ಶ್ರೀವಿಜಯದಾಸಾರ್ಯ ವಿರಚಿತ
ಶ್ರೀಮಧ್ವಾವತಾರ ಮಹಿಮೆ ಚರಿತ್ರೆ ಸುಳಾದಿ
ರಾಗ: ಕಾನಡ
ಧ್ರುವತಾಳ
ದುರ್ಮತವನು ನೆಚ್ಚಿ ಕರ್ಮಕ್ಕೆ ಬೀಳದಿರು
ನಿರ್ಮಾಣವನು ವೇದವ್ಯಾಸ ದೇವನು ದು –
ಷ್ಕರ್ಮಿಗಳಿಗೆ ನಿತ್ಯ ತಮವಾಗಲಿಬೇಕೆಂದು
ಪೇರ್ಮೆಯಿಂದಲಿ ರಚಿಸಿ ತಾಮಸ ಪುರಾಣ
ದುರ್ಮತಿಗಳಿಗೆ ರುಚಿಕರವೆನಿಸಿದಾರು
ಧರ್ಮಸಾಧನವೆಂದು ಮಾಯಿಮತವ ಭಜಿಸೆ
ಧರ್ಮರಾಯ ಅವರ ಚರ್ಮ ಸುಲಿವನು
ದುರ್ಮನುಷ ನಾಮ ವಿಜಯವಿಟ್ಠಲಗೆ ಈ
ಕರ್ಮವೊಪ್ಪಿಸಸಲ್ಲಾ ವಿಬುಧರ ಮತವಂತಾ || ೧ ||
ಮಟ್ಟತಾಳ
ಚರಣಡಿ ಎಂದೆಂಬೊ ಪುರದೊಳಗೆ ಸಂ –
ಕರ ಜನಿಸಿದ್ದ ಪರಿಯನು ಎಲ್ಲ
ಅರಿತದ್ದೆ ಕಾಣೊ ಮರೆಪರದೆ ಇಲ್ಲ
ಅರಿವನು ನಿನ್ನ ಗುರುವಿನ ಜನನ
ಸುರರೊಡಿಯಾ ಭಾಸ್ಕರದ್ಯುತಿ ನಾಮ ವಿಜಯವಿಟ್ಠಲಗೆ
ಶರಣೆಂದೆನ್ನದಲೆ ವರಲುವಾ ನಿತ್ಯಾ || ೨ ||
ರೂಪಕತಾಳ
ಗುರುವಾರು ಸಂಕರಗೆ ಕರದು ಉಪದೇಶವ –
ನರುಹಿದನಾವನೊ ಪೇಳೋ ಮುಗ್ಧಾ
ಹರುವ ನದಿಯೊಳು ಈಸಿ ಪೋಗುತಿರಲು
ವರ ಯಜ್ಞೋಪವೀತ ಜಿಗುಳಿ ಪೋಗೆ
ಜರಿದು ಗ್ರಹಸ್ಥಾಶ್ರಮ ಸನ್ನ್ಯಾಸಾಶ್ರಮಕೆ ಮನ
ಎರಗಿ ನಮ್ಮ ಸತ್ಯಪ್ರಾಜ್ಞತೀರ್ಥರ ಕೇಳೆ
ಪರಿಹಾರವಾದ ಉತ್ತರವ ಕೊಡಲು ತಾನೆ
ದುರುಳ ಮತಿಯಲಿ ಚತುರಾಶ್ರಮವ ಕೊಂಡಾ
ಹಿರಿಯರ ಮತವಿದು ಪುಶಿಯಲ್ಲ ಮಾತು ಚ –
ತುರರ್ಗತ ವಿಜಯವಿಟ್ಠಲನೆ ಸಾಕ್ಷಿ || ೩ ||
ಝಂಪೆತಾಳ
ಕಲಿಸಂಕರನ ಪುಟ್ಟು ಕುಂಬಳಕಾಯಿ ಗುರುತು
ಕಲಿಯುಗದೊಳಗೆ ಸೋಹಂ ಎಂದು ತಿರುಗಿ
ಸಲೆ ಸುಮಾರ್ಗವ ಬಿಡಿಸಿ ಮೋಹಕ ಶಾಸ್ತ್ರವನು
ಇಳಿಯೊಳಗೆ ಸರ್ವ ಮಿಥ್ಯಾವ ತುಂಬಿದ
ಕುಲವೆಲ್ಲ ಜಾತಿ ಸಂಕರವಾಗಿ ಸ್ವಧರ್ಮ –
ವಳಿದು ಸುರರಿಗೆ ಹವಿಸ್ಸು ಇಲ್ಲದಿರಲು
ಜಲಜ ಸಂಭವಗೆ ಸುಮನಸರು ಮೊರೆಯಿಡಲಾಗಿ
ಲಲಿತದಿಂದಲಿ ಹರಿಗೆ ಬಿನ್ನೈಸಲು
ಸುಲಭ ಮಹಾಸಿರಿ ವಿಜಯವಿಟ್ಠಲನು
ಒಲಿದು ಜಯತನುಜಗೆ ಕರದು ನೇಮಿಸಿದಾ || ೪ ||
ತ್ರಿವಿಡಿತಾಳ
ಹುಟ್ಟಿದನು ವಾಸುದೇವನೆಂಬೊ ನಾಮದಲಿ
ಸೃಷ್ಟಿಗೆ ಮಧ್ವಮುನಿ ಎನಿಸಿಕೊಂಡು
ಕುಟ್ಟೀದಾರದ್ವೈತ ಮತ ಕೋಲಾಹಲ ಮಾಡಿ
ವೈಷ್ಣವ ಮತವನು ಉದ್ಧರಿಸಿ
ವಿಷ್ಣು ಸರ್ವೋತ್ತಮನಹುದೆಂದು ಸ್ಥಾಪಿಸಿ
ಶಿಷ್ಟರಿಗೆ ವೇದಸುಧೆಯ ಕರೆದೂ
ವೈಷ್ಣವಾಚಾರ್ಯರ ಮತವಿಡಿದು ಬದುಕೋದು
ಪುಷ್ಟಿನಾಮ ವಿಜಯವಿಟ್ಠಲಗೆ ಬಲು ಪ್ರೀತಿ || ೫ ||
ಅಟ್ಟತಾಳ
ಮಾಯಿಯ ಮನೆ ಮುಂದೆ ಮದಕರಿಯಾಗಿದ್ದು
ಆಯುಷ್ಯಾಭಿವೃದ್ಧಿ ಸುಖ ಬಡುವದಕಿಂತಾ
ನಾಯಿಯ ಮರಿಯಾಗಿ ಮಧ್ವಮತದವರ
ಕಾಯಿದು ಮನೆ ಮುಂದೆ ಇಪ್ಪ ಕ್ಷಣವೆ ಲೇಸು
ಭೂಯ್ಯೋಮ ಪಾತಾಳದೊಳಗಿದು ಸಿದ್ಧವು
ರಾಯ ಧರ್ಮಜ ಮಿಕ್ಕ ಹರಿದಾಸರ ನೋಡೆ
ಶ್ರೀಯರಸನೇ ಪರನೆಂದು ಪೋದರು ಗತಿಗೆ
ವಾಯುಮತವ ಬಿಟ್ಟು ಅನ್ಯಮತವ ಸಾರೆ
ತಾಯಿಯ ಜರಿದು ಶ್ವಬಚಿಗೆರಗಿದಂತೆ
ನೀಯಂತೆ ನಾಮ ಶ್ರೀವಿಜಯವಿಟ್ಠಲಗೆ
ಮಾಯಿ ಮತದವರು ಆಗರು ಕಾಣೋ || ೬ ||
ಆದಿತಾಳ
ಹನುಮಾವತಾರಕ್ಕೆ ಕಾಲಯಮ ಎನಿಸಿದಾ
ಮಣಿಮಾನಾಸುರನಾದಾ ಭೀಮಾವತಾರಕ್ಕೆ
ಮುನಿ ಮಧ್ವರಾಯನಾಗೆ ಭಣಗು ಸಂಕರನಾದಾ
ಜನಿಸಿದನು ವೈರವನ್ನು ಜನುಮ ಮೂರರಲ್ಲಿ ಬಿಡದೆ
ಅನಿಲ ದೇವನ ಕೂಡ ಸೆಣಿಸಿ ಸಂಕಟ ಬಟ್ಟು
ಅನುವ ಕಾಣದಲೆ ತಮಸಿನಲ್ಲೀಗ ಬಳಲುತಿಪ್ಪಾ
ಫಣನಾಮ ವಿಜಯವಿಟ್ಠಲ ಹನುಮನ ಮತದಂತೆ
ಮನುಷ್ಯೋತ್ತಮ ಕಡೆಮೊದಲು ಮನದಂತೆ ಫಲವೀವಾ || ೭ ||
ಜತೆ
ಪ್ರಾಣಗತಿ ಬಂದರು ಮಧ್ವಮತ ಬಿಡದಿರಿ
ಪ್ರಾಣಧೃತುನಾಮ ನಮ್ಮ ವಿಜಯವಿಟ್ಠಲಗರ್ಪಿಸೊ ||
SrIvijayadAsArya viracita
SrImadhvAvatAra mahime caritre suLAdi
rAga: kAnaDa
dhruvatALa
durmatavanu necci karmakke bILadiru
nirmANavanu vEdavyAsa dEvanu du –
ShkarmigaLige nitya tamavAgalibEkeMdu
pErmeyiMdali racisi tAmasa purANa
durmatigaLige rucikaravenisidAru
dharmasAdhanaveMdu mAyimatava Bajise
dharmarAya avara carma sulivanu
durmanuSha nAma vijayaviTThalage I
karmavoppisasallA vibudhara matavaMtA || 1 ||
maTTatALa
caraNaDi eMdeMbo puradoLage saM –
kara janisidda pariyanu ella
aritadde kANo mareparade illa
arivanu ninna guruvina janana
suraroDiyA BAskaradyuti nAma vijayaviTThalage
SaraNeMdennadale varaluvA nityA || 2 ||
rUpakatALa
guruvAru saMkarage karadu upadESava –
naruhidanAvano pELO mugdhA
haruva nadiyoLu Isi pOgutiralu
vara yaj~jOpavIta jiguLi pOge
jaridu grahasthASrama sannyAsASramake mana
eragi namma satyaprAj~jatIrthara kELe
parihAravAda uttarava koDalu tAne
duruLa matiyali caturASramava koMDA
hiriyara matavidu puSiyalla mAtu ca –
turargata vijayaviTThalane sAkShi || 3 ||
JaMpetALa
kalisaMkarana puTTu kuMbaLakAyi gurutu
kaliyugadoLage sOhaM eMdu tirugi
sale sumArgava biDisi mOhaka SAstravanu
iLiyoLage sarva mithyAva tuMbida
kulavella jAti saMkaravAgi svadharma –
vaLidu surarige havissu illadiralu
jalaja saMBavage sumanasaru moreyiDalAgi
lalitadiMdali harige binnaisalu
sulaBa mahAsiri vijayaviTThalanu
olidu jayatanujage karadu nEmisidA || 4 ||
triviDitALa
huTTidanu vAsudEvaneMbo nAmadali
sRuShTige madhvamuni enisikoMDu
kuTTIdAradvaita mata kOlAhala mADi
vaiShNava matavanu uddharisi
viShNu sarvOttamanahudeMdu sthApisi
SiShTarige vEdasudheya karedU
vaiShNavAcAryara mataviDidu badukOdu
puShTinAma vijayaviTThalage balu prIti || 5 ||
aTTatALa
mAyiya mane muMde madakariyAgiddu
AyuShyABivRuddhi suKa baDuvadakiMtA
nAyiya mariyAgi madhvamatadavara
kAyidu mane muMde ippa kShaNave lEsu
BUyyOma pAtALadoLagidu siddhavu
rAya dharmaja mikka haridAsara nODe
SrIyarasanE paraneMdu pOdaru gatige
vAyumatava biTTu anyamatava sAre
tAyiya jaridu SvabacigeragidaMte
nIyaMte nAma SrIvijayaviTThalage
mAyi matadavaru Agaru kANO || 6 ||
AditALa
hanumAvatArakke kAlayama enisidA
maNimAnAsuranAdA BImAvatArakke
muni madhvarAyanAge BaNagu saMkaranAdA
janisidanu vairavannu januma mUraralli biDade
anila dEvana kUDa seNisi saMkaTa baTTu
anuva kANadale tamasinallIga baLalutippA
PaNanAma vijayaviTThala hanumana matadaMte
manuShyOttama kaDemodalu manadaMte PalavIvA || 7 ||
jate
prANagati baMdaru madhvamata biDadiri
prANadhRutunAma namma vijayaviTThalagarpiso ||
Leave a Reply