Varada Suladi – Jagannatha dasaru

By Smt.Nandini Sripad

ಶ್ರೀ ಜಗನ್ನಾಥದಾಸಾರ್ಯ ವಿರಚಿತ ವರದ ಸುಳಾದಿ
ರಾಗ: ಆನಂದಭೈರವಿ

ಧ್ರುವತಾಳ
ವರದಾ ವರದ ಶುಭವರ ವರದಾಯಕ
ಪರಮ ಪುರುಷೋತ್ತಮಅಮಿತಮಹಿಮ
ಶರಣಾಗತರ ಕಲ್ಪತರುವೆ ವಿಮಲಾರುಣಾಂ –
ಬುರುಹ ದಳಲೋಚನ ಭವವಿಮೋಚನಾ
ನಿರುಪಮ ನಿರ್ದೋಷನಿಖಿಳನಿಷೇಧ ಶೇಷ
ಮರಣ ಜನನ ರಹಿತ ಲೋಕಮಹಿತ
ಶಿರಿ ಸರಿಸಿಜಭವ ವಾಯುವಾಣಿ ಭಾರತಿ
ಗರುಡ ಇಂದ್ರ ದೇವೋತ್ತಂಸ ಹಂಸಾ
ಸ್ವರತ ಸ್ವತಂತ್ರ ಗುಣಗಣಭರಿತ ಭಾಗ್ಯವಂತ
ನಿರುತ ಎನ್ನಂತರಂಗವಾಸ ಶ್ರೀಶಾ
ಹರಿಯೆ ನೀನಲ್ಲದನ್ಯರರಿಯೆ ಎಮ್ಮ ಸಾಕುವ
ಧೊರಿಯೆ ದೂರುವೆ ಎನ್ನ ಮೊರೆಯ ಕೇಳೊ
ಮರಳಿ ಮರಳಿ ಎನ್ನದುರುಳವಿಷಯಂಗಳಿ –
ಗೆರಗಿಸಿ ಕಂಗೆಡಿಪ ಕರಣಗಳು
ಇರುಳು ಹಗಲು ನಿನ್ನ ಪರವಾಗಿರಲು ಬಹ
ದುರಿತ ಕೋಟಿಗಳಿಗೆ ಅಂಜೆ ನಾನು
ಸುರುಚಿ ನಾಮಕ ಜಗನ್ನಾಥವಿಠ್ಠಲ ನಿಜ
ಕರುಣಿ ಕೈ ಪಿಡಿದು ಉದ್ಧರಿಸ ಬೇಕೂ || ೧ ||

ಮಟ್ಟತಾಳ
ಈಶ ಪೂರ್ಣಕಾಮ ದೋಷರಹಿತ ಸ್ವಪ್ರ –
ಕಾಶಲಕ್ಷ್ಮೀ ವಾರಿಜಾಸನ ಮೊದಲಾದ –
ಶೇಷ ದಿವಿಜರಿಂದ ನೀ ಸೇವಿತನಾಗಿ
ದೇಶ ಕಾಲಗಳಲ್ಲಿ ವಾಸವಾಗಿಯಿಪ್ಪ
ವಾಸುದೇವನೆ ನಿನ್ನ ಉಪಾಸನೆ ಮಾಡದಲೆ
ಕ್ಲೇಶಕೆ ಒಳಗಾದೆ ಪಾಶಧರಾರ್ಚ್ಯನೆ
ಘಾಶಿಗೊಳಿಸದೆನ್ನ ಪೋಷಿಸಬೇಕಿನ್ನು
ವಾಸವಾನುಜ ಜಗನ್ನಾಥವಿಠ್ಠಲ ಲೌಕೀ –
ಕಾಶೆ ಬಿಡಿಸಿ ನಿನ್ನ ದಾಸನೆನಿಸಿ ಸಲಹೊ || ೨ ||

ತ್ರಿವಿಡಿತಾಳ
ಕರಣನಾಮಕನಾಗಿ ಇಂದ್ರಿಯಂಗಳ ಮಾನಿ
ಸುರರೊಳು ನೆಲೆಸಿ ವಿವಿಧ ವಿಷಯಂಗಳ
ನೆರವಿಗಳೊಳಗಿದ್ದು ನಿನ್ನ ರೂಪವ ಬೆರದು
ಅರಿಯಗೊಡದಲೆ ವಿಹರಿಸುತಿಪ್ಪೆ
ಗುರಿ ಮಾಡಿ ಜೀವರ ಪುಣ್ಯಪಾಪಂಗಳಿಗೆ
ನಿರಯ ಸ್ವರ್ಗಗಳನೆ ಲೀಲೆಯಿಂದ
ಪರಿಪೂರ್ಣ ಕಾಮ ಈಪರಿಸಂಸಾರದೊಳೆಮ್ಮ
ತಿರುಗಿಸಿ ನೀ ಕ್ರೀಡೆಯಾಡುತಿಪ್ಪೆ
ವಿರಜಾನಾಮಕ ಜಗನ್ನಾಥವಿಠ್ಠಲ ಕರ –
ವೆರಡು ಮುಗಿವೆ ಎಮ್ಮುದ್ಧರಿಸುವ ಭಾರ ನಿನ್ನದೂ || ೩ ||

ಅಟ್ಟತಾಳ
ಆ ಚತುರ್ಮುಖ ರಜತಾಚಲ ನಿಲಯಾದಿ
ಖೇಚರರಿಗೆ ಮನೋವಾಚಾಮಗೋಚರ
ಪ್ರಾಚೀನ ಕರ್ಮಾಬ್ದಿ ವೀಚಿಯೊಳಗೆ ಮುಣು-
ಗೀಚಾರಿವರಿವಂಗೆ ಗೋಚರಿಸುವುದೆ ವಿ –
ರೋಚನ ಕೋಟಿ ಮರೀಚಿ ಪುಂಜನೆಭವ-
ಮೋಚಕ ನೀನೆಂದು ಸೂಚಿಸಿದರು
ಶ್ರೀಮದಾಚಾರ್ಯರಾಯರು ಈ ಚರಾಚರದೊಳು
ನೀಚರಿಗೆಕರಚಾಚದಂತೆ ಮಾಡೋ
ಯಾಚಿಸುವೆನು ಸವ್ಯಸಾಚಿವರದ
ವಿರೋಚನ ಜಗನ್ನಾಥವಿಠ್ಠಲ ನಿನ್ನಾ –
ಲೋಚನೆ ಕೊಡುವದು ಸಾಚಾರಿಗಳ ಕೂಡ || ೪ ||

ಆದಿತಾಳ
ಅನಘನೆಂದೊಮ್ಮೆ ನೆನೆವ ಮಾನವ ಭವ
ವನಧಿ ದಾಟುವ ಬಂಧು ಜನರ ಕೂಡಿಕೊಂಡು
ವನಿತಾದಿ ವಿಷಯಂಗಳನುಭವಿಸುತ ತನ್ನ
ಮನೆಯೊಳಗಿರಲಾ ಜೀವನೇ ಮುಕ್ತನೂ
ಅನಿಮಿಷಮುನಿ ಭಾನುತನಯ ಲೋಕದಿ ನಾರಾ –
ಯಣನೆನೆ ನರಕಸ್ಥ ಜನರು ಮುಕ್ತರಾಗರೇ
ಘನಮಹಿಮನೆ ನಿನ್ನ ಅನುಸ್ಮೃತಿ ಉಳ್ಳವ
ಮನುಜನಾಗಲಿ ಮತ್ತೆ ದನುಜನಾಗಲಿ ತ್ರಿಭು –
ವನದೊಳು ಮಾನ್ಯನೊ ಅನುಮಾನವಿಲ್ಲ ಪ್ರತ –
ರ್ದನ ನಾಮ ಜಗನ್ನಾಥವಿಠಲ ಪ್ರಹ್ಲಾದ
ವಿರೋಚನ ನರವಿಭೀಷಣರಿಗೊಲಿದು ಕಾಯಿದೆ || ೫ ||

ಜತೆ
ಭಕ್ತವತ್ಸಲ ಜಗನ್ನಾಥವಿಠ್ಠಲ ಮುಕ್ತಾ
ಮುಕ್ತ ನಿಯಾಮಕ ಅಶಕ್ತನ ಕೈಪಿಡಿಯೊ ||೬||


SrI jagannAthadAsArya viracita varada suLAdi
rAga: AnaMdaBairavi

dhruvatALa
varadA varada SuBavara varadAyaka
parama puruShOttama amita mahima
SaraNAgatara kalpataruve vimalAruNAM –
buruha daLalOcana BavavimOcanA
nirupama nirdOSha niKiLa niShEdha SESha
maraNa janana rahita lOkamahita
Siri sarisija Bava vAyu vANi BArati
garuDa iMdra dEvOttaMsa haMsA
svarata svataMtra guNagaNaBarita BAgyavaMta
niruta ennaMtaraMgavAsa SrISA
hariye nInalladanyarariye emma sAkuva
dhoriye dUruve enna moreya kELo
maraLi maraLi enna duruLa viShayaMgaLi –
geragisi kaMgeDipa karaNagaLu
iruLu hagalu ninna paravAgiralu baha
durita kOTigaLige aMje nAnu
suruci nAmaka jagannAthaviThThala nija
karuNi kai piDidu uddharisa bEkU || 1 ||

maTTatALa
ISa pUrNakAma dOSharahita svapra –
kASa lakShmI vArijAsana modalAda –
SESha divijariMda nI sEvitanAgi
dESa kAlagaLalli vAsavAgiyippa
vAsudEvane ninna upAsane mADadale
klESake oLagAde pASadharArcyane
GASigoLisadenna pOShisabEkinnu
vAsavAnuja jagannAthaviThThala laukI –
kASe biDisi ninna dAsanenisi salaho || 2 ||

triviDitALa
karaNanAmakanAgi iMdriyaMgaLa mAni
suraroLu nelesi vividha viShayaMgaLa
neravigaLoLagiddu ninna rUpava beradu
ariyagoDadale viharisutippe
guri mADi jIvara puNyapApaMgaLige
niraya svargagaLane lIleyiMda
paripUrNa kAma I pari saMsAradoLemma
tirugisi nI krIDeyADutippe
virajAnAmaka jagannAthaviThThala kara –
veraDu mugive emmuddharisuva BAra ninnadU || 3 ||

aTTatALa
A caturmuKa rajatAcala nilayAdi
KEcararige manOvAcAmagOcara
prAcIna karmAbdi vIciyoLage muNu-
gIcArivarivaMge gOcarisuvude vi –
rOcana kOTi marIci puMjane Bava –
mOcaka nIneMdu sUcisidaru
SrImadAcAryarAyaru I carAcaradoLu
nIcarige kara cAcadaMte mADO
yAcisuvenu savyasAcivarada
virOcana jagannAthaviThThala ninnA –
lOcane koDuvadu sAcArigaLa kUDa || 4 ||

AditALa
anaGaneMdomme neneva mAnava Bava
vanadhi dATuva baMdhu janara kUDikoMDu
vanitAdi viShayaMgaLanuBavisuta tanna
maneyoLagiralA jIvanE muktanU
animiShamuni BAnutanaya lOkadi nArA –
yaNanene narakastha janaru muktarAgarE
Ganamahimane ninna anusmRuti uLLava
manujanAgali matte danujanAgali triBu –
vanadoLu mAnyano anumAnavilla prata –
rdana nAma jagannAthaviThala prahlAda
virOcana naraviBIShaNarigolidu kAyide || 5 ||

jate
Baktavatsala jagannAthaviThThala muktA
mukta niyAmaka aSaktana kaipiDiyo ||6||

Leave a Reply

Your email address will not be published. Required fields are marked *

You might also like

error: Content is protected !!