Composer : Shri Kanakadasaru
ಆವ ಸಿರಿಯಲಿ ನೀನು ಎನ್ನ ಮರೆತೆ
ದೇವ ಜಾನಕಿರಮಣ ಪೇಳು ರಘುಪತಿಯೆ |ಪ|
ಸುರರ ಸೆರೆಯನು ಬಿಡಿಸಿ ಬಂದೆನೆಂಬಾ ಸಿರಿಯೆ
ಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆ
ಶರಧಿ ಸೇತುವೆಯ ಕಟ್ಟಿದೆನೆನ್ನುವಾ ಸಿರಿಯೆ
ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ |೧|
ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬಾ ಸಿರಿಯೆ
ಮೃಡ ನಿನ್ನ ಸಖನಾದನೆಂಬ ಸಿರಿಯೆ
ಬಿಡದೆ ದ್ರೌಪದಿ ಮಾನ ಕಾಯ್ದನೆಂಬ ಸಿರಿಯೆ
ದೃಢವಾಗಿ ಹೇಳೆನಗೆ ದೇವಕೀಸುತನೆ |೨|
ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ
ಕಾಮ ನಿನ್ನ ಸುತನಾದನೆಂಬ ಸಿರಿಯೆ
ಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ
ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ |೩|
ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆ
ಹನುಮ ನಿನ್ನ ಬಂಟನಾದನೆಂಬ ಸಿರಿಯೆ
ಬಿನುಗುದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆ
ಅನುಮಾನ ಮಾಡದೆ ಪೇಳೋ ನರಹರಿಯೆ |೪|
ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ
ಪಂಥವೇ ನಿನಗಿದು ಆವ ನಡತೆ
ಕಂತುಪಿತ ಕಾಗಿನೆಲೆಯಾದಿಕೇಶವ ರಂಗ
ಚಿಂತೆಯನು ಬಿಡಿಸಿ ಸಂತೋಷವ ಪಡಿಸೊ |೫|
Ava siriyali nInu enna marete
dEva jAnakiramaNa pELu raGupatiye |pa|
surara sereyanu biDisi baMdeneMbA siriye
kari moreya lAlisideneMba siriye
Saradhi sEtuveya kaTTidenennuvA siriye
sthiravAgi hELenage hELu raGupatiye |1|
kaDaloLage mane mADi malagideneMbA siriye
mRuDa ninna saKanAdaneMba siriye
biDade draupadi mAna kAydaneMba siriye
dRuDhavAgi hELenage dEvakIsutane |2|
BUmiyanu mUraDiya mADideneMba siriye
kAma ninna sutanAdaneMba siriye
A mahAlakumi ninna satiyAdaLeMba siriye
prEmadali hELenage svAmi acyutane |3|
manujarellaru ninna stutisuvareMba siriye
hanuma ninna baMTanAdaneMba siriye
binugudaivagaLu ninageNeyillaveMba siriye
anumAna mADade pELO narahariye |4|
iMtu siriyali nInu enna maretare svAmi
paMthavE ninagidu Ava naDate
kaMtupita kAgineleyAdikESava raMga
ciMteyanu biDisi saMtOShava paDiso |5|
Leave a Reply