Raga:Purvi Kalyani
ಶ್ರೀವೇಣುಗೋಪಾಲದಾಸಾರ್ಯ ವಿರಚಿತ
ಶ್ರೀಪ್ರಾಣದೇವರ ಸ್ತೋತ್ರ ಸುಳಾದಿ
ರಾಗ ಪೂರ್ವಿಕಲ್ಯಾಣಿ
ಧ್ರುವತಾಳ
ಪರಮ ಮುಖ್ಯಪ್ರಾಣನೆ ಪರಿಶುದ್ಧ ಚರಿತನೆ
ಪರಿಪೂರ್ಣ ಭಕ್ತಿಯುಳ್ಳಪಾರ ಮಹಿಮನೆ
ವರಣಿಪರಾರು ನಿನ್ನ ವದನದಿಂದಲಿ ಗುರುವೆ
ನರಹರಿಯ ನವವಿಧದ್ವೇಷಿ ಹಂತಾ
ಥರವಲ್ಲ ಥರವಲ್ಲ ತರುಣಿ ಭಾರತಿ ಮಿಕ್ಕ
ಸುರರಿಗೆ ಸುಲಭವಲ್ಲ ಸುಖಪೂರ್ಣನೆ
ಶರಧಿಯ ಉದಕ, ನಭ ಭರಿತವಾದುಡುಗಣನೆ
ತೋರೆ ಮಳಲು, ಮಹಾ ಮಳೆಯ ಬಿಂದು
ಕರಣದಿ ವಿಸ್ತರಿಸಿ ಎಣಿಸಿ ಗುಣಿಪರಾರು
ವರ ವೇದವೇದ್ಯ, ಸರ್ವ ಜಡಚೇತನಾ
ಇರುವ, ಪುಟ್ಟುವ ಮುಂದೆ ಸರಸಿಜಭವ ಮಿಕ್ಕ
ಸುರರು ಸುಗುಣ ಒಂದು ಅಧಿಕರೆನಿಸಿ
ಕರುಣಿಸಿ ಭೂಮಿಯೊಳು ವರದೇಹವನು ಇತ್ತು
ಹರಿ, ನಿನ್ನ ಮತದೊಳು ತಂದಿಟ್ಟರೊ
ಮರಿಯಾದೆ ಮತ್ತೆ ಎನ್ನ ಮನದೊಳು ಪೊಕ್ಕು ಮತ್ತೆ
ಗುರುಗಳ ಪಾದಭಕುತಿ ಎರಕ ಮಾಡಿ –
ದರು ಮತ್ತೆ ಅದರೊಳು ಗುರುಗಳು ಕರುಣಿಸೆನ್ನ ಉ –
ದರದೊಳು ತಿಳುಹಿ ಸ್ತೋತ್ರ ನುಡಿಸಿದಂತೆ
ಬರಿವೆನಯ್ಯಾ ನಾನು ಒಂದರಿತವನಲ್ಲ
ಸರುವತಂತ್ರ ನೀನೆ ಕಾರಣನೊ
ಗಿರಿಜೇಶಾದಿಗಳೆಲ್ಲ ಕರಮುಗಿದು ಕೊಂಡಾಡುತ
ಭರದ ಭಕುತಿಯೊಳು ಲೋಲ್ಯಾಡಲು ಈ
ನರನೇನು ಎಂದು ದೂರ ನೋಡಲಾಗದು ಇನ್ನು
ದುರವಿಯಿಂದ ರಿಕ್ತನಿಗೆ ಪೂಜೆಯುಂಟು
ಪರಿಪಾಲಿಸಿ ಎನ್ನನು ಕರೆವದು, ವಚನವ
ನೆರೆನಂಬಿದವ ನಿನ್ನ ದಾಸರನು
ದುರುಳಭಂಜನ ವೇಣುಗೋಪಾಲವಿಟ್ಠಲಂಗವ –
ಸರದಾಳು ನೀನು ಕೊಡುವೆ ತ್ರಿವಿಧಜೀವರಿಗೆ ॥ 1 ॥
ಮಟ್ಟತಾಳ
ಪ್ರತಿ ಪ್ರತಿ ಭೂಮಿಗಳು ಪ್ರತಿ ಪ್ರತಿ ವನಧಿಗಳು
ಪ್ರತಿ ಪ್ರತಿ ಲೋಕಗಳು ಪ್ರತಿ ಪ್ರತಿ ಸ್ಥಾನಗಳು
ಪ್ರತಿ ಪ್ರತಿ ಪರ್ವತ ಪ್ರತಿ ಪ್ರತಿ ಆವರಣ
ಪ್ರತಿ ಪ್ರತಿ ವೇದ ಪ್ರತಿ ಪ್ರತಿ ಕಾಲ
ಪ್ರತಿ ಪ್ರತಿ ದೇಶ ಪ್ರತಿ ಪ್ರತಿ ನಭ
ಪ್ರತಿ ಪ್ರತಿ ಜೀವರಿಗೆ ಪ್ರತಿ ಪ್ರತಿ ದೇಹಗಳು
ಪ್ರತಿ ಪ್ರತಿಗಳಲ್ಲಿ ಸತತ ನಿನ್ನಯ ರೂಪ
ತತು ತತು ಆಕಾರ ತತು ವರ್ನಾ
ತತುನಾಮದಲ್ಲಿ ಒಳಗೆ ಹೊರಗೆ ಅಂಶ
ಪ್ರತತನಾಗಿ ಇದ್ದು ಪರಮಾಣುಗಳಲ್ಲಿ
ಸತಿಯ ಸಹಿತ ಸರ್ವಾಕಾರ ವ್ಯಾಪ್ತನಾಗಿ
ರತಿಪತಿ ಜನಕನ್ನ ನುತಿಸಿ ಪೂಜಿಸಿ ಭ –
ಕುತಿ ಭರಿತ ವೇದೋಕುತ ಮತ್ಯಾನುಗುಣಗಳನ್ನ
ವಿತತದಿ ಕೊಂಡಾಡಿದಿ ವಿಶ್ವದೊಳಗೆ ಜೀವ –
ಗತನಾದ ಹರಿಯ ಗುಣಗಳ , ಮಹಿಮೆಗಳ
ಅತಿಶಯದಲಿ ತಿಳಿದು ಅನಂತ ತ್ರಿರೂಪ
ತತು ತತು ಸ್ಥಾನದಲಿ ನಿನ್ನ ಪೂಜಿಪೆ ಸತ್ಯಾ –
ಮಿತ ಮಹಿಮ, ಮೂಲ ಸ್ಥಾನದಿ ಬಿಂಬನ್ನ
ಕೃತಿ ಧ್ಯಾನ ಮಾಳ್ಪೆ ಸರ್ವ ಸಂಧಾನದಿ ಕ್ಲಿ –
ಪುತ ಕಾಲದಲಿ ಕಾಂಬಿನೆ ಪ್ರವಾಹವತು
ಇತರ ರೂಪತ್ರಯವ ಅಲ್ಲಲ್ಲೆ ನುತಿಗೈವೆ
ಪೃಥಿವಿ ಮೊದಲಾದಾವರಣದಿಂದಲಿ ಯು –
ಕುತವಾದ ಬೊಮ್ಮಾಂಡವ ಮತ್ತೆ ಉಂಗುಟದಿಂದ
ಗತಿ ತಪ್ಪದಂತೆ ಗಮನಾಗಮನಗಳನ್ನು ಯೈದಿ
ಸ್ಥಿತವಾಗುವದೆ ಏನೇನು ಮಾಡಿದರದು
ಕೃತಿ ಙಪತಿ ವೇಣುಗೋಪಾಲವಿಟ್ಠಲನ್ನಾ –
ಶ್ರಿತನಾಗಿ ಸ್ವಲ್ಪ ಕೃತಿ ತೋರುವ ಜಗಕೆ ॥ 2 ॥
ರೂಪಕತಾಳ
ಮಿನಗುವ ಮೂರಾದ ಪರಿಚ್ಛೇದಗಳಲ್ಲಿ
ಘನ ವ್ಯಾಪಾರದ ಸಿರಿ-ಭೂ-ದುರ್ಗಾರಮಣನ್ನ
ಅನುದಿನ ಪೂಜಿಸುತ ಅಲ್ಲಿಂದ ಸೂಕ್ಷ್ಮ –
ತನುವೆ ಮೊದಲಾದ ಈ ಸ್ಥೂಲ ದೇಹಗಳಲ್ಲಿ
ಅನಿಮಿಷರು ಇರುವರು ವಿನತಸುತ ಮೊದಲಾದ
ದನುಜರು ಅಲ್ಲಲ್ಲಿ ಪೊಂದಿಕೊಂಡಿಪ್ಪರು
ಮನನ ಮಾಡುತ ದ್ವೇಷ ತಾರತಮ್ಯದಿಂದ
ದನುಜೇಂದ್ರಗೆ ನೀನೆ ಪ್ರೇರಕನೊ ಅಸುರ –
ಗಣಕೆ ಸುರರೆಲ್ಲರು ಪ್ರೇರಕರೊ ನಿನ್ನಿಂದ
ತೃಣ ಜೀವ ಕಡಿಯಾಗಿ ವಾಣಿ ಮೊದಲಾದ
ತೃಣ ತುಲ್ಯರಯ್ಯಾ ನೀ ಚೇಷ್ಟೆ ಮಾಡಿಸದಿರಲು
ವನಜಾಂಡದೊಡಿಯ ಸಿರಿ ವೇಣುಗೋಪಾಲವಿಟ್ಠಲ
ಅನುಕೂಲವಾಗಿ ನಿನ್ನೊಳು ಪೊಂದಿ ವೊಲಿದಿಪ್ಪ ॥ 3 ॥
ಝಂಪೆತಾಳ
ನಿನ್ನಿಚ್ಛೆಯಾದರೆ ಹರಿ ಇಚ್ಛೆಯಾದಂತೆ
ನಿನ್ನ ಬಲವಾಗೆ ಹರಿಯ ಬಲವಾದಂತೆ
ನಿನ್ನ ದಯವಾಗಲು ಹರಿಯ ದಯವಾದಂತೆ
ನಿನ್ನ ಒಲಿಸಲು ಹರಿಯ ಒಲಿಸಿದಂತೆ
ನಿನ್ನ ಪೊಗಳಲಾಗಿ ಹರಿಯ ಪೊಗಳಿದಂತೆ
ನಿನ್ನ ಗಾಯನ ಹರಿಯ ಗಾಯನದಂತೆ
ನಿನ್ನ ಪೂಜೆಯ ಮಾಡೆ ಹರಿಯ ಪೂಜಿಸಿದಂತೆ
ನಿನ್ನ ಪೊಂದಿರಲು ಹರಿಯ ಪೊಂದಿದಂತೆ
ನಿನ್ನಾಜ್ಞೆ ಮೀರಿ ನಡೆದವರುಂಟೆ ಜಗದೊಳಗೆ
ನಿನ್ನ ಚಾರಿತ್ರೆಗಳಿಗೀಡುಂಟೆ ಜಗದೊಳಗೆ
ನಿನ್ನ ಪೋಲುವರಾರು ಘನ್ನ ದಯಸುರತರುವೆ
ಅನ್ನಂತ ಚರಿತ ಗುಣಪೂರ್ಣ ಗುರುವೆ
ಚನ್ನ ಮೂರುತಿ ವೇಣುಗೋಪಾಲವಿಟ್ಠಲ
ನಿನ್ನಾಧೀನದಿ ಜಗದವ್ಯಾಪಾರಗೈಸುವ ॥ 4 ॥
ತ್ರಿವಿಡಿತಾಳ
ಆವಾವ ಲೋಕದೊಳಗೆ ನಿನಗೆ ಪ್ರತಿಭಟರಿಲ್ಲ
ಆವಾವ ಲೋಕಗಳು ನೀನು ಅರಿಯದವಲ್ಲ
ಆವಾವ ಜೀವರಿಗೆ ಆಗುವ ಗತಿಗಳು
ದೇವ ನಿನ್ನಿಂದಲೇ ತಾ ಒಂದು ಮಾಳ್ಪುದಿಲ್ಲಾ
ಈ ವನಜಜಾಂಡವು ಹಿಂದೆ ಮುಂದಾಗುವ
ಆ ವನಜಾಂಡದಲಿ ಆಗುವುದೆಲ್ಲ
ಜೀವರಗತಿ ಜಡಭಾವ ವಿಶೇಷಗಳು
ಸಾವಧಾನದಿ ನಿನ್ನ ಚಿತ್ತದಲಿ ತಿಳಿವೈಯ್ಯಾ
ಈ ವಿಧವಾದ ನಿನ್ನಯ ಶಕುತಿಗೆ ಮತ್ತೆ
ಆವನಯ್ಯಾ ಈಡು ಈ ಜಗದಿ
ಪೂವಿಲ್ಲನಯ್ಯಾ ಸಿರಿ ವೇಣುಗೋಪಾಲವಿಟ್ಠಲ
ಧಾವಂತವಿಲ್ಲದೆ ನಿನ್ನ ಸಲಹುವ ಅಧಿಕ ॥ 5 ॥
ಅಟ್ಟತಾಳ
ಅಪರಿಮಿತ ಅಂಶ ಅಪರಿಮಿತ ಬಲ
ಅಪರಿಮಿತ ಜ್ಞಾನ ಅಪರಿಮಿತ ತೇಜ
ಅಪರಿಮಿತ ಧೈರ್ಯ ಅಪರಿಮಿತ ತನು ವಿನೋ –
ದಿಪ ಅಹಿಪಾದಿ ವ್ಯಾಪಕ ದೇವಾರಿಗಳ ಮಲ್ಲ
ಶಪಥ ಪೂರ್ವಕದಿಂದ
ಚಪಲ ಸಿರಿವರ ವೇಣುಗೋಪಾಲವಿಟ್ಠಲನ್ನ
ಅಪನಿಯನಾಗಿ ಧೇನಿಪೆ ಸರ್ವಕಾಲ ॥ 6 ॥
ಆದಿತಾಳ
ಈ ರೀತಿ ಮಹಿಮನು ಧಾರುಣಿಯೊಳಗಿನ್ನು
ಮೂರಾವತಾರದಿ ತೋರಿದೆ ಕೃತ್ಯಗಳನು
ಬಾರಿ ಬಾರಿಗೆ ಹರಿಯ ಸೇವೆ ಯೆನಿಸಿ ಬಹು –
ಮೀರಿದ ಭಕ್ತನೆಂದು ಕೀರುತಿ ಪಡೆದೆ ಅಯ್ಯಾ
ಓರಂತೆ ಹಗಲು ಇರುಳು ನೀನು ಹೊತ್ತು –
ಮೀರದೆ ಒಂದು ಕ್ಷಣ ಪಾರ ಜೀವರೊಳಗೆ
ಮಾರುತ, ಮಂತ್ರವನ್ನು ಒಬ್ಬೊಬ್ಬರಲ್ಲಿ ನಿಂದು
ಮೂರೇಳು ಸಾವಿರ ಆರುನೂರವ ಮಾಡಿ
ಆರಾಧಿಸುತ್ತ ಹರಿಯಾಕಾರವ ಕಾಣಲದು
ಚೋರ ಭಕುತಿ ಎಂದವತಾರ ಮಾಡಿದೆ ಧೊರಿಯೆ
ಕ್ರೂರರಸ ಒಂದು ಎಲ್ಲಿಹದೆನಬೇಕು
ಪ್ರೇರಣೆ ನಿನ್ನ ಹೊರತು ತೋರು ಅವರೊಳಗಿನ್ನು
ಸಾರ ಹೃದಯರ ಸಂಸಾರ ವೃಕ್ಷದ ಮೂಲ
ಬೇರರಸಿ ಕೀಳಲು ಆಕಾರ ಧರಿಸಿದೆ ನಿನ್ನ –
ವಾರೆ ನೋಟದಿ ನೀನು ಎನ್ನ ನೋಡಿದರೆ
ಆರು ಉಳದವರು ಉದ್ಧಾರವಾಗಲು ಮತ್ತೆ
ಅರಿತೀ ಸಂಗತಿ ವ್ಯಕ್ತನಾದೆನು ಎನ್ನ
ತೋರು ನೀನಿಲ್ಲದ ಪರಮಾಣು ಪ್ರದೇಶ ಒಂದು
ಕಾರಣ ಒಂದು ಎನಗೆ ಕೂಗಿಸುವದು ಜೀಯ್ಯಾ
ಕಾರುಣ್ಯ, ದ್ವೇಷ ಭಕ್ತಿ ಲವಲವಿಕೆ ಮೂರು ಪರಿ
ಈ ರೀತಿ ಅಲ್ಲದಿನ್ನು ಬೇರೆ ಒಂದಿಲ್ಲ ನಿನಗೆ
ತೋರಿದ ಬಗೆಯನ್ನು ಸಾರಿದೆ ಬಿನ್ನಪದಿ
ಕಾರುಣ್ಯ ನಿಧಿ ವೇಣುಗೋಪಾಲವಿಟ್ಠಲಂಗೆ
ಸಾರಥಿಯಾಗಿ ಜಗವ್ಯಾಪಾರಗೈಸುವೆ ಮುಖ್ಯ ॥ 7 ॥
ಜತೆ
ನಿನ್ನ ಬಿನ್ನಪದಂತೆ ಮಾಡುವ ಕ್ರಿಯೆಗಳನು
ಇನ್ನು ಜೀವರೊಳಿದ್ದ ವೇಣುಗೋಪಾಲವಿಟ್ಠಲ ॥
SrIvENugOpAladAsArya viracita
SrIprANadEvara stOtra suLAdi
rAga pUrvikalyANi
dhruvatALa
parama muKyaprANane pariSuddha caritane
paripUrNa BaktiyuLLapAra mahimane
varaNiparAru ninna vadanadiMdali guruve
narahariya navavidhadvEShi haMtA
tharavalla tharavalla taruNi BArati mikka
surarige sulaBavalla suKapUrNane
Saradhiya udaka, naBa BaritavAduDugaNane
tOre maLalu, mahA maLeya biMdu
karaNadi vistarisi eNisi guNiparAru
vara vEdavEdya, sarva jaDacEtanA
iruva, puTTuva muMde sarasijaBava mikka
suraru suguNa oMdu adhikarenisi
karuNisi BUmiyoLu varadEhavanu ittu
hari, ninna matadoLu taMdiTTaro
mariyAde matte enna manadoLu pokku matte
gurugaLa pAdaBakuti eraka mADi –
daru matte adaroLu gurugaLu karuNisenna u –
daradoLu tiLuhi stOtra nuDisidaMte
barivenayyA nAnu oMdaritavanalla
saruvataMtra nIne kAraNano
girijESAdigaLella karamugidu koMDADuta
Barada BakutiyoLu lOlyADalu I
naranEnu eMdu dUra nODalAgadu innu
duraviyiMda riktanige pUjeyuMTu
paripAlisi ennanu karevadu, vacanava
nerenaMbidava ninna dAsaranu
duruLaBaMjana vENugOpAlaviTThalaMgava –
saradALu nInu koDuve trividhajIvarige || 1 ||
maTTatALa
prati prati BUmigaLu prati prati vanadhigaLu
prati prati lOkagaLu prati prati sthAnagaLu
prati prati parvata prati prati AvaraNa
prati prati vEda prati prati kAla
prati prati dESa prati prati naBa
prati prati jIvarige prati prati dEhagaLu
prati pratigaLalli satata ninnaya rUpa
tatu tatu AkAra tatu varnA
tatunAmadalli oLage horage aMSa
pratatanAgi iddu paramANugaLalli
satiya sahita sarvAkAra vyAptanAgi
ratipati janakanna nutisi pUjisi Ba –
kuti Barita vEdOkuta matyAnuguNagaLanna
vitatadi koMDADidi viSvadoLage jIva –
gatanAda hariya guNagaLa , mahimegaLa
atiSayadali tiLidu anaMta trirUpa
tatu tatu sthAnadali ninna pUjipe satyA –
mita mahima, mUla sthAnadi biMbanna
kRuti dhyAna mALpe sarva saMdhAnadi kli –
puta kAladali kAMbine pravAhavatu
itara rUpatrayava allalle nutigaive
pRuthivi modalAdAvaraNadiMdali yu –
kutavAda bommAMDava matte uMguTadiMda
gati tappadaMte gamanAgamanagaLannu yaidi
sthitavAguvade EnEnu mADidaradu
kRuti ~gapati vENugOpAlaviTThalannA –
SritanAgi svalpa kRuti tOruva jagake || 2 ||
rUpakatALa
minaguva mUrAda paricCEdagaLalli
Gana vyApArada siri-BU-durgAramaNanna
anudina pUjisuta alliMda sUkShma –
tanuve modalAda I sthUla dEhagaLalli
animiSharu iruvaru vinatasuta modalAda
danujaru allalli poMdikoMDipparu
manana mADuta dvESha tAratamyadiMda
danujEMdrage nIne prErakano asura –
gaNake surarellaru prErakaro ninniMda
tRuNa jIva kaDiyAgi vANi modalAda
tRuNa tulyarayyA nI cEShTe mADisadiralu
vanajAMDadoDiya siri vENugOpAlaviTThala
anukUlavAgi ninnoLu poMdi volidippa || 3 ||
JaMpetALa
ninnicCeyAdare hari icCeyAdaMte
ninna balavAge hariya balavAdaMte
ninna dayavAgalu hariya dayavAdaMte
ninna olisalu hariya olisidaMte
ninna pogaLalAgi hariya pogaLidaMte
ninna gAyana hariya gAyanadaMte
ninna pUjeya mADe hariya pUjisidaMte
ninna poMdiralu hariya poMdidaMte
ninnAj~je mIri naDedavaruMTe jagadoLage
ninna cAritregaLigIDuMTe jagadoLage
ninna pOluvarAru Ganna dayasurataruve
annaMta carita guNapUrNa guruve
canna mUruti vENugOpAlaviTThala
ninnAdhInadi jagadavyApAragaisuva || 4 ||
triviDitALa
AvAva lOkadoLage ninage pratiBaTarilla
AvAva lOkagaLu nInu ariyadavalla
AvAva jIvarige Aguva gatigaLu
dEva ninniMdalE tA oMdu mALpudillA
I vanajajAMDavu hiMde muMdAguva
A vanajAMDadali Aguvudella
jIvaragati jaDaBAva viSEShagaLu
sAvadhAnadi ninna cittadali tiLivaiyyA
I vidhavAda ninnaya Sakutige matte
AvanayyA IDu I jagadi
pUvillanayyA siri vENugOpAlaviTThala
dhAvaMtavillade ninna salahuva adhika || 5 ||
aTTatALa
aparimita aMSa aparimita bala
aparimita j~jAna aparimita tEja
aparimita dhairya aparimita tanu vinO –
dipa ahipAdi vyApaka dEvArigaLa malla
Sapatha pUrvakadiMda
capala sirivara vENugOpAlaviTThalanna
apaniyanAgi dhEnipe sarvakAla || 6 ||
AditALa
I rIti mahimanu dhAruNiyoLaginnu
mUrAvatAradi tOride kRutyagaLanu
bAri bArige hariya sEve yenisi bahu –
mIrida BaktaneMdu kIruti paDede ayyA
OraMte hagalu iruLu nInu hottu –
mIrade oMdu kShaNa pAra jIvaroLage
mAruta, maMtravannu obbobbaralli niMdu
mUrELu sAvira ArunUrava mADi
ArAdhisutta hariyAkArava kANaladu
cOra Bakuti eMdavatAra mADide dhoriye
krUrarasa oMdu ellihadenabEku
prEraNe ninna horatu tOru avaroLaginnu
sAra hRudayara saMsAra vRukShada mUla
bErarasi kILalu AkAra dhariside ninna –
vAre nOTadi nInu enna nODidare
Aru uLadavaru uddhAravAgalu matte
aritI saMgati vyaktanAdenu enna
tOru nInillada paramANu pradESa oMdu
kAraNa oMdu enage kUgisuvadu jIyyA
kAruNya, dvESha Bakti lavalavike mUru pari
I rIti alladinnu bEre oMdilla ninage
tOrida bageyannu sAride binnapadi
kAruNya nidhi vENugOpAlaviTThalaMge
sArathiyAgi jagavyApAragaisuve muKya || 7 ||
jate
ninna binnapadaMte mADuva kriyegaLanu
innu jIvaroLidda vENugOpAlaviTThala ||
Leave a Reply