Composer: Shri Purandara dasaru
ಕಂಡೆ ನಾ ಕನಸಿನಲಿ ಗೋವಿಂದನ|| ಪ. ||
ಕಂಡೆ ನಾ ಕನಸಿನಲಿ ಕನಕರತ್ನದ ಮಣಿಮಯ |
ನಂದನ ಕಂದ ಮುಕುಂದನ ಚರಣವ || ಅ. ಪ. ||
ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ
ಬಂದು ಕಾಳಿಂಗನ ಹೆಡೆಯನೇರಿ ||
ಧಿಂ ಧಿಮಿ ಧಿಮಿಕೆಂದು ತಾಳಗಳಿಂದಾ –
ನಂದದಿ ಕುಣಿವ ಮುಕುಂದನ ಚರಣವ || 1 ||
ಉಟ್ಟ ಪೀತಾಂಬರ ಉಡಿಯ ಕಾಂಚನದಾಮ
ತೊಟ್ಟ ಮುತ್ತಿನ ಹಾರ ಕೌಸ್ತುಭವು ||
ಕಟ್ಟಿದ ವೈಜಯಂತಿ ತುಲಸಿ ವನಮಾಲೆ
ಇಟ್ಟ ದ್ವಾದಶನಾಮ ನಿಗಮಗೋಚರನ || 2 ||
ಕಿರುಬೆರಳಿನ ಮುದ್ರೆಯುಂಗುರ ಮುಂಗೈಯ
ಕರದಲಿ ಕಂಕಣ ನಳಿತೋಳುಗಳ ||
ವರ ಚತುರ್ಭುಜ ಶಂಖ ಚಕ್ರದಿ ಮೆರೆವನ
ನಿರುತದಿ ಒಪ್ಪುವ ಕರುಣಾಮೂರುತಿಯ || 3 ||
ಬಣ್ಣದ ತುಟಿ ಭಾವ ರಚನೆಯ ಸುಲಿ ಪಲ್ಲು
ಸಣ್ಣ ನಗೆಯ ನುಡಿ ಸವಿ ಮಾತಿನ ||
ಪುಣ್ಯ ಚರಿತ್ರನ ಪೊಳೆವ ಕಿರೀಟನ
ಕಣ್ಣು ಮನ ದಣಿಯದು ಕಂಸಾರಿ ಕೃಷ್ಣನ || 4 ||
ಮಂಗಳ ವರ ತುಂಗಭದ್ರದಿ ಮೆರೆವನ
ಅಂಗಜ ಪಿತ ಶ್ರೀ ಲಕ್ಷ್ಮೀಪತಿಯ ||
ಶೃಂಗಾರ ಮೂರುತಿ ಪುರಂದರವಿಠಲನ
ಕಂಗಳಿಂದಲಿ ಕಂಡೆ ಹಿಂಗಿತು ಭವ ಭಯ || 5 ||
kaMDe nA kanasinali gOviMdana|| pa. ||
kaMDe nA kanasinali kanakaratnada maNimaya |
naMdana kaMda mukuMdana caraNava || a. pa. ||
aMduge kirugejje GalireMba vAdyadi
baMdu kALiMgana heDeyanEri ||
dhiM dhimi dhimikeMdu tALagaLiMdA –
naMdadi kuNiva mukuMdana caraNava || 1 ||
uTTa pItAMbara uDiya kAMcanadAma
toTTa muttina hAra kaustuBavu ||
kaTTida vaijayaMti tulasi vanamAle
iTTa dvAdaSanAma nigamagOcarana || 2 ||
kiruberaLina mudreyuMgura muMgaiya
karadali kaMkaNa naLitOLugaLa ||
vara caturBuja SaMKa cakradi merevana
nirutadi oppuva karuNAmUrutiya || 3 ||
baNNada tuTi BAva racaneya suli pallu
saNNa nageya nuDi savi mAtina ||
puNya caritrana poLeva kirITana
kaNNu mana daNiyadu kaMsAri kRuShNana || 4 ||
maMgaLa vara tuMgaBadradi merevana
aMgaja pita SrI lakShmIpatiya ||
SRuMgAra mUruti puraMdaraviThalana
kaMgaLiMdali kaMDe hiMgitu Bava Baya || 5 ||
Leave a Reply