hAdige baMdu aDDagaTTi
nI daya mADi baMde enage autaNava
AdaradiMda hELuvudake (64)

jappisikoMDu autaNava takkoMDu nI
tappisikoMDu hOgutire
oppattAdarU UTa mADadavara mAtige
oppikoMbuvudu hyAge hELammA (65)

baMda autaNa gaMDa makkaLu BAgya
olle eMbuvaru uMTe lOkadali
kaMDalli autaNa hELi kareyade iruvudEnu
ceMdavE nimma naDate (66)

lakShaNavaMte nA edurige baMdare
lakShaNa SuBa SakunagaLu
ikShu myAle jEnu iTTaMte baMdu Iga
lakShmI sarige nA kUDuvenu (67)

avakASa koDuvenu sAvakASa aDige mADu
divAkara muNugO kAladali
danakaru baruvO vyALyakke nA baruvenu
manake saMdEha byADammA (68)

aMgaLa sArisi raMgu kAraNe koTTu
raMgavalliya citra baredu
aMbarUdina kaDDi aramane bAgila
muMde oMdu hacciDisu hilAlu (69)

maDipItAMbaravuTTu maDisIreyanu biTTu
kaDaga kaMkaNa kaiyalliTTu
dhRuDhavAda mukura oMdaDDike
buguDi bAvuli hoLeyutali (70)

kaMcu kaLaSa kadalArati takkoMDu
muMce baMdu edurugoMDare enna
miMcinaMte hoLevO cinnada halageya tUgO
maMcadi baMdu kUDuvenu (71)

aramaneyalli nAviruvO mUraMkaNa
mane muMde muruku capparavu
marada maNeyu nammalliruvOdu
cinnada halage maMca elli taruvONa (72)

maDisIre biTTare innoMdu kOrigaLilla
maDi pItAMbara nA kaMDilla
haraDi kaMkaNavelle kariya kAjina baLe
iralamma nimma daya namage (73)

baMgArada bALeli beLLi baTTalu
maMDige hAlu tuppagaLu
uMDu kUDuvenu kuMdaNa kettida
tabakinali taMdu nIDenage tAMbUla (74)

huTTida mEle I beTTili eleya suNNa hacci
hAkikoMDu nAnariye
karpUrada aDike muttina suNNa eLe
elege hacci nI maDaci koDu enage (75)

baMgAra eMbudu namma kaMgaLu kaMDilla
maMgaLa sUtrada oMdu horatu
kuMdaNa tabaku elli oDakoMdu hittALe
tuMDAda tAToMdu iruvudu (76)

buTTadAri buguDi aMcu jaratAri
accu cinnada thaLakiravO
kuppusa holisikoTTare oMdare kShaNa
toTTu ninage koTTu baruve (77)

huTTA baDavaru nAvu aShTadaridraru
nitya yAtreyali badukuvaru
cittakke taMdu nIvu dayamADi baruvOdu
eMdu hastava mugidu hELidaLu (78)

kaDeya vAravu kAmadhEnuvinaMte baruvenu
paDedukO manada iShTArtha
naDedu baruve nAlkuvArada dakShiNi
koDu nA biDuvavaLalla (79)

oMdoMdu mAtanADavaLu muttaide
bAyiMda muttu uduruvaMdadali
AnaMdadiMda hacci kuMkuma eNNe kOTTAga
baMdaLu tanna maMdirake (80)

sAdhyavallavu BALa asAdhya muttaide
niMtiddaLu enna edurige baMdu
nidreyO kanasO eccariddilla enagoMdu
nirdhAravAgi tiLiyadu (81)

gattina mAtu camattu cAturya
saMpattina sauBAgyavaMte
eShTu hELali Ake celvike ceMda
sAkShAta viShNuvannAdarU mOhisuvaLu (82)

namma puNyada Pala odagi baMdiddare
mannisi manege baruvaLu
innEnu mADONa idake eMdu AlOcisi
innobba muttaidege hELidaru (83)

pAlu sakkare paMcaBakShya paramAnnavu
sAru SAkagaLu SAlyAnna
mAlakShmI pUje naivEdya mADi
maMgaLArati beLaguvaru (84)

pakShivAhana puruShOttamanAda
adhOkShaja A paramAtmana
akShada suta aDaguva kAlavannu
nirIkShisi nODutiharu (85)

atta mAlakShmI tA paccakarpUra punugina
eNNe saMpige taila
kastUri beresida bisinIru ariShiNa
hacci tA erakoMDaLAga (86)

suLiguruLu hikke baitale tiddi taLapu hAki
cauri rAgaTe caMdra goMDya
giLigijje heraLu baMgAra kyAdige myAle
araLu mallige mAle muDidu (87)

bicci nAnuTTaLu biLiya pItAMbara
acca jarada seraga hoddu
kuttaNi kubusa muttina goMDya tOLige
kaTTutiddaLu bAju baMdu (88)

vajrada vaMkiyu nAgamurige nAgaDDike
gejjaDDikeyu koraLalli
doDDa sarige myAle aDDike muttina keMpu
thaLaku jaLaku hoLeyutali (89)

putthaLisara EkAvaLi caMdrahAra
kaTTidaLAga kaMThi kaTTANi
pacca mANika ratnapadaka nirigaLali
jattAgi nalidADutiralu (90)

paraDi kaMkaNa hastakaDaga kamaladvArya
naDuvige navaratna pacce
biDimuttu bigida vajrada vAle buguDi
caMdramuruvu muttina sarapaLiyu (91)

sAlukuMdaNada ANi muttina mukurya
bulAku balake vajrada haraLu
tIDi kADige hacci tiddi kuMkumava
haNe myAle hacci jOLadakuDiyaMte (92)

pilya kAluMgura lullu paijaNa ruLi
Gallu GalleMta hejjeniDuta
gellu miMcugaLaMte thaLathaLisuta
bIdiyalli baMdaLu gajagamane (93)

beLLane beLLiya miLLe tanna uMgura
beraLiniMda hiDidu bIsutali
teLLane pAda putthaLiyaMte hoLeyuta
cinna baLLiyaMdadi baLukutali (94)

rAjAdhirAjarellaru niMtu nODuta
lAjAvarada goMbeyaMte
BOjanaketta pOguvaLO nODuvaNeMdu
bahu janaru hiMde naDedaru (95)

dAvalOkadiMda iLidilli baMdaLu
dAra satiyO dAra sutaLO
mOre nODalu mUrCe baruvudu oyyAri
muMgAru miMcugaLaMte tOruvaLu (96)

iMdrana SaciyO caMdramana rOhiNiyO
suMdara sUryanarasi saMj~jeyO
gAMdharvararasiyO gaganadiMda iLidaMtha
gaMgA SyAmala sItAMganeyO (97)

ratiyO rEvatiyO aruMdhatiyO pArvatiyO
BArati BAgyavaMte sarasvatiyO
patigaLu aivaru satya pAMDavarara arasi
draupadi baMdaLillige eMbuvaru (98)

satyaBAmO rukmaNI jAMbavaMtI AShTama
strIyaroLigidArO ivattu
saMpattu SukkuruvAra sAkShAta
lakShmiyE baMdaLu eMbuvaru (99)

hastava mugivaru sAShTAMgakkeragOru
itta banni eMdu karevaru
SrEShTha vaikuMTha mOkShapura
mAlakShmI biTTille baMdaLeMbuvaru (100)

muDibAgi naDeyuta muDida hUvu udurutA
muguLnageyiMda tA nagutA
eDabaladali OrenOTava nODutA
naDedaLu baDavara manege (101)

siri baMdu tA kaNNa teredu nODutalire
aramane Ayitu A kShaNadi
suragi mallige SyAvaMtige nAnA PalagaLidda
vanavAyitu A mane sutta (102)

gaccinaMgaLa vRuMdAvana kaTTe
kAraMji haccane giLi haMsa
garuDa pakShi navilu pArivALa
pAMcAli vRukSha aSvatthagiDagaLu (103)

paccadaMte hoLevO SrI tuLasidEviyaralli
acca vajrada goMbeyaMte
lakShmi tA nalinaliyutali racitavAda
kurciyali baMdu kUDuvaLu (104)

baDavana maDadige oDave vastravAdavu
haraDi kaMkaNavu kaiyalli
maDisIre uTTiddu hOgi maDipItAMbaravAytu
aDigeragi edurugoMbuvaru (105)

gaMdha kuMkuma ariShiNa divya bukkiTTu
taMdu hacci kAla jAvaDiya
duMDu mallige pArijAta saMpige mAle
daMDe muDisi jaDemuDige (106)

kadaLi PalagaLu kobbaribaTTaloLage
hurigaDale hAki uDiya tuMbuvaru
hiDidu kuMdaNada harivANadoLu hADi
pADuta mADi muttinAratiya (107)

iMdirAdEvi AnaMdadi kuLitire
iMdrAdi suraru nODutali
maMdAra mallige maLeya karedarAga
duMduBi BEri baDidavu(108)

eDabaladalli cAmaravannu bIsOru
hiDidu hilAlu nODuvaru
biDimallige taMdu naDemuDi hAsOru
saDagaradiMda eddaLAga (109)

lakkumidEvi tA gakkane baMdaLu
hokkaLu dEvara maneya
cokka cinnada koDavAgi tA tUgO
mANikya maMcadalu kUDuvaLu (110)

ranna mANikya ratna honnahaNavu cokka
cinnada mohara varAhagaLu
baNNada havaLa muttu BAri
baMgAradaMdigeya biMdige nODutiharu (111)

SukkuruvAra SuBakAla ivarige
sikkaLu siMdhunaMdaneyu
bokkasada BAgya BaMDArada jayalakShmI
dakkidaLu ivarige eMbuvaru (112)

karpUradArati mADi kAyi oDedu
bukkiTTu kuMkuma haccuvaru
paTTaNada janaru pattala sIri kuppusa
lakShmige uDugoreya koDuvaru (113)

nAlkuvArada ele tegedu nODutalire
hAkida annavu ANimuttu
SAka pAkavu palya paramAnna BakShya
baMgAra rajata bALeyeleyu (114)

baMdu nODuta nAlku maMdi soseyaru
haMcikoMDaru Aga oMdoMdu elegaLa
hiMde mADida puNya oMdu odagitu
namageMdu saMtOSha paDuvaru (115)

baMda muttaide brAhmaNaroDagUDi
koMDuMDu vILyavane takkoMDu
maMdagamane lakShmI mahime
koMDADuta AnaMdavAgi iruttidaravaru (116)

mudadiMda mUrjagada oDeya nArAyaNana
edeyalli iravO lakShmI namma
sadanake baMdu saMpattu SukkuruvAra
sama dRuShTiyiMda nODuvaLu (117)

kivuDage kivi kuruDage kaNNu baruvudu
baraDu AkaLu hainavAguvudu
haDeyada baMje hoTTe makkaLAgOru
paDevarO iShTaPalagaLa (118)

danakaru taLiyAgi dhanadhAnya beLeyAgi
sadAkAla SuBakAryavAgi
baLe kuMkuma ariShiNa mAMgalya
muttaidetanava koTTu varava nIDuvaLu (119)

baDavara manege naDedu baMdu BAgyada
koDavAgi kUtaMta katheyu
dhRuDhaBaktiyiMda hELi kELida janarige
koDuvaLu sakala saMpattu (120)

sAmajavarada sudhAmana saKanAda
svAmi SrIhari mOhada arasi
SrImahAlakShmI pUjeya mADidavarige
BImESakRuShNa tA oliva (121)

SrI kRuShNArpaNamastu

Leave a Reply

You might also like

error: Content is protected !!