Raga:Hindola
ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ
(ಗುರುವಿಜಯವಿಟ್ಠಲ ಅಂಕಿತ)
ಪ್ರಾರ್ಥನಾ ಸುಳಾದಿ
( ಅರ್ಜುನಾವತಾರದ ಭಾರತ ಕಥಾ ದೃಷ್ಟಾಂತ,
ಐತಿಹಾಸಿಕ, ಅಹಂಕಾರದಿಂದ ಸರ್ವಜ್ಞಾನ
ಸಂಪತ್ತು ನಾಶ, ಮಮಕಾರ ಪರಿಹರಿಸಿ
ಅನುಗ್ರಹಿಸಲು ಪ್ರಾರ್ಥನಾ.)
ರಾಗ : ಹಿಂದೋಳ
ಧ್ರುವತಾಳ
ಅಂದು ಶರತಲ್ಪದಲ್ಲಿ ಮಲಗಿಸಿದದರಿಂದ
ಇಂದು ದುಃಖದ ಶಯ್ಯಾಲೊರಗಿಸಿದಿಯಾ
ಅಂದು ಶಸ್ತ್ರಾಸ್ತ್ರದಿಂದ ನೊಂದಿಸಿದದರಿಂದ
ಇಂದು ನುಡಿ ಅಂಬಿಲೆಚಿಸಿದಿಯಾ
ಅಂದು ಮಾನ್ಯನೆನಿಸಿ ವಂದಿಸಿ ಜನರಿಂದ
ಇಂದು ಖಳರಿಂದ ನಿಂದಿಸಿದೆಯಾ
ಅಂದೆನ್ನ ಪಕ್ಷ ವೊಹಿಸಿ ಸಖ್ಯನೆನಿಸಿ ಈಗ
ನಿಂದು ನೋಡದಂತೆ ದ್ವೇಷಿಸಿದಿಯಾ
ಅಂದು ಜ್ಞಾನದಿಂದ ಅಧಿಕನೆನಿಸಿ ಈಗ
ಮುಂದೆ ತಿಳಿಯದಂತೆ ಮಾಡಿದಿಯಾ
ಅಂದು ಬಲದಿಂದ ಶೂರನೆನಿಸಿ ಈಗ
ಮುಂದೆ ತಿಳಿಯದಂತೆ ಮಾಡಿದಿಯೊ
ಇಂದು ಕರವನೆ ಎತ್ತಸಮರ್ಥನೆ
ಅಂದು ಶತ್ರುಗಳು ಮೊಗವೆತ್ತಿ ನೋಡುವದಕ್ಕೆ
ಸಂದೇಹ ಬಡುವರು ಎನ್ನ ಕಡೆ
ಇಂದು ದುಷ್ಟರೆಲ್ಲ ಘುಡಿಘುಡಿಸುತ ಹೃದಯ –
ಮಂದಿರದೊಳು ಸೇರಿ ದಣಿಸುವರು
ಇಂದಿರೆ ಪತಿ ನಿನ್ನಿಂದ ಮಾಡಿದ ಕ್ಲಪ್ತ
ಸಿಂಧು ಜಾದ್ಯರೆಲ್ಲ ಮೀರಲೊಶವೆ
ಕಂದರ್ಪಪಿತ ನಿನ್ನ ನೆರೆನಂಬಿದವರಿಗೆ
ಕುಂದು ಮಾಡುವದು ಛಂದವೇನು
ಬಂಧು ಅನಿಮಿತ್ಯ ಗುರುವಿಜಯವಿಟ್ಠಲರೇಯ
ಇಂದು ಎಂದೆಂದು ನೀನೆ ಗತಿಯೋ || ೧ ||
ಮಟ್ಟತಾಳ
ಕುರುವೃದ್ಧನ ದುಃಖ ಕಾರಣಾಗಿದ್ದ
ವರ ಸತಿ ನಿರ್ಮಿಸಿದಾ ತೆರ ಇಂದಿಗೆ ಎನ್ನ
ಗರುವ ನೀಗುವದಕ್ಕೆ ಇವಳ ನೇಮಿಸಿ ಇನಿತು
ಶರ ಸಮ ನುಡಿ ಮಂಚದಲ್ಲೊರಗಿಸಿದೆಲೊ ದೇವ
ಸುರರೆಲ್ಲರು ಅಂದು ಮುನಿದು ಶಾಪವನೀಯೆ
ಪರಿ ಮೂರರಲಿಂದ ಸರಿ ಮಾಡಿದಿ ಸ್ವಾಮಿ
ಹರಿ ನಿನ್ನಿಂದಲೆ ಪರ ಸ್ವಪ್ನದಿ ತಿಳಿದು
ಮರಹು ಪುಟ್ಟಿತು ನಿನ್ನ ಬಂಧಕ ಶಕ್ತಿಯಲಿ
ಸರಿ ಹೋಯಿತು ಪೂರ್ವದ ಕರ್ಮದ ಫಲವೆಲ್ಲ
ಮರಳೆ ಮರಳೆ ಇದನು ಹಂಗಿಪದು ಸಲ್ಲ
ನರ ಸಾರಥಿ ಗುರುವಿಜಯವಿಟ್ಠಲರೇಯ
ಕರುಣ ಮಾಡಲಿಬೇಕು ಇನ್ನು ಕರ ಪಿಡಿದು || ೨ ||
ತ್ರಿವಿಡಿತಾಳ
ಪರಲೋಕಕ್ಕೆ ಬಾ ಎಂದು ಸೂಚಿಸಲಾಗಿ
ವರಭೂಮಿ (ಪರಭೂಮಿ) ವಾಸನಾ ತ್ಯಜಿಸಿದಾಗಿ
ಪರಿಯು ಇನಿತು ಮಾಡಿ ಇರಲಿ ವಲ್ಲೆನೊ ಎಂದು
ವರಲುವಂತೆ ಮಾಡಿ ನೋಡಿದಿಂದು
ಬರುವ ಹೋಗುವದಕ್ಕೆ ಸ್ವಾತಂತ್ರ ಎನಗುಂಟೆ
ಹರಿ ನೀ ನಡಿಸಿದಂತೆ ನಡೆವರೆಲ್ಲ
ಸರಿ ಹೋಯಿತೇ ನಿನ್ನ ಅನಿಮಿತ್ಯ ಸಖತನ
ಸ್ಥಿರವಾಗದಿರೆ ನಿನ್ನ ವಚನ ವ್ಯಭಿ –
ಚಾರವಾಗದೇನೊ ವಿಬುಧರಿಗಸಮ್ಮತ
ತೋರದಂತೆ ಮಾಡು ಕೃಪೆಯ ನೀಡು
ಪರಮ ಪುರುಷ ಗುರುವಿಜಯವಿಟ್ಠಲರೇಯ
ಜರಿದು ನೋಡಲಿ ಬೇಡ ಕಠಿಣತ್ವ ಬಿಡು ಬಿಡು || ೩ ||
ಅಟ್ಟತಾಳ
ಹಿಂದೊಂದು ಬಗೆಯಿಂದ ಗುರುದ್ರೋಹ ಘಟಿಸಿದಿ
ಇಂದೊಂದು ಪರಿಯಲ್ಲಿ ಒದಗಿಸಿದೆ ಅದೆ
ಮುಂದೆ ತಿಳಿಯದ ಮಂದ ಮನುಜಂಗೆ
ಪೊಂದಿದ ಪ್ರಾರಬ್ಧ ಜಾರಿ ಪೋಗುವದೆ
ಒಂದಾದರು ನಿನ್ನಿಂದ ವಿಹಿತವಾಗಿ
ಎಂದಿಗಾದರು ಮಾಡಿ(ಡ)ದ್ದು ನಿಜವಿತ್ತೆ
ಹಿಂದೆ ಇಂದು ಮುಂದೆ ಬಂದ ಪಾಪ ಪುಣ್ಯ
ತಂದೆ ನಿನ್ನ ಪಾದ ದ್ವಂದ್ವಾರವಿಂದಕ್ಕೆ
ಸಂದೇಹವಿಲ್ಲದೆ ಸಮರ್ಪಣೆ ಮಾಡಿದೆ
ಕುಂದುಗಳೆಣಿಸದೆ ಪೊರಿಯಬೇಕೆನ್ನನು ಮು –
ಕುಂದ ಮುರಾಂತಕ ಗುರುವಿಜಯವಿಟ್ಠಲರೇಯ
ಪೊಂದಿಸು ಭಕ್ತರ ಸಂಗ ಸುಖದಲ್ಲಿ || ೪ ||
ಆದಿತಾಳ
ಮಮಕಾರದಿಂದಲೆ ಅಂಶಿಗೆ ಭಿನ್ನನಾದೆ
ಮಮಕಾರದಿಂದಲೆ ಅಂಶಕ್ಕೆ ಭಿನ್ನನಾದೆ
ಮಮಕಾರದಿಂದಲೆ ಪದವಿಗೆ ದೂರನಾದೆ
ಮಮಕಾರದಿಂದಲೆ ಜನುಮವೆನೊದಗಿತು
ಮಮಕಾರದಿಂದಲೆ ಸೌಖ್ಯವ ತೊಲಗಿತು
ಮಮಕಾರದಿಂದಲೆ ಜ್ಞಾನತಿರೋಭಾವ
ಮಮಕಾರದಿಂದಲೆ ಸಕಲ ದುಃಖಾಶ್ರಯ
ಮಮಕಾರದಿಂದಲೆ ನಾಖತಿಯಿಲ್ಲ ಜೀವನಕ್ಕೆ
ನಮಮ ನಮಮ ಎಂದು ದೃಢವಾಗಿ ತಿಳಿದರ್ಗೆ
ಶ್ರಮವಿಲ್ಲ ಶ್ರಮವಿಲ್ಲ ಶ್ರುತಿ ಸ್ಮೃತಿ ಸಮ್ಮತ
ಅಮರವಂದಿತ ನಿನ್ನ ಮಾಯವೆಂಬೊ ಪಾಶದಲ್ಲಿ
ಅಮರಾಧ್ಯಕ್ಷರೆಲ್ಲ ಪ್ರವಿಷ್ಟರಾಗುವರು
ಕುಮತಿಯು ಎನ್ನಿಂದ ದಾಟುವ ಬಗೆಯೆಂತೊ
ಕಮಲಾಪ್ತ ತೇಜ ತವಪಾದಕ್ಕೆ ನಮೊ ನಮೊ
ಮಮಕಾರ ಕೊಡದಿರು ಇನ್ನಿಂದಿಗಾದರು
ಶ್ರೀಮನೋಹರ ಗುರುವಿಜಯವಿಟ್ಠಲರೇಯ
ಶಮ ದಮಾದಿಗಳಿತ್ತು ಸೇರಿಸು ನಿಜ ಸ್ಥಾನ || ೫ ||
ಜತೆ
ಸತ್ಯ ಸಂಕಲ್ಪಕ್ಕೆ ಹಾನಿ ಎಂದಿಗೂ ಉಂಟೆ
ನಿತ್ಯ ತೃಪ್ತನೆ ಗುರುವಿಜಯವಿಟ್ಠಲರೇಯ ||
( ರಾಕ್ಷಸ ಸಂವತ್ಸರ ಭಾದ್ರಪದ ಶುದ್ಧ
೧೦ ಶುಕ್ರವಾರ)
ಶರತಲ್ಪದಲ್ಲಿ = ಬಾಣಗಳ ಹಾಸಿಕೆ(ಮಂಚ);
ನುಡಿ ಅಂಬು = ವಾಕ್ಯವೆಂಬ ಬಾಣ;
ಸಿಂಧು ಜಾದ್ಯರೆಲ್ಲ = ಲಕ್ಷ್ಮ್ಯಾ ದಿಗಳು;
ಅಂಶಿಗೆ = ಮೂಲರೂಪಕ್ಕೂ;
ಅಂಶಕ್ಕೆ = ಅವತಾರ ರೂಪಕ್ಕೂ;
ಖತಿ = ಕೋಪ, ಸಿಟ್ಟು – ನಾಖತಿ = ಶಾಂತಿ;
ನಮಮ ನಮಮ = ನಾನಲ್ಲ ನನ್ನದಲ್ಲ;
ಅಮರಾಧ್ಯಕ್ಷರು = ದೇವಶ್ರೇಷ್ಠರು;
SrImodalakallu SEShadAsArya viracita
(guruvijayaviTThala aMkita)
prArthanA suLAdi
( arjunAvatArada BArata kathA dRuShTAMta,
aitihAsika, ahaMkAradiMda sarvaj~jAna
saMpattu nASa, mamakAra pariharisi
anugrahisalu prArthanA.)
rAga : hiMdOLa
dhruvatALa
aMdu Saratalpadalli malagisidadariMda
iMdu duHKada SayyAloragisidiyA
aMdu SastrAstradiMda noMdisidadariMda
iMdu nuDi aMbilecisidiyA
aMdu mAnyanenisi vaMdisi janariMda
iMdu KaLariMda niMdisideyA
aMdenna pakSha vohisi saKyanenisi Iga
niMdu nODadaMte dvEShisidiyA
aMdu j~jAnadiMda adhikanenisi Iga
muMde tiLiyadaMte mADidiyA
aMdu baladiMda SUranenisi Iga
muMde tiLiyadaMte mADidiyo
iMdu karavane ettasamarthane
aMdu SatrugaLu mogavetti nODuvadakke
saMdEha baDuvaru enna kaDe
iMdu duShTarella GuDiGuDisuta hRudaya –
maMdiradoLu sEri daNisuvaru
iMdire pati ninniMda mADida klapta
siMdhu jAdyarella mIraloSave
kaMdarpapita ninna nerenaMbidavarige
kuMdu mADuvadu CaMdavEnu
baMdhu animitya guruvijayaviTThalarEya
iMdu eMdeMdu nIne gatiyO || 1 ||
maTTatALa
kuruvRuddhana duHKa kAraNAgidda
vara sati nirmisidA tera iMdige enna
garuva nIguvadakke ivaLa nEmisi initu
Sara sama nuDi maMcadalloragisidelo dEva
surarellaru aMdu munidu SApavanIye
pari mUraraliMda sari mADidi svAmi
hari ninniMdale para svapnadi tiLidu
marahu puTTitu ninna baMdhaka Saktiyali
sari hOyitu pUrvada karmada Palavella
maraLe maraLe idanu haMgipadu salla
nara sArathi guruvijayaviTThalarEya
karuNa mADalibEku innu kara piDidu || 2 ||
triviDitALa
paralOkakke bA eMdu sUcisalAgi
varaBUmi (paraBUmi) vAsanA tyajisidAgi
pariyu initu mADi irali valleno eMdu
varaluvaMte mADi nODidiMdu
baruva hOguvadakke svAtaMtra enaguMTe
hari nI naDisidaMte naDevarella
sari hOyitE ninna animitya saKatana
sthiravAgadire ninna vacana vyaBi –
cAravAgadEno vibudharigasammata
tOradaMte mADu kRupeya nIDu
parama puruSha guruvijayaviTThalarEya
jaridu nODali bEDa kaThiNatva biDu biDu || 3 ||
aTTatALa
hiMdoMdu bageyiMda gurudrOha GaTisidi
iMdoMdu pariyalli odagiside ade
muMde tiLiyada maMda manujaMge
poMdida prArabdha jAri pOguvade
oMdAdaru ninniMda vihitavAgi
eMdigAdaru mADi(Da)ddu nijavitte
hiMde iMdu muMde baMda pApa puNya
taMde ninna pAda dvaMdvAraviMdakke
saMdEhavillade samarpaNe mADide
kuMdugaLeNisade poriyabEkennanu mu –
kuMda murAMtaka guruvijayaviTThalarEya
poMdisu Baktara saMga suKadalli || 4 ||
AditALa
mamakAradiMdale aMSige BinnanAde
mamakAradiMdale aMSakke BinnanAde
mamakAradiMdale padavige dUranAde
mamakAradiMdale janumavenodagitu
mamakAradiMdale sauKyava tolagitu
mamakAradiMdale j~jAnatirOBAva
mamakAradiMdale sakala duHKASraya
mamakAradiMdale nAKatiyilla jIvanakke
namama namama eMdu dRuDhavAgi tiLidarge
Sramavilla Sramavilla Sruti smRuti sammata
amaravaMdita ninna mAyaveMbo pASadalli
amarAdhyakSharella praviShTarAguvaru
kumatiyu enniMda dATuva bageyeMto
kamalApta tEja tavapAdakke namo namo
mamakAra koDadiru inniMdigAdaru
SrImanOhara guruvijayaviTThalarEya
Sama damAdigaLittu sErisu nija sthAna || 5 ||
jate
satya saMkalpakke hAni eMdigU uMTe
nitya tRuptane guruvijayaviTThalarEya ||
( rAkShasa saMvatsara BAdrapada Suddha
10 SukravAra)
Saratalpadalli = bANagaLa hAsike(maMca);
nuDi aMbu = vAkyaveMba bANa;
siMdhu jAdyarella = lakShmyA digaLu;
aMSige = mUlarUpakkU;
aMSakke = avatAra rUpakkU;
Kati = kOpa, siTTu – nAKati = SAMti;
namama namama = nAnalla nannadalla;
amarAdhyakSharu = dEvaSrEShTharu;
Leave a Reply