Ee pariya adhikara

Composer : Shri Purandara dasaru

By Smt.Shubhalakshmi Rao

ಈ ಪರಿಯ ಅಧಿಕಾರ ಒಲ್ಲೆ ನಾನು |
ಶ್ರೀಪತಿಯೆ ನೀನೊಲಿದು ಏನ ಕೊಟ್ಟುದೆ ಸಾಕು [ಪ]

ಚಿರಕಾಲ ನಿನ್ನ ಕಾಯ್ದು ತಿರುಗಿದುದಕೆ ನಾನು |
ಕರುಣದಲಿ ರಚಿಸಿ ನೀ ಈ ದುರ್ಗದಿ ||
ಇರ ಹೇಳಿದುದಕೆ ನಾ ಹೊಕ್ಕು ನೋಡಿದೆ ಒಳಗೆ |
ಹುರುಳು ಲೇಶವು ಕಾಣೆ ಕರಕರೆಯು ಬಲುನೋಡು (೧)

ದಾರಿಯಲಿ ಹೋಗಿ ಬರುವವರ ಉಪಟಳಘನ|
ಚೋರರಟ್ಟುಳಿಗಂತೂ ನೆಲೆಯೆ ಇಲ್ಲ ||
ವೈರಿವರ್ಗದ ಜನರು ಒಳಗೆ ಬಲು ತುಂಬಿಹರು |
ಮಿರಿ ನಿನ್ನಲಿ ಮನವನೂರಿ ನಿಲಗೊಡರು (೨)

ಸರಿಬಂದ ವ್ಯಾಪಾರ ಮಾಡಿ ತಾವೆನ್ನನ್ನು |
ಬರಿಯ ಲೆಕ್ಕಕೆ ಮಾತ್ರ ಗುರಿಯ ಮಾಡಿ ||
ಕರಕರೆಯ ಬಡಿಸಬೇಕೆಂದು ಯೋಚಿಸುತಿಹರು |
ಕರೆದು ವಿಚಾರಿಸಿ ನ್ಯಾಯ ಮಾಡಿಸು ದೊರೆಯೇ (೩)

ನಾಮಾಂಕಿತಕೆ ಮಾತ್ರ ಅಧಿಕಾರವೆನಗಿತ್ತು |
ಸ್ವಾಮಿತ್ವವೋ ನೋಡು ಮನೆಮನೆಯಲಿ ||
ಭೀಮ ವಿಕ್ರಮರವರು ದುರ್ಬಲಾಗ್ರಣಿ ನಾನು |
ಗ್ರಾಮ ಒಪ್ಪಿಸಿ ನಮಿಪೆ ಸರಿಬಂದ ತೆರಮಾಡು (೪)

ಕಾಲಕ್ಕೆ ಕರೆಯ ಬಂದವರಿಗೆ ಒಳಗಾಗಿ |
ಪಾಳೆಯವನೊಪ್ಪಿಸಿ ಕೊಡುವೆವೆಂದು ||
ಆಲೋಚಿಸಿಹರಯ್ಯ ಈಗಲೆನಗೆ ನಿನ್ನ |
ಆಳುಗಳ ಬಲಮಾಡಿ ಎನ್ನ ರಕ್ಷಿಸು ದೊರೆಯೆ (೫)

ಕ್ಷಣಕೆ ನೂರುಪಟಳ ಈ ಕೋಟೆಗೆಲೊ ರಾಯ |
ಅನುವಾದ ದಿವಸವೊಂದಾದರಿಲ್ಲ ||
ಮೊನೆಗಾರ ಜನವಿಲ್ಲ ಇದ್ದವರು ವಶವಿಲ್ಲ |
ಕೊನೆಗೊಂಡು ಗ್ರಾಮ ಕಾಪಾಡುವ ತೆರನೆಂತೊ (೬)

ಎನಗೆ ಈ ಬಹುನಾಯಕರ ಕೊಂಪೆಯೊಳು ವಾಸ- |
ವನು ಬಿಡಿಸಿ ನಿನ್ನ ನಿಜ ಪಟ್ಟಣದೊಳು ||
ಮನೆ ಮಾಡಿಕೊಡಲು ನಾನಿನ್ನ ನೋಡಿಕೊಳುತ |
ಅನುಗಾಲ ಬದುಕುವೆನೊ ಪುರಂದರವಿಠಲ (೭)


I pariya adhikAra olle nAnu |
SrIpatiye nInolidu Ena koTTude sAku [pa]

cirakAla ninna kAydu tirugidudake nAnu |
karuNadali racisi nI I durgadi ||
ira hELidudake nA hokku nODide oLage |
huruLu lESavu kANe karakareyu balunODu (1)

dAriyali hOgi baruvavara upaTaLaGana|
cOraraTTuLigaMtU neleye illa ||
vairivargada janaru oLage balu tuMbiharu |
miri ninnali manavanUri nilagoDaru (2)

saribaMda vyApAra mADi tAvennannu |
bariya lekkake mAtra guriya mADi ||
karakareya baDisabEkeMdu yOcisutiharu |
karedu vicArisi nyAya mADisu doreyE (3)

nAmAMkitake mAtra adhikAravenagittu |
svAmitvavO nODu manemaneyali ||
BIma vikramaravaru durbalAgraNi nAnu |
grAma oppisi namipe saribaMda teramADu (4)

kAlakke kareya baMdavarige oLagAgi |
pALeyavanoppisi koDuveveMdu ||
AlOcisiharayya Igalenage ninna |
ALugaLa balamADi enna rakShisu doreye (5)

kShaNake nUrupaTaLa I kOTegelo rAya |
anuvAda divasavoMdAdarilla ||
monegAra janavilla iddavaru vaSavilla |
konegoMDu grAma kApADuva teraneMto (6)

enage I bahunAyakara koMpeyoLu vAsa- |
vanu biDisi ninna nija paTTaNadoLu ||
mane mADikoDalu nAninna nODikoLuta |
anugAla badukuveno puraMdaraviThala (7)

Leave a Reply

Your email address will not be published. Required fields are marked *

You might also like

error: Content is protected !!