Draupadi mana samrakshane

Composer: Shri Purandara dasaru

By Smt.Shubhalakshmi Rao

ರಂಗನೊಲಿದ ನಮ್ಮ ಕೃಷ್ಣನೊಲಿದ ||ಪ||
ಅಂಗನೆ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು ||ಅ||

ಕರಿಯ ಪುರದ ನಗರದಲ್ಲಿ ಕೌರವರು ಪಾಂಡವರು
ಧರೆಯ ಒಡ್ಡಿ ಜೂಜನಿಟ್ಟು ಲೆತ್ತವಾಡಲು
ಪರಮಪಾಪಿ ಶಕುನಿ ತಾನು ಪಾಶದೊಳ್ ಪೊಕ್ಕಿರಲು
ಧರ್ಮರಾಯ ಧಾರಿಣಿ ದ್ರೌಪದಿಯ ಸೋತನು ||೧

ಸೋತನೆಂದು ದುರ್ಯೋಧನ ಸಂತೋಷದಿಂದಲಿ ತನ್ನ
ದೂತರಟ್ಟಿ ಪಾಂಡವರ ಬದುಕು ತರಿಸಿದ
ಜಾತಿ ಮುತ್ತು ಚಿನ್ನ ಬೆಳ್ಳಿ ಆನೆ ಕುದುರೆಗಳ ಸಹಿತ
ಭೀತಿಯಿಲ್ಲದಲೆ ಭಂಡಾರಕಿಟ್ಟನು ||೨

ಮುದ್ದುಮುಖದ ದ್ರೌಪದಿಯ ಮುಂದೆ ಮಾಡಿ ತನ್ನಿರೆಂದು
ತಿದ್ದಿ ತನ್ನ ಮಾನವರಿಗೆ ತಿಳಿಯಹೇಳಿದ
ಮುದ್ರೆ ಮಾನವರು ಬಂದು ದ್ರೌಪದಿಯ ಮುಂದೆ ನಿಂತು
ಬುದ್ಧಿಯಿಂದಲೆಲ್ಲ ಬಿನ್ನಹ ಮಾಡಲು ||೩

ಅಮ್ಮ ಕೇಳೆ ಅರಸುಗಳು ಅಚ್ಚಪಗಡೆ ಪಂಥವಾಡಿ
ಹಮ್ಮಲಿಂದ ಜೂಜನಿಟ್ಟು ಲೆತ್ತವಾಡಲು
ಧರ್ಮರಾಯ ಸೋತನೆಂದು ಸತ್ಯವಚನ ಕೌರವಂಗೆ
ನಿಮ್ಮ ಇಂಬು ನಿಲುವು ಕರಿಯ ಕೊಟ್ಟರೆಂದರು ||೪

ಪಟ್ಟಪದವಿ ಅವರಿಗಾಗಿ ಬಡವರಾಗಿ ಇದ್ದೇವೆಂದರೆ
ಕೆಟ್ಟ ಪಗಡೆಪಂಥ ಜೂಜಿನ್ನೆಲ್ಲಿ ಒದಗಿತು
ದುಷ್ಟ ಕೌರವನು ಎನ್ನ ಲಜ್ಜೆ ನಾಚಿಕೆಯ ಕಂಡು
ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ ||೫

ಬಾಗಿ ಬಳುಕಿ ಬಿಕ್ಕಿ ತನ್ನ ಕಣ್ಣ ನೀರು ಸುರಿಸುತಲಿ
ಮಾಗಿಯ ಕೋಕಿಲೆಯಂತೆ ಕಾಯನೊಲವುತ
ಆಗ ಕೃಷ್ಣನಂಘ್ರಿಗಳ ಅಂತರಂಗದಲ್ಲಿ ನೆನೆದು
ಸಾಗಿ ಸಾಗಿ ಹೆಜ್ಜೆಯಿಡುತ ಸಭೆಗೆ ಬಂದಳು ||೬

ವೀರ ಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತನು
ಕ್ರೂರ ಕೌರವ ದುಶ್ಯಾಸನ ಗುರುಹಿರಿಯರು
ಸಾರುತಿದ್ದ ಭಟರು ಪರಿವಾರ ರಾಹುತರ ನೋಡಿ
ಧಾರಿಣಿಗೆ ಮುಖವ ಮಾಡಿ ನಾಚಿ ನಿಂತಳು ||೭

ಚಂದದಿಂದ ದುರ್ಯೋಧನ ಚದುರೆ ದ್ರೌಪದಿಯ ಕೂಡೆ
ಮುಂದನರಿಯದೆ ಮುಗುಳುನಗೆಯ ಮಾತನಾಡಿದ
ಹಿಂದೆ ಸ್ವಯಂವರದಲ್ಲಿ ಐವರಿಗೆ ಆದ ಬಾಲೆ
ಇಂದು ಎನ್ನ ಪಟ್ಟದರಸಿಗೊಪ್ಪಿತೆಂದನು ||೮

ಮಲ್ಲಿಗೆಯ ಮುಡಿಯ ನಾರಿ ಮುದ್ದು ಮುಖದ ವೈಯಾರಿ
ಚಲ್ಲೆಗಂಗಳ ದ್ರೌಪದಿ ಬಾರೆಯೆಂದನು
ಬಿಲ್ಲು ಎತ್ತಲಾರದವನೆ ಭಂಡಾರದಿ ಕಾದಿದ್ದವನೆ
ಹಲ್ಲು ಕೀಳುವರೈವರು ಬೇಡವೆಂದಳು ||೯

ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ
ನಿಚ್ಚ ಮುತ್ತಿನಂತೆ ಬಿಂಬಾಧರೆಯೆಂದನು
ಹೆಚ್ಚು ಮಾತನಾಡದಿರೋ ಹೆರರ ಹೆಣ್ಣ ನೋಡದಿರೊ
ನುಚ್ಚು ಮಾಡುವರೈವರು ಬೇಡವೆಂದಳು ||೧೦

ಮಟ್ಟೆ ಬಡಕರೈವರಿಗೆ ಮಡದಿಯಾಗುವುದು ಸಲ್ಲ
ಪಟ್ಟೆಮಂಚಕೊಪ್ಪುವಂತೆ ಬಾರೆಯೆಂದನು
ಹೆಚ್ಚು ಮಾತನಾಡದಿರೋ ಕ್ರೋಧದಿಂದ ನೋಡದಿರೊ
ರಟ್ಟೆ ಕೀಳುವರೈವರು ಬೇಡವೆಂದಳು ||೧೧

ಅಡವಿ ತಿರುಕರೈವರಿಗೆ ಮಡದಿಯಾಗುವುದು ಸಲ್ಲ
ತೊಡೆಯ ಮೇಲೆ ಒಪ್ಪುವಂತೆ ಬಾರೆಯೆಂದನು
ಬೆಡಗು ಮಾತನಾಡದಿರೋ ಭೀಮಸೇನನ ಗದೆಯು ನಿನ್ನ
ತೊಡೆಯ ಮೇಲೆ ಒಪ್ಪುವದು ಬೇಡವೆಂದಳು ||೧೨

ಎಷ್ಟು ಬಿಂಕ ಬಡಿವಾರವು ಹೆಣ್ಣು ಬಾಲೆಗಿವಳಿಗೆಷ್ಟು
ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ
ಉಟ್ಟ ಸೀರೆ ಉಡಿಯಲವಳ ಉಯಿಕೊ ತೀರಲೆಂದು
ದೃಷ್ಟಿಯಿಂದ ದುಶ್ಶಾಸನಗೆ ಸನ್ನೆಮಾಡಿದ ||೧೩

ಮಚ್ಚ ಕೂರ್ಮ ವರಹ ಕಾಯೋ ಮುದ್ದು ನರಸಿಂಹ ಕಾಯೋ
ಹೆಚ್ಚಿನ ವಾಮನನೆ ಕಾಯೊ ಭಾರ್ಗವನೆ ಕಾಯೊ
ಅಚ್ಚ ರಾಮ ಕೃಷ್ಣ ಕಾಯೊ ಬುದ್ಧ ಕಲ್ಕಿ ರೂಪ ಕಾಯೊ
ಸಚ್ಚಿದಾನಂದನೆ ಕಾಯೊ ಸ್ವಾಮಿಯೆಂದಳು ||೧೪

ಸಜ್ಜನರ ಪ್ರಿಯ ಕಾಯೊ ಸಾಧು ರಕ್ಷಕನೆ ಕಾಯೊ
ನಿರ್ಜರವಂದಿತನೆ ಕಾಯೊ ನರಹರಿ ಕಾಯೊ
ಅರ್ಜುನನ ಸಖನೆ ಕಾಯೊ ಅನಂತಮೂರುತಿ ಕಾಯೊ
ಲಜ್ಜೆ ನಾಚಿಕೆಯ ಕಾಯೊ ಸ್ವಾಮಿಯೆಂದಳು ||೧೫

ದುರುಳ ದುಶ್ಯಾಸನನು ಬಂದು ದ್ರೌಪದಿಯ ಮುಂದೆ ನಿಂದು
ಕರವ ಪಿಡಿದು ಸೆರಗ ಹಿಡಿದು ನೆರಿಯ ಸೆಳೆಯಲು
ಮರುಳು ಆಗದಿರೊ ನಿನ್ನ ರಕ್ತದೊಳು ಮುಡಿಯ ಅದ್ದಿ
ಕರುಳು ದಂಡೆಯನೆ ಮಾಡಿ ಮುಡಿವೆನೆಂದಳು ||೧೬

ಕಲಹಗಂಟ ಹೆಣ್ಣೆ ನಿನ್ನ ಘಾಸಿ ಮಾಡುವೆನೆಂದು
ಗಲ್ಲದಲ್ಲಿ ಕೈಯನಿಕ್ಕಿ ನೆರಿಯ ಸೆಳೆಯಲು
ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಿಗೆಯ ಕಿತ್ತು ಎರಡು
ಪಲ್ಲಿನಲ್ಲಿ ಕೇಶನ್ಹಿಕ್ಕಿ ಕೊಂಬೆನೆಂದಳು ||೧೭

ಬೆನ್ನಿನಲ್ಲಿ ಪೆಟ್ಟನಿಕ್ಕಿ ಭಂಡು ಮಾಡುವೆನೆಂದು
ಕನ್ನೆಯಲಿ ಕೈಯನಿಕ್ಕಿ ನೆರಿಯ ಸೆಳೆಯಲು
ರನ್ನೆವೀರ ಬೊಬ್ಬೆನಿಕ್ಕಿ ರಭಸದಿಂದ ಸಾರುತಲಿ
ಪನ್ನಗಶಯನ ಕೃಷ್ಣ ಕಾಯೊ ಎಂದಳು ||೧೮

ಸಾರಿದವರ ಪೊರೆವ ಕರುಣಿ ಸಾಗರಶಯನ ಕೃಷ್ಣ
ನಾರಿ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು
ಸುರುತಿ ಕುಂಭವತಿ ಬಣ್ಣ ಬಣ್ಣ ಸೀರೆಗಳು
ಮೇರುವಿನ ಬೆಟ್ಟದಂತೆ ಮಹಿಮೆ ತೋರಿದ ||೧೯

ಪೊಂದಿದವರ ಪೊರೆವ ಕರುಣಿ ಸಿಂಧುಶಯನ ಶ್ರೀ ಕೃಷ್ಣ
ನಲ-ವಿಂದ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು
ಒಂದು ಎರಡು ಮೂರು ನಾಲ್ಕು ಕೋಟಿ ಸಂಖ್ಯೆ ಸೀರೆ ಸುಲಿದು
ನೊಂದು ಬೆಂದು ದುಶ್ಶಾಸನ ನಾಚಿ ಕುಳಿತನು ||೨೦

ನೋಡಿದರು ದ್ರೌಪದಿಯ ಮಾನರಕ್ಷಲೀಲೆಗಳ
ಮಾಡಿದರು ಮಾಧವನ ಮುದ್ದು ಸ್ತೋತ್ರವ
ಮೂಢ ಕೌರವನ ಕೂಡ ಮಾನಿನಿ ದ್ರೌಪದಿಯು ಮಾತ-
ನಾಡಿ ತನ್ನ ಪತಿಗಳೈವರ ಗೆದ್ದಳು ||೨೧

ಕೇಸು ಮುಡಿಯ ಕಟ್ಟಿದಳು ಕೈಯ ಕಾಲ ಮಣ್ಣನೊರೆಸಿ
ಸಾಸಿರನಾಮದ ಒಡೆಯ ಸುರರ ಪಾಲಕ
ವಾಸೆವುಳ್ಳ ಕೃಷ್ಣ ಎನ್ನ ವಹಿಸಿ ಕಾಯಿದಿ ಎಂದು ಸಂ-
ತೋಷದಿಂದ ದ್ರೌಪದಿಯು ಮನೆಗೆ ಬಂದಳು ||೨೨

ಭಕ್ತಿಯಿಂದ ದ್ರೌಪದಿಯ ಮಾನರಕ್ಷ ಲೀಲೆಗಳ
ಯುಕ್ತಿಯಿಂದ ಹಾಡಿ ಪಾಡಿ ಕೇಳುವವರಿಗೆ
ಸಕಲ ದೋಷ ಪರಿಹಾರ ಸಂತಾನ ಸಂಪತ್ತು ಫಲಗಳುಂಟು
ಮುಕುತಿ ಕೊಡುವನು ನಮ್ಮ ಪುರಂದರವಿಠ್ಠಲ ||೨೩


raMganolida namma kRuShNanolida ||pa||
aMgane draupadige vastra akShayaveMdanu ||a||

kariya purada nagaradalli kauravaru pAMDavaru
dhareya oDDi jUjaniTTu lettavADalu
paramapApi Sakuni tAnu pASadoL pokkiralu
dharmarAya dhAriNi draupadiya sOtanu ||1

sOtaneMdu duryOdhana saMtOShadiMdali tanna
dUtaraTTi pAMDavara baduku tarisida
jAti muttu cinna beLLi Ane kuduregaLa sahita
BItiyilladale BaMDArakiTTanu ||2

muddumuKada draupadiya muMde mADi tannireMdu
tiddi tanna mAnavarige tiLiyahELida
mudre mAnavaru baMdu draupadiya muMde niMtu
buddhiyiMdalella binnaha mADalu ||3

amma kELe arasugaLu accapagaDe paMthavADi
hammaliMda jUjaniTTu lettavADalu
dharmarAya sOtaneMdu satyavacana kauravaMge
nimma iMbu niluvu kariya koTTareMdaru ||4

paTTapadavi avarigAgi baDavarAgi iddEveMdare
keTTa pagaDepaMtha jUjinnelli odagitu
duShTa kauravanu enna lajje nAcikeya kaMDu
BraShTa mADuvanu eMdu baLali draupadi ||5

bAgi baLuki bikki tanna kaNNa nIru surisutali
mAgiya kOkileyaMte kAyanolavuta
Aga kRuShNanaMGrigaLa aMtaraMgadalli nenedu
sAgi sAgi hejjeyiDuta saBege baMdaLu ||6

vIra karNa aSvatthAma vidura Salya Bagadattanu
krUra kaurava duSyAsana guruhiriyaru
sArutidda BaTaru parivAra rAhutara nODi
dhAriNige muKava mADi nAci niMtaLu ||7

caMdadiMda duryOdhana cadure draupadiya kUDe
muMdanariyade muguLunageya mAtanADida
hiMde svayaMvaradalli aivarige Ada bAle
iMdu enna paTTadarasigoppiteMdanu ||8

malligeya muDiya nAri muddu muKada vaiyAri
callegaMgaLa draupadi bAreyeMdanu
billu ettalAradavane BaMDAradi kAdiddavane
hallu kILuvaraivaru bEDaveMdaLu ||9

acca poMbaNNada boMbe AneyaMte naDeva raMBe
nicca muttinaMte biMbAdhareyeMdanu
heccu mAtanADadirO herara heNNa nODadiro
nuccu mADuvaraivaru bEDaveMdaLu ||10

maTTe baDakaraivarige maDadiyAguvudu salla
paTTemaMcakoppuvaMte bAreyeMdanu
hecchu mAtanADadirO krOdhadiMda nODadiro
raTTe keeLuvaraivaru bEDaveMdaLu ||11

aDavi tirukaraivarige maDadiyAguvudu salla
toDeya mEle oppuvaMte bAreyeMdanu
beDagu mAtanADadirO BImasEnana gadeyu ninna
toDeya mEle oppuvadu bEDaveMdaLu ||12

eShTu biMka baDivAravu heNNu bAlegivaLigeShTu
siTTiniMda duryOdhana sAri kOpisi
uTTa sIre uDiyalavaLa uyiko tIraleMdu
dRuShTiyiMda duSSAsanage sannemADida ||13

macca kUrma varaha kAyO muddu narasiMha kAyO
heccina vAmanane kAyo BArgavane kAyo
acca rAma kRuShNa kAyo buddha kalki rUpa kAyo
saccidAnaMdane kAyo svAmiyeMdaLu ||14

sajjanara priya kAyo sAdhu rakShakane kAyo
nirjaravaMditane kAyo narahari kAyo
arjunana saKane kAyo anaMtamUruti kAyo
lajje nAcikeya kAyo svAmiyeMdaLu ||15

duruLa duSyAsananu baMdu draupadiya muMde niMdu
karava piDidu seraga hiDidu neriya seLeyalu
maruLu Agadiro ninna raktadoLu muDiya addi
karuLu daMDeyane mADi muDiveneMdaLu ||16

kalahagaMTa heNNe ninna GAsi mADuveneMdu
galladalli kaiyanikki neriya seLeyalu
nillo nillo pApi ninna nAligeya kittu eraDu
pallinalli kESanhikki koMbeneMdaLu ||17

benninalli peTTanikki BaMDu mADuveneMdu
kanneyali kaiyanikki neriya seLeyalu
rannevIra bobbenikki raBasadiMda sArutali
pannagaSayana kRuShNa kAyo eMdaLu ||18

sAridavara poreva karuNi sAgaraSayana kRuShNa
nAri draupadige vastra akShayaveMdanu
suruti kuMBavati baNNa baNNa sIregaLu
mEruvina beTTadaMte mahime tOrida ||19

poMdidavara poreva karuNi siMdhuSayana SrI kRuShNa
nala-viMda draupadige vastra akShayaveMdanu
oMdu eraDu mUru nAlku kOTi saMKye sIre sulidu
noMdu beMdu duSSAsana nAci kuLitanu ||20

nODidaru draupadiya mAnarakShalIlegaLa
mADidaru mAdhavana muddu stOtrava
mUDha kauravana kUDa mAnini draupadiyu mAta-
nADi tanna patigaLaivara geddaLu ||21

kEsu muDiya kaTTidaLu kaiya kAla maNNanoresi
sAsiranAmada oDeya surara pAlaka
vAsevuLLa kRuShNa enna vahisi kAyidi eMdu saM-
tOShadiMda draupadiyu manege baMdaLu ||22

BaktiyiMda draupadiya mAnarakSha lIlegaLa
yuktiyiMda hADi pADi kELuvavarige
sakala dOSha parihAra saMtAna saMpattu PalagaLuMTu
mukuti koDuvanu namma puraMdaraviThThala ||23

Leave a Reply

Your email address will not be published. Required fields are marked *

You might also like

error: Content is protected !!