ಶ್ರೀವಿಜಯದಾಸಾರ್ಯ ವಿರಚಿತ
ಪ್ರಾರ್ಥನಾ ಸುಳಾದಿ – ೬೭
ರಾಗ: ಭೈರವಿ
ಝಂಪಿತಾಳ
ಕರವಿಡಿದೆತ್ತುವದು ಭವ ಕರದಮದೊಳಗಿಂದ
ಕರಕರೆ ಬಡಲಾರೆ ಕರುಣಾರತುನಾ –
ಕರನೆ ನಿನ್ನಡಿಗಳಿಗೆ ಕರಮುಗಿದು ದುರಿತ ನಿ –
ಕರಗಳೆಲ್ಲ ನಿರಾಕರಣ ಗೈಸೊ
ಕರೆದ ಮಾತನು ಪತಿಕರಿಸಿ ವೇಗದಿ ವಸೀ –
ಕರನಾಗಿ ಮುಕುತಿಗೆ ಕರೆವ ದಾತ
ಕರದಿಂದ ಒಲಿದು ವಕ್ಕರ ಪರಿಹರಿಸಿ ಭೀ –
ಕರವ ತೊಲಗಿಸು ಶ್ರೀಕರ ಮೂರುತಿ ದಿವಾ –
ಕರ ಕುಲಾಗ್ರಣಿರಾಮ ವಿಜಯವಿಟ್ಠಲನೆ ಸಾ –
ಕರನಾಗು ನಿತ್ಯ ಮಧುಕರನಂತೆ ಮನಕೆ || ೧ ||
ಮಟ್ಟತಾಳ
ತನು ನಿನ್ನಾಧೀನ ಮನವೆ ನಿನ್ನಾಧೀನ
ಜನನ ಮರಣ ಪ್ರಾಣ ನಿನ್ನಾಧೀನ
ಅನುದಿನ ಮಾಳ್ಪ ಸಾಧನ ನಿನ್ನಾಧೀನ
ಕ್ಷಣಕ್ಷಣದಾ ಶ್ವಾಸದ ಯೋಚನೆ ನಿನ್ನಾಧೀನ
ಗುಣಗುಣ ವನನಿಧಿ ವಿಜಯವಿಟ್ಠಲರೇಯ
ಎನಗೊಲಿದಿಪ್ಪನೆ ಅಣೋರಣಿ ಮಹಮಹಿಮ || ೨ ||
ತ್ರಿವಿಡಿತಾಳ
ಹಾರಿ ಆಡಿದರೇನು ಹಸ್ತದಲ್ಲಿ ತಂ –
ಬೂರಿ ಪಿಡಿದು ಮೀಟಿ ತಾಳ ಕಟಿದರೇನು
ಮೋರೆ ಮೇಲು ಮಾಡಿ ಪಾಡಿ ಪೇಳಿದರೇನು
ತೋರಿ ಗುಣಗಳೆಲ್ಲ ತವಕೆ ಬಿದ್ದರೆ ಏನು
ತಾರಿಕೊಳುತ ಬಲು ತಪವಗೈದರೆ ಏನು
ಶಾರೀರ ಬಳಲಿಸಿ ಶೋಕ ಪಡೆದರೇನು
ದೂರ ಯಾತ್ರಿ ತೀರ್ಥ ತಿರುಗಿ ಬಂದರೆ ಏನು
ಆರೊಡನಾಡಿದರೇನು ಮತ್ತೇನು
ನಾರಾಯಣನೆ ನಿನ್ನ ಸಾರದಲೆ ಸಂ –
ಸಾರದ ಮಾರ್ಗ ನಿವರ್ತಿಯಿಲ್ಲ
ಈ ರೀತಿಯಲಿ ತಿಳಿದು ಮಂದನಾಗಿ ಪೋದೆ
ಮಾರಿಗಳ ಭೀತಿ ಎಣಿಸದಲೆ
ಚಾರುಚರಿತ ನಮ್ಮ ವಿಜಯವಿಟ್ಠಲ ಎನ್ನ
ಭಾರವಹಿಸಿ ಕಾಯುವ ಕಾರುಣ್ಯಮೂರುತಿ || ೩ ||
ಅಟ್ಟತಾಳ
ಒಂದೆ ಜಲದ ಬಿಂದು ಒಂದೆ ತುಲಸಿದಳ
ಒಂದೆ ಚರುವನ್ನ ಮಂಗಳಾರ್ತಿ
ಒಂದೆ ಪ್ರದಕ್ಷಿಣೆ ಒಂದೆ ನಮಸ್ಕಾರ
ಒಂದೆ ಒಂದದರಿಂದ ಕುಂದದ ಮತಿಗಳ
ತಂದುಕೊಡುವ ದಯಸಿಂಧು ನೀನಿರಲಿಕ್ಕೆ
ಮಂದಮಾನವ ಅನುಸಂಧಾನ ಅರಿಯದೆ
ಒಂದಾರು ಮಡಿಯಾಗಿ ತಂದು ಬಳಲುವೆ
ಸಿಂಧುಶಯನ ನಮ್ಮ ವಿಜಯವಿಟ್ಠಲರೇಯಾ
ಎಂದೆಂದಿಗೆ ನಾನು ಒಂದು ದಾರಿಯ ಕಾಣೆ || ೪ ||
ಆದಿತಾಳ
ಗತಿಯೇನು ತೋರದು ಶ್ರೀಪತಿಯ ಪೋಗುವ ಸು –
ಪಥದಲ್ಲಿ ನಾನೆಂತೀ ಕ್ಷಿತಿಯೊಳಗಿರಬಹುದೆ
ಹಿತವಾಗಿ ಕಾಯ್ದು ಪೂರತಿ ಮಾಡೊ ಮನೊಬಯಕೆ
ಯತಿಗಳ ಮನೋಹರ ವಿಜಯವಿಟ್ಠಲ ನಿ –
ಶ್ಚಿತದಲ್ಲಿ ನೀನೆ ಒಲಿಯೊ ಕಥಾಪ್ರಸಂಗವನಿತ್ತು || ೫ ||
ಜತೆ
ಕೋಟಿಗಾದರು ನಿನ್ನ ನೆನವೆ ಭವಾಬ್ಧಿಯ
ದಾಟಿಸು ದಯದಿಂದ ವಿಜಯವಿಟ್ಠಲ ನಂದ ||
SrIvijayadAsArya viracita
prArthanA suLAdi – 67
rAga: Bairavi
JaMpitALa
karaviDidettuvadu Bava karadamadoLagiMda
karakare baDalAre karuNAratunA –
karane ninnaDigaLige karamugidu durita ni –
karagaLella nirAkaraNa gaiso
kareda mAtanu patikarisi vEgadi vasI –
karanAgi mukutige kareva dAta
karadiMda olidu vakkara pariharisi BI –
karava tolagisu SrIkara mUruti divA –
kara kulAgraNirAma vijayaviTThalane sA –
karanAgu nitya madhukaranaMte manake || 1 ||
maTTatALa
tanu ninnAdhIna manave ninnAdhIna
janana maraNa prANa ninnAdhIna
anudina mALpa sAdhana ninnAdhIna
kShaNakShaNadA SvAsada yOcane ninnAdhIna
guNaguNa vananidhi vijayaviTThalarEya
enagolidippane aNOraNi mahamahima || 2 ||
triviDitALa
hAri ADidarEnu hastadalli taM –
bUri piDidu mITi tALa kaTidarEnu
mOre mElu mADi pADi pELidarEnu
tOri guNagaLella tavake biddare Enu
tArikoLuta balu tapavagaidare Enu
SArIra baLalisi SOka paDedarEnu
dUra yAtri tIrtha tirugi baMdare Enu
AroDanADidarEnu mattEnu
nArAyaNane ninna sAradale saM –
sArada mArga nivartiyilla
I rItiyali tiLidu maMdanAgi pOde
mArigaLa BIti eNisadale
cArucarita namma vijayaviTThala enna
BAravahisi kAyuva kAruNyamUruti || 3 ||
aTTatALa
oMde jalada biMdu oMde tulasidaLa
oMde caruvanna maMgaLArti
oMde pradakShiNe oMde namaskAra
oMde oMdadariMda kuMdada matigaLa
taMdukoDuva dayasiMdhu nIniralikke
maMdamAnava anusaMdhAna ariyade
oMdAru maDiyAgi taMdu baLaluve
siMdhuSayana namma vijayaviTThalarEyA
eMdeMdige nAnu oMdu dAriya kANe || 4 ||
AditALa
gatiyEnu tOradu SrIpatiya pOguva su –
pathadalli nAneMtI kShitiyoLagirabahude
hitavAgi kAydu pUrati mADo manobayake
yatigaLa manOhara vijayaviTThala ni –
Scitadalli nIne oliyo kathAprasaMgavanittu || 5 ||
jate
kOTigAdaru ninna nenave BavAbdhiya
dATisu dayadiMda vijayaviTThala naMda ||
Leave a Reply